ವ್ಯಕ್ತಿ – ದೇಶಭಕ್ತಿ- ಭೂಶಕ್ತಿ: ಅಖಿಲೇಶ್ ಚಿಪ್ಪಳಿ

Akhilesh chippali column1
ಪಶ್ಚಿಮಘಟ್ಟಗಳ ತಪ್ಪಲಿನಲ್ಲಿಂದ ಹಿಡಿದು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಅದೆಷ್ಟೋ ಪ್ರಭೇದಗಳು ನಾಶವಾಗಿವೆ. ಋತುಮಾನಗಳ ಬದಲಾವಣೆಯಿಂದಾಗಿ ಹೊಸ-ಹೊಸ ಪ್ರಭೇದಗಳು ಸೃಷ್ಟಿಯೂ ಆಗುತ್ತಿವೆ. ಸ್ಟೀಫನ್ ಹಾಕಿಂಗ್ಸ್‍ನಂತಹ ಮೇಧಾವಿಗಳು ಮಾನವನ ಕಾರಣಕ್ಕಾಗಿ ಬದಲಾವಣೆಯಾಗುತ್ತಿರುವ ಹವಾಗುಣದಿಂದ ಮನುಷ್ಯಕುಲಕ್ಕೇ ಆಪತ್ತು ಬಂದಿದೆ. ಇನ್ನೊಂದು ಸಾವಿರ ವರ್ಷದ ಒಳಗೆ ನಮ್ಮಗಳ ವಾಸಕ್ಕೆ ಬೇರೆ ಗ್ರಹವನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಅವಸಾನ ಖಂಡಿತ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ ವಿಜ್ಞಾನವನ್ನು ಕಂಡುಕೊಳ್ಳುವ ಹಂತದಲ್ಲಿ ನಮ್ಮ ವೈಜ್ಞಾನಿಕ ಕಾರ್ಯಕ್ಷೇತ್ರ ತ್ವರಿತವಾಗಿ ಬದಲಾಗಬೇಕಿದೆ. 

ವ್ಯಕ್ತಿಗಳನೇಕರು ಸೇರಿ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದರೆ, ಅದಕ್ಕೆ ಸಾಮಾನ್ಯವಾಗಿ ಕುಟುಂಬವೆಂದು ಕರೆಯುವ ಸಾಮಾಜಿಕ ರೂಢಿ ನಮ್ಮಲ್ಲಿದೆ. ಹಲವು ಕುಟುಂಬಗಳಿಂದ ಊರು, ಪೇಟೆ, ಪಟ್ಟಣ ಹೀಗೆ ಜನಸಂಖ್ಯೆಯಾಧಾರಿತವಾಗಿ ಬೆಳೆಯುತ್ತಾ ಹೋಗಿ ದೇಶ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಎಲ್ಲಾ ದೇಶಗಳಿಗೂ ತನ್ನ ತನ್ನದೇ ಆದ ಗಡಿಗಳಿವೆ. ಗಡಿಯಾಚೆಗಿನ ಇನ್ನೊಂದು ದೇಶದ ಜೊತೆ ಸಂಘರ್ಷ ಏರ್ಪಟ್ಟಾಗ ಉಭಯದೇಶಗಳ ಜನರಲ್ಲೂ ಒಂದು ಮಾನಸಿಕ ಸ್ಥಿತಿ ಏರ್ಪಟ್ಟು ದೇಶಭಕ್ತಿ ಎಂದು ಘೋಷಿಸಿಕೊಳ್ಳುವ ಒಂದು ರೀತಿಯ ಉನ್ಮಾದ ಸೃಷ್ಟಿಯಾಗುತ್ತದೆ. ಇದಕ್ಕೆ ಯುದ್ಧೋನ್ಮಾದ ಎಂದು ಕರೆಯಬಹುದು. ಇದಲ್ಲದೇ ಏನೇನು ಸಮಸ್ಯೆಗಳು ಇಲ್ಲದಿದ್ದಾಗ ಕೂಡ ದೇಶಭಕ್ತಿ ಪ್ರತಿಯೊಬ್ಬ ಪ್ರಜೆಯಲ್ಲೂ ಕಾಲ-ಕಾಲಕ್ಕೆ ವ್ಯಕ್ತವಾಗುತ್ತದೆ. ನಮ್ಮದೇ ದೇಶವನ್ನು ಗಮನದಲ್ಲಿರಿಸಿಕೊಂಡು ವ್ಯಾಖ್ಯಿಸುವುದಾದಲ್ಲಿ, ಭಾರತ ಮಾತೆಯನ್ನು ಕಾಯಾ-ವಾಚಾ-ಮನಸಾ ಸ್ಮರಿಸುವುದು, ಆರಾಧ್ಯರೂಪದಲ್ಲಿ ನೋಡುವುದು ಇತ್ಯಾದಿಗಳು. ರಾಜ್ಯ-ರಾಜ್ಯಗಳು ಆಂತರಿಕ ಗಲಭೆಗಳಿಂದ ಕ್ಷೋಬೆಗೊಳಗೊಳ್ಳುತ್ತಾ ಪರಸ್ಪರ ನೀರಿಗಾಗಿಯೋ, ಗಡಿಗಾಗಿಯೋ ಹೊಡೆದಾಡುತ್ತಿದ್ದರೆ, ಅವಕ್ಕೆ ಅಂತಾರಾಜ್ಯ ವ್ಯಾಜ್ಯಗಳು ಎನ್ನಬಹುದು. ಇಲ್ಲಿ ದೇಶಭಕ್ತಿಗಾಗಲಿ ಅಥವಾ ದೇಶದ್ರೋಹಕ್ಕಾಗಲಿ ಕೆಲಸವಿಲ್ಲ. ಸಮಗ್ರ ದೇಶದ ಗಡಿಯೊಳಕ್ಕೆ ನಡೆಯುತ್ತಿರುವ ಕ್ಷೋಬೆಗಳಿಗೆ ದೇಶದ್ರೋಹದ ಪಟ್ಟವನ್ನು ಕಟ್ಟಿಕೊಂಡು ಉಭಯರಾಜ್ಯಗಳು ಕಾಲೆಳೆದುಕೊಳ್ಳುವುದಿಲ್ಲ. ಇರಲಿ, ದೇಶಭಕ್ತಿ ಅಥವಾ ದೇಶದ್ರೋಹದ ಬಗ್ಗೆ ಬರೆಯುವಾಗ ತುಂಬಾ ಎಚ್ಚರವಹಿಸಬೇಕಾದ ದಿನಗಳಿವು. ಕೊಂಚ ವ್ಯತ್ಯಾಸ ಘಟಿಸಿದರೂ ಮಾಹಿತಿಯನ್ನು ನೀಡುವ ಲೇಖನವೇ ವಿವಾದಕ್ಕೀಡಾಗುವ ಅಪಾಯವಿದೆ.

ಧರೆ ಜನಿಸಿ 460 ಕೋಟಿ ವರ್ಷಗಳಾಯಿತು ಎಂದು ತಜ್ಞರು-ವಿಜ್ಞಾನಿಗಳು ಹೇಳಿದ್ದಾರೆ. ಇದನ್ನು ಪ್ರಶ್ನೆ ಮಾಡದೆ ಮುಂದೆ ಹೋಗೋಣ. ಕುದಿ-ಕುದಿದು ತಣ್ಣಗಾದ ಭೂಮಿಯ ಮೇಲೆ ಸೂಕ್ಷಾಣು ಜೀವಿಗಳು ಅವತರಿಸಿದವು. ಊಹಿಸಲೂ ಸಾಧ್ಯವಿಲ್ಲದಷ್ಟು ದೈತ್ಯ ಗಾತ್ರದ ಮಹೋರಗಗಳು ಈ ಜಗತ್ತನ್ನಾಳಿ ನಿರ್ಗಮಿಸಿದವು. ಭೂಮಿಯ ಇತಿಹಾಸಕ್ಕೆ ಹೋಲಿಸಿದರೆ, ಮನುಷ್ಯನ ಸೃಷ್ಟಿಗೆ ಬಹಳ ಚಿಕ್ಕ ಇತಿಹಾಸವಿದೆ. ಹತ್ತಾರು ಸಾವಿರ ವರ್ಷಗಳಿಂದೀಚೆ ನಾವು ನಾಲ್ಕು ಕಾಲಿನಿಂದ ಎದ್ದು ಎರಡು ಕಾಲಿನಿಂದ ನಡೆಯಲು ಕಲಿತೆವು. ವಿಜ್ಞಾನ-ತಂತ್ರಜ್ಞಾನಗಳೆಂಬ ಕಠಿಣ ಶಬ್ಧಗಳು ನಮ್ಮ ಕೈಯಲ್ಲಿ ಬಳಕೆಯಾಗಿ ಇನ್ನೂರು ವರ್ಷಗಳೂ ಕಳೆದಿಲ್ಲ. ಕೈಗಾರಿಕ ಕ್ರಾಂತಿ ಶುರುವಾಗಿದ್ದು 18ನೇ ಶತಮಾನದ ಮಧ್ಯಭಾಗದಲ್ಲಿ, ಈ ಹಂತದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಬಲುವೇಗವನ್ನು ಪಡೆದುಕೊಂಡು ಇಡೀ ಭೂಮಿಯ ಪರಮೋಚ್ಛ ನಾಯಕರನ್ನಾಗಿ ಮನುಷ್ಯರನ್ನು ರೂಪಿಸಿದವು. ಚಂದ್ರನನ್ನು ಮುಟ್ಟಿ ಬಂದ ನಮಗೆ, ಮಂಗಳ ದೂರವಾಗಿ ತೋರಲಿಲ್ಲ. ಇದೀಗ ಬೆಳಕಿನ ವೇಗವನ್ನು ಕೈಗೆಟಿಸಿಕೊಳ್ಳುವ ತಂತ್ರಜ್ಞಾನದ ಹೊಸ್ತಿಲನ್ನು ದಾಟುವ ಸಂಕ್ರಮಣದ ಸ್ಥಿತಿಯಲ್ಲಿ ಮನುಕುಲವಿದೆ.

ಸಧ್ಯದಲ್ಲಿ ನಮ್ಮರಿವಿಗೆ ಬೇರೆ ಯಾವ ವಾಸಯೋಗ್ಯವಾದ ಸ್ಥಳ ಅಥವಾ ಗ್ರಹ ನಿಲುಕಿಲ್ಲ. ನಮ್ಮನ್ನು ನಾವೇ ಬದುಕಿಸಿಕೊಳ್ಳಬಲ್ಲಷ್ಟು ಶಕ್ತರು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ತುಂಬಿದ್ದು ಇದೇ ವಿಜ್ಞಾನ ಹಾಗೂ ತಂತ್ರಜ್ಞಾನ. ಈ ನಮ್ಮ ಅತಿಯಾದ ವಿಶ್ವಾಸವೇ ಭೂಮಿಯ ಮೇಲಿನ ಇನ್ನಿತರ ಜೀವಿಗಳಿಗೆ ಅಪಾಯವಾಗಿ ಪರಿಣಮಿಸಿದೆ. ಕಳೆದ ಒಂದೇ ತಲೆಮಾರಿನಲ್ಲಿ ಈ ಪ್ರಪಂಚದ ಶೇಕಡಾ 52ರಷ್ಟು ವನ್ಯಪ್ರಭೇದಗಳನ್ನು ಹೊಸಕಿ ಹಾಕಿದ ಕರಾಳ ಮುಖ ನಮ್ಮದಾಗಿದೆ. ನಮ್ಮಗಳ ಅಭಿವೃದ್ಧಿಯ ಅಮಲು ಯಾವ ಮಟ್ಟಕ್ಕಿದೆ ಎಂದರೆ, ಇತರ ಮನುಷ್ಯಸ್ನೇಹಿ ಕೀಟಗಳಂತಹ ಜೇನು, ಉಭಯವಾಸಿ ಕಪ್ಪೆ, ದೈತ್ಯದೇಹಿ ಆನೆ, ಹುಲಿ ಇತ್ಯಾದಿಗಳ ಉಳಿವಿಗೆ ನಾವು ಯಾವುದೇ ತರಹದ ಪ್ರಾಮಾಣಿಕ ಪ್ರಯತ್ನವನ್ನು ತೋರುತ್ತಿಲ್ಲ. ನಮಗೆ ವಿಮಾನದಷ್ಟೇ ವೇಗವಾಗಿ ಚಲಿಸುವ ರೈಲು ಬೇಕು. ಮರುಭೂಮಿಯಲ್ಲೂ ಧ್ರುವಪ್ರದೇಶದ ತಂಪು ವಾತಾವರಣ ಬೇಕು. ನಿತ್ಯ ಕೆಲಸಕ್ಕೆ ಲೆಕ್ಕವಿಲ್ಲದಷ್ಟು ಯಾಂತ್ರಿಕೃತ ಪರಿಕರಗಳು ಬೇಕು. ಇವೆಕ್ಕೆಲ್ಲಾ ಶಕ್ತಿ ಬೇಕು. ಶಕ್ತಿಯ ಸಂಚಯವನ್ನು ನಾವು ಆಣೆಕಟ್ಟು ಕಟ್ಟಿ ಉತ್ಪಾದಿಸಿಕೊಳ್ಳುತ್ತೇವೆ. ಭೂಗರ್ಭವನ್ನು ಬಗೆದು ಪಳೆಯುಳಕೆ ಇಂಧನಗಳನ್ನು ಮೇಲೆತ್ತಿ ತಂದು ಸುಟ್ಟು ಅದರಿಂದ ಪಡೆದುಕೊಳ್ಳುತ್ತೇವೆ. ತತ್‍ಕ್ಷಣದ ಸುಖಕ್ಕಾಗಿ ಏನನ್ನಾದರೂ ತ್ಯಾಗ ಮಾಡುವ ಅಜ್ಞಾನವನ್ನು ಹೊಂದಿದ್ದೇವೆ. ನಮ್ಮ ಸುಂದರ ನದಿಗಳು ಕುಡಿಯಲು ಬಿಡಿ, ತೊಳೆದುಕೊಳ್ಳಲೂ ಯೋಗ್ಯವಾಗಿಲ್ಲ. ಎಲ್ಲೆಲ್ಲೂ ಮಲಿನಗೊಳಿಸಿದ ನಂತರದಲ್ಲಿ ನಮ್ಮ ಜ್ಞಾನ ಸ್ವಚ್ಛ ಮಾಡುವ ಕುರಿತ ಯೋಚನೆಯನ್ನಷ್ಟೇ ಮಾಡುವ ಸೀಮಿತ ಹಂತ ತಲುಪಿದೆಯಷ್ಟೆ.

ಅನಂತ ವಿಶ್ವದಲ್ಲಿ ನಮ್ಮರಿವಿಗೆ ವಾಸಯೋಗ್ಯವಾದ ಸ್ಥಳವೆಂದರೆ ಈ ಭೂಮಿ ಮಾತ್ರವಾಗಿದೆ. ಈ ಭೂಮಿಗೂ ಒಂದು ಮಿತಿಯಿದೆ. 1000 ಕೋಟಿ ಭಸ್ಮಾಸುರರನ್ನು ಮಾತ್ರ ಪೊರೆಯುವ ಶಕ್ತಿ ಈ ಭೂಮಿಗಿದೆ ಎಂದು ಮತ್ತೆ ಇದೇ ವಿಜ್ಞಾನಿಗಳೇ ಎಚ್ಚರಿಸಿದ್ದಾರೆ. ಪಳೆಯುಳಕೆ ಇಂಧನಗಳ ಖಜಾನೆ ಭೂಗರ್ಭದಲ್ಲಿ ಇನ್ನೂ ಹೇರಳವಾಗಿ ಲಭ್ಯವಿದೆ. ಅದನ್ನು ಎತ್ತಿ ತಂದು ಬಳಸಿದರೆ, ಹವಾಗುಣ ವೈಪರೀತ್ಯ ಏರುತ್ತಾ ಹೋಗುತ್ತದೆ. ನಿಧಾನಕ್ಕೆ ತೀರವಾಸಿಗಳ ಬದುಕು ಮುಳುಗಿ ಮೂರಾಬಟ್ಟೆಯಾಗುತ್ತದೆ. ಧ್ರುವ ಪ್ರದೇಶಗಳು ಶೀಘ್ರವಾಗಿ ಕರಗಿ ಸಮುದ್ರ ಸೇರುತ್ತವೆ. ಅಲ್ಲಿನ ವಾಸಿಗಳಾದ ಹಿಮಕರಡಿಗಳು ನೆಲೆ ಕಳೆದುಕೊಂಡು ಅವಸಾನ ಹೊಂದುತ್ತವೆ. ಅತಿಯಾದ ಭೂಬಿಸಿಗೆ ಚಂಡಮಾರುತಗಳ ಸಂಖ್ಯೆ ಹೆಚ್ಚುತ್ತದೆ. ಯಾವುದೇ ದೇಶಕ್ಕೆ ಇದು ಅಪಾಯಕಾರಿ ಸೂಚನೆಯಾಗಿದೆ. ಪದೇ ಪದೇ ಬರುವ ನೈಸರ್ಗಿಕ ವಿಕೋಪಗಳು ಈ ಜಗತ್ತಿನ ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮೊಟ್ಟ ಮೊದಲಿಗೆ ಮಾರಕವಾಗಿ ಪರಿಣಮಿಸುತ್ತವೆ. ಬಡಜನರ ಬದುಕು ಹೀನಾಯವಾಗುತ್ತದೆ. ಅತಿವೃಷ್ಟಿ-ಅನಾವೃಷ್ಟಿ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಸಂಭವಿಸಿ, ಎರಡೂ ವೈಪರೀತ್ಯಗಳೂ ನಾಶಕ್ಕೆ ಕಾರಣವಾಗುತ್ತವೆ. ಆಹಾರಭದ್ರತೆಗೆ ಧಕ್ಕೆಯಾಗಿ, ಸಾಮಾಜಿಕ ಭದ್ರತೆ ಕುಸಿದುಬೀಳುತ್ತದೆ. ಭಾರತದಂತಹ 70% ರೈತರೇ ಇರುವ ದೇಶಕ್ಕೆ ಹವಾಗುಣ ವೈಪರೀತ್ಯ ನಿಜವಾಗಲೂ ಭೂತಾಕಾರದ ಸಮಸ್ಯೆಯನ್ನೇ ತರುತ್ತದೆ. ಬಿತ್ತುವಾಗ ಬಾರದ ಮಳೆ, ಕೊಯಿಲು ಮಾಡುವಾಗ ಬರುತ್ತದೆ. ಜೀವನದ ಭದ್ರತೆಯಿಲ್ಲದ ರೈತನ ಭವಿಷ್ಯ ಕರಾಳವಾಗುತ್ತದೆ. ಕುಡಿಯಲು ನೀರಿಗೆ ಪರದಾಡಬೇಕಾದ ವಿಷಮ ಪರಿಸ್ಥಿತಿಗೆ ಈ ದೇಶದ ಹೆಚ್ಚಿನ ಜನ ತಳ್ಳಲ್ಪಡುತ್ತಾರೆ. ರೈತರ ಆತ್ಮಹತ್ಯೆಯ ಸಂಖ್ಯೆ ಮೂರಂಕೆಯಿಂದ ನಾಲ್ಕಂಕೆಗೆ, ನಾಲ್ಕಂಕೆಯಿಂದ ಐದಂಕೆಗೆ ಹೀಗೆ ಉಲ್ಬಣಿಸುತ್ತಾ ಹೋಗುತ್ತದೆ. 

ಅತಿಯಾದರೆ ಅಮೃತವೂ ವಿಷ, ಅಂತೆಯೇ ಅತಿಯಾದ ಅಭಿವೃದ್ಧಿಯ ಅಮಲು ಜಗತ್ತಿನ 5ನೇ ವಿನಾಶಕ್ಕೆ ಮುನ್ನುಡಿಯಾಗಿದೆ. ಇದೇನು ಈ ತರಹ ಬೆಚ್ಚಿ ಬೀಳಿಸುವ ಅದ್ವಾನವನ್ನು ಅಧ್ಯಾಯದ ಮೂಲಕ ಹೇಳುತ್ತೀರಲ್ಲ ಎಂದು ಪಾಠಕರು ಆರೋಪಿಸಬಹುದು. ಆದರೆ ಇದು ಈಗಿನ ವಿಜ್ಞಾನಕ್ಕೆ ನಿಲುಕಿದ ಘೋರ ಸತ್ಯವೆಂದು ಹೇಳದೆ ಬೇರೆ ವಿಧಿಯಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಓದುಗರಿಗೆ ಏಳಬಹುದು. ಎಲ್ಲಾ ಪ್ರಶ್ನೆಗಳೂ ಹಾಗೂ ಸಂದೇಹಗಳಿಗೂ ಪರಿಹಾರವಿದೆ. ಆದರೆ ಆಚರಣೆಗೆ ತರುವಲ್ಲಿ ತೊಡಕಿದೆ. ಇದಕ್ಕೆ ಕಾರಣ ಮತ್ತೆ ಈ ಲೇಖನದ ತಲೆಬರಹ ನೋಡಬೇಕು. ಸಮಸ್ಯೆಯೂ ಅಲ್ಲೇ ಇದೆ, ಪರಿಹಾರವೂ ಅಲ್ಲೇ ಇದೆ.. ಮುಗಿಸುವ ಮುನ್ನ ಇದು ಹೇಗೆ ಎಂದು ನೋಡೋಣ.

ಕಳೆದ ಇನ್ನೂರು ವರ್ಷಗಳಲ್ಲಿ ಈ ಭೂಮಿಯನ್ನು ಅಸ್ಥಿರಗೊಳಿಸಲು ಸಾವಿರಾರು ಅಭಿವೃದ್ಧಿಯ ಏಣಿಗಳನ್ನು ಬಳಸಿದ ನಮಗೆ ಇದನ್ನು ಉಳಿಸಲು ನೂರಾರು ದಾರಿಗಳಿವೆ. ಇದನ್ನು ಬುದ್ಧ, ಗಾಂಧಿ, ಫುಕೋಕ ಅಷ್ಟೇಕೆ ಖುದ್ಧು ಸ್ಟೀಫನ್ ಹಾಕಿಂಗ್ಸ್, ಅಬ್ದುಲ್ ಕಲಾಂ ಇತ್ಯಾದಿ ಮಹನೀಯರು ಹಲವು ಬಾರಿ ಹೇಳಿದ್ದಾರೆ. ಬರೀ ಹೇಳಿದ್ದಲ್ಲದೇ ಅದರಂತೆ ಬದುಕಿ ತೋರಿದ್ದಾರೆ. ಎಲ್ಲಾ ಧರ್ಮಗಳ ಸಾರವೂ ಇದನ್ನೇ ಒತ್ತಿ ಹೇಳಿವೆ. ವ್ಯಕ್ತಿಗತವಾದ ಬಳಕೆಯನ್ನು ಕಡಿಮೆ ಮಾಡುವುದು ಮೊದಲ ಹಂತ. ಮರುಬಳಕೆ, ಮರುಬಳಕೆ ಇಂಧನಗಳಿಗೆ ಒತ್ತು ನೀಡುವುದು, ಪಳೆಯುಳಕೆ ಇಂಧನಗಳ ಬಳಕೆಯನ್ನು ತಗ್ಗಿಸುವುದು ಅಥವಾ ನಿಲ್ಲಿಸುವುದು. ಐಷರಾಮಿ ಬದುಕಿಗೆ ವಿದಾಯ ಹೇಳುವುದು. ಸಾವಯವ ಕೃಷಿ. ಪರಿಸರಸ್ನೇಹಿ ಬದುಕು. ಸ್ಥಳೀಯವಾದ ವಸ್ತುಗಳನ್ನೇ ಬಳಸುವುದು. ಮಿತಿಯಾದ ಬಳಕೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಪ್ಲಾಸ್ಟಿಕ್ ನಿಷೇಧ. ಪರಿಸರ ಸ್ನೇಹಿ ಉಪಕರಣಗಳು. ಒಲೆಗಳು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾವಿರಾರು ಪರಿಹಾರಗಳು ಸಿಗುತ್ತವೆ.

ಜಗತ್ತಿನ ಏಳುನೂರು ಚಿಲ್ಲರೆ ಕೋಟಿ ಜನರು ಹಾಗೂ ಅಸಂಖ್ಯ ಇತರೆ ಜೀವಿಗಳ ಇವತ್ತಿನ ದು:ಸ್ಥಿತಿಗೆ ಕಾರಣವಾಗಿರುವುದು, ಜಗತ್ತಿನ ಕೆಲವೇ ಶ್ರೀಮಂತ ರಾಷ್ಟ್ರಗಳು ಹಾಗೂ ಶ್ರೀಮಂತರು. ಇವರು ಅನಿಯಮಿತವಾಗಿ ಬಳಸುವ ಪಳೆಯುಳಕೆ ಇಂಧನಗಳು ಎಲ್ಲರ ಬದುಕನ್ನು ನುಚ್ಚುನೂರಾಗಿಸುತ್ತವೆ. ನಿಮ್ಮ ಕಾರಿನಿಂದ ಹೊರಹೊಮ್ಮಿದ ಇಂಗಾಲಾಮ್ಲಕ್ಕೆ ಯಾವುದೇ ದೇಶದ ಗಡಿಯಿಲ್ಲ. ಅಮೆರಿಕ, ಚೀನಾದ, ಭಾರತದ ಇಂಗಾಲಾಮ್ಲ ತ್ಯಾಜ್ಯದ ಪರಿಣಾಮಕ್ಕೆ ಕಿರಿಬಾಟಿಯಂತಹ ದ್ವೀಪದೇಶ ಸುಲಭಕ್ಕೆ ತುತ್ತಾಗುತ್ತದೆ. ಸಮುದ್ರ ತೀರದಲ್ಲಿರುವ ಬಾಂಗ್ಲಾ ದೇಶದ ಜನ ಅನಿವಾರ್ಯವಾಗಿ ಎತ್ತರದ ಪ್ರದೇಶದ ಕಡೆಗೆ ನುಗ್ಗಿಬರುವ ಸ್ಥಿತಿ ಉಂಟಾಗುತ್ತದೆ. ಉತ್ತರ-ದಕ್ಷಿಣ ಧ್ರುವದ ವನ್ಯಜೀವಿಗಳು ಆಹಾರವಿಲ್ಲದೇ ಸಾಯುತ್ತವೆ. ಹಾಗಾಗಿಯೇ ಈ ಜ್ವಲಂತ ಸಮಸ್ಯೆಯಾದ “ಹವಾಮಾನ ವೈಪರೀತ್ಯ” ವೆಂಬ ಅಗೋಚರ ಭೂತಕ್ಕೆ ಯಾವುದೇ ದೇಶದ ಗಡಿಯಿಲ್ಲ. ಹಾಗಾಗಿ ಇದಕ್ಕೆ ದೇಶಪ್ರೇಮ, ದೇಶಭಕ್ತಿಯ ಹಂಗಿಲ್ಲ. ಇದಕ್ಕೆ ಇರುವುದು ಒಂದೇ ಭೂದ್ರೋಹ. ಪ್ರಸ್ತುತವಾಗಿ ಇಡೀ ಜಗತ್ತು ಸುರಕ್ಷಿತವಾಗಿರ ಬೇಕೆಂದರೆ ನಮಗ್ಯಾರಿಗೂ ದೇಶದ ಗಡಿಯ ಹಂಗು ಇರಬಾರದು. ಮನುಕುಲದ ಎಲ್ಲರೂ ಏಕತ್ರವಾಗಿ ಹವಾಮಾನ ವೈಪರೀತ್ಯವೆಂಬ ಶತ್ರುವನ್ನು ಎದುರಿಸುವ ಪಣ ತೊಡಬೇಕು. ದೇಶಪ್ರೇಮ ಅಥವಾ ದೇಶಭಕ್ತಿಯನ್ನು ಈ ಮೂಲಕ ತೋರಿಸುವ ಮನೋಭಾವ ನಮ್ಮದಾಗಬೇಕು.

ಕೊನೆಯ ಮಾತು: ಅಮೇರಿಕದ ನಿಯೋಜಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರಿಪಬ್ಲಿಕ್ ಬೆಂಬಲದಿಂದ ಆರಿಸಿಬಂದವರು ಹಾಗೂ ಹವಾಮಾನ ವೈಪರೀತ್ಯ ಸುಳ್ಳೇ ಸುಳ್ಳು ಎಂದು ಪ್ರತಿಪಾಧಿಸುವವರು. ಈ ಧೋರಣೆ ಭೂಮಿಯ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x