ಪ್ರಶಸ್ತಿ ಅಂಕಣ

ವೋಲ್ವೋ: ಪ್ರಶಸ್ತಿ

ವೋಲ್ವೋದ ಜಂಟಿ ಸೀಟಲ್ಲಿ ಒಂಟಿಯಾಗಿ ಕೂತು ಮಳೆಯಿಲ್ಲದ ಬೇಸಿಗೆಯ ತಂಪಾದ ಹವೆಯ ಸವಿ ಅನುಭವಿಸುತ್ತಾ ಹೆಚ್ಚು ಹೊತ್ತೇನಾಗಿರಲಿಲ್ಲ. ಪಕ್ಕದಲ್ಲೊಬ್ಳು ಮುಸುಕಿಣಿ ಅವತರಿಸಿದಳು. ವೈತರಿಣಿ, ಮಂಜೂಷಾ ಕಿಣಿ ಅನ್ನೋ ತರ ಇದ್ಯಾವ ಹುಡುಗಿ ಹೆಸ್ರಪ್ಪಾ ಅಂದ್ಕೊಂಡ್ರಾ ? ಅದು ಹೆಸರಲ್ಲ, ಮುಸುಕು ! ಈ ಮೊದ್ಲು ಹೇಳಿದ ಹೆಸ್ರು ಯಾರು ಅಂದ್ರಾ ? ಅದ್ರ ವಿಚಾರಕ್ಕೆ ಇನ್ನೊಮ್ಮೆ ಬರೋಣ. ಮುಸುಕುಧಾರಿಣಿ ಮುಸುಕು ತೆಗೆಯೋ ತನಕ ಅವಳನ್ನೇ ದುರುಗುಟ್ಟಿ ನೋಡೋದು ಸಜ್ಜನಿಕೆ ಅಲ್ಲವಂತ ಪಕ್ಕದಲ್ಲಿ ಏನೂ ಕಾಣದಿದ್ರೂ ಕಿಟಕಿಯ ಹೊರಗೆ ಕಣ್ಣಾಯಿಸಿದೆ. ಅಪ್ಪಿ ತಪ್ಪಿ, ಆಚೆ ರಸ್ತೆಯಲ್ಲೇನಾದ್ರೂ ಅದ್ಭುತ ಜರುಗಿತೇನೋ ಅಂತ! ಬಸ್ಸವ ಹತ್ತದ ಜನರ ಎದುರುನೋಡುತ್ತಾ , ಹತ್ತಿದವರೆಲ್ಲಾ ಈಗಾಗ್ಲೇ ಪಾಸ್ ತಗೊಂಡಿರೋ ಬದ್ಲು ನನ್ನತ್ರ ಆದ್ರೂ ಟಿಕೆಟ್ ತಗೊಳ್ಳಬಾರದಿತ್ತೇ ಅನ್ನೋ ತರದಲ್ಲಿ ಒಮ್ಮೆ ನಿರಾಶೆಯ ನೋಟ ಬೀರಿ,ಇನ್ನೆಷ್ಟು ಕಾಯೋದು ಅನ್ನೋ ಬೇಸರದಲ್ಲಿ ರೈಟ್ ರೈಟ್ ಅಂದ. ಹೊರಟ ಬಸ್ಸ ತಂಗಾಳಿಯ ಸವಿಯಲ್ಲಿ ಪಕ್ಕದಲ್ಲಿ ಕೂತವಳ ಬಗ್ಗೆ ಬೇಡವೆಂದ್ರೂ ಮನದ ಆಲೋಚನೆ. ಹಿಂದಿನ ಸಲ ವೋಲ್ವೋ ಪಯಣಗಳಲ್ಲೆಲ್ಲಾ ಫಾರಿನ್ನಿನ ಅಪರಾವತಾರಂದಂತಿರೋ , ಜೊತೆಗೊಂದು ದಂಡು ಕಟ್ಟಿಕೊಂಡಂತಿದ್ದ ಹುಡುಗಿಯರನ್ನೋ , ಒಂಟಿ ಸೀಟೇ ಬೇಕೆಂದು ಹುಡುಗರಿರಲಿ, ಅಂಕಲ್ಲುಗಳ ಪಕ್ಕದಲ್ಲೂ ಕೂರಲು ಹಿಂದೆ ಮುಂದೆ ನೋಡುತ್ತಿದ್ದ ಚೂಡಿಧಾರಿಣಿಗಳ ನೋಡಿದ್ದ ನನಗೆ ಪಕ್ಕದಲ್ಲೊಬ್ಬಳು ಮುಸುಕಿಣಿಯೊಬ್ಬಳು ಬಂದು ಕೂತರೆ ಏನಾಗಬೇಡ. ನೋಡೋಕೆ ಸಖತ್ತಾದವನ ಪಕ್ಕ ಬಂದು ಕೂತ್ರೆ , ಪರ್ವಾಗಿಲ್ಲ ಗುರೂ ಅನ್ನಬಹುದಿತ್ತೇನೋ. ಆದ್ರೆ ಹರಿಯದ ಗಡ್ಡದ, ಕಪ್ಪು ಜೀನ್ಸಿಗೆ ಕೆಂಪು ಪಟ್ಟೆ ಪಟ್ಟೆ ಟೀಶರ್ಟಿದ್ದವನ ಬಳಿ ಯಾರೋ ಬಂದು ಕೂತರೆ. ಏನಾಗತ್ತೆ ? ಏನೂ ಆಗಲ್ಲ. ಆದ್ರೆ ಕೂತವಳ ಕಿವಿಯಲ್ಲೊಂದು ಇಯರ್ಫೋನಿಲ್ಲ, ಕೈಯಲ್ಲೊಂದು ಪುಸ್ತಕವಿಲ್ಲ. ಹಂಗಾದ್ರೆ ಇವಳು ಖಂಡಿತಾ ಬೆಂಗಳೂರಿಣಿಯಲ್ಲವೆಂಬೋ ಸಂಶಯ ಸುಳಿಯುವಷ್ಟರಲ್ಲಿ ಮುಂದಿನ ಸ್ಟಾಪ್ ಬಂತು.

ಹಿಂದಿನ ಸ್ಟಾಪಿನಲ್ಲಿ ಅವಳು ಮೆಜೆಸ್ಟಿಕ್ಕೆಂದಿದ್ದು ನೆನಪಾಗಿ , ನನ್ನ ಗಮ್ಯವೂ ಅದೇ ಆಗಿದ್ದರ ಅರಿವಾಗುವಷ್ಟರಲ್ಲಿ ಅವಳ ಮುಸುಕು ಸರಿದಿತ್ತು.  ಫಾರಿನ್ನರಲ್ಲ. ಭಾರತದವಳೇ. ಯಾರೋ ಆಗೋ ಬದ್ಲು ನಮ್ಮ ಕಾಲೇಜಿನವಳೋ, ಆಫೀಸಿನವಳೋ ಆಗಿದ್ರೆ ಒಂದಿಷ್ಟು ಮಾತಾಡ್ತಾ ಆದ್ರೂ ಹೋಗ್ಬೋದಿತ್ತಾ, ಈ ಹಾಳು ಟ್ರಾಫಿಕ್ಕಿನಲ್ಲಿ ಅನಿಸ್ತು.ಮಾತಾಡಿಸಬಹುದಿತ್ತು. ಆದ್ರೆ ಏನಂತ ? ಪರಿಚಯವಿಲ್ಲದ ಹುಡುಗಿಗೆ ಮೆಜೆಸ್ಟಿಕ್ ನೆಕ್ಟ್ ಸ್ಟಾಪಾ ಅಂತ ಕೇಳೋದು ತೀರಾ ಸಿಲ್ಲಿ ಅಲ್ವಾ ಅಂತ ಅನಿಸೋದ್ರೊಳಗೆ ಅವಳ ಇಯರ್ ಫೋನ್ ಹೊರಗೆ ಬಂದು ಮೊಬೈಲಿಗೆ ಕನೆಕ್ಟಾಗಿತ್ತು. ೫.೫ ಇಂಚಿನ ಮುಂದೆ  ನಾಲ್ಕಿಂಚಿನ ಮೊಬೈಲ್ ಹೊರಗೆ ತೆಗೆಯೋದು ಅವಮಾನವಲ್ವಾ ಅಂತ ಅನಿಸಿದ್ರೂ ಅದ್ನೂ ತೆಗೆಯದೇ ಇದ್ರೆ ಅವಮಾನದ ಪ್ರಶ್ನೆಯೆನಿಸಿ ಅದ್ನ ಹೊರತೆಗೆದೆ. ಫ್ರೆಡರಿಕ್ನ "ಡೇ ಆಫ್ ಜಾಕಲ್" ನಲ್ಲಿ ಅಧ್ಯಕ್ಷನ ಕೊಲೆಯ ಪ್ಲಾನ್ ಫ್ಲಾಪ್ ಆದ ನಂತರ ಸೀಕ್ರೆಟ್ ಸರ್ವೀಸ್ ನವ್ರು ಮತ್ತೆ ಮಾಡೋ ಪ್ರಯತ್ನಗಳ ಸರಣಿಯ ಕುತೂಹಲಕಾರಿ ಪುಟಗಳು ತೆರೆದುಕೊಳ್ಳತೊಡಗಿದ್ವು. ಜೊತೆಗಿದ್ದೋರು ವಿಪರೀತ ಮಾತಾಡ್ತಿದ್ರೆ ಒಂಥರಾ ಕಿರಿಕಿರಿ, ಏನೂ ಮಾತಾಡದೇ ಇದ್ರೂ ಒಂತರಾ ಕಿರಿಕಿರಿ,ಅದೂ ಒಂದೇ ಜಾಗಕ್ಕೆ ಘಂಟೆಗಟ್ಲೆ(ಬೆಂಗಳೂರ ಟ್ರಾಫಿಕ್ಕಿನ ಕಾರಣದಿಂದ) ಪ್ರಯಾಣ ಮಾಡ್ಬೇಕಾಗಿ ಬಂದಾಗ. ಮುಸುಕು ತೆಗೆದಿದ್ರೂ ಪಕ್ಕವೇ ಕೂತು ಮತ್ತೊಂದು ಕಡೆ ಮುಖ ತಿರುಗಿಸಿಕೊಂಡಿದ್ದರಿಂದ ಅವಳ ಮುಖ ಸರಿಯಾಗಿ ಕಾಣ್ತಿರಲಿಲ್ಲ. ಮುಖ ಸರಿಯಾಗಿ ನೊಡೋಕೆ ಅಂತ ಅತ್ತ ತಿರುಗಿದಾಗ್ಲೇ ಅವ್ಳೂ ನನ್ನತ್ತ ತಿರುಗಬೇಕೇ ? ! ಸ್ವಲ್ಪ ಹೊತ್ತು ಬಿಟ್ಟು ಮತ್ತೆ ತಿರುಗಿದಾಗ್ಲೂ ಅದೇ ಕತೆ. ಇನ್ನು ಮೂರನೇ ಸಲ, ಹಿಂಗೇ ಆದ್ರೆ ಹಿಂದೀಲೂ , ಇಂಗ್ಲೀಷಲ್ಲೋ ಮಂಗಳಾರತಿ ಆದೀತಾ ಅನ್ನೋ ಶಂಕೆಯಾಯ್ತೊಮ್ಮೆ. ಇದ್ರ ಸಹವಾಸವೇ ಬೇಡ, ಅತ್ತ ತಿರುಗದೆಯೋ ಮೆಜೆಸ್ಟಿಕ್ ತಲುಪೋದು ಹೇಗೆ ಅನ್ನುವ ಭಾವದಲ್ಲಿದ್ದಾಗ ಮತ್ತೆ ಮೊಬೈಲಲ್ಲಿ ಓಡುತ್ತಿದ್ದ ಕತೆ ನೆನಪಾಗಿ ಕತೆಯಲ್ಲಿ ಮುಳುಗಿ ಹೋದೆ.

"ಪುಸ್ತಕ ಓದೋ ಹವ್ಯಾಸ ಇರುವವನು ಎಲ್ಲಿ ಹೋದರೂ ಖುಷಿಯಾಗಿರಬಲ್ಲ" ಅಂತ ಮಹಾತ್ಮಾ ಗಾಂಧೀಜಿಯವರು ಹೇಳಿದ್ರಂತೆ. ಇದನ್ನ ನಾ ಸಣ್ಣವನಿದ್ದಾಗ ಅಂದಿನ ಚಂದನ ಟೀವಿಯಲ್ಲಿ ದಿನಾ ತೋರಿಸ್ತಿದ್ರು. ಎಷ್ಟೋ ಸಲ ನಿಜವಾದ ಈ ಭಾವ ಇಂದೂ ಹೌದಾಯ್ತಲ್ವಾ ಅಂತ ಅನಿಸಿದ್ದು ಸುಮಾರು ಹೊತ್ತಿನ ಮೇಲೆ ಮತ್ಯಾಕೋ ವಾಚ್ ನೋಡಿದಾಗ. ಮುಕ್ಕಾಲು ಘಂಟೆಯ ಮೇಲಾಗಿತ್ತು. ಮೈಸೂರ್ ಬ್ಯಾಂಕ್ ಸರ್ಕಲ್ ಬಂದಾಗಿತ್ತು. ಇನ್ನೇನು ಮೆಜೆಸ್ಟಿಕ್ ಬಂದೇ ಬಿಡ್ತಲ್ಲಾ, ಪರ್ವಾಗಿಲ್ಲ, ಒಂದಿಷ್ಟು ಓದಿದ ಹಂಗೂ ಆಯ್ತು ಇವತ್ತು ಬಸ್ಸಲ್ಲಿ ಅಂತ ಖುಷಿಪಡುವಷ್ಟರ ಹೊತ್ತಿಗೆ ಹಲೋ ಅಕ್ಕ ಅಂತ ಧ್ವನಿ. ವೋಲ್ವೋದಲ್ಲಿ ಕನ್ನಡ ದನಿ ಕೇಳಿ ಆಶ್ಚರ್ಯ ಆಯ್ತು.  ವೋಲ್ವೋದಲ್ಲೆಲ್ಲಾ ಫಾರಿನ್ನರು, ಉತ್ತರದವರುಗಳೇ ತುಂಬಿ ಹೋಗಿ ನನ್ನ ನೋಡಿ ಕಿದರ್ ಕಾ ಟಿಕೆಟ್ ಹೈ ಅಂತ ಕೇಳೋಕೆ ಬಂದಿದ್ದ ಕಂಟಕ್ಟರು ಅಭ್ಯಾಸಬಲದಿಂದ . ನಾ ಯಾವ ಕೋನದಿಂದ ಉತ್ತರದವನ ತರ ಕಾಣ್ತಿದೀನಿ ಅಂತ ಸಂಶಯದಲ್ಲೇ ನಾನು ಪಾಸ್ ಕೊಡಿ ಅಂದಾಗ ಅವನಿಗೂ ಆಶ್ಚರ್ಯ ಆಗಿರಬೇಕು. ಐಡಿ ಅಂತ ಅರ್ಧದಲ್ಲೇ ನಿಲ್ಲಿಸಿದ ಅವನ ಮಾತಿಗೆ ಹತ್ತು ರೂಪಾಯಿ ಚೇಂಜ್ ಇದ್ಯಾ ಅಣ್ಣಾ ಅಂದಿದ್ದೆ. ಕೊನೆಗೂ ಕನ್ನಡದವನ ಕಂಡ ಖುಷಿಗೋ ಏನೋ ಅವನ ಮುಖದಲ್ಲೂ ನಗುವರಳಿತ್ತು. ಕೆಲ ಹೊತ್ತಿನ ನಡೆದ ಇಂತಿಪ್ಪ ಸಂದರ್ಭದಲ್ಲಿ ಕೇಳಿದ ಕನ್ನಡ ದನಿ ಪಕ್ಕದಾಕೆಯದೇ ಅಂತ ತಿಳಿದು ಇನ್ನೂ ಆಶ್ಚರ್ಯ ಆಯ್ತು.. ಪಕ್ಕದಲ್ಲೊಬ್ಳು ಗುರುತಿಲ್ಲದ ಕನ್ನಡ ಹುಡುಗಿ ಬಂದು ಕೂರಲೇ ಬಾರದು ಅಂತಲ್ಲ, ಕೂತ್ರೂ ಅವಳನ್ನ ಮಾತಾಡಿಸ್ಲೇ ಬೇಕು ಅಂತಲ್ಲ. ಆದ್ರೂ ಖುಷಿಯಾಯ್ತು. ಅಕ್ಕಾ , ಬಂದೆ ಹತ್ನಿಮಿಷ ಅಂತ ಕಟ್ಟಾಯ್ತು ಫೋನ್. ಪಕ್ಕದಲ್ಲಿರೋರ ಫೋನ್ ಕದ್ದಾಲಿಸೋದು ಮಹಾಪಾಪ. ಆದ್ರೆ ಅವ್ರು ಬಸ್ಸಿಗೆ ಕೇಳೋ ತರ ಮಾತಾಡ್ತಿದ್ರೆ ! ಅವಳ ಕೈಯಲ್ಲಿದ್ದ ಹಸಿರು ಬ್ಯಾಗ್ ಅವಳು ಅತ್ತಿತ್ತ ತಿರುಗಿದಾಗೆಲ್ಲಾ, ಕೈಗೆ ತಾಗ್ತಿದ್ದನ್ನೋ, ತೊಡೆ ಮೇಲೆ ಬಂದು ಕೂರ್ತಿದ್ದನ್ನೋ ತಡೆಯಲಾರದೇ ಬ್ಯಾಗ್ ಸ್ವಲ್ಪ ಆ ಕಡೆ ಇಟ್ಕೋತೀರಾ ಅಂತ ಕೇಳೋ ಮನಸ್ಸು ಮಾಡೋ ಹೊತ್ತಿಗೆ ಮತ್ತೊಂದು ಕರೆ, ಸಾರ್ ಎಲ್ಲಿದೀರ  ? ನಾನು ಅಕ್ಕನ ಜೊತೆ ಶಾಪಿಂಗ್ ಮಾಡೋಕೆ ಬರ್ತಾ ಇದೀನಿ, ಚಿಕ್ಕಪೇಟೆಗೆ. ಮುಂದಿನ ವಾರ ನನ್ನ ಮದುವೆ, ನೀವು ಬರ್ಲೇ ಬೇಕು. ಸಂಜೆ ಸಿಗ್ತೀರಲ್ವಾ, ಕರೀಬೇಕು ನಿಮ್ಮನ್ನ. ಅದ್ನ ನಂಗೇ ಹೇಳಿದ್ದಾ  ? ? ಆಲೋಚನೆಯಲ್ಲಿ ಬಂದ ಹುಡ್ಗಿಗೆ ಮದ್ವೆ ಫಿಕ್ಸಾಯ್ತು, ಕಂಗ್ರಾಟ್ಸ್ ಅಂತಾರೂ ಹೇಳ್ಬಿಡೋಣ್ವಾ ಅನಿಸ್ತು. ಆದ್ರೆ ನಾನ್ಯಾರೋ, ಅವಳ್ಯಾರೋ. ಸಂಜೆ ಮತ್ತದೇ ವೋಲ್ವೋಲಿ ವಾಪಾಸ್ ಬರುವಾಗ ಎದುರು ಕೂತ ಜೀಬ್ರಾ ಬಣ್ಣದ ಸಲ್ವಾರಿನವಳೋ, ಹೊರಗಿನ ಮಳೆಯಲ್ಲಿ ಛತ್ರಿ ಬಿಡಿಸೋಕೆ ಒದ್ದಾಡುತ್ತಿದ್ದ ಪಿಂಕಿಯೋ ಮತ್ತೊಂದು ಕತೆಯಾಗಿ ಜೊತೆಯಾಗಬಹುದೆಂಬ ನಿರೀಕ್ಷೆಯಲ್ಲಿ..ವೋಲ್ವೋವೋ, ಅದರ ಪಯಣದ ಲೀಲೆಯೋ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *