ಪಂಜು-ವಿಶೇಷ

ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

"ನಲಿವ ಗುಲಾಬಿ ಹೂವೇ…" ಎಂದು ಪಕ್ಕದಲ್ಲಿದ್ದ ಗೆಳೆಯ ಒಂದೇ ಸಾಲನ್ನು ಮಂತ್ರದಂತೆ ಪಠಿಸುತ್ತಿದ್ದ. ನಾನು ಅವನನ್ನು ಎಚ್ಚರಿಸಿ, "ಕೇಳಿಸಿಕೊಳ್ಳೋ, ಶಂಕರಣ್ಣನ ಹೆಂಡ್ತಿ ಮಾತಾಡ್ತಿದ್ದಾರೆ" ಎಂದೆ. ಅವನಿಗೆ ನನ್ನ ಮಾತು, ಅರುಂಧತಿನಾಗ್ ರವರ ಮಾತು ಎರಡೂ ಬೇಡವಾಗಿತ್ತು. ಅವನಿಗೆ ಶಂಕರ್ ನಾಗ್ ನೆನಪು ಆ ಸಂಜೆಗೆ ಸಾಕಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಡಿವಿಸ್ ಕಾಲೇಜಿನಲ್ಲಿ ಹುಡುಗ-ಹುಡುಗಿಯರನ್ನು ಉದ್ದೇಶಿಸಿ, "ಆ ಹುಡುಗನ ಹೆಸರಲ್ಲಿ ಒಂದು ರಂಗಮಂದಿರವನ್ನು ಕಟ್ಟಬೇಕು. ನನ್ನ ಹತ್ತಿರ ಯೋಜನೆ ತಯಾರಾದ ಮೇಲೆ ಮತ್ತೆ ನಿಮ್ಮ ಮುಂದೆ ಬಂದು, ನಾಟಕ ಮಾಡಿ, ೫-೧೦ ರೂಪಾಯಿ ಕಲೆಕ್ಟ್ ಮಾಡುತ್ತೀನಿ" ಅಂತ ಸಭೆಯಲ್ಲಿ ಸದ್ದಿಲ್ಲದೆ ಕಣ್ಣಂಚಲಿ ಬಂದ ಹನಿಯನ್ನು ತಡೆದು ನಕ್ಕಂತೆ ಮಾಡಿ, "ಕನ್ನಡ ಒಂದೇ ಅಲ್ಲದೆ ಬೇರೆಯೆಲ್ಲಾ ಭಾಷೆಗಳಲ್ಲಿ ನಿತ್ಯವೂ ನಾಟಕ ನಡೆವಂತೆ, ಅಂತರರಾಷ್ಟ್ರೀಯ ಗುಣಮಟ್ಟದ ರಂಗಮಂದಿರ ಕಟ್ಟಬೇಕು" ಎಂದು ೪-೫ ಸಾಲು ಮಾತಾಡಿ ಸುಮ್ಮನಾದರು.

ನಾವಿದ್ದ ಇಂಜಿನಿಯರಿಂಗ್ ಕಾಲೇಜು ೪-೫ ಕಿ ಮೀ ದೂರವಿತ್ತು, ಶಿವಮೊಗ್ಗದಲ್ಲಿ, ಮಳೆ ಬಿದ್ದ ನಂತರ ಎಂಥಾ ಕಟುಕನೂ ಕವಿಯಾಗಿ, ಮೃದುವಾಗಿ ಹೋಗೋದು ಗ್ಯಾರೆಂಟಿ. ಅಂತಹ ಸುಂದರ ಸಂಜೆಯನ್ನು ಅನುಭವಿಸಬೇಕೆಂದು, ನಾವು ನಡೆದೇ  ತಿರುಗಿ ಹೋಗೋದು ಆಂತ ತೀರ್ಮಾನಿಸಿದೆವು. ಶಂಕರ್ ನಾಗ್ ಅವರನ್ನು 'ಶಂಕರಣ್ಣ' ಎಂದು ಆರಾಧಿಸಿ, ಅವರ ಬಹುತೇಕ ಹಾಡುಗಳನ್ನು ಸಂಪೂರ್ಣ ಸಾಹಿತ್ಯದೊಂದಿಗೆ ಹಾಡಬಲ್ಲ ಗೆಳೆಯನ ಸಾಂಗತ್ಯ ಇದಕ್ಕೆ ಇನ್ನೊಂದು ಕಾರಣ. ಅವನ ಹಾಡುಗಳನ್ನು ಕೇಳುತ್ತಾ, "ಅಲ್ಲವೋ, ಅವರ ಪ್ಲಾನ್ ಬಗ್ಗೆ ನಿನ್ನ ಅನಿಸಿಕೆ?" ಎಂದು ಹಾಡುಗಳ ಮಧ್ಯೆ ಪ್ರಶ್ನೆ ತುರುಕಿದೆ. 

"ನೋಡೋ ಮುಕುಂದ, ಅವನ ನೆನಪುಗಳು, ಕೆಲವು ಆಟೋ ಡ್ರೈವರುಗಳ ಮನದಲ್ಲಿ ೪-೫ ವರುಷ, ಚಿತ್ರಗಳ ನೆನಪು ಇನ್ನು ಹತ್ತು ವರುಷ. Thats all! He really will be no more!"
ಕಾವ್ಯಾತ್ಮಕವಾದ ಸಂಜೆಗೂ ಶಂಕರಣ್ಣ ಎಂದು ಕರೆಯುವ ಅವನ ಅಕ್ಕರೆಗೂ ಹೊರತಾದ ಅವನ ಉತ್ತರದಲ್ಲಿದ್ದ ಸಿನಿಕತೆ ನನ್ನನ್ನು ಸುಮ್ಮನಾಗಿಸಿತು. ಉಳಿದ ದಾರಿಯನ್ನು ಮಾತಿಲ್ಲದೆ ನಡೆದೆವು.

ಕೆಲವು ವರುಷಗಳು ಕಳೆದವು. ನಮ್ಮ ಕಾಲೇಜಿಗೆ ಅರುಂಧತಿನಾಗ್ ಮುಖ್ಯ ಅತಿಥಿಯಾಗಿ ಬಂದರು, ಸ್ವಾಗತ ಸಮಿತಿಯ ಸದಸ್ಯತ್ವದ ಫಲದಿಂದ ಅವರ ಹತ್ತಿರ ಎರಡು ನಿಮಿಷ ಸಿಕ್ಕಾಗ, "ಮೇಡಂ, ರಂಗಮಂದಿರ ಆಗುತ್ತಾ?" 
"ಜಾಗ ಸಿಕ್ತು, ಇನ್ನು ಕಲ್ಲು, ಮಣ್ಣು, ಇಟ್ಟಗೆಗೆ ಕಾಸು ಜೋಡಿಸಬೇಕು, Lets See" ಎಂದಿದ್ದರು.

ಇವತ್ತು ರಂಗಶಂಕರಕ್ಕೆ ೧೦ ವರುಷ! ಹತ್ತಾರು ಭಾಷೆಗಳ ನಾಟಕಗಳು, ಸಾವಿರಾರು ಪ್ರದರ್ಶನಗಳು, ನಾಟಕ ಅಷ್ಟೇ ಅಲ್ಲದೇ, ಅದನ್ನು ನೋಡುವ ಶಿಸ್ತನ್ನೂ ರಂಗಶಂಕರ ಕಲಿಸಿದೆ. "ರಂಗಶಂಕರ"ದಲ್ಲಿ ೭.೩೦ಆದ ಮೇಲೆ ೧ ನಿಮಿಷ ತಡವಾಗಿ ದೇವರು ಕೂಡ ಒಳಗೆ ಬರಲಾರ!

ಯಾವಾಗಲಾದರೂ, ಸದ್ದಿಲ್ಲದೆ ಯಾವುದೋ ಹಿಂದಿನ ಬೆಂಚಲ್ಲಿ ಕೂತು, ಎಂದೂ ನಾಟಕವನ್ನು ನೋಡದ ಅಚ್ಚರಿ ಹಾಗು ಸಂತೋಷದಿಂದ ತುಂಬಿದ ಪುಟ್ಟ ಹುಡುಗಿಯಂತೆ ನೋಡ್ತಾ ಇರುತ್ತಾರೆ, ಅರುಂಧತಿನಾಗ್.

ಮೊನ್ನೆ ಕಾರಿನಿಂದ ಇಳಿದ ಕೂಡಲೆ ರಂಗಶಂಕರದಲ್ಲಿ ಯಾರಿಗೂ ಕಾಣಿಸದ ಹೂ ಕುಂಡದಲ್ಲಿದ್ದ ಒಣಗಿದ ಹೂವುಗಳು ಆವರಿಗೆ ಕಂಡು, ತನ್ನ ಭಾರವಾದ ಬ್ಯಾಗನ್ನೂ ಇಳಿಸದೆ, ಆ ಹೂಗಳನ್ನು ತೆಗೆದು, ಇನ್ನೂ ಕೂಡ ಆನ್ ಅಗಿರದ ಬೆಳಕನ್ನು ಹಚ್ಚಿ, ಅವರ ಕಛೇರಿಯಲ್ಲಿ ಮಾಯವಾದರು!

ಸಾಮಾನ್ಯವಾಗಿ ಮನುಷ್ಯ ಅವನ ಮತ್ತು ಅವನ ಆಪ್ತರ ಅಮರತ್ವಕ್ಕೆ ಹಪಹಪಿಸುವ ಒಂದೇ ಪ್ರಾಣಿ ಇರಬೇಕು. ಲೋಕವನ್ನು ಆಳಿ ಸ್ಮಾರಕಗಳನ್ನು ಕಟ್ಟಿಸಿ ಕೊಂಡಿದ್ದಾರೆ, ಜಯಕ್ಕೆ ನೂರಾರು, ಪ್ರೇಮಕ್ಕೆ ಹತ್ತಾರು ತಾಜ್ ಮಹಲ್ಗಳು…ಆ ಹೂವನ್ನು ಅವರು ತೆರವುಗೊಳಿಸಿದ ಕ್ಷಣ ನನಗೆ ಅನಿಸಿದ್ದು, "ಅರೆ, ಬಹುಶಃ ತಾಜ್ ಮಹಲ್ ಗಿಂತ, ನಮ್ಮ ರಂಗ ಶಂಕರ ಎಷ್ಟೋ ಮೇಲು ಆಲ್ಲವಾ?"

ರಾಜರ ಅಧಿಕಾರವಿಲ್ಲದೆ, ಅಪಾರ ಸಂಪತ್ತಿಲ್ಲದೆ, ನಿತ್ಯವೂ ಬಳಕೆಯಲ್ಲಿದ್ದು, ಕಲೆಯನ್ನು ಜನರಿಗೆ ಮುಟ್ಟಿಸಿ, ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯವರಿಗೆ ವೇದಿಕೆಯನ್ನು ನೀಡಿ, ಶಂಕರ್ ನಾಗ್ ಅವರನ್ನು ನಿತ್ಯದ ಸತ್ಯವಾಗಿಸಿ ನಮ್ಮ ಜೊತೆ ಉಳಿಸಿಕೊಂಡಿದ್ದಾರೆ.

ಶಂಕರ್ ನಾಗ್ ಅವರ ಅಭಿಮಾನಿಯಾದ ಗೆಳೆಯನ ಜೊತೆ ಸಂಪರ್ಕ ಕಳೆದುಹೋಗಿದೆ, ಅವನು ಈಗ ಅಮೆರಿಕಾ ಅಥವಾ ಯೂರೋಪಿನಲ್ಲಿ ಇರಬಹುದು. ಅವನು ಸಿಗಬೇಕು, ಅವನಿಗೆ ನಾ ಶಂಕರ್ ನಾಗ್ ಇನ್ನೂ ಆಟೋಗಳ ಮೇಲೆ, ಅವರ ಚಿತ್ರಗಳಲ್ಲಿ, ಉಳಿದಿರುವ ಬಗ್ಗೆ ಹೇಳಬೇಕು. Last but not the least, ರಂಗಶಂಕರದಲ್ಲಿ ಅವರು ಜೀವಂತವಾಗಿ ಇರುವುದನ್ನು ತೋರಿಸಬೇಕು, ಇದಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯ ಅಸಾಧ್ಯ ಸಾಧ್ಯತೆಗಳ ಬಗ್ಗೆ ನಿರೂಪಿಸಿ ಹೇಳಬೇಕು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

  1. yes…ಶ೦ಕರ್ ನಾಗ್ ಇನ್ನು ಬದುಕಿದ್ದಾರೆ… ಅವರೆಲ್ಲರ ಅಭಿಮಾನಿಗಳ ಅಭಿಮಾನದಲ್ಲಿ. ಅವರು ಭೌತಿಕವಾಗಿ ನಮ್ಮನಗಲಿ ದಶಕಗಳೆ ಕಳೆದರೂ, ಇತ್ತೀಚಿನ ಕನ್ನಡ ‌ಚಿತ್ರಗಳಲ್ಲೂ ಅವರ ಅಸ್ತಿತ್ವ ಇರುವುದು ಅವರು ಇನ್ನು ಬದುಕಿದ್ದಾರೆ ಅನ್ನೊದಕ್ಕೆ ಬೇರೆ ಸಾಕ್ಷಿ ಬೇಕೆ…

  2. ರ೦ಗ ಶ೦ಕರಕ್ಕೆ ಹೋದ ಕೂಡ್ಲೆ ಶ೦ಕರಣ್ಣ ಬದುಕಿದ್ದಾರೆ ಅ೦ತ ಅನಿಸುತ್ತೆ….ಬರಹ ಚೆನ್ನಾಗಿತ್ತು….

  3. ನಿಜವಾಗ್ಲೂ ಶಂಕರ್ ನಾಗ್ ಅಂದ್ರೇನೇ ಒಂದು ಮಿಂಚು….. ಅವರು ಅಪಘಾತವಾಗಿ ತೀರಿಕೊಂಡಾಗ ನಾನಿನ್ನು ಹತ್ತನೇ ತರಗತಿಯಲ್ಲಿದ್ದೆ.  ದೇವರೇ, ಸತ್ತಿರುವುದು ಅವರಲ್ಲ ಎಂದು ತೀರ್ಮಾನಿಸು ಎನ್ನುತ್ತಿತ್ತು ನನ್ನ ಮನಸ್ಸು.   ಬಹುಶ: ನಾನೊಬ್ಬನೇ ಅಲ್ಲ, ಶಂಕರನಿಗಾಗಿ ಈ ರೀತಿ ಬೇಡಿಕೊಂಡಷ್ಟು ನಮ್ಮ ಅಭಿಮಾನಿಗಳು ಬೇರೆ ಯಾರಿಗಾದರೂ ಬೇಡಿಕೊಂಡಿದ್ದು ಯಾರೂ ಇಲ್ಲವೇನೋ….. ಅಭಿನಂದನೆಗಳು…..ಬರಹಕ್ಕೆ.

  4. ಅಚ್ಚುಕಟ್ಟಾದ ಬರಹ. ನಿಮ್ಮ ಬರವಣಿಗೆಯನ್ನು ವಿಸ್ತರಿಸಿ, ತಮ್ಮಿಂದ ಮತ್ತಷ್ಟು ಲೇಖನಗಳನ್ನು ಅಪೇಕ್ಷಿಸುತ್ತೇವೆ 🙂

    ಇಂತಿ
    ನಿಮ್ಮೊಳಗೊಬ್ಬ
    ನಾನು

  5. ಬರಹ ಒ೦ದು ಕಡೆ ಶ೦ಕರ ನಾಗ್ ಅವರ ಪತ್ನಿ ಆರು೦ಧತಿಯವರ ಸ೦ಕಲ್ಪ, ಮಾಡಲೇಬೇಕು ಅನ್ನುವ ಛಾತಿ ಹೆಚ್ಚಿನದಾಗಿ ಶ೦ಕರ ಅವರ ಬಗ್ಗೆ ಇದ್ದ ಅವರ ಪ್ರೀತಿಯನ್ನು ತೋರಿಸುತ್ತದೆ, ಇನ್ನೋ೦ದೆಡೆ ಬರಹಗಾರನ ಗೆಳೆಯನ ನಿರಾಶಾವಾದಕ್ಕೆ ತಕ್ಕುದಾದ ಉತ್ತರ ನೀಡುತ್ತದೆ. ತು೦ಬಾ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು ನಿಮಗೆ ಮತ್ತು ಶ೦ಕರ್ ನಾಗ್ ರನ್ನು ಜೀವ೦ತವಾಗಿಸಿರುವ ಕನ್ನಡಾಭಿಮಾನಿಗಳಿಗೆ. 

  6. ಶಂಕ್ರಣ್ಣ ಚಿರಂಜೀವಿ ಅವರ ಸಾಧನೆ ಅವರನ್ನು ಸದಾ ನಮ್ಮ ಹ್ರುದಯದಲ್ಲಿ ಭದ್ರವಗಿ ನೆಲೆಸುವ ಹಾಗೆ ಮಾಡಿವೆ ಅವರ ದೇಹ ಮಾತ್ರ ನಂಮಿದ ದೂರವಗಿದೆ 

  7. ತುಂಬಾ ಚೆನ್ನಾಗಿದೆ ಮುಕುಂದ.
    unrealtime and faking news ಇಂದ ಹೊರಗೆ ಬಂದು ೧ ಸತ್ವ ಭರಿತ ಲೇಖನ ಬರಿದಿದ್ದೀಯ, ಲೇಖನ ಓದಿದ ಮೇಲೆ ರಂಗಶಂಕರ ದಲ್ಲಿ ಖಂಡಿತ ನಾಟಕ ನೋಡಲೇಬೇಕು ಈ ಸಾರಿ ಅಂತ ಶಪಥ ಮಾಡಿದೆ

     

     

     

  8. ರಂಗಶಂಕರ ಇರೋದು ಬೆಂಗಳೂರಲ್ಲಲ್ವೇ ?
    ಶಿವಮೊಗ್ಗದಲ್ಲಿ ೪-೫ ಕಿ.ಮೀ ಇರೋ ಇಂಜಿನಿಯರಿಂಗ್ ಕಾಲೇಜಿಗೂ , ಅಲ್ಲಿಗೆ ಬಂದ ಅರುಂಧತಿ ನಾಗ್ ಅವರ ಬಗ್ಗೆಯೂ ನಂತರ ರಂಗಶಂಕರ ಕಟ್ಟಿದ ಮಾಹಿತಿಗೂ ಯಾಕೋ ಏನೋ ತಾಳೆಯಾಗ್ತಿಲ್ಲ ಅನ್ನಿಸಿತು ಮುಕುಂದ್ ಅವ್ರೇ. ಪ್ರಾಯಶಃ ಕಾಲೇಜು ಅಥವಾ ವರ್ಷ ಕೊಟ್ಟು ಬಿಟ್ಟಿದ್ರೆ ಶಿವಮೊಗ್ಗದಲ್ಲೇ ಓದಿದ ನಮಗೊಂಚೂರು ಖುಷಿಯಾಗ್ತಿತ್ತೇನೋ.. ನಮ್ಮ ಸೀನಿಯರ್ಗಳ ಬ್ಯಾಚಲ್ಲೇನಾದ್ರೂ ಇದಾಗಿತ್ತಾ ಅಂತ ಮೆಲುಕು ಹಾಕೋಕೆ.. ಅಂದಂಗೆ ಕನಫ್ಯೂಸ್ ಮಾಡಿದ ಸಾಲುಗಳು ಇವೇ..
    >>ನಾವಿದ್ದ ಇಂಜಿನಿಯರಿಂಗ್ ಕಾಲೇಜು ೪-೫ ಕಿ ಮೀ ದೂರವಿತ್ತು, ಶಿವಮೊಗ್ಗದಲ್ಲಿ, ಮಳೆ ಬಿದ್ದ ನಂತರ ಎಂಥಾ ಕಟುಕನೂ ಕವಿಯಾಗಿ, ಮೃದುವಾಗಿ ಹೋಗೋದು ಗ್ಯಾರೆಂಟಿ<<

Leave a Reply

Your email address will not be published. Required fields are marked *