“ಕೆಲಸ, ಕೆಲಸ, ಕೆಲಸ, ಬರೀ ಇದೇ ಆಗೋಯ್ತಲ್ಲ ನಿಂದು” ಶಾಲುಗೆ ಮಾಲು ಬೈಯುತ್ತ ಇದ್ದಿದ್ದು ಪಕ್ಕದ ರೂಮಿನಲ್ಲಿದ್ದ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. “ಇರೋದು ಒಂದು ಜೀವನ, ಎಂಜಾಯ್ ಮಾಡೋದು ಕಲಿತುಕೊ. ರಜೆ ತೊಗೋ, ಮಜಾ ಮಾಡು. ಅದು ಬಿಟ್ಟು…” ಅವಳ ವಾಕ್ ಪ್ರವಾಹ ನಡೀತಾನೆ ಇತ್ತು. ಇವಳು ಮಾತ್ರ ಮೌನ.
ಮಧ್ಯಾಹ್ನ ಲಂಚ್ ಗೆ ಶಾಲು ಸಿಕ್ಕಿದಾಗ ಅವಳ ಮುಖದಲ್ಲಿ ಯಾವ ಆತಂಕವೂ ಕಂಡು ಬರಲಿಲ್ಲ. ಹಾಯಾಗಿ ತಂದಿದ್ದ ಊಟ ಮುಗಿಸಿ ಕಾಫಿ ಕುಡೀತಾ ಕುಳಿತ್ತಿದ್ದವಳನ್ನು ನೋಡಿ ಅಚ್ಚರಿ ಆಯಿತು. ಮಾಲು ಎಲ್ಲೂ ಕಾಣಲಿಲ್ಲ. ಧೈರ್ಯ ಮಾಡಿ ಕೇಳಿಯೇ ಬಿಟ್ಟೆ” ಏನೇ ಅದು. ಅಷ್ಟು ಜೋರು ಮಾತು ಕತೆ ನಿಮ್ಮಿಬ್ಬರದ್ದು?”
“ಅಯ್ಯೋ ಏನಿಲ್ಲವೇ, ಆಫೀಸಿನ ಕೆಲಸ ತಲೆ ಮೇಲೆ ಹೊತ್ತು ಮಾಡುತ್ತೀಯ ಅಂತ ಅವಳ ಆರೋಪ. ಅಷ್ಟೊಂದು ಕಷ್ಟ ಪಡೋದು ಯಾಕೆ. ಏನೋ ಒಂದು ಮಾಡಿ ಮುಗಿಸು ಸಾಕು ಅಂತ ಅವಳ ಮಾತು. ಎಲ್ಲರೂ ಈಗ ವರುಷದ ಕೊನೆ, ರಜೆ ಖರ್ಚು ಮಾಡಬೇಕು ಅಂತ ಟ್ರಿಪ್ ಪ್ಲಾನ್ ಮಾಡ್ತಾ ಇದ್ದಾರೆ. ನಾನು ಬರೋಲ್ಲ ಅಂದೆ. ಅದಕ್ಕೆ ಇಷ್ಟೊಂದು ಉಪದೇಶ!” ಆರಾಮವಾಗಿ ನುಡಿದಳು. ನನಗೆ ತಡೆಯಲಾಗದೆ ನುಡಿದೆ “ಅವಳು ಹೇಳೋದು ನಿಜ ಅಲ್ಲವೇನೆ. ಹೇಗಿದ್ರೂ ರಜೆ ಉಳಿಸಿಕೊಂಡಿರುವೆ. ಇನ್ನು ಅದು ಲಾಪ್ಸ್ ಆಗುವುದಕ್ಕೆ ಬದಲು ಆರಾಮವಾಗಿ ಹೋಗಿ ಬಾ. ನಿಂದೇನು ಹಠ? ಕೆಲಸಕ್ಕೇನು, ಅದು ಮುಗಿಯದ ಕತೆ ಅಲ್ವಾ”
ಶಾಲು ನಕ್ಕು ನುಡಿದಳು” ನನಗೆ ಚಿಕ್ಕ ಮಗು ಇರುವುದು ಗೊತ್ತೇ ಇದೆ. ಅದಕ್ಕೆ ನೆಗಡಿ, ಜ್ವರ, ಹೊಟ್ಟೆನೋವು ಇತ್ಯಾದಿ ತೊಂದರೆಗಳಾದಾಗ ರಜೆ ಹಾಕಲೇ ಬೇಕು. ಆಗೆಲ್ಲಾ ನನ್ನ ಬಾಸ್ ಬೇಸರವಿಲ್ಲದೆ ರಜೆ ಮಂಜೂರು ಮಾಡುತ್ತಾರೆ. ಈಗ ವರುಷದ ಕೊನೆ, ಕೆಲಸ ಕಡಿಮೆ. ಬೇಗ ಮನೆಗೆ ಹೋಗಿ ಮಗುವಿನ ಜತೆ ಇರಬಹುದು. ರಜೆ ಖರ್ಚು ಮಾಡುವುದಕ್ಕೆ ಸುಮ್ಮನೆ ಹಾಕಿ, ತಿರುಗೋಕ್ಕೆ ಹೊರಟರೆ ಬಾಸ್ ದೃಷ್ಟಿಯಲ್ಲಿ ನಾ ಇಳಿದು ಹೋಗ್ತೀನಿ. ಇಲ್ಲೇ ಇದ್ರೆ ಅವರಿಗೂ ನನ್ನ ಮೇಲೆ ನಂಬುಕೆ, ಒಳ್ಳೆಯ ಭಾವನೆ ಬರುತ್ತದೆ. ಅಲ್ವಾ”
ಅವಳ ಮಾತಿನಲ್ಲಿರುವ ಸತ್ಯ ಅರಿತು ನಾ ಸುಮ್ಮನಾದೆ. ಬಹಳಷ್ಟು ಜನ ರಜೆ ಇದೆ ಎಂದು ಸುಮ್ಮನೆ ಹಾಕಿ ಮನೆಯಲ್ಲಿರುವುದೋ, ಸುತ್ತುವುದಕ್ಕೆ ಹೋಗುವುದೋ ಮಾಡುತ್ತಾರೆ. ಇದು ಹೆಂಗಸರು, ಗಂಡಸರು ಎಲ್ಲರಿಗೂ ಅನ್ವಯಿಸುತ್ತದೆ. ಕೆಲವರಿಗೆ ಕೆಲಸ ಮಾಡುವುದು ಒಂದು ರೀತಿಯ ಟೈಮ್ ಪಾಸ್. ಆದಷ್ಟು ಬೇಗ ಕೊಟ್ಟಿರುವ ಕೆಲಸ ಮುಗಿಸಿ ಆರಾಮವಾಗಿ ಇರುವ ಆಸೆ. “ಮಾಡಿ ಬಿಸಾಕು!” ನನ್ನ ಸಹೋದ್ಯೋಗಿಯೊಬ್ಬರ ಮಾತು. ಕೇಳಲಿಕ್ಕೆ ಬೇಜಾರಾಗುತ್ತಿತ್ತು. ಅವರ ಮನೋಭಾವ ಹಾಗೆ. ಏನೋ ಒಂದು ಮಾಡಿದರೆ ಆಯ್ತು ಎನ್ನುವುದು. ವರುಷ ಮುಗಿಯುತ್ತ ಬಂದಾಗ ಇದ್ದ ಬದ್ದ ರಜೆ “ ಖರ್ಚು” ಮಾಡುವ ಹುನ್ನಾರ. ಕೆಲಸ ಮಾಡುವೆಡೆ ಈ ರೀತಿಯ ವರ್ತನೆ ಸಲ್ಲ.
“ಸಂಬಳ ಕೊಟ್ಟಷ್ಟು ಮಾಡಿದರೆ ಸಾಕು” ಇದು ಬಹಳಷ್ಟು ಜನರ ಯೋಚನೆ. ಜಾಸ್ತಿ ಮಾಡುವುದು ಏಕೆ, ಅದರಿಂದಾಗುವ ಲಾಭವೇನು ಎಂದು ಚಿಂತಿಸುತ್ತಾ ಕೂರುವವರೇ ಜಾಸ್ತಿ. “ಕೆಳಗೆ ಬಿದ್ದ ಪೇಪರ್ ಎತ್ತಿಡಿ ಅಂದ್ರೆ ಅಷ್ಟೇ ಮಾಡಬೇಕು. ಎತ್ತಿ ಇಡಿ, ಆಮೇಲೆ ಅದರ ಮೇಲೆ ಪೇಪರ್ ಇಡಿ ಅಂದ್ರೆ ಆಗ ಮಾಡಿದರೆ ಸಾಕು!” ಒಬ್ಬರ ಅಂಬೋಣ.
ವರ್ಕ್ ಕಲ್ಚರ್ ಅಂದರೆ ಕೆಲಸದ ಸಂಸ್ಕೃತಿ. ಬಹಳಷ್ಟು ಮಜಲುಗಳು, ಅರ್ಥಗಳು ಇರುವ ಪದ ಇದು. ಜನ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಕೆಲಸ ಮಾಡುವೆಡೆ ಜನರ ಮನೋಭಾವ. ಅವರು ಎಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾರೋ ಅವರ ಕಾರ್ಯಕ್ಷೇತ್ರಕ್ಕೆ ಅಷ್ಟೇ ಲಾಭವಾಗುತ್ತದೆ. ಬೇಕಾಬಿಟ್ಟಿ, ಅಡ್ಡಾದಿಡ್ಡಿ, ಅರೆಬರೆ ಕೆಲಸ, ಆಲಸ್ಯ ತೋರುವುದು, ಗೊಣಗುತ್ತಾ ಕೆಲಸ ಮಾಡುವುದು, ಗಡಿಯಾರದ ಕಡೆ ಸದಾ ಗಮನವಿಡುವುದು…ಇದೆಲ್ಲ ಒಳ್ಳೆಯ ಕೆಲಸಗಾರನ ಲಕ್ಷಣವಲ್ಲ.
ಕೆಲಸ ಎನ್ನುವುದು ಬರೀ ಸಮಯ ಕಳೆಯಲು, ದುಡ್ಡು ಗಳಿಸುವ ಸಾಧನವಲ್ಲ. ಎಲ್ಲೋ ಓದಿದಂತೆ ಅದು ನಮಗೆ ಬೇಕಾದುದನೆಲ್ಲ ನೀಡುವುದು- ದುಡ್ಡು, ಸಮಾಜದಲ್ಲಿ ಸ್ಥಾನ, ಜನರ ಸಂಪರ್ಕ, ಜ್ಞಾನ, ವಿಚಾರ ಮಾಡುವ ಶಕ್ತಿ, ಮಾನಸಿಕ ಧೈರ್ಯ…ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ತಾತ್ಸಾರವೇ ಜಾಸ್ತಿ. ಅಯ್ಯೋ, ಇದೊಂದು ಗೋಳು, ದುಡ್ಡಿನ ತಾಪತ್ರಯವಿಲ್ಲದಿದ್ದರೆ ಆರಾಮವಾಗಿ ಮನೆಯಲ್ಲಿ ಇರ್ತಿದ್ದೆ. ಯಾರಿಗೆ ಬೇಕು ಇದೆಲ್ಲ ಎಂದು ಗೊಣಗುವವರೇ ಜಾಸ್ತಿ. ಕೆಲಸ, ಉದ್ಯೋಗ ನಮಗೆ ನೀಡಿರುವ ಸವಲತ್ತುಗಳನ್ನು ನೆನಪಿಸಿಕೊಂಡರೆ ನಮ್ಮ ಅದೃಷ್ಟದ ಬಗ್ಗೆ ಅರಿವಾಗುತ್ತದೆ. ಕಣ್ಣಿಗೆ ಒತ್ತಿಕೊಂಡು ನಮ್ಮ ಭಾಗ್ಯದ ಬಗ್ಗೆ ಖುಷಿ ಪಡಬಹುದು.
ಶಾಲು, ಮಾಲು ಬಗ್ಗೆ ಹೇಳುತ್ತಾ, ಶಾಲುವಿಗೆ ಬಾಸ್ ಖುಷಿಯಾಗಿ ಬಡ್ತಿ ಕೊಟ್ಟರು, ಮಾಲುವಿಗೆ ಏನೂ ಸಿಗದೆ ಅವಳು ನಿರಾಶಳಾದಳು ಎಂದರೆ ಕತೆ ಚೆನ್ನಾಗುತ್ತದೆನೋ…ಆದರೆ ಶಾಲು ಆರಾಮವಾಗಿ ಕೆಲಸ ಮಾಡಿಕೊಂಡಿದ್ದಳು, ಮಾಲು ಗೊಣಗುತ್ತಾ, ಬೇಸರದಲ್ಲಿ ಜೀವನ ಸಾಗಿಸುತ್ತಿದ್ದಳು ಎಂದು ಕತೆ ಮುಗಿಸುವುದು ಸೂಕ್ತ!!
–ಸಹನಾ ಪ್ರಸಾದ್