ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ ಮೂಲೆಯಲ್ಲೇ ಇದ್ದ ಒಂದು ಡೇಟಾಎಂಟ್ರಿ ಸೆಂಟರ್‍ನಲ್ಲಿ ಈಗಷ್ಟೇ ಐನೂರು ಎಂಟ್ರೀಗಳ ಮಾಡಿಮುಗಿಸಿ ಒಂದು ಕೈಯಲ್ಲಿ ನೀರು ತುಂಬಿಸಿಕೊಳ್ಳುತ್ತ ಇನ್ನೊಂದು ಕೈಯಲ್ಲಿ ಪ್ಲಾಸ್ಟಿಕ್ ಕಪ್ಪಿನಲ್ಲಿ ಅವಸರದಿಂದ ಚಹಾ ಹೀರುತ್ತ ತನ್ನ ಸೂಪರ್‍ವೈಸರಿಗೆ ಕೆಲಸವನ್ನೆಲ್ಲ ಮುಗಿಸಿದ್ದೇನೆಂದು ಸನ್ನೆಯಲ್ಲೇ ಹೇಳಿ, ಕಪ್ಪನ್ನು ಎಸೆದು ಶಾಲಿನಿ ಪಟಪಟನೆ ಮೆಟ್ಟಿಲಿಳಿದು ಹತ್ತಿರದಲ್ಲೇ ಇದ್ದ ಸಿಟಿ ಬಸ್ಟ್ಯಾಂಡಿಗೆ ಓಡುಗಾಲಲ್ಲಿ ನಡೆದಳು. ಆರೂಹತ್ತಕ್ಕೆ ಸರಿಯಾಗಿ ಅಲ್ಲಿಂದ ಒಂದು ಬಸ್ಸು ಹೊರಟು ಅವಳನ್ನು ಮನೆಸೇರಿಸುವ ಮತ್ತೊಂದು ಧಾರವಾಡದ ಬಸ್ಸನ್ನು ದಿನವೂ ಹತ್ತಿಸುತ್ತದೆ, ಇವತ್ತೂ ಆ ಪುಟ್ಟ ಗುಲಾಬಿ ಫ್ರಾಕನ್ನು ಶೋಕೇಸಿನಲ್ಲೇ ನೋಡಿ ಮರುಗುತ್ತ ಓಡೋಡಿ ಹೋಗಿ ಬಸ್ಸು ಹತ್ತಿ ಕುಳಿತುಕೊಂಡಳು, ಬಾಟಲಿಯಿಂದ ನೀರುಕುಡಿದು ಪಾಸು ತೋರಿಸಲು ಬ್ಯಾಗಿಗೆ ಕೈಹಾಕಿದ್ದೇ, ಕಂಡಕ್ಟರ್ "ಇರ್ಲಿ ಬಿಡವಾ ಮುಂಜೇಲೆ ತೋರ್ಸಿಯಲಾ" ಎಂದು ನಕ್ಕು ಮುಂದೆಹೋದ.
ಮೌನದಲ್ಲೇ ಅವನಿಗೊಂದು ಧನ್ಯವಾದ ಹೇಳಿ ಒಂದೆರಡು ದೀರ್ಘ ಉಸಿರಾಟಗಳ ಮುಗಿಸುವಷ್ಟರಲ್ಲೇ ತನ್ನ ಸ್ಟಾಪು ಬಂದದ್ದನ್ನು ಅರಿತು ಅವಳು ಎದ್ದುನಿಂತಳು, ಕಂಡಕ್ಟರ್ ಶಾಲಿನಿಯ ಕಡೆ ನೋಡಿ ಪುಟ್ಟದೊಂದು ನಗುವಕೊಟ್ಟು ಕಳಿಸಿಕೊಟ್ಟ. ಧಾರವಾಡದ ಬಸ್ಸುಹತ್ತಿ ಗುಟಕಾ, ಎಲೆಯಡಿಕೆಗಳ ರಸಜ್ವಾಲೆಯನ್ನು ಕಿಟಕಿಗಳಲ್ಲಿ ಒಮ್ಮೆ ಪರಿಷೀಲಿಸಿ ಒಂದು ಸೀಟು ಆರಿಸಿಕೊಂಡಳು. ಈ ಬಸ್ಸುಗಳಲ್ಲಿ ಪ್ರಯಾಣಿಸುವಾಗೆಲ್ಲ ಅವಳಲ್ಲಿಯ ಕಳೆದುಕೊಂಡ ಬಾಲ್ಯಕ್ಕೆ ಮತ್ತೆ ಜೀವ ಬಂದುಬಿಡುತ್ತದೆ, ಅವಳು ಚಿಕ್ಕಂದಿನಿಂದಲೂ ಬಸ್ಸಿನ ಕಿಟಕಿಯ ಸೀಟಿಗೆ ಕೂತು ಕಣ್ಣರಳಿಸಿಕೊಂಡು ಹೊರಗೆ ನೋಡುವುದನ್ನು ಮದುವೆಯಾಗಿ ಮಗಳು ಹುಟ್ಟಿದರೂ ಪಾಲಿಸಿಕೊಂಡು ಬಂದಿದ್ದಾಳೆ.
ಪ್ರತಿದಿನವೂ ಓಡಾಡುವ ದಾರಿಯಾಗಿದ್ದರೂ ಕಿಟಕಿಯಲ್ಲೇ ನೋಡುತ್ತ ಕುಳಿತುಕೊಳ್ಳುವ ಅವಳಿಗೆ ಇವತ್ತು ಯಾಕೋ ಹೊರಗೆ ನೋಡುವ ಮನಸ್ಸಾಗಲಿಲ್ಲ. ತನ್ನಲ್ಲೇ ತಾನು ಮುಳುಗಿ ತನ್ನನ್ನು ಒಂದಿಷ್ಟು ಕಾಲಕ್ಕೆ ಹಿಂದೆತಳ್ಳಿ ಏನನ್ನೋ ಅವಲೋಕಿಸುತ್ತಿದ್ದಳು, ಅದೇ ಗುಂಗಿನಲ್ಲೇ ಬಸ್ಸಿನಿಂದಿಳಿದು ತನ್ನ ಮನೆಯ ಹತ್ತಿರದಲ್ಲೇ ಇದ್ದ ತವರಿಗೆ ಹೋಗಿ ಎರಡು ವರ್ಷದ ಮಗಳು ಶ್ರಾವಣಿಯನ್ನು ಕರೆಯುವ ಮೊದಲೇ ಶ್ರಾವಣಿ ತನ್ನ ಡಬ್ಬಿ, ಆಟದಸಾಮಾನುಗಳನ್ನು ಒಂದು ಪುಟ್ಟ ಚೀಲದಲ್ಲಿ ಜೋಡಿಸಿಟ್ಟುಕೊಂಡು ಹೊಸ್ತಿಲು ದಾಟಿದ್ದಳು. ಶಾಲಿನಿ ಹೊರಗೆ ನಿಂತುಕೊಂಡೇ "ವೈನಿ ನಾನ್ ಹೋಗಿಬರ್ತೇನ್ರಿ" ಎಂದು ಅತ್ತಿಗೆಗೆ ಹೇಳಿ ಕೆಲವುಕ್ಷಣ ಕಾದಳು, ಒಳಗಿನಿಂದ ಯಾವ ಧ್ವನಿಯೂ ಬರಲಿಲ್ಲ ಅಲ್ಲೇ ಇದ್ದ ಅಣ್ಣನ ಮಗನಿಗೊಂದು ಚಾಕಲೇಟ್ ಕೊಟ್ಟು ಅಮ್ಮನಿಗೆ ನಾನು ಹೋದೆನೆಂದು ಹೇಳು ಎಂದು ಹೇಳಿ ಮನೆಯಕಡೆಗೆ ನಡೆದಳು. ಅಷ್ಟೊತ್ತಿಗಾಗಲೇ ದಾರಿಯಲ್ಲೆಲ್ಲ ಕತ್ತಲು ಚಿಮುಕಿಸಿ ಚಂದ್ರ ಬಾನಿಗೇರಿ ನಗುತ್ತಿದ್ದ, ಶ್ರಾವಣಿ "ಅಮ್ಮಾ ಚಂದಾಮಾಮಾನ್ ಮನಿ ಎಲ್ಲಿ ಅದ?" ಎಂದು ಕೇಳಿದಳು, ಅದು ಶಾಲಿನಿಗೆ ಯಾಕೋ ಕೇಳಿಸಲಿಲ್ಲ.
ರೈಲ್ವೇಸ್ಟೇಷನ್ನಿನ ಹತ್ತಿರದ ಬಯಲಲ್ಲೇ ಇದ್ದ ಸಾಲು ಮನೆಗಳ ಚಾಳಿನಲ್ಲಿ ಶಾಲಿನಿಯ ಮನೆಯೊಂದನ್ನು ಬಿಟ್ಟು ಉಳಿದೆಲ್ಲ ಮನೆಗಳೆದುರಿಗಿನ ಝೀರೋ ಬಲ್ಬುಗಳು ಹೊತ್ತಿಕೊಂಡಿದ್ದವು, ದೂರದಿಂದ ನೋಡಿದರೆ ಸೀರಿಯಲ್ ಲೈಟಿನ ಸರದ ಮಧ್ಯದ ಯಾವುದೋ ಹಳದೀಬಣ್ಣದ ಫ್ಯೂಸ್ ಆದ ಬಲ್ಬಿನಹಾಗೆ ಶಾಲಿನಿಯ ಮನೆ ಕಾಣುತ್ತಿತ್ತು. ಮನೆಯ ಹತ್ತಿರ ಹೋಗುತ್ತಲೇ ಚಾಳಿನ ಕಡೇಮನೆಯ ಸರಸ್ವತಕ್ಕ "ಏನ ತಂಗಿ ಇವತ್ಯಾಕೋ ತಡಾ ಆತಲಾ?" ಎಂದು ಶಾಲಿನಿಯನ್ನು ಅವಳ ಗುಂಗಿನಿಂದ ಹೊರಗೆಳದರು, ಕಳ್ಳ ನಿದ್ದೆಯಿಂದ ಎಚ್ಚೆತ್ತವಳಂತೆ "ಹಾ ಹಾ ಹೂನ್ರಿ ಮಾಮಿ ಆ ನವನಗರ ಹತ್ರ ರೋಡ್ ಮಾಡ್ಲಿಕತ್ತಾರಲ್ರಿ ಬಸ್ಸು ಮುಂದ ಹೋಗ್ಲ್ಯೊ ಬ್ಯಾಡೊ ಅಂತ ಬರ್ತದ ನೋಡ್ರಿ" ಎಂದು ತೊದಲಿದಳು, "ಹೌದವಾ ಯವ್ವಾ ಯಾವಾಗ ಮುಗಸ್ತಾವ ಏನ ಮೂಳಗೋಳು, ತಾರ ತಂಗಿ ಹುಡಗೀನಿಲ್ಲೆ ನೀನು ಅಡಿಗಿ ಮುಗಿಸಿ ಆಮೇಲೆ ಕರಕೊಂಡ್ಹೋಗು" ಎಂದು ಶ್ರಾವಣಿಯನ್ನೆತ್ತುಕೊಂಡು ಮುದ್ದಾಡುತ್ತ ತಮ್ಮಮನೆಯಕಡೆಗೆ ಹೋದರು.
ಅರೇನಿದ್ದೆಯ ಮಂಕಿನಲ್ಲಿದ್ದ ಮಗು ಅವರ ಮಡಿಲಿನ ಕಾವಿನಲ್ಲಿ ಬೆಚ್ಚಗೆ ಮಲಗಿತು, ಅದನ್ನೇ ಬಯಸಿದವರಂತೆ ಶಾಲಿನಿ ಮನೆಗೆಹೋಗಿ ಬಾಗಿಲು ತೆಗೆದು ದೀಪಹಚ್ಚಿ ಹೊಚ್ಚಲಿಗೆ ನೀರು ಚಿಮುಕಿಸಿ ನಿರಾಸಕ್ತಿಯಲ್ಲೇ ಅಡುಗೆಮನೆಗೆ ಬಂದಳು, ಅಲ್ಲಿಯ ಕಿಟಕಿಯಿಂದ ಓಡಾಡುವ ರೈಲುಗಾಡಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ತನ್ನ ಮದುವೆಯಾಗಿ ಐದು ವರ್ಷಗಳಾಗಿದ್ದನ್ನು ನೆನೆದು ಕಿಟಕಿಯಲ್ಲಿ ಓಡುತ್ತಿರುವ ರೈಲು ಡಬ್ಬಿಗಳ ಜೊತೆಗೆ ಅವಳ ಬದುಕೂ ಈ ಮನೆಯ ಸಮೇತ ಓಡುತ್ತಿದೆ ಎಂದೆನಿಸಿತು, ನಡುವೆ ಯಾವುದೋ ಒಂದು ಸ್ಟೇಷನ್ನಿನಲ್ಲಿ ಶ್ರಾವಣಿಯೂ ಈ ಡಬ್ಬಿಯನ್ನು ಸೇರಿಕೊಂಡಿದ್ದಳು. ಅಷ್ಟರಲ್ಲೇ ಟೇಬಲ್ಲಿನಮೇಲಿಟ್ಟ ಮೊಬೈಲ್‍ಫೋನು ಯಾವುದೋ ಸಂದೇಶದ ಸದ್ದನ್ನು ರಿಂಗಣಿಸಿತು, ಎತ್ತಿ ನೋಡಿದರೆ ಪ್ರಶಾಂತ, ಇವತ್ತು ಓವರ್‍ಟೈಮ್ ಮುಗಿಸಿಕೊಂಡು ಬರುವುದು ತಡವಾಗುತ್ತದೆ ಊಟಕ್ಕೆ ಕಾಯಬೇಡ ಎಂದು ಬೇಸರದಲ್ಲೇ ಹೇಳಿದ್ದ. ಓದಿ ಅದಕ್ಕೆ ರಿಪ್ಲೈಮಾಡಲು ಕೈ ಹಿಂಜರಿದವು, ಅಕ್ಕಿತೊಳೆದು ಕುಕ್ಕರಿನಲ್ಲಿ ಅನ್ನಕ್ಕಿಟ್ಟು ಸ್ಟೋವ್ ಹಚ್ಚಲುನೋಡಿದಳು ಅದು ಉರಿಯಲಿಲ್ಲ, ಮುಂಬಾಗಿಲಿನ ಮೂಲೆಯಲ್ಲಿ ನೇತುಹಾಕಿದ ಕ್ಯಾಲೆಂಡರಿನಕಡೆ ಓಡಿ ಅದನ್ನು ತಡವರಿಸಿ ನೋಡಿದಳು, ಇನ್ನೂ ಬರೀ ಒಂದೂವರೆ ತಿಂಗಳು ಇಷ್ಟುಬೇಗ ಸಿಲಿಂಡರ್ ಖಾಲಿಯಾಯಿತೆ ಎಂದು ಅಚ್ಚರಿಪಟ್ಟು ಸಿಲಂಡರ್ ಬದಲಾಯಿಸಿ ಸ್ಟೋವ್ ಹಚ್ಚಿ ಅಲ್ಲೇ ಇದ್ದ ಮಣೆಯಮೇಲೆ ಗೋಡೆಗೆಒರಗಿ ಕೂತಳು, ಎದುರಿಗೆ ಖಾಲಿ ಸಿಲಿಂಡರ್ ಬೇಗ ಖಾಲಿಯಾದ ಅಪರಾಧದಲ್ಲಿ ನೆಲನೋಡುತ್ತ ನಿಂತಿತ್ತು. ಅದನ್ನು ನೋಡುತ್ತಲೇ ಶಾಲಿನಿಗೆ ತನ್ನ ಪ್ರೇಮವಿವಾಹಪೂರ್ವ ದಿನಗಳು ನೆನಪಿಗೆ ಬಂದವು, ಪ್ರಶಾಂತ ಅಂದು ಯಾರದೋ ವಷೀಲಿ ಹಚ್ಚಿ ತಾನು ವಿವಾಹಿತನೆಂದು ಬರೆಸಿ ಡಬಲ್ ಸಿಲಿಂಡರಿಗೆ ಅರ್ಜಿಹಾಕಿ ತಂದು ತೋರಿಸಿ ಹೇಳಿದ್ದ, ನಮ್ಮಿಬ್ಬರ ಮನೆಯಲ್ಲೂ ಮದುವೆಗೆ ಒಪ್ಪುತ್ತಿಲ್ಲ, ನೋಡು ನಾನಂತೂ ನಮ್ಮ ಹೊಸಾ ಸಂಸಾರಕ್ಕೆ ಸ್ಟೋವ್, ಸಿಲಿಂಡರ್ ರೆಡೀಮಾಡಿದ್ದೇನೆ, ನೀನು ಇಲ್ಲಿಯೇ ಯಾವುದಾದರೊಂದು ಪುಟ್ಟ ಬಾಡಿಗೆ ಮನೆ ನೋಡಿಡು ಮುಂದಿನ ತಿಂಗಳವರೆಗೆ ನೋಡಿ ಇವರು ಒಪ್ಪದಿದ್ದರೂ ನಾವು ಮದುವೆಯಾಗಿಬಿಡೋಣ ನನಗೆ ನನ್ನಹಿಂದೆ ದೋಸ್ತರಿದ್ದಾರೆ ಯಾವುದಕ್ಕೂ ಭಯಬೇಡ ಎಂದು, ಅದನ್ನು ಕೇಳಿದ ಶಾಲಿನಿಗೆ ತನ್ನ ಆಯ್ಕೆ ತೀರಾ ಸರಿಯಾದದ್ದು ಎಂಬ ಹಿಗ್ಗು, ಇನ್ನೊಂದು ಕಡೆ ಅಕ್ಕನ ಗಂಡನಮನೆಯವರ ಮುಂದೆ ಅಪ್ಪ,ಅಮ್ಮನ ಮರ್ಯಾದೆಗೆ ಧಕ್ಕೆಯಾಗುವ ಆತಂಕ, ಅಣ್ಣನಮೇಲೆ ಸರಕಾರೀ ನೌಕರಸ್ತ ಅತ್ತೆಯ ನಾಲಿಗೆ ಇನ್ನೂ ಉದ್ದವಾಗುತ್ತದೆನ್ನುವ ಹೆದರಿಕೆ ಎಲ್ಲವೂ ಒಮ್ಮೆಗೇ ಅವಳೆದೆಯನ್ನಪ್ಪಳಿಸಿದ್ದವು. ಗಂಟಲು ಬಿಗಿದಿತ್ತು, ಕಣ್ಣುಗಳು ತುಂಬಿದ್ದವು ಅವನ ಕಣ್ಣಲ್ಲೇ ಕಣ್ಣಿಟ್ಟು ಹೇಳಲಾಗದ್ದನ್ನೇನೋ ಹೇಳಿಬಿಟ್ಟಳು ಅವನಿಗೂ ಅದು ಅರ್ಥವಾಗಿಹೋಗಿತ್ತು.
ಮುಂದೊಂದು ದಿನ ತನಗೇನೋ ಮಾತಾಡುವುದಿದೆಯೆಂದು ಪ್ರಶಾಂತನನ್ನು ಕರೆದಿದ್ದಳು, ಅವನು ಧೈರ್ಯ ಕಳೆದುಕೊಂಡೇ ಏನು ಹೇಳೂತ್ತಾಳೋ ಎಂದುಕೊಂಡು ಬಂದಿದ್ದನು. ಈ ಕಿಟಕಿಯಿಂದ ಕಾಣುವ ರೈಲ್ವೇಸ್ಟೇಷನ್ನಿನಲ್ಲಿ ನಿಂತ ಯಾವುದೋ ಒಂದು ವಸತೀ ರೈಲಿನ ಡಬ್ಬದಲ್ಲಿ ಕೂತುಕೊಂಡು ಇಬ್ಬರೂ ಗಂಟೆಗಟ್ಟಲೆ ಮಾತಾಡಿ ಕೊನೆಗೆ ಇಬ್ಬರ ಕಣ್ಣಂಚುಗಳೂ ಒದ್ದೆಯಾಗಿದ್ದವು. ಅವತ್ತು ಶಾಲಿನಿ, ಮನೆಯವರಂತೂ ನಮ್ಮ ಮದುವೆಗೆ ಒಪ್ಪುತ್ತಿಲ್ಲ ನೀನು ಹೇಳಿದಹಾಗೆ ನಾವು ಯಾವುದಾದರೂ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡುಬಿಡೋಣ, ನನಗೆ ಗೊತ್ತು ನೀನು ದೇವಸ್ಥಾನದ ದೇವರನ್ನು ನಂಬುವವನಲ್ಲ, ಆದರೂ ಅವತ್ತು ದೇವಸ್ಥಾನಕ್ಕೆ ಬರಲೇಬೇಕು ಎಂದು ಶುರುಮಾಡಿ ಪ್ರಶಾಂತನಿಗೆ ಮಾತಾಡಲು ಉಳಿಸದಂತೆ, ಇನ್ನುಮೇಲೆ ನಾವು ಯಾರನ್ನೂ ನಂಬಿ ಬದುಕಲು ಆಗುವುದಿಲ್ಲ ನಿನ್ನ ದೋಸ್ತರನ್ನೂ ಸಹ, ಇಷ್ಟುದಿನ ನೀನು ದುಡಿದದ್ದೆಲ್ಲವನ್ನೂ ಮನೆಯಲ್ಲೇ ಬಿಟ್ಟು ಅವರಿಂದೇನೂ ತೆಗೆದುಕೊಳ್ಳದೆ ಬಂದುಬಿಡು, ನಮ್ಮದಿನ್ನು ಹೊಸಾ ಜೀವನ ನಾವಿಬ್ಬರೂ ಇನ್ನುಮುಂದೆ ಎಲ್ಲರನ್ನೂ ಪ್ರೀತಿಸೋಣ ಆದರೆ ನಮ್ಮ ಜೀವನಕ್ಕೆ ಯಾರನ್ನೂ ಅವಲಂಬಿಸುವುದು ಬೇಡ, ಈಗ ನಾವೇನು ಮಾಡಲುಹೊರಟಿದ್ದೇವೊ ಅದರ ಸಂಪೂರ್ಣ ಜವಾಬ್ದಾರಿಯ ಹೊಣೆ ನಮ್ಮಮೇಲೇ ಇದೆ ಅದನ್ನು ನಾವು ಮರೆಯುವಂತಿಲ್ಲ, ನಾನೂ ಎಲ್ಲಾದರೂ ಕೆಲಸ ಹುಡುಕಿ ದುಡಿಯುತ್ತೇನೆ ನೀನು ಬೇಕಾದರೆ ನಿನ್ನ ಪಗಾರದಲ್ಲಿ ಒಂದಿಷ್ಟು ನಿಮ್ಮ ಮನೆಗೆಕೊಡು ಉಳಿದದ್ದರಲ್ಲೇ ಜೀವನ ನಡೆಸೋಣ, ಇನ್ನು ಮುಂದೆ ನಮ್ಮಿಬ್ಬರ ಜೀವನ ಪರಸ್ಪರರ ಜವಾಬ್ದಾರಿ ಎಂದೆಲ್ಲ ಹೇಳಿದ್ದಳು. ಇವಳು ತಮ್ಮ ಭವಿಷ್ಯದಬಗ್ಗೆ ಇಷ್ಟೆಲ್ಲ ಯೋಚಿಸಿದ್ದನ್ನು ಕೇಳಿ ಶಾಲಿನಿ ಕೇವಲ ಎಸ್ಸೆಸ್‍ಎಲ್ಸಿ ಪಾಸುಮಾಡಿದರೂ ಎಷ್ಟು ಜಾಣೆ ಎಂದು ಪ್ರಶಾಂತ ಅಚ್ಚರಿಪಟ್ಟಿದ್ದನು. ಇದೆಲ್ಲವೂ ಯಾವುದೋ ಅವಸರದಲ್ಲಿದ್ದ ಅರವತ್ತು ಡಬ್ಬಿಗಳ ಗೂಡ್ಸ್‍ರೈಲುಗಾಡಿ ನುಗ್ಗಿ ಓಡಿಹೋದಹಾಗೆ ಕಣ್ಣಮುಂದಿಂದ ಹಾದುಹೋಯಿತು. ಶಾಲಿನಿಗೆ ಮುಜುಗರ, ಆತಂಕ, ಭಯ ಇವೆಲ್ಲದರ ಮಿಶ್ರ ಅನುಭವ. ಇವತ್ತು ಬೇರೆ ಮನೆಗೆ ತಡವಾಗಿ ಬರುತ್ತಿದ್ದಾನೆ ನಾಳೆ ರವಿವಾರದ ರಜೆಯಿದ್ದರೂ ಹೆಚ್ಚಿನ ಕೆಲಸಕ್ಕಾಗಿ ಮತ್ತೆ ಹೋಗಬಹುದು ಎಂದೆಲ್ಲ ಲೆಕ್ಕಹಾಕ ತೊಡಗಿದಳು.
ಶಾಲಿನಿಯ ತಂದೆ, ತಾಯಿ ಅವಳಿಗೆ ಹೆರಿಗೆಯಾದಾಗಲೂ ಬರದಿದ್ದವರು ಅಂದೊಮ್ಮೆ ಏನು ತಿಳಿಯಿತೋ ಏನೋ ಅನಿರೀಕ್ಷಿತವಾಗಿ ಅವಳ ಮನೆಗೆ ಅತಿಥಿಗಳಾಗಿಬಟ್ಟಿದ್ದರು, ಮೊಮ್ಮಗಳನ್ನೆತ್ತಿಕೊಂಡು ಮುದ್ದಾಡುತ್ತ ಶಾಲಿನಿಯ ಅಪ್ಪ ಮರೆಯಲ್ಲಿ ಕಣ್ಣು ಒರೆಸಿಕೊಂಡಿದ್ದರು. ಇದಾದ ನಂತರ ಅವರು ಆಗಾಗ ಬಂದು ಹೋಗುವುದೂ ನಡೆದಿತ್ತು, ಆದರೆ ಶಾಲಿನಿ ಮತ್ತು ಪ್ರಶಾಂತನಿಗೆ ತುಂಬಾ ಒತ್ತಾಯಿಸಿದ ಮೇಲೆ ಇವರು ಒಂದೆರಡುಸಲ ಅವರ ಮನೆಗೆ ಹೋಗಿದ್ದರು, ಒಂದು ದಿನ ಅಮ್ಮ ಶಾಲಿನಿಗೆ ನಿನ್ನ ಮಗಳನ್ನು ನನ್ನ ಹತ್ತಿರ ಬಿಟ್ಟು ನೀನು ಕೆಲಸಕ್ಕೆ ಸೇರಿಕೊ ಅವಳನ್ನು ನೀನು ಮನೆಗೆ ಬರುವವರೆಗೆ ನಾನು ನೋಡಿಕೊಳ್ಳುತ್ತೇನೆ ಎಂದಾಗ ಶಾಲಿನಿಗೆ ಅಮ್ಮನಮೇಲೆ ಅಭಿಮಾನ ಉಕ್ಕಿಬಂದಿತ್ತು, ಪ್ರಶಾಂತನಿಗೆ ಖುಷಿಖುಷಿಯಿಂದ ತಿಳಿಸಿ ಮತ್ತೆ ಕೆಲಸಕ್ಕೆ ಸೇರಿಕೊಂಡಳು. ವರ್ಗವಾಗಿ ಬಳ್ಳಾರಿಗೆ ಹೋಗಿದ್ದ ಅಣ್ಣನ ಕುಟುಂಬ ಇತ್ತೀಚೆಗೆ ಧಾರವಾಡಕ್ಕೆ ವಾಪಸಾಗಿತ್ತು, ಅದಾದಮೇಲೆ ಮಗಳನ್ನು ತವರಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದು ಶಾಲಿನಿಗೆ ಸರಿಯೆ-ನಿಸಲಿಲ್ಲ ಮತ್ತು ಶ್ರಾವಣಿಯೂ ಅಲ್ಲಿಗೆ ಹೋಗಲು ಒಲ್ಲೆನೆಂದು ಅಳುವದೂ ಇತ್ತು. ಈಗ ತಾನು ಕೆಲಸಬಿಟ್ಟು ಮಗಳನ್ನು ನೋಡಿಕೊಂಡು ಮನೆಯಲ್ಲೇ ಇರುತ್ತೇನೆಂದು ಪ್ರಶಾಂತನಿಗೆ ಹೇಗೆ ಹೇಳುವುದು, ಜೊತೆಗೆ ತನ್ನ ತಾಯ್ತನವನ್ನು ಇಡಿಯಾಗಿ ಅನುಭವಿಸಬೇಕೆನ್ನುವ ಹವಣಿಕೆ ಕೂಡ ದಿನದಿಂದ ದಿನಕ್ಕೆ ಬಲಿಯುತ್ತಲೇ ಇತ್ತು. ಇದನ್ನೆಲ್ಲ ಅವನಿಗೆ ಹೇಳಿದರೆ ಅವನೇನೆಂದುಕೊಳ್ಳುತ್ತಾನೊ ಏನೊ, ಇದರಿಂದ ಅವನು ಮುಂದಿನ ತಿಂಗಳು ತನ್ನ ಕಂಪನಿಯ ದೋಸ್ತರೊಂದಿಗೆ ಹೊರಟಿರುವ ಟ್ರಿಪ್ಪನ್ನು ಕೈಬಿಡಬಹುದು, ಪ್ರತೀ ಶನಿವಾರ ಅವನಿಗೆ ನನಗಿಷ್ಟದ ಮಲ್ಲಿಗೆಮಾಲೆ ತರುವುದು ಸಾಧ್ಯವಾಗದೇ ಹೋಗಬಹುದು, ಎಲ್ಲಿ ಅವನು ಬದಲಾಗಿ ನನ್ನನ್ನು ತುಚ್ಛವಾಗಿಸಿ ತನ್ನ ಅಕ್ಕನಮನೆಯಲ್ಲಿ ಅವಳಿಗಿರುವ ಆಳಿನಂತಹ ಸ್ಥಾನವನ್ನು ನನ್ನ ಮೇಲೆ ಹೇರುತ್ತಾನೊ ಏನೊ, ನನ್ನ ಹೆಂಡತಿ ಮೈಗಳ್ಳಿಯೆಂದು ತನ್ನ ದೋಸ್ತರೆದುರಿಗೆ ಆಡಿಕೊಳ್ಳಬಹುದು ಎಂಬೆಲ್ಲ ಆತಂಕಗಳು ಅವಳನ್ನು ಕಾಡಿದವು. ಶ್ರಾವಣಿ ಹುಟ್ಟಿದಾಗ ಆಸ್ಪತ್ರೆಗೆ ಬಂದ ಪ್ರಶಾಂತನ ಕಾಕಾ "ಮದಲ ಸಣ್ಣ ಪಗಾರಾ ಅದರಾಗ ಬ್ಯಾರೆ ಹೆಣ್ಣಹಡದ ಕುಂತಿಯಲೋ ಮಾರಾಯಾ" ಎಂದು ಹೋದದ್ದು ನೆನಪಾಗಿ ಮತ್ತಷ್ಟು ವಿಚಲಿತಲಾದಳು, ಅಷ್ಟರಲ್ಲೇ ಜೋರಾಗಿ ಸೀಟಿಕೂಗಿದ ಕುಕ್ಕರ್ ಅವಳನ್ನು ಮತ್ತಷ್ಟು ಹೆದರಿಸಿತು. ಶಾಲಿನಿಗೆ ಆ ಕುಕ್ಕರನ್ನು ನೋಡಿ ಪ್ರಶಾಂತನ ಕಾಕಾ ತನ್ನೆದುರಿಗೆ ನಿಂತು ಶಿಳ್ಳೆಹೊಡೆದು ಜೋರಾಗಿ ಗಹಗಹಿಸಿ ನಗುತ್ತಿರುವಂತೆ ಭಾಸವಾಗಿ ಅವಳು ಬೆವರಹತ್ತಿದಳು…
Nice story,can do still better.