’ಟಿಟಿಟಿಟೀಟ್, ಟಿಟಿಟಿಟೀಟ್’ಎನ್ನುವ ಅಲಾರಾಮಿನ ಅತ್ಯಂತ ಕರ್ಕಶ ಶಬ್ದ ನನ್ನ ನಿದ್ದೆಯನ್ನು ಹಾಳುಗೆಡವಿತ್ತು. ಮಲಗಿದ್ದಲ್ಲಿಂದಲೇ ಮಂಚದ ಪಕ್ಕದ ಮೇಜಿನ ಮೇಲಿದ್ದ ಅಲಾರಾಮಿನ ತಲೆಗೊಂದು ಮೊಟಕಿ ಅದರ ಬಾಯಿ ಮುಚ್ಚಿಸಿ ಮತ್ತೆ ಮಲಗಲು ಪ್ರಯತ್ನಿಸಿದೇನಾದರೂ ನಿದ್ರೆ ಬರಲಿಲ್ಲ. ಎದ್ದು ಕುಳಿತರೆ ತಲೆಯೊಳಗೊಂದು ಸಣ್ಣ ಜೋಂಪು. ಕೆಂಪಗಾಗಿದ್ದ ಕಣ್ಣುಗಳನ್ನುಜ್ಜಿಕೊಳ್ಳುತ್ತ ಗಡಿಯಾರವನ್ನೊಮ್ಮೆ ನೋಡಿದೆ. ಸಮಯ ಏಳೂವರೆ. ಬೆಚ್ಚಗೆ ಹೊದ್ದುಕೊಂಡಿದ್ದ ಚಾದರವನ್ನು ಮಡಚಿಟ್ಟು ಕೋಣೆಯ ಬಾಗಿಲು ತೆಗೆದು ಮೆಟ್ಟಲಿಳಿದು ಕೆಳಗೆ ಬಂದೆ. ಅಡುಗೆಮನೆಯಲ್ಲಿ ಅಮ್ಮ ಅದೇನೋ ಮಾಡುತ್ತಿದ್ದರು. ಬಹುಶ; ಮುಸುರೆ ತೊಳೆಯುತ್ತಿದ್ದರೆನ್ನಿಸಿತು. ಖಾಲಿಯಾಗಿರದ ನಿದ್ರೆಯನ್ನೋಡಿಸಲು ರಾಗವಾಗಿ ಆಕಳಿಸುತ್ತ ಹಿತವಾಗಿ ಮೈ ಮುರಿದೆ. ಅದೇ ಅರೆ ನಿದ್ರಾವಸ್ಥೆಯಲ್ಲಿಯೇ ಬಚ್ಚಲಿಗೆ ಹೋದೆ. ಆಲಸ್ಯ ಭಾವದಲ್ಲೇ ಬ್ರಶನ್ನು ಕೈಗೆತ್ತಿಕೊಂಡು, ಅದರ ಮೇಲಷ್ಟು ಪೇಸ್ಟು ಹಾಕಿಕೊಂಡು ಮೇಲೊಂಚೂರು ನೀರು ಚಿಮುಕಿಸಿ, ಬಚ್ಚಲುಮನೆಯ ಬಾಗಿಲು ಹಾಕಿ ಹಲ್ಲುಜ್ಜಲಾರಂಭಿಸುವಷ್ಟರಲ್ಲಿ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದ. ಕೊಂಚ ಕಿರಿಕಿರಿಯಲ್ಲಿಯೇ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದು ಅಮ್ಮ. ಬಾಯಲ್ಲಿಟ್ಟುಕೊಂಡಿದ್ದ ಬ್ರಶ್ಶಿನಡಿಯಲ್ಲಿಯೇ , ’ಮ್ಮ್’ ಎಂದು ಪ್ರಶ್ನಾರ್ಥಕವಾಗಿ ಹುಬ್ಬೇರಿಸಿದೆ. ’ಶಶಿ ಹೋಗ್ ಬಿಟ್ಲಂತೆ ಸತೀಶಾ’ಎಂದ ಅಮ್ಮ ಕ್ಷಣಕಾಲ ನನ್ನನ್ನೇ ದಿಟ್ಟಿಸಿದರು. ಮೊದಲೇ ನನ್ನದು ಅರೆಪ್ರಜ್ನಾವಸ್ಥೆಯಂತಹ ಸ್ಥಿತಿ. ಅಮ್ಮನ ಮಾತು ಅರ್ಥವಾಗದವನಂತೆ ’ಎತ್ಲಾಗ್ ಹೋದ್ಲು, ಅದೆಂತಕ್ ಇಲ್ಲಿ ಬಾತ್ರೂಮಿಗ್ ಬಂದ್ ಹೇಳ್ತಿದ್ದೆ ಈಗಾ. . ’? ಎಂದು ಕೇಳಿದೆ ಅಮ್ಮನನ್ನು. ’ಏಯ್ ಪೆದ್ದಾ. . !! ಎಲ್ಲೂ ಹೋಗಿದ್ದಲ್ಲ ಮಾರಾಯಾ, ಹೋದಳು ಅಂದರೆ ಸತ್ ಹೋದ್ಲು ಅಂದೆ’ಎನ್ನುತ್ತ ಅಮ್ಮ ಸ್ವಲ್ಪ ಅಸಹನೆಯಲ್ಲಿಯೇ ನುಡಿದಾಗ ನನಗರೇಕ್ಷಣ ಏನೂ ಅರ್ಥವಾಗದ ಭಾವ. ಅರ್ಥವಾದಾಗ ಹಾವು ತುಳಿದಷ್ಟು ಆಘಾತ. ಎರಡು ದಿನಗಳ ಹಿಂದಷ್ಟೇ ಮಾತನಾಡಿಸಿದ್ದ ಮೂವತ್ತು, ಮೂವತ್ತೆರಡರ ಹರೆಯದ ಹುಡುಗಿ ಏಕಾಏಕಿ ’ಹೋದಳು’ ಎಂದಾಗ ಅದನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ. . ? ’ಅಯ್ಯೋ ದೇವರೆ. . ! ಯಾವಾಗ ಮಾರಾಯ್ತಿ. . ? ಮೊನ್ನೆಯಷ್ಟೇ ಮಾತನಾಡಿದ್ಲಲ್ಲ. . ’?ಎಂದು ಅಮ್ಮನನ್ನು ಕೇಳುವ ಹೊತ್ತಿಗೆ ನನ್ನಲ್ಲೇನೋ ಅವ್ಯಕ್ತ ಸಂಕಟ. ’ಎಷ್ಟೊತ್ತಿಗಾಯ್ತೋ ಗೊತ್ತಿಲ್ಲ. ಬೆಳಿಗ್ಗೆ ಐದ್ ಐದುವರೆಗೆಲ್ಲ ಏಳ್ತಿದ್ ಹುಡುಗಿ ಆರೂವರೆಯಾದರೂ ಎದ್ದಿಲ್ಲ ಅಂತ ನಂಜಮ್ಮ ಎಬ್ಬಿಸ್ಲಿಕ್ ಹೋದಾಗ ಬಾಯ್ತಂಬ ನೊರೆನೊರೆಯಂತೆ. ವಿಷ ಕುಡ್ದು ಬಿಟ್ಟಿದ್ಲಂತೆ, ಸತ್ತು ಸುಮಾರು ಹೊತ್ತಾಗಿರ್ಲಿಕ್ ಸಾಕು ಪಾಪ. ಪಕ್ಕದಮನೆ ಕಾಶಿಬಾಯಿ ಹೇಳಿದ್ರಪ್ಪ’ಎಂದ ಅಮ್ಮನ ಮಾತುಗಳು ನನಗೆ ಜೀರ್ಣವಾಗದಂತಾಗಿದ್ದವು. ಶಾಸ್ತ್ರಕ್ಕೆನ್ನುವಂತೆ ಹಲ್ಲುಜ್ಜಿ , ಬಡಬಡನೆ ಮುಖ ತೊಳೆದು , ’ಅಮ್ಮ ನಾನು ಶಶಿ ಮನೆಗ್ ಹೋಗ್ ಬರ್ತೆ , ನೀನೂ ಬರ್ತಿಯೋ’ಎಂದು ಕೇಳಿದೆ. ’ಇಲ್ಲ ನೀ ಹೋಗಿರು, ನಂಗ್ ಇಲ್ಲೊಂಚೂರು ಕೆಲ್ಸ ಉಂಟು, ನಾನ್ ಸ್ವಲ್ಪ ಹೊತ್ ಬಿಟ್ಕಂಡ ಬರ್ತೆ’ ಎಂಬ ಅಮ್ಮನ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವಷ್ಟು ವ್ಯವಧಾನ ನನ್ನಲ್ಲಿರಲಿಲ್ಲ. ಚಪ್ಪಲಿಯೊಳಕ್ಕೆ ಕಾಲಿಟ್ಟವನೇ ಸರಸರನೇ ಶಶಿಯ ಮನೆಯತ್ತ ದೌಡಾಯಿಸಿದೆ.
ಹೆಸರಿಗೆ ನಮ್ಮದು ಕಾಕರಗಲ್ಲಿಯಾದರೂ ಇಲ್ಲಿನ ಬಹುತೇಕ ಮನೆಗಳು ಬ್ರಾಹ್ಮಣರವು. ತುಂಬ ಹಿಂದೆ ನಮ್ಮ ಬೀದಿಯಲ್ಲಿ ಕಳ್ಳ ಕಾಕರ ಕಾಟ ಜಾಸ್ತಿಯಿದ್ದಿದ್ದರಿಂದ ನಮ್ಮ ಓಣಿಗೆ ಕಾಕರಗಲ್ಲಿ ಎಂಬ ಹೆಸರು ಬಂದಿರಬಹುದು ಎಂದು ಅಮ್ಮ ಆಗಾಗ ಹೇಳುತ್ತಿರುತ್ತಾಳೆ. ಅದು ನಿಜವೋ ಸುಳ್ಳೋ ನನಗಂತೂ ಗೊತ್ತಿಲ್ಲ. ಗಲ್ಲಿಯ ಎರಡನೇ ಮನೆ ನಮ್ಮದು. ಬೀದಿಯ ಕೊನೆಯ ಮನೆಯನ್ನು ದಾಟಿದರೆ ಸಣ್ಣದ್ದೊಂದು ಕಾಲುವೆ, ಕಾಲುವೆಯ ಪಕ್ಕಕ್ಕೆಲ್ಲ ಹಸಿರು ಗದ್ದೆಗಳು, ಗದ್ದೆಗಳು ಮುಗಿಯುವ ಹೊತ್ತಿಗೆ ಊರೇ ಕಾಣದಷ್ಟು ದಟ್ಟಾರಣ್ಯ. ಅಪ್ಪಿತಪ್ಪಿ ಬಯಲುಸೀಮೆಯ ಜನರೇನಾದರೂ ನಮ್ಮ ಗಲ್ಲಿಯನ್ನೊಮ್ಮೆ ನೋಡಿಬಿಟ್ಟರೆ ನಮ್ಮ ಗಲ್ಲಿಯೇ ಊರಿನ ಕೊನೆಯ ತುದಿಯಿರಬೇಕು ಎಂದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಿದೆ ನನ್ನ ಬೀದಿಯ ತುದಿ. ಆ ಗದ್ದೆಗಳಿಗಂಟಿಕೊಂಡಂತಿದ್ದ ಬೀದಿಯ ಕೊನೆಯ ಮನೆಯೇ ಶಶಿಯದ್ದು. ಬರೀ ಮಣ್ಣು ಮತ್ತು ಬಿದಿರಿನ ಗಳದಿಂದ ಕಟ್ಟಿದ್ದ ಅವಳ ಮನೆಗೂ ನನ್ನ ಮನೆಗೂ ಸರಿಸುಮಾರು ಅರ್ಧ ಮೈಲಿನಷ್ಟು ದೂರ. ಆಕೆಯ ಸಾವಿನ ಸುದ್ದಿ ಕೇಳಿ ಅನ್ಯಮನಸ್ಕನಂತೆ ಅವಳ ಮನೆಯತ್ತ ನಡೆಯುತ್ತಿದ್ದರೆ, ಗಂಟೆ ಎಂಟಾಗಿದ್ದರೂ ಮರೆಯಾಗದ ಮಲೆನಾಡಿನ ಮಂಜಿನ ಹನಿಗಳು ದೂರದಲ್ಲೆಲ್ಲೋ ಬಿದ್ದಿದ್ದ ಕಾಳ್ಗಿಚ್ಚಿನ ಹೊಗೆಯಂತೆ ಭಾಸವಾಗುತ್ತಿತ್ತು.
ಆಕೆಯ ಪೂರ್ತಿ ಹೆಸರು ಶಶಿಕಲಾ. ಸಹಪಾಠಿಗಳಿಗೆ, ಸ್ನೇಹಿತರ ಪಾಲಿಗೆ ಆಕೆ ಶಶಿ. ಹತ್ತನೇಯ ತರಗತಿಯವರೆಗೂ ಆಕೆ ನನ್ನ ಸಹಪಾಠಿ. ತೀರ ಆಪ್ತ ಸ್ನೇಹಿತೆಯಲ್ಲದಿದ್ದರೂ ಒಂದು ಪರಿಚಯವಂತೂ ನಮ್ಮಿಬ್ಬರ ನಡುವಿತ್ತು. ಶಶಿಯ ಅಮ್ಮ ನಂಜಮ್ಮ ನಮ್ಮ ಮನೆಯೂ ಸೇರಿದಂತೆ ಸುಮಾರು ಏಳೆಂಟು ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಗಂಡ ಫಕೀರಪ್ಪ, ಸಣ್ಣದ್ದೊಂದು ತಳ್ಳುಗಾಡಿಯಲ್ಲಿ ತರಕಾರಿಯ ವ್ಯಾಪಾರ ಮಾಡಿಕೊಂಡಿದ್ದ. ಉಬ್ಬು ಹಲ್ಲುಗಳ ತೀರ ಸಣಕಲು ಹುಡುಗಿ ಶಶಿ ಅವರ ಹಿರಿಯ ಮಗಳು. ಮಲೆನಾಡಿಗರಿಗೆ ಸಹಜವೆನ್ನುವಂತಹ ಬಿಳಿಯ ಮೈಬಣ್ಣ ನಂಜಮ್ಮಳದ್ದಾಗಿದ್ದರೆ, ಮೂಲತ:ಹುಬ್ಬಳ್ಳಿಯವನಾಗಿದ್ದ ಫಕೀರಪ್ಪನದ್ದು ಗೋದಿ ಮೈಬಣ್ಣ, ತಮ್ಮಿಬ್ಬರದ್ದೂ ಬಿಳಿಯ ಬಣ್ಣವಾಗಿದ್ದರೂ, ಮಗಳೇಕೇ ತುಂಬ ಕಪ್ಪಗೆ ಹುಟ್ಟಿದ್ದಾಳೆ ಎಂಬ ಪ್ರಶ್ನೆಯೆದ್ದು, ಆಕೆ ತನ್ನ ಮಗಳೇ ಅಲ್ಲ ಎಂದು ಕ್ಯಾತೆ ತೆಗೆದಿದ್ದನಂತೆ ಫಕೀರಪ್ಪ. ಕೊನೆಗೆ ಊರಿನ ಒಂದಷ್ಟು ಹಿರಿಯರು ನಂಜಮ್ಮಳ ಪರ ನಿಂತು ಫಕೀರಪ್ಪನಿಗೆ ಬುದ್ದಿ ಹೇಳಿ ಜಗಳವನ್ನು ತಣ್ಣಗೆ ಮಾಡಿದ್ದರಂತೆ. ಆದರೆ ನಿಜಕ್ಕೂ ಸಮಸ್ಯೆ ಶಶಿಯ ಮೈ ಬಣ್ಣದ್ದಾಗಿರಲಿಲ್ಲ. ಫಕೀರಪ್ಪನಿಗೆ ಮೊದಲ ಮಗು ಗಂಡೇ ಆಗಬೇಕು ಎನ್ನುವ ಆಸೆಯಿತ್ತು. ತನಗೆ ಹುಟ್ಟಿದ್ದು ಹೆಣ್ಣುಮಗು ಎಂದು ಗೊತ್ತಾದ ತಕ್ಷಣ ನಿರಾಸೆಗೊಳಗಾದ ಅವನು ಹೀಗೆಲ್ಲ ನಾಟಕವಾಡಿದ್ದ ಎಂದು ಅಮ್ಮ ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾಳೆ. ಅದು ನಿಜವೂ ಇರಬಹುದು. ಹಿಂದೊಮ್ಮೆ ಗಂಡು ಮಗುವಿನ ಆಸೆಗಾಗಿ ಮತ್ತೊಂದು ಮದುವೆಗೆ ತಯಾರಾಗಿದ್ದ ಫಕೀರಪ್ಪನನ್ನು ಪೊರಕೆಯಿಂದ ಅಟ್ಟಾಡಿಸಿಕೊಂಡು ಹೊಡೆದಿದ್ದ ನಂಜಮ್ಮಳ ರೌದ್ರಾವತಾರವನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಆದರೂ ಗಂಡುಮಗುವಿನ ಆಸೆಗಾಗಿ ಒಂದರ ಹಿಂದೊಂದರಂತೆ ಮೂರು ಮಕ್ಕಳನ್ನು ಹೆತ್ತಳು ನಂಜಮ್ಮ. ಎಲ್ಲವೂ ಹೆಣ್ಣೇ. ತಮ್ಮ ಹಣೆಬರಹವೇ ಇಷ್ಟು ಎಂದು ದಂಪತಿಗಳು ಸುಮ್ಮನಾದರೋ ಅಥವಾ ನಾಲ್ಕನೆಯ ಮದುವೆಯ ನಂತರ ಪುನ: ಅವರಿಗೆ ಮಕ್ಕಳಾಗಲಿಲ್ಲವೋ ಗೊತ್ತಿಲ್ಲ. ಒಟ್ಟಾರೆಯಾಗಿ ಅವರ ಕುಟುಂಬದ ಸದಸ್ಯರ ಸಂಖ್ಯೆ ಆರಕ್ಕೆ ಸೀಮಿತವಾಯಿತು.
ಶಶಿ ತುಂಬ ಸೌಮ್ಯ ಸ್ವಭಾವದ ಹುಡುಗಿ. ಬುದ್ದಿ ಬಲಿಯದ ವಯಸ್ಸಿನಲ್ಲಿ ನಾವೆಲ್ಲರೂ ಆಕೆಯನ್ನು ’ಕಾಗೆ’, ’ಕಪ್ಪು ಮಂಗ’ ಎಂದೆಲ್ಲ ಹಿಯ್ಯಾಳಿಸಿದ್ದುಂಟು. ಬಹುಶ: ಆಗಿಂದಲೇ ತಾನೊಬ್ಬ ಕುರೂಪಿ ಎಂಬ ಕೀಳರಿಮೆ ಆಕೆಯಲ್ಲಿ ಉಳಿದು ಹೋಗಿತ್ತೋ ಏನೋ ಎಂಬಂತೆ ಆಕೆ ತೀರ ಮಿತಭಾಷಿ. ಅತ್ತ ಬುದ್ದಿವಂತಳೂ ಅಲ್ಲದ, ತೀರ ಪೆದ್ದು ಅಲ್ಲದ ಸಾಧಾರಣ ಮಟ್ಟದ ವಿದ್ಯಾರ್ಥಿಯಾಗಿದ್ದ ಶಶಿ ಹತ್ತನೆಯ ತರಗತಿಯಲ್ಲಿ ಫಸ್ಟ್ ಕ್ಲಾಸ್ ಪಡೆದು ಪಾಸಾದಾಗ ನಮಗೆಲ್ಲರಿಗೂ ತುಂಬ ಆಶ್ಚರ್ಯವಾಗಿತ್ತು. ಯಾವುದೇ ವಿಶೇಷ ತರಬೇತಿ ಪಡೆಯದೇ ಪ್ರಥಮ ದರ್ಜೆಯಲ್ಲಿ ಪಾಸಾದ ಹುಡುಗಿಯ ಬಗ್ಗೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೇ, ಆಕೆಯ ಪೋಷಕರಲ್ಲಿ ಮಾತ್ರ ಆಕೆಯೆಡೆಗೆ ಎಂದಿನ ನಿರಾಸಕ್ತಿ. ’ಏನೇ ನಂಜಮ್ಮ, ಮಗಳು ಫಸ್ಟ್ ಕ್ಲಾಸ್ ಅಂತಲೇ, ಸ್ವೀಟು ಗೀಟು ಎಂತಾ ಕೊಡುದಿಲ್ವೇನೇ’ ಎಂದು ಅಮ್ಮ ಕೇಳಿದರೆ, ’ಅಯ್ಯೋ ಬಿಡಿಮ್ಮಾ, ಅದೊಂದ್ ಬಾಕಿಯಿತ್ತು ಈಗ, ಎಂತಾ ಮಾಡುದ್ ಫಸ್ಟು, ಸೆಕೆಂಡು ಎಲ್ಲ ತೊಗೊಂಡು, ನಮ್ಮಂಥಾ ಬಡವ್ರಿಗಲ್ಲ ಅದೆಲ್ಲಾ. . . ಇನ್ನು ಶಾಲೆಗ್ ಹೋಗಿದ್ ಸಾಕು ಅಂತೇಳಿ, ಎಲ್ಲಾದ್ರೂ ಕೆಲ್ಸಾ ನೋಡ್ಕೊ ಅಂತೆಳ್ದೆ’ಎಂದು ಸುಮ್ಮನಾಗಿದ್ದಳು ನಂಜಮ್ಮ. ಅದೇನೇ ಒತ್ತಾಯಿಸಿದರೂ ಆಕೆಯನ್ನು ಮುಂದೆ ಓದಿಸುವುದಕ್ಕೆ ಶಶಿಯ ಹೆತ್ತವರು ಬಿಲ್ಕುಲ್ ತಯಾರಿರಲಿಲ್ಲ. ಆ ಹುಡುಗಿಯೋ ಬಾಯಿದ್ದರೂ ಮೂಕಿ. ಮುಂದೆ ಓದುವ ಆಸೆಯಿದ್ದರೂ ಹೆತ್ತವರ ಮಾತಿಗೆ ಮರುಮಾತನಾಡಲಾಗದೆ ಊರಲ್ಲಿಯೇ ಒಂದು ಜೆರಾಕ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು. ನಾನು ಪಿಯುಸಿಯನ್ನು ಊರಿನಲ್ಲಿಯೇ ಮುಗಿಸಿ, ಹುಬ್ಬಳ್ಳಿಯಲ್ಲಿ ಕಾಲೇಜು ಸೇರುವವರೆಗೂ ಶಶಿ ಅದೇ ಜೆರಾಕ್ಸ್ ಅಂಗಡಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದಳು. ಮುಂದೆ ಆ ಅಂಗಡಿ ಮುಚ್ಚಿಹೋದಾಗ , ಪಕ್ಕದ ಬೀದಿಯ ಗಣೇಶ ಔಷಧಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.
ನನ್ನ ಬಹುತೇಕ ಸಹಪಾಠಿಗಳು ಪದವಿ ಮುಗಿಸಿ ಉದ್ಯೋಗವನ್ನರಸುತ್ತ ಬೆಂಗಳೂರಿಗೆ ತೆರಳಿದರೆ ನಾನು ಮಾತ್ರ ಊರಿನಲ್ಲಿಯೇ ಉಳಿದುಕೊಂಡೆ. ಮೊದಲಿನಿಂದಲೂ ಊರಿನಿಂದ ತುಂಬ ದೂರ ಹೋಗುವ ಆಸೆ ನನಗಿರಲಿಲ್ಲವೆನ್ನಿ. ನನ್ನ ಅದೃಷ್ಟಕ್ಕೆ ಒಂದು ಔಷಧ ಕಂಪನಿಯ ಮೆಡಿಕಲ್ ರೆಪ್ರಸೆಂಟಿಟಿವ್ ಆಗಿ ಹುಬ್ಬಳ್ಳಿಯಲ್ಲಿಯೇ ನನಗೆ ಕೆಲಸ ಸಿಕ್ಕಿತ್ತು. ನನ್ನ ಜಿಲ್ಲೆಯ ಸುಮಾರು ಮೂರ್ನಾಲ್ಕು ಊರುಗಳಿಗೆ ಸುತ್ತುವ ಕೆಲಸವಾಗಿದ್ದರೂ ಸಂಜೆಯ ಹೊತ್ತಿಗೆ ನನ್ನೂರಿಗೆ ಮರಳುವುದು ಶಕ್ಯವಿದ್ದುದ್ದರಿಂದ ನನಗೆ ಸುಖವಾಗಿತ್ತು. ತೀರ ಜಾಸ್ತಿಯಲ್ಲದಿದ್ದರೂ ಸಂಬಳವೂ ತಕ್ಕ ಮಟ್ಟಿಗೆನ್ನುವಂತೆ ಚೆನ್ನಾಗಿಯೇ ಇತ್ತು. ನನ್ನೂರಿನಲ್ಲಿ ನಮ್ಮದು ಸ್ವಂತ ಮನೆಯಾಗಿದ್ದರಿಂದ ನನಗೆ ಅಂತಹ ವಿಶೇಷ ಖರ್ಚುಗಳೇನೂ ಇರಲಿಲ್ಲ. ತಿಂಗಳಿಗೆ ಒಂದೆರಡು ದಿನ ನನ್ನೂರಿನಲ್ಲಿಯೇ ನಾನು ಡ್ಯೂಟಿ ಹಾಕಿಕೊಳ್ಳುತ್ತಿದ್ದೆ. ನನ್ನೂರಿನಲ್ಲಿದ್ದಿದ್ದೇ ಐದು ಔಷಧಾಲಯಗಳು. ಬೆಳಿಗ್ಗೆ ಹೊರಟರೆ ಮಧ್ಯಾಹ್ನದ ಹೊತ್ತಿಗೆಲ್ಲ ಕೆಲಸ ಮುಕ್ತಾಯ. ಹಾಗಾಗಿಯೇ ನನಗೆ ನನ್ನೂರಿನ ಡ್ಯೂಟಿ ತುಂಬ ಪ್ರೀತಿಯ ಡ್ಯೂಟಿ. ಹೀಗೆ ಕಾರ್ಯ ನಿರ್ವಹಿಸುವಾಗ ಶಶಿಯನ್ನು ಆಗಾಗ ನಾನು ಮಾತನಾಡಿಸುವುದು ಸಹಜವಾಗಿತ್ತು. ಅಂಗಡಿಯ ಮಾಲೀಕರಾಗಿದ್ದ ಗಣಪತಿ ಭಟ್ಟರಿಗೆ ಶಶಿಯ ಬಗ್ಗೆ ತುಂಬ ಭರವಸೆ. ಹಾಗಾಗಿ ಬಹಳಷ್ಟು ಬಾರಿ ಅವರು ಅಂಗಡಿಯಲ್ಲಿ ಇರುತ್ತಲೇ ಇರಲಿಲ್ಲ. ಅಂಗಡಿಯ ಬಹುತೇಕ ಜವಾಬ್ದಾರಿ ಶಶಿಯದ್ದೇ. ನಾನು ಅಂಗಡಿಗೆ ಹೋದರೆ ಶಶಿಯದ್ದು ಹೆಚ್ಚು ಮಾತಿಲ್ಲ ಕತೆಯಿಲ್ಲ. ಬೇಕಾದ ಔಷಧಿಗಳ ಬಗ್ಗೆ ಮಾಲೀಕರು ಬರೆದಿಟ್ಟ ಚೀಟಿಯನ್ನು ನನ್ನ ಕೈಗಿತ್ತು ಸುಮ್ಮನಾಗುತ್ತಿದ್ದಳು. ವಿಚಿತ್ರವೆಂದರೆ ಶಾಲೆಯಲ್ಲಿ ಸತೀಶಾ ಎನ್ನುತ್ತಿದ್ದ ಶಶಿ, ಈಗ ನಂಜಮ್ಮ ಕರೆಯುತ್ತಿದ್ದಂತೆ ’ಸತೀಶಪ್ಪಾ’ಎಂದು ಕರೆಯಲಾರಂಭಿಸಿದ್ದಳು. ’ನಿನ್ನಪ್ಪ ಫಕೀರಪ್ಪ ಕಣೆ, ನಾನು ಸತೀಶಾ, ಸತೀಶಪ್ಪ ಅಲ್ಲ’ಎಂದು ನಾನು ಕಾಲೆಳೆದರೆ ಆಕೆಯ ಮುಖದಲ್ಲೊಂದು ಶುಷ್ಕ ನಗೆ.
ಮುಂಚಿನಿಂದಲೂ ನನಗೆ ಶಶಿಯೆಡೆಗೊಂದು ಅವ್ಯಕ್ತ ಸಹಾನುಭೂತಿ. ಇನ್ನೂ ಕೊಂಚ ಓದಿಕೊಂಡಿದ್ದರೆ , ಒಂದೊಳ್ಳೆಯ ಕೆಲಸವೇ ಸಿಗಬಹುದಿತ್ತೇನೋ ಹುಡುಗಿಗೆ ಎಂಬ ಭಾವ. ಬೇಸಿಗೆಯ ರಜಾದಿನಗಳಲ್ಲಿ ನಾವೆಲ್ಲ ತಿರುಗಾಟ , ಆಟೋಟಗಳಲ್ಲಿ ಮಗ್ನರಾಗಿದ್ದರೆ, ಶಶಿ ಹತ್ತಿರದ ಚಾಕಲೇಟು ಕಾರ್ಖಾನೆಯಲ್ಲಿ ಚಾಕಲೇಟು ಸುತ್ತುವ ಕೆಲಸ ಮಾಡುತ್ತಿದ್ದಳು. ನೂರು ಚಾಕಲೇಟುಗಳನ್ನು ಸುತ್ತಿದರೆ ಕಾರ್ಖಾನೆಯವರು ಎರಡು ರೂಪಾಯಿಗಳನ್ನು ಕೊಡುತ್ತಿದರು. ಒಂದಷ್ಟು ಚಾಕಲೇಟು ಸುತ್ತಿ, ಒಂದಷ್ಟು ಕಟ್ಟಿಗೆ ಮಾರಿ ಹಾಗೂಹೀಗೂ ತನ್ನ ಶಾಲಾ ಖರ್ಚುಗಳನ್ನು ಅವಳು ಹೊಂದಿಸಿಕೊಳ್ಳುತ್ತಿದ್ದಳು. ಓದು ಬರಹ ಎಲ್ಲ ಏನಿದ್ದರೂ ಉಳ್ಳವರಿಗೆ ಮಾತ್ರ ಬಡವರಿಗಲ್ಲ, ಅದರಲ್ಲೂ ಹೆಣ್ಣು ಮಕ್ಕಳು ಓದುವುದಂತೂ ಮಹಾಪಾಪ ಎನ್ನುವ ಮನೋಭಾವದ ಫಕೀರಪ್ಪನಂತೂ ತನ್ನ ಮಕ್ಕಳಿಗೆ ಶಾಲಾ ಸಮವಸ್ತ್ರ ಕೊಡಿಸುವುದು ದೂರದ ಮಾತಾಗಿತ್ತು. ಶಶಿ ಮತ್ತಾಕೆಯ ಸೋದರಿಯರು ನಂಜಮ್ಮ ಕೆಲಸ ಮಾಡುತ್ತಿದ್ದ ಮನೆಯವರ ಹೆಣ್ಣುಮಕ್ಕಳಿಂದ ಹಳೆಯ ಸಮವಸ್ತ್ರಗಳನ್ನು , ಪುಸ್ತಕಗಳನ್ನು ಬೇಡಿ ಇಸಿದುಕೊಳ್ಳುತ್ತಿದ್ದರು. ಶಶಿಯ ನಡುವಳಿಕೆಯನ್ನು ಮೆಚ್ಚುತ್ತಿದ್ದ ಉಳಿದ ಹುಡುಗರ ಅಮ್ಮಂದಿರಿಂದ ಮಕ್ಕಳಿಗೆ ನೀತಿಪಾಠ. ’ದಿನವಿಡಿ ಆಟ ಆಟ. ಶಶಿನ ನೋಡಿ ಕಲ್ತಕೊಳ್ಳಿ, ರಜೆಲೂ ಕೆಲ್ಸ ಮಾಡಿ ದುಡ್ಕೊಳ್ತದೆ ಅದು ಪಾಪ’ಎಂಬ ಬೋಧನೆ. ಹಾಗೆ ಅವಳನ್ನು ಹೊಗಳುತ್ತಿದ್ದ ಮಾತ್ರಕ್ಕೆ ನಾವು ಕಟ್ಟಿಗೆ ತರಲಿಕ್ಕೋ, ಚಾಕಲೇಟು ಸುತ್ತಲಿಕ್ಕೋ ಹೋಗಲು ನಮ್ಮ ಹೆತ್ತವರು ಬಿಡುತ್ತಿರಲಿಲ್ಲ. ನಮ್ಮ ಮಕ್ಕಳು ಅಂಥಹ ಸಣ್ಣ ಸಣ್ಣ ಕೆಲಸಗಳನ್ನು ಮಾಡಿದರೆ ನೋಡಿದವರು ಏನೆಂದುಕೊಂಡಾರು ಎಂಬ ಪ್ರೆಸ್ಟಿಜ್ ಚಿಂತೆಯೂ ನಮ್ಮ ಹೆತ್ತವರಿಗಿರುತ್ತಿತ್ತು. ಸುಮ್ಮನೇ ನಮ್ಮನ್ನು ಏನಾದರೂ ಬಯ್ಯಬೇಕು ಎನ್ನುವ ಕಾರಣಕ್ಕೆ ಶಶಿಯನ್ನು ಎದುರಿಗಿಟ್ಟುಕೊಳ್ಳುತ್ತಿದ್ದರು. ವಿನಾಕಾರಣ ನನ್ನನ್ನು ಬಯ್ಯಿಸುತ್ತಾಳೆ ಎಂಬ ಕಾರಣಕ್ಕೆ ಆಕೆಯನ್ನು ಕಂಡರೆ ಸಣ್ಣದ್ದೊಂದು ಕೋಪ ನನಗೆ. ಸುಖಾಸುಮ್ಮನೇ ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಬೆನ್ನ ಮೇಲೆ ಗುದ್ದುತ್ತಿದ್ದೆ. ಬಿದ್ದ ಗುದ್ದಿನ ನೋವು ತಾಳಲಾಗದೆ ಆಕೆ ಬಿಕ್ಕುತ್ತ ತನ್ನಮ್ಮನ ಬಳಿ ದೂರಿತ್ತರೆ , ’ನೀನೇ ಏನೋ ಮಾಡಿರ್ತಿಯಾ, ಅದಕ್ಕೆ ಸತೀಸಪ್ಪ ಹೊಡ್ದಿರಬೇಕು’ಎನ್ನುವ ಆಕೆಯ ಅಮ್ಮನ ಮಾತುಗಳು ಅವಳನ್ನು ಸುಮ್ಮನಾಗಿಸುತ್ತಿದ್ದವು. ಸುಮ್ಮಸುಮ್ಮನೇ ಆಕೆಯನ್ನು ಹೊಡೆಯುತ್ತಿದ್ದ ನನ್ನ ಬಾಲ್ಯದ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತವೆನ್ನುವಂತೆ ನನಗೆ ಆಕೆಯೆಡೆಗೊಂದು ಕರುಣೆ ಹುಟ್ಟಿಕೊಂಡಿರಲಿಕ್ಕೂ ಸಾಕು.
ವಿಚಿತ್ರವೆಂದರೆ ಆಕೆ ದುಡಿಯಲಾರಂಭಿಸಿದ ಕೆಲವೇ ದಿನಗಳಲ್ಲಿ ಫಕೀರಪ್ಪ ದುಡಿಯುವುದನ್ನು ನಿಲ್ಲಿಸಿಬಿಟ್ಟಿದ್ದ. ತೀರ ದುಡಿತವನ್ನು ನಿಲ್ಲಿಸುವ ವಯಸ್ಸು ಅವನದಲ್ಲ. ಆದರೆ ಮನೆಯ ಮಕ್ಕಳು ದುಡಿಯುವುದಕ್ಕಾರಂಭಿಸಿದ ನಂತರ ಅಪ್ಪ ಕೆಲಸ ಮಾಡಬಾರದೆಂಬ ವಿಚಿತ್ರ ತರ್ಕ ಅವನದ್ದು. ’ಕಷ್ಟಪಟ್ಟು ಮಗಳ್ನ ನನ್ನ ಕೈಲಾಗುವಷ್ಟುಶಾಲೆ ಕಳ್ಸದೆ. ಈಗ ಮನೆ ಜಬಾದಾರಿ ಅವಳ್ದೇ ಅಲ್ಲವಾ, ನಂಗೂ ವಯಸ್ಸಾಯ್ತ್ ಮಾರಾಯ್ರೆ’ಎಂದಿದ್ದನಂತೆ ಅಮ್ಮನ ಬಳಿ. ಶಶಿಯ ತಂಗಿಯರಲ್ಲಿ ಒಬ್ಬರೂ ಸಹ ಹೈಸ್ಕೂಲಿನ ಮೆಟ್ಟಲು ಹತ್ತಲಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ ಅವರು ನಂಜಮ್ಮನಷ್ಟಾಗಲಿ, ಶಶಿಯಷ್ಟಾಗಲಿ ಶ್ರಮಜೀವಿಗಳೂ ಅಲ್ಲ. ಓದು ತಲೆಗೆ ಹತ್ತಿರದಿದ್ದರೂ ಲವ್ ಲೆಟರುಗಳನ್ನು ಬರೆಯುವ ಕಲೆ ಮಾತ್ರ ಶಶಿಯ ತಂಗಿಯರಿಗೆ ಚೆನ್ನಾಗಿ ಒಲಿದಿತ್ತು. ನೋಡುವುದಕ್ಕೆ ಸುಂದರಿಯರಾಗಿದ್ದ ಅವರ ಪ್ರೇಮಿಗಳ ಸಂಖ್ಯೆಗೇನೂ ಕಮ್ಮಿಯಿರಲಿಲ್ಲ. ಪ್ರೇಮಿಗಳ ಕೃಪಾಕಟಾಕ್ಷದಿಂದಾಗಿ ಹೊಸಬಟ್ಟೆಗಳು, ಆಗಾಗ ಒಂದಷ್ಟು ದಿನಸಿ ಸಾಮಗ್ರಿಗಳು ಅವರಿಗೆ ದಕ್ಕುತ್ತಿದ್ದದ್ದು ಸುಳ್ಳೇನಲ್ಲ. ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದ ಹೆಂಗಸರು ಕಾಡಿನಲ್ಲಿ ವಾರಕ್ಕೊಬ್ಬ ಯುವಕನೊಂದಿಗೆ ಕಾಣಸಿಗುತ್ತಿದ್ದ ನಂಜಮ್ಮನ ಮಕ್ಕಳ ಕತೆಯನ್ನು ರಸವತ್ತಾಗಿ ವರ್ಣಿಸುತ್ತಿದ್ದರು. ’ಏನೇ ನಂಜಮ್ಮ , ನಿನ್ನ ಮಕ್ಳು ಯಾರ್ಯಾರ ಜೊತೆನೋ ಓಡಾಡ್ತವಲ್ಲೇ, ವಯಸ್ಸಿನ ಹೆಣ್ಮಕ್ಳು , ಹಂಗೆಲ್ಲ ಓಡಾಡಬಾರದು ಅಂತ ನೀನಾದ್ರೂ ಬುದ್ದಿ ಹೇಳಬಾರ್ದೇನೇ’ಎನ್ನುತ್ತ ಒಂದಿಬ್ಬರು ಮುದುಕಿಯರು ನಂಜಮ್ಮನ ಬಳಿ ದೂರಿದ್ದು ಇದೆ. ’ಏ , ಅವಿನ್ನೂ ಶಣ್ಣ ಹುಡ್ಗೀರು, ಶಣ್ಣಶಣ್ಣ ಹೆಣ್ಮಕ್ಳ್ ಮೇಲೂ ಎಂತಾ ಹೊಲಸು ಅನುಮಾನ ನಿಮ್ದು ಅಂತ, ನಿಮ್ಮನ್ನೆಲಿ ಹೆಣ್ಮಕ್ಳಿಲ್ವಾ ಮಾರಾಯ್ರೆ, ಅವರಿಗ್ ಬುದ್ದಿ ಹೇಳಿ ಮೊದ್ಲು, ನನಗೆಂತಾ ಹೇಳ್ತ್ರಿ’ಎಂದು ಜಬರ್ದಸ್ತು ಮಾಡಿ ಅಂಥವರ ಬಾಯಿಮುಚ್ಚಿಸುತ್ತಿದ್ದಳು ನಂಜಮ್ಮ.
ತಮ್ಮ ರೂಪದ ಬಗ್ಗೆ ಅಪಾರ ಹೆಮ್ಮೆಯಿದ್ದ ತಂಗಿಯರಿಗೆ ಅಕ್ಕ ಶಶಿಯ ಬಗ್ಗೆ ತೀವ್ರ ಅಸಡ್ಡೆ. ಜಗುಲಿಯ ಮೇಲೆ ಕುಳಿತು ಹೂವು ಕಟ್ಟುತ್ತಿದ್ದ ಶಶಿಯನ್ನು ’ಕಾಗೆನೂ ಹೂವು ಕಟ್ಟುತ್ತದೆ ನೋಡಿದ್ದೀರಾ ’ಎಂದೇ ಅವರು ಹೀಯಾಳಿಸುತ್ತಿದ್ದರು. ಅದೊಂದು ದೊಡ್ಡ ಜೋಕು ಎನ್ನುವಂತೆ ಅವರಪ್ಪ ಅಮ್ಮ ಸಹ ಬಿದ್ದು ಬಿದ್ದು ನಗುತ್ತಿದ್ದರು. ಮರುಮಾತನಾಡದ ಶಶಿ ಮಾತ್ರ ಸುಮ್ಮನೇ ತಲೆ ತಗ್ಗಿಸಿಕೊಂಡು ಹೂವು ಕಟ್ಟುತ್ತಿದ್ದಳು. ಶಶಿಯನ್ನು ನೋಡಲು ಬಂದಿದ್ದ ಒಂದಿಬ್ಬರು ಹುಡುಗರು ಆಕೆಯನ್ನು ತಿರಸ್ಕರಿಸಿದ್ದರು. ಮತ್ತೊಬ್ಬ ಹುಡುಗ ಶಶಿಯ ತಂಗಿ ಲತಾಳನ್ನು ಇಷ್ಟ ಪಟ್ಟು ತಾನು ಆಕೆಯನ್ನೇ ಮದುವೆಯಾಗುವುದಾಗಿ ಹೇಳಿಬಿಟ್ಟ. ಅಕ್ಕನ ಮದುವೆಯಾಗದೇ ತಂಗಿಯ ಮದುವೆ ಮಾಡುವುದು ಸಾಧ್ಯವಿಲ್ಲ ಎನ್ನುತ್ತ ಫಕೀರಪ್ಪ ಕಡ್ಡಿ ಮುರಿದಂತೆ ನುಡಿದುಬಿಟ್ಟಿದ್ದ. ಆದರೆ ಲತಾಳ ಆಕರ್ಶಕ ರೂಪಕ್ಕೆ ಮರುಳಾಗಿದ್ದ ಹುಡುಗ ಮದುವೆಯ ಸಂಪೂರ್ಣ ಖರ್ಚು ತನ್ನದೇ ಎಂದಾಗ ಮದುವೆಗೆ ಅಸ್ತು ಎಂದುಬಿಟ್ಟಿದ್ದಳು ನಂಜಮ್ಮ. ಶಶಿಯ ಮತ್ತೊಬ್ಬ ತಂಗಿಯಾಗಿದ್ದ ಗೀತಾಳನ್ನು ನಂಜಮ್ಮನ ತಮ್ಮ ಇಷ್ಟಪಟ್ಟಿದ್ದ. "ಈ ಕಾಗೆಯ ಮದುವೆಯಂತೂ ಸಾಧ್ಯಿಲ್ಲ. ಅಲ್ಲಿ ತಂಕಾ ಮಾವ ಕಾಯುದಿಲ್ಲ’ಎಂದು ಗಲಾಟೆ ಮಾಡಿದ್ದ ಗೀತಾ ತರಾತುರಿಯಲ್ಲಿ ಮದುವೆಯಾಗಿಬಿಟ್ಟಿದ್ದಳು.
ಗೀತಾಳ ಮದುವೆಯ ನಂತರ ಹೆತ್ತವರು ಶಶಿಯ ಮದುವೆಯ ಬಗ್ಗೆ ಹೆಚ್ಚಿಗೆ ಆಸಕ್ತಿ ತೋರಿಸಿದಂತೆನ್ನಿಸುತ್ತಿರಲಿಲ್ಲ. ಇಬ್ಬರು ಸುಂದರಿಯರ ಮದುವೆಯ ನಂತರ ತಮ್ಮತಮ್ಮ ಗಂಡನ ಮನೆಗೆ ತೆರಳಿದ್ದರಿಂದ ಮನೆಗೆ ಬರುತ್ತಿದ್ದ ಪುಕ್ಕಟ್ಟೆ ದಿನಸಿ, ಬಟ್ಟೆಬರೆಗಳು ನಿಂತು ಹೋಗಿದ್ದವು. ನಂಜಮ್ಮಳ ಕೈಯಲ್ಲಿಯೂ ಮೊದಲಿನಷ್ಟು ಕೆಲಸ ನೀಗುತ್ತಿರಲಿಲ್ಲ. ಸಣ್ಣದ್ದಾದರೂ ಸರಿ, ಶಶಿಯ ಸಂಬಳವನ್ನೇ ಅವರು ಸಂಸಾರ ನಿರ್ವಹಣೆಗಾಗಿ ನೆಚ್ಚಿಕೊಂಡಿದ್ದರು. ಶಶಿಯ ಮದುವೆಯ ಬಗ್ಗೆ ನೆರೆಹೊರೆಯವರು ವಿಚಾರಿಸಲಾಗಿ, ’ಅಯ್ಯೋ ನಾವ್ ಮಾಡೊವಷ್ಟ್ ಪ್ರಯತ್ನ ಮಾಡ್ತಾನೇ ಇದ್ದೇವೆ, ಒಬ್ರೂ ಹುಡುಗೀನ ಒಪ್ಪಲಿಲ್ಲ. ಅವಳ ಹಣೆಬರಾನೇ ಸರಿಯಿಲ್ಲ ಅಂತೇಳಿ ಸುಮ್ನಾದ್ವಿ. ಋಣಾನುಬಂದ ಇದ್ರೆ ಯಾರಾರೂ ಬರ್ತಾರ್ ಬಿಡಿ’ಎನ್ನುವ ಉತ್ತರ ನಂಜಮ್ಮನದ್ದು.
ನಮ್ಮೂರಿನಿಂದ ಹುಬ್ಬಳ್ಳಿಗೆ ಅರ್ಧ ತಾಸಿಗೊಂದರಂತೆ ಬಸ್ಸುಗಳಿವೆ. ಹಾಗಾಗಿ ಹುಬ್ಬಳ್ಳಿಗೆ ತೆರಳುವ ಬಸ್ಸುಗಳು ಬಹುತೇಕ ಖಾಲಿಖಾಲಿ. ಅದೊಮ್ಮೆ ನಾನು ಡ್ಯೂಟಿಗೆಂದು ಹುಬ್ಬಳ್ಳಿಗೆ ಹೋಗುತ್ತಿದ್ದೆ. ಸುಮ್ಮನೇ ಪುಸ್ತಕ ಓದುತ್ತ ಕುಳಿತವನಿಗೆ ’ಸತೀಶಾ’ಎಂದು ಕರೆದಂತಾಯ್ತು. ತಲೆಯೆತ್ತಿ ನೋಡಿದರೇ ಶಶಿ. ’ಅರೇ, ನೀನೇನೆ ಶಶಿ. . ? ನೀನ್ಯಾವಾಗ ಬಸ್ಸು ಹತ್ಕೊಂಡಿಯೇ. . ?ಎಲ್ಲಿ ಹುಬ್ಳಿಗಾ. . ’? ಎಂದು ಕೇಳಿದೆ. ಹಾಗೆ ಕೇಳುವಾಗ ಆಕೆಯ ಮುಖದಲ್ಲಿದ್ದ ಮುಜುಗರವನ್ನು ನಾನು ಗಮನಿಸಿಲೇ ಇಲ್ಲ. ನಾನು ಕೇಳಿದ ಪ್ರಶ್ನೆ ಕೇಳಲೇ ಇಲ್ಲವೇನೋ ಎಂಬಂತೆ ’ನಿನ್ನತ್ರ ಎರಡು ರೂಪಾಯಿ ಉಂಟಾ. ’? ಎಂದು ಕೇಳಿದಳು. ಗಣೇಶ ಔಷಧಾಲಯದಲ್ಲಿ ಕೆಲಸ ಮಾಡುತ್ತಿದ್ದದ್ದೇ ಸಾದಿಕ್ ಮತ್ತು ಶಶಿ. ಸಾದಿಕ್ ಶತದಡ್ಡ. ಅಸಲಿಗೆ ಅವನಿಗೆ ಅಕ್ಷರವಾದರೂ ಬರುತ್ತದೋ ಇಲ್ಲವೋ ಎಂಬ ಅನುಮಾನ. ಹಾಗಾಗಿ ಗಣಪತಿ ಭಟ್ಟರಿಗೂ ಅವನ ಮೇಲೆ ನಂಬಿಕೆಯಿರಲಿಲ್ಲ. ಅಂಗಡಿಯ ಕೆಲವು ಕೆಲಸಗಳಿಗಾಗಿ ಅವರು ಆಗಾಗ ಶಶಿಯನ್ನೇ ಹುಬ್ಬಳ್ಳಿಗೆ ಕಳುಹಿಸುತ್ತಿದ್ದರು. ಎರಡು ರೂಪಾಯಿ ಚಿಲ್ಲರೆ ಇಲ್ಲವೆನ್ನುವ ಕಾರಣಕ್ಕೆ ನನ್ನೆದುರು ಮುದುಡಿ ನಿಂತ ಹುಡುಗಿಯ ಮುಗ್ದತನಕ್ಕೆ ಕೊಂಚ ಆಕೆಯನ್ನು ರೇಗಿಸೋಣವೆನ್ನಿಸಿ ’ ಅಯ್ಯೋ ಇಲ್ಲ ಮಾರಾಯ್ತಿ, ಸಾರಿ ನಾನ್ ಇವತ್ ದುಡ್ಡೇ ತರ್ಲಿಲ್ಲಾ ನೋಡು’ಎಂದೆ. ತೀರ ಸಣ್ಣ ಮುಖ ಮಾಡಿಕೊಂಡ ಅವಳು, ’ಹೌದಾ. . ! ಆಯ್ತು ಬಿಡು’ಎನ್ನುತ್ತ ಬಸ್ಸು ನಿಲ್ಲಿಸುವಂತೆ ಕಂಡೆಕ್ಟರ್ ಬಳಿ ಕೇಳಿಕೊಳ್ಳಲಾರಂಭಿಸಿದಳು. ಊರಿನಿಂದ ಹತ್ತಾರುಮೈಲುಗಳಷ್ಟು ದೂರ ಕಾಡಿನ ಮಧ್ಯದ ದಾರಿಯಲ್ಲಿ ನಿಲ್ದಾಣವಲ್ಲದ ಸ್ಥಳದಲ್ಲಿ ಹೇಗೆ ನಿಲ್ಲಿಸುವುದು ಎಂಬಂತೆ ವಿಚಿತ್ರವಾಗಿ ಶಶಿಯನ್ನೇ ನೋಡುತ್ತ ನಿಂತಿದ್ದ ಕಂಡಕ್ಟರನನ್ನು ಕರೆದು ಎರಡು ರೂಪಾಯಿ ನೀಡಿದೆ. ’ಏಯ್ ಎಡಬಟ್ಟು. . ! ತಮಾಷೆ ಮಾಡಿದ್ರೂ ಗೊತ್ತಾಗಲ್ವೇನೇ ನಿಂಗೆ, ಯಾರಾದ್ರೂ ದುಡ್ಡಿಲ್ದೆ ಬಸ್ ಹತ್ತಾರಾ ’ಎನ್ನುತ್ತ ಜೇಬಿನಿಂದ ಎರಡು ರೂಪಾಯಿ ನಾಣ್ಯ ತೆಗೆದು ಅವಳ ಕೈಗಿತ್ತರೆ ಸುಮ್ಮನೇ ನಸು ನಕ್ಕಿದ್ದಳು . ಆದರೆ ಆ ದಿನದ ನಂತರ ಕೊಂಚ ಹಗುರವಾಗಿದ್ದಳು ಶಶಿ. ಆಕೆಯ ಔಷಧಾಲಕ್ಕೆ ಹೋದರೆ ನಗುತ್ತ ’ಬಾ ಸತೀಶಾ’ಎನ್ನುತ್ತಿದ್ದಳು. ಶಾಲಾದಿನಗಳಂತೆ ಮಾತುಗಳಲ್ಲಿ ಔಪಚಾರಿಕತೆ ಇರಲಿಲ್ಲ. ತಮಾಷೆ ಮಾಡಿದರೆ ನಗುತ್ತಿದ್ದಳು. ಕಾಲೆಳೆದರೆ ಹುಸಿಗೋಪ ತೋರುತ್ತಿದ್ದಳು. ಆಗಾಗ ಪಕ್ಕದ ಸಂಜೀವಿನಿ ಹೋಟೆಲ್ಲಿನಿಂದ ಚಹ ತರಿಸಿದ್ದೂ ಇದೆ. ’ಎಂತದೇ ಹುಡುಗಿ, ಈಗೀಗ ಭಯಂಕರ ಖುಷಿಯಲ್ಲಿರ್ತಿಯಪ್ಪ. ಮದುವೆ ಗೊತ್ತಾಯ್ತಾ ಮತ್ತೆ’ಎಂದು ನಾನು ರೇಗಿಸಿದರೆ ಮಾತ್ರ ’ಇಲ್ಲ ಕಣೋ’ಎಂಬ ಚುಟುಕಾಗಿ ಉತ್ತರಿಸಿ ಸುಮ್ಮನಾಗಿಬಿಡುತ್ತಿದ್ದಳು.
ನನಗೆ ಅವರ ಮನೆಯ ಪಕ್ಕದ ಸಣ್ಣ ಕಾಲುವೆ ತುಂಬ ಇಷ್ಟವಾಗುತ್ತಿತ್ತು. ಅದನ್ನು ದಾಟಿ ಗದ್ದೆಗೆ ತೆರಳಲು ಸುಲಭವಾಗಲೆನ್ನುವ ಕಾರಣಕ್ಕೆ ಮರದ ದಿಮ್ಮಿಯೊಂದನ್ನು ಸೇತುವೆಯಂತೆ ಕಾಲುವೆಗೆ ಅಡ್ಡಲಾಗಿ ಮಲಗಿಸಲಾಗಿತ್ತು. ಅಲ್ಲಿ ಸುಮ್ಮನೇ ಗಂಟೆಗಟ್ಟಲೇ ಕುಳಿತುಕೊಳ್ಳುವುದೆಂದರೆ ನನಗೆ ತುಂಬ ಇಷ್ಟ. ತಳ ಕಾಣುವಂತೆ ಮೆಲ್ಲಗೆ ಹರಿಯುವ ಕಾಲುವೆಯ ಜುಳುಜುಳು, ಗದ್ದೆಯಲ್ಲಿ ವಟಗುಟ್ಟುವ ಕಪ್ಪೆಗಳು, ಸುತ್ತಲೂ ಸಪ್ಪಳ ಮಾಡುತ್ತ , ಗದ್ದೆಯಲ್ಲಿಯ ಸಣ್ಣ ಸಣ್ಣ ಮೀನು ಏಡಿಗಳನ್ನು ಬೇಟೆಯಾಡುತ್ತ ಹಾರಾಡುವ ಬೆಳ್ಳಕ್ಕಿಗಳು, ದೂರದಲ್ಲೆಲ್ಲೋ ಕಾಡಿನಲ್ಲಿ ಹಾಡುವ ಕೋಗಿಲೆ. ಎಲ್ಲ ಪ್ರಕೃತಿ ನಿರ್ಮಿತ ಶಬ್ದಗಳ ನಡುವೆಯೂ ಕಂಡುಕೊಳ್ಳಬಹುದಾದ ಪ್ರಶಾಂತತೆಗಾಗಿ ಹಂಬಲಿಸಿ ನಾನು ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಆದರೆ ಸುಮಾರು ಹದಿನೈದು ದಿನಗಳ ಹಿಂದೆ ನಾನಲ್ಲಿ ಕುಳಿತಿದ್ದಾಗ ಎಂದಿನ ಏಕಾಂತ ಅಲ್ಲಿರಲಿಲ್ಲ. ನಂಜಮ್ಮನ ಮನೆಯ ಮುಚ್ಚಿದ ಬಾಗಿಲುಗಳ ಹಿಂದೆ ಸಣ್ಣದ್ದೊಂದು ಗಲಾಟೆ ಶುರುವಾಗಿತ್ತು. ’ಎಂಥಾ ಹಲ್ಕಾ ಕೆಲಸ ಮಾಡಿದ್ದೀಯೇ ಬೇವರ್ಸಿ ಮುಂಡೆ. ಆಶಾಳ ಮದ್ವೆ ಬೇರೆ ಫಿಕ್ಸ್ ಆಗದೆ. ನಿಂಗಂತೂ ಆ ಭಾಗ್ಯ ಇಲ್ಲ. ನೀ ಮಾಡಿರೋ ಕೆಲ್ಸ ನಮ್ಮ ಬೀಗರಿಗೆ ಗೊತ್ತಾದ್ರೆ ಚೊಕ್ಕಾ. ಮದುವೇನೇ ನಿಲ್ಸಬಿಡ್ತಾರೆ. ಮನೆಯವ್ರ್ ಮರ್ಯಾದ ಬಗ್ಗೆಯಾದ್ರೂ ಕಾಳಜಿ ಬೇಡ್ವಾ ಥೂ ’ಎನ್ನುತ್ತ ಪಿಸುದನಿಯಲ್ಲಿಯೇ ಒದರುತ್ತಿದ್ದಳು ನಂಜಮ್ಮ. ’ಅಯ್ಯೋ ಬೋಳಿ , ನಿನ್ನಂಥವ್ಳ ತಂಗಿಯಾಗಿ ಹುಟ್ಟಿಬಿಟ್ನಲ್ಲ ನಾನು , ನನ್ನ ಹಣೆಬರಹಕ್ಕೆ ನಾನೇ ಚಪ್ಪಲಿ ತಗೊಂಡು ಹೊಡ್ಕೊಬೇಕು, ಎಲ್ಲಾದ್ರೂ ಹೋಗಿ ಸಾಯಿ ಹೋಗು’ಎನ್ನುತ್ತ ಆಶಾ ಕಿರುಚುತ್ತಿದ್ದಳು. ಯಾರಿಗೋ ಯಾರೋ ಗುದ್ದಿದ ಶಬ್ದ ಕೇಳಿ ನನ್ನಲ್ಲೊಂದು ಕೆಟ್ಟ ಕುತೂಹಲ ಜಾಗೃತವಾಗಿತ್ತು. ಒಂದು ಕ್ಷಣ ನಂಜಮ್ಮನ ಮನೆಯ ಬಾಗಿಲು ತಟ್ಟಿಯೇ ಬಿಡಲಾ ಎಂದುಕೊಂಡೆ. ಅಷ್ಟರಲ್ಲಿ ಅವರ ಮನೆಯ ಬಾಗಿಲಿನ ಚಿಲಕ ಬಿದ್ದ ಸದ್ದಾಯಿತು. ಏಕಾಏಕಿ ಹೊರಬಂದ ನಂಜಮ್ಮ ಅವರ ಮನೆಯ ಕಟ್ಟಿಗೆಯ ಗೇಟಿನ ಬಳಿ ನಿಂತಿದ್ದ ನನ್ನನ್ನು ನೋಡಿ ಕೊಂಚ ಅವಕ್ಕಾದಳು. ’ವೋ. ! ಎಂತಾ ಸತೀಶಪ್ಪ ಇಲ್ಲೆಂತಕ್ ನಿಂತಿದ್ದೆ’ಎಂದು ಕೇಳಿದಳು. ಅವಳಿಗಿಂತ ಮುಜುಗರದ ಪರಿಸ್ಥಿತಿಯಲ್ಲಿದ್ದವನು ನಾನು. ’ಹೆಹೆ ಎಂತದು ಇಲ್ಲ, ಸುಮ್ಮನೇ ಇಲ್ಲಿ ತೋಡಿನ ಹತ್ರ ಬಂದಿದ್ದೆ ’ಎಂದೆ. ಆಕೆಗೆ ನಾನು ಆಗಾಗ ಕಾಲುವೆಯ ಬಳಿ ಬರುವ ವಿಷಯ ತಿಳಿಯದ್ದೇನಲ್ಲ. ಹಾಗಾಗಿ ಒಮ್ಮೆ ಮುಗುಳ್ನಕ್ಕ ಆಕೆ ’ಹೌದಾ, ನಂಗೂ ಯಾರೋ ಬಂದಿದ್ದು ಗೊತ್ತಾಯಿತು. ಯಾರಿರಬೌದು ಅಂತ ಬಾಗಿಲು ತಗ್ದೆ ನೋಡು’ಎನ್ನುತ್ತ ಕೃತಕ ನಗೆ ನಕ್ಕಳು. ಆ ಕ್ಷಣಕ್ಕೆ ಹೇಗೆ ಸ್ಪಂದಿಸಬೇಕೆನ್ನುವುದು ಅರ್ಥವಾಗದೇ , ’ನಾನೂ ಹೊರಟೆ ಬಿಡು ಈಗ’ಎಂದು ಪ್ಯಾಲಿ ನಗೆ ನಕ್ಕು ಅಲ್ಲಿಂದ ಕಾಲ್ಕಿತ್ತಿದ್ದೆ. ನನ್ನ ಆಗಮನದಿಂದ ಅವರ ಜಗಳವೂ ಅರ್ಧಕ್ಕೆ ನಿಂತಿತ್ತು.
(ಮುಂದುವರೆಯುವುದು)