ಪ್ರಶಸ್ತಿ ಅಂಕಣ

ಶಂಕರನಾರಾಯಣ: ಪ್ರಶಸ್ತಿ

ಕಮಲಶಿಲೆಯ ನಂತರ ಹೊರಟಿದ್ದು ಸಿದ್ದಾಪುರದಿಂದ ಹತ್ತು ಕಿ.ಮೀ ದೂರವಿರೋ ಶಂಕರನಾರಾಯಣ ಕ್ಷೇತ್ರಕ್ಕೆ. ಇಲ್ಲಿ ಹರಿ,ಹರರಿಗೆ ಒಟ್ಟಿಗೇ ಪೂಜೆ ನಡೆಯುವುದು ವಿಶೇಷ.ನೆಲದಿಂದ ಒಂದು ಅಡಿಯಷ್ಟು ಕೆಳಗಿರುವ ವಿಷ್ಣುವಿನ ಚಪ್ಪಟೆಯಾದ ಮತ್ತು ಗೋಳಾಕಾರಾದ ಶಿವಲಿಂಗದ ಮೇಲೆ ಸದಾ ನೀರು ಹರಿಯುತ್ತಲೇ ಇರುತ್ತದೆ. ನಮ್ಮ ಎಡಭಾಗದಲ್ಲಿ ಉದ್ಭವಲಿಂಗಗಳಾದ ಶಂಕರಲಿಂಗ(ದೇವರ ಎಡಭಾಗದಲ್ಲಿ) ಮತ್ತು ಬಲಭಾಗದಲ್ಲಿ ವಿಷ್ಣುವಿನಲಿಂಗಗಳಿವೆ.ಲಿಂಗಗಳ ಮೇಲೆ ಸದಾ ಹರಿಯೋ ನೀರನ್ನು ಸುಧಾಮೃತ ತೀರ್ಥ ಎಂದು ಕರೆಯುತ್ತಾರಂತೆ.ದೇಗುಲದ ಹೊರಗಡೆ ಮತ್ತೊಂದು ಪುಟ್ಟ ಗುಡಿಯಲ್ಲಿ ಬೆಳ್ಳಿಯ ಶಂಕರನಾರಾಯಣ ವಿಗ್ರಹವಿದೆ. ಅದರಲ್ಲಿ ಬಲಭಾಗದಲ್ಲಿ ಮೀಸೆ,ಶೂಲ, ಚರ್ಮಾಂಬರನಾಗಿಯೂ ಎಡಭಾಗದಲ್ಲಿ ಶಂಖ,ಚಕ್ರ,ಮುದ್ರೆ,ಕಿರೀಟ,ಪೀತಾಂಬರಿಯಾಗಿಯೂ ಕಾಣಬಹುದು. ಅಷ್ಟಮಂಗಳ ಪ್ರಶ್ನೆಯಲ್ಲಿ ಮೂಲ ಮೂರ್ತಿಗಳನ್ನು ಹಾಗೆಯೇ ತೋರಿಸಬಾರದು ಎಂದು ಬಂದಿದ್ದಕ್ಕಾಗಿ ಆಗಿದ್ದ ಉದ್ಭವಲಿಂಗಗಳ ಮೇಲೆ ಈಗಿರುವ ಮೂರ್ತಿಗಳನ್ನು ಸ್ಥಾಪಿಸಲಾಗಿದೆಯಂತೆ.  ಆದರೆ ಮೂಲಲಿಂಗಗಳ ಮೇಲೆ ಧಾರಾಪಾತ್ರೆಗಳಿದ್ದು ಅವುಗಳ ಮೂಲಕ ಅವಕ್ಕೆ ನಿರಂತರ ಅಭಿಶೇಖವಾಗುತ್ತದೆ. ಇಲ್ಲಿ ಅಷ್ಟಬಂಧದ ಸಮಯದಲ್ಲಿ ತೆಗೆಯೋ ಮೃತ್ತಿಕೆಯನ್ನು(ಮಣ್ಣನ್ನು) ಪ್ರಸಾದವನ್ನಾಗಿ ನೀಡಲಾಗುತ್ತದೆ. 

ಈ ದೇಗುಲದ ಸುತ್ತಮುತ್ತ ಹಲವು ದೇಗುಲಗಳಿವೆ. ಅದರಲ್ಲಿ ವರದಹಳ್ಳಿಯ ಶ್ರೀಧರರು ಸ್ಥಾಪಿಸಿದ ಪಂಚಮುಖಿ ವೀರಾಂಜನೇಯ ಮೂರ್ತಿಯೂ ಒಂದು. ಶ್ರೀಧರರು ಕಮಲಶಿಲೆಗೆ ೧೯೫೨ರಲ್ಲಿ ಭೇಟಿ ಕೊಟ್ಟಿದ್ದ ಬಗ್ಗೆ ಓದಿರುತ್ತೇವೆ. ಆ ಸಂದರ್ಭದಲ್ಲಿಯೇ ಇಲ್ಲಿಗೂ ಭೇಟಿಯಿತ್ತಿರಬಹುದು. ಇಲ್ಲಿ ವೀರಗಲ್ಲಿನ ರೂಪದಲ್ಲೇ ಸೂರ್ಯಚಂದ್ರರಿರುವ ಒಂದು ಕಲ್ಲಿದೆ. ಆದರೆ ಅದರ ಮೇಲಿನ ಬರಹ ಅಳಿಸಿಹೋಗಿರೋ ಕಾರಣ ಆದು ಯಾವ ರಾಜರ ಕಾಲದ್ದು, ಅದರ ಹಿನ್ನೆಲೆಯೇನು ಎಂಬುದರ ಅರಿವಾಗುತ್ತಿಲ್ಲ. ಇದರ ಬಗ್ಗೆ ತಿಳಿದವರೊಂದಿಷ್ಟು ಬೆಳಕು ಚೆಲ್ಲಬಹುದು. ದೇಗುಲವನ್ನು ಇತ್ತೀಚೆಗೆ ಜೀರ್ಣೋದ್ದಾರ ಮಾಡಲಾಗಿದೆಯಂತೆ. ಆ ನಂತರದಲ್ಲಿ ಪ್ರವೇಶದ್ವಾರದಲ್ಲಿನ ಗಿರಿಜಾ ಕಲ್ಯಾಣದ ಚಿತ್ರಣ ಮತ್ತು ಪರಶುರಾಮ ಮುಂತಾದ ಕೆತ್ತನೆಗಳು ನೋಡುಗರ ಗಮನ ಸೆಳೆಯುತ್ತದೆ. 

ಕೋಟಿತೀರ್ಥ:
ದೇಗುಲದೆದುರಿಗೆ ಒಂದು ಪುಷ್ಕರಿಣಿಯಿದೆ. ಅದಕ್ಕೆ ಕೋಟಿ ತೀರ್ಥ ಎನ್ನುತ್ತಾರೆ.ದೇಗುಲಕ್ಕೆ ತೆರಳೋ ಮೊದಲು ಇಲ್ಲಿನ ನೀರಲ್ಲಿ ಪ್ರೋಕ್ಷಣೆ ಮಾಡಿಕೊಂಡು ತೆರಳುತ್ತಾರೆ. ಇಲ್ಲಿ ಕೈಕಾಲು ತೊಳೆಯುವುದಾಗಲಿ, ಸ್ನಾನ ಮಾಡುವುದಾಗಲಿ ನಿಷೇಧಿಸಲಾಗಿದೆ. ಇಲ್ಲಿನ ದೊಡ್ಡ ದೊಡ್ಡ ಮೀನುಗಳು ಶೃಂಗೇರಿಯ ಮೀನುಗಳನ್ನೋ, ತೀರ್ಥಹಳ್ಳಿಯ ಬಳಿಯ ತಾಣ ಚಿಬ್ಬಲಗೆರೆಯನ್ನೋ ನೆನಪಿಸಿದರೆ ಅಚ್ಚರಿಯಿಲ್ಲ.

ಕಲ್ಲುಕುಟಿಕ ದೇವಸ್ಥಾನ: 
ಶಂಕರನಾರಾಯಣ ಪೇಟೆಯಲ್ಲೇ ಇರೋ ಮತ್ತೊಂದು ದೇವಸ್ಥಾನ ಕಲ್ಲುಕುಟಿಕ ದೇವಸ್ಥಾನ. ಶಂಕರನಾರಾಯಣಕ್ಕೆ ಬರೋ ಹೊಸಬರು ಇದೇ ಶಂಕರನಾರಾಯಣ ದೇವಸ್ಥಾನ ಎಂದು ತಿಳಿದುಕೊಳ್ಳುತ್ತಾರಂತೆ. ನಮ್ಮನ್ನು ಕರೆದೊಯ್ದಿದ್ದ ವಾಹನದವರೂ ಹಾಗೇ ಅಂದುಕೊಂಡಿದ್ದರಂತೆ. ಆದರೆ ಶಂಕರನಾರಾಯಣ ದೇವಸ್ಥಾನ ಅನ್ನೋದು ನೀರಿನ ಮೇಲಿದೆ ಅಂತ ಕೇಳಿದ್ದ ಕಾರಣ ಮುಂಚೆ ಹೇಳಿದ ದೇಗುಲಕ್ಕೆ ತೆರಳಲಾಯಿತು.

ಹೆಚ್ಚಿನ ಮಾಹಿತಿ:

http://www.shankaranarayana.org/history.html


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *