ಶನಿ-ಮನ್ಮಥ ಯೋಗ: ಎಸ್.ಜಿ. ಸೀತಾರಾಮ್


ಮನ್ಮಥ ಮತ್ತು ಶನಿ ಎಂಬ ಎರಡು ಅತ್ಯುಜ್ವಲ ಶಕ್ತಿಗಳು ಡಿಕ್ಕಿ ಹೊಡೆದಿರುವುದರಿಂದಾಗಿ, ಪ್ರಸಕ್ತ ಶಾಲೀವಾಹನ ಶಕೆ ೧೯೩೮ರಲ್ಲಿ, ಅತಿವಿರಳ ಶನಿ-ಮನ್ಮಥಯೋಗ ಒದಗಿಬಂದಿದೆ. ಇದರಿಂದಾಗಿ ಕೆಲವು ವಿಲಕ್ಷಣ ಬೆಳವಣಿಗೆಗಳಾಗಲಿದ್ದು, ಅತ್ಯಾಶಾವಾದಿಗಳಿಂದಾಗಿ ಉಗಾದಿಯು ’ಉಗ್ರಾದಿ’ಯೇ ಆಗಿ ಬಿಡಬಹುದು ಎಂದು ಕೆಲವು ಆಶಂಕವಾದಿಗಳು ನುಡಿಯತೊಡಗಿದ್ದಾರೆ. ಇದನ್ನು ಕೇಳಿ, ಮೊದಲೇ ಬೇಸಿಗೆಯ ಬೇಗೆಯಿಂದ ಬೇಸತ್ತು ಬೆವರುತ್ತಿರುವ ಪ್ರಜೆಗಳ ಬೇನೆಬೇಗುದಿಗಳು ಮತ್ತಷ್ಟು ಹೆಚ್ಚಾಗಿವೆ. ಹಾಗಾಗಿ, ಇಂದಿನ ಉಷ್ಣಾವರಣದಿಂದ ಪ್ರಜೆಗಳಿಗೆ ಒಂದಿನಿತು ಇನಿದಂಪು ನೀಡಬೇಕೆಂದು, ಶನಿ-ಮನ್ಮಥಯೋಗ ಕುರಿತಂತೆ ಇಲ್ಲೊಂದು  ಕಾಕದೃಷ್ಟಿಯನ್ನೀಯಲಾಗಿದೆ.

ಈ ಸಂವತ್ಸರದ ಸ್ವಾರಸ್ಯಗಳಲ್ಲಿ, ಮನ್ಮಥ ನಾಮದಷ್ಟೇ, ಶನಿ ದೊರೆಯಾಗಿ ಪಟ್ಟವೇರುತ್ತಿರುವುದೂ ಗಮನಾರ್ಹವಾಗಿದೆ.  ಮೊದಲಿಗೆ ಮನ್ಮಥ ಎಂಬ ಹೆಸರನ್ನೇ ತೆಗೆದುಕೊಂಡರೆ,  ಹಾಗೆಂದೊಡನೆ ಸೌಂದರ್ಯದ ಪುರುಷಪುತ್ಥಳಿಯೊಂದೇ ನಮ್ಮ ಮನಗಣ್ಣಿನಲ್ಲಿ ಕುಣಿಯುವುದು ನಿಜವಾದರೂ, ಆ ಶಬ್ದವನ್ನು ಮನಸ್+ಮಥ ಎಂದು ಬಿಡಿಸಿದಾಗ, ಮನಸ್ಸನ್ನು ಕಡೆಯುವುದು, ಉಜ್ಜುವುದು, ಕದಡುವುದು, ಪೀಡಿಸುವುದು, ನಾಶಗೊಳಿಸುವುದು ಎಂಬೊಂದು ಅರ್ಥಸರಪಣಿಯೇ ಹೊರಪಡುತ್ತದೆ. ಮನ್ಮಥನೇ ಕಾಮ ಎಂದು ಅರಿವಾದಾಗ, ಇದರಲ್ಲಿ ಹಲವಾರು ಅರ್ಥಗಳು ಸುಲಭವಾಗಿ ಬಿಟ್ಟುಕೊಳ್ಳುತ್ತವೆ. ಹೀಗೆಯೇ, ರತಿ ಎಂದೊಡನೆಯೂ, ಮನ್ಮಥನ ಸ್ತ್ರೀ-ಪ್ರತಿರೂಪದ, ಅಥವಾ ಮನ್ಮಥಪತ್ನಿಯ ಲಾವಣ್ಯೋತ್ತುಂಗದ, ಬಿಂಬವು ಥಟ್ಟನೆ ಹೊಳೆಯುವುದಾದರೂ, ಆ ಶಬ್ದವನ್ನು ಒಳಹೊಕ್ಕಾಗ, ಬಯಕೆ, ಒಲವು, ಪ್ರಣಯ, ಪುಂಸ್ತ್ರೀ ಮಿಳನ, ಇಂದ್ರಿಯಭೋಗ, ಆನಂದ ಮೊದಲಾದಂಥ ಹಲವಾರು ಅರ್ಥಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ.

 

ಶನಿಯನೇ ನೀನೆಲ್ಲಿಂದ ವಕ್ಕರಿಸಿದೆ? ತೊಲಗಾಚೆ! ಎಂದು ಹಿಡಿಶಾಪಹಾಕುವವರಿಗೆ ಸವಾಲೆಸೆದಂತೆ, ಈ ವರ್ಷದಲ್ಲಿ ಶನಿಮಹಾತ್ಮನು ಗಾಂಧಿಮಹಾತ್ಮನಿಗೂ ಮಿಗಿಲಾಗಿ ಭಾರತದಾದ್ಯಂತ ಡಾಳೈಸುವನು. ಏಳರಾಟ ಆಡುತ್ತ ಪೀಡಿತರ ಪ್ರಾಣವನ್ನು ಏಳೇಳು ರಾಟೆಗಳಲ್ಲಿ ಜಗ್ಗುತ್ತಿರುವ ಶನಿ, ಸಾಡೇಸಾತಿ (ಏಳೂವರೆ) ಶನಿ, ಪಂಚಮಶನಿ, ಅಷ್ಟಮ ಶನಿ, ಘೋರ ರೋಹಿಣೀ ಶನಿ, ಹೀಗೆ ನಾನಾ ಶನಿರೂಪಗಳ ಕಾಟ-ಕಂಟಕ-ದೋಷ-ಪೀಡೆ-ಬಾಧೆಗಳಿಂದ ಬಿಡುಗಡೆ ಬೇಡುತ್ತಿರುವವರು, ಶನಿಮಹಾರಾಯನ ದೇವಾಲಯಗಳನ್ನಷ್ಟೇ ಅಲ್ಲದೇ, ಶನಿಯ ಅನುಗ್ರಹಶಕ್ತಿಯನ್ನು ನೇರವಾಗಿ ಸೆಳೆದುಕೊಳ್ಳಲೆಂದೇ, ಶನಿ ಪ್ಲ್ಯಾಂಟ್ ಎಂಬ ಸ್ಥಾವರಗಳನ್ನೂ, ಶನಿಬಾಬಾ ಅಣುಶಕ್ತಿ ಕೇಂದ್ರ ಎಂಬ ಶನಿಶಕ್ತಿಸ್ಥಳಗಳನ್ನೂ ಎಲ್ಲೆಡೆಯೂ ಕಟ್ಟುವರು.  ಶನಿಪೂಜನೆಗಾಗಿ, ವಿಶೇಷವಾಗಿ ಶನಿಪ್ರದೋಷ ಸನ್ನಿವೇಶಗಳಲ್ಲಿ, ಭಕ್ತರು ಭರಾಟೆಯಿಂದ ದೇಶಾದ್ಯಂತ ಪ್ರವಾಸ ಮಾಡುವರು, ಮತ್ತು ಇದರಿಂದಾಗಿ ಶನಿಮೂನ್ ಟೂರಿಸಂ ಎಂಬೊಂದು ಹೊಸ ಆದಾಯತೊರೆಯೇ ಹೊರಹೊಮ್ಮುವುದು. ಶನಿಪೂಜೆಗೆಂದು ಬಂದವರು, ಭಾನುವಾರದಂದು ಶನಿಯ ತಂದೆ ರವಿಯನ್ನೂ ಪೂಜಿಸಿ, ಖಚಿತವಾದ ಡಬಲ್ ಬೆನಫ಼ಿಟ್ ಸವಲತ್ತನ್ನು ಗಿಟ್ಟಿಸಿಕೊಂಡೇ ಮರಳುವಂತೆ, ಸಂಡೇಶ್ವರ ನಮಸ್ಕಾರವೂ ಶನಿಮೂನ್ ಪ್ರವಾಸ ಪ್ಯಾಕೇಜುಗಳಲ್ಲಿ ಸೇರಿಸಲ್ಪಡುವುದು. ಶನಿಗೂಡಿದಾಗ ’ಮನಿ’ ಕೂಡಿಡು; ಮನೆ ಕಟ್ಟು ಎಂದರಿತ ಶನಿಜಾಣರು, ಅದ್ದೂರಿ ಶನಿಶಾಂತಿಹೋಮಗಳ ಮೂಲಕ ಹಣವನ್ನು ಗೋರಿ, ಅದನ್ನು ಹುದುಗಿಸಿಡಲು ಗೋರಿಗಳನ್ನು ತೋಡುವರು.  

ಶನಿ ಎಂದರೆ ಮಂದಗತಿ ಎಂದಾಗುವುದರಿಂದ, ಈ ಸಾಲಿನಲ್ಲಿ ಕೆಲಸಕಾರ್ಯಗಳು ವಿಪರೀತ್ ವಿಲಂಬಿತ್ ತಾಲ್ನಲ್ಲಿ ತೆವಳುವುವು.  (ಇನ್ನೇನು ಆಗಮಿಸಲಿರುವ ಹೇವಿಳಂಬಿ ಮತ್ತು ವಿಳಂಬಿ ವರ್ಷಗಳು ಈ ವಿಳಂಬವನ್ನು ಇನ್ನೆಷ್ಟು ಲಂಬಗೊಳಿಸುವುವೋ ಎಂದು ನೆನೆದರೇ ಮೈಜುಮ್ಮೆನ್ನುತ್ತದೆ.) ಈ ನಿಧಾನದಿಂದಾಗಿ, ಅನೇಕರು ನಿಧನರೂ ಮತ್ತನೇಕರು ನಿರ್ಧನರೂ ಆಗುವರು.  ಶನಿವಾಹನ ಕಾಗೆ, ಮನ್ಮಥವಾಹನ ಗಿಣಿ ಹಾಗೂ ಮನ್ಮಥಪ್ರಿಯ ಕೋಗಿಲೆ ಸೇರಿ, ಕಾಕಧ್ವನಿ-ಶುಕಧ್ವನಿ-ಪಿಕಧ್ವನಿ ಸಮ್ಮಿಶ್ರಿತ ಕಾಕಪಂಚಮ್ ಎಂಬ ಅಲೌಕಿಕ ಶನಿದನಿಯಲ್ಲಿ, ಶನಿಮಹಾತ್ಮೆ ಕಾವ್ಯವನ್ನು ಮೇಳೈಸುವುವು.  ಶನಿಪ್ರಿಯ ನೀಲಿಗಪ್ಪು ಬಣ್ಣದ ಉಡುಪುಗಳನ್ನೂ ಮತ್ತು ಶನಿಕಾಂತ ಹಾಗೂ ಇಂದ್ರನೀಲ ಮಣಿಗಳನ್ನೂ ಹೆಚ್ಚೆಚ್ಚು ಪ್ರಜೆಗಳು ತೊಡತೊಡಗುವರು. 

ಸ್ವಾರಸ್ಯವೆಂದರೆ, ದೊಡ್ಡದೊಡ್ಡ ಊರುಗಳಲ್ಲಿ, ಬೆಂಗಳೂರು ಎಂ.ಜಿ. ರೋಡ್‌ನ ಚಮಕು-ಚಕಚಕಿಗಳೂ ಮಕಮಕಿಸುವಂಥ, ಎಸ್. ಎಮ್. ರೋಡ್ ಅಥವಾ ಶನಿ ಮಹಾತ್ಮ ರೋಡ್‌ಗಳು ತಲೆಯೆತ್ತುವುವು. 

ಇನ್ನು ಈ ಸಂವರ್ತದ ಮನ್ಮಥಲೀಲೆಯತ್ತ ತಿರುಗಿದರೆ, ಅದು ಶನಿಲೀಲೆಗಿಂತ ಕಡಿಮೆಯೇನಿರದು. ಮಧು (ಚೈತ್ರ) ಮತ್ತು ಚಂದ್ರ, ಎರಡೂ ಮನ್ಮಥ ಬಂಧುಗಳೇ ಆಗಿದ್ದರಿಂದಾಗಿ, ಜೌವ್ವನ-ಜರೆಗಳ ಬಯೋ-ಮಾನ ಲೆಕ್ಕಕ್ಕೇ ಬರದಂತೆ ಪ್ರಜೆಗಳು ಮಧುಚಂದ್ರಾಸಕ್ತರಾಗುವರು.  ಮನ್ಮಥೇಶ್ವರ ತೀರ್ಥದಲ್ಲಿ ಮಿಂದು, ಮನ್ಮಥ ಸಂಜೀವನೀ ಮೂಲಿಕೆಯನ್ನು ತಿಂದು, ಮನ್ಮಥೋದ್ದೀಪ್ತರಾಗಿ ಪ್ರಜೋತ್ಪತ್ತಿಯನ್ನು ಮತ್ತಷ್ಟು ಉಲ್ಬಣಗೊಳಿಸುವರು. (ಪ್ರಜೋತ್ಪತ್ತಿ ಸಂವತ್ಸರವೇ ಇದಕ್ಕಾಗಿ ಮೀಸಲಾಗಿದೆ ಎಂಬುದು ಬೇರೆ ಮಾತು.) ಬರೀ ಕಾಮಗಳೇ ಇದ್ದು, ಫ಼ುಲ್‌ಸ್ಟಾಪ್‌ಗಳೆಲ್ಲೂ ಇಲ್ಲದ, ಮನ್ಮಥಲೇಖಗಳು (’ಅನಂಗಲೇಖ’ ಅಥವಾ ’ಲವ್ ಲೆಟರ್’) ತೀವ್ರ ಭರದಿಂದ, ಮುಖಪುಸ್ತಕ (ಫ಼ೇಸ್‌ಬುಕ್), ಟೂವಿಟ್ಟವೂ (ಟ್ವಿಟರ್), ನೀನಾಳ (ಯೂಟ್ಯೂಬ್) ಮೊದಲಾದ ಅಂತರ್ಜಾಲತಾಣಗಳಲ್ಲಿ ಹಾರಾಡುವುವು.  ಯುವಜನರ ’ಅನಂಗೀಕರಣ’ (ಅಂಗಿ-ವಿರುದ್ಧದ ಮತ್ತು ಅನಂಗ-ಪರವಾದ, ಅಥವಾ ವಸ್ತ್ರಸನ್ಯಾಸ ಧೋರಣೆ) ದಿನನಿತ್ಯದ ಮಾತಾಗಿ, ವಯಸ್ಕರು ಇದನ್ನು ಅಂಗೀಕರಣ ಮಾಡದೆ, ಅನಂಗರಂಗವು ಅರಣ್ಯರಣರಂಗವಾಗುವುದು.  ದೈವಪ್ರೇಮವು ಪ್ರೇಮದೈವದೆಡೆಗೆ ಹೊರಳಿ, ಕಾಮರೂಪದ ಕಾಮಾಖ್ಯಾದಿಂದ ಕಾಮ್ಯಕವನದವರೆಗೂ, ಅಲ್ಲಿಂದ ಕೆಳಗೆ ಕಾಮಕೋಟಿ ಕಂಚಿಯವರೆಗೂ, ವಿನೂತನ-ವೈಭವೋಪೇತ ಕಾಮಕಾಮೇಶ್ವರ-ಕಾಮೇಶ್ವರಿ ದೇವಾಲಯಗಳೂ, ಕೋಟಿ ಕಾಮಪೀಠಗಳೂ, ಮನ್ಮಥ ಮಹನ್ಮಠಗಳೂ ಸ್ಥಾಪಿಸಲ್ಪಡುವುವು. ಮನ್ಮಥವಿಶಿಷ್ಟ ಅಧ್ಯಯನ-ಸಂಶೋಧನಕ್ಕೆಂದೇ ಮನ್ಮಥೋಮ್ಯಾಟಿಕ್ಸ್ ಸೊಸೈಟಿ ಎಂಬ ಸಂಸ್ಥೆಯೊಂದು ರಚಿಸಲ್ಪಡುವುದು. ಮನ್ಮಥನ ಶೃಂಗಾರಶಾಖದಿಂದಾಗಿ, ಪೂಜಾರಿಗಳೂ-ಪುರೋಹಿತರೂ-ಪ್ರವಚನಕಾರರೂ ಹೆಚ್ಚೆಚ್ಚು ಅಲಂಕೃತರೂ-ಅಹಂಕೃತರೂ ಆಗುವರು. ಕಾಮಕಸ್ತೂರಿ-ಕಾಮವೃಕ್ಷ-ಕಲ್ಪಧೇನು-ಕಾಮದೇವನ ಚಿತ್ರಗಳು ಮತ್ತು ಅವುಗಳನ್ನುಳ್ಳ ಬಳೆ-ಸರ-ಓಲೆ-ಉಂಗುರಗಳು, ಇವೆಲ್ಲಕ್ಕೂ ಬೇಡಿಕೆ ಶತಾಧಿಕವಾಗುವುದು. ಜನರು ಹಿಂದೆಂದಿಗಿಂತಲೂ  ಹೆಚ್ಚು ಕಾಮನಬಿಲ್ಲಿನ ದರ್ಶನಮಾಡುವರು; ಕಾಮೋದ್ ರಾಗದಿಂದ ಆಮೋದ ಪಡೆಯುವರು.  ಬೀದಿಕಾಮಣ್ಣರು ಬಾರ್‌ಗಳಲ್ಲಿಯೂ ಮತ್ತು ಕಾಮರಸ್ ಕಾಲೇಜುಗಳಲ್ಲಿನ ಕಾಮನರೂಂಗಳಲ್ಲಿಯೂ, ಹೌಸ್ ಆಫ಼್ ಕಾಮಣ್ಣಾಸ್ ಅಧಿವೇಶನಗಳನ್ನು ನಡೆಸಿ, ಕಾಮನ ಮಿನಿಮಮ್ ಪ್ರೋಗ್ರ್ಯಾಮ್, ಕಾಮನ ವೆಲ್ತ್, ಕಾಮನ ಸೆನ್ಸ್, ಇತ್ಯಾದಿ ವಿಧವಿಧ ಕಾಮನವಿಷಯಗಳ ಬಗ್ಗೆ ವಾಗ್ಯುದ್ಧ ನಡೆಸಿ, ಒಟ್ಟು ಖರ್ಚಿನ ಕಾಮನ್ ಬಿಲ್ ಅನ್ನು ಒಬ್ಬ ಕಾಮನ ಮ್ಯಾನ್ ತಲೆಗೆ ಕಟ್ಟುವರು.  

ಅನಂಗನ ಅವಾಂತರಗಳಿಂದಾಗಿ, ಭಾರತದಲ್ಲಿ ರೇಪಿಸಂ ಹೆಚ್ಚಿ, ರೇಸಿಸಂ ಏನೂ ಅಲ್ಲ ಎಂಬಷ್ಟು ಭಯೋತ್ಪಾದಕವಾಗುವುದು;  ಇದನ್ನು ರೇಪ್-ಪ್ರ್ರಿಸೆಂಟಟಿವ್ ಎಂಬ ತಜ್ಞ ಪ್ರತಿನಿಧಿಗಳು ವಿಶ್ವಾದ್ಯಂತ ಹರಡುವರು. ರೇಪಿಸ್ಟರು ಇನ್ನೂ ಹೆಚ್ಚು ಕೋಪಿಷ್ಠರೂ, ಪಾಪಿಷ್ಠರೂ ಆಗುವರು. ಮದನಮಹಾತ್ಮೆಯಿಂದಾಗಿ, ಗ್ಯಾಂಗ್‌ಗ್ರೇಪ್‌ಜ್ಯೂಸ್ ಮದವು ನಾಡಿನ ನೆತ್ತಿಗೇರುವುದು. ಇದರ ವಿರುದ್ಧ ಜನಜಾಗೃತಿಯುಂಟುಮಾಡಲು, ಇಂಟರ್‌ನ್ಯಾಶನಲ್ ರೆಜೀಮ್ ಫ಼ಾರ್ ರೇಪ್ ಕಾನ್ಶಸ್‌ನೆಸ್ (ಇರ್ರ್‌ಕಾನ್) ಎಂಬ ವಿಶ್ವಸಂಸ್ಥೆಯೊಂದು ಹುಟ್ಟಿಕೊಳ್ಳುವುದು; ರೇಪಿಸ್ಟರು ಮತ್ತು ರೇಪಾತ್ಮರ ಮೇಲೆ ರೋಪ್ (ನೇಣು) ಹಾಕುವುದನ್ನು ಪ್ರತಿಪಾದಿಸುವ ಸಲುವಾಗಿ, ಇದರಲ್ಲಿ ರೋಪ್ ಕಾನ್ಶಸ್‌ನೆಸ್ ಎಂಬ ಪ್ರತ್ಯೇಕ ವಿಭಾಗವೇ ತೆರೆಯಲ್ಪಟ್ಟು, ಸ್ವಾಮಿ ಅಪೂರ್ಣಕಾಮಾನಂದ ಸರಸ್ವತಿ, ಸಂತ್ ವಾತ್ಸ್ಯಾಯನ್ ಮಹಾರಾಜ್ ಮತ್ತು ಅತಿಪೂಜ್ಯ ಸಾಧ್ವಿ ಕಾಮಾಕ್ಷಿ ಮಾತಾ, ಇವರ ದಿವ್ಯದಿಗ್ದರ್ಶನದಲ್ಲಿ ಕ್ರಿಯಾತ್ಮಕವಾಗಿ ಮುನ್ನಡೆಸಲ್ಪಡುವುದು.   

ಭವಿಷ್ಯಗನ್ನಡಿಯ ಒಟ್ಟಾರೆ ನೋಟದಲ್ಲಿ, ದೇಶದಲ್ಲಿ ಕರಪೋಷಣೆ (ಕರಪ್‌ಶನ್) ಮತ್ತಷ್ಟು ಆಳಕ್ಕೆ ಬೇರೂರುವುದು. ಕಾನೂನಿನ ಕಾನನದಲ್ಲಿ ಹೊಡೆದವನೇ ಒಡೆಯ ಎಂಬುದು ಧ್ಯೇಯವಾಕ್ಯವಾಗುವುದು. ಕೇಜ್ರಿ-ಕೇಸರಿ-’ಇತಿಶ್ರೀ’, ಈ ಮೂರೂ ಪಕ್ಷಗಳವರು ಅಹಂ ಆದ್ಮಿಗಳಾಗಿ, ಒಬ್ಬರಿಗೊಬ್ಬರು ಮನ್ ಕೀ ಬ್ರ್ಯಾಂಡ್ ಬರಲುಗಳಲ್ಲಿ ಬಡಿದಾಡುವರು; ನರಕಲೋಕಸಭೆಯೊಂದನ್ನೇ ಸೃಷ್ಟಿಸುವರು. ಹೋಪ್ ಆದ್ಮಿಗಳು ಏಪ್ ಆದ್ಮಿಗಳಾಗುವರು. ಆಳುವವರ ಬಗ್ಗೆ ಆಮ್ ಆದ್ಮಿಗಳಿಗೆ ಶಂಕೆ ಜಾಸ್ತಿಯಾಗುವುದು. ಜನತಂತ್ರವು ದನತಂತ್ರವಾಗಿ ಅವನತಿಸಿ, ಎಲ್ಲೆಲ್ಲೂ ಕ್ಷಯ, ಕ್ಷಾಮ, ಕ್ಷುದ್ಬಾಧೆ, ಕ್ಷೋಭೆ ಮತ್ತು ಕ್ಷುದ್ರ ಶಕ್ತಿಗಳು ಹೆಚ್ಚುವುವು; ಕ್ಷಣಿಕಸುಖಗಳಲ್ಲಿ ಪ್ರಜೆಗಳು ಕ್ಷುಲ್ಲಕರಾಗುವರು; ಕ್ಷಮೆ ಮತ್ತು ಕ್ಷಾತ್ರ ಕ್ಷೀಣಿಸುವುವು; ಕ್ಷೀರವು ಕ್ಷಾರವಾಗುವುದು. ಪಶುಪಾಲರು ಶಿಶುಪಾಲರಾಗಿ, ಎಳೆಯ ಮಕ್ಕಳ ಮತ್ತು ಪ್ರಾಣಿಗಳ ವಕ್ರದಂತಗಳನ್ನು ಕಂಡಲ್ಲಿ ಕೀಳಲಾರಂಭಿಸುವರು. ಗಿಣಿದೇರನ (ಗಿಣಿ ತೇರಿನಲ್ಲಿ ಸಂಚರಿಸುವ ಮನ್ಮಥ) ಬಲದಿಂದಾಗಿ, ಗಿಣಿಕಣಿ ಹೇಳುವವರಿಗೆ ಅಪೂರ್ವ ಶುಕ-ಶುಕ್ರದೆಸೆ ಉಂಟಾಗುವುದು. ಉಳುವವರ ಅಳಲನ್ನು ಕೇಳುವವರೇ ಇಲ್ಲವಾಗಿ, ಅವರು ತಂತಮ್ಮ ಧರಣಿಗಳಲ್ಲೇ ಧರಣಿ ಹೂಡಿ, ಊರಿ ಕೂಡುವರು.  ಚಳವಳಿಜ್ವರವು ಮಲೇರಿಯಾ ಮಾದರಿಯಲ್ಲಿ ಮಲೆನಾಡು ಏರಿಯಾಗಳಲ್ಲಿ ಹಬ್ಬುವುದು. ಎಲ್ಲೆಡೆ ಆಪ್ತರೇ ಆಪತ್ತಿಗೆ ಕಾರಣರಾಗುವರು.  ಪ್ರಜೆಗಳು ರೂಪಾಯಿಯ ಸಿಪಾಯಿಗಳಾಗಿ, ರಾಷ್ಟ್ರದ ಆಸ್ತಿ-ಕತೆ ಚಿಂತಾಜನಕ ಮಟ್ಟವನ್ನು ಮುಟ್ಟುವುದು; ಆಸ್ತಿ ಸಂಚಯನ ಧೋರಣೆಗಳು ಒಮ್ಮೆಲೇ ಭುಗಿಲಿಡುವುವು. ಒಬ್ಬರ ವ್ಯವಹಾರದಲ್ಲಿ ಮತ್ತೊಬ್ಬರು ಮೂಗು ತೂರಿಸುವ ನಾಸಿಕತೆ ಕೂಡ ಇದೇ ಹಿನ್ನೆಲೆಯಲ್ಲಿ ತಾನಾಗಿಯೇ ಕವರಿಕೊಳ್ಳುವುದು.  ಧರ್ಮದಲ್ಲಿ ಅತಿಕಾಮ ಹಾಗೂ ಅನರ್ಥ, ಅಂತೆಯೇ ಅರ್ಥದಲ್ಲಿ ಅಧರ್ಮ ಹಾಗೂ ಅತಿಕಾಮ ಉಂಟಾಗಿ, ಮೋಕ್ಷದ ಪುರುಷಾರ್ಥವಾದರೂ ಏನು? ಎಂದು ಪ್ರಜೆಗಳು ಎಲ್ಲೆಂದರಲ್ಲಿ ಕೇಳಲಾರಂಭಿಸುವರು; ಕಡೆಗೆ, ಮೋಕ್ಷ ಎಂಬ ಮೂಲವಿಚಾರಕ್ಕೇ ಶಾಶ್ವತ ಮೋಕ್ಷವು ದೊರಕುವುದು.  

ಈ ಸಂವತ್ಸರದ ಸಕಲ ದುಷ್ಫಲಗಳಿಗೆ ಒಂದೇ ಪರಿಹಾರೋಪಾಯವೆಂದರೆ, ಕೆಳಕಾಣುವ ಪಾವನಕರ ಮನ್ಮಥ ನಾಮಾವಳಿ ಪಠನ (ಸೂಕ್ತ ಓಂ ಮತ್ತು ನಮಃ ಸೇರ್ಪಡೆಯೊಡನೆ): 

ಅನಂಗ, ಅನನ್ಯಜ, ಅಭಿರೂಪ, ಆತ್ಮಭೂ, ಇಷ್ಮ, ಕಂಜನ, ಕಂದರ್ಪ, ಕಾಮದೇವ, ಕಿಂಕಿರ, ಕುಸುಮಾಯುಧ, ಚೈತ್ರಸಖ, ದರ್ಪಕ, ದೀಪಕ, ಪಂಚಬಾಣ, ಪಂಚಶರ, ಪಂಚೇಷು, ಪುಷ್ಪಕೇತನ, ಪುಷ್ಪಧನ್ವ, ಪುಷ್ಪಶರ, ಭಾವಜ, ಮಕರಕೇತನ, ಮಕರಕೇತು, ಮಕರಧ್ವಜ, ಮಕರಲಾಂಛನ, ಮಕರಾಂಕ, ಮದನ, ಮಧುದೀಪ, ಮನಸಿಜ, ಮನೋಜ, ಮಾಪತ್ಯ, ಮಾಯಾಸುತ, ಮಾರ, ಮುರ್ಮುರ, ಮುಹಿರ, ರತಿಕಾಂತ, ರತಿನಾಯಕ, ರತಿಪತಿ, ರತಿಪ್ರಭು, ರತಿಪ್ರಿಯ, ರತಿರಮಣ, ರತಿವರ, ರತಿವಲ್ಲಭ, ರತಿಸಹಚರ, ರಮ, ರಮಣ, ರಾಗವೃಂತ, ರೂಪಾಸ್ತ್ರ, ಲಕ್ಷ್ಮೀಪುತ್ರ, ವಸಂತಬಂಧು, ವಸಂತಯೋಧ, ವಾಮ, ಶಮಾಂತಕ, ಶ್ರೀನಂದನ, ಸಂಸಾರಗುರು, ಸ್ಮರ… 

[ದಕ್ಷಬ್ರಹ್ಮನ ಮಗಳಾದ ’ರತಿ’ಗೂ ಹಲವಾರು ನಾಮಗಳುಂಟು. ಆಕೆಯನ್ನು ರೇವಾ ಎನ್ನುವುದರ ಜೊತೆಗೆ, ಕಾಮಕಲಾ, ಕಾಮಪತ್ನಿ, ಕಾಮಪ್ರಿಯಾ, ಕಾಮೀ, ಕೇಲಿಕಿಲಾ, ಮಾಯಾವತೀ (ಹೌದು, ಅದೇ ಹೆಸರು!), ರಾಗಲತಾ, ಶುಭಾಂಗೀ ಎಂದೆಲ್ಲ ಕರೆದು ಪ್ರೀತಿಸುವರು. ಮನ್ಮಥನಿಗೆ ರತಿ ಮತ್ತು ಪ್ರೀತಿ ಎಂಬ ಇಬ್ಬರು ಪತ್ನಿಯರಿರುವರೆಂದೂ ಹೇಳುವರು.]

ಜೇನ್‌ದುಂಬಿಗಳ ಹೆದೆ ಹೊಂದಿದ ಕಬ್ಬಿನಜಲ್ಲೆಯ ಬಿಲ್ಲು, ಅದಕ್ಕೆ ಐದು ಹೂಬಾಣಗಳು, ಗಿಣಿ ಗಾಡಿ, ಮಕರ ಬಾವುಟ, ಅಪ್ಸರೆಯರ ಸಾಹಚರ್ಯ, ಇವೇ ಮೊದಲಾದ ಲಕ್ಷಣಗಳು; ವಸಂತ, ಚೈತ್ರ, ಚಂದ್ರ, ಕೋಗಿಲೆ, ಮಾವು, ಇವುಗಳೆಲ್ಲದರ  ನಿಕಟತೆ; ಸಮಾಧಿನಿಷ್ಠ ಶಿವನಲ್ಲೇ ಕಾಮವನ್ನು ಪ್ರಚೋದಿಸಿ, ಅವನ ಹಣೆಗಣ್ಣಿನಿಂದ ಸುಟ್ಟುಬೂದಿಯಾಗಿ, ಜೀವಿಗಳೆಲ್ಲರ ಅಂಗಾಂಶಗಳೊಳಗೆ ಅನಂಗ ರೂಪದಲ್ಲಿ ತೂರಿಹೋಗಿದ್ದುದು – ಮನ್ಮಥನ ಕಥನದಲ್ಲಿರುವ ಇಂಥ ಅನೇಕ ಕೌತುಕಕಾರಿ-ಶೃಂಗಾರಮಯ ವಿಷಯಗಳಲ್ಲಿ ಕೆಲವಷ್ಟೇ  ಮೇಲಿನ ನಾಮಸೂಚಿಯಲ್ಲಿ ಗುರುತಿಸಲ್ಪಟ್ಟಿವೆ.  ಈ ಸಂವರ್ತದ ಮತ್ತು ವಸಂತಮಹೋತ್ಸವದ ಆರಂಭದಲ್ಲಾದರೂ, ರತಿ-ಮನ್ಮಥ ಚಿಂತನ-ಮಂಥನ ಮಾಡಬೇಕೆಂದೆನಿಸಿದವರ ತುರ್ತು ಅನುಕೂಲಕ್ಕೆಂದಷ್ಟೇ ಈ ನಾಮಸಂಗ್ರಹವನ್ನು ನೀಡಲಾಗಿದೆ.  ಸಂಸ್ಕೃತಜ್ಞರ ನೆರವಿನಿಂದ ಇದಕ್ಕೆ ಇನ್ನೊಂದಿಷ್ಟು ಯೋಗ್ಯ ಹೆಸರುಗಳನ್ನು ಕೂಡಿಸಿ, ಶ್ರೀಮನ್ಮಥಾಷ್ಟೋತ್ತರ ಶತನಾಮಾವಳಿಃ ಶ್ರೀಮನ್ಮಥೈಕವಿಂಶತಿ ನಾಮಾವಳಿಃ ಕಾಮನಾಮ ತ್ರಿಶತಿಸ್ತೋತ್ರಮ್  ನಾಮಕಾಮಾಯಣ ಮುಂತಾದ ಸ್ಮರಸ್ಮರಣ ಸ್ತೋತ್ರಗಳನ್ನು ರಚಿಸಿಕೊಂಡು ವಾಚಿಸಿ, ಧನ್ಯರಾಗಬಹುದು. 

ಈ ತೆರನಾದ ಮನ್ಮಥಮಂತ್ರಗಳನ್ನು ಸಂವತ್ಸರವಿಡೀ ಪೂಜ್ಯಭಾವದಿಂದ ಪಠಿಸಿ, ಜೊತೆಗೆ ಶನಿವಾಹನವಾದ ಕಾಗೆಯನ್ನೂ-ಮನ್ಮಥಸಾರಥಿಯಾದ ಗಿಳಿಯನ್ನೂ ನಿಯಮಪುರಸ್ಸರವಾಗಿ-ಭಕ್ತಿಭಾವಾವಿಷ್ಟರಾಗಿ ಪಾಲಿಸಿ-ಪೋಷಿಸುತ್ತಾ ಬಂದಲ್ಲಿ, ಭಕ್ತರ ಕಷ್ಟಕೋಟಲೆಗಳೆಲ್ಲವೂ ಆವಿರೂಪದಲ್ಲಿ ತೇಲಿಹೋಗಿ,  ಅವರು ಹೊಸ ಜೀವಸೃಷ್ಟಿಶಕ್ತಿ, ಜೀವಂತಿಕೆ, ಜೀವಕಳೆ, ಜೀವದಯೆ, ಜೀವಸತ್ವ, ಜೀವನೋಲ್ಲಾಸ, ಜೀವನದೃಷ್ಟಿ ಎಲ್ಲವನ್ನೂ ಪಡೆದು ಸುಖೋತ್ತುಂಗಕ್ಕೇರುವರು; ಶನಿ-ಮನ್ಮಥ ಸಾನ್ನಿಧ್ಯದಲ್ಲಿ ನಿತ್ಯನಿರಂತರವಾಗಿ ನೆಲಸುವರು; ಉತ್ತರೋತ್ತರ ಕೈವಲ್ಯವನೈದುವರು; ಈ ದೇವದುರ್ಲಭ ಶಕ್ತಿಯು ಒದ್ದುಕೊಂಡು ಬಂದಾಗ ತ್ರಿಮೂರ್ತಿಗಳೂ ಅದನ್ನು ತಪ್ಪಿಸಲಾರರು – ಎಂಬುದಾಗಿ, ಸೃಷ್ಟಿಗೂ ಮುಂಚೆಯೇ ವಿರಚಿತವಾದ ಶನಿ-ಮನ್ಮಥ ಯೋಗವಾಸಿಷ್ಠ ಗ್ರಂಥದ ಚರಮಕಾಂಡದಲ್ಲಿಯೂ, ಮತ್ತು ಶುಕನೀತಿ (ಗಿಣಿಶಾಸ್ತ್ರ) ಪ್ರಸ್ತಾವನೆಯಲ್ಲಿಯೂ ಸಾರಿಸಾರಿ ಹೇಳಲಾಗಿದೆ. 

ಈ ಸಂವತ್ಸರಫಲಶ್ರುತಿಯ ಜೊತೆಗೆ, ಸ್ವಲ್ಪ ಯುಗಾದಿ ಹರಟೆಯೂ ಸೇರಲಿ ಎಂಬುವ ಹಾಸ್ಯಮನಸ್ಕರಿಗಾಗಿ ಇಲ್ಲಿ ಕೆಲವು ಕೊಂಕಣ್ಣಯ್ಯನ ಡೊಂಕುನುಡಿ ಕೇಳ್ವೆಗಳಿವೆ: 
> ಕಾಮಕ್ಕೆ ಕ್ಷಾಮವಾದರೆ ಕಾಮಾಕ್ಷಮ್ಮ ಕ್ಷಮೆ ಕೋರಬೇಕೆ? 
> ವಸಂತ ಬಂತೆಂದು ಸಂತನು ಸಂತಸ ಪಡಬಾರದೇ?
> ಮದನದಮನ ಎಂದಷ್ಟಕ್ಕೆ ಮದನಮನನ ಬಿಟ್ಟೀತೇ?
> ಕಾಮವಿಲ್ಲದವನು ಅನಂಗವಿಕಲ ಎಂದಾದರೆ, ಪಂಚಾಂಗವಿಲ್ಲದವನೇನು ಪಂಚಾಂಗವಿಕಲನೇ? 
> ಪ್ಯಾರಟ್‌ಗೆ ಕ್ಯಾರಟ್ ಹಲ್ವಾ ಊಟಿಸಿದರೆ, ಕಾಮದೇವ ಒಲಿವನೇ?
> ಪ್ಯಾರ್ ಇಲ್ಲದ ಪ್ಯಾರಟ್ ಉಂಟೇ? ಗಿಣಿ ಇಲ್ಲದ ಮನ್ಮಥನುಂಟೇ?
> ರ’ಥೋ’ತ್ಸವದ ನಡುವೆ ರ’ತೋ’ತ್ಸವವೇ? 
> ಮನ್‌ಮಥನಿಲ್ಲದ ಮನುಜಮತವಾವುದಯ್ಯ?
> ಬೆಲ್ಲಂ ಬೆರಸಿದರೇನ್, ಬೇವಿಂಗೆ ಕಹಿಬುದ್ಧಿಯುಂ ಪೋಪುದೇ? ಹರಹರ ಶ್ರೀಚೆನ್ನಯುಗಾದ್ಯೇಶ್ವರ!   

ಉಂಡದ್ದೇ ಉಗಾದಿ; ಮಿಂದದ್ದೇ ದೀವಳಿಗೆ ಎನ್ನುವರು. ಹಾಗಾಗಿ, ಈ ಯುಗಾದ್ಯ ಪರ್ವದಿನದಂದು, ಬೇವು-ಬೆಲ್ಲದೊಡನೆ, ಬೇಲ ಮತ್ತು ಮಾವು (ಮನ್ಮಥ ಅಂದರೆ ಬೇಲ ಎಂದೂ ಆಗುತ್ತದೆ, ಮತ್ತು ಮಾವಿನಮರವನ್ನು ಮನ್ಮಥಾಲಯ ಮತ್ತು ಕಾಮಾಂಗ ಎಂದೂ ಕರೆಯುತ್ತಾರೆ) ಸೇರಿಸಿ, ಜೊತೆಗೆ ಉಪ್ಪುಖಾರದ ದೇಹಕ್ಕೂ-ಮನ್ಮಥನಿಗೂ ಇರುವ ಸನಾತನ ಸಂಬಂಧದ ಗೌರವಾರ್ಥ, ಈ ಮಿಶ್ರಣಕ್ಕೆ ಕೊಂಚ ಉಪ್ಪುಖಾರ ಉಪಚಾರವನ್ನೂ ಮಾಡಿ, ಅಚ್ಚುಕಟ್ಟಾಗಿ ರುಚಿಕಟ್ಟಾದ ಚೈತ್ರಾನ್ನ ತಯಾರಿಸಿ, ನಿಮ್ಮ ಕುಟುಂಬದೊಡಗೂಡಿ ಸಂತಸದಿಂದ ಸೇವಿಸಿ; ಉಪ್ಪುಖಾರಕ್ಕೆ ತಕ್ಕಂತೆ ಉಪಕಾರವನ್ನೂ ಮಾಡಿ. ಸಂಜೆಯವೇಳೆಗೆ, ಮನ್ಮಥ ಮಹಿಮೆ-ಶನಿವಿಲಾಸ-ವಸಂತಸಿರಿ ವಿಚಾರಗಳನ್ನು ಮೆಲ್ಲುತ್ತಾ, ಭವ್ಯ ಭವಿತವ್ಯದ ಸುಖಾಗಮನಕ್ಕೆ ಕೆಂಪುಗಂಬಳಿಯನ್ನು ಬಿಚ್ಚಿಹರಡಿ. 
 
ಮನ್ಮಥ ಚಿಂತನಕ್ಕೆ ಮುಕ್ತಾಯ ಹಾಡುವ ಸಮಯದಲ್ಲಿ, ಮನ್ಮಥನ ಅನಂತರ ಯಾರು ಎಂಬ ಬಗ್ಗೆ ಕುತೂಹಲ ಕೆರಳುವುದು ಸಹಜವೇ ತಾನೇ? ಅದು ಮನ್ಮಥನಿಗೆ ತದ್ವಿರುದ್ಧವಾದ, ಶೃಂಗಾರರಸಭಂಗಕ್ಕಾಗಿಯೇ ಹುಟ್ಟಿರಬಹುದೆನಿಸುವ ವಿಷಯ ಎಂದರೆ ಗಾಬರಿಯಾಗುವುದೇ? ಇರಲಿ, ಸುತ್ತಿಬಳಸುವುದೇಕೆ? ಮುಂಬರುವ ಸಂವರ್ತವು ಬೇರಾವುದು ಅಲ್ಲ – ಅದುವೇ ದುರ್ಮುಖಿ!! 

~ ೦ ~

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x