ಎಷ್ಟೋ ದಿನಗಳಿಂದ ತೆರೆದುಕೊಂಡಿದ್ದ ಮನೆ-ಕಿಟಕಿ ಬಾಗಿಲುಗಳು ತೆರೆದುಕೊಂಡತೆಯೇ ಇದ್ದವು. ರಭಸವಾಗಿ ಬಿದ್ದ ಮಳೆಗೆ ಮಣ್ಣಿನ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಕಿಟಕಿ ಬಾಗಿಲುಗಳಲ್ಲಿ ಜೇಡರ ಮಹಾರಾಯ ಸುಖಾಂತವಾಗಿ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ಮನೆ ತುಂಬಾ ಮುತ್ತಿಗೆ ಎಂಬಂತೆ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದ್ದ. ಮನೆಯ ಪಕ್ಕದಲ್ಲಿ ಇದ್ದ ಬೇವಿನ ಮರದ ಫಲ-ಪುಷ್ಪಗಳು ಮನೆಯ ಮೆಟ್ಟಿಲುಗಳನ್ನು ಶೃಂಗರಿಸಿದ್ದವು. ಸಂಜೆಯಾಗುತ್ತಿದ್ದಂತೆ ಕಟ್ಟೆಗೆ ಕೂತು ಹರಟುತ್ತಿದ್ದ ವಯೋವೃದ್ದರ ಬಾಯಲ್ಲಿ ಎದುರಿನಲ್ಲಿದ್ದ ಹಾಳು ಬಿದ್ದ ಮನೆಯ ಕತೆಯೇ ವಿಷಯ ವಸ್ತುವಾಗಿರುತ್ತಿತ್ತು. ಆ ಮನೆಯ ಹೆಸರೇ "ಶಾಂತಿ ನಿವಾಸ".
ಹಳ್ಳಿಯೊಂದರಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಹುದೇ ಆದ ಹೋಟೆಲೊಂದನ್ನು ಇಟ್ಟುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ ಸಂದೇಶ. ಮಡದಿ ಶಾಂತಿ ಜೀವನದುದ್ದಕ್ಕೂ ಜೊತೆಗಿರುವೆ ಎಂದು ಹೇಳುತ್ತಿದ್ದವಳು ಎರಡು ವರುಷಗಳ ಹಿಂದೆಯೇ ಪತಿ-ಸುತರನ್ನು ಅನಾಥರನ್ನಾಗಿ ಮಾಡಿ ಪರಲೋಕ ಯಾತ್ರೆ ಕೈಗೊಂಡಿದ್ದಳು. ಶಾಂತಿ ಇಲ್ಲದೇ "ಶಾಂತಿ ನಿವಾಸ" ಬಿಕೋ ಎನ್ನುತ್ತಿತ್ತು.
೧೫ ನೇ ಪ್ರಾಯದ ಮೇಘನ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ಆಸರೆಗಂತ ಇದ್ದವಳೇ ಆಕೆಯ ಅಜ್ಜಿ ಸಾಕಮ್ಮ. ಈಗಲೋ ಆಗಲೋ ಎನ್ನುತ್ತಿದ್ದ ಸಾಕಮ್ಮನಿಗೆ ಆಗ ತಾನೇ ಮೈನೆರೆದು ನಿಂತ ಮೇಘನಳ ಬಗ್ಗೆಯೇ ಚಿಂತೆ ಕಾಡುತ್ತಿತ್ತು. ದೂರದಲ್ಲಿದ್ದ ಸಂಬಂಧಿ ಸಂದೇಶನ ನೆನಪಾಗಿ ಹೆಣ್ಣಿಲ್ಲದ, ಕತ್ತಲು ಕವಿದ ಮನೆಗೆ ಬಾಳ ಬೆಳಗೋ ದೀಪವಾಗಿ ಸಂದೇಶನ ಮನೆ ತುಂಬಿದರೆ ಅವಳಿಗೆ ಗಂಡಿನಾಶ್ರಯವೂ ಸಿಕ್ಕಂತಾಗುತ್ತದೆ ಎಂದರಿತ ಸಾಕಮ್ಮ ತರಾತುರಿಯಲ್ಲಿ ಮದುವೆ ಮಾಡಿ ತನ್ನ ಜವಾಬ್ದಾರಿ ಮುಗಿಯಿತೆಂದು ನಿಶ್ಚಿಂತೆಯಿಂದ ಕಣ್ಣು ಮುಚ್ಚಿದ್ದಳು.
ಗಂಡನ ಮನೆಗೆ ಬಂದ ಮೇಘನಳಿಗಿನ್ನೂ ಆಡೋ ವಯಸ್ಸು, ಸಂಸಾರದ ಜವಾಬ್ದಾರಿಗಳು ಗೊತ್ತಿರದ ಮುಗ್ಧ ಹಸುಳೆ ಆಗಿದ್ದರೂ, ಮನೆಗೆಲಸ ಅಡುಗೆ ಎಲ್ಲವನ್ನು ಅಚ್ಚು-ಕಟ್ಟಾಗಿ ಮಾಡುವದನ್ನು ಕಲಿತಿದ್ದಳು. ಹೊಸದಾಗಿ ಬಂದ ಮೇಘನ ಬಹುಬೇಗನೆ ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದಳು. ಗಂಡ ಹೆಂಡಿರಲ್ಲಿ ವಯೋಮಾನದ ವ್ಯತ್ಯಾಸ ಕಂಡು ಬಂದಿದ್ದರೂ ಅವರಿಬ್ಬರ ಪ್ರೀತಿ ವ್ಯತ್ಯಾಸದ ಸಮತೋಲನವನ್ನು ಕಾಯ್ದುಕೊಂಡಿತ್ತು. ಓರಗೆಯವರಾದ ಕಾರಣ, ೧೭ ವರುಷದ ವಿನಯನೊಂದಿಗೆ ತಾಯಿ- ಮಗನ ಸಂಬಂಧ ಎನ್ನುವುದಕ್ಕಿಂತ ಸ್ನೇಹಿತರು ಎಂಬ ಭಾವನೆ ಬೆಳೆಯತೊಡಗಿತ್ತು. ಅಲ್ಪ ಸ್ವಲ್ಪ ಓದಿದ್ದ ಮೇಘನಳಿಗೆ ಓದಿನಲ್ಲಿ ಅತೀವ ಆಸಕ್ತಿ ಇದ್ದುದ್ದರ ಪರಿಣಾಮಾಗಿ ಸಹಜವಾಗಿಯೇ ಓರಗೆಯ ವಿನಯ ಮತ್ತು ಮೇಘನ ಜೊತೆ ಜೊತೆಗೆ ಓಡತೊಡಗಿದರು ಇದು ಅವರಲ್ಲಿ ಗಾಢವಾದ ಸ್ನೇಹ ಬೆಳೆಯಲು ಕಾರಣವಾಯಿತು.
ಇತ್ತ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಸುಗಂಧಳಿಗೆ (ಸಂದೇಶ ತಂಗಿ) ಮೇಘನಳ ಸುಖೀ ಸಂಸಾರ ನೋಡಲಾಗದೇ ಹೋಯಿತು. ತಾನು ಕಾಣದಿರುವ ಸುಖ-ಸಂತೋಷಗಳು ಮೇಘನಳಿಗಷ್ಟೇ ಮೀಸಲೇ ಎಂದು ಮನದಲ್ಲಿ ಅಸೂಯೆ ಪಡಲು ಶುರು ಮಾಡಿದಳು. ಆ ಅಸೂಯೆಯ ಮೊತ್ತವೇ ಅಸಹನೆಗೆ ಕಾರಣವಾಗಿ ಒಂದಿನ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿತು. ಕೆಲಸದಲ್ಲಿ ನಿರತನಾಗಿದ್ದ ಅಣ್ಣ ಸಂದೇಶನನ್ನು ಕಾಣುವ ನೆಪ ಮಾಡಿ ವಿನಯ್ ಮತ್ತು ಮೇಘನಳ ನಡುವೆ ಅನೈತಿಕ ಸಂಬಂಧ ಇರುವುದಾಗಿ ಸುಳ್ಳು ಆರೋಪ ಹೊರಿಸಿ ಅಣ್ಣನ ಕಿವಿ ತುಂಬಿ ಬಂದಳು. ಆ ವಿಷಯ ಕೇಳಿ ಹಿಂದೆ ಮುಂದೆ ವಿಚಾರಿಸಿದ ಸುಗಂಧ ಹೇಳಿದ್ದು ಸತ್ಯವಿರಬಹುದೆಂದು ಸಂದೇಶ ನಂಬಿ ಬಿಟ್ಟ. ಅಲ್ಲಿಗೆ ಶುರುವಾಗಿತ್ತು ಸಂದೇಶನ ವಾಸಿಯಾಗದ ಮನೋವ್ಯಾಧಿ. ಎಂದಿನಂತೆ ಮನೆಗೆ ಬಂದಾಗ ಕಾಣುತ್ತಿದ್ದ ಹೆಂಡತಿ ಮಗನ ಸಂತಸ, ಅವರ ಚೆಲ್ಲಾಟ, ಮಕ್ಕಳಾಟ, ನಗು ಮೊಗ ಕಂಡಾಗಲೆಲ್ಲ ಸುಗಂಧ ಹೇಳಿದ ಮಾತುಗಳೇ ನೆನಪಿಗೆ ಬಂದು ಇಲ್ಲ ಸಲ್ಲದ ಕಲ್ಪನೆಗಳು ಕೂಡ ಸಂದೇಶನ ಮೆದುಳಲ್ಲಿ ಶಾಶ್ವತ ಎಂಬಂತೆ ಠಿಕಾಣಿ ಹೂಡಿ ಸಂದೇಶನ ಮಾನಸಿಕ ಅಸ್ವಸ್ತಕ್ಕೆ ಮತ್ತಷ್ಟು ಕಾರಣವಾಗತೊಡಗಿದವು.
ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಹೆಚ್ಚಿನ ವಿದ್ಯಾಭ್ಯಾಸದ ನೆಪ ಹೂಡಿ ಮಗ ವಿನಯನನ್ನು ದೂರದ ಶಹರೊಂದಕೆ ಕರೆದೊಯ್ದು ತಾನು ಮೇಘನ ಮತ್ತು ವಿನಯ್ ವಿಷಯದಲ್ಲಿ ಮಾನಸಿಕ ಅಸ್ವಸ್ತ್ಯದಿಂದಾಗಿ ಬಳಲುತ್ತಿರುವುದಾಗಿ, ಅವರಿಬ್ಬರ ನದುವೆ ಅನೈತಿಕ ಸಂಬಂಧ ಇರುವುದೆಂದು ಹೇಳಿ ಅದು ತನ್ನಿಂದ ಸಹಿಸಲಾಗುತ್ತಿಲ್ಲವಾದ್ದರಿಂದ ವಿನಯ್ ಮತ್ತೆ ಯಾವತ್ತೂ ಮನೆ ಕಡೆಗೆ ತಿರುಗಿ ನೋಡಬಾರದು, ಎಷ್ಟು ದುಡ್ಡು ಬೇಕಾದರು ಕೇಳಿ ಪಡೆ ಇನ್ನು ಮೇಲೆ ನಿನ್ನ ಜೀವನ ನೀನೇ ನೋಡಿಕೋ ಎಂದು ಹೇಳಿ ಬೆನ್ನು ತೋರಿಸಿ ನಡೆದು ಬಂದಿದ್ದ ಸಂದೇಶ. ಹೃದಯವಿದ್ರಾವಕ ಮಾತುಗಳನ್ನು ಮೂಕನಂತೆ ಕೇಳುತ್ತಿದ್ದ ವಿನಯಗೆ ಇದು ಕೇಳಿ ಶಾಕ್ ಜೊತೆಗೆ ಹೃದಯಾಘಾತವೂ ಆಗಿತ್ತು. ತನ್ನ ಮತ್ತು ತಾಯಿ ಸ್ಥಾನದಲ್ಲಿರುವ ಮೇಘನಳ ನಡುವೆ ಇದ್ದ ಸ್ನೇಹವನ್ನು ಒಂದು ಸಾರಿಯೂ ತಮ್ಮೊಂದಿಗೆ ವಿಚಾರಿಸದೇ ಅಪ್ಪ ತಪ್ಪು ತಿಳಿದುಕೊಂಡರಲ್ಲ ಅಲ್ಲದೇ ಅಂತಹ ಹೊಲಸು ವಿಚಾರನ್ನು ಎಂದಿಗೂ ಊಹಿಸಿಕೊಳ್ಳಲಾಗದ ವಿನಯ್ ಅದನ್ನೇ ಹಗಲಿರುಳು ನೆನೆಯುತ್ತ ಕಣ್ಣೀರಿಡುತ್ತ ಸಲ್ಲದಿರುವ ಮಾತುಗಳು ಅವನ ಮಾನಸಿಕ ಆರೋಗ್ಯವನ್ನೇ ಹಾಳುಮಾಡಿ ಕೇವಲ ೨ ವರ್ಷಗಳಲ್ಲಿ ವಿನಯ್ ಇಹಲೋಕ ತ್ಯಜಿಸಿದ.
ಮಗ ತೀರಿ ಹೋದ ನಂತರ ಅವನು ಸಂದೇಶನಿಗಾಗಿ ಬರೆದಿಟ್ಟ ಪತ್ರಗಳನ್ನು ಓದಿ, ಅನ್ಯಾಯವಾಗಿ ತನ್ನ ಮಗನನ್ನು ಮನೆಯಿಂದ, ಮನದಿಂದ ದೂರ ಮಾಡಿದ್ಡಲ್ಲದೇ ಈ ದಿನ ಇಹಲೋಕದಿಂದಲೇ ದೂರವಾಗಲು ತಾನೇ ಕಾರಣ. ಸಲ್ಲದ ಮಾತಾಡಿ ಇಲ್ಲವಾದ ಮಗನ ಪರಿಸ್ಥಿತಿಗೆ ತಾನೇ ಕಾರಣ, ಸಂದೇಹ ಅನ್ನೋ ಸುಳಿಯಲ್ಲಿ ಸಿಲುಕಿ ಮಗನ ಬಲಿ ಕೊಟ್ಟ ಪಾಪಿ ತಾನೆಂದು ಕೊರಗುತ್ತ ಕೆಲವೇ ದಿನಗಳಲ್ಲಿ ಸಂದೇಶ ಕೂಡ ಮೇಘಗಳ ಮರೆಯಲ್ಲಿ ಮರೆಯಾಗಿ ಹೋದ.
ವಿನಯ್ ತೀರಿ ಹೋದ ನಂತರವೇ ಸಂದೇಶ ತನ್ನ ಮತ್ತು ವಿನಯ್ ಮೇಲೆ ಸಂದೇಹ ಪಟ್ಟು ವಿನಯ್ ನನ್ನು ಮನೆಯಿಂದ ದೂರವಿಟ್ಟ ವಿಷಯ ತಿಳಿದು ಬಂದಿತ್ತು. ಕುಳಿತು, ಚರ್ಚಿಸಿ ಮಾತನಾಡಿ ಸತ್ಯ ಬೆಳಕಿಗೆ ತರುವ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. ಪರಮ ದೈವ ಪತಿ ಎಂದು ಆರಾಧಿಸಿದ ಸಂದೇಶ ಹಾಗೂ ಸ್ನೇಹಿತನಂತೆ ಕಂಡ ಮಗ ವಿನಯ್ ಆಗಲೇ ಸ್ವರ್ಗವಾಸಿಗಳಾಗಿದ್ದರು. ಎಲ್ಲವನ್ನೂ ಕಳೆದುಕೊಂಡಿದ್ದ ಮೇಘನಳಿಗೆ ಕಣ್ಣೀರ ಹೊರತು ಬೇರೇನೂ ಇರಲಿಲ್ಲ.
ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ನತದೃಷ್ಟೇ ಮೇಘನಳಿಗೆ ಅಲ್ಪ ಸುಖವಾದರೂ ಕಂಡಿದ್ದರೆ ಅದು ಗಂಡನ ಮನೆಯಲ್ಲಿ ಮಾತ್ರ. ಈಗ ಆ ಸುಖವೂ ಕ್ಷಣಿಕಗೊಂಡು ಬರಿದಾಗಿ ಹೋಗಿತ್ತು. ಇತ್ತ ಸುಗಂಧ, ನಡೆದುದೆಲ್ಲದಕ್ಕೂ ಮೇಘನಳೇ ಕಾರಣವೆಂದು ಆಕೇನ ಅಮಂಗಲವೆಂದು ಹಳಿಯುವುದಕ್ಕೆ ಶುರು ಹಚ್ಚಿಕೊಂಡಳು. "ಚಿಕ್ಕವಳಿದ್ದಾಗ ತಂದೆ-ತಾಯಿನ ನುಂಗಿ, ಗಂಡನ ಮನೆಗೆ ಬಂದು ತಂದೆ-ಮಗನ ನಡುವೆ ಬಿರುಕು ತಂದು ಅವರನ್ನ ದೂರ ಮಾಡಿದ್ದು ಅಲ್ಲದೇ ಅವರನ್ನು ನುಂಗಿ ನೀರು ಕುಡಿದೆ" ಎನ್ನುವ ಸುಗಂಧಳ ಚುಚ್ಚು ಮಾತುಗಳು ಮೇಘನಗಳ ಮನದ ಹಸಿ ಗಾಯದ ಮೇಲೆ ಉಪ್ಪೆರೆಚಿದಂತಿತ್ತು. ಮೊದಲೇ ಗಂಡನನ್ನು ಕಳೆದುಕೊಂಡು ಏಕಾಂಗಿಯಾದ ಜೀವ ಅನುದಿನ ಸುಗಂಧಳ ಚುಚ್ಚುಮಾತಿಗೆ ಮಗದಷ್ಟು ನೊಂದು ಹೋಯಿತು. ಆಕೆ ಇರುವಷ್ಟು ದಿನ ಮೇಘನ ಕಣ್ಣೀರಲ್ಲೇ ಕೈ ತೊಳೆದಿದ್ದಳು.
ಒಂಟಿಯಾಗಿದ್ದ ಜೀವ ಪಕ್ಕದ ಅಂಗಣವಾಡಿಯ ಮಕ್ಕಳೊಡನೆ ಕುಳಿತು, ಮಕ್ಕಳನ್ನು ಆಟವಾಡಿಸುತ್ತ, ನಗಿಸುತ್ತ, ನಗುತ್ತ ದಿನಕಳೆದರೆ, ರಾತ್ರಿಯೆಲ್ಲ ಸಂದೇಶನ ನೆನಪಲ್ಲಿ ಕಳೆಯುತ್ತಿದ್ದಳು. ಸಂದೇಶ, ತನ್ನ ಜೊತೆಗೆ ಆ ಒಂದು ವಿಷಯದ ಬಗ್ಗೆ ತನ್ನೊಡನೆ ಚರ್ಚಿಸಿದ್ದರೆ ಎಲ್ಲ ಅನಾಹುತಗಳನ್ನು ತಪ್ಪಿಸಬಹುದಿತ್ತು ಎಂದು ತನ್ನಲ್ಲೇ ಕೊರಗಿದ್ದರೆ ಮತ್ತೊಮ್ಮೆ ತನ್ನ ವಿಧಿ ಬರಹದಲ್ಲಿ ಇಷ್ಟೇ ಇತ್ತೇನೋ ಎಂದು ವಿಧಿಯನ್ನು ಹಳಿಯುತ್ತಾ, ಶಟಿದೇವಿಯನ್ನು ಶಪಿಸುತ್ತ ತನ್ನ ೬೦ ರ ಇಳಿವಯಸ್ಸಿಗೆ ವಿಧಿವಶಳಾಗುತ್ತಾಳೆ. ಎಲ್ಲವನ್ನೂ ಕಳೆದುಕೊಂಡ "ಶಾಂತಿ ನಿವಾಸ" ಬಿಕೋ ಎನ್ನುತ್ತಿತ್ತು.
ಹೌದು ಸ್ನೇಹಿತರೇ, ಸಂದೇಹ ಎಂಬ ಕೀಡೆ ಒಮ್ಮೆ ನಮ್ಮನ್ನ ಹೊಕ್ಕರೆ ಅದರಿಂದಾಗುವ ಪರಿಣಾಮಗಳು ಹಲವು. ಪರಿಣಾಮಗಳ ಪರಿವು ಕೂಡ ನಮಗಿರುವುದಿಲ್ಲ. ಯಾವುದೇ ವಿಷಯವಿದ್ದರೂ ಸಂಬಂಧಪಟ್ಟ ವ್ಯಕ್ತಿಗಳೊಡನೆ ಚರ್ಚಿಸುವುದರಿಂದ ಅಪನಂಬಿಕೆಗಳಿಗೆ ಆಸ್ಪದ ಇಲ್ಲದಂತಾಗಬಹುದು. ಅಲ್ಲದೇ ಆರೋಗ್ಯಕರ ಚರ್ಚೆ, ಸಂಬಂಧಗಳು ಇನ್ನೂ ಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕೆಲವು ಸಲ ನಮ್ಮ ಸಂತಸವನ್ನು ಕಾಣದೆ ಸುಗಂಧಳಂತೆ ನಿರ್ಮಲವಾಗಿರುವ ಸುಖೀ ಸಂಸಾರದಲ್ಲಿ ಹುಳಿ ಹಿಂಡುವ ಜನರು ಕೂಡ ಇರುತ್ತಾರೆ. ಆದ್ದರಿಂದ ಅಂತಹವರ ಮಾತು ಕೇಳಿ ಅನಾಹುತಗಳಿಗೆ ನಮ್ಮ ಜೀವನ ಆಹುತಿ ಆಗದಂತೆ ನಾವು ಎಚ್ಚರ ವಹಿಸುವ. ನಂಬಿಕೆ ಇದ್ದಲ್ಲಿ ಸಂತಸ, ಸಂತಸ ಇದ್ದಲ್ಲಿ ಜೀವನ, ಜೀವನ ಇದ್ದಲ್ಲಿ ಸಂಬಂಧ ಎಲ್ಲವೂ ಒಂದಕ್ಕೊಂದು ಸಂಬಂಧಿಸಿದವುಗಳು. ಎಲ್ಲವೂ ಸಸೂತ್ರವಾಗಿ ನಡೆದರೆ ಚೆನ್ನ ಇಲ್ಲದಿದ್ದರೆ ಜೀವನವೆಂಬ ಗಾಡಿ ಹಳಿ ತಪ್ಪುವುದು ಖಂಡಿತ. ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು.
ಇಂತಿ ನಿಮ್ಮ ಮನೆ ಮಗಳು
ರುಕ್ಮಿಣಿ ಎನ್
nice short story.
ಖುಶಿ ಆಗಲಿಲ್ಲ, ರುಕ್ಮಿಣಿಯವರೆ. ೬೦ರ ದಶಕದ ಚಲನ ಚಿತ್ರದ ಕಥೆಗಳ ತರ ಇತ್ತು. ಕೊನೆಯ ಪಾರಾ ಮಾತ್ರ ಚೆನ್ನಾಗಿತ್ತು. ಅವಸರವಿಲ್ಲದ ಉತ್ತಮ ಕಥೆ ಹೆಣೆಯ ಬಹುದಿತ್ತು.
ಮುಂದಿನ ಸಂಚಿಕೆಯಲ್ಲಿ ಉತ್ತಮ ಲೇಖನ ನಿರೀಕ್ಷಿಸುತ್ತೇನೆ. ನಿಮ್ಮಲ್ಲಿ ಆ ಪ್ರತಿಭೆ ಇದೆ ಎನ್ನುವ ವಿಶ್ವಾಸ ನನಗಿದೆ.
ಚಿಕ್ಕ ಕಥೆ, ಪಾತ್ರಗಳು ಜಾಸ್ತಿಯಿವೆ. ತುಂಬಾ ಪಾತ್ರಗಳು ಕತೆಯಲ್ಲಿ ತೀರಿಹೋಗಿದ್ದು ಓದುಗನಿಗೆ ಕತೆ ಅವಸರದಲ್ಲಿ ಮುಗಿಸಿದಂತೆ ಕಾಣುತ್ತದೆ. ಕಥೆ ಕೊಂಚ ಉದ್ದವಾದರೂ ಪರವಾಗಿಲ್ಲ, ಭಾವಗಳು ಸರಿಯಾಗಿ ವ್ಯಕ್ತವಾಗಲಿ. ಆದಷ್ಟು ಪಾತ್ರಗಳನ್ನು ಪರಿಚಯಿಸುವಾಗ ಎಚ್ಚರವಹಿಸಿ. ಓದುಗ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದುವಂತಾಗಬಾರದು. ಉದಾಹರಣೆಗೆ ವಿನಯ ಸಂದೇಶನ ಮಗ ಅನ್ನುವುದು ಬಹಳ ಹೊತ್ತಾದ ಮೇಲೆ ಓದುಗನಿಗೆ ಗೊತ್ತಾಗುತ್ತದೆ. ಸಂದೇಶನ ಪರಿಚಯವಾಗುವಾಗಲೇ ವಿನಯನ ಪರಿಚಯವಾಗಿದ್ದರೆ ಸರಿಯಿರುತ್ತಿತ್ತು. ಇದು ಕೇವಲ ಎಚ್ಚರವಹಿಸಬಹುದಾದ ಅಂಶಗಳಷ್ಟೇ.
ಇದು ವಿಮರ್ಶೆಯಲ್ಲ. ಬರೀ ಒಬ್ಬ ಓದುಗನಾಗಿ ಅನ್ನಿಸಿದ್ದು. ತಪ್ಪು ತಿಳಿಯದಿರಿ. ಉಳಿದಂತೆ ನೀವು ಆಯ್ಕೆ ಮಾಡಿಕೊಂಡಿದ್ದ ಕಾನ್ಸೆಪ್ಟ್ ಚೆನ್ನಾಗಿದೆ. ಬರೆಯುತ್ತಲಿರಿ.ಶುಭವಾಗಲಿ.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ… ತಾವು ಹೇಳಿದ ಅಂಶಗಳನ್ನು ನೆನಪಿಡುವೆನು.. ಧನ್ಯವಾದಗಳು ಮತ್ತೊಮ್ಮೆ