ಕುಂಟೆಯ ಮೇಲೆ ಕೂತು, ಎತ್ತಿನ ಬಾಲ ಮುರಿದು, ' ಹೋಯ್ ' ಎಂದು ಅಬ್ಬರಿಸುವಾಗ, ಕುಂಟೆಯ ಅಲುಗಿಗೆ ತಗಲುವ ಮಣ್ಣಿನ ಎಂಟೆಗಳನು ಒಡೆದು ಪುಡಿ ಮಾಡುತ್ತಾ ಓಟ ಕೀಳುವ..' ಎತ್ತುಗಳ ಸ್ಟೇರಿಂಗು ಹಿಡಿದರೆ… ಅದೊಂತರ ರೋಲರ್ ಕೋಸ್ಟರ್ ರೈಡಿನ ಅನುಭವ.
ದೂರದ ಊರಿನಲ್ಲಿ ಆದ ಬಸ್ಸಿನ ಹಾರನ್ನು ಕೇಳಿ, ಊಟದ ನೆನಪಾಗಿ, ಬಾಳೆಎಲೆ-ಅಡಿಕೆಆಳೆ ಕುಯ್ದು, ಸಣ್ಣಗೆ ಹರಿಯುವ ಕಾಲುವೆಯ ಪಕ್ಕದಲ್ಲಿಯೇ ಕುಳಿತು, ಸಾರು ಚೆಲ್ಲಿರುವ ಡಬ್ಬಿಯನ್ನು ಉಗುರಿನ ಕೈಯಲ್ಲಿ ತೆಗೆದು, ಒಂದಕ್ಕೊಂದು ಅಂಟಿಕೊಂಡು ಚಪ್ಪಟೆಯಮ್ತಾಗಿರುವ ಮುದ್ದೆಯನ ಬಿಡಿಸಿ ಎಲೆಯ ಮೇಲೆ ಹಾಕಿ, ತೆಗ್ಗಿಗೆ ಸಾಂಬಾರು ಸುರಿದು, ಮಿಡಿ ಉಪ್ಪಿನಕಾಯಿಯ ರಸವನ್ನು ಬೆರಳಲ್ಲಿ ಸೀಟಿ ನೆಕ್ಕಿ, ಮುರಿದ ಮುದ್ದೆಯನ ಸಾರೊಳಗೆ ಅದ್ದಿ -ತೆಗೆದು ಗಳಕ್ಕನೆ ನುಂಗಿ, ಡಬ್ಬಿಯ ಮುಚ್ಚಳದಿಂದ .. ಮಣ್ಣಿಲ್ಲದ ತಿಳಿನೀರನ್ನು ಸೋಸಿ ಕುಡಿದು, ಸೋಗೆ ಗರಿಯನ್ನು ಮೆತ್ತಗೆ ಹಾಸಿಕೊಂಡು ಮಲಗಿ, ಸಂಜೆಯಾಗುತ್ತಲೂ ಉದುರಿ ಬಿದ್ದಿರುವ ತೆಂಗಿನ ಕಾಯಿ, ಅಡಿಕೆ ಗೋಟುಗಳನ್ನು ಆರಿಸಿ ತುಂಬಿ, ಕಾನಿಯ ದೊಂಬುಗಳಲ್ಲಿ ಕೈ ಗೆ ಸಿಕ್ಕ ಕರಿ ಏಡಿಗಳ ಕಾಲು ಮುರಿದು, ಟವೆಲಿನಲ್ಲಿ ಗಂಟು ಕಟ್ಟಿಕೊಂಡು, ಊರಿನ ಕಡೆಗೆ ಹೆಜ್ಜೆ ಹಾಕುವಾಗ…, ಇದಕ್ಕಿಂತಲೂ ಅದ್ಭುತವಾದ ಪ್ರಪಂಚ ಮತ್ತೊಂದಿಲ್ಲವೆನಿಸಿ .., ತನಗೆ ಇಸ್ಕೂಲೂ ಬೇಡ!!, ಏನೂ ಬೇಡ.. ಇಲ್ಲೇ ಇರ್ತೇನೆ ಅಂದಾಗ …, ಇಳಿ ಹೊತ್ತಿನಲ್ಲಿ ಅಪ್ಪನ ಬುದ್ಧಿ ಮಾತುಗಳು ಶುರುವಾಗುತ್ತಿದ್ದವು …
" ಈ ಕೆಲಸವನ್ನು ನಿನ್ನ ಯಾವ ವಯಸ್ಸಿನಲ್ಲಿ ಬೇಕಾದ್ರೂ ಕಲಿಯಬಹುದು ಮತ್ತು ಬಂದು ಮಾಡಬಹುದು. ಆದರೆ 'ಓದು' ಹಾಗಲ್ಲ. ಓದುವ ವಯಸ್ಸಿನಲ್ಲಿ ಓದಿ ಬಿಡಬೇಕು. ಈಗ ನಾನು ಓದಬೇಕು ಅಂತ ಅನ್ಕೊಂಡ್ರೆ ಓದೋದಕ್ಕಾಗುತ್ತೆಯೇ ..? ಮುಂದೆ ಓದಕ್ಕೆ ಆಗಲ್ಲ ಅಂದ ದಿನ ಬಾ!! ನಿನಗೆ ಇದನ್ನ ಹೇಳಿ ಕೊಡ್ತೇನೆ."
ಹುಡುಗುತನದಲ್ಲಿದ್ದ ಆಸಕ್ತಿ ಮುಂದೆ ಕೆರಳಲಿಲ್ಲ. ಕೃಷಿ ಕುಟುಂಬದಿಂದ ಬಂದಿದ್ದಾಗಿಯೂ, ವ್ಯವಸಾಯದ ವ್ಯಾಕರಣವನ್ನು ಸ್ವಲ್ಪವೂ ಕಾಣದೆ, 'ಜಾಣ ಕುರುಡು' ರೂಢಿಸಿಕೊಂಡು.. ನನ್ನ ಕುಲ ಕಸುಬಿಗೆ 'ಶಾಶ್ವತ ಪ್ರವಾಸಿ' ಯಾಗಿಯೇ ಉಳಿದೆ. ವ್ಯವಸಾಯ ಅಂದರೆ ನಾ ಅಂದುಕೊಂಡಂತೆ.. ಕೇವಲ ಫನ್ ಅಷ್ಟೇ ಆಗಿರಲಿಲ್ಲ!! ಸಿಕ್ಕಾಪಟ್ಟೆ ದೈಹಿಕ ಮತ್ತು ಮಾನಸಿಕ ಶ್ರಮದ ಅವಶ್ಯಕತೆ ಇತ್ತು. ವ್ಯವಸಾಯವನ್ನು ಒಂದು ಬಿಜಿನೆಸ್ ಅಂದುಕೊಂಡರೂ .., ಮಳೆ-ಪ್ರವಾಹ, ಬಿಸಿಲು-ಬರಗಾಲ,ರೋಗ-ರುಜಿನ,ಆಳು-ಕಾಳು, ರೇಟು-ಗೀಟು ಇನ್ನು ಮುಂತಾದ ನೂರಾರು ಅನ್-ಸರ್ಟನಿಟಿಗಳ ನಡುವೆ ಅಖಾಡಕ್ಕಿಳಿದು 'ಸ್ಟ್ರಗಲ್ ಫಾರ್ ಎಗ್-ಜಿಸ್ಟೆನ್ಸು' ಅನ್ನೋ ಜೀವವಿಕಾಸದ ಮೂಲ ಕಲ್ಪನೆಯ ಅಂಚಿಗೆ ಹೋಗಿ ಗೆದ್ದು ಬರಬೇಕು.
ಮುಂದೆ ಡಿಗ್ರಿ ಮುಗಿದ ಮೇಲೆ, ಕೆಲಸವಿಲ್ಲದೆ ಊರಲ್ಲಿ ಅಲೆಯುವಾಗ, ಪುನಃ ಅಪ್ಪನ ಜೊತೆ ಅನಿವಾರ್ಯವಾಗಿ ಕೃಷಿ ಕೆಲಸ ಮಾಡಬೇಕಾಗಿ ಬಂತು. ಆದರೆ ಈಗ ತಾನೊಬ್ಬ ಲೇಬರ್ ಅಲ್ಲವಾಗಿಯೂ,
ತಾನು 'ಓದಿರುವ' ಸ್ಕಿಲ್ಡ್ ಲೇಬರ್ ಅಂತಾಗಿಯೂ ಮೂಡಿತ್ತು 'ಕೊಂಬು' …,ಬಿಗಿ ಕೆಲಸದಿಂದಾಗಿ ಅಂಗೈ ಚರ್ಮವು ತನ್ನ ಮೃದುತ್ವ ಕಳೆದುಕೊಂಡು ಕಲ್ಲಿನಂತಾಗಿ, ಮುಖ ತೊಳೆಯುವಾಗ, ಗೀರಿದಂತಾದಾಗ ಆ 'ಕೊಂಬು' ಕಳಚಿ ಬಿತ್ತು. ' ತೇಜಸ್ವಿ ' ಯವರ 'ಸಹಜ ಕೃಷಿ' ಪುಸ್ತಕ ಓದಿದ ಮೇಲೆ, ಅದರಿಂದ ಪ್ರೇರಿತನಾಗಿ, ಮೋಹಿತನಾಗಿ, " ನಾವುಗಳು ವ್ಯವಸಾಯ ಮಾಡುವ ರೀತಿನೇ… ಸರಿ ಇಲ್ಲ. ನಾವು ಭೂಮಿಯನ್ನ ಉಳಬಾರದು, ಗೊಬ್ಬರ ಹಾಕಬಾರದು, ಕ್ರಿಮಿನಾಶಕ ಸಿಂಪಡಿಸಬಾರದು. ಅರಣ್ಯಕ್ಕೂ , ಕೃಷಿ ಭೂಮಿಗೂ ಏನು ವ್ಯತ್ಯಾಸ!! ..? ನೈಸರ್ಗಿಕವಾಗಿ ಕಾಡು ಯಾವ ರೀತಿ ಬೆಳೆಯುತ್ತೋ … ಹಾಗೆಯೇ ನಮ್ಮ ಕೃಷಿ ಪದ್ಧತಿಯೂ ಕೂಡ ಇರಬೇಕು. ಪ್ರಪಂಚದ ಎಲ್ಲ ರಹಸ್ಯವನ್ನು ತನ್ನೊಳಗೆ ಅಡಗಿಸಿಕೊಂಡಿರುವ ಪ್ರಕೃತಿ!! ತನ್ನ ಒಡಲೊಳಗೆ ಹಾಕಿರುವ ಬೀಜವನ್ನೋ ಅಥವಾ ದಿಂಡನ್ನೋ ಬೆಳೆಸಿ ಕಾಯುವ ಚೈತನ್ಯ ಇರುತ್ತದೆಯಲ್ಲವೇ..?
ಅದಕ್ಕಾಗಿ ನಾವು ಅತಿಯಾದ ಸರ್ಕಸ್ಸು ಮಾಡುವ ಅವಶ್ಯಕತೆ ಇಲ್ಲ. " ಎಂದೆಲ್ಲಾ ಭಾವಾವೇಶದಿಂದ ನಮ್ಮ ತಂದೆಯವರಿಗೆ ವಿವರಿಸಿದಾಗ,
" ಉತ್ತಂಗಿಲ್ಲ!! ಬಿತ್ತಂಗಿಲ್ಲ!! ಕಾಲ್ ಮೇಲೆ ಕಾಲು ಹಾಕಿ ಕೂತ್ರೆ, ಫಸಲು ಬಂದು ಬಾಗ್ಲು ಬಡೀಬೇಕು. ಅದು ಹೆಂಗ್ ಕೆಲಸಾನೆ ಮಾಡದೆ ಇರೋ!! ಹೊಸ ಹೊಸ ಕೆಲಸಗಳನ್ನ ಹುಡುಕಿ ತರ್ತೀಯಾ..? ನಾನು ಇಷ್ಟು ವರ್ಷಗಳಲ್ಲಿ ಬೆಳೆಸಿರೋ ಮರಗಳನ್ನ, ಒಂದೇ ವರ್ಷದಲ್ಲಿ ಸರ್ವನಾಶ ಮಾಡಿ ಬಿಡ್ತೀಯ. ಹಂಗೂ ನಿನಗೆ ಏನಾದ್ರು ಏಕ್ಸು-ಪೆರಿಮೆಂಟು ಮಾಡಲೇ ಬೇಕು ಅಂತಿದ್ರೆ.., ಯಾವ್ದಾದ್ರು ಹೊಸ ಜಾಗದಲ್ಲಿ ಮಾಡು. ನನ್ನ ತೋಟದ ತಂಟೆಗೆ ಬಂದ್ರೆ ಕೈ-ಕಾಲು ಮುರಿತೀನಿ. " ಅಂದರು ನಮ್ಮಪ್ಪ.
ಥಿಯಾರಿಟಿಕಲಿ ಫುಕುವೋಕಾ ಮಾದರಿಯ ' ಸಹಜ ಕೃಷಿ 'ಯ ಬಹಳಷ್ಟು ವಿಷಯಗಳು ನನನ್ನು ಆವರಿಸಿಕೊಂಡು ಕಾಡುತ್ತವೆಯಾದರೂ, ಅವುಗಳು.. ತಲೆಬಾಲವಿಲ್ಲದ ನನ್ನ ಕಲ್ಪನೆಗಳ ಅನಾಥ ಪ್ರಜ್ಞೆಯಂತೆಯೇ ಅಣಕಿಸುತ್ತವೆಯಷ್ಟೇ ವಿನಃ ಪ್ರಾಕ್ಟಿಕಲ್ ಆಗಿ ಎಂದಾದರೂ ಒಮ್ಮೆ ನನ್ನ ಜೀವನದಲ್ಲಿ ಅದನ್ನೆಲ್ಲಾ ಮಾಡಬಹುದು ಎಂಬುದರ ನಂಬಿಕೆ ಇಲ್ಲ. ಯಾಕಂದ್ರೆ ಅಷ್ಟು ಕಮಿಟ್-ಮೆಂಟು, ರಿಸ್ಕು, 'ಇದು ಬೇಕು' ಎಂಬುದರ ಕ್ಲಾರಿಟಿ ಇಲ್ಲ.
ವ್ಯವಸಾಯ ಅಂದರೆ, ಲಾಭದಾಯಕ ವ್ಯಾಪರವೋ ಅಥವಾ ಅದೊಂದು ಕಲಾತ್ಮಕ ಜೀವನ ಶೈಲಿಯೋ ಎಂಬ ಗೊಂದಲದಲ್ಲಿರುವಾಗ … ಗೆಳೆಯ ಸೀನ!! ಎಕರೆಗೆ ಐದು ಲಕ್ಷ ರೂಪಾಯಿ ಬೆಲೆ ಬಾಳುವ ಸಮೃದ್ಧವಾದ 'ಬಾಳೆ' ಬೆಳೆದು ಫೋನಾಯಿಸಿದ.
*****