ಶಾಪ (ಭಾಗ-2):ಪಾರ್ಥಸಾರಥಿ ಎನ್.


[ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ]


ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೋ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.  

ಒಳಗೆ ಬರುವಾಗಲೇ, "ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ, ನಿಮಗೆ ತೊಂದರೆಯಾಯಿತು ಅನ್ನಿಸುತ್ತೆ" ಅಂದವನು ಅಲ್ಲೆ ಕುಳಿತಿದ್ದ ಅವನ ಮಗನತ್ತ, ಅವನ ಅಮ್ಮನತ್ತ, ನನ್ನತ್ತ ನೋಡಿ, "ಇವನ ಹತ್ತಿರ ಮಾತನಾಡುತ್ತಿದ್ದಿರಾ, ನಿಮಗೆ ಏನು ಬೇಸರವಾಗಲಿಲ್ಲ ತಾನೆ?" ಅಂದನು ಆತಂಕದಿಂದ. ನಾನು ನಕ್ಕುಬಿಟ್ಟೆ. "ಬನ್ನಿ ಕುಳಿತುಕೊಳ್ಳಿ, ಯಾವ ಆತಂಕವು ಬೇಡ, ನನಗೆ ಯಾವ ಬೇಸರವು ಇಲ್ಲ, ನಿಮ್ಮ ಹುಡುಗನ ಜೊತೆ ಹೀಗೆ ಏನೊ ಸ್ವಲ್ಪ ಮಾತು ನಡೆಸಿದ್ದೆ ಅಷ್ಟೆ, ನೀವು ದಣಿದು ಬಂದಿರುವಿರಿ. ಸಿದ್ದವಾಗಿ, ನೀವು ಹಸಿದಿರಬಹುದು, ಊಟ ಮಾಡೋಣ ಏಳಿ. ನೋಡಿ ನಿಮ್ಮ ಮನೆಯಲ್ಲಿ ನಿಮಗೆ ಉಪಚಾರ ಮಾಡುತ್ತಿರುವೆ" ಎಂದು ಪುನಃ ನಕ್ಕುಬಿಟ್ಟೆ.

ಶ್ರೀನಿವಾಸ  ಬರುವಾಗಲೇ ಅವನ ಮಗ ಲಕ್ಷ್ಮೀಶ ಎದ್ದು ನಿಂತನು, ಮುಂದೆ ಏನು ಮಾತನಾಡದೇ ಒಳಹೊರಟನು. ಶ್ರೀನಿವಾಸನ ತಾಯಿ "ಕ್ಷಮಿಸಿ ಸ್ವಾಮಿ, ಹುಡುಗನದು ಸ್ವಲ್ಪ ದುಡುಕಿನ ಸ್ವಭಾವ ಏನಾದರೂ ಮಾತನಾಡಿಬಿಡುವ, ಮುಂದಾಲೋಚನೆ ಇಲ್ಲ" ಎಂದರು. ಶ್ರೀನಿವಾಸ ಆತಂಕದಿಂದ

"ಏನಾಯ್ತಮ್ಮ, ಏನು ಮಾತನಾಡಿದ" ಎನ್ನುವಾಗಲೇ ನಾನು "ಏನು ಇಲ್ಲ ಬಿಡಿ, ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಹಾಗೇ ಅಲ್ಲವೇ, ಸ್ವಭಾವ ನಿಮಗಿಂತ ವಿಭಿನ್ನ ಅನ್ನಿಸುತ್ತೆ, ನೋಡುವಾಗ ನಿಮ್ಮ ಯಾರ ಸ್ವಭಾವವು ಇಲ್ಲ, ಬಹುಷಃ ಅವರ ತಾತನ ಸ್ವಭಾವ ಬಂದಿರಬಹುದೇನೋ". ನನ್ನ ಬಾಯಿಂದ ನನಗರಿವಿಲ್ಲದೆ ಬಂದ ಮಾತು ಅದಾಗಿತ್ತು, ನಂತರ ನನ್ನ ಮನಸಿಗೆ ಕಸಿವಿಸಿ ಅನ್ನಿಸಿತು. ಶ್ರೀನಿವಾಸನ ತಾಯಿಯ ಮುಖ ಏಕೋ ಚಿಕ್ಕದಾಯಿತು. ಅಷ್ಟರಲ್ಲಿ ಒಳಗಿನಿಂದ ಬಂದಿದ್ದ, ಶ್ರೀನಿವಾಸನ ಪತ್ನಿ ಲಕ್ಷ್ಮಿ ಎಲ್ಲರನ್ನು ಊಟಕ್ಕೆ ಎಬ್ಬಿಸಿದರು, ಹಾಗಾಗಿ ನನ್ನ ತಪ್ಪು ಮಾತು ಮುಚ್ಚಿಹೋಯಿತು.

ಊಟಕ್ಕೆ ನಾನು ಮತ್ತು ಶ್ರೀನಿವಾಸ  ಹಾಗೂ ಅವನ ತಾಯಿ ಕುಳಿತಿದ್ದರು, ಲಕ್ಷ್ಮಿಯವರು ಊಟ ಬಡಿಸುತ್ತಿದ್ದರು. ನಾನು ನಡುವೆ ಕೇಳಿದೆ "ಏಕೆ, ಲಕ್ಷ್ಮೀಶ ಊಟಕ್ಕೆ ಬರಲಿಲ್ಲವೆ?" ಶ್ರೀನಿವಾಸ ಅವನ ಪತ್ನಿಯ ಮುಖ ನೋಡಿದನು, ಆಕೆ "ಅವನು ಹಸಿವಿಲ್ಲ, ಆಮೇಲೆ ಮಾಡುವೆ ಎಂದ" ಆಕೆ ನುಡಿದಳು. ಊಟದ ನಡುವೆ ನಾನು ಶ್ರೀನಿವಾಸನನ್ನು "ನಿಮ್ಮನ್ನು ನಾನು ಏಕವಚನದಲ್ಲಿಯೆ ಕರಯಬಹುದೆ ? ಅದು ನನಗೆ ಅನುಕೂಲ ಅನ್ನಿಸುತ್ತೆ" ಎಂದೆ. ಅದಕ್ಕವನು "ತೊಂದರೆ ಏನಿಲ್ಲ, ನೀವು ನನಗಿಂತ ವಯಸ್ಸಿನಲ್ಲಿ ದೊಡ್ಡವರು, ಏಕವಚನದಲ್ಲಿ ಕರೆದರೆ ಸಂತಸವೇ" ಎಂದನು.

ನಾನು ಮುಂದೆ ಮಾತನಾಡಲಿಲ್ಲ. ಊಟ ಮುಗಿಸಿ  ನಾನು ಶ್ರೀನಿವಾಸ ಹಾಗು ಭಾಗ್ಯಮ್ಮ ಹೊರಗಿನ ವರಾಂಡದಲ್ಲಿ ಕುಳಿತಂತೆ, ಮೇಲಿನ ರೂಮಿನಲ್ಲಿದ್ದ ಲಕ್ಷ್ಮೀಶ ಕೆಳಗಿಳಿದು ಊಟಕ್ಕೆ ಹೋದ.

ನಮ್ಮ ಮೂವರ ಮಾತುಗಳು ಎತ್ತತ್ತಲೋ ತಿರುಗುತ್ತಿತ್ತು,  ಶ್ರೀನಿವಾಸನ ತಾಯಿ, ಭಾಗ್ಯಮ್ಮ ಮಾತಿನ ನಡುವೆ ಹಿಮಾಲಯದ ಸಾಧುಗಳ ಅವರ ಶಕ್ತಿಗಳ ಬಗ್ಗೆ ಮಾತು ತೆಗೆದರು. ಒಳಗಿನಿಂದ ಊಟ ಮುಗಿಸಿದ ಲಕ್ಷ್ಮೀಶನು ಅಲ್ಲಿ ಬಂದು ನಿಂತಿದ್ದ. ನನಗೆ ಗೊತ್ತಿದ್ದ ಹಲವು ಸಾಧುಗಳ ಬಗ್ಗೆ ತಿಳಿಸಿದೆ. ಶ್ರೀನಿವಾಸ ಕೇಳಿದನು "ಸಾಧುಗಳಿಗೆ ಕೆಲವು ವಿಶೇಷ ಶಕ್ತಿ ಇರುತ್ತೆ ಅನ್ನುವರು, ಅದು ಹೇಗೆ ಸಾದಿಸುವರು, ಅಂತವೆಲ್ಲ ಕಷ್ಟವಲ್ಲವೆ " ನಾನು  ಹಲವು ಸಾಧುಗಳ ಸಾಧನೆ ಬಗ್ಗೆ, ಅವರ ವಿಶೇಷ ಶಕ್ತಿಯ ಬಗ್ಗೆ ಉತ್ಸಾಹದಿಂದ ವಿವರಿಸುತ್ತಿದ್ದೆ. ಸುಮ್ಮನೆ ಕುಳಿತಿದ್ದ, ಲಕ್ಷ್ಮೀಶನು ನಡುವೆ ಕೇಳಿದ "ಸರಿ ಸಾಧುಗಳಿಗೆ ವಿಶೇಷ ಶಕ್ತಿ ಇರುವುದು ಅನ್ನುವುದಾದರೆ, ನಿಮಗಿರುವ ವಿಶೇಷ ಶಕ್ತಿ ಏನು?" ಅವನ ದ್ವನಿಯಲ್ಲಿ ಕುತೂಹಲವಿತ್ತೊ, ಅಣಕಿಸುವ ಪರಿ ಇತ್ತೊ, ಅಥವಾ ತಿರಸ್ಕಾರವಿತ್ತೋ ಅರಿಯಲಾಗಲಿಲ್ಲ. ಅಲ್ಲೊಂದು ದೀರ್ಘಮೌನ ಆವರಿಸಿತು.

ನನಗೆ ಅಲ್ಲಿಯವರೆಗೂಇರದಿದ್ದ ಭಾವವೊಂದು ಆವರಿಸಿತು. ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟ ಪಡದ ನಾನು ಈ ಲಕ್ಷ್ಮೀಶನೊಡನೆ ಮಾತಿಗೆ ಸಿಲುಕುತ್ತಿದ್ದೆ.

"ಹೌದು ಅಂತಹ ಸಿದ್ದಶಕ್ತಿ ಇರುವುದು ಸತ್ಯ. ನಾನು ಹಿಮಾಲಯದಲ್ಲಿ ಜೀವನದ ಬಹುಕಾಲ ಕಳೆದಿರುವೆ. ಹರಿದ್ವಾರಕ್ಕೆ ಬರುವ ಮೊದಲು, ಅಲ್ಲಿಂದ ಮೇಲೆ ಹಿಮಾಲಯದ ತಪ್ಪಲಿನಲ್ಲಿ ಸುತ್ತುತ್ತಿದ್ದೆ, ಯಾವುದೆ ಗುರಿಯಿಲ್ಲ, ಇಂತಹುದೇ ಎನ್ನುವ ಪರಿಯಿಲ್ಲ. ಆಗ ಸಾಧು ಒಬ್ಬರು ಸಿಕ್ಕಿದರು. ತೀರ ವಯಸ್ಸಾಗಿದ್ದವರು, ತೊಂಬತ್ತು ದಾಟಿರಬಹುದೇನೊ. ಒಂದೆರಡು ವರುಷ ಅವರ ಜೊತೆ ಕಳೆದೆ. ಅವರು ಧ್ಯಾನ ಮಾಡುತಿದ್ದರು. ನಾನು ಅವರ ಸೇವೆ ಮಾಡುತ್ತಿದ್ದೆ, ನನಗೆ ಧ್ಯಾನ-ತಪಸ್ಸುಗಳ ಹುಚ್ಚು ಇರಲಿಲ್ಲ. ಕಡೆಗೊಮ್ಮೆ ಅವರು ನನ್ನನ್ನು ತೊರೆದು ಮೇಲಿನ ಹಿಮಾಲಯಕ್ಕೆ ಹೊರಡಲು ಸಿದ್ದರಾದರು. ನಾನೂ ಅವರ ಜೊತೆ ಹೊರಟೆ. ಅವರು ಬೇಡ ಎಂದು ತಡೆದರು. ನನಗೂ ಅವರಿಗೂ ಇದ್ದ ಋಣ ತೀರಿತ್ತು. ಆದರೆ ಅವರು ಹೊರಡುವ ಮೊದಲು ನನಗೆ ಹೇಳಿದರು. ನೀನು ಇಷ್ಟು ವರ್ಷ ನನ್ನ ಸೇವೆಯನ್ನು ನಿಷ್ಟೆಯಿಂದ ಮಾಡಿರುವೆ, ಅದಕ್ಕೆ ಪ್ರತಿಯಾಗಿ ನಿನಗೆ ಶಕ್ತಿ ಒಂದನ್ನು ಕೊಡುವೆ. ನೀನು ಬಯಸಿದರೆ, ನೀನು ಯಾವ ಸ್ಥಳದಲ್ಲಿದ್ದರೂ ಅಲ್ಲಿಯ ಹಿಂದಿನ ಇತಿಹಾಸ ನಿನ್ನ ಅರಿವಿಗೆ ಬರುವುದು, ಅದು ಎಷ್ಟೇ ಹಿಂದಿನ ಘಟನೆಯಾದರೂ ನಿನಗೆ ಪ್ರತಿ ವಿವರವು ತಿಳಿಯುವುದು ಎಂದು ನುಡಿದಿದ್ದರು. ಆದರೆ ನನಗೆ ಎಂದು ಆ ಶಕ್ತಿಯನ್ನು ಉಪಯೋಗಿಸಬೇಕು ಎಂದು ಅನ್ನಿಸಲೇ ಇಲ್ಲ. ಹಾಗಾಗಿ ಎಷ್ಟೋ ವರುಷಗಳಾದರೂ ಆ ಶಕ್ತಿಯ ಉಪಯೋಗ ನಾನು ಪಡೆದಿಲ್ಲ" ನಾನು ಈ ಮಾತನ್ನು ಹೇಳಿ ಸುಮ್ಮನೆ ಕುಳಿತೆ. ದೀರ್ಘಮೌನ. ಶ್ರೀನಿವಾಸನಾಗಲಿ ಅವನ ತಾಯಿಯಾಗಲಿ ಮಾತನಾಡಲಿಲ್ಲ, ಅಥವಾ ಏನು ಮಾತನಾಡುವದೆಂದು ಅವರಿಗೆ ತಿಳಿಯಲಿಲ್ಲ ಅನ್ನಿಸುತ್ತೆ.

ಆದರೆ ಲಕ್ಷ್ಮೀಶ ಇದ್ದಕ್ಕಿದ್ದಂತೆ ನುಡಿದ "ಇದೆಂತಹ ಶಕ್ತಿ, ಇದರಿಂದ ಏನು ಉಪಯೋಗ, ಯಾವುದೇ ಸ್ಥಳದಲ್ಲಿ ಕುಳಿತು, ಅಲ್ಲಿರುವರನ್ನು ಕೇಳಿದರೆ ಆಯಿತು ಹಿಂದೆ ನಡೆದಿರುವದನ್ನೆಲ್ಲ ಹೇಳುವರು, ಈಗ ನನ್ನ ತಂದೆ, ಅಜ್ಜಿಯರನ್ನು ಕೇಳಿದರೆ ಆಯಿತು, ನಮ್ಮ ಮನೆಯ ಇತಿಹಾಸ ತಿಳಿಯುವುದು ಅಲ್ಲವೆ? ಅದಕ್ಕೆ ವಿಶೇಷ ಶಕ್ತಿ ಏಕೆ ಬೇಕು, ಈ ವರದಿಂದ ಯಾವುದೇ ಲಾಭವಿಲ್ಲವಲ್ಲ" ಎಂದ.

ನನ್ನ ಉತ್ಸಾಹ ಇಳಿದುಹೋಯಿತು. ನನಗಿದ್ದ ಶಕ್ತಿಯನ್ನು ವರ್ಣಿಸಿದರೆ ಈ ಬಾಲಕ ಒಂದೇ ಕ್ಷಣದಲ್ಲಿ ನನ್ನ ಭಾವಭಂಗ ಮಾಡಿದ್ದ. ಈಗ ಇವನ ಸ್ವಭಾವ ನನಗೆ ಸಾಮಾನ್ಯದ್ದಾಗಿ ಕಾಣಲಿಲ್ಲ. ನನ್ನ ಮುಖದ ಮೇಲಿದ್ದ ನಗು ಅಳಿಸಿಹೋಗಿತ್ತು. ಅದು ನನಗೆ ಆಗಿದ್ದ ಅಭಿಮಾನ ಭಂಗದ ಕಾರಣವಿರಬಹುದು. ಶ್ರೀನಿವಾಸ ಗದರಿದನು ಅವನ ಮಗನನ್ನು "ಲಕ್ಷ್ಮೀಶ ನಿನ್ನದು ಸದಾ ದುಡುಕು ನುಡಿಯೆ, ನಿನಗೆ ಇವೆಲ್ಲ ಅರ್ಥವಾಗಲ್ಲ, ನೀನು ಮೇಲೆ ಹೋಗು, ಮುಂದಿನ ತಿಂಗಳು ಪರೀಕ್ಷೆ ಇರಬೇಕಲ್ಲವೇ ಆ ಕಡೆ ಗಮನ ಕೊಡು" ಅವನು ಯಾವ ಮಾತು ಆಡದೆ ಅಲ್ಲಿಂದ ಎದ್ದು ಹೊರಟ.

ಲಕ್ಷ್ಮೀಶ ಒಳಗೆ ಎದ್ದು ಹೋದ ಬಹಳ ಹೊತ್ತಿನವರೆಗೂ ನಾನು ಸುಮ್ಮನೆ ಕುಳಿತಿದ್ದೆ. ನನ್ನ ಮೌನವನ್ನು ಕಂಡು ಶ್ರೀನಿವಾಸ ನುಡಿದನು, "ತಪ್ಪು ತಿಳಿಯಬೇಡಿ ಸ್ವಾಮಿ, ಅವನ ಸ್ವಭಾವವೇ ಒಂದು ರೀತಿ, ಎದುರಿಗೆ ಇರುವವರಿಗೆ ನೋವಾಗುತ್ತದೆ ಎಂದು ಗೊತ್ತಿದ್ದಾಗಲೂ ಸಹ ಮನಸಿನಲ್ಲಿ ಉಳಿಸಿಕೊಳ್ಳದೆ ಮಾತನಾಡಿಬಿಡುತ್ತಾನೆ. ಅವನನ್ನು ತಿದ್ದಿ ನಾನು ಸೋತುಹೋದೆ. ತಾವು ನನ್ನ ಅತಿಥಿಯಾಗಿ ಬಂದಿರುವಿರಿ, ದಯಮಾಡಿ ನನ್ನನ್ನು ಕ್ಷಮಿಸಿ. ನನ್ನ ಮನೆಯಲ್ಲಿ ನಿಮಗೆ ನೋವಾಗಿದ್ದರೆ ಮರೆತುಬಿಡಿ ನನ್ನ ಮಗನ ಬಗ್ಗೆ ಅಗ್ರಹ ತಾಳಬೇಡಿ" ಎಂದ.

ನಿಧಾನವಾಗಿ ನುಡಿದೆ, "ಅವನ ಮಾತು ಸತ್ಯವೇ ಅಲ್ಲವೇ, ಯಾವುದೋ ಸ್ಥಳದ ಇತಿಹಾಸದಿಂದ ಅಲ್ಲಿ ಏನು ನಡೆದಿತ್ತು ಅನ್ನುವದರಿಂದ ಯಾರಿಗಾದರೂ ಏನು ಉಪಯೋಗ, ಅದರಿಂದ ನಾನು ಯಾರಿಗೂ ಉಪಕಾರಮಾಡಲಾರೆ ಅಲ್ಲವೇ?"

"ಹಾಗೇಕೆ ಅನ್ನುವಿರಿ, ಇತಿಹಾಸದಿಂದ ನಾವು ಕಲಿಯುವೆವು ಅಲ್ಲವೆ, ಒಂದು ಸ್ಥಳದ ಬಗ್ಗೆ ನಮಗೆ ಅರಿಯದ ಎಷ್ಟೋ ವಿಷಯಗಳು ಇರುತ್ತವೆ, ಅದನ್ನು ತಿಳಿಯಬಹುದು. ಅಲ್ಲದೆ ಕೆಲವು ನಿಗೂಢ ಘಟನೆಗಳ ಬಗ್ಗೆ ಯಾರಿಗೂ ಅರಿವಿರುವದಿಲ್ಲ. ಅಂತಹ ಜಾಗದಲ್ಲಿ ಅವುಗಳನ್ನು, ಆ ಘಟನೆಯಲ್ಲಿ ನಿಜವಾಗಿ ಏನು ನಡೆಯಿತು ಎನ್ನುವುದು ತಿಳಿಯಬಹುದು. ಮನಸು ಮಾಡಿದರೆ ಅದರಲ್ಲಿ ಹಣವೂ ಮಾಡಬಹುದು, ಕೊಲೆಗಳನ್ನು ಅಪರಾದಗಳನ್ನು ಅವುಗಳ ಸತ್ಯಗಳನ್ನು ಬಯಲಿಗೆಳೆಯಬಹುದು."  ಅವನ ಮಾತಿನಿಂದ ನನಗೆ ನಗು ಬರಲು ಪ್ರಾರಂಭವಾಯಿತು, ಜೋರಾಗಿ ನಗುತ್ತಿದ್ದೆ. ಶ್ರೀನಿವಾಸನು ಸಂಕೋಚದಿಂದ ಕೇಳಿದ "ಏಕೆ ಗುರುಗಳೇ, ನನ್ನ ಮಾತು ಹಾಸ್ಯಾಸ್ಪದವಾಯಿತೇ, ತಮಗೆ ಬೇಸರವಾಯಿತೇ?". "ಹಾಗಲ್ಲ ಶ್ರೀನಿವಾಸ, ಮತ್ತೇನಕ್ಕೋ ನಗು ಬಂದಿತು. ನಿನ್ನ ಮಗ ಭಾವಿಸುವನು ನಿನಗೆ ವೈರಾಗ್ಯ, ದೇವರು ಮುಂತಾದ ಯೋಚನೆ ಬಿಟ್ಟು ಬೇರೆ ಹೊಳೆಯುವದಿಲ್ಲ, ವ್ಯವಹಾರಕ್ಕೆ ನಿನ್ನ ಮನಸ್ಸು ಹೊಂದುವುದಿಲ್ಲ ಅನ್ನುತ್ತಾನೆ. ಆದರೆ ನೀನಾದರೋ ನನ್ನ ಸಿದ್ದ ಶಕ್ತಿಯನ್ನು ಹೇಗೆ ವ್ಯವಹಾರಕ್ಕೆ ಬಳಸಿ ಹಣಮಾಡಬಹುದು ಎನ್ನುತ್ತಿರುವೆ. ಅದಕ್ಕಾಗಿ ನಗುತ್ತಿದ್ದೆ ಅಷ್ಟೆ, ತಪ್ಪಲ್ಲ ತಾನೆ? ನಿನ್ನ ಮಾತನ್ನು ನಿನ್ನ ಮಗ ಕೇಳಿದ್ದರೆ ಎಷ್ಟೋ ಸಂತಸಪಡುತ್ತಿದ್ದನು ಅವನನ್ನು ವೃಥಾ ಒಳಗೆ ಕಳಿಸಿಬಿಟ್ಟೆ" ಎಂದೆ ನಗುತ್ತ.

ಶ್ರೀನಿವಾಸನ ಮುಖ ಸಂಕೋಚದಿಂದ ಕೆಂಪಾಯಿತು. ಆದರೂ ಸಾವರಿಸಿ ನುಡಿದ "ನಿಮ್ಮ ಮಾತು ನಿಜ, ಅವನು ಸಾಕಷ್ಟು ಸಾರಿ ಅದನ್ನು ಎತ್ತಿ ಆಡಿದ್ದಾನೆ, ನನಗೆ ವ್ಯವಹಾರ ಬುದ್ದಿ ಇಲ್ಲ ಎನ್ನುವುದು ಅವನ ಅಭಿಮತ. ಕೆಲವೊಮ್ಮೆ ನಾನು ಇರುವುದು ಹಾಗೆ ಬಿಡಿ. ಆದರೂ ಅವನ ಮಾತು ಕೆಲವೊಮ್ಮೆ ಮನಸಿಗೆ ಹಿಂಸೆ ಆಗುತ್ತೆ. ಕೆಲವೊಮ್ಮೆ ಅವನ ಮಾತು ವಯಸ್ಸಿಗೆ ಮೀರಿದ್ದು ಅನ್ನಿಸುತೆ. ಕೆಲವು ತಿಂಗಳೋ ವರ್ಷವೋ, ಕೆಳಗೆ ಒಮ್ಮೆಲೆ ನುಡಿದಿದ್ದ, "ತಾತ ದುಡಿದಿದ್ದಾರೆ ಎನ್ನುವ ಕಾರಣಕ್ಕೆ ನೀವು ದಾನ ಧರ್ಮ ಎನ್ನುತ್ತ ಓಡಾಡುವಿರಿ, ಆದರೆ ನಿಮ್ಮ ಹಿರಿಮೆ ಏನಿದೆ, ನಿಜವಾಗಿ ದಾನ ಮಾಡುವದಾದರೆ ನಿಮ್ಮ ದುಡಿತದ ಹಣವನ್ನು ದಾನ ಮಾಡಿರಿ. ತಾತನ ಹಣದ ಮೇಲೆ ನಿಮಗೆ ಯಾವ ಅಧಿಕಾರವೂ ಇಲ್ಲ. ನಿಜ ಹೇಳುವುದಾದರೆ ಅದರ ಮೇಲೆ ನನಗೆ ಕಾನೂನಿನಂತೆ ಅಧಿಕಾರ ಜಾಸ್ತಿ" ಎಂದ. ಅವನ ಮಾತು ನಿಜ ಅನ್ನಿಸಿ ನನಗೆ ಮನಸಿಗೆ ಸಂಕಟವಾಯಿತು." 

ಶ್ರೀನಿವಾಸ ಮುಂದುವರೆಸಿದ, "ನಾನು ಅಂದೇ ನಿರ್ಧರಿಸಿದೆ, ನಾನು ನನ್ನ ದುಡಿಮೆಯಲ್ಲಿಯಷ್ಟೇ ಬದುಕಬೇಕು, ನನ್ನ ಹತ್ತಿರವಿರುವದೆಲ್ಲ ನನ್ನ ತಂದೆ ಸಂಪಾದಿಸಿದ ಆಸ್ತಿಯೇ. ನನ್ನ ಅಂಗಡಿಗಳಾಗಲಿ, ಮಳಿಗೆಗಳಾಗಲಿ ಯಾವುದೇ ವ್ಯವಹಾರವಾಗಲಿ ನಾನು ಬೆಳೆಸಿದ್ದು ಏನೂ ಇಲ್ಲ, ಹಾಗಾಗಿ ಅಂದಿನಿಂದ ನಾನು ನನ್ನ ಬದುಕನ್ನು ಬದಲಾಯಿಸಿಕೊಂಡೆ. ಇಂದಿಗೂ ನನ್ನ ಹಾಗೂ ಮನೆಯ ಖರ್ಚುಗಳೆಲ್ಲ ವ್ಯಾಪಾರದ ಲಾಭದ ಹಣದಲ್ಲಿ ನಡೆಯುವದಿಲ್ಲ. ನನ್ನನ್ನು ಈ ಆಸ್ತಿಗೆಲ್ಲ ಧರ್ಮದರ್ಶಿ ಎಂದುಕೊಂಡಿರುವೆ. ಹಾಗೂ ಎಲ್ಲ ಆಸ್ತಿಯ ಮೇಲ್ವಿಚಾರಕನಾಗಿ ನಾನು ನ್ಯಾಯ ಸಮ್ಮತ ಎನಿಸುವ ಸಂಬಳಕ್ಕೆ ಸಮಾನವಾದ ಹಣವನ್ನು ಮಾತ್ರ ಪಡೆಯುವೆ. ಅದರಿಂದಲೇ ನನ್ನ ಮನೆ, ಹೆಂಡತಿ ಮಗ ಅಮ್ಮ ಎಲ್ಲರನ್ನು ಸಾಕುತ್ತಿರುವೆ. ವ್ಯಾಪಾರದ ಲಾಭ ನಷ್ಟಗಳೆಲ್ಲ ಹಾಗೆಯೇ ಇದ್ದು, ಅದನ್ನು ಲಕ್ಷ್ಮೀಶನು ಪ್ರಾಪ್ತ ವಯಸ್ಕನಾದ ಮೇಲೆ ಅವನಿಗೆ ತಲುಪಿಸುವುದು ಎಂದು ತೀರ್ಮಾನಿಸಿರುವೆ. ನಾನು ಮಾಡುವೆ ಎಂದುಕೊಳ್ಳುವ  ಒಳ್ಳೆಯ ಕೆಲಸಗಳು, ದಾನಗಳು ನನ್ನದೇ ದುಡಿಮೆಯ ಹಣದ ಹೊರತಾಗಿ, ನಮ್ಮ ತಂದೆಯ ಆಸ್ತಿಯ ಹಣ ಬಳಸುವದಿಲ್ಲ. ಅದು ಅವನಿಗೆ ತಿಳಿಸಿಲ್ಲ, ಸಮಯ ನೋಡಿ ತಿಳಿಸುವೆ" ಎಂದು ನಿಲ್ಲಿಸಿದ.

ನನಗೆ ಈಗ  ನಿಜಕ್ಕೂ ಆಶ್ಚರ್ಯವೆನಿಸಿತು. ಸ್ವಂತ ತನ್ನ ತಂದೆಯ ಆಸ್ತಿಯನ್ನು  ಅನುಭೋಗಿಸದೇ, ಅದಕ್ಕೆ ಧರ್ಮದರ್ಶಿಯಾಗಿದ್ದು, ಅದನ್ನು ಮುಂದಿನ ತಲೆಮಾರಿಗೆ ಸಾಗಿಸುವ ಸೇತುವಾಗಿದ್ದಾನೆ ಶ್ರೀನಿವಾಸ. ಪ್ರಪಂಚದಲ್ಲಿ ಎಂಥದೋ ಘಟನೆಗಳೆಲ್ಲ ನಡೆಯುತ್ತದೆ.

ನನ್ನ ಮನವೇಕೊ ಯಾವುದೋ ಭಾವಕ್ಕೆ ಜಾರುತ್ತಿತ್ತು, ಅಪ್ಪ ಮಕ್ಕಳು ಹೀಗೆ ಇನ್ನು ಇವರ ಅಂದರೆ ಶ್ರೀನಿವಾಸರ ತಂದೆ ಹೇಗಿದ್ದಿರಬಹುದು. ಕಣ್ಣಿಗೆ ಯಾವುದೋ ದೃಶ್ಯಗಳು ಕಾಣುತ್ತಿದ್ದವು.

ಶ್ರೀನಿವಾಸನ ತಂದೆ ಬಾಲಕೃಷ್ಣಯ್ಯನವರು ಕೂಗಾಡುತ್ತಿದ್ದರು "ಹೀಗಾದರೆ ನೀನು ಉದ್ದಾರವಾದ ಹಾಗೇ ಬಿಡು. ನೀನು ಒಬ್ಬ ವ್ಯಾಪರಿಯ ಮಗ ತಿಳಿದುಕೋ, ಸದಾ ದಾನ ಧರ್ಮ ಸಹಾಯ ಎಂದೆ ತಿರುಗುತ್ತಿದ್ದರೆ ನಿನಗೆ ಕಡೆಗೆ ಸಿಗುವುದೆ ದೊಡ್ಡ ಚಿಪ್ಪು ಅಷ್ಟೆ.  ಯಾವುದೇ ವಿಷಯದಲ್ಲೂ ವ್ಯಾವಹಾರಿಕವಾಗಿ ಚಿಂತಿಸಬೇಕು ತಿಳಿ. ರೂಪಾಯಿ ಎಂದರೆ ಒಂದು ರೂಪಾಯಿ ಅಲ್ಲ, ಅದರಲ್ಲಿ ನೂರು ಪೈಸೆಗಳಿವೆ ತಿಳುದುಕೊ, ಒಂದೊಂದು ಪೈಸೆ ದುಡಿಯಲ್ಲೂ ನಮ್ಮ ಶಕ್ತಿ ಬುದ್ದಿ ವಿನಿಯೋಗವಾಗಿರುತ್ತದೆ, ಸುಮ್ಮನೆ ಖರ್ಚು ಮಾಡುವದಲ್ಲ"

ಅವರ ಕೂಗಾಟಕ್ಕೆ, ಮೆದುವಾಗಿಯೆ ಉತ್ತರಿಸಿದ ಶ್ರೀನಿವಾಸ."ಅಪ್ಪಾಜಿ, ನಾನೇನು ಈಗ ಅಂತ ದುಂದು ಮಾಡಿದೆ ಎಂದು ಕೂಗಾಡುತ್ತಿರುವಿರಿ. ಏನೋ ಬಾಲ್ಯ ಸ್ನೇಹಿತ, ಕಾಲೇಜಿನಲ್ಲಿ ಫೀಸು ಕಟ್ಟಲು ಹಣವಿಲ್ಲ ಅಂತ ಕುಳಿತಿದ್ದ, ಅದೂ ಬರೀ ಐವತ್ತೆರಡು ರುಪಾಯಿ. ಮುಂದಿನವಾರ ಅವರಪ್ಪ ಕಳಿಸುವ ಮನಿ ಆರ್ಡರ್ ಬರುತ್ತದೆ. ಹಿಂದಿರುಗಿಸುವೆ ಅಂದಿದ್ದಾನೆ. ನಾನೇ ಬೇಡ ಅಂದಿರುವೆ. ನಿಮ್ಮ ಹತ್ತಿರವಿರುವ ಲಕ್ಷ ಲಕ್ಷ ಹಣದಲ್ಲಿ ಈ ಐವತ್ತೆರಡು ರುಪಾಯಿ ಯಾವ ಲೆಕ್ಕ ಅಂತ ಹೀಗಾಡುತ್ತೀರಿ?" ಬಾಲಕೃಷ್ಣಯ್ಯನ ಕೂಗಾಟ ಮತ್ತೂ ಜಾಸ್ತಿ ಆಯಿತು. "ಆಯಿತು, ನೀನು ಉದ್ದಾರವಾಗುವ ಜನವಲ್ಲ ಬಿಡು. ಹೀಗೆ ಅವರಿಗೆ ಇವರಿಗೆ ಎಂದು ಎಲ್ಲ ಕಳೆದುಬಿಡುವೆ. ಐವತ್ತರಡು ರುಪಾಯಿ ಯಾವ ಮಹಾ ಎನ್ನುವ ನೀನು ಒಂದು ರುಪಾಯಿ ದುಡಿದು ತೋರಿಸು ನೋಡೋಣ. ನಿನ್ನ ಯೋಗ್ಯತೆಗಿಷ್ಟು. ನನಗೆ ನಿನ್ನದೆ ಒಂದೇ ಚಿಂತೆಯಾಗಿದೆ. ಮುಂದೂ ಅಷ್ಟೆ ನೀನು ನನ್ನ ನಂತರ ಈ ಆಸ್ತಿಯ ಒಂದು ಪೈಸೆಯನ್ನು ಉಳಿಸಲ್ಲ, ಎಲ್ಲ ಗುಡಿಸಿಹಾಕಿಬಿಡುತ್ತಿ. ನಿನ್ನ ಅಮ್ಮನನ್ನು ನೀರಿನಲ್ಲಿ ಮುಳುಗಿಸಿಬಿಡುತ್ತಿ. ನಾನು ಪ್ರತಿ ರುಪಾಯಿ ದುಡಿಯಲು ಎಷ್ಟು ಕಷ್ಟ ಬಿದ್ದಿರುವೆ ಗೊತ್ತೆ?, ಈ ಮನೆಯನ್ನು ಕಟ್ಟಲು ಪ್ರಾಣ ಬಿಟ್ಟಿರುವೆ " ಎಂದರು. ಶ್ರೀನಿವಾಸನ ಸಹನೆ ಮೀರಿತ್ತು, ಬಾಯಿ ತಪ್ಪಿ ನುಡಿದ "ಹೌದು ಹೌದು, ಈ ಮನೆ ಕಟ್ಟಲು ತುಂಬಾ ಶ್ರಮ ಬಿದ್ದಿರುವಿರಿ ಬಿಡಿ, ಇಲ್ಲಿ ಮನೆ ಕಟ್ಟಿದ ರಾಮಕೃಷ್ಣಯ್ಯ ಮಾಸ್ತರರನ್ನು ಹೇಗೆ ಓಡಿಸಿದಿರಿ ಎಂದು ನನಗೆ ತಿಳಿದಿದೆ. ಗೆದ್ದಲುಹುಳು ಕಟ್ಟಿದ ಹುತ್ತದಲ್ಲಿ ಹಾವು ಸೇರಿದಂತೆ ನಾವು ಬಂದು ಸೇರಿದ್ದೇವೆ ಅಷ್ಟೆ"ಶ್ರೀನಿವಾಸನ ಬಾಯಲ್ಲಿ ಈ ಮಾತು ಬರುತ್ತಲೇ, ಬಾಲಕೃಷ್ಣಯ್ಯನವರ ದ್ವನಿ ತಾರಕಕ್ಕೆ ಏರಿತು, ಅವರ ದ್ವನಿಯಲ್ಲಿ ನೀವು ತನ್ನ ಮಗನೇ ತನಗೆ ಹಂಗಿಸುವಂತಾಯ್ತಲ್ಲ  ಎನ್ನುವ ರೋಷ, ಅವಮಾನ ಎದ್ದು ಕಾಣುತ್ತಿತ್ತು…

ಇದೆಲ್ಲ ಕಣ್ಣ ಮುಂದೆ ಸಾಗುತ್ತಿರುವಂತೆ ನಾನು ಶ್ರೀನಿವಾಸನನ್ನು ಕೇಳಿದೆ, "ಅಂದರೆ ಈ ಮನೆಯನ್ನು ನಿಮ್ಮ ತಂದೆ ಬಾಲಕೃಷ್ಣಯ್ಯನವರು, ರಾಮಕೃಷ್ಣ ಅನ್ನುವ ಮಾಸ್ತರರಿಂದ ಮೋಸ ಮಾಡಿ ಪಡೆದರೆ?"ಶ್ರೀನಿವಾಸ ಆಶ್ಚರ್ಯದಿಂದ ಎಂಬಂತೆ ಕಣ್ಣು ಅಗಲಿಸಿದ, ನಾನು ಆಗ ಗಮನಿಸಿದೆ. ಅಲ್ಲಿ ಯಾರೂ ಏನು ಮಾತನಾಡಿರಲಿಲ್ಲ. ನಾನು ಯಾವುದೊ ಮನಸಿನ ದೃಶ್ಯದಲ್ಲಿ ಕಂಡಿದ್ದನ್ನು ನೇರವಾಗಿ ಶ್ರೀನಿವಾಸನಿಗೆ ಕೇಳಿದ್ದೆ. 

"ಸ್ವಾಮಿ, ನೀವು ಭೂತಕಾಲವನ್ನು ಮನದಲ್ಲಿ ಕಂಡಿರ? ರಾಮಕೃಷ್ಣಯ್ಯ ಮಾಸ್ತರು ಅನ್ನುವ ಹೆಸರು, ನಮ್ಮ ತಂದೆ ಬಾಲಕೃಷ್ಣಯ್ಯ ಎನ್ನುವ ಹೆಸರು ನಿಮಗೆ ಹೇಗೆ ತಿಳಿಯಿತು?"

ಹೌದೇ?, ನಾನು ಈಗ ಭೂತಕಾಲವನ್ನು ನೋಡಿದೆನ!!

ನನಗೆ ಆಶ್ಚರ್ಯವಾಯಿತು, ಇಲ್ಲಿಯವರೆಗೂ ಅದೇನೋ ಹನ್ನೆರಡು ವರುಷಗಳ ಹಿಂದೆ ಗುರುಗಳು ಕೊಟ್ಟ  ಶಕ್ತಿಯನ್ನು ನಾನು ಪರೀಕ್ಷೆ ಸಹ ಮಾಡಲು ಹೋಗಿರಲಿಲ್ಲ. ಹಾಗಿರುವಾಗ ಈಗ ತಾನಾಗಿಯೇ ಭೂತಕಾಲ ನನ್ನೆದುರು ಸುಳಿದುಹೋಗಿದೆ ಅಂದರೆ, ಗುರುಗಳು ಹರಿಸಿ ಕೊಟ್ಟಿರುವ ಶಕ್ತಿ ಕೆಲಸ ಮಾಡಿದೆ ಅನ್ನಿಸಿತು. ಈ ಸ್ಥಳದ ಪ್ರಭಾವ ನನ್ನ ಮನಸಿನ ಮೇಲೆ ಕೆಲಸ ಮಾಡಿರಬಹುದು ಅನ್ನಿಸಿತು. ನಾನು ಮೌನವಾಗಿದ್ದೆ.  ಶ್ರೀನಿವಾಸನ ತಾಯಿ ಸಹ ಚಕಿತರಾದಂತೆ ಇತ್ತು, ಶ್ರೀನಿವಾಸ ಮತ್ತೆ ನುಡಿದ "ನಿಮ್ಮ ಮಾತು ನಿಜ ಸ್ವಾಮಿ, ರಾಮಕೃಷ್ಣಯ್ಯ ಎನ್ನುವ ಮಾಸ್ತರರಿಂದ ಪಡೆದಿದ್ದು ಈ ಮನೆ. ನಮ್ಮ ತಂದೆ ವ್ಯಾಪಾರದ ಜೊತೆ ಆಸ್ತಿ ಅಡಿವಿರಿಸಿಕೊಂಡು ಸಾಲ ಕೊಡುವ ವ್ಯವಹಾರ ಸಹ ಮಾಡುತ್ತಿದ್ದರು. ರಾಮಕೃಷ್ಣ ಎನ್ನುವ ಮಾಸ್ತರರು ಕಟ್ಟಿದ ಮನೆ ಇದು. ಹೊಸ ಮನೆ ಕಟ್ಟಿ ವರ್ಷ ಕೂಡ ಅವರು ಅದರಲ್ಲಿ ಇರಲಿಲ್ಲವೇನೋ, ಅವರ ಕಷ್ಟಗಳೊ ಏನೊ ತಿಳಿಯದು. ಆದರೆ ಅವರು ನಮ್ಮ ತಂದೆಯಿಂದ ಪಡೆದ ಸಾಲದ ಹಣವಾಗಲಿ ಅದರ ಬಡ್ಡಿಯನ್ನಾಗಲಿ ಕೊಟ್ಟಿರಲಿಲ್ಲ ಎನ್ನುವುದು ಸತ್ಯ. ಕಡೆಗೊಮ್ಮೆ ಯಾವುದೂ ಮಾತನಾಡದೆ ಆತ ತನ್ನ ಮನೆಯನ್ನು ಅಪ್ಪನ ಹೆಸರಿಗೆ  ಕ್ರಯಪತ್ರ ಮಾಡಿಕೊಟ್ಟು ತನ್ನ ಸಾಲ ತೀರಿತು ಎಂದು ಕೈಬೀಸಿ ಹೊರಟ್ಹೇ ಹೋದರು. ಮಾರುಕಟ್ಟೆಯ ದರಕ್ಕಿಂತ ಕಾಲು ಭಾಗ ಹಣದಲ್ಲಿ ಅಪ್ಪ ಮನೆಯನ್ನು ಹೊಡೆದು ಬಿಟ್ಟಿದ್ದರು ಎಂದು ಅಕ್ಕಪಕ್ಕದ ಜನರೆಲ್ಲ ಆಡುವುದು ಬಾಲಕನಾಗಿದ್ದ ನನ್ನ ಕಿವಿಗೆ ಬಿದ್ದಿತ್ತು. ನಾನು ಅದನ್ನು ಅವರ ಎದುರಿಗೆ ಒಂದು ಸಾರಿ ಎತ್ತಿ ಆಡಿ ಅದು ಅನ್ಯಾಯ ಎಂದು ವಾದಿಸಿ, ಅವರಿಂದ ಏಟು ಸಹ ತಿಂದಿದ್ದೆ"

ನಾನು ಈಗ ಸುಮ್ಮನೆ ಶ್ರೀನಿವಾಸನ ತಾಯಿ ಭಾಗ್ಯಮ್ಮನತ್ತ ನೋಡಿದೆ, ಆಕೆಯ ಕಣ್ಣಲ್ಲಿ ನೀರು ತುಂಬುತ್ತಿತ್ತು. "ನೋಡಿ ಸ್ವಾಮಿ ನನ್ನ ಹಣೆ ಬರಹ, ಆಗ ನನ್ನ ಗಂಡನಿಗೂ, ಮಗನಿಗೂ ಆಗಿಬರಲ್ಲ ಎಂದು ಕಣ್ಣೀರು ಸುರಿಸಿದೆ. ಈಗ ಮಗನಿಗೂ ಮೊಮ್ಮಗನಿಗೂ ಆಗಿಬರಲ್ಲ ಎಂದು ದುಃಖಪಡುವೆ. ಒಟ್ಟಿನಲ್ಲಿ ಇದೇ ನನ್ನ ಹಣೆ ಬರಹವಾಯಿತು. ಏಕೋ ಈ ನೆಲ, ಆಸ್ತಿ, ಮನೆ ಎಲ್ಲವೂ ಬೇಸರವೆನಿಸುತ್ತೆ. ಎಲ್ಲವನ್ನೂ ತೊರೆದು ಎಲ್ಲಿಯಾದರೂ ಹೊರಟುಹೋಗಬೇಕು ಆದರೆ ಎಲ್ಲಿಗೆ ಎಂದು ಹೋಗಲಿ ಹೇಳಿ?"

ನಾನು ನಿಧಾನವಾಗಿ ನುಡಿದೆ "ಬೇಸರ ಪಡಬೇಡಮ್ಮ, ಎಲ್ಲವೂ ಕಾಲಕ್ಕೆ ತಕ್ಕಂತೆ ನಡೆಯುತ್ತ ಇರುತ್ತೆ. ಅದರಲ್ಲಿ ನಾವು ಯಾರು ಹೇಳಿ, ಈ ಆಸ್ತಿ ಮನೆ ನೆಲ ಎಲ್ಲವೂ ಋಣ ಇರುವರಿಗೆ ಕೈ ದಾಟುತ್ತಲೆ ಇರುತ್ತದೆ. ಇಂದು ನನ್ನದು ಅಂದುಕೊಳ್ಳುವ  ಮನೆ ಹಿಂದೆ ಯಾರದೋ ಆಗಿತ್ತು, ಹಾಗೆ ಮುಂದೆ ಇನ್ಯಾರದೋ ಆಗಿರುತ್ತದೆ. ನಡುವೆ ನಾವು ಒಬ್ಬರು ಅನ್ನುವದನ್ನು ಮರೆಯುತ್ತೇವೆ, ಅಹಂಕಾರಪಡುತ್ತೇವೆ ಅಷ್ಟೆ"

ಅಷ್ಟರಲ್ಲಿ ಒಳಗಿನಿಂದ ಶ್ರೀನಿವಾಸನ ಪತ್ನಿ ಲಕ್ಷ್ಮೀ ಬಂದರು, ಪತಿಯತ್ತ ತಿರುಗಿ "ಮಾತನಾಡುತ್ತ ಕುಳಿತುಬಿಟ್ಟಿರ, ಸ್ವಾಮಿಗಳಿಗೆ ಮಲಗುವ ಏರ್ಪಾಡು ಮಾಡಬೇಡವೆ, ಒಳಗಿನ  ಅತಿಥಿಗಳ ಕೋಣೆಯಲ್ಲಿ ಅವರು ಮಲಗಲಿ ಅಲ್ಲವೆ. ಅವರಿಗು ಆಯಾಸ ಆಗಿದ್ದಿತು, ನಾನು ಅಲ್ಲಿ ಏರ್ಪಾಡು ಮಾಡಿರುವೆ" ಎಂದರು. ಶ್ರೀನಿವಾಸ ತನ್ನ ಪತ್ನಿಯತ್ತ ತಿರುಗಿ "ಸರಿ ಒಳ್ಳೆಯದಾಯಿತು, ನೀನು ಕಾಯಬೇಡ ಹೋಗಿ ಮಲಗಿಬಿಡು, ನಾವು ಇನೊಂದೈದು ನಿಮಿಷ ಮಲಗಿಬಿಡುತ್ತೇವೆ."

ಆದರೆ ಶ್ರೀನಿವಾಸ ದ್ವನಿ ಕೇಳುವಾಗ ಮಲಗುವದಕ್ಕಿಂತ ಇನ್ನು ಸ್ವಲ್ಪ ಕಾಲ ಮಾತನಾಡಬೇಕೆಂಬ ಹಂಬಲ ಕಾಣಿತ್ತಿತ್ತು. ನನಗೂ ಏಕೋ ನಿದ್ದೆ ಬರುವ ಲಕ್ಷಣವಿರಲಿಲ್ಲ.

ಬಹುಷಃ ಇದೇ ಮನೆಯ ಪ್ರಭಾವ ಎನ್ನಿಸುತ್ತೆ. ಹೊರಗೆ ಬಯಲಿನಲ್ಲಿ ಊಟಮಾಡಿ ಯಾವ ಅನುಕೂಲವೂ ಇಲ್ಲದೆಯೂ ಕಲ್ಲಿನ ಮೇಲೆ ಮಲಗಿದರೂ ನಿದ್ದೆ ಆವರಿಸುತ್ತ ಇತ್ತು ಇಷ್ಟು ದಿನ. ಆದರೆ ಈಗ ಮನೆಯೊಳಗೆ ಸುಖಕರವಾದ ಊಟವು ಆಗಿ, ಸುರಕ್ಷಿತವಾಗಿ ಮಲಗಲು ಜಾಗವಿದ್ದು, ಕಲ್ಲಿನ ಬದಲಿಗೆ ಮೆತ್ತನೆಯ ಮಂಚದ ಹಾಸಿಗೆ ಸಿದ್ದವಿದ್ದರೂ ನಿದ್ದೆ ಮಾತ್ರ ಸುಳಿಯುತ್ತಿಲ್ಲ, ಇದೆ ಪ್ರಕೃತಿಯ ವಿಚಿತ್ರ.

ನನಗೆ ಅತ್ತ ನಿದ್ದೆಯೂ ಅಲ್ಲ, ಎಚ್ಚರವು ಅಲ್ಲ ಅನ್ನುವ ಮನಸಿನ ಸ್ಥಿತಿ, ಯಾವುದೋ ಧ್ಯಾನದಲ್ಲಿರುವಂತೆ ಅನ್ನಿಸುತ್ತಿತ್ತು ಮನಸಿಗೆ. ಎದುರಿಗೆ ಕುಳಿತಿರುವ ಶ್ರೀನಿವಾಸನಾಗಲಿ, ಅವನ ತಾಯಿಯಾಗಲಿ ಮಾತನ್ನೆ ಆಡದೆ ನನ್ನತ್ತ ನೋಡುತ್ತಿದ್ದರು. ನನ್ನ ಕಣ್ಣು ಮುಚ್ಚುತ್ತ ಇರುವಂತೆ ಮನ ಯಾವುದೊ ದೃಶ್ಯದತ್ತ ಹರಿದಿತ್ತು…


[ಮುಂದುವರೆಯುವುದು]

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nice

Utham Danihalli
10 years ago

Chenagidhe kathe mundina sanchikege kaytha edini

2
0
Would love your thoughts, please comment.x
()
x