ವಿಶ್ವ ಭೂದಿನದಂದು ಇಡೀ ಭೂಮಿಯನ್ನು ಕಾಪಾಡಲು ಕಾಡು ಬೇಕು. ಆದ್ದರಿಂದ ಮಾರ್ಚ್ 22ರಂದು ವಿಶ್ವದ ಎಲ್ಲಾ ದೇಶಗಳಲ್ಲೂ ಆದಷ್ಟು “ಗಿಡ ನೆಡಿ” ಎಂಬ ಘೋಷವಾಕ್ಯಕ್ಕೆ ಒತ್ತು ಕೊಟ್ಟಿದ್ದರು. ದೇಶದ ಪ್ರಧಾನಿಯಿಂದ ಹಿಡಿದು ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭೂದಿನದ ಅಂಗವಾಗಿ ಆಕರ್ಷಕವಾದ ಹೇಳಿಕೆಗಳನ್ನು ನೀಡಿದರು. ನಮ್ಮಲ್ಲಿಯ ಮಾಧ್ಯಮಗಳು ಭೂದಿನವನ್ನು ವಿಶೇಷವಾಗಿ ಪರಿಗಣಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಭೂಮಿ ಗುಂಡಗಿದೆ ಎನ್ನುತ್ತೇವೆ. ನಿಜವಾಗಲೂ ಭೂಮಿ ಗುಂಡಗಿದೆಯೇ? ದಿನದ 24 ತಾಸುಗಳಲ್ಲಿ ರಾತ್ರಿಯೆಷ್ಟು? ಹಗಲೆಷ್ಟು? ಖಂಡಗಳು ಚಲಿಸುತ್ತವೆಯೇ? ಹೀಗೊಂದಿಷ್ಟು ನಮ್ಮ ಪರಿಸರದ ಪ್ರಾಥಮಿಕ ಪರಿಚಯ ಮಾಡಿಕೊಳ್ಳೋಣವೆ?
ಭೂಮಿಯ ಸಮಭಾಜಕವೃತ್ತ ಕೊಂಚ ದಪ್ಪಗಿದೆ. ದಪ್ಪಗಿನ ಮನುಷ್ಯರ ಹೊಟ್ಟೆಯ ಮೇಲೆ ಪ್ಯಾಂಟ್ ನಿಲ್ಲುವುದಿಲ್ಲವಾದ್ದರಿಂದ, ಸೊಂಟಪಟ್ಟಿಯ ಸಹಾಯದಿಂದ ಕಟ್ಟಿ ಪ್ಯಾಂಟನ್ನು ಕಟ್ಟಿ ನಿಲ್ಲಿಸುತ್ತಾರಲ್ಲ ಹಾಗೆಯೇ ಭೂಮಿಯ ಮಧ್ಯಭಾಗದಲ್ಲಿ ಇದೇ ಬೆಲ್ಟ್ ಸುತ್ತುವರೆದಂತೆ ಇದೆ. ಭೂಮಿಯ ಬೇರೆ ಪ್ರದೇಶಗಳಿಗಿಂತ ಈ ಭಾಗ 0.3%ನಷ್ಟು ದಪ್ಪಗಿದೆ. ಯಾವುದೇ ಚಿತ್ರದಲ್ಲಿ ನೋಡಿದರೂ ಭೂಮಿ ದುಂಡಗಿರುವಂತೆಯೇ ಕಂಡು ಬಂದರೂ ವಾಸ್ತವಿಕವಾಗಿ 100ರಷ್ಟು ದುಂಡಗಿಲ್ಲ. ಈ ಭೂಮಿ ಹುಟ್ಟಿ 460 ಕೋಟಿ ವರ್ಷಗಳಾದವು. ಆಗ ಹಗಲಿನ ಸಮಯ ಬರೀ 6 ಗಂಟೆಯಷ್ಟಿತ್ತು. ನಂತರದಲ್ಲಿ ಭೂಮಿ ತನ್ನ ಕಕ್ಷೆಯಲ್ಲಿ ತಾನೇ ತಿರುಗುವುದನ್ನು ನಿಧಾನಗೊಳಿಸಿತು, ಇದಕ್ಕೆ ಕಾರಣ ಚಂದ್ರ. ಭೂಮಿ ಸೂರ್ಯನ ಸುತ್ತ ತಿರುಗುವ ಹಾಗೆಯೇ, ಚಂದ್ರ ಭೂಮಿಯ ಸುತ್ತ ತಿರುಗುತ್ತದೆ. ಈ ಪ್ರಕ್ರಿಯೆಯಲ್ಲಿ ಚಂದ್ರನ ಅಯಸ್ಕಾಂತೀಯ ಅಲೆಗಳು ಭೂಮಿಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪ್ರತಿ ನೂರು ವರ್ಷಕ್ಕೆ 0.0017 ಸೆಕೆಂಡಿನಷ್ಟು ಭೂಮಿಯ ತಿರುಗುವ ವೇಗ ಕಡಿಮೆಯಾಗುತ್ತದೆ. ಈ ಪ್ರಕ್ರಿಯಲ್ಲಿ ಕ್ರಮೇಣ ರಾತ್ರಿ ಕಡಿಮೆಯಾಗುತ್ತಾ, ಹಗಲು ಹೆಚ್ಚಾಗುತ್ತಿದೆ. ಸುಮಾರು 250 ದಶಲಕ್ಷ ವರ್ಷಗಳ ಹಿಂದೆ ಈಗಿನಂತೆ ಭೂಮಿಯ ಮೇಲೆ ಬೇರೆ-ಬೇರೆ ಖಂಡಗಳಿರಲಿಲ್ಲ.
ಭೂಪ್ರದೇಶವಷ್ಟೂ ಒಂದೇ ಮಹಾಖಂಡವಾಗಿತ್ತು. ಕಾಲನ ಕಾಲಡಿಯಲ್ಲಿ ಖಂಡಗಳು ರೂಪಿತವಾದವು. ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಫ್ರಿಕಾ, ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕ ಖಂಡಗಳೇ ಈಗಿರುವ ಖಂಡಗಳು. ಭೂಮಿಯ ಸುತ್ತ ತಿರುಗುತ್ತಿರುವ ಇನ್ನೂ ಎರಡು ಚಂದ್ರಗಳು ಇವೆ. ಇವಕ್ಕೆ ಕ್ಷುದ್ರಗ್ರಹಗಳು ಎನ್ನುಲಾಗುತ್ತದೆ. ನಿಜವಾಗಲೂ ಇವು ಚಂದ್ರನ ಸ್ಥಾನ ಪಡೆಯದಿದ್ದರೂ ವಿಜ್ಞಾನಿಗಳು ಇವುಗಳಿಗೆ ಕ್ರುಸ್ಥೆನ್ ಮತ್ತು ಆಸ್ಟ್ರಾಯಿಡ್ ಎಎ 29 ಎಂಬ ವಿಚಿತ್ರ ಹೆಸರುಗಳನ್ನು ಇಟ್ಟು ಗುರುತಿಸುತ್ತಾರೆ.
ಹಿಮಯುಗದ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತಾರೆ. ಅದೇ ಮೈತುಂಬಾ ಕೂದಲುಗಳಿರುವ ಬೃಹದ್ಗಜಗಳು ಜೀವಿಸಿದ್ದ ಕಾಲ. ಇಂದಿಗೆ ಸುಮಾರು 30 ಸಾವಿರ ವರ್ಷಗಳ ಹಿಂದೆ ಚಳಿಯಿಂದ ರಕ್ಷಣೆ ಪಡೆಯಲು ಜೂಲು ಕೂದಲುಗಳಿದ್ದ ಆನೆಗಳು ಇದ್ದವು ಪ್ರಾಕ್ತನ ಅಧ್ಯಯನ ಶಾಸ್ತ್ರಜ್ಞರು ಪುರಾವೆ ಸಮೇತ ತೋರಿಸಿದ್ದಾರೆ. ಇದಕ್ಕೂ ಮೊದಲೂ ಕೂಡಾ ಈ ಭೂಮಿಯ ಮೇಲೆ ಮತ್ತೆ ನಾಲ್ಕು ಹಿಮಯುಗಗಳು ಆಗಿಹೋಗಿವೆ ಎಂದು ತಜ್ಞರು ವಿವರಿಸಿದ್ದಾರೆ. ಆಗ ಈ ಭೂಮಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿತ್ತು ಎನ್ನಲಾಗಿದೆ.
ಈ ಭೂಮಿಯ ಮೇಲಿರುವ ಅತ್ಯಂತ ಶುಷ್ಕ ಪ್ರದೇಶ ಎಲ್ಲಿದೆ ಗೊತ್ತೆ. ಫೆಸಿಫಿಕ್ ವiಹಾಸಾಗರದ ಪಕ್ಕದಲ್ಲೇ ಇದೆ. ಚಿಲಿ ದೇಶದ ಅಟಕಾಮ ಮರುಭೂಮಿಯೇ ಈ ಪ್ರದೇಶ. ಹತ್ತಿರದಲ್ಲೇ ಕಣ್ಣು ಹಾಯಿಸಿದಷ್ಟೂ ದೂರ ನೀರಿದೆ, ಆದರೆ ಕುಡಿಯಲು ಒಂದೇ ಒಂದು ಹನಿ ನೀರಿಲ್ಲ. ಕಳೆದ ನಾಲ್ಕುನೂರು ವರ್ಷಗಳಿಂದ ಅಲ್ಲಿ ಮಳೆಯೇ ಇಲ್ಲ.
ನ್ಯೂಟನ್ ತಲೆ ಮೇಲೆ ಸೇಬು ಬಿತ್ತು. ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇದೆ ಎಂಬ ವಿಜ್ಞಾನ ಅನಾವರಣಗೊಂಡಿತು. ಹಾಗಂತ ಇಡೀ ಭೂಮಿಯ ಮೇಲೆ ಒಂದೇ ರೀತಿಯ ಗುರುತ್ವಾಕರ್ಷಣೆ ಶಕ್ತಿ ಇದೆ ಎಂದು ತಿಳಿಯಲಾಗದು. ಭೂಮಿಯ ಮೇಲೆ ಪರ್ವತಗಳಿವೆ, ಸಮುದ್ರಗಳಿವೆ, ಕೊಳ್ಳಗಳಿವೆ. ಈ ಗುರುತ್ವಾಕರ್ಷಣ ವ್ಯತ್ಯಾಸಕ್ಕೆ “ಗುರುತ್ವಾಕರ್ಷಣಾ ವೈಪರೀತ್ಯ”ವೆಂದು ಕರೆಯಲಾಗುತ್ತದೆ. ಇದನ್ನು ಕಂಡು ಹಿಡಿಯಲು “GRACE (Gravity Recovery and Climate Experiment)” ಯೋಜನೆಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
ಹಿಂದಿನ ಹಿಮಯುಗದ ಸಂದರ್ಭದಲ್ಲಿ ಸಮುದ್ರದ ಮಟ್ಟ ಈಗಿಗಿಂತ ಸುಮಾರು 120 ಮೀಟರ್‍ನಷ್ಟು ಕಡಿಮೆಯಿತ್ತು. ಇದಕ್ಕೂ ಬಹಳ ಮುನ್ನ ಅಂದರೆ ಹಿಮಯುಗಕ್ಕೂ ಬಹಳ ಹಿಂದೆ ಸಮುದ್ರ ಮಟ್ಟ ಈಗಿನ ಮಟ್ಟಕ್ಕಿಂತ 230 ಅಡಿಗಳಷ್ಟು ಎತ್ತರಕ್ಕೆ ಇತ್ತು. ಅಂದರೆ ಈಗ ನಾವು ವಾಸಿಸುತ್ತಿರುವ ಬಹಳಷ್ಟು ಪ್ರದೇಶಗಳು ಸಮುದ್ರದ ಅಡಿಯಲ್ಲಿದ್ದವು. ಈಗಿನ ಹವಾಮಾನ ವೈಪರೀತ್ಯಕ್ಕೆ ತಕ್ಷಣದಲ್ಲಿ ತಡೆ ಹಾಕದಿದ್ದಲ್ಲಿ, ಇದೇ ಸಮುದ್ರ ಮಟ್ಟ ಈ ಶತಮಾನದ ಅಂಚಿನ ಹೊತ್ತಿಗೆ 20 ಅಡಿಗಳಷ್ಟು ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಹಾಗಾದಲ್ಲಿ ಸಮುದ್ರ ದಡದಲ್ಲಿರುವ ಅಷ್ಟೂ ಜನಸಂಖ್ಯೆ ಒಂದೋ ಸಮುದ್ರದಲ್ಲಿ ಮುಳುಗಬೇಕಾಗುತ್ತದೆ ಇಲ್ಲವಾದಲ್ಲಿ ಎತ್ತರದ ಪ್ರದೇಶಗಳಿಗೆ ಗುಳೆ ಹೋಗಬೇಕಾಗುತ್ತದೆ. ಈ ತರಹದ ಅಪಾಯವೇನಾದರೂ ಸಂಭವಿಸಿದಲ್ಲಿ ಮನುಕುಲದ ಅವಸಾನವಾಗುವುದನ್ನು ನೋಡಲು ನಾವುಗಳೇ ಇರಲಾರೆವು.
ನಿಶ್ಚಿತವಾಗಿ ಈ ಭೂಮಿಗೆ ಒಂದು ಅಂತ್ಯವಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಆದರೆ, ಅದಿನ್ನೂ ತುಂಬಾ ದೂರವಿದೆ. ಇನ್ನೂ 500 ಕೋಟಿ ವರ್ಷ ಸೂರ್ಯ ಉರಿದು ಆಮೇಲೆ ಖಾಲಿಯಾಗುತ್ತಾನೆ. ಆಗ ಈ ಭೂಮಿ ಅಸ್ತಿತ್ವದಲ್ಲೇ ಇರುವುದಿಲ್ಲ. ಯಾವ ಜೀವಿಗಳೂ ಬದುಕುಳಿಯಲು ಸಾಧ್ಯವಿಲ್ಲ. ಆದರೆ ನಮ್ಮ ಈಗಿನ ವರ್ತನೆ ಹೇಗಿದೆಯೆಂದರೆ, ಅಷ್ಟು ವರ್ಷ ಕಾಯಲು ನಾವು ತಯಾರಿಲ್ಲ. ಅಷ್ಟರೊಳಗೆ ಭೂಮಿಯ, ಮನುಕುಲದ ಅಂತ್ಯವಾಗಬಹುದಾದ ಎಲ್ಲಾ ಸಾಧ್ಯತೆಗಳು ಇವೆ, ಅದು ಪರಮಾಣು ಯುದ್ಧವಾಗಿರಬಹುದು ಅಥವಾ ಐಷಾರಾಮಿ ಮನ:ಸ್ಥಿತಿಯರಬಹದು, ಅಭಿವೃದ್ಧಿಯ ಪರಕಾಷ್ಟೆಯೂ ಆಗಿರಬಹುದು. ಒಟ್ಟಾರೆ ಕಾರಣ ಮಾತ್ರ ನಾವೇ ಆಗುತ್ತಿರುವುದು ವಿಪರ್ಯಾಸದ ಪರಮಾವಧಿಯಷ್ಟೆ.
ಮಲೆನಾಡಿನಲ್ಲಿ ವಾಸಿಸುತ್ತಿರುವ ನಮಗೆ ಚಂಡಮಾರುತವನ್ನು ಕೇಳಿ ಗೊತ್ತೇ ಹೊರತು, ಅನುಭವಿಸಿದವರಲ್ಲ. ಅದೇ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ, ಚಂಡಮಾರುತಕ್ಕೂ ಮುನ್ನ ಪ್ರಶಾಂತ ವಾತಾವರಣವಿರುತ್ತದೆ. ಪ್ರಕೃತಿ ಅತ್ಯಂತ ಪ್ರಶಾಂತವಾಗಿದೆಯೆಂದರೆ, ಇದು ಮುಂಬರುವ ಚಂಡಮಾರುತದ ಸೂಚನೆ ಆಗಿರುತ್ತದೆ ಎಂದು ವಿಜ್ಞಾನಿಗಳು ಕಾರಣ ಹುಡುಕಿದ್ದಾರೆ. ಚಂಡಮಾರುತ ತನ್ನ ಉಗಮದ ಹೊತ್ತಿನಲ್ಲಿ ವಾತಾವರಣದ ಬಿಸಿ ಹಾಗೂ ತೇವಾಂಶದ ಗಾಳಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಸುತ್ತಲಿನ ವಾತಾವರಣ ಅಹ್ಲಾದಕರವಾಗಿ ತೋರುತ್ತದೆ.
ಈ ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ನೀರು ಬೇಕೇ ಬೇಕು. ಸಮುದ್ರದ ತಳದಲ್ಲಿರುವ ಜೀವಿಯಾಗಲಿ ಅಥವಾ ಅತ್ಯಂತ ಶುಷ್ಕ ವಾತಾವರಣವಿರುವ ಮರುಭೂಮಿಯಾಗಲಿ ನೀರಿಲ್ಲದೆ ಜೀವವಿಲ್ಲ. ಹಾಗಾಗಿಯೇ ಖಗೋಳ ಜೀವಿಶಾಸ್ತ್ರಜ್ಞರು (ಆಸ್ಟ್ರೋಬಯಾಲಜಿಸ್ಟ್) ಮೊದಲು ಎಲ್ಲಿ ನೀರು ಲಭ್ಯವಿದೆ ಎಂದು ಹುಡುಕುವ ನಿರಂತರ ಪ್ರಯತ್ನದಲ್ಲಿದ್ದಾರೆ. ಲೆಕ್ಕಾಚಾರದ ಪ್ರಕಾರ ಸುಸ್ಥಿರವಾಗಿ ಭೂಮಿಯ ಸಂಪನ್ಮೂಲಗಳನ್ನು ನಾವು ಉಪಯೋಗಿಸಿದರೆ, 1000 ಕೋಟಿ ಜನಸಂಖ್ಯೆ ಐಕ್ಯಮತ್ಯವಾಗಿಯೇ ಬದುಕಬಹುದಾದ ವಾತಾವರಣ ನಮ್ಮ ಭೂಮಿಯಲ್ಲೇ ಇದೆ.
96.5% ನೀರು ಸಮುದ್ರದಲ್ಲಿದೆ ಹಾಗೂ ನೀರು ಭೂಮಿಯ ಮೇಲ್ಮೈಯ 71ರಷ್ಟು ಭಾಗವನ್ನು ಆವರಿಸಿಕೊಂಡಿದೆ. 0.001% ವಾತಾವರಣದಲ್ಲಿದ್ದರೆ, 3.5% ಸಿಹಿನೀರು ಕೆರೆ, ನದಿ, ಕೊಳ್ಳ, ಅಂತರ್ಜಲ ಹಾಗೂ ಹಿಮದ ರೂಪದಲ್ಲಿದೆ. ಇದರಲ್ಲಿ ಹಿಮದ ರೂಪದಲ್ಲಿರುವ ಸಿಹಿನೀರಿನ ಪಾಲು 68% ಮತ್ತು ಅಂತರ್ಜಲದ ಪಾಲು 30%.
5 ಲೀಟರ್ ಸಮುದ್ರದ ನೀರಿನಲ್ಲಿ ಒಂದು ಲೋಟದಷ್ಟು ಉಪ್ಪಿನಂಶ ಇರುತ್ತದೆ. ಹಾಗೂ ಇದು ಸಮುದ್ರದಿಂದ ಸಮುದ್ರಕ್ಕೆ ವ್ಯತ್ಯಾಸವನ್ನೂ ಹೊಂದಿದೆ. ಅಟ್ಲಾಂಟಿಕ್ ಮಹಾಸಾಗರದ ನೀರಿನಲ್ಲಿ ಫೆಸಿಫಿಕ್ ಮಹಾಸಾಗರದ ನೀರಿಗಿಂತ ಹೆಚ್ಚಿನ ಉಪ್ಪಿನಂಶವಿದೆ. ವಿಚಿತ್ರವೆಂದರೆ, ಅತ್ಯಂತ ಹೆಚ್ಚು ಉಪ್ಪಿನಂಶ ಇರುವುದು ಅಂಟಾರ್ಟಿಕದ ಡಾನ್ ಜಾನ್ ಸರೋವರದಲ್ಲಿ. ಒಂದು ಚಿಟಿಕೆ ಮಣ್ಣಿನಲ್ಲಿ ಈ ಪ್ರಪಂಚದ ಜನಸಂಖ್ಯೆಗಿಂತ ಹೆಚ್ಚಿನ ಸೂಕ್ಷಾಣುಗಳು ಇರುತ್ತವೆ. ಹಾಗೆಯೇ ನೀರಿನ ಒಂದು ಹನಿಯಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ಸೂಕ್ಷ್ಮಜೀವಿಗಳಿರುತ್ತವೆ. ಹಾಗೆಯೇ ನಮ್ಮ ನಾವು ಮಗುವಾಗಿದ್ದಾಗ ನಮ್ಮ ದೇಹದ 78% ನೀರಿನಿಂದ ಕೂಡಿರುತ್ತದೆ ಮತ್ತು ವಯಸ್ಕರಲ್ಲಿ ಈ ಪ್ರಮಾಣ 55-60% ಆಗಿರುತ್ತದೆ. ನಮ್ಮ ದೇಹದ ಹೆಚ್ಚೂ ಕಡಿಮೆ ಎಲ್ಲಾ ಭಾಗಗಳು ನೀರಿನ ಸಹಾಯದಿಂದಲೇ ಕಾರ್ಯನಿರ್ವಹಿಸುತ್ತದೆ. ರಕ್ತದಲ್ಲೂ ನೀರಿನ ಅಂಶವಿದ್ದು, ರಕ್ತದ ಪರಿಚಲನೆಯಿಂದಲೇ ನಮ್ಮ ದೇಹದ ಎಲ್ಲಾ ಭಾಗಗಳಿಗೂ ಪೋಷಕಾಂಶಗಳು ರವಾನೆಯಾಗುತ್ತವೆ. ನಮ್ಮ ದೇಹದಲ್ಲಿ ಶೇಖರಣೆಯಾಗುವ ತ್ಯಾಜ್ಯಗಳು ಕೂಡ ನೀರಿನ ಮೂಲಕ ವಿಸರ್ಜಿಸಲ್ಪಡುತ್ತವೆ. ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಡಲು ನೀರು ಸಹಕಾರಿ. ನಮ್ಮ ಮೆದುಳು ಹಾಗೂ ಬೆನ್ನುಹುರಿಯನ್ನು ಆಘಾತದಿಂದ ರಕ್ಷಿಸುವ (ಶಾಕ್ ಅಬ್ಸಾರ್ಬರ್) ಕೆಲಸವನ್ನೂ ನೀರು ಮಾಡುತ್ತದೆ. ನೀರಿನ ಇನ್ನೊಂದು ವಿಶೇಷವೆಂದರೆ, ನೀರು ಘನರೂಪದಲ್ಲೂ, ದ್ರವರೂಪದಲ್ಲೂ ಹಾಗೂ ನೀರಾವಿಯ ಮೂಲಕ ಅನಿಲ ರೂಪದಲ್ಲೂ ಸಿಗುತ್ತದೆ. ನಿಸರ್ಗದ ಅಪರೂಪದ ವಿಶೇಷ ಈ ಗುಣ ನೀರಿನಲ್ಲಿ ಮಾತ್ರ ಕಾಣಬಹುದು. ಘನರೂಪದ ಆಮ್ಲಜನಕ ಹಾಗೂ ದ್ರವರೂಪದ ಕಬ್ಬಿಣ ನಿಮಗೆ ನೈಸರ್ಗಿಕವಾಗಿ ನೋಡಲು ಸಿಗುವುದಿಲ್ಲ. ಸಮಭಾಜಕ ವೃತ್ತದ ಆಜುಬಾಜಿನಲ್ಲಿರುವ ಉಷ್ಣವಲಯದ ಮಳೆಕಾಡುಗಳು ಪ್ರಪಂಚಕ್ಕೆ ಬೇಕಾದ 40% ಆಮ್ಲಜನಕವನ್ನು ಪೂರೈಸುತ್ತವೆ ಜೊತೆಗೆ ಜಗತ್ತಿನ ಬೇರೆಲ್ಲೂ ಸಿಗದ ಜೀವಿವೈವಿಧ್ಯ ಈ ಪ್ರದೇಶದಲ್ಲಿ ಲಭ್ಯವಿದೆ. ಯಾವಾಗಲೂ ಬಿಸಿಯಾದ ಜೊತೆಗೆ ತೇವಾಂಶವಿರುವ ಈ ಪ್ರದೇಶವೂ ಜಗತ್ತಿನ 50% ಜೀವಿವೈವಿಧ್ಯವನ್ನು ಹೊಂದಿರುವ ಪ್ರದೇಶವಾಗಿವೆ. ಮರಳುಗಾಡೆಂದರೆ ನೀರು ಅತ್ಯಂತ ಕಡಿಮೆ ಲಭ್ಯವಿರುವ ಪ್ರದೇಶ, ಇಲ್ಲಿ ಮಳೆಯೂ ಕಡಿಮೆ, ಕ್ಯಾಕ್ಟಸ್‍ನಂತಹ ಸಸ್ಯಗಳು ಲಭ್ಯವಿರುವ ನೀರನ್ನೇ ಅತ್ಯಂತ ಮಿತವಾಗಿ ಬಳಸಿಕೊಂಡು ಬದುಕುತ್ತವೆ. ಮರಳುಗಾಡಿನಲ್ಲೇ ವಾಸಿಸುವ ಕಾಂಗೋರೊ ಇಲಿಯಂತೂ ನೀರನ್ನೆ ಉಪಯೋಗಿಸದೆ ಬದುಕುತ್ತದೆ. ತನ್ನ ದೇಹಕ್ಕೆ ಬೇಕಾದ ನೀರನ್ನು ತಾನು ತಿನ್ನುವ ಬೀಜಗಳಿಂದಲೇ ಪಡೆಯುತ್ತದೆ.
ಕೆರೆ, ಸರೋವರ, ಹಳ್ಳ-ಕೊಳ್ಳ, ನದಿ ಇವು ಸಹಜವಾಗಿ ಸಿಹಿನೀರಿನಿಂದ ಕೂಡಿದ್ದು, ಇದು ಹೇರಳವಾದ ಜೀವಿವೈವಿಧ್ಯದ ತವರಾಗಿದೆ. ಇಲ್ಲಿರುವ ಜೀವಜಗತ್ತು ಸಮುದ್ರದ ಉಪ್ಪುನೀರಿನಲ್ಲಿ ಬದುಕುಳಿಯಲಾರವು, ಇಡೀ ಪ್ರಪಂಚದ ಎಲ್ಲೆಡೆ ಸಿಹಿನೀರಿನ ಸಂಗ್ರಹವನ್ನು ಕಾಣಬಹುದಾಗಿದ್ದು, ವಿವಿಧ ಜಾತಿಯ ಕಪ್ಪೆಗಳು, ಮೀನುಗಳು, ಕೀಟಪ್ರಪಂಚ, ಸೂಕ್ಷ್ಮಜೀವಿಗಳಲ್ಲದೆ, ಸಿಹಿನೀರಿನ ಡಾಲ್ಪಿನ್, ನೀರು ನಾಯಿಗಳು, ಬೀವರ್‍ಗಳು, ಪ್ಲಾಟಿಪಸ್, ಗರಿಯಾಲ್ ಮೊಸಳೆಗಳು ವಿಶೇಷವಾಗಿ ಸಿಹಿನೀರಿನಲ್ಲೇ ಜೀವಿಸುವ ಪ್ರಾಣಿಗಳಾಗಿವೆ.
ಈಗ ಮತ್ತೆ ಮೊದಲಿನ ಪ್ಯಾರಕ್ಕೆ ಬರೋಣ. ರಾಷ್ಟ್ರ ನಾಯಕರು, ರಾಜ್ಯ ನಾಯಕರು ಭೂಮಿಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ಕುರಿತು ಒಳ್ಳೊಳ್ಳೆ ಮಾತುಗಳನ್ನೇ ಆಡಿದ್ದಾರೆ. ಆದರೆ, ಕಾರ್ಯತ: ಸಾಧಿಸುವ ಇಚ್ಛೆ ಯಾರಲ್ಲೂ ಕಂಡು ಬರುವುದಿಲ್ಲ. ಇದೇ ಹೊತ್ತಿನಲ್ಲಿ ಪಟ್ಟಣಗಳ, ನಗರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 206 ಅಥವಾ ಬಿ.ಎಚ್.ರಸ್ತೆಯನ್ನು ಅಗಲೀಕರಣ ಮಾಡಲು ಅಪಾರ ಹಣ ಬಿಡುಗಡೆಯಾಗಿದೆ. ಭೂಮಿಯನ್ನು ಕಳೆದುಕೊಳ್ಳುವ ಸಾರ್ವಜನಿಕರಿಗೆ ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನೀಡುವ ಯೋಜನೆ ತಯಾರಾಗಿ ಹಣವೂ ಬಿಡುಗಡೆಯಾಗಿದೆ. ತುಪ್ಪೂರಿನಿಂದ ತಾಳಗುಪ್ಪದವರೆಗೆ ಚತುಷ್ಪತ ರಸ್ತೆಗಾಗಿ ಸಾವಿರಾರು ಮರಗಳ ಹನನವಾಗಲಿದೆ. ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಸಾಧಿಸುವ ಯಾವ ಯೋಜನೆಗಳು ತಯಾರಾಗುತ್ತಿಲ್ಲ. ಶತಮಾನಗಳಿಂದ ಸಾವಿರಾರು ಪಶು-ಪಕ್ಷಿಗಳಿಗೆ ಆಹಾರ ನೀಡುತ್ತಿದ್ದ ಮರಗಳ ಮಾರಣಹೋಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಅಖಿಲೇಶ, ತುಂಬಾ ತುಂಬಾ ಮಾಹಿತಿಪೂರ್ಣ ಹಾಗೂ ಓದಿಸಿಕೊಂಡು ಹೋಗುವ ನಿಮ್ಮ ಲೇಖನಗಳ ಅಭಿಮಾನಿ ನಾನು!
ಆದರೆ, ಒಂದು ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ಹಿಮಯುಗದ ಸಮಯದಲ್ಲಿ ದುರಾಸೆಯ ಮಾನವ ಪ್ರಾಣಿ ಇರಲಿಲ್ಲ, ಹವಾಮಾನ ವೈಪರೀತ್ಯ ಆಗಲೂ ಯಾಕೆ ಉಂಟಾಗಿರಬಹುದು? ಹಿಮ ಯಾಕೆ ಕರಗಿತು?