ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆ ಎಂಬ ಮಾನದಂಡದ ಪ್ರಸ್ತುತತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಶಾಲಾ ಕಾಲೇಜುಗಳಲ್ಲಿ ವರ್ಷವೆಲ್ಲಾ ವಿದ್ಯಾರ್ಥಿಗಳು ಕಲಿತಿದ್ದನ್ನು, ಶಿಕ್ಷಕರು ಕಲಿಸಿದ್ದನ್ನು ಎಷ್ಟು ಕಲಿತ್ತಿದ್ದಾರೆ? ಹೇಗೆ ಕಲಿತ್ತಿದ್ದಾರೆ? ಹೇಗೆ ಉತ್ತರಿಸಿದ್ದಾರೆ? ಎಂಬುದನ್ನು ಅಳೆದು ತಿಳಿಯುವ ವಿಧಾನವೇ ಪರೀಕ್ಷೆ! ವರ್ಷವೆಲ್ಲಾ ಕಲಿತ್ತದ್ದನ್ನು, ಕಲಿಸಿದ್ದನ್ನು ಮೂರು ಗಂಟೆಯಲ್ಲಿ ಅಳೆಯುವ ವಿಧಾನ ನಮ್ಮಲ್ಲಿ ಪ್ರಸಿದ್ದವಾದ, ಬಹು ಮಾನ್ಯವಾದ, ಸಾಮೂಹಿಕವಾಗಿ, ಒಮ್ಮೆಗೆ ಬಹುಜನರ ಪರೀಕ್ಷಿಸುವ ವಿಧಾನವಾಗಿದೆ! ಸಾಮಾನ್ಯವಾಗಿ ಬರವಣಿಗೆ ಮೂಲಕ ಪರೀಕ್ಷಿಸಲಾಗುತ್ತದೆ. ಪ್ರಾಕ್ಟಿಕಲ್ ಕಾಮನ್ನಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಇರುವುದಿಲ್ಲ! ಕೆಲವರಿಗೆ ಪ್ರಾಕ್ಟಿಕಲ್ ಬಹು ಮುಖ್ಯವಾಗಿರುತ್ತದೆ. ಹಾಗೆ ಕೆಲವರಿಗೆ ಈ ಪರೀಕ್ಷೆಗಳ ಜತೆಗೆ ಮೌಕಿಖ ಪರೀಕ್ಷೆಯೂ ಇರುತ್ತದೆ! ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳ ಗಳಿಸುವುದು ಉತ್ತಮ ಸಾಧನೆ ಎಂದು ಭಾವಿಸಿರುವುದರಿಂದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳ ಗಳಿಸಿದವರ ಸನ್ಮಾನಿಸಿ ಗೌರವಿಸಲಾಗುತ್ತದೆ. ಕಲಿಸಿದ್ದನ್ನು ಚೆನ್ನಾಗಿ ನೆನಪಿಟ್ಟುಕೊಂಡು ಬರೆದವರು ಹೆಚ್ಚು ಅಂಕಗಳನ್ನು ಗಳಿಸುವರು. ಅಂತಹವರನ್ನು ಜಾಣ, ಬುದ್ದಿವಂತ, ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿ ಸನ್ಮಾನಿಸಲಾಗುತ್ತದೆ! ಅಂದರೆ ಇಲ್ಲಿ ನೆನಪಿನಶಕ್ತಿಯ ಜತೆಗೆ ಅಂಕ ಗಳಿಸುವ ಸಾಮರ್ಥ್ಯ ಪರೀಕ್ಷೆಗೆ ಒಳಗಾಗುತ್ತದೆ. ನೆನಪಿನಶಕ್ತಿ ಮತ್ತು ಅಂಕಗಳಿಸುವ ಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು ಅವನನ್ನು ಬುದ್ದಿವಂತ, ಜಾಣ, ಉತ್ತಮ ವಿದ್ಯಾರ್ಥಿ ಎಂದು ತೀರ್ಮಾನಿಸುತ್ತಾರೆ. ಅದು ಎಷ್ಟು ಸರಿ? ಜಾಣ, ಬುದ್ದಿವಂತ, ಉತ್ತಮ ವಿದ್ಯಾರ್ಥಿ ಪದದ ಅರ್ಥಗಳು ಹೇಗೆ ನೆನಪಿನ ಶಕ್ತಿ ಅವಲಂಬಿಸಿರುವವರಿಗೆ ಅನ್ವಯಿಸುತ್ತವೆ? ನೆನಪಿನ ಶಕ್ತಿಯನ್ನೇ ಹೆಚ್ಚಾಗಿ ಪರೀಕ್ಷಿಸುವ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದವರು ಹೇಗೆ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ? ಅವನನ್ನು ಹೆಚ್ಚು ಅಂಕಗಳ ಗಳಿಸಿದ ವಿದ್ಯಾರ್ಥಿ ಎಂದು ಹೇಳಬಹುದು ಅಷ್ಟೆ! ಏಕೆಂದರೆ ಹೆಚ್ಚು ಅಂಕಗಳ ಗಳಿಸಿದ ವಿದ್ಯಾರ್ಥಿಗೂ ಉತ್ತಮ ವಿದ್ಯಾರ್ಥಿಗೂ ತುಂಬಾ ವ್ಯತ್ಯಾಸವಿದೆ. ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ಉತ್ತಮ ವಿದ್ಯಾರ್ಥಿ ಆಗಬಹುದು ಆಗದಿರಬಹುದು! ಕಡಿಮೆ ಅಂಕ ಗಳಿಸಿದ ಅನುತ್ತೀರ್ಣನಾದ ವಿದ್ಯಾರ್ಥಿಗಳು ಸಹ ಉತ್ತಮ ವಿದ್ಯಾರ್ಥಿಗಳಾಗಬಹುದು! ಹೆಚ್ಚು ಅಂಕ ಗಳಿಸಿದವರನ್ನು ಉತ್ತಮ ವಿದ್ಯಾರ್ಥಿ ಹೌದೋ ಅಲ್ಲವೋ ಅಂತ ಪರೀಕ್ಷಿಸದೆ ಅವರನ್ನು ಉತ್ತಮ ವಿದ್ಯಾರ್ಥಿಗಳು ಎಂದು ಹೇಳಲು ಹೇಗೆ ಸಾಧ್ಯ? ಶಾಲಾ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗಳು ಉತ್ತಮ ವಿದ್ಯಾರ್ಥಿ ಹೌದೋ ಅಲ್ಲವೋ ಎಂದು ಪರೀಕ್ಷಿಸಿಸುವ ಪರೀಕ್ಷೆಗಳೆ ಅಲ್ಲ! ಉತ್ತಮ ವಿದ್ಯಾರ್ಥಿ ಎಂಬುದು ಅವನ ನಡೆ ನುಡಿಗೆ ವ್ಯಕ್ತಿತ್ವಕ್ಕೆ ಸಂಬಂಧಿಸಿರುತ್ತದೆ! ಇತ್ತೀಚೆಗೆ ಉತ್ತಮ ವಿದ್ಯಾರ್ಥಿಯನ್ನು ರೂಪಿಸುವುದು ಶಾಲಾ ಕಾಲೇಜುಗಳ ಉದ್ದೇಶವಾದಂತೆ ಕಾಣಿಸುತ್ತಿಲ್ಲ! ಹೆಚ್ಚು ಅಂಕಗಳಿಸಿದವರಿಗೆ ಉದ್ಯೋಗಗಳು ಕೈಬೀಸಿ ಕರೆಯುವುದರಿಂದ ಉದ್ಯೋಗ ಗಿಟ್ಟಿಸಿದವರೆ ಉತ್ತಮರೆಂದು ಭಾವಿಸುವುದರಿಂದ ಉದ್ಯೋಗ ಪಡೆಯಲು ಹೆಚ್ಚು ಅಂಕ ಗಳಿಸಲು ಮಹತ್ವ ಬಂದಿದೆಯೇ ವಿನಃ ವಿದ್ಯಾರ್ಥಿಯ ಮೌಲ್ಯಯುತ ವ್ಕಕ್ತಿತ್ವ ರೂಪಿಸುವ ಕಡೆ ಗಮನಹರಿಸುತ್ತಿಲ್ಲ! ಉತ್ತಮ ವಿದ್ಯಾರ್ಥಿಗಳ ರೂಪಿಸದಿರುವುದರಿಂದಾದ ದುಷ್ಪರಿಣಾಮಗಳು ಬಯಲಾಗಿ ಉತ್ತಮ ವಿದ್ಯಾರ್ಥಿಗಳ ರೂಪಿಸುವ ಪ್ರಾಮುಖ್ಯತೆಯನ್ನು ಸಾರುತ್ತಿವೆ. ಆದರೂ ಅದನ್ನು ಮುಖ್ಯವಾಗಿ ಪರಿಗಣಿಸಿರುವುದಿಲ್ಲ! ಜತೆಗೆ ಪೋಷಕರಿಗೂ ಸಮಾಜಕ್ಕೂ ಮಕ್ಕಳು ಹೆಚ್ಚು ಅಂಕಗಳ ಗಳಿಸುವುದು ಉನ್ನತ ಉದ್ಯೋಗ ಗಳಿಸುವುದು ಬೇಕಾಗಿರುತ್ತದೆ ಹೊರತು ಉತ್ತಮ ವಿದ್ಯಾರ್ಥಿ ಆಗಬೇಕೆಂದು ಬಯಸುತ್ತಿಲ್ಲ! ಅಂದರೆ ಅವರು ಹೆಚ್ಚು ಅಂಕಗಳ ಗಳಿಸಿದುದರಿಂದ ಉತ್ತಮ ವಿದ್ಯಾರ್ಥಿ ಆಗಿರುತ್ತಾರೆ ಎಂದು ಭಾವಿಸುತ್ತಾರೆ! ಶಾಲಾ ಕಾಲೇಜುಗಳಲ್ಲಿ ನಡೆಸುವ ಪರೀಕ್ಷೆಗಳು ವಿದ್ಯಾರ್ಥಿಯ ನೆನಪಿನಶಕ್ತಿಯನ್ನು, ಅಂಕ ಗಳಿಸುವ ಸಾಮರ್ಥ್ಯವನ್ನು, ಬುದ್ದಿವಂತಿಕೆಯನ್ನು ಪರೀಕ್ಷಿಸುವ ಮಾನದಂಡಗಳು ಮಾತ್ರ ಆಗಿರುತ್ತವೆ ಹೊರತು ಅವನ ನಡೆ ನುಡಿಯನ್ನು ಪರೀಕ್ಷಿಸುವ ಪರೀಕ್ಷೆಗಳಾಗಿರುವುದಿಲ್ಲ! ಅದಕ್ಕಾಗಿಯೆ ಇಂದು ಸಮಾಜ ಅಧೋಗತಿ ಹೊಂದುವಂತಾಗಿದೆ.

ನಿರ್ದಿಷ್ಟಪಡಿಸಿದ ಮೂರು ಗಂಟೆ ಸಮಯದಲ್ಲಿ ವರ್ಷ ಪೂರ್ತಿ ಕಲಿಸಿದ್ದನ್ನು ಕಲಿತುದನ್ನು ಪರೀಕ್ಷಿಸುತ್ತಾರೆ. ಆ ಮೂರು ಗಂಟೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ! ಪ್ರಶ್ನೆಗಳನ್ನು ನೋಡಿದಾಕ್ಷಣ ಉತ್ತರ ನೆನಪಿಗೆ ಬರಬೇಕಾಗುತ್ತದೆ! ನೆನಪಿಗೆ ಬರಲಿಲ್ಲವೆಂದರೆ ಅವನು ಉತ್ತರ ಬರೆಯಲು ವಿಫಲವಾಗುತ್ತಾನೆ! ಅಂದರೆ ಅವನು ಇಲ್ಲಿ ವಿಫಲನಾಗುವುದು ನೆನಪಿಸಿಕೊಳ್ಳುವಲ್ಲಿ ಎಂಬುದನ್ನು ನಾವು ಸರಿಯಾಗಿ ತಿಳಿಯಬೇಕು? ಹೀಗಾದಾಗ ವರ್ಷ ಪೂರ್ತಿ ಕಲಿಸಿದ್ದು ವ್ಯರ್ಥ ಅಂತ‌ ಅರ್ಥ! ವರ್ಷ ಪೂರ್ತಿ ಆರೋಗ್ಯವಾಗಿದ್ದು, ನಿರಂತರವಾಗಿ ತರಗತಿಗೆ ಹಾಜರಾಗಿದ್ದು, ಆ ಸಮಯದಲ್ಲಿ ಎಲ್ಲದಕ್ಕೆ ಉತ್ತಮವಾಗಿ ಪ್ರತಿಕ್ರೀಯಿಸಿದ್ದು, ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಕೇಳುತ್ತಿರುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದು, ಕೆಲವು ಕಲ್ಪನೆಗಳನ್ನು ವೇದಿಕೆಯಲ್ಲಿ ಗಂಟೆಗಟ್ಟಲೆ ವಿವರಿಸಿದ್ದು, ಉತ್ತಮ ಪ್ರಾಜೆಕ್ಟುಗಳ ಮಾಡಿದ್ದು, ಎಲ್ಲಾ ವಿಷಯಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು ಆ ನಿಗಧಿತ ಪರೀಕ್ಷೆ ಎಂಬ ಮೂರು ಗಂಟೆಯ ಅವಧಿಗೆ ಕಾರಣಾಂತರದಿಂದ ಗೈರು ಹಾಜರಾದರೆ ಅಥವಾ ಸಮರ್ಥವಾಗಿ ನೆನಪಿನ ಶಕ್ತಿಯನ್ನು ಬಳಸಿಕೊಳ್ಳಲಾಗದಿದ್ದರೆ ಅನಾರೋಗ್ಯದಿಂದ ಸರಿಯಾಗಿ ಬರೆಯಲಾಗದಿದ್ದರೆ ಅವನನ್ನು ಅನುತ್ತೀರ್ಣಗೊಳಿಸುವುದು, ದಡ್ಡ, ಉತ್ತಮ ವಿದ್ಯಾರ್ಥಿಯಲ್ಲ ಎಂದು ತೀರ್ಮಾನಿಸುವುದು ಕಾಣುತ್ತೇವೆ. ಅದು ಎಷ್ಟು ಸರಿ? ಆ ಮೂರು ಗಂಟೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಅವನು ದಡ್ಡನೇ? ಹೀಗೆ ಉತ್ತರಿಸಿ ಅನುತ್ತೀರ್ಣವಾದವರು ಎಷ್ಟು ಜನ ಅಸಾಮಾನ್ಯ ಸಾಧನೆ ಮಾಡಿ ವಿಶ್ವವಿಖ್ಯಾತರಾಗಿಲ್ಲ? ಆದರ್ಶ ವ್ಯಕ್ತಿಗಳಾಗಿಲ್ಲ? ಅಂತಹವರನ್ನು ದಡ್ಡರೆನ್ನುವುದು ಸರಿಯೇ? ಉತ್ತಮ ವಿದ್ಯಾರ್ಥಿಯಲ್ಲ ಎನ್ನುವುದು ಸರಿಯೇ? ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪರೀಕ್ಷಿಸುವ ಸರಿಯಾದ ಮಾನದಂಡಗಳಲ್ಲ ಅಂತ ಹೇಳಬಹುದು! ಆ ಮೂರು ಗಂಟೆ ಸಮಯವನ್ನು ಅವನನ್ನು ಬುದ್ದಿವಂತ ಅಥವಾ ದಡ್ಡ‌ ಎಂದು ತೀರ್ಮಾನಿಸಲು ಪರಿಗಣಿಸಿದರೆ ವರ್ಷಪೂರ್ತಿ ಅವನು ಸಮರ್ಥನೋ ಅಸಮರ್ಥನೋ, ಆಸಕ್ತನೋ ನಿರಾಸಕ್ತನೋ, ರೌಡಿಯೋ ಸಾಧುವೋ, ಬುದ್ದಿವಂತನೋ ದಡ್ಡನೋ, ಉತ್ತಮನೋ ಅಧಮನೋ ಆಗಿದ್ದುದು ಮುಖ್ಯನೇ ಆಗುವುದಿಲ್ಲವಲ್ಲವೇ? ಆದ್ದರಿಂದ ಇದು ಅವರನ್ನು ಅಳೆಯುವ ಉತ್ತಮ ಮಾನದಂಡ ಹೇಗೆ ಆಗುತ್ತದೆ?

ಹೆಚ್ಚು ಅಂಕಗಳ ಗಳಿಸಿ ಉತ್ತೀರ್ಣರಾದವರು ಉನ್ನತ ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ. ಅವರು ಮಾಡುವ ಉದ್ಯೋಗಕ್ಕೂ ಗಳಿಸಿದ ವಿದ್ಯೆ, ವಿಷಯ, ವಿದ್ಯಾರ್ಹತೆಗೂ, ಪಾಸಾದ ಪರೀಕ್ಷೆಗೂ ಸಂಬಂಧನೇ ಇರುವುದಿಲ್ಲ! ಯಾವ ಯಾವ ವಿಷಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೋ ಆ ವಿಷಯಗಳು ಅವರು ಮಾಡುವ ಉದ್ಯೋಗಕ್ಕೆ ಬಹಳಷ್ಟು ಸಂಬಂಧನೇ ಇರುವುದಿಲ್ಲ! ಮೆಡಿಕಲ್ ಮಾಡಿದ ಕೆಲವರು ಕೆ ಎ ಎಸ್, ಐ ಎ ಎಸ್ ಅಧಿಕಾರಿ ಆಗುವುದು, ಶಿಕ್ಷಕ ತರಬೇತಿ ಪಡೆದವರು ಬ್ಯಾಂಕಿನಲ್ಲಿ ಗುಮಾಸ್ತರಾಗುವುದು ಹೀಗೆ ಹೆಚ್ಚು ಸಂಬಂಧವಿಲ್ಲದ ಕೆಲಸ ಮಾಡುವುದು ಪರೀಕ್ಷೆಯ ಮಾನದಂಡಗಳ ಪ್ರಸ್ತುತತೆಯ ಪ್ರಶ್ನಿಸುವಂತಾಗಿದೆ!

ಹಾಗೆ ಮೂರು ಗಂಟೆ ಅವಧಿಯಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸಿ ಅತಿ ಹೆಚ್ಚು ಅಂಕಗಳ ಗಳಿಸಿ ಗೋಲ್ಡ್ ಮೆಡಲ್, ರ್ಯಾಂಕ್ ಪಡೆದ ಅನೇಕರನ್ನು ಉತ್ತಮ ವಿದ್ಯಾರ್ಥಿಗಳೆಂದು ಸಮಾಜ ಗೌರವಿಸಿ ಸನ್ಮಾನಿಸುತ್ತದೆ! ಇಂತಹವರು ಎಷ್ಟು ಜನ ಸಮಾಜ ಘಾತಕ ವ್ಯಕ್ತಿಯಾಗಿಲ್ಲ? ಭ್ರಷ್ಟ ರಾಜಕಾರಣಿ, ಅಧಿಕಾರಿಯಾಗಿಲ್ಲ? ಉಗ್ರರೂ, ದುಷ್ಟರೂ ಆಗಿಲ್ಲವೇ? ಪತ್ನಿ ಪೀಡಕರಾಗಿಲ್ಲವೇ? ಇವರನ್ನು ಉತ್ತಮ ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದ ಉತ್ತಮ ವಿದ್ಯಾರ್ಥಿ ಎಂದು ಹೇಗೆ ಹೇಳುವುದು? ಇಂದು ಭ್ರಷ್ಟಾಚಾರವಿಲ್ಲದ ಜಾಗವಿಲ್ಲ ಎಂಬಂತೆ ಭ್ರಷ್ಟಾಚಾರ ಹಬ್ಬಿರಬೇಕಾದರೆ ಉತ್ತಮ ವಿದ್ಯಾರ್ಥಿ ಎಂಬ ಪದಕ್ಕೆ ಏನಾದರೂ ಅರ್ಥವಿದೆಯೇ? ಏಕೆಂದರೆ ಐ ಎ ಎಸ್, ಐ ಪಿ ಎಸ್, ಐ ಎಫ್ ಎಸ್, ಕೆ ಎ ಎಸ್ ಮುಂತಾದ ಉನ್ನತ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟದಲ್ಲಿ ಉತ್ತೀರ್ಣರಾದವರನ್ನು ದೇಶದ ಆಡಳಿತ ನಡೆಸುವ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆ ಮಾಡಲಾಗಿರುತ್ತದೆ. ಇವರ ಕೈಯಲ್ಲೇ ದೇಶದ, ರಾಜ್ಯದ ಆಡಳಿತ ಇರುತ್ತದೆ! ಇವರಲ್ಲಿ ಅನೇಕರು ಭ್ರಹ್ಮಾಂಡ ಭ್ರಷ್ಟಚಾರದಲ್ಲಿ ತೊಡಗಿರುವುದನ್ನು ಕಾಣುತ್ತೇವೆ! ನೋಟ್ ಬ್ಯಾನ್ ಆದಾಗ ಐಟಿ ದಾಳಿಗೆ ಸಿಕ್ಕ ಭ್ರಷ್ಟರೇ ಇದಕ್ಕೆ ಸಾಕ್ಷಿ! ಬಲೆಗೆ ಬಿದ್ದವರು ಅಲ್ಪ! ಬೀಳದವರು ಅಧಿಕ! ಹೆಚ್ಚು ಅಂಕಗಳ ಗಳಿಸಿದ ವಿದ್ಯಾರ್ಥಿಗಳು ತಾನೆ ಈ ಹುದ್ದೆಗಳಿಗೆಲ್ಲ ಆಯ್ಕೆಯಾದವರು! ದೇಶ ಉದ್ದಾರ ಮಾಡಬೇಕಾದವರು, ಬಡವರ ಕಷ್ಟಗಳಿಗೆ ಸ್ಪಂದಿಸಬೇಕಾದ ಇವರು ದೇಶಾಭಿಮಾನವೇ ಇಲ್ಲದಂತೆ, ದೇಶವನ್ನು ಕೊಳ್ಳೆ ಹೊಡೆಯುವವರು ಉತ್ತಮ ವಿದ್ಯಾರ್ಥಿಯಾಗಿರಲು ಹೇಗೆ ಸಾಧ್ಯ! ಆ ಪರೀಕ್ಷೆಗಳು ಉತ್ತಮ ವಿದ್ಯಾರ್ಥಿ ಹೌದೋ ಅಲ್ಲವೋ ಎಂದು ಪರೀಕ್ಷಿಸುವ ಪರೀಕ್ಷೆಗಳಲ್ಲ! ಹಾಗೂ ದೇಶದ ಆಡಳಿತ ನಡೆಯಿಸುವವರ ಪರೀಕ್ಷಿಸಿದ ಮಾನದಂಡಗಳು ಎಷ್ಟು ಸರಿ? ಭ್ರಷ್ಟರನ್ನು ಭ್ರಷ್ಟರನ್ನಾಗಿ ಸಾಬೀತು ಮಾಡಲಾಗದಷ್ಟು ಹದಗೆಟ್ಟ ವ್ಯವಸ್ಥೆಗೂ ಇವರೇ ಕಾರಣವಲ್ಲವೇ? ಉತ್ತಮ ಅಥವಾ ಬುದ್ದಿವಂತ ವಿದ್ಯಾರ್ಥಿ ಎಂದು ಕರೆಯಲು ಅಧಿಕ ಅಂಕಗಳನ್ನು ಮಾನದಂಡವಾಗಿಸಿರುವುದು ಸರಿಯಲ್ಲ!

ಪರೀಕ್ಷೆಗಳ ಫಲಿತಾಂಶ ಬರುತ್ತಿದ್ದಂತೆ ಎಷ್ಟೋ ಅತ್ಮಹತ್ಯೆಗಳು ಸಂಭವಿಸುವುದನ್ನು ನೋಡಿದ್ದೇವೆ! ಅನೇಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಂಡಿದ್ದೇವೆ! ಬದುಕಿನಲ್ಲಿ ಎದುರಾಗುವ ಸಮಸ್ಯೆಗಳ, ಸವಾಲುಗಳ ಸಮರ್ಥವಾಗಿ ಎದುರಿಸುವ, ಎದುರಿಸಿ ಬದುಕುವ, ದೈರ್ಯ, ಸಾಮರ್ಥ್ಯ, ಆತ್ಮವಿಶ್ವಾಸ ಮೂಡಿಸುವ ಪರೀಕ್ಷೆಗಳನ್ನು ನಡೆಯಿಸುವುದು ಬಿಟ್ಟು ಆತ್ಮಹತ್ಯೆಗೆ ಕಾರಣವಾಗುವ ಪರೀಕ್ಷೆಗಳ ನಡೆಯಿಸುವುದು ಎಷ್ಟು ಸರಿ? ಉತ್ತಮ ಬದುಕನ್ನು ರೂಪಿಸಿಕೊಳ್ಳುವ, ಉತ್ತಮ ವ್ಯಕ್ತಿತ್ವ ಹೊಂದುವ, ಜವಾಬ್ದಾರಿಯುತ ಸಾಮಾಜಿಕ ವ್ಯಕ್ತಿಯಾಗುವಂತೆ ಮಾಡುವ ಮಾನದಂಡಗಳೇ ಈ ಪರೀಕ್ಷೆಗಳಾಗದಿದ್ದರೆ ಇವು ಇದ್ದೂ ದಂಡ! ಇವುಗಳನ್ನು ಪರೀಕ್ಷೆಗಳು ಎಂದು ಹೇಗೆ ಹೇಳುವುದು? ಜನರೂ ಇಲ್ಲಿ ಅತಿ ಹೆಚ್ಚು ಅಂಕಗಳ ಗಳಿಸಿದವರ ಉತ್ತಮ ವಿದ್ಯಾರ್ಥಿ ಎಂದು ಭಾವಿಸಿ ಗೌರವ ಕೊಡುತ್ತಿದ್ದಾರೆ. ಅದು ಸರಿಯಲ್ಲ! ಅದು ಅವರ ಬುದ್ದಿವಂತಿಕೆಯೋ ನೆನಪಿನ ಶಕ್ತಿಯ ಅಗಾಧತೆಯೋ ಆಗಿರುತ್ತದೆ. ಹೆಚ್ಚು ಅಂಕಗಳ ಗಳಿಕೆಯೇ ಉತ್ತಮಿಕೆಯಲ್ಲ! ಬದುಕನ್ನು ಪ್ರೀತಿಸುವಂತೆ ಮಾಡದ, ಉತ್ತಮ ವ್ಯಕ್ತಿತ್ವ ರೂಪಿಸದ ಶಿಕ್ಷಣ ಶಿಕ್ಷಣವೆ ಅಲ್ಲ! ಉತ್ತಮ ವ್ಯಕ್ತಿತ್ತ ಹೊಂದದವರು ಉನ್ನತ ಸ್ಥಾನದ ಉದ್ಯೋಗ ಗಳಿಸಿ ಅದರ ಗೌರವ ಕಳೆದಿದ್ದಾರೆ. ಇದರಿಂದ ದೇಶದ ಅದೋಗತಿ. ಹೀಗಾಗಬಾರದು. ಶಿಕ್ಷಣದಲ್ಲಿ ಅಂಕಗಳಿಗೆ ಪ್ರಾಮುಖ್ಯತೆ ಕೊಟ್ಟಂತೆ ಮೌಲ್ಯಗಳಿಗೆ ಜೀವನ ಕೌಶಲಗಳಿಗೆ ಪ್ರಾಮುಖ್ಯತೆ ಬರುವಂತೆ ಮಾಡುವುದು ನಿಜವಾದ ವಿದ್ಯೆಯಾಗಬೇಕು. ಆದ್ದರಿಂದ ಉತ್ತಮ ಮೌಲ್ಯಗಳನ್ನು ಜೀವನ ಕೌಶಲಗಳನ್ನು ಕಲಿಸಿಕೊಟ್ಟು ಉತ್ತಮ ವಿದ್ಯಾರ್ಥಿಯನ್ನು ರೂಪಿಸುವಂತಾಗಬೇಕು!

ಕೆ ಟಿ ಸೋಮಶೇಖರ ಹೊಳಲ್ಕೆರೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x