ಮುಸ್ಸಂಜೆಯ ಸೂರ್ಯನ ಅಂತಿಮ ಹೊತ್ತು, ಕೆಂಪು ಕಿರಣ ಮೊಗದಲ್ಲಿ ಬೀಳುತ್ತಿರಲು, ಬೇಡವೆಂದರೂ ಕಂಗಳು ಮುಚ್ಚಿದವು. ಅದೇ ತಾಮುಂದು ತಾಮುಂದೆ ಎಂದು ಓಡಿ ಬರುತ್ತಿರುವ ಅಲೆಗಳು. ಸಮುದ್ರದಂಡೆಯ ಮೇಲೊಂದು ಪುಟ್ಟ ಸ್ವರ್ಗಲೋಕ.. ಹಕ್ಕಿಗಳ ಇಂಚರಕ್ಕೆ ಧ್ವನಿಯಾಗುವ ಹೃದಯಗೀತೆ. ಕನಸುಗಳನೆಲ್ಲ ಬಿಚ್ಚಿ ಹರವಿ ಹಾಕಿಕೊಂಡ ಕಂಗಳಿಗೆ ನಕ್ಷತ್ರದಂತಹ ಹೊಳಪು. ಯೌವನದ ಬೆಚ್ಚಗಿನ ಕನಸುಗಳು. ತಂಪು ತಂಗಾಳಿ ಮಿಶ್ರಿತ ಆ ಇಳಿಸಂಜೆಯಲ್ಲಿ ತುಸು ಬೆಳಕು ಕಂಡಂತೆ ಮತ್ತಷ್ಟು ಸೊಗಸು. ಸಿಹಿತನದಲ್ಲಿ ಬೊಂಬಾಯಿ ಮಿಠಾಯಿ ಮಾರುವವನ ಗಾಡಿಯ ಗಂಟೆಯ ಸದ್ದು… ಇತ್ತ ಇನ್ನೊಂದು ಕಡೆಗೆ ಬೇಡವೆಂದರೂ ಒತ್ತಾಯ ಮಾಡಿ ತೊಗೊಳ್ಳಿ ಅಂತ ಹೇಳ್ತಾ ಇರೋ ಪಾಪ್‌ಕಾರ್ನ್ ಅಂಗಡಿಯವನು… ಹಿರಿಯ ಜೀವಗಳು ಯಾರಿಗೂ ಡಿಸ್ಟರ್ಬ್ ಮಾಡದಂತೆ ವಾಕಿಂಗ್ ಬರುವವರು. ಇಷೆಲ್ಲ ಸೊಗಸುಗಳಿದ್ದರೂ ಯಾಕೋ ಎಲ್ಲವೂ ಇದ್ದು ಇನ್ನೇನನ್ನೋ ಬೇಕೆಂದು ಮನಸ್ಸು ಬಯಸುತ್ತಿತ್ತು. ಜೊತೆಗೆಂದು ಹೋದ ಸ್ನೇಹಿತೆಯರೆಲ್ಲ ಸಮುದ್ರದಲ್ಲಿ ಆಟವಾಡುತ್ತಿದ್ದರೆ ನಾ ಮಾತ್ರ ನನ್ನದೇ ಲೋಕದಲ್ಲಿ… ಅಲೆಗಳ ಸೌಂದರ್ಯವನ್ನು ನೋಡುತ್ತ ಕುಳಿತಿದ್ದೆ. ಅವರೆಲ್ಲ ಹಾರುವುದು, ಕುಣಿಯುವುದು, ಸಮುದ್ರದ ನೀರನ್ನು ಸೋಕಿಕೊಳ್ಳುವುದು ಎಂದು ಅವರ ಪ್ರಪಂಚದಲ್ಲಿ. ಎತ್ತರದಲ್ಲಿ ಹಾರುತ್ತಿರುವ ಪ್ಯಾರಾಚೂಟ್ ನೋಡಿ ಒಮ್ಮೆಲೇ ಖುಷಿಪಟ್ಟೆ. ಯಾಕೋ ಏನೋ ಆ ಸಮುದ್ರದದಂಡೆಯ ಮೇಲೆ ಕುಳಿತಿರುವಾಗ ನನಗೂ ಒಂದು ಪ್ರೀತಿಸುವ ಜೀವ ಬೇಕೆಂದು ಎನಿಸಿತ್ತು…
ಮನದ ಭಾವಗಳಿಗೆ ಬಣ್ಣ ತುಂಬುವವನು ಎಂದು ಬರುವನೆಂದು ಮನಸ್ಸು ಹಾತೊರೆಯುತ್ತಿತ್ತು. ಎತ್ತರದಲ್ಲಿ ಹಾರುತ್ತಿದ್ದ ಪ್ಯಾರಾಚೂಟ್‍ನಲ್ಲಿ ಅವನ ಜೊತೆ ಕುಳಿತು, ಜಗತ್ತನ್ನು ನೋಡಿದರೆ ಎಂತಹ ಸೊಗಸಿರಬಹುದೆಂಬ ಕಲ್ಪನೆ… ಸಮುದ್ರದ ಮಧ್ಯದಲ್ಲಿ ಬೋಟಿಂಗ್ ಮಾಡುತ್ತ ಹೆದರಿ ಅವನ ಕೈ ಹಿಡಿದು ಕುಳಿತಿದ್ದರೆ ಎಲ್ಲ ಹೆದರಿಕೆಯೂ ಮಾಯವಾಗಬಹುದೆನೋ. ಸಮುದ್ರದಂಡೆಯ ಮೇಲೆ ಜೀವನದಲ್ಲಿ ಪ್ರೀತಿಸುವವನು ಸಿಕ್ಕಿದ ಮೇಲೆ ಕೆಲವೊಂದು ಹೊತ್ತು ಅವನಡೆ ಭಾವಗಳನು ಹಂಚಿಕೊಳ್ಳಬೇಕೆಂಬ ಚಿಕ್ಕ ಆಸೆ ನಂದು. ಒಂಟಿತಾಣದಲ್ಲಿ ಮನಸ್ಸು ಹಗುರವಾಗಿರುವುದು ಬೇಡ. ಪ್ರೀತಿಯಿಂದ ತುಂಬಿ ತುಳುಕುತ್ತಿದ್ದರೆ ಸಾಕು… ಮುಂದೆಎಂದೋ ಬರುವವನ ಬಗೆಗೆ ಇಂದೇ ಕನಸನ್ನು ನೇಯ್ದು ಬಚ್ಚಿಟ್ಟಿದ್ದೇನೆ. ನಿರೀಕ್ಷೆಗಿಂತಲೂ ಬದುಕು, ಪ್ರೀತಿ, ವಿಶ್ವಾಸಗಳು ಸುಂದರವಾಗಿರಬೇಕೆಂದು. ಅದೇ ಸಮುದ್ರದ ದಂಡೆಯ ಮೇಲೆ ಹೃದಯ ಚಿಹ್ನೆ ಬಿಡಿಸಿ ನಮ್ಮಿಬ್ಬರ ಹೆಸರನ್ನು ಬರೆದು ಖುಷಿಪಡಬೇಕು… ಇಂದು ನಾ ಒಂಟಿಯಾಗಿ ಎಷ್ಟೇ ಸುಂದರವಾದ ಸೂರ್‍ಯಾಸ್ತವನ್ನು ನೋಡಿದರೂ, ಮುಂದೊಂದು ದಿನ ಅವನ ಜೊತೆಗೆ ಸೂರ್ಯಾಸ್ತವನ್ನು ನೋಡಿದಾಗ ಹೊಸತನ, ಹೊಸಭರವಸೆ, ನವಿರಾದ ಕನಸುಗಳು, ಬಾನೆಲ್ಲವೂ ರಂಗಾಗಿ ಕಾಣಬೇಕು… ಸಮುದ್ರವೆಂದರೆ ಕಳೆದ ಹೊತ್ತುಗಳು ಪ್ರೀತಿಯ ತಾಣವಾಗಬೇಕು. ಹಾಗಂತ ನಾನೇನು ಈಗಿನಿಂದಲೇ ಸಮುದ್ರದ ಮೇಲೆ ಕಾಯುತ್ತ ಕುಳಿತಿರುವುದಿಲ್ಲ. ದೇವರು ನನಗಾಗಿ ಸೃಷ್ಟಿಸಿದ ಹುಡುಗನು ಬಂದು ಕೈ ಹಿಡಿದಾಗ ನಾನೇ ಅವನನ್ನು ಕರೆದುಕೊಂಡು ಸೂರ್‍ಯೋದಯವನ್ನು ನೋಡಲು ಬರುವೆನು. ಅಲೆಗಳೇ ನೀವು ಕಾಯುತ್ತಿರಿ. ನನ್ನ ಜೀವ ಸಿಗುವವರೆಗೂ ಸಮುದ್ರ, ಆಗಸಗಳೇ ನೀವು ಎಂದಿಗಿಂತಲೂ ಹೆಚ್ಚು ಹತ್ತಿರವಾಗಬೇಕು ನನ್ನ ನಲ್ಲ ನನ್ನೊಡನೆ ಬಂದಾಗ. ಅವನೆಂದು ಬರುವನೋ ಆದರೆ ಬಂದೇ ಬರುವನು. ಎಂದಿನಿಂದಲೋ ಅವನ ಬರುವಿಕೆಯಲ್ಲಿ ಕಾದು ಕಾದು ಸುಸ್ತಾಗಿದ್ದರೂ, ಮುಖದಲ್ಲಿರುವ ಭರವಸೆಗಳೇ ಹೇಳುತ್ತಿದೆ ಅವನು ಬಂದೇ ಬರುವನೆಂದು. ನನ್ನವನು ಅಂದ್ಮೇಲೇ ಸಹಜವಾಗಿಯೇ ದೇವರು ಪುರಸೊತ್ತು ಮಾಡಿಕೊಂಡು ಸೃಷ್ಟಿಸಿರಬೇಕಲ್ಲವೇ? ಆದ ಕಾರಣ ಬರಲು ಸ್ವಲ್ಪ ಲೇಟಾದ್ರೂ ಲೇಟೆಸ್ಟ್ ಆಗಿಯೇ ಬರ್‍ತಾನೇನೋ. ಇಷ್ಟೊಂದೆಲ್ಲಾ ಅವನ ಬಗ್ಗೆ ಯೋಚಿಸೋ ನನ್ನ ಬಗೆಗೂ ಅವನು ಯೋಚಿಸುತ್ತಿರಬಹುದು. ಎಲ್ಲಿರುವಳೋ ನನ್ ಹುಡುಗಿ ಎಂದು. ಅದೆಲ್ಲಾ ಗೊತ್ತಿಲ್ಲ ಅವನು ಯಾವಾಗ ಬೇಕಾದರೂ ಬರಲಿ, ಬರುವಾಗ ಮನಸ್ಸಿನ ಜೋಳಿಗೆಯಲ್ಲಿ ಪ್ರೀತಿಯನ್ನು ತುಂಬಿಕೊಂಡು ಬದುಕಿನಾದ್ಯಂತ ನೀಡುತ್ತೇನೆಂಬ ಭರವಸೆಯಲ್ಲಿ ಬಂದರೆ ಸಾಕು. ಎಷ್ಟು ಅರ್ಥ ಮಾಡಿಕೊಂಡು ಬದುಕುತ್ತೇವೋ, ಎನ್ನುವುದಕ್ಕಿಂತ ಅಪಾರ್ಥವಾಗದಂತೆ ಸಂಬಂಧಗಳನ್ನು ಎಷ್ಟು ಚನ್ನಾಗಿ ಸಂಭಾಳಿಸಿಕೊಂಡು ಹೋಗುತ್ತೇವೆ ಎನ್ನುವುದೇ ಮುಖ್ಯ.
ಎಣ್ಣೆಯಾಗಿ ಸತಿ… ಬತ್ತಿಯಾದರೆ ಪತಿ
ಬೆಳಗೀತೂ ಬಾಳಹಣತೆ
ದುಃಖ ದುಮ್ಮಾನಗಳಿದ್ದರೇನಂತೆ,
ಬತ್ತದಿರಲೆಂದೂ ಪ್ರೀತಿಯೊರತೆ
ಯಾವಾಗಲೋ ಓದಿದ ಸಾಲು ಇದಾದರೂ ಯಾಕೋ ಪದೇ ಪದೇ ನೆನಪಾಗುತ್ತಿತ್ತು…
ಚೆನ್ನಾಗಿದ್ದು. ರೂಪಕಗಳ ಬಳಕೆ ಸಖತ್ ಖುಷಿ ಕೊಡ್ತು 🙂