ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.

 somashekar-k-t

      ಹೂವು ಅರಳುವುದನ್ನು ' ವಿಕಸನ  ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು ಹೆಚ್ಚಿಸುವುದರ ಜತೆಗೆ ಪ್ರಕೃತಿಗೆ ಮೆರುಗನ್ನು ನೀಡುತ್ತದೆ.

      ವ್ಯಕ್ತಿತ್ವ ಎಂದರೆ ವ್ಯಕ್ತಿ ಹೊಂದಿರುವ ಗುಣ, ವೈಶಿಷ್ಟ್ಯ, ಆಳ್ತನ. ಇವು ಹೂವಿನಂತೆ ವಿಕಸಿಸಿ ಗುಣ, ನಡತೆಗಳೆಂಬ ಪರಿಮಳಗಳಿಂದ ಆ ವ್ಯಕ್ತಿಯು ಸಮಾಜಕ್ಕೆ ಮಾದರಿಯಾಗಿ ಮನೆಯ, ಸಮಾಜದ, ನಾಡಿನ ಕೀರ್ತಿ ಹೆಚ್ಚಾಗುವಂತೆ ಮಾಡುವುದನ್ನು ವ್ಯಕ್ತಿತ್ವದ ವಿಕಸನ ಎನ್ನಬಹುದು. ಅದು ಒಳ್ಳೆಯ ಗುಣಗಳ ಹೊಂದುವ ಮತ್ತು ವಿಕಸಿಸುವ ಪ್ರಕ್ರಿಯೆ. ಒಳ್ಳೆಯ ಗುಣಗಳು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯುತ್ತವೆ. ಸಂಕುಚಿತ ಮನಸ್ಸುಗಳ ವಿಶಾಲಗೊಳಿಸುತ್ತವೆ. ಅತ್ಯಾಚಾರ, ಕೊಲೆ, ಭ್ರಷ್ಟಾಚಾರ,  ಭಯೋತ್ಪಾದನೆ, ಆತ್ಮಹತ್ಯೆ, ಹಿಂಸೆ ಅತಿಯಾಗಿರುವುದರಿಂದ ಇಂದು NGO ಗಳು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೇಗೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು, ಸಮಾಜದಲ್ಲಿ ಹೇಗೆ ಉತ್ತಮ ವ್ಯಕ್ತಿಯಾಗಿ ಬದುಕಬೇಕೆಂದು ಉಪನ್ಯಾಸ ನೀಡುತ್ತಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸರಿಯಾಗಿ ವ್ಯಕ್ತಿತ್ವ ರೂಪಿಸಿಗೊಳ್ಳದಿರುವುದರಿಂದ NGO ಗಳು ದೇಶದ ಮೇಲಿನ ಕಾಳಜಿಯಿಂದ ಹೀಗೆ ಮಾಡುತ್ತಿರುವುದನ್ನು ಮೆಚ್ಚತ್ತಕ್ಕದ್ದೇ. ಹಿಂದೆ ಇದಕ್ಕೆ ಇಷ್ಟು ಪ್ರಾಮುಖ್ಯತೆ ಇರಲಿಲ್ಲ. ಅಂದರೆ ವ್ಯಕ್ತಿತ್ವ ಹುಟ್ಟಿದಾಗ ದೇಹಕ್ಕೆ ಚರ್ಮ ಹೇಗೆ ಅಂಟಿಕೊಂಡು ಬಂದಿರುತ್ತೋ ಹಾಗೆ ಮನೆಯಿಂದ ಉತ್ತಮ ವ್ಯಕ್ತಿತ್ವ ಬರುತ್ತಿತ್ತು!

      ಮೊಗ್ಗು ವಿಕಸಿಸಲು ಒಂದು ವಾತಾವರಣ, ಗಾಳಿ, ನೀರು, ಭೂಮಿ, ಸೂರ್ಯನ ಕಿರಣಗಳು ಅವಶ್ಯಕ. ಸೂರ್ಯ ತನಗಾಗಿ ಬೆಳಕು ಶಾಖ ಕೊಡುವುದಿಲ್ಲ! ಗಾಳಿ ತನಗಾಗಿ ಬೀಸುವುದಿಲ್ಲ! ನೀರು, ಭೂಮಿ, ವಾತಾವರಣ ತಮಗಾಗಿ ತಾವಿಲ್ಲ! ಇತರರಿಗಾಗಿ ಇವೆ! ಹಾಗೇ ಹೂವು ತನಗಾಗಿ ವಿಕಸಿಸಿಸದೆ ಇತರರಿಗಾಗಿ ವಿಕಸಿಸಿ ಜೀವನವ ಪಾವನವೂ, ಸಾರ್ಥಕವೂ ಮಾಡಿಕೊಳ್ಳುತ್ತದೆ. ಉತ್ತಮ ಕುಟುಂಬ, ಪರಿಸರದಿಂದ ವ್ಯಕ್ತಿತ್ವ ಎಂಬ ಮೊಗ್ಗು ಆಕರ್ಷಕವಾಗಿ ವಿಕಸಿಸುತ್ತದೆ. ಕೆಲವು ಮೊಗ್ಗುಗಳು ಒಂದೇ ದಿನ ಪೂರ್ತಿ ವಿಕಸಿಸಿದರೆ ಮತ್ತೆ ಕೆಲವು ಮೂರು ನಾಲ್ಕು ಅಥವಾ ಕೆಲವಾರು ದಿನಗಳನ್ನು ಬಯಸುತ್ತವೆ. ಆದರೆ ಮಾನವ ಜೀವಿಯಲ್ಲಿ ಸಾಯುವತನಕ ನಿರಂತರವಾಗಿ ವ್ಯಕ್ತಿತ್ವ ವಿಕಸಿಸುತ್ತನೇ ಇರುತ್ತದೆ. ವ್ಯಕ್ತಿತ್ವದ ವಿಕಸನ ನಿರಂತರ ಕಲಿಯುವ ಪ್ರಕ್ರೀಯೆ. ಹೂವಿನಂತೆ ಜೀವನವ ಪಾವನ ಮಾಡಿಕೊಳ್ಳುವುದು ಶ್ರೇಷ್ಠ ವ್ಯಕ್ತಿತ್ವದ ವಿಕಸನವಾಗುತ್ತದೆ! ಹೂವು ಅರಳಲು ಬೆಳಕು, ಶಾಖ, ಗಾಳಿ, ನೀರು, ಭೂಮಿ, ಪರಿಸರ ಪ್ರಭಾವ ಬೀರುವಂತೆ ವ್ಯಕ್ತಿತ್ವ ವಿಕಸಿಸಲು ಮನೆ, ಬಂಧು – ಬಾಂಧವರು, ಸ್ನೇಹಿತರು, ನೆರೆ – ಹೊರೆ, ಶಾಲೆ – ಶಿಕ್ಷಕರು, ಬಡತನ, ಸಿರಿತನ, ಅನಾರೋಗ್ಯ, ಕೆಲವು ಸಂದರ್ಭಗಳು, ಸನ್ನಿವೇಶಗಳು, ಆಗಾಗ ಜೀವನದಲ್ಲಿ ಘಟಿಸುವ ಘಟನೆಗಳು, ಸಮಾಜ ಪ್ರಭಾವಭೀರುತ್ತವೆ!

      ಮನೆಯೇ ಮೊದಲ ಪಾಠ ಶಾಲೆ, ತಾಯೆ ಮೊದಲ ಗುರು ಆಗಿದ್ದ ಕಾಲದಲ್ಲಿ ಆ ಮನೆಯೇ ವ್ಯಕ್ತಿತ್ವ ವಿಕಸನದ ಗರಡಿಮನೆಯಾಗಿತ್ತು. ಊರೇ ವ್ಯಕ್ತಿತ್ವ ವಿಕಸನದ ವ್ಯಾಯಾಮ ಶಾಲೆಯಾಗಿತ್ತು. ಇಂದೂ ಮನೆಯೇ ಮೊದಲ ಪಾಠಶಾಲೆ, ತಾಯೆ ಮೊದಲ ಗುರು ಆಗಿದ್ದರೂ ಹಿಂದಿನಂತೆ ವ್ಯಕ್ತಿತ್ವ ವಿಕಸನವಾಗುತ್ತಿಲ್ಲ. ಏಕೆಂದರೆ ಆ ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳು ಆಗಿರುವುದರಿಂದ ಅದು ಅಷ್ಟರಮಟ್ಟಿಗೆ ಸಾಧ್ಯವಾಗುತ್ತಿಲ್ಲ. ಹಿಂದೆನ ಅವಿಭಕ್ತ ಕುಟುಂಭಗಳಲ್ಲಿ. ಅಜ್ಜ, ಅಜ್ಜಿ, ತಂದೆ, ತಾಯಿ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಅತ್ತೆಯಂದಿರು, ದೊಡ್ಡಪ್ಪಂದಿರು, ದೊಡ್ಡಮ್ಮಂದಿರು ಇವರ ಮಕ್ಕಳು ಒಟ್ಟಾಗಿಯೇ ಬದುಕುತ್ತಿದ್ದರು. ಹೊಂದಾಣಿಕೆ, ತ್ಯಾಗ, ನಿಷ್ಕಲ್ಮಶ ಪ್ರೀತಿ, ಇತರರನ್ನು ಅರ್ಥಮಾಡಿಕೊಳ್ಳುವುದು, ಗುರು ಹಿರಿಯರಿಗೆ ಗೌರವ ಕೊಡುವುದು, ಪರಸ್ಪರರನ್ನು ನಿಸ್ವಾರ್ಥವಾಗಿ ಪ್ರೀತಿಸುವುದು, ಪರಸ್ಪರರು ತ್ಯಾಗ ಮಾಡುವುದನ್ನು, ಉತ್ತಮ ನಡೆ – ನುಡಿಯನ್ನು ಈ ಕುಟುಂಬ ನಿತ್ಯ ಬದುಕು ಮಾಡಿಕೊಂಡಿತ್ತು!  ಪುರುಷಾರ್ಥ ಸಾಧನೆ ಜೀವನದ ಉದ್ದೇಶವಾಗಿತ್ತು.

     ಹಿಂದೆ ರಾಮಾಯಣ, ಮಹಾಭಾರ, ಹರಿಕತೆ, ಶನಿಪುರಾಣ ಹರಿಶ್ಚಂದ್ರನ ಕತೆ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮುಂತಾದವುಗಳ ವಾಚನ ಗಮಕಿಗಳಿಂದ ಗ್ರಾಮದ ಮುಖ್ಯ ಸ್ಥಳಗಳಲ್ಲಿ ವರ್ಷದಲ್ಲಿ ಎರಡೋ ಮೂರೋ ಬಾರಿ ತಿಂಗಳುಗಟ್ಟಲೆ ನಡೆಯುತ್ತಿತ್ತು. ಕೆಲವರ ಮನೆಗಳಲ್ಲಿಯೂ ನಡೆಯುತಿತ್ತು! ಶ್ರಾವಣದಲ್ಲಿ ಧಾರ್ಮಿಕ ಪುರಾಣಗಳ ವಾಚನ ಹೆಚ್ಚಿರುತಿತ್ತು. ಇವೇ ಬಯಲಾಟ, ದೊಡ್ಡಾಟ, ಯಕ್ಷಗಾನ, ಓಲೆ ಬಸವ, ತೊಗಲ ಗೊಂಬೆಗಳಾಟಗಳಾಗಿ ಪ್ರದರ್ಶಿಸಲಿಪಡುತ್ತಿದ್ದವು. ಇವುಗಳನ್ನು ಊರಿನ ಜನರೆಲ್ಲಾ ನೋಡಲು ಹೋದರೆ ಕೆಲವರು ಪಾತ್ರಗಳಾಗಿ ಭಾಗಿಯಾಗಲು ಹೋಗುತ್ತಿದ್ದರು. ಅಂದು ಜನಪದ, ಹಾಡು, ನೃತ್ಯ, ಒಗಟು, ಗಾದೆ ಎಲ್ಲಾ ಆ ಪುರಾಣ ಪುಣ್ಯಕತೆಗಳೇ ಆಗಿದ್ದವು. ಪ್ರಯುಕ್ತ ಅಂದಿನ ಆ ಅವಿಭಕ್ತ ಕುಟುಂಭಗಳಲ್ಲಿ ಅಜ್ಜಂದಿರು ಭೀಷ್ಮ, ದ್ರೋಣ, ವಾಲ್ಮೀಕಿಯರಾಗಿ ತಂದೆ ಧರ್ಮರಾಯನಾಗಿ, ಚಿಕ್ಕಪ್ಪಂದಿರು ಅರ್ಜುನ ಭೀಮ, ಹನುಮಂತರಾಗಿ, ಸ್ನೇಹಿತರು ಕರ್ಣರಾಗಿ, ಮಕ್ಕಳು ಅಭಿಮನ್ಯು, ಘಟೋತ್ಗಜನಾಗಿ ಹೆಣ್ಣುಮಕ್ಕಳು ಗಾರ್ಗಿ, ಮೈತ್ರೇಯಿ, ಸೀತೆ, ಸಾವಿತ್ರಿ, ಅರುಂದತಿ, ಅನಸೂಯ, ರಾಧಾ ಆಗಿ, ಗ್ರಾಮದ ಮುಖಂಡರೂ ಹೀಗೇ ರಾಮ, ಲಕ್ಷ್ಮಣ, ಹನುಮಂತ, ಧರ್ಮರಾಯ, ಕೃಷ್ಣ, ವಾಲ್ಮೀಕಿ ಮುಂತಾದ ಆದರ್ಶ ಪಾತ್ರಗಳಾಗಿ ರೂಪುಗೊಂಡವರಾಗಿದ್ದರಿಂದ ಮಕ್ಕಳಿಗೆ ಅವರೇ ಮಾದರಿಯಾಗಿ ವ್ಯಕ್ತಿತ್ವ ವಿಕಸನವಾಗಲು ಕಾರಣವಾಗಿದ್ದರು. ಹೀಗೆ ಅಂದಿನ ನಿತ್ಯದ ಬದುಕೇ ವ್ಯಕ್ತಿತ್ವ ವಿಕಸನವಾಗುವಂತೆ ಇತ್ತು. ಪ್ರಯುಕ್ತ ವ್ಯಕ್ತಿತ್ವ ವಿಕಸನ ಮಾಡುವ ಔಪಚಾರಿಕ ವ್ಯವಸ್ಥೆ ಅವಶ್ಯಕತೆ ಇರಲಿಲ್ಲ. ಶಿವಾಜಿ, ಗಾಂಧೀಜಿಯವರ ವ್ಯಕ್ತಿತ್ವ ವಿಕಸಿಸಲು ಅವರ ತಾಯಂದಿರ ಪಾತ್ರ ಎಷ್ಟಿತ್ತು  ಎಂದು ಜಗತ್ತಿಗೇ ಗೊತ್ತು!

      ಹಳ್ಳಿಗಳಲ್ಲಿ ತಮ್ಮ ಸಂಬಂಧಿಕರಲ್ಲದ, ಜಾತಿಯವರೂ ಅಲ್ಲದ ನೆರೆ ಹೊರೆಯವರನ್ನು, ಗ್ರಾಮದವರನ್ನೂ ಅಣ್ಣ, ಅಕ್ಕ, ತಂಗಿ, ತಮ್ಮ, ಮಾವ, ನೆಂಟ, ಅಜ್ಜ ಎಂಬ ಸಂಭೋಧನೆಗಳು ವ್ಯಕ್ತಿತ್ವದ ವಿಕಾಸವನ್ನಲ್ಲದೆ ಮತ್ತೇನನ್ನು ಸೂಚಿಸುತ್ತವೆ.

      ಆದರೆ ಇಂದು ಅವಿಭಕ್ತ ಕುಟುಂಭಗಳೆಲ್ಲಾ ವಿಬಕ್ತ ಕುಟುಂಬಗಳಾಗಿರುವುದರಿಂದ, ಅವುಗಳಿಗೆ ವ್ಯಕ್ತಿತ್ವ ವಿಕಸನ ಮಾಡಲು ಸಮಯಾಭಾವ ಆಗಿರುವುದರಿಂದ,  ಎಷ್ಟೋ ಗಂಡ ಹೆಂಡತಿ ಮಧ್ಯೆ ಹೊಂದಾಣಿಕೆ ಕೊರತೆಯಿಂದ, ಮಾದರಿ ವ್ಯಕ್ತಿತ್ವಗಳು ಅಪರೂಪವಾಗಿರುವುದರಿಂದ, ಶಾಲೆಗಳಲ್ಲೂ ವ್ಯಕ್ತಿತ್ವ ವಿಕಸನಕ್ಕಿಂತ ಅಂಕಗಳಿಕೆಗೆ, ದುಡಿಮೆಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ, ಪ್ರಭಾವಿ ಮಾಧ್ಯಮಗಳು ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆ ಕೊಡದಿರುವುದರಿಂದ, ನಾಡಿನ ಅನೇಕ ಗಣ್ಯರು ಮಾದರಿ ವ್ಯಕ್ತಿತ್ವ ಹೊಂದಿರದಿರುವುದರಿಂದ ವ್ಯಕ್ತಿತ್ವ ಉತ್ತಮವಾಗಿ ವಿಕಸಿಸುತ್ತಿಲ್ಲ! ಆದ್ದರಿಂದ ಔಪಚಾರಿಕವಾಗಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದನ್ನು ಅನಿವಾರ್ಯವಾಗಿ ಕಲಿಸಬೇಕಿದೆ! ರಾಮಕೃಷ್ಣ ಮಿಷನ್, ರವಿಶಂಕರ್ ಗುರೂಜಿಯವರ ಆರ್ಟ್ ಅಫ್ ಲಿವಿಂಗ್, ಪತಂಜಲಿ ಸಂಸ್ಥೆಯ ಬಾಬಾ ರಾಮ್ ದೇವ್, ಈಶ್ವರೀ ವಿಶ್ವವಿದ್ಯಾಲಯ ಇನ್ನು ಮುಂತಾದ ಸಂಘ ಸಂಸ್ಥೆಗಳು, ಮಠ ಮಂದಿರಗಳು ಜನರ ವ್ಯಕ್ತಿತ್ವದ ವಿಕಸನದ ಕಾರ್ಯದಲ್ಲಿ ತಲ್ಲೀನವಾಗಿ ಶಾಂತಿ ಮತ್ತು ಆತ್ಮೋದ್ಧಾರದ ಹಸಿವನ್ನು ನೀಗಿಸುತ್ತಿವೆ. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಆರೋಗ್ಯ, ಮನೆ, ಪರಿಸರ, ನೆರೆ ಹೊರೆ, ಸ್ನೇಹಿತರು, ಶಾಲೆ, ಜೀವನದಲ್ಲಿ ಆಗಾಗ ನಡೆಯುವ ಘಟನೆಗಳು, ಅನುವಂಶೀಯತೆ, ಅವರ ಆರ್ಥಿಕ ಪರಿಸ್ಥಿತಿಗಳು ಪ್ರಭಾವಭೀರುತ್ತವೆ. 

      ಆರೋಗ್ಯವಂತ ದೃಢ ಕಾಯ : ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಆರೋಗ್ಯವಂತ ಸದೃಢ ವ್ಯಕ್ತಿಯಿಂದ ಸಾಧ್ಯ. ಪ್ರಯುಕ್ತ ಮೊದಲು ಆರೋಗ್ಯವಾಗಿರುವುದು ಹೇಗೆ ಎಂದು ಯೋಚಿಸಬೇಕಿದೆ. ಅದಕ್ಕಾಗಿ ತಿಲಕರು ಒಂದು ವರ್ಷ ದೈಹಿಕ ಸಧೃಢತೆಗೆ ಪ್ರಾಮುಖ್ಯತೆ ಕೊಟ್ಟು ಓದಿನಲ್ಲಿ ಹಿಂದುಳಿದರು. ದೈಹಿಕ ದೃಢತೆ ಸಾಧಿಸಿದಮೇಲೆ ಉತ್ತಮವಾದುದ ಸಾಧಿಸಿದರು. ಏನಾದರೂ ಪಡೆಯಲಿಕ್ಕೆ, ದುಷ್ಟರ ವಿರುದ್ದ ಹೋರಾಡಲಿಕ್ಕೆ, ಏನಾದರೂ ಸಾಧಿಸಲಿಕ್ಕೆ, ಸಾಮಾಜಿಕ ನ್ಯಾಯಕ್ಕೆ ಹೋರಾಡಲಿಕ್ಕೆ, ಸಮಾಜ ಸೇವೆ ಮಾಡಲಿಕ್ಕೆ, ಗುರಿ ಮುಟ್ಟುವುದಕ್ಕೆ, ದುಡಿಯುವುದಕ್ಕೆ, ಬದುಕುವುದಕ್ಕೆ, ದೈಹಿಕ ಆರೋಗ್ಯ, ದೇಹದಾರ್ಡ್ಯತೆ ಬಹು ಮುಖ್ಯ. ಲೌಕಿಕ ಮತ್ತು ಅಲೌಕಿಕ ಸಾಧನೆಗೆ ಆರೋಗ್ಯವಂತ ದೇಹ ಉತ್ತಮ ಸಾಧನ ಸಲಕರಣೆ. ಅದಕ್ಕೇ sound mind in a sound body ಎಂದು ಹೇಳಿರುವುದು. ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಉತ್ತಮ ಆರೋಗ್ಯ ಅಗತ್ಯ! " ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ " ಎನ್ನುತ್ತದೆ ಗಾದೆ. ಹಿತ್ ಬುಕ್ ಮಿತ್ ಬುಕ್ ಋತ್ ಬುಕ್ – ಆರೋಗ್ಯವಾಗಿರಲು ಹಿತವೆನಿಸುವ ಆಹಾರವ ಮಿತವಾಗಿ ಮತ್ತು ಋತಗಳಿಗನುಗುಣವಾಗಿ ಸೇವಿಸಬೇಕೆನ್ನುತ್ತದೆ ಮೇಲಿನ ಮಾತು. ಲಿಂಗ, ವಯೋಮಾನ ತಾವು ಮಾಡುವ ಕೆಲಸಗಳಿಗನುಗುಣವಾಗಿ ಆಹಾರ ಸೇವಿಸಬೇಕು.. ಯೋಗ, ವ್ಯಾಯಾಮ, ಶ್ರಮದ ಬದುಕು ಆರೋಗ್ಯಕ್ಕೆ ಪೂರಕ!

      ಧನಾತ್ಮಕ ಚಿಂತನೆಗಳು : ಧನಾತ್ಮಕ ಚಿಂತನೆಗಳು ವ್ಯಕ್ತಿಯ ವ್ಯಕ್ತಿತ್ವ ಧನಾತ್ಮಕವಾಗಿ ವಿಕಸಿಸಲು ಪೂರಕವಾಗುತ್ತವೆ.  ಧನಾತ್ಮಕ ಚಿಂತನಗಳು ಎಂದರೆ ಒಳ್ಳೆಯ ಚಿಂತನೆಗಳು. ಒಳ್ಳೆಯ ಚಿಂತನೆಗಳೆಂದರೆ ಇತರರಿಗೆ ಕೇಡು ಬಗೆಯದ ಹಿತವನ್ನೇ ಬಯಸುವ ಚಿಂತನೆಗಳು. ಒಳ್ಳೆಯ ಚಿಂತನೆಗಳು ಒಳಿತನ್ನೇ ಉಂಟುಮಾಡುತ್ತವೆ. ತನ್ನಂತೆ ಇತರರು, ಸರ್ವೇ ಜನೋ ಸುಖಿನೋಬವಂತು, ವಸುದೈವ ಕುಟುಂಬಕಂ ಎಂಬ ಭಾವನೆ ಉಂಟು ಮಾಡುತ್ತದೆ. ಪ್ರತಿಯೊಬ್ಬರಿಗೆ ಗೌರವ ಕೊಡುವಂತೆ ಮಾಡುತ್ತವೆ. ಧನಾತ್ಮಕ ಚಿಂತನೆಗಳಿಂದ ವ್ಯಕಿಯ ವ್ಯಕ್ತಿತ್ವ ವಿಕಸನವಾಗುತ್ತದೆ. ಏನನ್ನಾಗಲಿ ಸಾಧಿಸಬೇಕಾದರೆ ಅಡ್ಡ ಮಾರ್ಗಗಳ ಹುಡುಕದೆ ರಾಜ ಮಾರ್ಗಗಳ ಮೂಲಕ ಸಾಧಿಸಲು ಪ್ರಯತ್ನಿಸುವುದು. ಏನಾದರೂ ಸಾಧಿಸಬೇಕಾದಾಗ ನನ್ನಿಂದ ಸಾಧ್ಯ , ಸಾಧಕನಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಭಾವನೆಯಿಂದ ಮುನ್ನುಗ್ಗುವಂತೆ ಮಾಡುತ್ತವೆ!

       ಒಳ್ಳೆಯ ವ್ಯಕ್ತಿತ್ವ ಇರುವವರು ಸಾಧಿಸುವ ಸಾಮರ್ಥ್ಯ ಇರುವಾಗಲೇ ಸ್ಪಷ್ಟ ಗುರಿ ಹೊಂದಿರುತ್ತಾರೆ. ಸನ್ಮಾರ್ಗದಲ್ಲಿ ಸಾಧಿಸುತ್ತಾರೆ! ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾ ಬೆಳೆಯುತ್ತಾರೆ. ಸಮಾಜದ ಬಹುತೇಕ ಜನರೊಂದಿಗೆ ಹೊಂದಿಕೊಂಡು ಸದಾ ಸಮಾಜದ ಹಿತ ಬಯಸುತ್ತಾರೆ. ಪ್ರಗತಿಯೆಡೆಗೆ ಸಾಗುತ್ತಾರೆ. ಇತರರನ್ನೂ ಪ್ರಗತಿಯ ಕಡೆಗೆ ಕರೆದೊಯ್ಯುತ್ತಾರೆ.  ಧೈರ್ಯಂ ಸರ್ವರ್ಥ ಸಾಧನಂ ಅಂತ ಸಾಧಿಸಲು ಅವಶ್ಯಕವಾದ ದೈರ್ಯ, ಪೂರ್ವಗ್ರಹರಹಿತ ನೋಟ, ಅರ್ಥಪೂರ್ಣ ಮಾತು, ಸ್ನೇಹ, ಕ್ಷಮಾಗುಣ, ತಪ್ಪುಗಳ ತಿದ್ದಿಕೊಳ್ಳುವ ಭಾವ, ಪರಮ ಕರ್ತವ್ಯ ನಿಷ್ಟೆ, ಪ್ರಾಮಾಣಿಕತೆ,  ಅಂತರಂಗ ಬಹಿರಂಗದ ಶುದ್ಧಿ,  ಉತ್ತಮ ಶೀಲ, ಸಚ್ಚಾರಿತ್ರ್ಯ,  ಮಾನವೀಯತೆ, ಶಿಸ್ತು, ಸಂಯಮ, ತ್ಯಾಗ, ಪರೋಪಕಾರ, ತನ್ನಂತೆ ಇತರರೆಂಬ ಭಾವ, ಜ್ಞಾನ,  ಆತ್ಮೋದ್ಧಾರ ಇವುಗಳನ್ನು ಪ್ರತಿಯೊಬ್ಬರೂ ಕಲಿತು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಅವುಗಳ ವಿಕಸನವನ್ನೂ ಮಾಡಿಕೊಳ್ಳಬೇಕಿದೆ! ಅಂದರೆ ಅವು ಪ್ರಜ್ವಲಿಸುವಂತೆ ಮಾಡಬೇಕು. ವ್ಯಕ್ತಿತ್ವ ವಿಕಸನದಿಂದ ಆತ್ಮೋದ್ಧಾರದ ಜತೆಗೆ ದೇಶೋದ್ಧಾರವೂ ಆಗುತ್ತದೆ! 

   * ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x