ಆಂಟೋನಿಯೋ ಇಟಲಿಯ ವೆನಿಸ್‍ನ ನಿವಾಸಿ. ಪ್ರಸಿದ್ಧ ವ್ಯಾಪಾರಿ. ಆತ ವ್ಯಾಪಾರಿಯಾಗಿದ್ದರೂ ಸದಾಚಾರ ಸಂಪನ್ನ, ಸ್ನೇಹಜೀವಿ, ದಯಾಳುವಾದ ಆತನ ಸ್ನೇಹ ಬಳಗ ದೊಡ್ಡದಾಗಿತ್ತು. ಬಸ್ಸಾನಿಯೋ, ಗ್ರೇಸಿಯಾನೋ, ಲೊರೆಂಜೋ, ಸಲೆರಿಯೋ, ಸಲಾನಿಯೋ ಇವರೆಲ್ಲರ ಅಚ್ಚುಮೆಚ್ಚಿನ ಗೆಳೆಯನಾತ. ಅವರಿಗಾಗಿ ತನ್ನೆಲ್ಲ ಆಸ್ತಿ ಸಂಪತ್ತು, ಜೀವವನ್ನು ಕೊಡಲು ಸಿದ್ದನಿದ್ದ. ಆತನ ವ್ಯಕ್ತಿತ್ವ, ವೈಚಾರಿಕತೆ,ಕರುಣಾಪೂರಿತ ವ್ಯಕ್ತಿತ್ವ ಇತರರಿಗೆ ಮಾದರಿ. ಆತ ಮಮತೆ ಕರುಣೆಗಳ ಕ್ರೈಸ್ತ ತತ್ವಕ್ಕೆ ಮತ್ತೊಂದು ರೂಪಕವೆಂಬಂತೆ ಕಂಡುಬರುತ್ತಾನೆ. ಆದರೆ ಆತ ಅದೇನೋ ಉದ್ವಿಗ್ನತೆಯಲ್ಲಿ ಮಾನಸಿಕ ಕ್ಲೇಶದಿಂದ ನೋಯುತ್ತಿದ್ದಾನೆ. ಆಂಟೋನಿಯೋ ಅದಕ್ಕೆ ನಿರ್ದಿಷ್ಟ ಕಾರಣ ತಿಳಿಯದೇ ಒದ್ದಾಡುತ್ತಿದ್ದಾನೆ, ವ್ಯಾಕುಲನಾಗಿದ್ದಾನೆ. ಗೆಳೆಯರ ಊಹೆಯಂತೆ ಆತನ ವ್ಯಾಪಾರಿ ಹಡಗು ಸಮುದ್ರ ಮಧ್ಯದಲ್ಲಿ ತೂಯ್ದಾಡುತ್ತಿದೆ.ಅದಕ್ಕಾಗಿ ಆತ ವಿಚಿತ್ರವಾದ ತಳಮಳಕ್ಕೆ ಈಡಾಗಿರಬಹುದು. ಅನಾರೋಗ್ಯ ಆತನ ಭಾದಿಸುತ್ತಿದೆ. ಗೆಳೆಯ ಗ್ರೇಸಿಯಾನೋ ಆತನಿಗೆ ಸಮಾಧಾನ ಹೊಂದುವಂತೆ ಸಲಹೆ ನೀಡಿದರೂ ಅದಾವ ಬದಲಾವಣೆ ತರುವುದಿಲ್ಲ. ನೋವು, ನಿರಾಶೆ, ಆಶಾಭಂಗ ಮನುಷ್ಯನಲ್ಲಿ ನಿರುತ್ಸಾಹವನ್ನು ತರುತ್ತವೆ.
ಇದನ್ನೆ The Merchant Of Venice ಮೊದಲ ಅಂಕದ ಮೊದಲ ದೃಶ್ಯದಲ್ಲಿಯೇ ಶೇಕ್ಸಪಿಯರ ಮನದಟ್ಟುಮಾಡುತ್ತಾನೆ. ಅದರೊಂದಿಗೆ ಗ್ರೇಸಿಯೋನ ಪ್ರತಿ ಮಾತು ಬದುಕಿನ ಆಶಾವಾದಕ್ಕೆ ಸಾರವಾಗಿ ಪಡಿಮೂಡಿಸುತ್ತಾನೆ. ಮನುಷ್ಯನ ದೇಹ ಮತ್ತು ಮನಸ್ಸುಗಳ ನಡುವೆ ಪರಸ್ಪರ ತಾತ್ವಿಕ ಬಂಧದ ಸತ್ಯವನ್ನು ಈ ಅಂಕ ಸೂಚಿಸುತ್ತದೆ. ಅದಕ್ಕೆ ಕಾರಣ ಆತನಿಗೂ ತಿಳಿಯದೇ ಇದ್ದರೂ ಆತ್ಮದ ಗೆಳೆಯ ಬಸ್ಸಾನಿಯೋ ಅತ್ಯಂತ ಕ್ಲಿಷ್ಟಕರವಾದ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿಹಾಕಿಕೊಂಡಿದ್ದಾನೆ. ಆತ ಆ ಚಿಂತೆಯಲ್ಲಿ ಬಸವಳಿದಿದ್ದಾನೆ. ಇವರಿಬ್ಬರಲ್ಲಿ ಗಳಸ್ಯಕಂಠಸ್ಯ ಗೆಳೆತನವಿದೆ. ಹಾಗಾಗೇ ಗೆಳೆಯನ ಹೃದಯದ ನೋವು ಈತನಲ್ಲೂ ಮೂಡಿದೆ.ಆತನ ಮನಸ್ಸಿಗೆ ಕತ್ತಲು ಕವಿದಂತಿದೆ. ಅದೇ ಸಮಯಕ್ಕೆ ಆತ್ಮೀಯ ಗೆಳೆಯ ಬಸ್ಸಾನಿಯೋ ಆಗಮಿಸುತ್ತಾನೆ. ತನ್ನ ಸಂಕಟವನ್ನು ತೋಡಿಕೊಂಡು ಹಣಕಾಸಿನ ನೆರವನ್ನು ಆಪೇಕ್ಷಿಸುತ್ತಲೇ ಈಗಾಗಲೇ ತನ್ನೆಲ್ಲ ಸಂಪತ್ತನ್ನು ಹಡಗಿನಲ್ಲಿ ತುಂಬಿ ಸಾಗರನ ಮೇಲೆ ತೇಲಿಬಿಟ್ಟ ಆಂಟೋನಿಯೋ ಬಸ್ಸಾನಿಯೋನ ಸಾಲಕ್ಕೆ ತಾನು ಜಾಮೀನು ನೀಡಲು ಸಿದ್ಧ ಎನ್ನುತ್ತಾನೆ.
ಹಾಗಾಗಿ ಬಸ್ಸಾನಿಯೋ ಶೈಲಾಕ್ ಎಂಬ ಲೇವಾದೇವಿ ವ್ಯವಹಾರ ನಡೆಸುವ ಯಹೂದಿಯೊಬ್ಬನಲ್ಲಿ ಮೂರು ಸಾವಿರ ಡ್ಯೂಕೇಟ್‍ಳನ್ನು ಸಾಲ ಪಡೆಯುತ್ತಾನೆ. ಮತ್ತು ಆಂಟೋನಿಯೋ ಆ ಸಾಲಕ್ಕೆ ತನ್ನ ಸಂಪತ್ತನ್ನು ಜಾಮೀನಾಗಿ ಬರೆದುಕೊಡುತ್ತಾನೆ. ಸಾಲ ನೀಡಿದ ಶೈಲಾಕ್ ಸಾಲ ತೀರಿಸಲು ಮೂರು ತಿಂಗಳ ಗಡವು ನೀಡಿ ಒಂದೊಮ್ಮೆ ಅದು ಅಸಾಧ್ಯವಾದಲ್ಲಿ ಶೈಲಾಕ್ ಅಂಟೋನಿಯೋ ದೇಹದ ಯಾವ ಭಾಗದಿಂದಲಾದರೂ ಮೂರು ಪೌಂಡಗಳ ಮಾಂಸವನ್ನು ಕತ್ತರಿಸಿಕೊಳ್ಳಬಹುದೆಂಬ ಕ್ರೂರ ಸಂಗತಿಯ ಒಳಗೊಂಡ ಬಾಂಡ್ ಒಂದಕ್ಕೆ ಆಂಟೋನಿಯೋನಿಂದ ಸಹಿ ಪಡೆದುಕೊಳ್ಳುತ್ತಾನೆ. ಮೂರು ತಿಂಗಳಲ್ಲಿ ತನ್ನ ಹಡಗು ವಾಪಸ್ಸು ಬರುವ ಹಾಗೂ ಸಾಲ ತೀರಿಸುವ ಭರವಸೆಯಿಂದ ಆಂಟೋನಿಯೋ ವಿಚಾರಿಸದೇ ಸಹಿ ಮಾಡುತ್ತಾನೆ. ಆಂಟೋನಿಯೋ ಮತ್ತು ಶೈಲಾಕ್ ನಡುವೆ ಈ ಮೊದಲೇ ವೈರತ್ವವಿದೆ. ಕಾರಣ ಆಂಟೋನಿಯೋ ಕ್ರೈಸ್ತ. ಶೈಲಾಕ್ ಒಬ್ಬ ಯಹೂದಿ. ಆಂಟೋನಿಯೋ ಲೇವಾದೇವಿ ವ್ಯವಹಾರದಲ್ಲಿ ಬಡ್ಡಿ ಸ್ವೀಕರಿಸುವ ಶೈಲಾಕನ ಕ್ರಮವನ್ನು ವಿರೋಧಿಸುತ್ತಾನೆ. ಅಷ್ಟೇ ಅಲ್ಲದೇ ಶೈಲಾಕ್‍ನ ಪುತ್ರಿ ಆತನ ರಕ್ತ ಮಾಂಸ ಹಂಚಿಕೊಂಡ ಜೆಸ್ಸಿಕಾ ಕ್ರೈಸ್ತ ಲೊರೆಂಜೋನೊಂದಿಗೆ ಓಡಿಹೋಗುತ್ತಾಳೆ. ಕ್ರೈಸ್ತ ಜಗತ್ತಿನಲ್ಲಿ ಆತ ಒಂಟಿಯಾಗಿದ್ದಾನೆ. ಇವೆಲ್ಲವೂ ಶೈಲಾಕ್ ಕ್ರೈಸ್ತರ ವಿರುದ್ಧ ದ್ವೇಷ ಮಸೆಯಲು ಕಾರಣ. ಆತ ಸೇಡಿನ ಕುದಿಯಲ್ಲಿ ಬೇಯುತ್ತಿದ್ದಾನೆ.
ದುರಾದೃಷ್ಟವಶಾತ್ ಆಂಟೋನಿಯೋನ ಸಂಪತ್ತು ನಾಶವಾಗುತ್ತದೆ. ಶೈಲಾಕ್ ನೀಡಿದ ಗಡವು ಮೀರಿದೆ. ಆಂಟೋನಿಯೋ ಸಂಪೂರ್ಣ ದಿವಾಳಿಯಾದ ಸುದ್ದಿ ಬರುತ್ತಲೇ ಶೈಲಾಕ್ ಬಾಂಡ್‍ನ ಕಾರ್ಯರೂಪಕ್ಕೆ ಮುಂದಾಗುತ್ತಾನೆ. ಬಾಂಡನ ಪ್ರಕಾರ ಆಂಟೋನಿಯೋನ ದೇಹದಿಂದ ಮೂರು ಪೌಂಡ ಮಾಂಸವನ್ನು ತೆಗೆದುಕೊಳ್ಳುವ ದುರುಳತನಕ್ಕೆ ಮುಂದಾಗುತ್ತಾನೆ. ಅದೇ ಸಮಯದಲ್ಲಿ ಬಸ್ಸನಿಯೋ ಬೆಲ್ಮೌಂಟನ ಸುಂದರಿ ಬುದ್ಧಿವಂತೆ ಪೋರ್ಸಿಯೋಳನ್ನು ಸ್ವಯಂವರದಲ್ಲಿ ನೀಡಿದ ಶರತ್ತು ಅಮದರೆ ಆಕೆಯನ್ನು ಗೆಲ್ಲಲು ಇಟ್ಟ ಮೂರು ಸಂಪುಟಗಳಲ್ಲಿ ಆಕೆಯ ಹೆಸರಿರುವ ಸಂಪುಟ ಆಯ್ಕೆ ಮಾಡಿಕೊಂಡವರಿಗೆ ಆಕೆ ದಕ್ಕುವಳೆಂಬ ಶರತ್ತು .ಅದರಂತೆ ಬಸ್ಸನಿಯೋ ಸರಿಯಾದ ಸಂಪುಟವನ್ನು ಆಯ್ದುಕೊಳ್ಳುವ ಮೂಲಕ ಆಕೆಯನ್ನು ಗೆದ್ದು ಆಕೆಯ ಸಂಪತ್ತಿಗೆ ವಾರಸುದಾರನಾಗುತ್ತಾನೆ. ಹಾಗಾಗಿ ಮೂರು ಸಾವಿರ ಡ್ಯೂಕೇಟಗಳ ಬದಲಿಗೆ ಅದರ ಮೂರು ಪಟ್ಟು ನೀಡಲು ತಯಾರಿದ್ದರೂ ಶೈಲಾಕ್ ಅದನ್ನು ಒಪ್ಪದೇ ಗಡವು ಮೀರಿದ್ದರಿಂದ ಆಂಟೋನಿಯೋನ ದೇಹದ ಮಾಂಸವನ್ನೆ ನೀಡಲು ಹೇಳುತ್ತಾನೆ. ಡ್ಯೂಕ್ ಮಾಡಿದ ಮನವಿಯನ್ನು ಆತ ಮನ್ನಿಸುವುದಿಲ್ಲ. ಆಂಟೋನಿಯೋನ ಬದುಕು ಈಗ ಅತಂತ್ರ ಸ್ಥಿತಿಯಲ್ಲಿದೆ.
ಐಹಿಕ ಜಗತ್ತಿನಲ್ಲಿ ಲೋಭ ಹಾಗೂ ಲೇವಾದೇವಿ ವ್ಯವಹಾರಗಳಲ್ಲಿಯ ಭ್ರಷ್ಟ, ದುಷ್ಟ ಕೊಲೆಪಾತಕ ಪ್ರವೃತ್ತಿಗಳನ್ನು ಎತ್ತಿ ಹೇಳುತ್ತದೆ ನಾಟಕ. ಬೇಟೆಗಾರನೊಬ್ಬನ ಕ್ರೂರ ಆತ್ಮತೃಪ್ತಿಯನ್ನು ಒಡಮೂಡಿಸುವ ಜೊತೆಗೆ ಜಗತ್ತಿನ ವ್ಯಕ್ತಿಗಳಲ್ಲಿಯ ನೈಜತೆ ಮತ್ತು ಕಪಟ ಮುಖವಾಡವನ್ನು ಬಿಂಬಿಸುವ ಚಿತ್ರಣ ಇಲ್ಲಿದೆ.ಇದು ಜೀವನ. ನಾನಾ ಪ್ರವೃತ್ತಿಯ ಜನರಿಂದ ಕೂಡಿದ ಜಗತ್ತಿದು. ಆದರೆ ಒಪ್ಪಂದ ಮತ್ತು ವೈಷಮ್ಯಗಳಲ್ಲಿ ಬದುಕನ್ನು ಸಹ್ಯವಾಗಿಸುವ ಹೊಂದಾಣಿಕೆಯ ಮಹತ್ವವನ್ನು ಕರುಣೆ ಪ್ರೀತಿ ಮಮತೆಯ ಮಹಿಮೆಯನ್ನು ಮಾನವ ಅರಿತುಕೊಳ್ಳಬೇಕಾದ ಅಗತ್ಯವನ್ನು ಶೇಕ್ಸಪಿಯರ ಸಮಂಜಸವಾಗಿ ನಿರೂಪಿಸುತ್ತಾನೆ.
ನಾಟಕದ ಕ್ಯಾಸ್ಕೆಟ್ ಸ್ಟೋರಿಯಲ್ಲಿ ಬರುವ ಬೆಲ್ಮೌಂಟನ ಸುಂದರಿ ಪೋರ್ಸಿಯೋಳ ಸ್ವಯಂವರದ ಸುಂದರ ದೃಶ್ಯಗಳಿಂದ ಸೆಳೆಯುತ್ತದೆ. ಆಕೆಯ ಸ್ವಯಂವರದಲ್ಲಿ ಮೊರೆಕ್ಕೋ ಹಾಗೂ ಅರಗೋನದ ರಾಜಕುಮಾರರ ಸಂಪುಟಗಳ ತಕ್ಕ ಆಯ್ಕೆಯನ್ನು ಮಾಡದೇ ಇರುವುದರಿಂದ ಪೋರ್ಸಿಯೋ ಖುಷಿಯಾಗಿದ್ದಾಳೆ. ಕಾರಣ ಆಕೆಯ ಅಭಿಲಾಷೆ ಬಸ್ಸಾನಿಯೋನನ್ನು ಹೊಂದಬೇಕೆಂಬುದು. ಅದರಂತೆ ಬಸ್ಸಾನಿಯೋ ಸರಿ ಸಂಪುಟ ಆಯ್ದುಕೊಳ್ಳುವ ಮೂಲಕ ಆಕೆಯನ್ನು ಗೆಲ್ಲುತ್ತಾನೆ. ಇದರಿಂದಾಕೆ ಸಂತುಷ್ಟಗೊಂಡಿದ್ದಾಳೆ. ಬುದ್ದಿವಂತೆಯಾದ ಪೋರ್ಸಿಯಾ ಬಸ್ಸನಿಯೋನಿಂದ ಆಂಟೋನಿಯೋನ ಸಂಕಷ್ಟದ ಸ್ಥಿತಿಗೆ ಕಾರಣ ತಿಳಿದು ತನ್ನ ಸೇವಕಿ ನೆರಿಸ್ಸಾಳೊಂದಿಗೆ ವೇನಿಸ್‍ಗೆ ವೇಷಾಂತರದಲ್ಲಿ ಬರುತ್ತಾಳೆ. ನ್ಯಾಯಾಧೀಶೆ ಹಾಗೂ ಗುಮಾಸ್ತೆಯ ವೇಷದಲ್ಲಿ ಬರುವ ಅವರಿಬ್ಬರೂ ಆಂಟೋನಿಯೋನನ್ನು ಈ ಸಂಕಟದಿಂದ ಪಾರು ಮಾಡುತ್ತಾರೆ. ಶೈಲಾಕ್ ಆಂಟೋನಿಯೋನ ದೇಹದಿಂದ ಬರಿ ಮೂರು ಪೌಂಡ ಮಾಂಸವನ್ನು ತೆಗೆದುಕೊಳ್ಳಬಹುದೆಂದು ಆದರೆ ಆ ಸಮಯದಲ್ಲಿ ಆತನ ದೇಹದಿಂದ ಒಂದು ಹನಿ ರಕ್ತವನ್ನು ಹೊರಚೆಲ್ಲದಂತೆ ತೆಗೆದುಕೊಳ್ಳಬೇಕೆಂದು ವಾದಿಸುತ್ತಲೇ ಶೈಲಾಕ್‍ಗೆ ತನ್ನ ತಪ್ಪು ಅರಿವಾಗಿ ಹಿಂದೆಗೆಯುತ್ತಾನೆ. ತನಗೆ ಬರಬೇಕಾದ ಹಣ ನೀಡಿದರೆ ಸಾಕೆಂದು ಹೇಳುತ್ತಾನೆ. ಆದರೆ ಪೋರ್ಸಿಯಾ ಅದನ್ನೊಪ್ಪದೇ ಆತನ ದಾಳವನ್ನೆ ಆತನ ಕಡೆ ಎಸೆಯುತ್ತಾಳೆ. ಈಗ ಡ್ಯೂಕ್ ಶೈಲಾಕ್‍ನಿಗೆ ಕರುಣೆತೋರಿ ಆತನಿಗೆ ಜೀವದಾನ ನೀಡುತ್ತಾನೆ. ಆಂಟೋನಿಯೋ ತಾನು ಶೈಲಾಕ್‍ಗೆ ಕೊಡಬೇಕಾದ ಹಣವನ್ನು ನೀಡುವುದಾಗಿಯೂ ಆದರೆ ಶೈಲಾಕ್ ಅದನ್ನು ತನ್ನ ಮರಣದ ನಂತರ ತನ್ನ ಆಸ್ತಿಯನ್ನು ಶೈಲಾಕ್‍ನ ಮಗಳು ಜೆಸ್ಸಿಕಾಳ ಹೆಸರಿಗೆ ಮಾಡಬೇಕೆಂದು ಅದನ್ನು ಬಾಂಡ್ ಬರೆದು ಕೊಡುವ ತೀರ್ಮಾನಕ್ಕೆ ಒಪ್ಪುವಂತೆ ಹೇಳಲು ಶೈಲಾಕ್‍ನ ಯಾವ ಪ್ರಯತ್ನವೂ ಫಲನೀಡದೇ ಮನಸ್ಸು ಛಿಧ್ರಗೊಂಡ್ ಶೈಲಾಕ್ ಎಲ್ಲಕ್ಕೂ ಒಪ್ಪಿಕೊಳ್ಳುತ್ತಾನೆ. ಒಟ್ಟಾರೆ ನಾಟಕ ಸುಖಾಂತವಾಗುತ್ತದೆ.
16ನೇ ಶತಮಾನದಲ್ಲಿ ಇಟಲಿಯ ವೆನಿಸ್ ಯುರೋಪಿನ ಪ್ರಸಿದ್ಧ ಬಂದರು. ವ್ಯಾಪಾರಿ ಕೇಂದ್ರವೆಂತಲೇ ಹೆಸರಾಗಿತ್ತು. ಪೂರ್ವ ಮತ್ತು ಪಶ್ಚಿಮದ ದೇಶಗಳ ನಡುವಿನ ವಾಣಿಜ್ಯದ ಸೇತುವೆಯಾಗಿ ಬೃಹದಾಕಾರವಾಗಿ ಬೆಳೆದ ನಗರವಾಗಿತ್ತು.. ಅಷ್ಟೇ ಅಲ್ಲದೇ ಆ ಕಾಲದ ಗ್ಲಾಮರಸ್ ರೋಮ್ಯಾಂಟಿಕ್ ಪಟ್ಟಣವೆಂದೂ ಹೆಸರಾಗಿತ್ತು. ಶೇಕ್ಸಪೀಯರ ಬಹಳಷ್ಟು ನಾಟಕಗಳ ಕೇಂದ್ರ ಸ್ಥಳವೂ ಆಗಿ ಬಳಸಲ್ಪಟ್ಟಿದ್ದು, ಶೇಕ್ಸಪಿಯರನ ಮೆಚ್ಚಿನ ಸ್ಥಳವಾಗಿರಬಹುದು. ವೆನಿಸನ್ನು ಕೇಂದ್ರವಾಗಿಟ್ಟುಕೊಂಡು ಆತ ಬರೆದ ಅತ್ಯುತ್ತಮ ಕಾಮೆಡಿಗಳಲ್ಲಿ ಒಂದಾದ ಮರ್ಚಂಟ್ ಆಫ್ ವೇನಿಸ್ ಎರಡು ಭಿನ್ನ ಕಥಾಮೂಲಗಳಿಂದ ಒಗ್ಗೂಡಿ ಸೃಷ್ಟಿಸಿದ ರಸಪಾಕ. ಅದರಲ್ಲಿಯ ಕ್ಯಾಸ್ಕೆಟ್ ಸ್ಟೋರಿ ಹಾಗೂ ಬಾಂಡ್ ಸ್ಟೋರಿಗಳು ಒಂದಾಗಿ ಇಡಿ ನಾಟಕದ ಸಾರವಾಗಿ ಕಂಗೊಳಿಸುತ್ತದೆ. ವೆನಿಸ್ ನ ಜೊತೆಗೆ ನಾಟಕದಲ್ಲಿ ಬರುವ ಮತ್ತೊಂದು ಪ್ರಧಾನ ಸ್ಥಳ ಬೆಲ್ಮೌಂಟ್. ಅದು ನಾಟಕದ ಇನ್ನೊಂದು ಪ್ರಮುಖ ಪಾತ್ರ ಪೋರ್ಸಿಯಾಳ ಸ್ಥಳ.ವೇನಿಸ್ ವ್ಯಾಪಾರ ವಾಣಿಜ್ಯಗಳಿಗೆ ಸಂಕೇತವಾದರೆ, ಬೆಲ್ಮೌಂಟ್ ಪ್ರೇಮ, ಮತ್ತು ನೆಮ್ಮದಿಯ ಬದುಕಿನ ಶ್ರೇಷ್ಟ ಮೌಲ್ಯಗಳಿಗೆ ಸಂಕೇತವಾಗಿ ನಿಲ್ಲುತ್ತದೆ. ಅದಲ್ಲದೇ ಶೇಕ್ಸಪಿಯರ ಶ್ರೇಷ್ಟ ಸಾಹಿತ್ಯ ಕಲಾಕಾರನಾಗಿ ಸರ್ವಕಾಲಕ್ಕೂ ಯೋಗ್ಯನಾಗುತ್ತಾನೆ. ಬಹುಶಃ ಮಾರ್ಲೋನ “Jew of Malt “ ಶೇಕ್ಸಪಿಯರನ ಈ ನಾಟಕಕ್ಕೆ ಪ್ರೇರಣೆಯಾಗಿರಬಹುದು. ಕಾರಣ ವರ್ಷವೊಂದಕ್ಕೆ ಆ Jew of Malt ನಾಟಕ ಹದಿನೈದು ಸಲದಂತೆ ಪ್ರದರ್ಶನಗೊಂಡಿದ್ದು, ಆ ಕಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಯಹೂದಿ ವಿರೋಧಿ ಅಲೆ ಯುರೋಪಿನಲ್ಲಿ ಜೋರಾಗಿ ಬೀಸಲಾರಂಭಿಸಿತ್ತು. ಜನರ ಆಸಕ್ತಿ, ಅಭಿರುಚಿಗೆ ಹೊಂದುವ ನಾಟಕ ಬರೆಯುವ ಇರಾದೆಯಿಂದ ಶೇಕ್ಸಪೀಯರ ಕ್ರೈಸ್ತ ಸಿದ್ಧಾಂತಗಳನ್ನು ಪ್ರತಿಪಾದಿಸುವ ಯಹೂದಿ ವಿರೋಧಿ ವಿಚಾರಗಳನ್ನು ಬಿಂಬಿಸುವ The Merchant Of Venice ನಾಟಕ ಬರೆದಿರುವಂತೆ ಕಾಣುತ್ತದೆ.
–ನಾಗರೇಖ ಗಾಂವಕರ