1
ಸಫಲತೆ ಬಂದು ನಿಂತಿದೆ ಬಾಗಿಲಿಗೆ
ಅದೆಷ್ಟೋ ವಿಫಲತೆಗಳು ಬಂದೊದಗಿದ ಮೇಲೆ
ನೋವಿನಲ್ಲೇ ಬದುಕು ಅರಳಿ ನಿಂತಿದೆ
ಅದೆಷ್ಟೋ ಪ್ರಯತ್ನಗಳು ಫಲಿಸಿದ ಮೇಲೆ…!
2
ಮೌನದಲ್ಲಿ ಅದೆಷ್ಟು ಮಾತುಗಳಿವೆ
ಬೀಜದಲ್ಲಿನ ವೄಕ್ಷದಂತೆ
ಅನಂತತೆಯಲ್ಲಿ ಅದೆಷ್ಟು ನಕ್ಷತ್ರಗಳಿವೆ
ಅಣುವಿನಲ್ಲಿ ಅಣುವಾದಂತೆ…!
3
ದಾರಿ ಈಗ ಸ್ಪಷ್ಟವಾಗಿದೆ
ಅದೆಷ್ಟೋ ಹೆಜ್ಜೆ ನಡೆದ ಮೇಲೆ
ಬಾಳ ಗುರಿ ಈಗ ನಿಚ್ಚಳವಾಗಿದೆ
ಅದೆಷ್ಟೋ ಭ್ರಾಂತಿ ಅಳಿದ ಮೇಲೆ…!
4
ಎಲ್ಲ ಎಲ್ಲೆಗಳ ಮೀರಿ
ಬೆಸವ ಅಹಿಂಸೆಗೆಲ್ಲಿದೆ ಭಾಷೆ…?
ಜೀವ ಭಾವಗಳ ಮೀರಿ
ಹೊಸೆವ ಪ್ರೇಮಕ್ಕೆಲ್ಲಿದೆ ಭಾಷೆ…?
5
ಏನು ಹೇಳಲಿ
ಅವಳ ಚೆಲುವು
ಇಡೀ ರಾತ್ರಿ ಸುರಿದ
ಬೆಳದಿಂಗಳ ಒಲವು…!
6
ಬೆನ್ನಿಗೆ ಹರಡಿದ
ಅವಳ ಹೆರಳು
ಅರ್ಧ ಚಂದಿರನ
ಮುಡಿದ ಇರುಳು…!
7
ನೋವಿನೊಂದಿಗೆ ಸೆಣಸಿದ್ದೇನೆ
ಅದೆಷ್ಟೋ ಬಾರಿ;
ಅವಳಿಲ್ಲದ ಒಂದೊಂದು
ಕ್ಷಣವೂ ಅದೆಷ್ಟು ದುಬಾರಿ…!
8
ಅವಳೊಂದಿಗೇ ಮುಗಿದು
ಹೋಗಿದೆ ಮಾಗಿಯ ಚಳಿ
ಕಳೆದ ಇರುಳುಗಳ ನೆನಪ
ಹೊತ್ತು ತರುತ್ತಿದೆ ತಂಗಾಳಿ…!
9
ರಾತ್ರಿಗಳೇ ಹೀಗೆ; ಅವಳಿದ್ದಾಗ
ಬಲು ಬೇಗ ಉರುಳಿದವು
ಅವಳಿಲ್ಲದ ಈಗ ಹಗಲುಗಳೇ
ಬಲು ದೀರ್ಘ ಎನಿಸಿದವು…!
10
ನಂಬಿಕೆ ಇಲ್ಲ ನಮ್ಮ ಮೇಲೆ ನಮಗೆ
ಅವರಿವರ ಮಾತು ನಂಬಿ ಕೆಡುವೆವು ಕೊನೆಗೆ
ಒಣ ಮಾತು, ಬರಿ ಸುಳ್ಳು ಛಿ ಅಲ್ಲ ತೆಗೆ ಓ'ಹಾಲ'
ಕೈ ಬಾಯಿ ಶುದ್ಧವಿಲ್ಲದ ಮೇಲೆ ನಡೆ-ನುಡಿ ಶುದ್ಧವಾದೀತು ಹೇಗೆ…?!
11
ಈ ಬೇಸರವೇ ಹೀಗೆ ಇದ್ದಕ್ಕಿದ್ದಂತೆ ಆವರಿಸುವುದು
ಏನೋ ಕಾರಣ ಹೂಡಿ ಮನ ಮುರಿದು ಬೀಳುವುದು
ಇಷ್ಟವಿಲ್ಲದಿದ್ದರೂ ಕಟ್ಟಿಕೊಳ್ಳುವುದು ತನ್ನ ಸುತ್ತ ಹುತ್ತ ಓ'ಹಾಲ'
ಈ ಮನ ಸ್ಥಿತಿಯೇ ಹೀಗೆ ಇದ್ದೂ ಇಲ್ಲದ ಸ್ಥಿತಿಗೆ ಮರಳುವುದು…!
12
ಎಲ್ಲಾ ತಿಳಿದಿದೆ ಎನ್ನುವವರ ಕೋಟೆ ಕಟ್ಟಿದೆ ಸುತ್ತ
ಸತ್ತ ಸಂಪ್ರದಾಯಗಳ ಗೋರಿಗೆ ಇವರೇ ಕಾವಲು ಸುತ್ತ ಮುತ್ತ
ಕ್ರೌರ್ಯ, ಹಿಂಸೆ, ಅಸಮಾನತೆಯ ಗೋಡೆ ಬೆಳೆದು ನಂತಿವೆ ನಡುವೆ
ಓ'ಹಾಲ' ಎಚ್ಚೆತ್ತ ಕೊರಳ ಹಿಸುಕಿ ಹಬ್ಬಿದೆ ಮತಾಂಧತೆಯ ಹುತ್ತ…!
13
ಎಲ್ಲರೂ ಮಾತನಾಡುವವರೇ ಒಬ್ಬರಿಗಿಂತ ಒಬ್ಬರು ಹೆಚ್ಚು
ಬೇಕಿಲ್ಲದಿದ್ದರೂ ಹೇಳುವವರೇ ಅವರಿಗೆ ಅವರದೇ ಉಪದೇಶದ ಹುಚ್ಚು
ಬರೀ ಮಾತು, ಒಣ ಉಪದೇಶ ಏಕೆ ಹೇಳು ಓ'ಹಾಲ'
ನಿನ್ನ ನೀ ಅರಿಯಲು ಮೌನಕ್ಕೆ ಶರಣಾಗು ತರವಲ್ಲ ತಗಿ ಹೊಟ್ಟೆಕಿಚ್ಚು…!
14
ನಾವೇ ಚುನಾಯಿಸಿ
ಕಳುಹಿಸಿದ ಅವರು
ಈಗ ಗುರುತು ಸಿಗುವುದಿಲ್ಲ
ಬದಲಾಗಿವೆ ಚಹರೆಗಳು
ಮಾತಾಡುತ್ತಿವೆ ಮುಖವಾಡಗಳು…
15
ಬಂದದ್ದು ಬರಿಗೈಯಲ್ಲಿ
ನೋಡಿದರೆ ಕೈಯಲ್ಲಿ ಸರ್ವಾಧಿಕಾರ
ಕಟ್ಟೋಣವೆಂದರು ಎಲ್ಲೂರು ಸೇರಿ
ಈಗ ಕೆಡುವುದರ ಹುನ್ನಾರದಲ್ಲಿದ್ದಾರೆ…
16
ಅವನೊಳಗೂ ಇದ್ದ ಬುದ್ಧ
ಅಂಗುಲಿಮಾಲೆ ಕಳಚಿದಾಗ
ಮುಖಾ ಮುಖಿ ಬುದ್ಧನಿಗೆ ಬುದ್ಧ…
17
ತಳ ಒಡೆದಿದೆ
ನಿಲ್ಲುವುದಿಲ್ಲ ನೀರು
ಬದಲಿಸಬೇಕು ಮಡಿಕೆ
ಹೊಸತಿದ್ದರೂ…ಒಸರುವುದು
ನಿಲ್ಲುವುದಿಲ್ಲ ನೀರು…
ಮಡಿಕೆ ಹಳತಾಗಬೇಕು…
18
ಥಟ್ಟನೆ ಕಂಡರೆ
ಹಾವು ಸುಮ್ಮನೆ ಬೀಡುವುದಿಲ್ಲ
ಹೊಡೆದು ಹಾಕುತ್ತೇವೆ ಬೆಂಕಿಗೆ
ನಮ್ಮೊಳಗಿನ ಮೃಗೀಯತೆಗೆ
ವಿಲಕ್ಷಣ ಖುಷಿ ಕೊಟ್ಟು…
19
ಏನೂ ಅನಿಸುವುದೇ ಇಲ್ಲ
ಹೊಸಕಿ ಹಾಕುತ್ತೇವೆ
ನಿರುಪದ್ರವಿ ಕ್ರಿಮಿ ಕೀಟಗಳನ್ನು
ನಮ್ಮೊಳಗಿನ ಕೀಟಲೆಗಳಿಗೆ
ವಿಲಕ್ಷಣ ಕಾವು ಕೊಟ್ಟು…
20
ಎಷ್ಟು ನಾಜೂಕು
ಕೈ ತಾಕಿ ಉದುರಿತು ದಳ
ಬೆರಳಿಗಂಟಿಯೂ ಅಂಟದ
ಮೃದು ಸ್ಪರ್ಶ ಹೂವೇ ಹಾಗೇ…
ನಾಜೂಕಿನಲ್ಲಿ ಬಲು ನಾಜೂಕು
ಅರಳಿದ ಗಳಿಗೆಗೊಮ್ಮೆ
ಸುವಾಸನೆಯ ಪುಳಕ
ಇದ್ದಷ್ಟು ಹೊತ್ತು ಸಾರ್ಥಕತೆಯ ಭಾವ!
ಹುಟ್ಟು ಸಾವಿಗೆ ಬೇಕೆ
ಇದಕ್ಕಿಂತ ಬೇರೆ ವ್ಯಾಖ್ಯೆ…?!
21
ಉರಿದು ಆರಿತು
ಹೊರಗೆ ಹಚ್ಚಿದ ಕಿಚ್ಚು
ತಣ್ಣಗಾಗಲ್ಲಿಲ್ಲ ಒಳಗೆ
ಹೊತ್ತಿದ ಹೊಟ್ಟೆಕಿಚ್ಚು…
22
ದೇಹವೆಂಬ ಕೊರಡನ್ನು
ಸದಾ ಕತ್ತರಿಸುತ್ತದೆ ಚಿಂತೆ
ಒಮ್ಮೆ ಹಿಂದೆ ಒಮ್ಮೆ ಮುಂದೆ
ಸದಾ ಗರಗಸದ ಅಲಗಿನಂತೆ…
23
ಪ್ರತಿ ಹುಟ್ಟಿನ ಗಳಿಗೆಯಲ್ಲೂ
ಸಾವಿನ ಸೂಚನೆ ಇದೆ
ಪ್ರತಿ ಮೊಳಕೆ ಚಿಗುರಿನಲ್ಲೂ
ಅಳಿವಿನ ಮೂನ್ಸೂಚನೆ ಇದೆ…
24
ಉದುರುತ್ತವೆ ಹಣ್ಣೆಲೆಗಳು
ಮರ-ಗಿಡ ಮರು ಹುಟ್ಟು ಪಡೆಯಲು
ಸದಾ ಕಾಡುತ್ತವೆ ನೋವುಗಳು
ಬದುಕಿನ ಕನ್ನಡಿ ಸ್ವಚ್ಛಗೊಳಿಸಲು…
25
ಕಾದ ಕುಲುಮೆಯಲ್ಲಿಟ್ಟರೆ
ಕಠಿಣ ಕಬ್ಬಿಣವೂ ಮೆದುವಾಗುತ್ತದೆ
ಸದಾ ಪ್ರೀತಿಯ ಸಂಗದಲ್ಲಿದ್ದರೆ
ಹಿಂಸೆ, ಕ್ರೌರ್ಯವೂ ಕರಗುತ್ತದೆ…
26
ಭೂಮಿಯ ಸಹನೆಯೇ ಹೀಗೆ
ಎಲ್ಲಾ ಒದಗಿಸುತ್ತದೆ ತಾಯಿಯ ಕರುಣೆಯಂತೆ
ಸಹನೆ ಮಿತಿ ಮೀರಿದಾಗ
ಎಲ್ಲಾ ಅಳಿಸಿ ಹಾಕುತ್ತದೆ ತಾನೇ ಕ್ರೂರ ವಿಧಿಯಂತೆ…
27
ಅದೆಷ್ಟು ಕೌತುಕಗಳು ಹುದಿಗಿವೆಯೋ ಈ ಸೃಷ್ಟಿಯಲ್ಲಿ
ಬಿಟ್ಟುಕೊಡದ ಗುಟ್ಟುಗಳೆಷ್ಟಿವೆಯೋ ಈ ಜಗದ ದೃಷ್ಟಿಯಲ್ಲಿ
ಜೀವ, ಜೀವಗಳ ಜಾಲ ರಹಸ್ಯವೀ ಗೊಳ ಓ ಹಾಲ
ವಿಧ, ವಿಧ ರೂಪ ರೂಪಾಂತರ ಬೆಸೆದಿದೆ ಒಂದೇ ಸಮಷ್ಟಿಯಲ್ಲಿ
28
ಯಾರು ಪೂರ್ಣ, ಯಾವುದು ಪರಿಪೂರ್ಣ ಹೇಳು ಈ ಜಗದಿ
ಪೂರ್ಣ, ಪರಿಪೂರ್ಣ, ಅಪೂರ್ಣ ಪಾಕ, ಪರಿಪಾಕವೀ ಜಗದಿ
ಆದಿ, ಅನಾದಿ, ತುದಿ ಮೊದಲಿಲ್ಲದ ಕ್ರಿಯೆ ಪ್ರಕ್ರಿಯೆ ನೋಡಾ
ಓ ಹಾಲ ಎಂತಹ ವಿಸ್ಮಯ ಕಾಲದ ನಡೆ ಈ ಜಗ ಹೃದಯದಿ
29
ಇಲ್ಲ ಇಲ್ಲಿ ಯಾವುದೂ ದೊಡ್ಡದು ಅತಿ ದೊಡ್ಡದು
ಎಲ್ಲಾ ಕಿರಿದು, ಅತಿ ಕಿರಿದು ಒಂದರ ಮುಂದೆ ಇನ್ನೊಂದು
ಬೀಜ ವೃಕ್ಷಕೆ ಮೂಲ, ಜೀವ ಕಾಯಕೆ ಮೂಲ ಓ ಹಾಲ
ಮೂಲ ಸೆಲೆವು ಬತ್ತಲು ಇಲ್ಲ ಇಲ್ಲಿ ಯಾವುದೂ ಹಿರಿದು ಕಿರಿದು
30
ಸೋಡರು ಚಿಕ್ಕದಾದರೂ ಅದು ಹರಡುವ ಬೆಳಕು ದೊಡ್ಡದು
ಮಿಣುಕು ನಕ್ಷತ್ರಗಳಾದರೂ ಕತ್ತಲೆಗೆ ಒಡ್ಡುವ ಬೆಳಕು ದೊಡ್ಡದು
ಹಿರಿದು, ತಾನೇ ಘನವೆಂಬ ಅಹಂ ಅಳಿಯದೆ ಹೋದರೆ ಹೇಗೆ?
ಓ ಹಾಲ ತನ್ನ ತಾನು ಅರಿಯಲು ಅಂತರಂಗದ ಬೆಳಕು ದೊಡ್ಡದು
ಎಲ್ಲವೂ ಅದ್ಭುತವಾಗಿವೆ..
ಎಲ್ಲವೂ ಚೆನ್ನಾಗಿವೆ 🙂