ಕಮಲಾ ತನ್ನ ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಬಾಲ್ಯ, ತನ್ನನ್ನು ಮುದ್ದುಮಾಡಿ ಬೆಳೆಸಿದ ತವರು, ಅವಳಪ್ಪ ಅಮ್ಮನ ಮುದ್ದು ಸಾಲದೆಂದು ಅವಳ ಅಣ್ಣ ಕೂಡ ಅವಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಅವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದ ಅವಳನ್ನು ಸಿರಿವಂತನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಅವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದ. ಆದರೆ ಅವನು ಮತ್ತು ಅವನ ಅಪ್ಪ ಅಮ್ಮ ಮನೆಯಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಿದ್ದರು. ಹೊರಗಿನ ಸಮಾಜದಲ್ಲಿ ಸಭ್ಯಸ್ಥರೆನಿಸಿಕೊಂಡ ಅವರು, ತಮ್ಮ ನಿಜವಾದ ಬಣ್ಣವನ್ನು ಮನೆಯಲ್ಲಿ ತೋರಿಸುತ್ತಿದ್ದರು. ಅವರನ್ನು ಅರ್ಥ ಮಾಡಿಕೊಳ್ಳುವುದು ಕಮಲಾ ಳಿಗೆ ಕಷ್ಟವಾಗುತ್ತಿತ್ತು. ಎಲ್ಲರೆದುರು ತಮ್ಮ ಸೊಸೆಯನ್ನು ಹೊಗಳಿ ಬೀಗುತ್ತಿದ್ದ ಅವರು, ಹೊರಗಿನ ಜನ ಇಲ್ಲದಿದ್ದಾಗ ಬಾಯಿಗೆ ಬಂದಂತೆ ಬೈಯ್ಯುವುದು ಸಾಮಾನ್ಯವಾಗುತ್ತ ಬಂತು. ಅವಳಿಗೆ ಇವರ ವರ್ತನೆ ವಿಚಿತ್ರ ಎನಿಸುತ್ತಿದ್ದರು ಯಾರ ಮುಂದೆಯೂ ಹೇಳಲು ಆಗುತ್ತಿರಲಿಲ್ಲ. ಅವಳ ಮಾತನ್ನು ಯಾರು ನಂಬುವಂತೆ ಅವರು ನಡೆದುಕೊಳ್ಳುತ್ತಿರಲಿಲ್ಲ. ಹೊರಗೊಂದು ಒಳಗೊಂದು ಅನ್ನುವ ಮಾತಿಗೆ ತಕ್ಕಂತೆ ಇದ್ದರು. ಅವಳಿಗೆ ಇದನ್ನೆಲ್ಲ ನೋಡಿ ಬಹಳಷ್ಟು ಹಿಂಸೆ ಆಗುತ್ತಿತ್ತು. ತವರು ಮನೆಯಲ್ಲಿಯೂ ಹೇಳಲು ಹಿಂಜರೆಯುತ್ತಿದ್ದಳು. ಇದೆಲ್ಲರ ಮಧ್ಯೆ ಅವಳು ಗರ್ಭಿಣಿಯು ಆದಳು. ಅವಳ ಗಂಡ ಸಹ ತನ್ನ ಹೆತ್ತವರಂತೆ ಆಡುತ್ತಿದ್ದ. ಅವನ ನಿಜವಾದ ಗುಣ ಹೇಗೆ ಎಂದು ತಿಳಿಯಲು ಆಗುತ್ತಿರಲಿಲ್ಲ. ಎಲ್ಲರ ಮುಂದೆ ಅವಳನ್ನು ತುಂಬ ಪ್ರೀತಿಸುವಂತೆ ಮಾತನಾಡುತ್ತಿದ್ದ. ಆದರೆ ಅವರಿಬ್ಬರೇ ಇದ್ದಾಗ ಅವನ ಮಾತು, ನಡತೆ ಯಾವುದು ಸಹ ಹಾಗೆ ಅನಿಸುತ್ತಿರಲಿಲ್ಲ.
ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎಂದು ಯೋಚಿಸುತ್ತಿದ್ದಳು. ಹೀಗೆಯೇ ಸಮಯ ಕಳೆಯುತ್ತಿತ್ತು. ಅವಳ ಮಗುವಿಗೆ ೨ ವರ್ಷವಾಯುತ್ತ ಬಂದಿತ್ತು. ಇಂತಹ ಜನ ಅವರ ಭಾವನಾರಹಿತ ಜೀವನ, ಅವೆಲ್ಲವನ್ನು ಹೇಗೆ ಸಹಿಸುವುದು ಎನ್ನುವುದು ಅವಳಿಗೆ ಒಗಟಾಗಿ ಕಾಡುತ್ತಿತ್ತು. ಒಮ್ಮೊಮ್ಮೆ ಜೀವನವೇ ಸಾಕೆನ್ನಿಸುವಷ್ಟು ಹಿಂಸೆ ಆಗುತ್ತಿತ್ತು. ಆದರೆ ಮಗುವಿನ ಬಗ್ಗೆ ಯೋಚಿಸಿ ಸುಮ್ಮನಾಗುತ್ತಿದ್ದಳು. ಬುದ್ದಿವಂತೆ ಆಗಿದ್ದ ಅವಳು ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವದು ಎಂದು ಬಹಳ ಬಾರಿ ಯೋಚಿಸಿ ನಿರಾಶಳಾಗಿದ್ದಳು. ಎಲ್ಲರು ಬೇಕಾದವರೇ. ಅವರಿಗೆ ತನ್ನ ಮನಸ್ಸಿನ ಭಾವನೆಯನ್ನು ತಿಳಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಎಷ್ಟೊಂದು ಬರಿ ಪ್ರಯತ್ನಿಸಿ ವಿಫಲಳಾಗಿದ್ದಳು. ಅವಳ ಮನದ ತೊಳಲಾಟ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಕೇಳುವ ವ್ಯವಧಾನವೂ ಇರಲಿಲ್ಲ. ಅವಳ ಮನಸ್ಸು ಈ ವಿಷಯದ ಬಗ್ಗೆಯೇ ಯೋಚಿಸುತ್ತಿತ್ತು. ಅಷ್ಟರಲ್ಲಿ ಅವಳ ಗಂಡ ಮನು ದೇವಸ್ಥಾನಕ್ಕೆ ಹೊರಡಲು ತಯಾರಾಗಲು ಹೇಳಿದ. ಅವಳು ಮನಸ್ಸಿಲ್ಲದೆ ಒಪ್ಪಿದಳು. ಎಲ್ಲರು ತಯಾರಾಗಿ ದೇವಸ್ಥಾನಕ್ಕೆ ಹೋದರು. ಅಲ್ಲಿ ಬಹಳ ಅದ್ದೂರಿಯಾಗಿ ಪೂಜೆ, ಹೋಮ ಹವನಗಳು ನಡೆಯುತ್ತಿದ್ದವು. ಮಾರಿಕಾಂಬೆಯ ಪೂಜೆಯಾಗಿದ್ದರಿಂದ ಅಲ್ಲಿ ಬಹಳಷ್ಟು ಶಕ್ತಿ ಪೂಜೆಗಳು ನಡೆಯುತ್ತದ್ದವು. ಮಂತ್ರ ಪಠನೆ ಜೋರಾಗಿತ್ತು. ಸುತ್ತಲೂ ದೀಪಗಳು, ಡೋಲು ತಮಟೆಗಳ ಸಡ್ಡು, ಮಂತ್ರದ ಘೋಷ ಎಲ್ಲವು ಅಲ್ಲೊಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸಿತ್ತು. ನೆರೆದಿದ್ದ ಜನ ಭಯ ಭಕ್ತಿಯಿಂದ ಕೈಮುಗಿದು ನಿಂತಿದ್ದರು. ಅವರಿಗೆಲ್ಲ ದೇವರ ಮೇಲಿನ ಭಕ್ತಿ ಎದ್ದು ಕಾಣುತ್ತಿತ್ತು. ಕಮಲಾಳ ಮನೆಯವರು ಭಕ್ತಿಪೂರ್ವಕವಾಗಿ ಕೈಮುಗಿದು ನಿಂತಿದ್ದರು. ಅವರನ್ನು ನೋಡಿದ ಅವಳು ಮನಸ್ಸಿನಲ್ಲಿ ಏನೋ ಯೋಚಿಸಿದಳು.
ಕುಂಕುಮಾರ್ಚನೆ ನಡೆಯುತ್ತಿತ್ತು.ಜನರಿಗೆಲ್ಲಭಕ್ತಿಭಾವ ಉಕ್ಕಿ ಹರಿಯುತ್ತಿತ್ತು. ಮೈಯೆಲ್ಲಾ ರೋಮಾಂಚನವಾಗುವಂತಹ ವಾತಾವರಣ, ಸಡ್ಡು ಗದ್ದಲ. ಎಲ್ಲದರ ಮಧ್ಯೆ ಕಮಲಾ ತನ್ನ ಯೋಚನೆಯನ್ನು ತೀಕ್ಷ್ಣಗೊಳಿಸುತ್ತಿದ್ದಳು. ತನಗೆ ದುರ್ಲಭವಾದ ಪ್ರೀತಿ, ಎಲ್ಲರೆದುರು ಮುಖವಾಡ ಧರಿಸಿರುವ ಮನೆಯವರು, ತನ್ನನ್ನು ಅರ್ಥ ಮಾಡಿಕೊಳ್ಳದ ಜೀವಗಳು, ಆದರೆ ಅವರೆಲ್ಲರನ್ನು ತಾನು ಮಾತ್ರ ಆರೈಕೆ ಮಾಡುತ್ತ ಜೀವನ ಕಳೆಯುತ್ತಿರುವುದು, ಅವಳ ಮನಸ್ಸಿನ ಮಾತುಗಳು ಹೇಳಲಾಗದೆ ಹಾಗೆಯೇ ಉಳಿದು ಜ್ವಾಲಾಮುಖಿಯಾಗಿರುವುದು.
ತಲೆಯನ್ನು ಸುತ್ತಲೂ ತಿರುಗಿಸಲಾರಂಭಿಸಿದಳು. ಮೈಯೆಲ್ಲಾ ನಿಧಾನವಾಗಿ ಕುಣಿಸುತ್ತ ಕುಣಿಸುತ್ತ, ಜೋರಾಗಿ ಸುತ್ತಲು ಆರಂಭಿಸಿದಳು. ಸುತ್ತಲು ನೆರೆದಿದ್ದ ಜನ ಅವಳನ್ನು ದಿಗ್ಭ್ರಾಂತರಾಗಿ ನೋಡುತ್ತಿದ್ದರು. ಅವಳು ಯಾವುದರ ಪರಿವೆಯೇ ಇಲ್ಲದೆ ವಿಚಿತ್ರವಾದ ಶಬ್ದದಲ್ಲಿ ಕೂಗುತ್ತಿದ್ದಳು. ಅವಳ ಕಣ್ಣುಗಳು ಕೆಂಪಾಗಿ ದೊಡ್ಡದಾಗಿತ್ತು. ಅವಳನ್ನು ನೋಡಿದರೆ ಭಯವಾಗುವಂತಿದ್ದಳು. ಅವಳ ಸುತ್ತಲು ನೆರೆದಿದ್ದ ಜನ “ಅಮ್ಮ ಇವಳ ಮೈಮೇಲೆ ಬಂದಿದ್ದಾಳೆ. ಎಲ್ಲರು ಕೈಮುಗಿಯಿರಿ” ಎಂದು ಕೈಮುಗಿದು ನಿಂತರು. ಅವಳ ಮನೆಯವರಿಗೆ ಏನು ಮಾಡಬೇಕೆಂದು ತೋಚಲೇ ಇಲ್ಲ. ಅವರು ಸುಮ್ಮನೆ ನೋಡುತ್ತಿದ್ದಂತೆ ಅವಳ ಮೈಮೇಲಿದ್ದ ಅಮ್ಮ ಮಾತನಾಡಲು ಶುರುಮಾಡಿದಳು ” ಎಲ್ಲರು ಕೇಳಿರಿ.. ನಾನು ಇವಳ ಮೈಮೇಲೆ ಬಂದಿರುವುದು ಒಂದು ಒಳ್ಳೆಯ ಕಾರ್ಯ ಮಾಡಿಸಲಿಕ್ಕೆ. ನನ್ನನ್ನು ಪೂಜಿಸುತ್ತ ಬಂದಿದ್ದೀರ. ನಿಮಗೆ ಒಳ್ಳೆಯದನ್ನು ಮಾಡುತ್ತೇನೆ. ಆದರೆ ನನ್ನ ಮಾತನ್ನು ಕೇಳಿ – ಹೆಣ್ಣನ್ನು ಪೂಜಿಸುವ ನೀವು ಮನೆಯಲ್ಲಿಯ ಹೆಣ್ಣನ್ನು ಅವಮಾನಿಸುತ್ತಿದ್ದೀರಾ… ಅವರ ಕಣ್ಣೀರು ನಿಮ್ಮ ಮನೆಯನ್ನು ನಾಶಮಾಡುತ್ತದೆ. ಬೇರೆಯವರ ಮನೆಯಿಂದ ಸುಖವಾಗಿ ಬೆಳೆದ ಹೆಣ್ಣನ್ನು ನಿಮ್ಮ ಮನೆಗೆ ಕರೆತಂದು ಕಣ್ಣೇರು ಹಾಕಿಸಿದರೆ ನಿಮಗೆ ಹೇಗೆ ಒಳ್ಳೆಯದು ಮಾಡಲಿ? ಈ ವರ್ಷದ ಹಬ್ಬಕ್ಕೆ ಇದು ಕೊನೆಯಾಗಲಿ. ಇನ್ನು ಯಾವ ಹೆಣ್ಣಿಗೂ ನಿಮ್ಮಿಂದ ತೊಂದರೆ ಆಗಬಾರದು. ಇಲ್ಲವಾದರೆ ನಾನು ನಿಮ್ಮನ್ನೆಲ್ಲ ಧ್ವಂಸ ಮಾಡುತ್ತೇನೆ. ನಿಮ್ಮ ವಂಶಗಳನ್ನು ನಿರ್ವಂಶ ಮಾಡುತ್ತೇನೆ”
ಎಲ್ಲರು ದೇವಿಗೆ ಮಂಗಳಾರತಿ, ನೈವೇದ್ಯ ಎಲ್ಲವನ್ನು ನೀಡಿ, ತಮ್ಮಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿ ನಮಸ್ಕಾರ ಮಾಡಿದರು. ಕಮಲಾಳ ಮನೆಯವರು ಎಂದು ಯೋಚಿಸಿಯೇ ಇರಲಿಲ್ಲ ಇಂತಹ ಘಟನೆ ನಡೆಯಬಹುದು ಎಂದು. ಅವರ ಮನೆದೇವರು ಹೇಳಿದಂತೆ ಅವರು ನಡೆದುಕೊಳ್ಳುತ್ತಿದ್ದರು. ಆದರೆ ಇದೆಲ್ಲ ನಡೆಯಲು ದೇವರ ಅಪ್ಪಣೆಯೇ ಆಗಬೇಕಿತ್ತೇ? ಮನೆಯ ಜನರನ್ನು ತಿಳಿದುಕೊಳ್ಳಲು ಇಷ್ಟೆಲ್ಲಾ ಆರ್ಭಟ ಬೇಕಿತ್ತೆ? ನಮ್ಮವರನ್ನು ನಾವು ತಿಳಿದುಕೊಳ್ಳಲು ಬೇರೊಂದು ಶಕ್ತಿಯ ಅವಶ್ಯಕತೆ ಇದೆಯೇ?
-ಗಿರಿಜಾ ಜ್ಞಾನಸುಂದರ್
ಚೆನ್ನಾಗಿ ಬರೆದಿದ್ದೀರಿ. ಹೆಣ್ಣನ್ನು ಗೌರವದಿಂದ ಕಾಣಬೇಕು, ಪ್ರೀತಿಗೆ ಸ್ಪೂರ್ತಿ ಆದ ಹೆಣ್ಣಿಗೆ ತನ್ನವರಿಂದ ಪ್ರೀತಿ ಸಿಗದಿದ್ದರೆ ಬಹಳ ನೊಂದುಕೊಳ್ಳುತ್ತಾಳೆ. ಇಂತಹ ದಾರಿ ಹುಡುಕಬೇಕಾಗುತ್ತದೆ. ಪ್ರಜ್ಞಾವಂತರು ಈ ಮಟ್ಟಕ್ಕೆ ಹೆಣ್ಣನ್ನು ದೂಡಬಾರದು.
Wow!!
A true fact unveiled in simple words!
Kudos & Best wishes for all the upcoming WriteUps Girija🍀💐😇👍🏻
ಶಕ್ತಿಯ ಬಳಕೆಗೆ ಶಕ್ತಿಯೇ ಬರಬೇಕಾಯಿತು ಎಂದರೆ ತಪ್ಪಾಗಲಾರದು 💐🍀👍🏻