ಇಲ್ಲೊಂದು ಸೇತುವೆಯಿದೆ. ಇದನ್ನು ನೋಡಿದವರೆಲ್ಲಾ ಇದೊಂದು ಇಪ್ಪತ್ತನೇ ಶತಮಾನದ ಅದ್ಭುತಗಳಲ್ಲೊಂದು ಎಂದು ಉಧ್ಗರಿಸುತ್ತಾರೆ. ಅಲ್ಲದೇ ಇದನ್ನು ಶತಮಾನದ ಅದ್ಬುತಗಳಲ್ಲೊಂದು ಎಂದೂ ಘೋಷಿಸಲಾಗಿದೆ. ಜಗತ್ತಿನ ಮೊದಲ ತೂಗುಸೇತುವೆಯೂ ಇದೇ ಆಗಿದೆ ಎಂದರೆ ಆಶ್ಚರ್ಯವಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆಯು 1.7 ಮೈಲುಗಳಷ್ಟು ಉದ್ದವಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ತುದಿಯನ್ನು ಮರೀನ್‍ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ 7 ಅಧ್ಬುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡಾ ಒಂದು.
ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆ ಮುಖ್ಯವಾಗಿ ಎರೆಡು ಬೃಹತ್ ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಈ ಗೋಪುರಗಳು ನೀರಿನಿಂದ 726 ಅಡಿಗಳಷ್ಟು ಎತ್ತರವಿದ್ದು, ಎರೆಡೂ ಗೋಪುರಗಳ ನಡುವೆ ಸುಮಾರು 4200 ಅಡಿಗಳಷ್ಟು ಅಂತರವಿದೆ. ಗೋಪುರದ ತುದಿಗಳಿಂದ ಇಳಿಬಿಡಲಾಗಿರುವ ಎರೆಡು ಬಲಿಷ್ಠ ಉಕ್ಕಿನ ಕೇಬಲ್ಲುಗಳು ಸೇತುವೆಯ ಸಂಪೂರ್ಣ ಭಾರವನ್ನು ತಡೆದುಕೊಳ್ಳುತ್ತವೆ. ಈ ಉಕ್ಕಿನ ಕೇಬಲ್ಲುಗಳ ಒಳಗೆ ಸುಮಾರು 90 ಸಾವಿರ ಮೈಲಿಗಳಷ್ಟು ಉದ್ದದ ತಂತಿಗಳನ್ನು ಬಳಸಲಾಗಿದೆ. ಈ ಬೃಹತ್ ತೂಗುಸೇತುವೆಯ ನಿರ್ಮಾಣ ಕಾರ್ಯ ಜೋಸೆಫ್ ಬೈರ್ಮನ್ ಸ್ಟ್ರಾಸ್ ಎಂಬ ಮುಖ್ಯ ಎಂಜಿನಿಯರ್‍ರವರ ಮಾರ್ಗದರ್ಶನದಲ್ಲಿ 1933ರಲ್ಲಿ ಪ್ರಾರಂಭವಾಗಿದ್ದು, ಸತತ 4 ವರ್ಷಗಳಲ್ಲಿ ಸಾವಿರಾರು ಕಾರ್ಮಿಕರ ಪರಿಶ್ರಮದಿಂದ 1937ರ ಸುಮಾರಿಗೆ ಸಂಚಾರಕ್ಕೆ ಮುಕ್ತವಾಯಿತು. ಅಂದು 2 ಲಕ್ಷ ಜನರು ಸೇತುವೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಡೆದಾಡುವ ಮೂಲಕ ಈ ಭವ್ಯ ಸ್ಮಾರಕಕ್ಕೆ ವಿಧ್ಯುಕ್ತ ಆರಂಭ ಒದಗಿಸಲಾಯಿತು. ಈ ಅಧ್ಬುತದ ನಿರ್ಮಾಣಕ್ಕೆ ಸುಮಾರು 90 ಸಾವಿರ ಟನ್‍ನಷ್ಟು ಉಕ್ಕನ್ನು ಬಳಕೆ ಮಾಡಲಾಗಿದ್ದು, ಸೇತುವೆಯು ಸುಮಾರು 88,7000 ಟನ್ ಭಾರವಿದೆ. ಮತ್ತೊಂದು ವಿಶೇಷವೆಂದರೆ ಈ ಸೇತುವೆಯ ನಿರ್ಮಾಣದ ವೇಳೆಯಲ್ಲಿಯೇ ಹತ್ತಕ್ಕೂ ಹೆಚ್ಚು ಕಾರ್ಮಿಕರು ಆಯತಪ್ಪಿ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರಂತೆ. ಅಷ್ಟೊಂದು ಕಠಿಣವಾಗಿತ್ತು ಇದರ ನಿರ್ಮಾಣ ಕಾರ್ಯ..!!
ಹೆಸರಿನ ಹಿನ್ನೆಲೆ
1846ರಲ್ಲಿಯೇ ಯುಎಸ್ ಆರ್ಮಿಯ ಲೆಪ್ಟಿನೆಂಟ್ ಜಾನ್ ಸಿ ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗದಲ್ಲಿ ಫೆಸಿಫಿಕ್ ಸಾಗರದಿಂದ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಗೆ ದ್ವಾರದಂತಿದ್ದ ಕಿರಿದಾದ ಜಲಸಂಧಿಯನ್ನು ನೋಡಿ ಇದನ್ನು ‘ಗೋಲ್ಡನ್‍ಗೇಟ್’ ಎಂದು ಕರೆದಿದ್ದನು. ಮುಂದೆ ತೂಗುಸೇತುವೆ ನಿರ್ಮಾಣವಾದಾಗಲೂ ಅದೇ ಹೆಸರೇ ಉಳಿದುಕೊಂಡಿದೆ. ಗೋಲ್ಡನ್ ಗೇಟ್ ಎಂಬ ಉಪಮೇಯವಿದ್ದರೂ ಅದಕ್ಕೆ ಕಡುಕಿತ್ತಳೆ ಬಣ್ಣವನ್ನು ಬಳಿಯಲಾಗಿದೆ.
ಸುಮಾರು 90 ಅಡಿಗಳಷ್ಟು ಅಗಲವಿರುವ ಈ ತೂಗು ಸೇತುವೆಯು ಆರು ಪಥದ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಒಳಗೊಂಡಿದೆ. ಸಮೀಕ್ಷೆಯೊಂದರ ಪ್ರಕಾರ ಈಗಂತೂ ದಿನನಿತ್ಯ ಒಂದು ಲಕ್ಷಕ್ಕೂ ಅಧಿಕ ವಾಹನಗಳು ಈ ತೂಗುಸೇತುವೆಯ ಸದುಪಯೋಗ ಪಡೆದುಕೊಳ್ಳುತ್ತಿವೆ. ಅಂದು ಸೇತುವೆ ನಿರ್ಮಾಣಕ್ಕೆ ಕೇವಲ 210 ಕೋಟಿ ರೂಗಳಷ್ಟೇ ವೆಚ್ಚವಾಗಿತ್ತಂತೆ. ಅದೇ ಸೇತುವೆಯನ್ನು ಇಂದು ಮರುನಿರ್ಮಾಣ ಮಾಡಲು ಸರಿಸುಮಾರು 10 ಸಾವಿರ ಕೋಟಿ ರೂಗಳಾದರೂ ಬೇಕಂತೆ..!!
ಗೋಲ್ಡನ್ ಗೇಟ್‍ಗೆ ಖ್ಯಾತಿಯಷ್ಟೇ ಅಪಖ್ಯಾತಿಯೂ ಸುತ್ತಿಕೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣವಾಗಿಯೂ ಇದು ಪ್ರಸಿದ್ಧವಾಗಿದೆ. ಇದುವರೆಗೂ ಸಾವಿರಕ್ಕೂ ಅಧಿಕ ಮಂದಿ ಇದರ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದಕ್ಕೆ ತದ್ವಿರುದ್ಧವೆಂಬಂತೆ ಈ ಸೇತುವೆಯು ಫೋಟೋಗ್ರಾಫರ್‍ಗಳ ಸ್ವರ್ಗ ಎನಿಸಿಕೊಂಡಿದೆ. ಜಗತ್ತಿನ ಅತಿಹೆಚ್ಚು ಫೋಟೋಗಳನ್ನು ಸೆರೆಹಿಡಿಯಲಾಗಿರುವುದು ಈ ಸೇತುವೆಯ ಮೇಲಿನಿಂದಲೇ ಎಂಬುದು ಇದರ ಮತ್ತೊಂದು ಹೆಗ್ಗಳಿಕೆ. ಇಂದಿಗೂ ತನ್ನ ನೈಜ ಸೌಂದರ್ಯವನ್ನು ಹಾಗೇ ಉಳಿಸಿಕೊಂಡು ಬಂದಿರುವ ಈ ಗೋಲ್ಡನ್ ಗೇಟ್ ಬ್ರಿಡ್ಜ್‍ನ ಉಸ್ತುವಾರಿ ನೋಡಿಕೊಳ್ಳಲು ದಿನನಿತ್ಯ 50ಕ್ಕೂ ಹೆಚ್ಚು ಪರಿಣಿತ ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಪ.ನಾ.ಹಳ್ಳಿ.ಹರೀಶ್ ಕುಮಾರ್