ವ್ಯಕ್ತಿತ್ವಗಳ ಸಂಘರ್ಷದ “ಕ್ರಿಮ್ಸನ್ ಟೈಡ್”:ವಾಸುಕಿ ರಾಘವನ್ ಅಂಕಣ


ಆಕ್ಷನ್ ಚಿತ್ರ ಅಂದ ಮಾತ್ರಕ್ಕೆ ‘ಪಾತ್ರ’ಗಳ ಕಡೆ ನಿರ್ಲಕ್ಷ್ಯ ಹರಿಸುವಂತಿಲ್ಲ. ಹೊಡೆದಾಟದ ಥ್ರಿಲ್ ಕೊಡುತ್ತಲೇ ಕಥೆಯಲ್ಲಿನ ಹಲವು ಪದರಗಳನ್ನು ತೋರಿಸುತ್ತಾ, ಪಾತ್ರಗಳಿಗೆ ತಮ್ಮದೇ ಆದ ಮೆರಗುಗಳನ್ನು ಕೊಡುತ್ತಾ ಹೋದರೆ ಚಿತ್ರಕ್ಕೆ ಹಲವು ಆಯಾಮಗಳು ಸಿಗುತ್ತವೆ. ಆಗ ಮಾತ್ರ ಒಂದು ಆಕ್ಷನ್ ಚಿತ್ರ ‘ಡಿಶೂಂ ಡಿಶೂಂ’ ಚಿತ್ರವನ್ನು ಮೀರಿ ಬೆಳೆಯುತ್ತದೆ.

1995ರ ಟೋನಿ ಸ್ಕಾಟ್ ನಿರ್ದೇಶನದ “ಕ್ರಿಮ್ಸನ್ ಟೈಡ್” ನಮ್ಮನ್ನು ಚಿಂತನೆಗೆ ಹಚ್ಚುವ ಅಂತಹ ಒಂದು ಆಕ್ಷನ್ ಚಿತ್ರ. ಇಡೀ ಚಿತ್ರ ನಡೆಯುವುದು ಒಂದು ಸಬ್ ಮರೀನ್ ಒಳಗೆ. ಫ್ರಾಂಕ್ ರಾಮ್ಸೆ ಸಬ್ ಮರೀನಿನ ಕಮಾಂಡಿಂಗ್ ಆಫೀಸರ್, ಹಲವಾರು ಯುದ್ಧಗಳಲ್ಲಿ ಹೋರಾಡಿದ ಅನುಭವಿ. ರಾನ್ ಹಂಟರ್ ಹೊಸದಾಗಿ ಬಂದಿರೋ ಎಕ್ಸಿಕ್ಯುಟಿವ್ ಆಫೀಸರ್, ಯುದ್ಧತಂತ್ರದಲ್ಲಿ ಪರಿಣತಿಯನ್ನು ಪಡೆದಿದ್ದಾನೆ ಆದರೆ ಯುದ್ಧ ಮಾಡಿ ತಿಳಿಯದು. ಇಬ್ಬರದ್ದೂ ತದ್ವಿರುದ್ಧ ವ್ಯಕ್ತಿತ್ವ.

ಹೀಗೆ ಸಬ್ ಮರೀನ್ ಅಲ್ಲಿ ಪಯಣಿಸುತ್ತಿರಬೇಕಾದರೆ ಅವರಿಗೆ ಒಂದು ತುರ್ತು ಸಂದೇಶ ಬರುತ್ತದೆ – “ರಶಿಯಾದ ಸೈನ್ಯದವರು ಮಿಸೈಲ್ ಗಳನ್ನು ಅಮೇರಿಕಾ ಕಡೆಗೆ ಬಿಡಲು ತಯಾರಿ ನಡೆಸುತ್ತಿದ್ದಾರೆ, ಹಾಗಾಗಿ ನೀವು ರಶಿಯಾದ ಅಣುಶಕ್ತಿ ಕೇಂದ್ರಗಳ ಮೇಲೆ ಮಿಸೈಲ್ ಗಳನ್ನ ಉಡಾಯಿಸಬೇಕು” ಅಂತ. ಸಬ್ ಮರೀನ್ ಪ್ರೋಟೋಕಾಲ್ ಪ್ರಕಾರ ಮಿಸೈಲ್ ಉಡಾಯಿಸಲು ಕಮಾಂಡಿಂಗ್ ಆಫೀಸರ್ ಆದೇಶ ಕೊಡಬೇಕು. ಎಕ್ಸೆಕ್ಯುಟಿವ್ ಆಫೀಸರ್ ಅದಕ್ಕೆ ಅಂಗೀಕಾರ ಕೊಡಬೇಕು. ಆಮೇಲೆ ಅಲ್ಲಿನ ಸಿಬ್ಬಂದಿ ತಮ್ಮ ತಮ್ಮ ಕಾರ್ಯಗಳನ್ನು ಚಾಚೂತಪ್ಪದೆ ನಡೆಸಬೇಕು. ಆಕ್ರಮಣದ ಸಿದ್ಧತೆ ನಡೆಸುತ್ತಿರುವಾಗ ಅವರಿಗೆ ಇನ್ನೊಂದು ತುರ್ತು ಸಂದೇಶ ಬರುತ್ತದೆ. ಆ ಸಂದೇಶ ಪೂರ್ತ ರವಾನೆ ಆಗೋದರ ಒಳಗೆ ರೇಡಿಯೋ ಕೆಟ್ಟುಹೋಗುತ್ತದೆ. ತಮ್ಮ ಹತ್ತಿರ ಇರುವ ಸಂಪೂರ್ಣ ಸಂದೇಶದ ಮೇರೆಗೆ ಧಾಳಿ ನಡೆಸಬೇಕು ಅಂತ ಫ್ರಾಂಕ್ ನಿರ್ಧರಿಸುತ್ತಾನೆ. ಆದರೆ ಇನ್ನೊಂದು ಸಂದೇಶ (ಅರ್ಧದ್ದಾದರೂ ಕೂಡ!) ಏನು ಅಂತ ತಿಳಿದುಕೊಳ್ಳೋವರೆಗೂ ತಾನು ಧಾಳಿಗೆ ಸಮ್ಮತಿಸುವುದಿಲ್ಲ ಅಂತ ರಾನ್ ಹೇಳಿಬಿಡುತ್ತಾನೆ. ರೇಡಿಯೋ ಸರಿಪಡಿಸಲು ರಾನ್ ತನ್ನ ಸಿಬ್ಬಂದಿಗೆ ಹೇಳಿ ಫ್ರಾಂಕ್ ಅನ್ನು ಬಂಧನದಲ್ಲಿ ಇರಿಸುತ್ತಾನೆ. ಫ್ರಾಂಕ್ ತನ್ನ ನಿಷ್ಟಾವಂತ ಅನುಯಾಯಿಗಳ ಸಹಾಯದಿಂದ ತಪ್ಪಿಸಿಕೊಂಡು ಸಬ್ ಮರೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಾನೆ. ಧಾಳಿ ಮಾಡಲು ಮಿಸೈಲ್ ಸಿದ್ಧವಾಗುತ್ತಿದೆ, ರೇಡಿಯೋ ಸರಿಪಡಿಸಲು ಸಿಬ್ಬಂದಿ ಹೆಣಗಾಡುತ್ತಿದೆ, ಸಬ್ ಮರೀನಿನಲ್ಲಿ ನಡೆಯುವ ದಂಗೆಯ ಕಥೆ ಕುತೂಹಲಕಾರಿ ಅಂತ್ಯದ ಕಡೆಗೆ ಹೊರಳುತ್ತದೆ.

ಚಿತ್ರಕಥೆಯ ಪಂಡಿತರ ಪ್ರಕಾರ, ಒಂದು ಚಿತ್ರ ನೋಡುಗನ ಆಸಕ್ತಿ ಉಳಿಸಿಕೊಳ್ಳಬೇಕಾದರೆ, ದೃಶ್ಯಗಳು ನಡೆಯುವ ಜಾಗಗಳು ಬದಲಾಗುತ್ತಿರಬೇಕು. ಒಳಾಂಗಣದಿಂದ ಹೊರಾಂಗಣ, ಹೊರಾಂಗಣದಿಂದ ಒಳಾಂಗಣ. ಆದಷ್ಟೂ ಅದೇ ಜಾಗಗಳಲ್ಲಿ ಬರುವ ದೃಶ್ಯಗಳನ್ನು ತಪ್ಪಿಸಬೇಕು. ಆ ವಿಚಾರದಲ್ಲಿ ಈ ಚಿತ್ರ ಒಂದು ಅಪವಾದ. ಇಡೀ ಚಿತ್ರ ಒಂದು ಸಬ್ ಮರೀನ್ ಒಳಗೆ ನಡೆಯುತ್ತಿದ್ದರೂ, ಮುಖ್ಯವಾಗಿ ಎರಡೇ ಪಾತ್ರಗಳ ಮೇಲೆ ಕೇಂದ್ರಿತವಾಗಿದ್ದರೂ, ಚಿತ್ರ ಸ್ವಲ್ಪ ಕೂಡ ಏಕತಾನತೆಯಿಂದ ನರಳುವುದಿಲ್ಲ. ಬದಲಿಗೆ ಆ ಕಥೆಯ ಪ್ರಪಂಚದಲ್ಲಿ ನಾವು ಕಳೆದುಹೋಗುವಷ್ಟು ಬಿಗಿಯಾದ ಚಿತ್ರಕಥೆ ಹೊಂದಿದೆ.

ಅಮೇರಿಕಾ-ರಶಿಯಾ ರಾಜಕೀಯದ ಅಥವಾ ಯುದ್ಧದ ಕಥೆಗಿಂತ ಹೆಚ್ಚಾಗಿ ಇದು ಎರಡು ವ್ಯಕ್ತಿತ್ವಗಳ ಸಂಘರ್ಷದ ಕಥೆ! ಇಡೀ ಕಥೆ ನಿಂತಿರೋದು ಈ ಇಬ್ಬರು ವ್ಯಕ್ತಿಗಳ ಮೇಲೆ. ಫ್ರಾಂಕ್ ಕಾಳಗಗಳಲ್ಲಿ ಪಳಗಿರುವ ಹಳೆಹುಲಿ, ಸೈನ್ಯಕ್ಕೇ ತನ್ನ ಬದುಕನ್ನು ಮುಡಿಪಿಟ್ಟಿರುವ ಇವನು ಎಂತಹ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಕೆಚ್ಚೆದೆಯವನು. ಸಮಕಾಲೀನ ವಿಷಯಗಳ ಬಗ್ಗೆ ಉನ್ನತ ವ್ಯಾಸಂಗ ಮಾಡಿರುವ ರಾನ್, ಯುದ್ಧದಿಂದ ಕೇವಲ ನಷ್ಟ ಉಂಟಾಗುತ್ತದೆ, ರಾಜತಂತ್ರದಿಂದ ಸಮಸ್ಯೆಗಳ ಪರಿಹಾರ ಸುಲಭ ಅನ್ನುವ ನಿಲುವು ಹೊಂದಿದ್ದಾನೆ. ಫ್ರಾಂಕ್ ನೇರ ಹೃದಯದಿಂದ ಯೋಚಿಸುವ ಭಾವುಕನಾದರೆ, ರಾನ್ ಮಿದುಳನ್ನು ಹೆಚ್ಚು ಅವಲಂಬಿಸಿರುವ ಸಮಚಿತ್ತವುಳ್ಳ ವ್ಯಕ್ತಿ. ಫ್ರಾಂಕ್ ಪಾತ್ರದಲ್ಲಿ ಜೀನ್ ಹ್ಯಾಕ್ ಮನ್, ರಾನ್ ಪಾತ್ರದಲ್ಲಿ ಡೆಂಜೆಲ್ ವಾಷಿಂಗ್ಟನ್ ಒಬ್ಬರನ್ನೊಬ್ಬರು ಮೀರಿಸುವಂತಹ ಅಭಿನಯ ನೀಡಿದ್ದಾರೆ. ಅವರ ವಾಗ್ವಾದಗಳು, ಆ ಮಾತಿನ ಚಕಮಕಿ ಬಹಳ ರಂಜನೀಯವಾಗಿದೆ. ಹಾನ್ಸ್ ಜಿಮ್ಮರ್ ಹಿನ್ನೆಲೆ ಸಂಗೀತ ಚಿತ್ರದ ಕೌತುಕತೆಗೆ ಬಹಳ ಪೂರಕವಾಗಿದೆ.

ವ್ಯಕ್ತಿತ್ವಗಳ ಸಂಘರ್ಷ ಎಲ್ಲಾ ಚಿತ್ರಗಳಲ್ಲೂ ಬರುವ ವಿಷಯ. ಆದರೆ ಸುಮಾರು ಚಿತ್ರಗಳಲ್ಲಿ, ಅದರಲ್ಲೂ ಬಹುತೇಕ ಭಾರತದ ಚಿತ್ರಗಳಲ್ಲಿ, ಸಂಘರ್ಷ ನಡೆಯುವುದು ಒಬ್ಬ “ಒಳ್ಳೆಯ” ಮತ್ತು ಒಬ್ಬ “ಕೆಟ್ಟ” ವ್ಯಕ್ತಿಯ ನಡುವೆ. ಈ ತರಹದ “ಸ್ಪೂನ್ ಫೀಡಿಂಗ್” ಸನ್ನಿವೇಶದಲ್ಲಿ ನೋಡುಗ ಸುಲಭವಾಗಿ ಒಂದು ಪಾತ್ರದ ಪರವಾಗಿ ನಿಲ್ಲುತ್ತಾನೆ. ಆದರೆ ನೋಡುಗನಲ್ಲಿ ನಿಜವಾದ ದ್ವಂದ್ವ ಹುಟ್ಟುಹಾಕುವುದು ಇಬ್ಬರು “ಒಳ್ಳೆಯ” ವ್ಯಕ್ತಿಗಳ ಮಧ್ಯೆ ಬರುವ ಭಿನ್ನಾಭಿಪ್ರಾಯದಿಂದ. ಇಲ್ಲಿ ಫ್ರಾಂಕ್ ಮತ್ತು ರಾನ್ ಇಬ್ಬರೂ ದೇಶಪ್ರೇಮಿಗಳೇ, ಅವರ ಉದ್ದೇಶದಲ್ಲಿ ಯಾವುದೇ ದುರುದ್ದೇಶ ಇಲ್ಲ. ಎರಡನೇ ಸಂದೇಶ ಅಪೂರ್ಣವಾಗಿರೋದರಿಂದ ತಾವು ಹಳೆಯ ಸಂದೇಶಕ್ಕೆ ಮಾನ್ಯತೆ ಕೊಡಬೇಕು ಅನ್ನೋದು ಫ್ರಾಂಕ್ ವಾದ. ಎರಡನೇ ಸಂದೇಶ ಮೊದಲನೆಯದಕ್ಕೆ ವಿರುದ್ಧವಾಗಿದ್ದರೆ ಅನ್ಯಾಯವಾಗಿ ಪ್ರಾಣಹಾನಿ ಆಗುತ್ತದೆ; ನಿಜಕ್ಕೂ ಆಕ್ರಮಣ ಮಾಡಿ ಅನ್ನೋದೇ ಎರಡನೇ ಸಂದೇಶದ ಸಾರ ಆಗಿದ್ದರೆ, ಬೇರೆ ಸಬ್ ಮರೀನ್ ಗಳಿಗೂ ಆ ಸಂದೇಶ ಹೋಗಿರುತ್ತೆ, ಆದ್ದರಿಂದ ನಾವು ಕಾದು ನೋಡೋಣ ಅನ್ನುವುದು ರಾನ್ ವಾದ. ಅಕಸ್ಮಾತ್ ಬೇರೆ ಸಬ್ ಮರೀನ್ ಗಳು ನಾಶವಾಗಿದ್ದರೆ, ತಮ್ಮಿಂದ ಕರ್ತವ್ಯಲೋಪ ಆಗುತ್ತದೆ, ಈ ಕಾಯುವಿಕೆಯಿಂದ ತಮ್ಮ ದೇಶಕ್ಕೆ ಆಪತ್ತು ಉಂಟಾಗುತ್ತದೆ ಅನ್ನುವುದು ಫ್ರಾಂಕ್ ನಿಲುವು. ಇಬ್ಬರು ಹೇಳೋದರಲ್ಲೂ ತಪ್ಪಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ನಿಲುವೇ ಸರಿ ಅಂತ ಯಾರೂ ಖಚಿತವಾಗಿ ಹೇಳಲಾಗಲ್ಲ. ಕೊನೆಯಲ್ಲಿ ನೋಡುಗರಾದ ನೀವು ಯಾವ ಪಾತ್ರದ ಪರ ತೆಗೆದುಕೊಂಡಿದ್ದೀರ (ಅಥವಾ ಇಬ್ಬರೂ ಸರಿ ಅನಿಸಿದ್ದರೂ) ಅನ್ನುವುದು ನಿಮ್ಮ ವ್ಯಕ್ತಿತ್ವದ ಮೇಲೆ ಅವಲಂಬಿಸಿರುತ್ತೆ ಅಷ್ಟೇ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Venkatesh
Venkatesh
10 years ago

Wonderful observation n nicely reviewed 

Venkatesh
Venkatesh
10 years ago

Yesterday it was the first death anniversery of Tony scott !

Vasuki
10 years ago
Reply to  Venkatesh

Oh, I did not know it…what a coincidence!

Utham Danihalli
10 years ago

Estavaythu nimma vimarshe

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
10 years ago

 
"ಕೊನೆಯಲ್ಲಿ ನೋಡುಗರಾದ ನೀವು ಯಾವ ಪಾತ್ರದ ಪರ ತೆಗೆದುಕೊಂಡಿದ್ದೀರ (ಅಥವಾ ಇಬ್ಬರೂ ಸರಿ ಅನಿಸಿದ್ದರೂ) ಅನ್ನುವುದು ನಿಮ್ಮ ವ್ಯಕ್ತಿತ್ವದ ಮೇಲೆ ಅವಲಂಬಿಸಿರುತ್ತೆ ಅಷ್ಟೇ!"
 
>>>ನಾನು ನಿಜವಾಗಿಯೂ  ವಾಶಿಂಗ್ಟನ್  ಪರ ಇದ್ದೆ – ಕೊನೆಯವರೆಗೆ , ಆಮೇಲೆ ೨ ಪಾತ್ರ  ಅವಲೋಕಿಸಿದಾಗ  ಪಾತ್ರಗಳ ಆಳ ಅರಿವು ಆಯಿತು .. 
ರಾಘವ ಅವರೇ – ಟೋನಿ ಸ್ಕಾಟ್ ಮತ್ತು ಡೇನ್ಜಿಲ್  ವಾಶಿಂಗ್ಟನ್  ಹಾಗೂ ಜಾಕ್ಮನ್ ನನ್ನ ಮೆಚ್ಚಿನ ನಟ ನಿರ್ದೇಶಕರು.. ಈ ಚಿತ್ರ ಕೆಲವು ಸಾರಿ ಟೀವಿಯಲ್ಲಿ ಬಂದಿದ್ದಾಗ ಅದನ್ನು ಸರ್ಯಾಗಿ ನೋಡದೆ ಇದ್ದೆ.. ಆದರೆ  ಕೊನೆಗೂ ಮನಸು ಮಾಡಿ ಅದನ್ನು ಡೌನ್ಲೋಡ್ ಮಾಡಿದೆ ಕೆಲ ವಾರಗಳ ಹಿಂದೆ ನೋಡಿದೆ  . ಆಗಲೇ ಗೊತ್ತಾಗಿದ್ದು  ಆ ಚಿತ್ರದ ಮಹತ್ವ .. ನಿಜಕ್ಕೂ ಕುತೂಹಲಕಾರಿ ಮತ್ತು  ಉಸಿರು ಬಿಗಿ ಹಿಡಿದು ನೋಡುವ ಹಾಗಿರುವ ಚಿತ್ರ … 
ಕ್ಲೈಮಾಕ್ಸ್ನಲ್ಲಿ  ಇಬ್ಬರ ಮುಖಾಮುಖಿ – ಇಲಾಖ ವಿಚಾರಣೆ – ಬಡ್ತಿ -ಸನ್ನಿವೇಶ ಸೂಪರ್ .. ಕೊನೆಯಲ್ಲಿ ಜಾಕ್ಮಾನ್ , ಡೇನ್ಜಿಲ್  ವಾಶಿಂಗ್ಟನ್ ಗೆ ಹೇಳುವ ಮಾತುಗಳು  ಆ ವಿದಾಯ  ಸೂಪರ್.. 
 
ಇಬ್ಬರ ವ್ಯಕ್ತಿತ್ವ -ಕಾರ್ಯ ಶೈಲಿ ಅವರವರ ರೀತಿಯಲ್ಲಿ ಸರಿ ಆದರೆ ಒಂದು ತಪ್ಪು  ಹಲವು ಸಾವು ನೋವುಗಳಿಗೆ ಮತ್ತು ಮಹಾ ಯುದ್ಧಕ್ಕೆ ನಾಂದಿ ಆಗೋದು ಸಹ ನಿಜ -ಇಬ್ಬರೂ ಒಮ್ಮೊಮ್ಮೆ  ಆ ಸಬ  ಮರೀನ್ ತಮ್ ಕೈವಶ ಮಾಡಿಕೊಳ್ಳುವ ಆ ಸನ್ನಿವೇಶಗಳು ಸೂಪರ್ .. 
 
ನಿಮ್ಮ  ವಿಮರ್ಶೆ ಸೂಪರ್ . 
 
ಮತ್ತೊಮ್ಮೆ ಚಿತ್ರವನ್ನು ನಮಮ್ದೆ ಭಾಷೆಯಲಿ ನೋಡಿದ ಹಾಗಾಯ್ತು … 
 
ಟೋನಿ ಸ್ಕಾಟ್ ಸಖತ್ ನಿರ್ದೇಶಕ ಅವರ ಎಲ್ಲ ಚಿತ್ರಗಳೂ ಡಿಫರೆಂಟು( The Hunger (1983), Top Gun (1986), Beverly Hills Cop II (1987), Days of Thunder (1990), The Last Boy Scout (1991), True Romance (1993), Crimson Tide (1995), Enemy of the State (1998), Spy Game (2001), Man on Fire (2004), Déjà Vu (2006), The Taking of Pelham 123 (2009), and Unstoppable (2010) ಎಲ್ಲವೂ ಸೂಪರ್ ಡ್ಯೂಪರ್ -ಎಲ್ಲವನ್ನೂ ನೋಡಿರುವೆ )   ಮತ್ತು ಮತ್ತೆ ಮತ್ತೆ ನೋಡೋ ಹಾಗೆ ಇರೋ ಚಿತ್ರಗಳು .. 
ದುರ್ದೈವಶಾತ್  ಹಿಂದಿನ ವರ್ಷ  ಆತ್ಮಹತ್ಯೆ ಮಾಡಿಕೊಂಡರು .. ಒಬ್ಬ ಅತ್ಯುತ್ತಮ ನಿರ್ದೇಶಕನ ಸಿನೆಮ ಶೈಲಿ  ಬದುಕಿನ ಅಂತ್ಯ ಆಯ್ತು … 
 
ನಾ ನೋಡಿದ ಆದರೆ ಅರ್ಧ ಮರದ ಅರ್ಥ ಆಗಿದ್ದ ಚಿತ್ರಗಳ ಕಥೆ ಸಾರಾಂಶ -ನಿಮ್ಮ   ಕೆಲ ಸಿನೆಮಾಗಳ ವಿಮರ್ಶೆಯಿಂದ ಅರ್ಥ ಆಗಿದೆ .. 
 
ನಿಮ್ಮಿಂದ ಈ ವಿಮರ್ಶಾ ಸರಣಿ ತಪ್ಪದೇ  ಬರಲಿ.. 
ಶುಭವಾಗಲಿ 
 
\।/

5
0
Would love your thoughts, please comment.x
()
x