ಶಶಿ (ಕೊನೆಯ ಭಾಗ): ಗುರುರಾಜ ಕೊಡ್ಕಣಿ

gururaj-kodkani

ಇಲ್ಲಿಯವರೆಗೆ

ಮರುದಿನ ಬೆಂಗಳೂರಿಗೆ ತೆರಳಿದ ನನಗೆ ಒಂದು ಗಳಿಗೆಯೂ ಪುರುಸೊತ್ತು ಇಲ್ಲದಂತಾಗಿತ್ತು. ಕಂಪನಿಯ ವಾರ್ಷಿಕ ಸಮ್ಮೇಳನದ ಸಮಾರಂಭದಲ್ಲಿ ನನಗೆ ಬೆಸ್ಟ್ ರೆಪ್ರಸೆಂಟಿಟಿವ್ ಆಫ್ ದಿ ಇಯರ್’ ಪ್ರಶಸ್ತಿ ಬಂದಾಗ ನನ್ನ ಸಂತೋಷ ಹೇಳತೀರದು. ಕಂಪನಿಗೆ ಸೇರಿದ ಎರಡೇ ವರ್ಷಗಳಲ್ಲಿ ಇಂಥದ್ದೊಂದು ಪ್ರಶಸ್ತಿ ಪಡೆದುಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಆಗಿತ್ತು. ಪ್ರಶಸ್ತಿ ಫಲಕ , ಪ್ರಶಸ್ತಿಪತ್ರ ಸ್ವೀಕರಿಸಿ ಕಂಪನಿಯ ರೀಜನಲ್ ಮ್ಯಾನೇಜರಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ರಿಂಗಣಿಸಿದ ಫೋನಿನ ತೆರೆಯ ಮೇಲೆ ’ಅಮ್ಮ’ಎಂದು ತೋರಿಸುತ್ತಿತ್ತು. ತಕ್ಷಣ ಕರೆಯನ್ನು ಕಟ್ ಮಾಡಿ ’ಸಾರಿ ಸರ್’ಎನ್ನುತ್ತ ಪುನ: ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ಮತ್ತೆ ಪರದೆಯ ಮೇಲೆ ಅಮ್ಮ. ನನಗೆ ನಿಜಕ್ಕೂ ಕೋಪ ಬಂದಿತ್ತು. ಬೆಳಿಗ್ಗೆಯಷ್ಟೇ ಅಮ್ಮನಿಗೆ ಫೋನು ಮಾಡಿದ್ದೇನೆ. ಇವತ್ತು ಸಂಜೆ ಕಾರ್ಯಕ್ರಮ ಮುಗಿಸಿ ರಾತ್ರಿ ಹೊರಡುತ್ತೇನೆ ಎಂದಿದ್ದರೂ ಅಮ್ಮನದು ಇದೆಂಥಹ ಕಿರಿಕಿರಿ ಎಂದುಕೊಂಡೆ. ರೀಜನಲ್ ಮ್ಯಾನೆಜರಿನೆದುರು ಅಸಾಧ್ಯ ಮುಜುಗರ. ನನ್ನ ಪರಿಸ್ಥಿತಿ ಅವರಿಗೆ  ಅರ್ಥವಾಗಿರಬೇಕು. ’ಫೋನು ರೀಸಿವ್ ಮಾಡಿ ಪರವಾಗಿಲ್ಲ, ಮತ್ತೆ ಸೆಲ್ಫಿ ತಗೊಳ್ಳೋಣ’ಎಂದರು. ಪ್ಯಾಲಿಯಂತೆ ನಕ್ಕು ಪಕ್ಕಕ್ಕೆ ಬಂದು ಅಮ್ಮನ ನಂಬರ್ ಡಯಲ್ ಮಾಡುವಷ್ಟರಲ್ಲಿ ನನಗೆ ನಖಶಿಖಾಂತ ಕೋಪ. ’ಏಯ್ ಎಂತದೇ ಅಮ್ಮ, ಬೆಳಿಗ್ಗೆಯಷ್ಟೇ ಹೇಳಿದ್ದೆ ನಿಂಗೆ ಸಂಜೆ ಮೇಲೆ ಫೋನ್ ಮಾಡ್ಬೇಡ ಅಂತ. . ಎಂತಕ್ ಮೂರ್ಮೂರು ಸಲ ಫೋನು ಮಾಡ್ತೇ’ಎನ್ನುತ್ತ ದನಿಯೇರಿಸಿದೆ. ’ಸತೀಶಾ. . ಇಲ್ಲಿ ಹಿಂದೂ ಮುಸ್ಲಿಮ್ ಗಲಾಟೆ ಶುರುವಾಗಿದೆ ಮಗಾ, ಅದ್ಕೆ ಅರ್ಜೆಂಟಲ್ ಫೋನ್ ಮಾಡ್ದೆ. ಬೆಳಿಗ್ಗೆ ಬಂದು ಮುಟ್ಟಿದ ತಕ್ಷಣ ಪಪ್ಪಂಗೆ ಫೋನ್ ಮಾಡು. ಅದೆಂಥದ್ದೋ ಸೆಕ್ಷನ್ ಒನ್ ಪಾರ್ಟಿಫೋರ್ ಹಾಕಿದ್ದಾರಂತೆ ನೋಡು’ಎಂದರು ಅಮ್ಮ. ನೆತ್ತಿಗೇರಿದ್ದ ಪಿತ್ತವೆಲ್ಲ ಒಮ್ಮೇಲೆ ಧರೆಗಿಳಿದಂತಾಯಿತು. ನಮ್ಮೂರಿನಲ್ಲಿ ಕೋಮು ಗಲಭೆ ಎಂಬ ಪ್ರಶ್ನೆಯೇ ನನ್ನ ತರ್ಕಕ್ಕೆ ಮೀರಿದ್ದು. ನಾನು ಹುಟ್ಟಿದಾರಭ್ಯ ಒಂದು ಸಣ್ಣ ಗಲಾಟೆಯೂ ನಡೆಯದ ಊರು ಅದು. ಇದೇನಿದು ಏಕಾಏಕಿ ಹೀಗೆ ಎಂದುಕೊಳ್ಳುವಷ್ಟರಲ್ಲಿ, ’ನಮ್ಮ ಶಶಿ ಯಾರೋ ಸಾಬ್ರ ಹುಡುಗನ್ನ ಲವ್ ಮಾಡಿದ್ಲಂತೆ ಮಾರಾಯಾ, ಮೊನ್ನೆ ಸಂಜೆ ನಂಜಮ್ಮನತ್ರ ದೊಡ್ಡ ಜಗಳ ಮಾಡಿದ್ಲಂತೆ, ಮದುವೆ ಆದ್ರೆ ಅದ್ಯಾರೋ ಸಾದಿಕನನ್ನೇ ಮದುವೆ ಆಗ್ತೆ, ಇಲ್ಲಾಂದ್ರೆ ಹಾಂಗೆ ಸಾಯ್ತೆ ಅಂದಿದ್ಲಂತಪ್ಪ. ಈ ನಂಜಮ್ಮ ರಾತ್ರೋ ರಾತ್ರಿ ಸಾಯಿನಾಥ ಭಟ್ರ ಮನೆಗ್ ಹೋಗಿ ಎಲ್ಲ ವಿಷ್ಯ ಹೇಳಿದ್ಲಂತೆ  . ಸಾಯಿನಾಥ ಭಟ್ರು ಒಂದಷ್ಟ ಹುಡುಗ್ರನೆಲ್ಲ ಕರ್ಕೊಂಡ್ ಹೋಗಿ ಗಣಪತಿ ಭಟ್ರ ಅಂಗಡಿ ಹತ್ರ ಜೋರ ಗಲಾಟೆ ಮಾಡಿದ್ರಂತೆ. ಅಂಗಡಿ ಗಾಜಿಗೆಲ್ಲ ಕಲ್ಲ ಹೊಡ್ದರಂತೆ ಮಾರಾಯಾ. ಒಟ್ಟಾರೆ ಸುಮಾರ್ ದೊಡ್ಡ ಗಲಾಟೆಯೇ’ಎಂದ ಅಮ್ಮ, ’ಸರಿ ಬೇಗ ಬಾ, ಊರಿಗ್ ಬಂದುಕೂಡ್ಲೆ ಪಪ್ಪಂಗ ಫೋನ್ ಮಾಡು, ಅವರೇ ಬರ್ತಾರೆ ಕರ್ಕೊಂಡ್ ಹೋಗ್ಲಿಕ್ಕೆ’ಎಂದು ಫೋನು ಕಟ್ ಮಾಡಿದರು. ಅಮ್ಮನ ಮಾತುಗಳನ್ನು ಕೇಳಿದ ನನಗೆ ಹೃದಯ ಬಾಯಿಗೆ ಬಂದ ಅನುಭವ. ನನ್ನ ಹತ್ತಿರ ಮಾತನಾಡಿದ ಶಶಿ ಮನೆಗೆ ಹೋಗಿ ಜಗಳವಾಡಿಕೊಂಡಿದ್ದಾಳೆ ಎಂಬುದು ನನಗೆ ಅರಿವಾಗಿತ್ತು. ಮಗಳನ್ನು ಗದರಿಸಲಾಗದ ನಂಜಮ್ಮ  ಸಾಯಿನಾಥ ಭಟ್ಟರ ಬಳಿ ತೆರಳಿದ್ದಾಳೆ. ಸಾಯಿನಾಥ ಭಟ್ಟರು ಅಖಿಲ ಕರ್ನಾಟಕ ಹಿಂದೂ ವೇದಿಕೆಯ ಸದಸ್ಯರು. ನಮ್ಮೂರಿನ ಶಾಖೆಯ ಅಧ್ಯಕ್ಷರೂ ಅವರೇ. 

ನನ್ನ ಕೆಲಸ ಮುಗಿಸಿ ಬಸ್ಸು ಹತ್ತಿ ಕುಳಿತವನಿಗೆ ನಿದ್ರೆಯೇ ಬರಲಿಲ್ಲ. ಸಾಮಾನ್ಯವಾಗಿ ನನಗೆ ಬಸ್ಸಿನಲ್ಲಿ ನಿದ್ರೆ ಬಾರದು. ಅಂಥದ್ದರಲ್ಲಿ ಹೀಗೊಂದು ವಿಷಯ ಕೇಳಿದ ಮೇಲಂತೂ ನಿದ್ರೆ ದೂರವೇ ಉಳಿಯಿತು. ಸಾಯಿನಾಥ ಭಟ್ಟರು ಗಣಪತಿ ಭಟ್ಟರಿಗೆ ದಾಯಾದಿಗಳೇ ಆಗಬೇಕು. ಸಾಯಿನಾಥ ಭಟ್ಟರಿಗೆ ಸೇರಿರುವ ಅಡಿಕೆ ತೋಟವೊಂದರ ಮೇಲೆ ಗಣಪತಿ ಭಟ್ಟರು ಕೇಸು ಹಾಕಿದ್ದಾರೆ. ಸಾಯಿನಾಥ ಭಟ್ ಮತ್ತು ಗಣಪತಿ ಭಟ್ಟರ ಅಪ್ಪಂದಿರು ಒಟ್ಟಿಗೆ ಖರೀದಿಸಿರುವ ತೋಟ ಅದು. ಆದರೆ ಕೊನೆಗೆ ಅದನ್ನ ಪಾಲು ಮಾಡದೇ ಅಪ್ಪನಿಗೆ ಮೋಸ ಮಾಡಿ ಇಡೀ ತೋಟ ನುಂಗಿಬಿಟ್ಟರು ಸಾಯಿನಾಥ ಭಟ್ಟರ ಕುಟುಂಬದವರು ಎನ್ನುವುದು ಗಣಪತಿ ಭಟ್ಟರ ವಾದ. ಅದಕ್ಕೆ ಸಂಬಂಧಪಟ್ಟಂತೆ ಒಂದಷ್ಟು ರಸೀತಿಗಳು, ಏನೇನೋ ಬಾಂಡ್ ಪೇಪರುಗಳು ಅವರ ಬಳಿ ಇವೆ. ಅದನ್ನೇ ಸಾಕ್ಷಿಯೆನ್ನುವಂತೆ ಮೊಕದ್ದಮೆ ಹೂಡಿದ್ದಾರೆ ಗಣಪತಿ ಭಟ್ಟರು. ಸರಿಸುಮಾರು ಆರು ವರ್ಷಗಳಿಂದ ಇಬ್ಬರೂ ಭಟ್ಟಂದಿರು ಒಬ್ಬರ ಮೇಲೊಬ್ಬರು ಹಲ್ಲು ಮಸೆಯುತ್ತಿದ್ದಾರೆ . ಈಗ ಇಂಥದ್ದೊಂದು ಅವಕಾಶವನ್ನು ಸಾಯಿನಾಥ ಭಟ್ಟರು ಹೇಗೆ ಕಳೆದುಕೊಂಡಾರು ಎನ್ನಿಸಿತು. ಯಾರದ್ದೋ ಪ್ರೀತಿ, ಇನ್ಯಾರದ್ದೋ ಜಗಳ, ಮತ್ಯಾರದ್ದೋ ಸೇಡಿಗೆ ನನ್ನೂರಿನ ಶಾಂತಿ ಬಲಿಯಾಯಿತು ಎನ್ನಿಸಿತು. ತುಂಬ ವಿಚಾರ ಮಾಡಿದರೆ ತಲೆ ನೋಯಲಾರಂಭಿಸುತ್ತದೆನ್ನಿಸಿ ಒತ್ತಾಯಪೂರ್ವಕವಾಗಿ ಕಣ್ಣುಮುಚ್ಚಿದೆ. 

ಬಸ್ಸಿನ ಬಾಗಿಲನ್ನು ಸರಿಸಿ, ’ಯಾರ್ರೀ ದುಂಡಾಪುರಾ ಬನ್ನಿ ಬೇಗ ಬೇಗ’ಎಂಬ ಕಂಡಕ್ಟರನ ದನಿ ಕೇಳಿದಾಗಲೇ ನನಗೆ ಎಚ್ಚರವಾಗಿದ್ದು. ಪಕ್ಕನೇ ಎದ್ದು ಗಡಿಯಾರ ನೋಡಿಕೊಂಡೆ. ಆರುಗಂಟೆಯಾಗಿತ್ತು. ಅವಸರದಲ್ಲಿ ಸೀಟಿನಿಂದ ಎದ್ದು, ಮೇಲಿದ್ದ ಸೂಟಕೇಸನ್ನು ಎಳೆದುಕೊಂಡು, ’ಬಂದೆ ಬಂದೆ ’ಎಂದು ಅರೆಬರೆಯ ನಿದ್ರೆಯಲ್ಲಿಯೇ ತೂರಾಡುತ್ತ ಬಾಗಿಲ ಬಳಿ ತೆರಳಿದೆ. ಬಸ್ಸಿನಿಂದಿಳಿದರೆ ರಸ್ತೆಯಲ್ಲಿ ಲಾಠಿ ಹಿಡಿದು ನಿಂತಿದ್ದ ಒಂದಿಬ್ಬರು ಪೇದೆಗಳು ಕಾಣಿಸಿದರು. ಊರಿಗೆ ಊರೇ ಶಾಂತವಾಗಿದೆ ಎನ್ನಿಸಿತು. ಇಂಥಹ ಭೀಕರ ಶಾಂತತೆ ಕಾಣುವಷ್ಟು ದೊಡ್ಡ ಗಲಾಟೆಯಾಗಿದೆಯಾ ಎಂದುಕೊಳ್ಳುವಷ್ಟರಲ್ಲಿ ಅದಿನ್ನೂ ಬೆಳಗಿನ ಜಾವವೆಂಬುದು ನೆನಪಾಯಿತು. ಬೆಳಗು ಎಲ್ಲ ಊರುಗಳಲ್ಲಿಯೂ ಶಾಂತವಾಗಿಯೇ ಇರುತ್ತದೆ. ನನ್ನ ದಡ್ಡತನಕ್ಕೆ ನನ್ನೊಳಗೆ ನಕ್ಕು ಮನೆಯತ್ತ ನಡೆದೆ. ಮನೆಯ ಗೇಟು ತೆರೆಯುತ್ತಿದ್ದಂತೆ ಅಂಗಳವನ್ನು ಗುಡಿಸುತ್ತಿದ್ದ ಅಮ್ಮ ಕಾಣಿಸಿದರು. ಒಂದು ಕ್ಷಣ ನನ್ನತ್ತ ನೋಡಿದ ಅಮ್ಮ, ’ಅರೇ ಬೇಗ ಬಂದ್ಯಲೋ ಮಗಾ’ಎಂದು ಕೇಳಿ, ’ಕತ್ತೆ . . !ಬಂದ ಕೂಡ್ಲೆ ಪಪ್ಪನಿಗೆ ಫೋನ್ ಮಾಡು ಅಂತ ಹೇಳ್ಲಿಲ್ಲಾಗಿತ್ತು ನಿಂಗೆ’ಎಂದು ಬಯ್ದರು. ನನಗೆ ಮೂವತ್ತಾಗಿದ್ದರೂ ಮೂರು ವರ್ಷದ ಬಾಲಕನಂತೆ ಅಮ್ಮ ವರ್ತಿಸುವುದು ಹಳೆಯ ಸಂಗತಿಯೇ. ಅಮ್ಮನ ಮಾತುಗಳನ್ನು ನಿರ್ಲಕ್ಷಿಸಿ ಬೂಟು, ಸಾಕ್ಸುಗಳನ್ನು ದಿಕ್ಕಿಗೊಂದರಂತೆ ಬಿಸುಟು ಮನೆಯೊಳಗೆ ಹೋದೆ. ಮುಖ ತೊಳೆದು ಬಟ್ಟೆ ಬದಲಿಸುವಷ್ಟರಲ್ಲಿ ಅಡುಗೆ ಮನೆಯಲ್ಲಿ ದೋಸೆ ಹುಯ್ದ ಸದ್ದು. ಡೈನಿಂಗ್ ಟೇಬಲ್ಲಿನ ಮೇಲೆ ಕುಳಿತು ಒಂದರಹಿಂದೊಂದರಂತೆ ಬಿಸಿಬಿಸಿ ದೋಸೆಗಳನ್ನು ತಿನ್ನುತ್ತಿದ್ದರೆ ನನಗೆ ಶಶಿಯದ್ದೇ ಯೋಚನೆ. ಹೊಟ್ಟೆತುಂಬುವಷ್ಟು ದೋಸೆ ತಿಂದು ಬಿಸಿಬಿಸಿ ಚಹ ಕುಡಿದವನೇ ನನ್ನ ಕೋಣೆಗೆ ತೆರಳಿ ಮಲಗಿಬಿಟ್ಟೆ. 

ನಿದ್ರೆ ಕಳೆದು ಕಣ್ಣು ಸ್ವಚ್ಛವಾದರೆ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು. ಕಣ್ಣುಜ್ಜಿಕೊಳ್ಳುತ್ತ ಎದ್ದವನೇ ಸ್ನಾನ ಮಾಡಿಕೊಂಡು ಮನೆಯಿಂದ ಹೊರಗೆ ನಡೆದೆ. ’ಇವತ್ತೆಲ್ಲಿಗ್ ಹೋಗ್ತಿಯೋ ಸತಿ, ಮೊದ್ಲೆ ಊರಲೆಲ್ಲ ಗಲಾಟೆ ’ಎಂದು ರಾಗವೆಳೆದರು ಅಮ್ಮ. ’ನಮ್ಗೆಂತಾ ಗಲಾಟೆಯೇ ಅಮ್ಮ, ಊರಲ್ಲಿ ಎಲ್ಲರೂ ಪರಿಚಯ, ಯಾರ್ ಎಂತಾ ಮಾಡ್ತಾರೆ’ಎಂದು ನುಡಿದು ಗಣಪತಿ ಔಷಧಾಲಯದತ್ತ ತೆರಳಿದೆ. ಊರಿನಲ್ಲಿ ಬಹುತೇಕ ಅಂಗಡಿಗಳಿನ್ನೂ ತೆರದಿರಲಿಲ್ಲ. ಆದರೆ ಗಣೇಶ್ ಔಷಧಾಲಯ ತೆರೆದಿತ್ತು. ಅಪರೂಪಕ್ಕೆನ್ನುವಂತೆ ಒಳಗೆ ಕುಳಿತಿದ್ದವರು ಗಣಪತಿ ಭಟ್ಟರು. ಒಡೆದು ಚೂರಾಗಿ ಹೋಗಿದ್ದ ಅರ್ಧ ಗಾಜಿನ ಗೋಡೆಯಿಂದಲೇ ನನ್ನನ್ನು ನೋಡಿದ ಭಟ್ಟರು, ’ಏನೋ ಸತೀಶಾ ಇಷ್ಟು ದೂರ. . ? ಇವತ್ತೂ ನಿಂಗೆ ಡ್ಯೂಟಿ ಉಂಟೋ ಹೇಗೆ’ಎಂದು ಔಪಚಾರಿಕವಾಗಿ ನಕ್ಕರು. ’ಇಲ್ಲ ಭಟ್ರೆ, ಸುಮ್ನೆ ಬಂದೆ. ಎರ್ಡ್ ದಿನ ಬೆಂಗ್ಳೂರಿಗೆ ಹೋಗಿದ್ದೆ. ಬರೊವಷ್ಟರಲ್ಲಿ ಎಷ್ಟೆಲ್ಲ ಗಲಾಟೆ ಆಗಿದೆಯಲ್ಲ ಮಾರಾಯ್ರೆ’ಎಂದು ಕೇಳಿದರೆ ಭಟ್ಟರ ಮುಖ ಒಮ್ಮೆಲೇ ಗಂಭೀರವಾಯಿತು. ’ಸೂಳೆಮಗ ಸಾಯಿನಾಥ. . ! ಅಲ್ಲ ಮಾರಾಯಾ, ಆ ಹುಡುಗಿ  ಸಾದಿಕ್ ನ್ ಲವ್ ಮಾಡ್ಲಿಕ್ಕೂ ನನಗೂ ಎಂಥ ಸಂಬಂಧ ನೀನೇ ಹೇಳು. ನಾ ಎಂತಾರೂ ಲವ್ ಬ್ರೋಕರಾ. . ?  ಅಷ್ಟೂ ಗೊತ್ತಾಗುದಿಲ್ವ ಸಾಯಿನಾಥನಿಗೆ. . ? ಗೊತ್ತಾಗದೇ ಏನು, ಎಲ್ಲ ಗೊತ್ತಾಗ್ತದೆ. ಆ ಬೋಳಿಮಗ ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ಇದೆಲ್ಲ ಬೇಕಂತ್ಲೇ ಮಾಡಿರುದು, ನಂಗೆಲ್ಲ ಗೊತ್ತುಂಟು’ಎಂದು ಸಾಯಿನಾಥರನ್ನು ಬಾಯಿಗೆ ಬಂದ ಹಾಗೆ ಬಯ್ದರು ಗಣಪತಿ ಭಟ್ಟರು. ನನಗೆ ಅವರ ವಿವರಣೆಗಳು ಬೇಕಿರಲಿಲ್ಲ. ’ಎಲ್ಲಿ ಭಟ್ರೆ. . ಇಬ್ಬರನ್ನೂ ಕೆಲಸ ಬಿಡ್ಸಿ ಓಡ್ಸಿ ಬಿಟ್ರಾ ಎಂತಾ ಕತೆ’ಎಂದು ಕೇಳಿದವನಿಗೆ ಭಟ್ಟರ ಉತ್ತರ ಕೇಳುವ ಅವಸರ. ’ಹೋಗಾ ಮಾರಾಯಾ ಪಾಪ. . . ! ಅವರನ್ನ ಎಂತಕ್ ಓಡ್ಸಬೇಕು ಹೇಳು ನೋಡ್ವಾ. . ಅವಳ್ನಂತೂ ಯಾರೂ ಮದುವೆ ಆಗುದಿಲ್ಲ. ಅವನ ಹಣೆಬರಾನೂ ಅಷ್ಟೇ ಇರ್ಬೇಕು. ಇಬ್ಬರೂ ಮದುವೆ ಮಾಡ್ಕೊಂಡ್ರ ನಂಗ ಎಂತಾ ತ್ರಾಸು, ಈ ಬೋಳಿಮಕ್ಳಿಗೆ ಎಂತಾ ತ್ರಾಸು’ಎಂದ ಭಟ್ಟರು ಸುಣ್ಣ ಅಡಿಕೆ ಸೇರಿಸಿದ ವಿಳ್ಯದೆಲೆಯನ್ನು ತಮ್ಮ ಬಾಯಿಗೆ ತುಂಬಿದರು. ’ಇವತ್ತು ಇಬ್ರೂ ಬರ್ಲಿಲ್ಲಪ್ಪ. ಅವನಿಗ್ ಸಮಾ ಹೊಡ್ದಿದ್ದಾರೆ ಅಂತ ಕೇಳ್ದೆ. ನಾನು ನಿನ್ನೇನೆ ಸಾಯಿನಾಥನ ಮೇಲೆ ಕಂಪ್ಲೆಂಟ್ ಕೊಟ್ಟ ಬಂದಿದ್ದೆ. ಶಶಿದ್ ಎಂತಾ ಕತೆಯೋ ಗೊತ್ತಿಲ್ಲ’ಎಂದ ಭಟ್ಟರು ಸುಮ್ಮನಾದರು. ಇಷ್ಟು ಗೊತ್ತಾದ ಮೇಲೆ ನಾನು ’ಸರಿ ಭಟ್ರೆ ಬರ್ತೆ’ಎನ್ನುತ್ತ ಮನೆಯತ್ತ ವಾಪಸ್ಸು ಮರಳಿದೆ. 

ಸಂಜೆಯವರೆಗೂ ಕಾಯ್ದ ನನ್ನ ಸಹನೆಯೇ ಮುಗಿದು ಹೋದಂತಾಗಿತ್ತು. ಸಂಜೆಗತ್ತಲಲ್ಲಿ ಮಸೀದಿಯ ಪಕ್ಕದ ಬೀದಿಯಲ್ಲೇ ಮೊದಲ ಮನೆಯಾಗಿದ್ದ ಸಾದಿಕ್ ನ ಮನೆಗೆ ಹೋದರೆ ಅವರ ಮನೆಯ ಬಾಗಿಲು ಮುಚ್ಚಿಕೊಂಡಿತ್ತು. ನಿಧಾನಕ್ಕೆ ಬಾಗಿಲು ತೆರೆದರೇ, ’ಯಾರು’ಎನ್ನುವ ಪ್ರಶ್ನೆ ಅವರಮ್ಮನದು. ’ನಾನಮ್ಮ ಸತೀಶಾ ’ಎಂದೆ. ’ಯಾವ ಸತೀಶಾ’ಎಂಬ ಮರುಪ್ರಶ್ನೆ. ಪೋಸ್ಟ್ ಮಾಸ್ಟರ್ ಮಧು ನಾಯ್ಕರ ಮಗ ’ಎಂದರೆ ಮೆಲ್ಲಗೆ ಬಾಗಿಲು ತೆರೆದಳು ಮುದುಕಿ. ಅರೆತೆರೆದ ಬಾಗಿಲಿನಡಿಯಲ್ಲಿಯೇ ನನ್ನನ್ನೊಮ್ಮೆ ಕೂಲಂಕಶವಾಗಿ ಪರೀಕ್ಷಿಸಿದ ಆಕೆ ’ಬಾಪ್ಪ ಸತೀಶಾ ಒಳಗೆ’ಎಂದು ಕರೆದಳು. ನಾನು ಮನೆಯನ್ನು ಪ್ರವೇಶಿಸಿದ ಮರುಕ್ಷಣವೇ ಬಾಗಿಲು ಜಡಿದಳು. ತುಂಬ ಚಿಕ್ಕ ಮನೆಯದು. ಎರಡೇ ಕೋಣೆ. ಒಂದು ಪಡಸಾಲೆಯಾದರೆ ಇನ್ನೊಂದು ಅಡುಗೆ ಮನೆ. ಅಡುಗೆ ಮನೆಗೆ ಅಂಟಿಕೊಂಡಿದ್ದ ಸಣ್ಣದ್ದೊಂದು ಬಚ್ಚಲು ಎಲ್ಲವೂ ನನಗೆ ಕಾಣಿಸಿದವು. ಅಲ್ಲಿಯೇ ಇದ್ದ ಹೊಲಿಗೆ ಮಶೀನಿನ ಮುಂದಿದ್ದ ಸಣ್ಣದ್ದೊಂದು ಸ್ಟೂಲಿನ ಮೇಲೆಲ್ಲ ಬಿದ್ದಿದ್ದ ಬಣ್ಣಬಣ್ಣದ ಬಟ್ಟೆಯ ಚೂರುಗಳನ್ನು ಸರಿಸಿ ಕುಳಿತುಕೊಂಡೆ. ನನ್ನ ಊಹೆಗೂ ಮೀರಿ ಹೊಡೆದಿದ್ದರು ಸಾದಿಕನನ್ನು. ಅವನ ಮುಖ ಊದಿಕೊಂಡಿತ್ತು. ತಲೆಗೆ ದೊಡ್ಡದಾದ ಬ್ಯಾಂಡೇಜು ಸುತ್ತಲಾಗಿತ್ತು. ತಿಂದ ಏಟಿನ ನೋವಿಗೆ ಜ್ವರ ಬಂದು ಮಲಗಿದ್ದವನಿಗೆ ನಾನು ಬಂದಿದ್ದರ ಅರಿವಿರಲಿಲ್ಲ. ’ಹ್ಯಾಂಗ್  ಹೊಡ್ದೆದಿದ್ದಾರೆ ನೋಡೋ ಸತೀಶಾ ನನ್ನ ಮಗ್ನಿಗೆ. ಮೈ ತುಂಬ ಗಾಯ. ಎಂತಾ ಮಾಡ್ದಾ ಅಂತ ಹೊಡ್ದ್ರು. ಒಂದ್ ಮಾತ್ ನನಗೆ ಹೇಳಿದ್ರೂ ಆ ಹಲ್ಕಟ್ ಹುಡುಗಿಯಿಂದ ದೂರ ಇರು ಅಂತ ನಾನೇ ಹೇಳ್ತಿದ್ದೆ’ಎಂದ ಸಾದಿಕ್ ನ ಅಮ್ಮನ ಮಾತುಗಳಲ್ಲಿ ಶಶಿಯ ಕುರಿತಾಗಿ ಕೋಪವೊಂದು ಎದ್ದುಕಾಣುತ್ತಿತ್ತು. ಸಾದಿಕನಿಗೆ ಸಹಾಯ ಮಾಡುವವರು ಅವನ ಸಮುದಾಯದಲ್ಲಿ ಯಾರೂ ಇರಲಿಲ್ಲ. ಆತ ಮುಸ್ಲಿಮನೇ ಅಲ್ಲ ಎಂದು ನಿರ್ಧರಿಸಿದ್ದ ಕೆಲವು ಹಿರಿಯರಿಗಂತೂ ಅವನ ಮೇಲಾದ ಹಲ್ಲೆ ಸಂತೋಷವನ್ನೇ ಉಂಟುಮಾಡಿತ್ತು. ಹಾಗಾಗಿ ಸಾದಿಕ್ ಮತ್ತವನ ಅಮ್ಮ ತೀರ ಏಕಾಂಗಿಯಾಗಿ ಹೋಗಿದ್ದರು. ಶಶಿಯನ್ನು ಒಂದೇ ಸಮನೆ ವಾಚಾಮಗೋಚರವಾಗಿ ಆಕೆ ಬಯ್ಯುತ್ತಿದ್ದರೆ ಶಶಿಯ ಕುರಿತಾಗಿಯೇ ಮಾತನಾಡಲು ಬಂದ ನನ್ನ ಬಾಯಿ ಕಟ್ಟಿಹೋಗಿತ್ತು. ಒಂದೆರಡು ಔಪಚಾರಿಕ ಮಾತುಗಳ ನಂತರ ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಬಂದೆ. ನೇರವಾಗಿ ಶಶಿಯ ಮನೆಯತ್ತ ತೆರಳುತ್ತಿದ್ದವನಿಗೆ ಮಾರ್ಗ ಮಧ್ಯದಲ್ಲಿ ಕೊಂಚ ಧೈರ್ಯ ಉಡುಗಿದಂತಾಗಿ ಪುನ: ನನ್ನ ಮನೆಯತ್ತ ನಡೆದೆ. 

ಎರಡು ದಿನಗಳ ನಂತರ ಗಣೇಶ ಔಷಧಾಲಯದಲ್ಲಿ ಕಂಡಿದ್ದಳು ಶಶಿ. ಆಕೆಯನ್ನ ಕಂಡ ನನಗೇನೋ ಸಮಾಧಾನ. ಕೊಂಚ ಅಳುಕುತ್ತಲೇ ’ಎಂತದೇ ಶಶಿ ಹ್ಯಾಗಿದ್ದಿ ಈಗ’ಎಂದರೆ ನನ್ನನ್ನೇ ದಿಟ್ಟಿಸಿದಳು ಶಶಿ. ಕಣ್ಣಿನ ಸುತ್ತೆಲ್ಲ ದಡ್ಡವಾಗಿದ್ದ ಕಪ್ಪುವರ್ತುಲ ಆಕೆ ತುಂಬ ಅತ್ತಿದ್ದರ ಸಾಕ್ಷಿಯಾಗಿತ್ತು. ಅಂಥದ್ದೊಂದು ಪರಿಸ್ಥಿತಿಯಲ್ಲಿ ಆಕೆಯನ್ನು ಕಂಡ ನನಗೆ ಕರುಳು ಕಿತ್ತು ಬಂದಂತಾಯ್ತು. ’ಸಾರಿ ಮಾರಾಯ್ತಿ, ನಾ ಮಾತಾಡು ಮೊದ್ಲೇ ನೀನೇ ಎಂತೆಂಥದ್ದೋ ಮಾಡ್ಕಂಡೆ, ನಾ ಆರು ಎಂತ ಮಾಡುದ್ ಹೇಳು’ಎಂದರೆ ಶಶಿಯದ್ದು ಭಾವಹೀನ ಮುಖಚರ್ಯೆ. ಒಂದರೆಕ್ಷಣ ಮೌನವಾಗಿದ್ದ ಅವಳು, ’ಬಿಡು ಸತೀಶಾ ನನ್ನ ಹಣೆಬರಕ್ಕೆ ಯಾರ್ ಏನ್ ಮಾಡ್ಲಿಕ್ಕಾಗ್ತದೆ, ಸಾದಿಕ್ ಅಮ್ಮನ ಜೊತೆಗೆ ನಿನ್ನೆ ಬೆಳಿಗ್ಗೇನೆ ಎಲ್ಲೋ ಹೋದ್ನಂತೆ. ಲವ ಜಿಹಾದ್ ಮಾಡ್ತಿಯೇನಾ ಭೋಸುಡಿಕೆ , ಮೊದ್ಲ್ ಈ ಊರ್ ಬಿಟ್ಟ್ ಹೋಗು, ಇಲ್ಲೆ ಇದ್ರೆ ಕೊಂದೇ ಹಾಕ್ತೇವೆ ಅಂತ ಹೇಳಿದ್ರಂತೆ. ಪಾಪ ಅವನಾದ್ರೂ ಎಂತ ಮಾಡ್ತಾ, ಮೊದಲೇ ಹೆದ್ರಪುಕ್ಕಾ ಅದು’ಎಂದಳು. ನನಗೆ ಸಿಡಿಲು ಬಡಿದ ಅನುಭವ. ’ಏಯ್ ಎಂತಾ ಹೇಳ್ತಿಯೇ. . ’ಎಂದವನಿಗೆ ಅವಳ ಮಾತಿನಲ್ಲಿ ಅಪನಂಬಿಕೆ. ’ನಿಜ ಸತೀಶಾ, ಸಾಯಿನಾಥ ಭಟ್ರ ಹುಡ್ಗ್ರು ನಿನ್ನೆ ಹೆದರಿಸಿದ್ರಂತೆ. ಅವನು ಎಲ್ಲಿಗ್ ಹೋದಾ ಅಂತ ಯಾರಿಗೂ ಗೊತ್ತಿಲ್ಲ. ನಿನ್ನೆ ಸಂಜೆ ಹುಬ್ಳಿಗೆ ಅವನ ಮಾವನ ಮನೆಗೂ ನಮ್ಮ  ಭಟ್ರು ಫೋನ್ ಮಾಡಿದ್ರು. ಅವ್ನ್ ಮಾವನ್ ಮನೆಯವರಿಗೂ  ಅವನೆಲ್ಲಿಗೆ ಹೋದ ಅಂತ ಗೊತ್ತಿಲ್ಲಂತೆ, ಅಲ್ಲಿಗಂತೂ ಹೋಗ್ಲಿಲ್ಲಾ ಅಂವ’ಎಂದ ಶಶಿಯ ಕಣ್ನಂಚಿನಲ್ಲಿ ನಿಜಕ್ಕೂ ನೀರು ಕಂಡಿತೋ ಅಥವಾ ನನ್ನ ಊಹೆಯೋ ಎನ್ನುವುದನ್ನು ನಾನು ಕಂಡುಕೊಳ್ಳಲಾರದೆ ಹೋದೆ. ’ಛೇ ಎಂತಾ ಹೇಡಿ ಮಾರಾಯ್ತಿ ಅಂವ. ಅಷ್ಟು ಧೈರ್ಯ ಇಲ್ದೆ ಹೋದ್ರೆ ಎಂತಕ್ ಪ್ರೀತಿ ಮಾಡ್ಬೇಕಿತ್ತು ’ಎಂದುಕೋಪದಿಂದ ಸಿನಿಮೀಯವಾಗಿ  ನುಡಿದೆನಾದರೂ ಸಾದಿಕ್ ತುಂಬ ಪುಕ್ಕ ಎನ್ನುವುದು ನನಗೆ ಗೊತ್ತಿರದ ವಿಷಯವೇನಲ್ಲ. ’ಬಿಡು ಸತೀಶಾ, ಎಲ್ಲಾ ನನ್ನ ಹಣೆಬರಾ. ಕೆಲವ್ರ್ ಶಾಪಗ್ರಸ್ಥ ಗಂಧರ್ವರಿರ್ತಾರಂತಲ್ಲ , ನಾ ಹಾಗೇ ಇರ್ಬೇಕು. ಜೀವನದಲ್ಲ್ ಎಂತಾ ಕೇಳಿದ್ರೂ ನಂಗೆ ಸಿಕ್ಕುದಿಲ್ಲ. ಬರೀ ನಿರಾಸೆ, ನಿರಾಸೆ. ನಾನೂ ಸಹ ಶಾಪಗ್ರಸ್ಥೆಯೇ ಇರಬೇಕು. ಆದ್ರ ನನ್ನ ರೂಪ ನೋಡಿದ್ರೆ ನಾನು ಗಂಧರ್ವ ಅಂತೂ ಇರ್ಲಿಕ್ಕಿಲ್ಲ , ಶಾಪಗ್ರಸ್ಥ ದೆವ್ವ ಇರ್ಬೇಕು’ಎನ್ನುತ್ತ ದೆವ್ವದಂತೆಯೇ ವಿಕಾರವಾಗಿ ನಕ್ಕು ತಮಾಷೆ ಮಾಡಿದ್ದಳು ಶಶಿ. ಅವಳ ವಿಕಾರ ನಗುವಿನ ಹಿಂದಿನ ನೋವು ನನ್ನನ್ನು ಇರಿದಂತಾಗಿತ್ತು. ನನಗಿನ್ನೂ ಮಾತನಾಡುವುದು ಕಷ್ಟವೆನ್ನಿಸಿ ಏನೊಂದು ನುಡಿಯದೇ ಅಲ್ಲಿಂದ ಹೊರಟುಬಂದಿದ್ದೆ. 

ನಾನು ಶಶಿಯ ಮನೆ ಗೇಟು ತಲುಪುವಷ್ಟರಲ್ಲಿ ನೆರೆಹೊರೆಯವರು, ನಂಜಮ್ಮನ ಸಂಬಂಧಿಗಳೆಲ್ಲರೂ ಅಲ್ಲಿ ನೆರೆದಿದ್ದರು. ಮನೆಯ ಜಗುಲಿಯ ಮೇಲೆ ಶಶಿಯನ್ನು ಮಲಗಿಸಲಾಗಿತ್ತು. ಪಟ್ಟಾಪಟ್ಟಿ ಚಡ್ಡಿ , ಮೇಲೊಂದು ಬನಿಯನ್ ಧರಿಸಿದ್ದ ಫಕೀರಪ್ಪ ಮೂಲೆಯೊಂದರಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಜಗುಲಿಗೆ ಆಧಾರವಾಗಿದ್ದ ಕಂಭಕ್ಕೆ ಒರಗಿ ನಿಂತಿದ್ದ ಆಶಾಳದ್ದು ಭಾವಾತೀತ ಮುಖ. ಶವದೆದುರು ಕುಳಿತಿದ್ದ ನಂಜಮ್ಮ ಸೆರಗಿನಿಂದ ಬಾಯಿಮುಚ್ಚಿಕೊಂಡು ಬಿಕ್ಕುತ್ತಿದ್ದಳು. ನಾನು ಕಟ್ಟಿಗೆ ಗೇಟು ಆದಷ್ಟು ನಿಧಾನವಾಗಿ ಸರಿಸಿದರೂ ಅದರಿಂದಾದ ಶಬ್ದಕ್ಕೆ ಪಕ್ಕನೇ ತಲೆಯೆತ್ತಿ ನೋಡಿದಳು ನಂಜಮ್ಮ. ನನ್ನನ್ನು ನೋಡುತ್ತಲೇ ಆಕೆಯ ದು:ಖ ಹೆಚ್ಚಿದಂತಾಯಿತು. ಒಮ್ಮೆಲೇ ಜೋರಾಗಿ ಅಳಲಾರಂಭಿಸಿದ ಆಕೆ, ’ನೋಡು ಸತೀಸಪ್ಪ ಎಂತಾ ಮಾಡ್ಕೊಂಡಿದ್ದಾಳೆ. ಮುಸ್ಲಿಂ ಹುಡ್ಗಾ ಬೇಡಾ  ಮಾರಾಯ್ತಿ, ನಾನೇ ಒಳ್ಳೇ ಹುಡ್ಗಾ ನೋಡ್ತೇ ನಿಂಗೆ ಅಂದ್ರೆ ಕೇಳ್ಲೇ ಇಲ್ಲ. ಅದಕ್ಕೆ ಒಂದೆರಡ್ ಹೊಡ್ದೆ. ಹುಡುಗಿ ದಾರಿ ತಪ್ಪಿದ್ರೇ ಒಂಚೂರು ಬುದ್ದಿ ಹೇಳುದೂ ತಪ್ಪಾ ಹಂಗಾರೆ’ಎನ್ನುತ್ತಲೇ ಅವಳ ಅಳು ತಾರಕ್ಕಕ್ಕೇರಿತು. ನನಗವಳ ವಿವರಣೆಯಾಗಲಿ, ಸ್ಪಷ್ಟನೆಯಾಗಲಿ ಬೇಕಿರಲಿಲ್ಲ. ನಿಧಾನವಾಗಿ ಶಶಿಯ ಶವದತ್ತ ತೆರಳಿದೆ. ಹರುಕು ಚಾಪೆಯೊಂದರ ಮೇಲೆ ಮಲಗಿದ್ದ ಅವಳೆದೆಯವರೆಗೆ  ಕೊಳಕು ಬಟ್ಟೆಯೊಂದನ್ನು ಹಾಸಲಾಗಿತ್ತು. ಶಾಂತವಾಗಿದ್ದ ಮುಖ. ತಲೆಯ ಕೂದಲುಗಳ ನಡುವೆ ಅಲ್ಲಲ್ಲಿ ಸಿಕ್ಕಿಬಿದ್ದಿದ್ದ ಒಣಗಿದ ಮಲ್ಲಿಗೆ ಹೂವಿನ ಚೂರುಗಳು. ಹಣೆಯ ಮೇಲಿಂದ ಒರೆಸಿ ಹೋಗಿರಬಹುದಾದ ಕುಂಕುಮದ ಪಳೆಯುಳಿಕೆಗಳು. ಸುಮ್ಮನೇ ಎಲ್ಲವನ್ನೂ  ನೋಡುತ್ತ ನಿಂತ ನನ್ನ  ಕಣ್ಗಳಲ್ಲಿ ನೀರು ಸಹ ಬರಲಿಲ್ಲ. ಅವಳ ಕೈಗಳನ್ನು ಸ್ಪರ್ಶಿಸುವ ಒಂದು ಆಸೆಯನ್ನು ತುಂಬ ಕಷ್ಟಪಟ್ಟು ತಡೆದುಕೊಂಡಿದ್ದೆ. ’ಎಂತ ಹುಡುಗಿಯಪ್ಪ, ಯಾರಾದ್ರೂ ಇಷ್ಟ್ ಸಣ್ಣ ವಿಷಯಕ್ ಸುಸೈಡ್ ಮಾಡ್ಕಳ್ತ್ರಾ ಮಾರಾಯ್ತಿ’ಎಂದು ಪಿಸುನುಡಿದವರು ಯಾರೆಂಬುದು ತಿಳಿಯಲಿಲ್ಲ. ’ಎಂತೋ ಪೋಲಿಸ ಕೇಸ್ ಆಗತ್ತಂತಪ್ಪ, ಯಾರೋ ಪೋಲಿಸಿಗೆ ಇದು ಕೊಲೆ ಅಂತ ಕಂಪ್ಲೆಂಟ್ ಕೊಟ್ಟುಬಿಟ್ಟಿದ್ದಾರೆ ಅಂತ್ ಸುದ್ದಿಯಪ್ಪ’ಎಂದು ಸಣ್ಣಗೆ ನುಡಿದವರು ನಮ್ಮ ಸದಾನಂದನ  ಅಮ್ಮ ಸಾವಿತ್ರಿ ಆಂಟಿ. ನನಗೆ ಅಲ್ಲಿ  ತುಂಬ ಹೊತ್ತು ನಿಲ್ಲಲಾಗಲಿಲ್ಲ. ’ಇಂಥಾ ಮಕ್ಳ ಇದ್ರೆಷ್ಟು ಹೋದ್ರೆಷ್ಟು, ಬದುಕಿದ್ದಾಗ ಅವಳ ಮದುವೆಗೆ ಎಷ್ಟೆಷ್ಟ ಕಷ್ಟಪಟ್ರು ಮದುವೆ ಆಗ್ಲಿಲ್ಲ ಇವ್ಳಿಗೆ , ಈಗ ಸತ್ತಮೇಲೆ ಪೋಲಿಸು , ಕಂಪ್ಲೆಂಟು ಅಂತೆಲ್ಲ ಓಡಾಟ. ಪಾಪ. . ! ಈ ವಯಸ್ಸಲ್ಲಿ ಆಗುದ್ ಹೌದಾ ಫಕೀರಪ್ಪನತ್ರ ಇದೆಲ್ಲ. ಒಟ್ಟಲ್ಲಿ ಬದುಕಿದ್ದಾಗಲೂ ಸುಖ ಕೊಡ್ಲಿಲ್ಲ, ಸತ್ತ ಮೇಲೂ ಕಷ್ಟಕೊಟ್ಲು ಹುಡುಗಿ’ಎಂಬ ಮಾತುಗಳು ಗೇಟು ದಾಟುತ್ತಿದ್ದ ನನ್ನ ಕಿವಿಗೆ ಬಿದ್ದವು. ನನ್ನ ಮನಸ್ಸಿನ ತುಂಬೆಲ್ಲ ವಿಷಾದವನ್ನು ಮೀರಿದ ಭಾವಹೀನ ಶೂನ್ಯ. ಗೇಟು ದಾಟಿ ನಾನು ಬೀದಿಗೆ ಬರುವಷ್ಟರಲ್ಲಿ ಮನೆ ಬಾಗಿಲಿಗೆ ಪೋಲಿಸ್ ಜೀಪು ಬಂದು ನಿಂತಿತು. ಜೀಪು ನಿಂತ ಸದ್ದಿಗೆ ಬೆದರಿದ ಬೀದಿನಾಯಿಗಳು ಒಮ್ಮೆಲ್ಲೇ ಜೋರಾಗಿ ಬೊಗಳಲಾರಂಭಿಸಿದವು. 

ಮುಗಿಯಿತು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x