ಶಿಕಾರಿ: ಡಾ. ಗವಿ ಸ್ವಾಮಿ

ಎರಡು ವರ್ಷದ ಎಳೆಗೂಸು  ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಅವನನ್ನು ಅಲುಗಾಡಿಸುತ್ತಿದ್ದಳು.

ಆತ ತೆರೆದ ಕಣ್ಣುಗಳಿಂದ ಛಾವಣಿಯನ್ನು ದಿಟ್ಟಿಸುತ್ತಾ ಮರದ ಕೊರಡಿನಂತೆ ಬಿದ್ದಿದ್ದ .

ತನ್ನನ್ನು ಎಬ್ಬಿಸಲು ಹೆಣಗಾಡುತ್ತಿದ್ದ ಮುದ್ದಿನ ಮಗಳಿಗೆ ಒಂಚೂರೂ ಸ್ಪಂದಿಸದೇ ನಿತ್ರಾಣನಾಗಿ ಹಾಸಿಗೆಗೆ ಅಂಟಿಕೊಂಡಿದ್ದ.

ಮೂರ್ನಾಲ್ಕು ಬಾರಿ ಅಪ್ಪನನ್ನು ಜಗ್ಗಾಡಿ ಸುಸ್ತಾದ ಕಂದನ ಕಣ್ಣುಗಳಲ್ಲಿ ಹತಾಶೆ ಮಡುಗಟ್ಟಿತು.

ತನ್ನನ್ನು ಮೊರದಗಲದ ಅಂಗೈ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ ಅಪ್ಪ.. ಗೊಂಬೆಯಂತೆ ಎಸೆದು ಆತುಕೊಳ್ಳುತ್ತಿದ್ದ ಅಪ್ಪ ಈಗ ಸ್ಪಂದಿಸದೇ ಮರದ ಕೊಂಟಿನಂತೆ ಮಲಗಿರುವುದನ್ನು ನೋಡಿ ಪುಟ್ಟ ಕಣ್ಣುಗಳಲ್ಲಿ ಹತಾಶೆಯ ಹನಿಗಳು ಉದುರಿದವು..

ಮಂಚದ ಬದಿಯಲ್ಲಿ ಕುಳಿತು ಎಲ್ಲವನ್ನು ನೋಡುತ್ತಿದ್ದ ಅವಳ ತಾಯಿಯ ಕಣ್ಣುಗಳೂ ಒದ್ದೆಯಾದವು.

ಈರಣ್ಣ ಎಲುಬೇ ಎಲುಬಾಗಿ ಹಾಸಿಗೆಗೆ ಅಂಟಿಕೊಂಡು ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ.

ಅಬ್ಬಾ ! ಈರಣ್ಣ ಹೇಗಿದ್ದ ಈರಣ್ಣ ಹೇಗಾದ!

ಗೂಳಿಯಂತೆ ಮೆರೆಯುತ್ತಿದ್ದ ಈರಣ್ಣನಿಗೆ ಇಂತಹ ದುರ್ಗತಿ ಒದಗುತ್ತದೆಂದು ಯಾರೂ ಊಹಿಸಿರಲಿಲ್ಲ.

ಹೌದು .. ನೀಲಗಿರಿ ಬೆಟ್ಟಗಳ ಮಡಿಲಿನ ರುದ್ರಾಪುರ ಎಂಬ ಗ್ರಾಮದಲ್ಲಿ ಗೂಳಿಯಂತೆ ಗುಟುರು ಹಾಕುತ್ತಾ ಎಲ್ಲರನ್ನು ನಡುಗಿಸಿಕೊಂಡು ಬದುಕುತ್ತಿದ್ದ ಎದೆಗಾರ ಈರಣ್ಣನ ಜೀವನ ಮದ್ರಾಸಿನ ಗವರ್ನರ್ ಸಾಹೇಬನ ಆಗಮನದೊಂದಿಗೆ ತಿರುವು ಪಡೆಯಿತು.

*****

ಆವತ್ತೊಂದು ದಿನ ಮದ್ರಾಸಿನ ಗವರ್ನರ್ ಸಾಹೇಬ ಹುಲಿ ಶಿಕಾರಿಗೆಂದು  ದಂಡಿನ ಸಮೇತ ರುದ್ರಾಪುರಕ್ಕೆ ಬಂದಿದ್ದ. 
ಗ್ರಾಮದ ದೊಡ್ಡಕೆರೆಯ ತೋಪಿನಲ್ಲಿ ಡೇರೆ ಹಾಕಿದ್ದ.

ಶಿಕಾರಿಯ ಸಹಾಯಕ್ಕೆ ಸೇನೆಯ ಕ್ಯಾಪ್ಟನ್ ಒಬ್ಬನನ್ನು ಕರೆದು ತಂದಿದ್ದ. ಆದರೆ ಆ ಕ್ಯಾಪ್ಟನ್ ಮಹಾಶಯನಿಗೆ ಅಡವಿಯ  ಆಳ-ಅಗಲದ ಅರಿವೇ ಇರಲಿಲ್ಲ .

ಐದು ದಿನಗಳು ಉರುಳಿದವು.

ಗವರ್ನರ್ ಸಾಹೇಬನಿಂದ ಒಂದೇ ಒಂದು ಹುಲಿಯನ್ನೂ ಕೆಡವಲಾಗಲಿಲ್ಲ.

ತನ್ನ ಪತಿರಾಯನ ಶೌರ್ಯದ ಮೇಲೆ ಭರವಸೆಯಿಟ್ಟು ಹತ್ತಾರು ಕನಸು-ಕಲ್ಪನೆಗಳನ್ನು ಹೊತ್ತು ಬಂದಿದ್ದ ಮಡದಿ ನಿರಾಸೆಗೊಳಗಾದಳು.

ಅವಳ ಮನದಲ್ಲಿ ಒಂದು ಬಗೆಯ ಅಸಹನೆ ಕುಡಿಯೊಡೆಯತೊಡಗಿತು .

ಅಸಹನೆ ಅಶಾಂತಿಗೆ ಎಡೆ ಮಾಡಿಕೊಟ್ಟಿತ್ತು.

ಅವಕಾಶ ಸಿಕ್ಕಾಗಲೆಲ್ಲ ಮೂದಲಿಕೆಯ ಮಾತುಗಳಿಂದ ಗಂಡನನ್ನು ಇರಿಯತೊಡಗಿದಳು.


ಆವತ್ತೊಂದು ರಾತ್ರಿ ಊಟಕ್ಕೆ ಕುಳಿತಿದ್ದಾಗ ಸಹನೆ ಕಳೆದುಕೊಂಡು, ನೀನು ಕಾಡು ಹಂದಿ ಹೊಡೆಯಲಿಕ್ಕಷ್ಟೇ ಲಾಯಕ್ಕು ಎಂದು  ಜೋರಾಗಿ ನಕ್ಕು ಗಂಡನ ಅಹಮ್ಮನ್ನು ಘಾಸಿಗೊಳಿಸಿದಳು.

ಸಾಹೇಬ ಹೆಂಡತಿಯಿಂದ ಅಪಹಾಸ್ಯಕ್ಕೊಳಗಾದ ಸುದ್ದಿ ಹೇಗೋ ಊರಿನ ಕೆಲವರ ಕಿವಿಗೆ ಮುಟ್ಟಿತು.

ಗವರ್ನರ್ ಸಾಹೇಬ ಹುಲಿ ಕೆಡವಲಾಗದೇ ಹತಾಶೆಯಿಂದ ರೊಚ್ಚಿಗೆದ್ದಿದ್ದಾನಂತೆ, ಕ್ರಿಸ್‌ಮಸ್ ಪಾರ್ಟಿಗೂ ಮುಂಚೆ ಹುಲಿ ಹೊಡೆಯದಿದ್ದರೆ ಸಿಕ್ಕಸಿಕ್ಕವರನ್ನು ಶಿಕಾರಿ ಮಾಡುತ್ತಾನಂತೆ ಎಂದು ಕೆಲವರು ಸುದ್ದಿ ಹಬ್ಬಿಸಿದರು.
ಗೋವುಗಳಂತೆ ತಣ್ಣಗೆ ಬದುಕುತ್ತಿದ್ದ ರುದ್ರಾಪುರದ ನಿವಾಸಿಗಳು ಭೀತಿಯಿಂದ ತತ್ತರಿಸಿ ಹೋದರು.

ಇದೇ ಜನರು ಐದು ದಿನಗಳ ಹಿಂದೆ ದೊಡ್ಡಬೀದಿಯಲ್ಲಿ ಮಾವಿನ ತೋರಣ ಕಟ್ಟಿ ಡೋಲು ತಮಟೆಯೊಂದಿಗೆ ಸಾಹೇಬನಿಗೆ ಅದ್ದೂರಿ ಸ್ವಾಗತನೀಡಿದ್ದರು .

ಅಂದು ಭಾಗ್ಯವಿಧಾತನಂತೆ 
ಕಾಣುತ್ತಿದ್ದ ಸಾಹೇಬ ಇಂದು ಎರಗಲು ಬಂದ ಹೆಬ್ಬುಲಿಯಂತೆ ಕಾಣತೊಡಗಿದ.

ರುದ್ರಾಪುರದ ಗೋವುಗಳ ನಡುವೆಯೂ ಒಂದು ಗೂಳಿಯಿತ್ತು.
ಅದು ಊರ ಉಸಾಬರಿಗೂ ಹೋಗದೇ ತಾನಾಯ್ತು ತನ್ನ ಮಿಂಡಗಾತಿಯರಾಯ್ತು ಎಂಬಂತೆ ಬದುಕುತ್ತಿತ್ತು.
ಆ ಗೂಳಿಯ ಹೆಸರು ಈರಣ್ಣ.ಶಿಕಾರಿಯಲ್ಲಿ ನಿಸ್ಸೀಮ.

ರುದ್ರಾಪುರದ ಜನರು ಈರಣ್ಣನ ಮನವೊಲಿಸಿ ಗವರ್ನರ್ ಸಾಹೇಬನ ಸಹಾಯಕ್ಕೆ ಕಳುಹಿಸುವಲ್ಲಿ ಸಫಲರಾದರು.

ಈರಣ್ಣನ ಸಹಾಯ ಪಡೆಯಲು ಸಾಹೇಬನಿಗೆ ಅಹಮ್ಮು ಅಡ್ಡ ಬಂತಾದರೂ ಹೆಂಡತಿಯ ಒತ್ತಡಕ್ಕೆ ಮಣಿಯಲೇಬೇಕಾಯಿತು.

ಗವರ್ನರ್ ಸಾಹೇಬ ಮತ್ತು ಈರಣ್ಣ ಅಂದು ಸಂಜೆ ಶಿಕಾರಿಗೆ ಹೊರಟರು.

ಕಾಡೊಳಗೆ ಝರಿಗೆ ಅಡ್ಡಲಾಗಿ ಒಂದು ಪುರಾತನ ಉಕ್ಕಿನ ಸೇತುವೆಯಿತ್ತು.
ನಾಲ್ಕಾರು ದಿಕ್ಕಿನ ಜಾಡುಗಳು ಆ ಸೇತುವೆಯಲ್ಲಿ ಸಂಧಿಸುತ್ತಿದ್ದವು.

ಈರಣ್ಣ ಸೇತುವೆಯ ಬದಿಯಲ್ಲಿದ್ದ ಬೀಟೆ ಮರಕ್ಕೆ ಮಚಾನು ಕಟ್ಟಿದ.
ಜೊತೆಯಲ್ಲಿ ಹೊಡೆದು ತಂದಿದ್ದ ಎಮ್ಮೆಕೋಣವನ್ನು ಮರದ ಬುಡಕ್ಕೆ ಕಟ್ಟಿದ .

ಅಷ್ಟರಲ್ಲಿ ಮಬ್ಬುಗತ್ತಲು ಆವರಿಸಿತು. ಗವರ್ನರ್ ಸಾಹೇಬನ ಕೈಲಿದ್ದ ಟಾರ್ಚು ಕತ್ತಲಿನಲ್ಲಿ ಏಕೈಕ ಆಸರೆಯಾಗಿತ್ತು.

ಇಬ್ಬರೂ ಮಚಾನು ಹತ್ತಿ ಬೇಟೆಗಾಗಿ ಕಾದು ಕುಳಿತರು.

ಈರಣ್ಣ ಟಾರ್ಚಿನ ಬೆಳಕಿನಲ್ಲಿ  ಕತ್ತಲ ಗರ್ಭವನ್ನು ಸೀಳುತ್ತಾ ಜಾಡುಗಳ ಮೇಲೆ ನಿಗಾವಹಿಸತೊಡಗಿದ.

ಮೂರು ತಾಸುಗಳು ಉರುಳಿದವು. ಗವರ್ನರ್ ಸಾಹೇಬ ತೂಕಡಿಕೆಗೆ ಜಾರಿದ್ದ.

ಆಗ ಸೇತುವೆಯ ಆಚೆಗಿನ ಜಾಡಿನಲ್ಲಿ ಹುಲಿಯೊಂದು  ಟಾರ್ಚ್ ಬೆಳಕಿನ  ಪರಿಧಿಗೆ ಬಂದು ಬೆಳಕಿನ ರವಕ್ಕೆ ಗಕ್ಕೆಟ್ಟು ನಿಂತಲ್ಲಿಯೇ ನಿಂತುಬಿಟ್ಟಿತು.

ಒಮ್ಮೆಲೇ ಟಾರ್ಚಿನ ಬೆಳಕು ಬಿದ್ದುದನ್ನು ನೋಡಿ ಹುಲಿಯು ಗಾಬರಿಯಾಗಿತ್ತು.ಅದು ಬೆಳಕಿಗೆ ಬೆದರಿ ಪರಾರಿಯಾಗುವ ಸಂಭವವಿತ್ತು.
ಇದನ್ನರಿತ ಈರಣ್ಣ ತಕ್ಷಣ ಟಾರ್ಚನ್ನು ಆರಿಸಿದ. ತೂಕಡಿಸುತ್ತಿದ್ದ ಸಾಹೇಬನನ್ನು ತಿವಿದು ಎಚ್ಚರಿಸಿದ.

ಕತ್ತಲಿನಲ್ಲಿ ಕಣ್ಣು ನೆಟ್ಟು ಮೈಯೇ ಕಣ್ಣಾಗಿ ಹುಲಿಯ ಚಲನೆಯನ್ನು ಗಮನಿಸತೊಡಗಿದ.

ಅದೃಷ್ಟ ಚೆನ್ನಾಗಿತ್ತು ; ಹುಲಿ ಹಿಂದಡಿಯಿಡಲಿಲ್ಲ.
ಒಂದೆರಡು ಕ್ಷಣ ಅನುಮಾನದಿಂದ ತಲೆಯಾಡಿಸಿ ಸೇತುವೆಯತ್ತ ಮೆಲ್ಲಗೆ ಹೆಜ್ಜೆಯಿಡತೊಡಗಿತು.

ಹುಲಿಯು ಸೇತುವೆಯ ಉಕ್ಕಿನ ಹಲಗೆಯ ಮೇಲೆ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದರೆ ತರಗೆಲೆಗಳ ಮೆತ್ತನೆಯ ಸಪ್ಪಳ ಕೇಳಿಬರುತ್ತಿತ್ತು.ಇತ್ತ ಈರಣ್ಣನ ಎದೆಗೂಡಿನ ಸಪ್ಪಳ ಜೋರಾಗತೊಡಗಿತು.

ಸೇತುವೆಯನ್ನು ದಾಟಿ ಈಚೆಬದಿಗೆ ಬಂದ ಹುಲಿಯು ಎಡಕ್ಕೆ ತಿರುಗಿ ಆಳೆತ್ತರದ ಬಂಡೆಯ ಹಿಂದೆ ಮರೆಯಾಯಿತು.ಹುಲಿ ಪರಾರಿಯಾಯಿತೆಂದು ಈರಣ್ಣನಿಗೆ ನಿರಾಸೆಯಾಯಿತು.

ಬಹುಶಃ ಮರದಡಿಯಲ್ಲಿ ನಿಂತಿದ್ದ ಕೋಣ ಅದರ ಕಣ್ಣಿಗೆ ಬಿದ್ದಿರಬಹುದು. ಆದರೆ ಟಾರ್ಚಿನ ಬೆಳಕು ಅದರ ಮನಸ್ಸಿನಲ್ಲಿ ಒಂಚೂರು ಗೊಂದಲವನ್ನೂ ಹುಟ್ಟು ಹಾಕಿರಬಹುದು.

ಹಾಗಾಗಿ ಏಕಾಏಕಿ ದಾಳಿ ಮಾಡುವ ಬದಲು ಯಾವುದೇ ಅಪಾಯವಿಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಬಂಡೆಯ ಹಿಂದೆ ನಿಂತಿದ್ದಿರಬಹುದು.

ಮರದಡಿಯಲ್ಲಿ ನಿಂತು ಸೆಳೆಯುತ್ತಿದ್ದ ಕೋಣ ಹುಲಿಯ ಬುದ್ಧಿಯನ್ನು ಮಂಕಾಗಿಸಿತು.
ಮಚಾನಿನ ಮೇಲಿದ್ದ ಹಂತಕರ ಸುಳಿವನ್ನು ಪತ್ತೆ ಹಚ್ಚಲು ವಿಫಲವಾಯಿತು. 

ಬಂಡೆಯ ಮರೆಯಿಂದ ಹೊರ ಬಂದು ಕೋಣನೆಡೆಗೆ ಮೆಲ್ಲಗೆ ಹೆಜ್ಜೆಯಿಡತೊಡಗಿತು.

ಅದು ಬೋನಿಗೆ ಇಪ್ಪತ್ತು ಮಾರುಗಳಷ್ಟು ಹತ್ತಿರ ಬಂದದ್ದೇ ತಡ ಗವರ್ನರ್ ಸಾಹೇಬ ಛಕ್ಕನೆ ಬ್ಯಾಟರಿ ಹೊತ್ತಿಸಿದ.

ಈರಣ್ಣ ಮಿಂಚಿನ ವೇಗದಲ್ಲಿ ಅದರ ನೆತ್ತಿಗೆ ಗುರಿಯಿಟ್ಟು ಉಡಾಯಿಸಿದ.

ಹುಲಿಯು ಒಂದೇ ಏಟಿಗೆ ಹಾರಿ ಬಿದ್ದಿತು.
ಗುಂಡಿನ ಸದ್ದಿಗೆ ಬೆಚ್ಚಿದ ಹಕ್ಕಿಗಳು ಚಟಪಟಗುಟ್ಟುತ್ತಾ ಮೇಲೆದ್ದವು.

ತೀರಾ ಹತ್ತಿರದಲ್ಲಿ ಆನೆಯ ಹಿಂಡು ಘೀಳು ಹಾಕತೊಡಗಿದವು.

*****

ಈರಣ್ಣನ ಜೊತೆ ಬಿಡಾರಕ್ಕೆ ಬಂದಾಗ ಗವರ್ನರ್ ಸಾಹೇಬ ಗತ್ತಿನಿಂದ ಬಂದೂಕು ತಿರುವುತ್ತಿದ್ದ.
ಆದ್ರೆ ಹ್ಯಾಪನಗೆ ಸತ್ಯವನ್ನು ಹೇಳುತ್ತಿತ್ತು!

ಆಂಗ್ಲರ ಆಡಳಿತದಲ್ಲಿ ಕಾಡೊಳಗೆ ದನಗಳನ್ನು ಮೇಯಿಸಲು  ಜಂಗಲ್ ಪಾಸ್ ತೋರಿಸಬೇಕಿತ್ತು.

ಗವರ್ನರ್ ಸಾಹೇಬ ಈರಣ್ಣನಿಗೆ-ಬಹುಮಾನದ ರೂಪದಲ್ಲಿ -ಜಂಗಲ್ ಪಾಸ್ ಪಡೆಯುವುದರಿಂದ ವಿನಾಯ್ತಿ ನೀಡಿದ. ಜೊತೆಗೆ ಈರಣ್ಣನ ಕಂದಾಯವನ್ನೂ ಶಾಶ್ವತವಾಗಿ ರದ್ದುಗೊಳಿಸಿದ.

ಆದರೆ ಗವರ್ನರ್ ಹೆಂಡತಿಯ ಮನದಲ್ಲಿ ಬೇರೆಯದೇ ಆಸೆ ಆಕಾಂಕ್ಷೆಗಳು ಗರಿಗೆದರತೊಡಗಿದವು.

ಈರಣ್ಣನ ಸಾಹಸಕ್ಕೆ ಮನಸೋತ ದೊರೆಸಾನಿಗೆ ಅಂದಿನ ರಾತ್ರಿಯನ್ನು ಆತನೊಂದಿಗೆ ಕಳೆಯುವ ಬಯಕೆಯಾಯಿತು.

ತನ್ನ ಮನದಿಂಗಿತವನ್ನು ಗಂಡನಿಗೆ ತಿಳಿಸಿದಾಗ ಆತನೇನು ಬೆಚ್ಚಿ ಬೀಳಲಿಲ್ಲ. ಕ್ರೋಧದಿಂದ ಕುದಿಯಲಿಲ್ಲ. ಅವಳ ಬಯಕೆಗೆ ಹಸನ್ಮುಖನಾಗಿಯೇ ಸಮ್ಮತಿ ನೀಡಿದ.

ಹಾಲುಬೆಳದಿಂಗಳಿನಲ್ಲಿ ಅದ್ದಿ ತೆಗೆದಂತಿದ್ದ ಸುಕೋಮಲ ಚೆಲುವೆ ದೊರೆಸಾನಿಯನ್ನು ಕೂಡಲು ಈರಣ್ಣನಿಗೂ ಒಲವಿತ್ತು.

ದೊರೆಗಳದ್ದು ಮೊದಲೇ ಚಂಚಲ ಮನಸ್ಸು.. ಯಾರಿಗೆ ಗೊತ್ತು .. ಆತ ತನ್ನ ಹೆಂಡತಿಯ ನಿರ್ಣಯದಿಂದ ಒಳಗೊಳಗೇ ಕುದಿಯುತ್ತಿರಬಹುದು.. ಕ್ರೋಧವನ್ನು ತೋರಗೊಡದೇ ಸಮ್ಮತಿಸಿರಬಹುದು..ಹೆಂಡತಿಯನ್ನು  ಕೂಡಿದ ನಂತರ ಸೇಡಿನಿಂದ ಗುಂಡಿಕ್ಕುವುದಕ್ಕೂ ಆತ ಹೇಸುವುದಿಲ್ಲ ಎಂಬ ಅಳುಕಿನಿಂದ  ಅವಳ ಆಹ್ವಾನಕ್ಕೆ ಒಲ್ಲೆನೆಂದುಬಿಟ್ಟ.

ದೊರೆಸಾನಿಗೆ ನಿರಾಸೆಯ ಜೊತೆಗೆ ಅವಮಾನವೂ ಆಯಿತು . ಆದರೂ ತೋರಗೊಡದೇ,ತನ್ನಂತಹ ಲಾವಣ್ಯವತಿಯ ಆಹ್ವಾನವನ್ನೇ ಒಲ್ಲೆನೆನ್ನಲು ಕಾರಣವೇನೆಂದು ಕೇಳಿದಳು.

ದೊರೆಯ ಕಡೆಗೆ ಬೊಟ್ಟು ಮಾಡಲು ಈರಣ್ಣನಿಗೆ ಭಯವಾಯಿತು.
ಒಬ್ಬ ಮನುಷ್ಯನಿಗೆ ಮೂರು ಜನ ತಾಯಂದಿರು. ಒಬ್ಬಳು ಹೆತ್ತ ತಾಯಿ,ಇನ್ನೊಬ್ಬಳು ಭೂಮಿತಾಯಿ, ಮತ್ತೊಬ್ಬಳು ರಾಜನ ಮಡದಿ. 
ಹಾಗಾಗಿ ತಾಯಿ ಸಮಾನಳೊಂದಿಗೆ ನಾನು ಮಲಗಲು ಒಲ್ಲೆ ಎಂದ.

ಆಗ ದೊರೆಸಾನಿಯು ಈರಣ್ಣನಿಗೆ ಗವರ್ನರ್ ಸಾಹೇಬನ ಸೂಟನ್ನು ತೊಡಿಸಿ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಳು.

ಅವನಿಗೆ ಬೆಳ್ಳಿ ಲೋಟವೊಂದನ್ನು ನೆನಪಿನ ಕಾಣಿಕೆಯಾಗಿ ನೀಡಿದಳು.

ನೀನು ಇದರಲ್ಲಿ ಹಾಲು ಕುಡಿವಾಗೆಲ್ಲಾ ನನ್ನನ್ನು ನೆನಪು ಮಾಡಿಕೋ ಎಂದು ಹೇಳಿ ಈರಣ್ಣನನ್ನು ಬೀಳ್ಕೊಟ್ಟಳು.

ಅಂದು ರಾತ್ರಿ ಕ್ರಿಸ್‌ಮಸ್ ಪಾರ್ಟಿಯಲ್ಲಿ  ಗವರ್ನರ್ ಸಾಹೇಬ ಹುಲಿಯ  ಕಳೇಬರದ ಮೇಲೆ ಕುಳಿತು ರಮ್ಮು  ಕುಡಿದು ಮೋಜು ಮಾಡಿದ . ಮಾರನೆಯ ದಿನ ದಂಡಿನೊಂದಿಗೆ ಮದ್ರಾಸಿಗೆ ಹಿಂತಿರುಗಿದ.

ರುದ್ರಾಪುರದ ಬದುಕು ಮತ್ತೆ ಸ್ಲೋ ಮೋಷನ್ನಿಗೆ ಮರಳಿತು.

*********

ಗವರ್ನರ್ ಹೋಗಿ ಆರು ತಿಂಗಳೂ ತುಂಬಿರಲಿಲ್ಲ.

ಯಾರನ್ನು ಆ ಘಳಿಗೆಯಲ್ಲಿ ತಾಯಿ ಸಮಾನಳೆಂದು ಹೇಳಿ ನಿರಾಕರಿಸಿದ್ದನೋ ಅದೇ ದೊರೆಸಾನಿಯನ್ನು ಈರಣ್ಣ ಮೋಹಿಸತೊಡಗಿದ!

ಹೆಂಡತಿಯ ಮಗ್ಗುಲಿನಲ್ಲಿಯೂ ದೊರೆಸಾನಿಯದ್ದೇ ರೂಪ ನಲಿಯತೊಡಗಿತು .

ತಾನಾಗಿ ಬಂದಿದ್ದ  ಸುಂದರ ಅವಕಾಶವನ್ನು ಎರಡೂ ಬಾಹುಗಳಿಂದ ಬಾಚಿಕೊಳ್ಳುವುದರ ಬದಲು , ಭಯದಿಂದ ತಾಯಿ ಸಮಾನಳೆಂದು ಹೇಳಿ ಆತ್ಮವಂಚನೆ ಮಾಡಿಕೊಂಡೆನೆಂದು ಕೊರಗಲಾರಂಭಿಸಿದ. 

ಊರ ಜನರಿಂದ ದೂರವಾಗಿ ಮೌನಿಯಾದ.
ಮನೆಯ ಮಂದಿಗೇ ಅಪರಿಚಿತನಾದ.

ಹೇಗಾದರೂ ಮಾಡಿ ಗವರ್ನರ್ ಹೆಂಡತಿಯನ್ನು ಕೂಡಲೇಬೇಕೆಂಬ ಹಠಕ್ಕೆ ಬಿದ್ದ .ಹಠ ಹುಚ್ಚಿಗೆ ತಿರುಗಿತು.

ಉಟ್ಟ ಬಟ್ಟೆಯ  ಮೇಲೂ ಗ್ಯಾನವಿಲ್ಲದೇ ಅವಳನ್ನು ಅರಸುತ್ತಾ ಊರೂರು ಅಲೆಯತೊಡಗಿದ.

ಮದ್ರಾಸನ್ನೂ ತಲುಪಿದ. ಗವರ್ನರ್ ಹೆಂಡತಿಯ ಮನೆ ತೋರಿಸುವಂತೆ ಸಿಕ್ಕಸಿಕ್ಕವರನ್ನೆಲ್ಲಾ ಅಂಗಲಾಚತೊಡಗಿದ.

ಕೆಲವು ದಿನಗಳವರೆಗೆ ಮದ್ರಾಸಿನ ಬೀದಿಗಳಲ್ಲಿ ಹುಚ್ಚನಂತೆ ಅಲೆದು ಅವಳನ್ನು ಪತ್ತೆ ಮಾಡಲಾಗದೇ ಊರಿಗೆ ಹಿಂದಿರುಗಿದ.

ಅವಳ ಹುಚ್ಚಿನಲ್ಲಿ ಅನ್ನ ನೀರು ಬಿಟ್ಟು ಹಾಸಿಗೆ ಹಿಡಿದ.

****  ***** *****

ಅರೆ!  ಅಷ್ಟೊತ್ತಿನಿಂದ ಜಗ್ಗಾಡಿದರೂ ಸ್ಪಂದಿಸದೇ ಜಡವಾಗಿ ಬಿದ್ದಿದ್ದ ಈರಣ್ಣ ತಾನಾಗಿಯೇ ಕೈ ಸನ್ನೆ ಮಾಡುತ್ತಿದ್ದಾನೆ !

ತನ್ನ ಚಕ್ಕೆಗಟ್ಟಿದ ಒರಟು ಅಂಗೈನಿಂದ ಮಗಳ  ಸುಕೋಮಲ ಕೆನ್ನೆಯನ್ನು ಸವರುತ್ತಿದ್ದಾನೆ!

ಈರಣ್ಣ ಹೆಂಡತಿಯತ್ತ ತಿರುಗಿ ಏನನ್ನೋ ಕೇಳಿದ. 

ಹೆಬ್ಬೆರಳನ್ನು ಕೆಳಗೆ ಮಾಡಿ ತೋರ್ಬೆರಳನ್ನು ಮೇಲೆ ಮಾಡಿ ಏನೋ ಸನ್ನೆ ಮಾಡಿದ.

ಅವನ ಕೈ ಸನ್ನೆಯನ್ನು ಅರ್ಥ ಮಾಡಿಕೊಂಡ ಹೆಂಡತಿ ಲಗುಬಗೆಯಿಂದ ಕೋಣೆಗೆ ನುಗ್ಗಿ ಬೆಳ್ಳಿ ಲೋಟದಲ್ಲಿ ಹಾಲು ತುಂಬಿಕೊಂಡು ಬಂದಳು.

ಗಂಡನ ಮಗ್ಗುಲಲ್ಲಿ ಕುಳಿತು ಅವನ ಬಾಯಿಗೆ ಹಾಲು ಬಿಡಲು ಯತ್ನಿಸುತ್ತಿದ್ದಂತೆ ಕೃಶವಾದ ಹಸ್ತದಿಂದ ಲೋಟವನ್ನು ಬಿಗಿಯಾಗಿ ಹಿಡಿದುಬಿಟ್ಟ. ಬತ್ತಿ ಹೋಗಿ ಪೊಟರೆಯೊಳಗೆ ಸೇರಿಕೊಂಡಿದ್ದ ಅವನ ಕಣ್ಣುಗಳಿಂದ ಒಂದೆರಡು ಹನಿಗಳು  ಇಣುಕಿ  ಹೊರಗೆ ಧುಮುಕಲಾಗದೇ ಒದ್ದಾಡುತ್ತಿದ್ದವು.

ಮೂರ್ನಾಲ್ಕು ನಿಮಿಷಗಳ ನಂತರ ಹಿಡಿತವನ್ನು ಸಡಿಲಗೊಳಿಸಿದ.

ಹೆಂಡತಿ ಲೋಟದಲ್ಲಿದ್ದ ಹಾಲನ್ನು ಮೆಲ್ಲಗೆ ಅವನ ಬಾಯಿಗೆ ಬಿಡತೊಡಗಿದಳು.

ನಾಲ್ಕೈದು ಗುಟುಕು ಗಂಟಲಿಗೆ ಇಳಿದ ನಂತರ ಲೋಟವನ್ನು ಮಗಳ ಕೈಗೆ ಕೊಟ್ಟಳು.

ಆ ಕಂದನು ಕೈ ನಡುಗಿಸುತ್ತಾ ಅಪ್ಪನ  ಬಾಯಿಗೆ ಹಾಲನ್ನು ಸುರುವತೊಡಗಿತು. ಒಂದೆರಡು ಗುಟುಕು ಗಂಟಲಿಗೆ ಇಳಿಯಿತು.

ಮಿಕ್ಕಿದ್ದು ಕಟಬಾಯಿಯನ್ನು ದಾಟಿ ಕುತ್ತಿಗೆಗೆ ಹರಿಯಿತು.

ಈರಣ್ಣ ಬಿಟ್ಟ ಕಣ್ಣು ಬಿಟ್ಟಂತೆಯೇ ಸೂರನ್ನು ದಿಟ್ಟಿಸುತ್ತಾ ಮಲಗಿದ್ದ. ಅವನ ಪ್ರಾಣಪಕ್ಷಿ ಹಾರಿ ಹೋಗಿತ್ತು.

*****
(ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ಉಚ್ಛ್ರಾಯದಲ್ಲಿದ್ದ ಸಂದರ್ಭದಲ್ಲಿ ಚಾಮರಾಜನಗರದ ಗಡಿಯಲ್ಲಿರುವ -ಪ್ರಸ್ತುತ ತಮಿಳುನಾಡಿನ ಭಾಗವಾಗಿರುವ -ತಾಳವಾಡಿ ಫಿರ್ಕಾದ ಗ್ರಾಮವೊಂದರಲ್ಲಿ ಸಂಭವಿಸಿದ ಸತ್ಯ ಘಟನೆ ಆಧಾರಿತ ಕಥೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
parthasarathy
9 years ago

ಗವಿಸ್ವಾಮಿಗಳೆ , ಅತ್ಯಂತ ಸರಳ ಹಾಗು ಸುಂದರ ಕತೆ.  
ಕತೆಯ ಬಗ್ಗೆ ಹೇಗೆ ಪ್ರತಿಕ್ರಿಯಿಸುವುದು ಎನ್ನುವುದು ಮಾತ್ರ ತಿಳಿಯುತ್ತಿಲ್ಲ !

 

amardeep.p.s.
amardeep.p.s.
9 years ago

ಮನುಷ್ಯ ಸಹಜ ಕಾಮನೆಗಳು ಒಮ್ಮೊಮ್ಮೆ ತನ್ನನ್ನು ಪರರನ್ನು ಏಕಕಾಲಕ್ಕೆ ಗೊಂದಲಕ್ಕೀಡು ಮಾಡಿ ತಪ್ಪು ಸರಿ ನಿರ್ಧಾರದ ಹಾದಿಯಲ್ಲೇ ಸವೆಸಿಬಿಡುತ್ತವೆ…. ಡಾ:ಗವಿಸ್ವಾಮಿಯವರೇ, ಕಥೆ ತುಂಬಾ ಚೆನ್ನಾಗಿದೆ…. ಅಭಿನಂದನೆಗಳು…

Akhilesh Chipli
Akhilesh Chipli
9 years ago

ಕಲ್ಪನೆಗಳಿಗಿಂತ ಸತ್ಯಘಟನೆಗಳೇ
ಕೆಲವು ಬಾರಿ ರೋಚಕವಾಗಿರುತ್ತವೆ
ಇದಕ್ಕೊಂದು ಉತ್ತಮ ಉದಾಹರಣೆ "ಶಿಕಾರಿ"
ಉತ್ತಮವಾಗಿದೆ.

ವನಸುಮ
9 years ago

ತುಂಬಾ ಚೆನ್ನಾಗಿದೆ. ನಿರೂಪಣೆ ಕೂಡ ಉತ್ತಮವಾಗಿದೆ.

ಶುಭವಾಗಲಿ.

Gaviswamy
9 years ago

ಓದಿದ , ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು..

Guruprasad Kurtkoti
9 years ago

ಕತೆ ತುಂಬಾ ಚೆನ್ನಾಗಿದೆ. ಓದಿಸಿಕೊಂಡು ಹೋಗುವ ನಿಮ್ಮ ನಿರೂಪಣಾ ಶೈಲಿಗೆ ದೊಡ್ಡ ಸಲಾಮ್!

Gaviswamy
9 years ago

ಕಥೆ ಮತ್ತು ನಿರೂಪಣೆಯ ಶೈಲಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್

mahantesh yaragatti
mahantesh yaragatti
9 years ago

Nice story sir………….

 

Gaviswamy
9 years ago

Thank you Mahanthesh..

9
0
Would love your thoughts, please comment.x
()
x