ಜಾಗತೀಕರಣದ ಪರಿಣಾಮವಾಗಿ ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಬೆಳೆಯುತ್ತಿದೆ. ಆರ್ಥಿಕತೆ, ನವೀನ ತಂತ್ರಜ್ಞಾನ ಹಾಗೂ ಉತ್ತಮ ಮೂಲಭೂತ ವ್ಯವಸ್ಥೆಗಳ ಅಭಿವೃದ್ದಿಗಳು ದೇಶದ ಹೆಮ್ಮೆಯಾಗಿವೆ. ದೇಶವು ಎಲ್ಲಾ ಕ್ಷೇತ್ರಗಳ ಆಧುನಿಕತೆಯಲ್ಲಿ ಸಕ್ರಿಯವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಆಮೆ ವೇಗದ ಪ್ರಗತಿ ಆಗುತ್ತಿರುವುದು ದೇಶದ ಏಳಿಗೆಗೆ ಕಂಟಕವಾಗಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಸ್ಥಾನ ಇದ್ದರೂ ಪ್ರಗತಿಗೆ ಬೇಕಾದಷ್ಟು ಮಾನವ ಸಂಪನ್ಮೂಲವನ್ನು ಸೃಷ್ಠಿಸುವಲ್ಲಿ ದೇಶದ ಶಿಕ್ಷಣ ವಿಫಲವಾಗಿದೆ. ಒಂದೆಡೆ ಪ್ರತಿಭೆಗಳು ವಿದೇಶಗಳಿಗೆ ಪಲಾಯನವಾಗುತ್ತಿವೆ. ಮತ್ತೊಂದೆಡೆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು ತರಬೇತಿ ಇಲ್ಲದೇ ಕಮರುತ್ತಿವೆ. ಹೀಗಾಗಿ ಮಾನವ ಸಂಪನ್ಮೂಲದ ಸದ್ಭಳಕೆ ಸರಿಯಾಗಿ ಆಗುತ್ತಿಲ್ಲ.
ದೇಶವು ಸ್ವಾತಂತ್ರ ಪಡೆದು ಏಳು ದಶಕಗಳನ್ನು ಪೂರೈಸುವ ಹೊತ್ತಿನಲ್ಲೂ ಇಡೀ ದೇಶಕ್ಕೆ ಅನ್ವಯವಾಗುವಂತಹ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಸಾದ್ಯವಾಗಿಲ್ಲ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಹಾಗೂ ಸವಾಲುಗಳಿವೆ. ದೇಶದ ಆರು ನೂರು ಮಿಲಿಯನ್ ಯುವಜನರಲ್ಲಿ ಶೇ,8ರಷ್ಟು ಯುವಜನತೆ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದವರಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಲು ಕಾರಣವೇನೆಂದರೆ ಶಿಕ್ಷಣದ ವ್ಯಾಪಾರಿರಣ. ನಮ್ಮ ದೇಶದಲ್ಲಿ ಕೇವಲ ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬತಾಗಿದೆ. ಪದವಿಪೂರ್ವ ಶಿಕ್ಷಣದ ವ್ಯವಸ್ಥೆ ಇದಕ್ಕಿಂತ ಭಿನ್ನವೇನಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಾದ ಪ್ರಯೋಗಾಲಯ, ಗ್ರಂಥಾಲಯಗಳ ಅವ್ಯವಸ್ಥೆಯಿಂದ ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಂದ ದೂರ ಉಳಿದಿದ್ದಾರೆ.
ಉನ್ನತ ಹಾಗೂ ಕಾಲೇಜು ಶಿಕ್ಷಣದ ಸ್ಥಿತಿ ಒಂದು ರೀತಿಯಾದರೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸ್ಥಿತಿ ಬೇರೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಹಾಗೂ ಖಾಸಗೀ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ವ್ಯತಿರಿಕ್ತ ಪರಿಣಾಮಗಳಾಗಿವೆ. ಐದು ವರ್ಷಗಳ ಹಿಂದೆ ಇದ್ದ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಕುಸಿತವುಂಟಾಗಿದೆ. ಇದಕ್ಕೆಲ್ಲಾ ಮೂಲ ಕಾರಣವೇನೆಂದರೆ ಸರ್ಕಾರಿ ಶಾಲೆಗಳ ಕಡೆಗಣನೆ ಹಾಗೂ ಖಾಸಗೀಕರಣ ಬಲಪಡಿಸುವ ಹುನ್ನಾರ.
ಮೇಲಿನ ಎಲ್ಲಾ ಸತ್ಯಮಿಥ್ಯಗಳ ನಡುವೆ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಶ್ರಮಿಸುತ್ತಲೇ ಇವೆ. ಕಾಲ ಕಾಲಕ್ಕೆ ಶಿಕ್ಷಣದ ನೀತಿನಿಯಮಗಳನ್ನು ಬದಲಾಯಿಸುತ್ತವೆ. ಆದರೆ ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ಬಹುತೇಕ ಶೈಕ್ಷಣಿಕ ಕಾರ್ಯಕ್ರಮಗಳ ಉದ್ದೇಶ ಹಾಗೂ ಅವುಗಳ ನಿಖರವಾದ ಜಾರಿಸೂತ್ರಗಳು ಅನುಪಾಲಕರಿಗೆ ಸರಿಯಾಗಿ ಅರ್ಥವಾಗುವುದೇ ಇಲ್ಲ. ಏಕೆಂದರೆ ಬಹುತೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅನುಪಾಲಕÀರನ್ನು ಅಂದರೆ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ. ಯೋಜನಾ ಅಧಿಕಾರಿಗಳು ಈ ಯೋಜನೆ ಹೀಗೆಯೇ ಜಾರಿಗೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಅನುಷ್ಠಾನಗೊಳಿಸವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರಗಳೇ ಇಲ್ಲ. ಏಕೆಂದರೆ ಶಿಕ್ಷಕರ ಚಿಂತನಾ ಮಟ್ಟ ಅಧಿಕಾರಿಗಳ ಚಿಂತನಾ ಮಟ್ಟದಷ್ಟು ಇಲ್ಲದಿರುವುದು ಅಥವಾ ಯೋಜನಾ ತಯಾರಿಕೆಯಲ್ಲಿ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಬಹುತೇಕ ಶೈಕ್ಷಣಿಕ ಯೋಜನೆಗಳು ನಿರೀಕ್ಷಿಸಿದ ಫಲ ಕಾಣುವುದಿಲ್ಲ. ಕೆಲವು ವೇಳೆ ಯಾವುದೋ ಒಂದು ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಯೋಜನೆಯನ್ನು ಇಡೀ ರಾಷ್ಟ್ರ ಅಥವಾ ರಾಜ್ಯಕ್ಕೆ ಅನ್ವಯಿಸಲಾಗುತ್ತದೆ. ಇದು ಯೋಜನೆಯ ಅಪಯಶಸ್ಸಿಗೆ ಕಾರಣವಾಗುತ್ತದೆ. ಆ ಯೋಜನೆ ಫಲ ನೀಡಲಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿದೆ.
ಇದರ ಬದಲಾಗಿ ತಳಮಟ್ಟದ ಜನಯೋಜನೆಗಳನ್ನು ರೂಪಿಸಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಕ್ಷಣ ತಜ್ಞರ ಜೊತೆಗೆ ಶಿಕ್ಷಕರು, ಪೋಷಕರು ಹಾಗೂ ಅಧಿಕಾರಿಗಳನ್ನು ಸೇರಿಸಿಕೊಂಡು ಯೋಜನೆಗಳನ್ನು ತಯಾರಿಸಬೇಕು. ಪ್ರತಿಯೊಬ್ಬ ಪಾಲುದಾರರೂ ಇದು ನನ್ನ ಯೋಜನೆ. ಇದರಿಂದ ನಮ್ಮ ಮಕ್ಕಳ ಹಾಗೂ ದೇಶದ ಭವಿಷ್ಯ ಅಡಗಿದೆ ಎಂಬ ಭಾವನೆಯಿಂದ ಯೋಜನೆಯಿಂದ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಪರವಾದ ಬದಲಾವಣೆಗಳನ್ನು ತರಲು ಸಾಧ್ಯ.
ಜಗತ್ತು ಇಂದು ವೇಗವಾಗಿ ಮುಂದುವರೆಯುತ್ತಿದೆ. ಮಕ್ಕಳಿಗೆ ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತದ ಶಿಕ್ಷಣ ಪದ್ದತಿ ಇನ್ನೂ ಡಿಜಿಟಲೀಕರಣಗೊಳ್ಳದೇ ಇರುವುದು ಕೂಡಾ ಶಿಕ್ಷಣ ವ್ಯವಸ್ಥೆ ಹಿಂದುಳಿಯಲು ಕಾರಣ. ಇಂದಿನ ಮಕ್ಕಳಿಗೆ ಪಠ್ಯಪುಸ್ತಕದಾಚೆಗಿನ ಜ್ಞಾನ ಮತ್ತು ಮಾಹಿತಿ ನೀಡಲು ಶಿಕ್ಷಣದ ಡಿಜಿಟಲೀಕರಣ ಅತ್ಯಂತ ಅವಶ್ಯಕವಾಗಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಪ್ರತಿ ತರಗತಿಯನ್ನು ಸ್ಮಾರ್ಟ್ ಕ್ಲಾಸ್ ಆಗಿ ನಿರ್ಮಿಸಿ ಶಿಕ್ಷಣ ನೀಡುತ್ತಿದ್ದಾರೆ. ಕೆಲ ಖಾಸಗೀ ಶಾಲೆಗಳೂ ಸಹ ಸ್ಮಾರ್ಟ್ ಕ್ಲಾಸ್‍ನ ಹೆಸರಿನಲ್ಲಿ ಪೋಷಕರಿಂದ ಹಣ ಸುಲಿಯುತ್ತಿದ್ದಾರೆ. ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿದಲ್ಲಿ ಖಂಡಿತವಾಗಿಯೂ ಖಾಸಗೀ ಶಾಲೆಗಳಿಗೆ ಸಡ್ಡು ಹೊಡೆದು ನಿಲ್ಲಲು ಬಲ ದೊರೆಯುತ್ತದೆ.
ಇಂದು ಶಿಕ್ಷಕರ ಕಾರ್ಯಭಾರ ಹೆಚ್ಚಾಗಿದ್ದು, ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ದಾಖಲಾತಿ ನಿರ್ವಹಣೆ, ಬಿಸಿಯೂಟ/ಕ್ಷೀರಭಾಗ್ಯ, ಕಛೇರಿ ಪತ್ರಗಳ ಸರಬರಾಜು, ಪೋಷಕರು/ವಿದ್ಯಾರ್ಥಿಗಳ ದಾಖಲಾತಿ ನಿರ್ವಹಣೆ, ಇಲಾಖೆ ಹಾಗೂ ಇಲಾಖೇತರ ಸಭೆಗಳು ಇತ್ಯಾದಿ ಕಾರ್ಯಗಳಿಗೆಂದು ಅಲೆದಾಡುತ್ತಾ ಒಟ್ಟಾರೆ ಆಡಳಿತ ನಿರ್ವಹಣೆಗೆ ಮೀಸಲಾಗುತ್ತಿದ್ದಾರೆ. ಇಬ್ಬರು ಶಿಕ್ಷಕರು ಇರುವ ಶಾಲೆಗಳಲ್ಲಿ ಒಬ್ಬರು ಆಡಳಿತಕ್ಕೇ ಮೀಸಲಾದರೆ ಉಳಿದ ಒಬ್ಬರೇ ಶಿಕ್ಷಕರು, ಎಲ್ಲಾ ವಿಷಯಗಳ ಭೋದನೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆಗ ಶಿಕ್ಷಣದ ಗುಣಮಟ್ಟ ಎಂಬುದು ಕೇವಲ ಕಾಗದದ ಸರಕಾಗುತ್ತದೆ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಗಟ್ಟಿಗೊಳ್ಳಲು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಉತ್ತಮ ಗುಟ್ಟಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ವ್ಯವಸ್ಥೆಗೊಳಿಸಬೇಕು. ಪ್ರತಿವಿಷಯಕ್ಕೂ ಪ್ರತ್ಯೇಕವಾದ ಪ್ರಯೋಗಾಲಯ ವ್ಯವಸ್ಥೆಯಾಗಬೇಕು. ಅಂದರೆ ಈಗಿರುವ ತರಗತಿ ಕೊಠಡಿಗಳನ್ನೇ ವಿಷಯವಾರು ಪ್ರಯೋಗಾಲಯಗಳಾಗಿ ಪರಿವರ್ತಿಸಬೇಕು. ಅಲ್ಲಿಯೇ ವೇಳಾಪಟ್ಟಿಗನುಗುಣವಾಗಿ ತರಗತಿ ನಡೆಯಬೇಕು.
ಈಗಿನ 1-10ನೇ ತರಗತಿಯವರೆಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಭಿವೃದ್ದಿಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಪ್ರತೀ ಮಗುವೂ ವಿಭಿನ್ನ ಹಾಗೂ ವಿಶಿಷ್ಠ ಎಂದು ಹೇಳುವಾಗ ವಿಶಿಷ್ಠ ಮಗುವಿನ ಕಲಿಕೆಗೆ ಪೂರಕವಾದ ಕೌಶಲ್ಯಾಭಿವೃದ್ದಿ ಬೆಳೆಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಮಗುವಿನ ಆಸಕ್ತಿಯ ಕ್ಷೇತ್ರ ಗುರುತಿಸಿ ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಕಲಿಸಿದರೆ 10ನೇ ತರಗತಿ ಪೂರೈಸುವ ವೇಳೆಗೆ ಮಗುವಿನಲ್ಲಿ ಸ್ವಾವಲಂಬಿತನ ಮೂಡುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆಗೆ ತಿಲಾಂಜಲಿ ಇಡಬಹುದು.
ಮೇಲಿನ ಎಲ್ಲಾ ವ್ಯವಸ್ಥೆಗಳನ್ನು ಜಾರಿಗೆ ತಂದೊಡನೆ ಶಿಕ್ಷಣದ ದಿಕ್ಕು ಬದಲಾಗುತ್ತದೆ ಎನ್ನುವಂತಿಲ್ಲ. ಶಿಕ್ಷಣದ ಮೂಲ ಭಾಗೀದಾರರಾದ ಶಿಕ್ಷಕರ ಬದ್ದತೆ ಮತ್ತು ಕಾಳಜಿ ಅಗತ್ಯ. ಪ್ರಸ್ತುತ ಶಿಕ್ಷಕರಿಗಿರುವ ಆರ್ಥಿಕ ಸೌಲಭ್ಯವೇನೂ ನಿರಾಸದಾಯಕವಲ್ಲ. ಆದರೆ ಇತರೆ ರಾಜ್ಯ ಹಾಗೂ ಉಪನ್ಯಾಸಕ ವರ್ಗಕ್ಕೆ ಹೋಲಿಸಿದರೆ ಶಿಕ್ಷಕರಿಗಿರುವ ಆರ್ಥಿಕ ಸೌಲಭ್ಯ ಹೇಳಿಕೊಳ್ಳುವಂತಿಲ್ಲ. ಅಲ್ಲದೇ ಶಿಕ್ಷಕರ ಕಾರ್ಯಭಾರ ಹಾಗೂ ಉಪನ್ಯಾಸಕರ ಕಾರ್ಯಭಾರಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಿನವೊಂದಕ್ಕೆ 6-8 ಅವಧಿ, ಪ್ರೌಢಶಾಲಾ ಶಿಕ್ಷಕರಿಗೆ 3-5 ಅವಧಿ ಕಾರ್ಯ ನಿಗದಿಯಾಗಿರುತ್ತದೆ. ಆದರೆ ಉಪನ್ಯಾಸಕರಿಗೆ ದಿನವೊಂದಕ್ಕೆ 2-3 ಅವಧಿ ನಿಗದಿಯಾಗಿದೆ. ಹೆಚ್ಚು ಅವಧಿ ಕೆಲಸದಲ್ಲಿ ತೊಡಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನವೂ ಕಡಿಮೆ. ಈ ತಾರತಮ್ಯ ನಿವಾರಣೆ ಆದಲ್ಲಿ ಶಿಕ್ಷಕರಲ್ಲಿಯೂ ಬದ್ದತೆ ಹಾಗೂ ಕಾಳಜಿಯಿಂದ ಕಾರ್ಯ ನಿರ್ವಹಿಸುವ ಹುಮ್ಮಸ್ಸು ಬರುತ್ತದೆ.
ಎಲ್ಲಾ ಅಂಶಗಳು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತ ಎನ್ನುವಂತಿಲ್ಲ. ಖಾಸಗೀ ಶಾಲೆಗಳೂ ಸಹ ಸರ್ಕಾರಿ ಶಾಲೆಗಳಲ್ಲಿನ ಎಲ್ಲಾ ನೀತಿ ನಿಯಮಗಳನ್ನು ಅನುಸರಿಸುವಂತಾಗಬೇಕು. ತರಬೇತಿ, ಮೌಲ್ಯಮಾಪನ ಪದ್ದತಿ, ಶಿಕ್ಷೆ, ಶಿಸ್ತು, ಪಾಲಕರ ನಡವಳಿಕೆ ಹೀಗೆ ಎಲ್ಲವೂ ಖಾಸಗೀ ಹಾಗೂ ಸರ್ಕಾರಿ ಶಾಲೆಗಳಲ್ಲಿ ಏಕರೂಪತೆ ಪಡೆಯಬೇಕು.
ಶಿಕ್ಷಣವು ಕೇವಲ ಶಿಕ್ಷಕರ/ಮಕ್ಕಳ ಸಂಗತಿಯಾಗದೇ, ಪಾಲಕರ ಹಾಗೂ ಸಮುದಾಯಗಳ ವಿಷಯವಾಗಬೇಕು. ಇದು ನನ್ನ ಶಾಲೆ, ನನ್ನ ಶಿಕ್ಷಣ ಎಂಬ ಕಾಳಜಿ ಪ್ರತಿಯೊಬ್ಬರಲ್ಲಿಯೂ ಬಂದಾಗ ಮಾತ್ರ ಕರ್ನಾಟಕದ ಶಿಕ್ಷಣಕ್ಕೆ ಗಟ್ಟಿಯಾದ ನೆಲೆಗಟ್ಟು ದೊರೆಯುತ್ತದೆ.
-ಆರ್.ಬಿ.ಗುರುಬಸವರಾಜ ಹೊಳಗುಂದಿ