ವೈಭವದ ಕೂಟ-ಪ್ಯಾಶನ್ನಿನ ಊಟ ? :ಪಾ.ಮು.ಸುಬ್ರಮಣ್ಯ


ಹಾಗೇ ಸುಮ್ಮನೇ ಏನಾದರೊಂದು ಬರೆಯಬೇಕೆಂದು ಮನಸ್ಸು ತವಕಪಡುತ್ತಿತ್ತು. ವಿಷಯಕ್ಕಾಗಿ ಮನದ ಗಾಳಿಪಟವನ್ನು ಹರಿಯಬಿಟ್ಟೆ.  ಪಟ ನೇರವಾಗಿ ಒಂದು ಅದ್ದೂರಿ ಕಾರ್ಯಕ್ರಮವೊಂದರ ನಡುವೆ ನಿಂತಿತು.  ಸುತ್ತಲೂ ಕಣ್ಣಾಡಿಸಿದೆ.  ವೈಭವಪೂರ್ಣವಾದ ಕಾರ್ಯಕ್ರಮ. ಯಾರೋ ಹಣದಧಿಪತಿಗಳೇ ಈ ಕಾರ್ಯಕ್ರಮದ ಆಯೋಜಕರೆಂದು ಮೇಲ್ನೋಟಕ್ಕೆ ಅನ್ನಿಸಿತು.  ಯಾರಾದರೆ ನನಗೇನು?  ನನಗೆ ಬೇಕಾಗಿರುವ ವಿಷಯ ಸಿಕ್ಕರೆ ಸಾಕು, ಎಂದಂದುಕೊಂಡು ಹುಡುಕತೊಡಗಿದೆ.  ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ವಿಚಾರಗಳಲ್ಲಿ ತೊಡಗಿದ್ದಾರೆನ್ನಿಸಿತು.  ನನ್ನನ್ನಾರು ಗಮನಿಸಲಿಲ್ಲ.  ಮನದ ಪಟ ಅಲೆದಾಟಕ್ಕಿಳಿದಾಗ ಕೇಳಿಯೇಬಿಟ್ಟಿ.  ’ಇಲ್ಲಿ ನನಗೇನು ಕೆಲಸ? ನನ್ನನ್ನು ಇಲ್ಲಿಗೇಕೆ ಕರೆತಂದೆ? ನನಗೆ ಬೇಕಾಗಿರುವುದು ಸಮಾಜದ ಒಳಿತಿಗಾಗಿ ಸಾಮಾನ್ಯ ಪ್ರಜೆಗೆ ತಲುಪಬಹುದಾದಾ ಅವನ ಅಗತ್ಯತೆಗೆ ಬೇಕಾದ ವಿಚಾರ.  ಇಲ್ಲೇನು ಸಿಗುತ್ತದೆ, ಮಣ್ಣಂಗಡ್ಡೆ’ ಎಂದಾಗ ಮನದ ಪಟ ಅಯ್ಯೋ! ಮಂಕುದಿಣ್ಣೆ, ಇಲ್ಲಿರುವವರೆಲ್ಲಾ ಯಾರು ಎಂದುಕೊಂಡೆ? ಇವರೂ ಸಮಾಜದ ಒಂದು ಅಂಗವೇ.  ಸಮಾಜದ ಕಣ್ಣೆ. ಇವರ ವಿಚಾರವನ್ನೇ  ನೀನು ಜನಸಾಮಾನ್ಯನಿಗೆ ತಿಳಿಸಿ ಹೇಳಬೇಕಾಗಿರುವುದು. ಇಲ್ಲಿರುವವರು ಯಾರೂ ಹುಟ್ಟಿನಿಂದ ಹಣದಧಿಪತಿಗಳಲ್ಲ.  (ಲಕ್ಷಾಧಿಪತಿ, ಕೋಟ್ಯಾಧಿಪತಿ ಎನ್ನಲು ಈಗ ಸಾಧ್ಯವಿಲ್ಲ.  ಏಕೆಂದರೆ ಇವರ ಹಣ ಎಷ್ಟೆಂದು ಇವರಿಗೂ ಸಹ ಸರಿಯಾಗಿ ತಿಳಿದಿಲ್ಲ.  ಆದ್ದರಿಂದ ಇವರನ್ನು ಹಣದಧಿಪತಿ ಎಂದೇ  ಕರೆಯುತ್ತೇನೆ.)  ಎಲ್ಲರಂತೆ ಇವರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು.  ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶಕ್ಕೆ ಕಾಲಿಟ್ಟ ನಂತರ ತಮ್ಮ ಹೊಲ ಗದ್ದೆ ಜಮೀನುಗಳಿಗೆ ಬೇಡಿಕೆ ಹೆಚ್ಚಾಗಿ ಅನ್ನ ಕೊಡುತ್ತಿದ್ದ ಜಮೀನುಗಳನ್ನು ಮಾರಿಕೊಂಡರು.  ಕೆಲವರು ಮಣ್ಣನ್ನು ಮಾರಿಕೊಂಡರು(ಮರಳಿನ ರೂಪದಲ್ಲಿ) ಕೆಲವರು ಕಲ್ಲನ್ನು ಮಾರಿಕೊಂಡರು.  ಹಣದ ಹೊಳೆ ಹರಿದು ಬಂತು.  ಕಷ್ಟ ಪಡದೆ ಅನಾಯಾಸವಾಗಿ ಬಂದ ಹಣ ಕೈಯಲ್ಲಿ ಇರುವವರೆಗೂ ಈ ರೀತಿಯ ಅದ್ದೂರಿ ಸಮಾರಂಭಗಳು ನಡೆಯುತ್ತಲೆ ಇರುತ್ತವೆ. ’ಇದೆಲ್ಲಾ ಸರಿ, ನನ್ನನ್ನು ಇಲ್ಲಿಗೇಕೆ ಕರೆತಂದೆ?  ಈ ಪ್ರಶ್ನೆಗೆ ನನಗೆ ಉತ್ತರ ಕೊಡದೆ ಬೇರೇನೋ ಹೇಳುತ್ತ ನನ್ನ ಸಮಯ ಏಕೆ ವ್ಯರ್ಥ ಮಾಡುತ್ತಿರುವೆ?’ ಎಂದು ಮತ್ತೊಮ್ಮೆ ಕೇಳಿದಾಗ, ಮನದ ಪಟ ಅಲ್ಲಿ ನೋಡು ಹೊಟ್ಟೆ ತುಂಬಿದ ಜನ ಊಟ ಮಾಡುತ್ತಿರುವ ಜಾಗ ಅದು ಅಲ್ಲಿ ನಿನ್ನ ಕಣ್ಣನೊಮ್ಮೆ ಹಾಯಿಸು. ಅಲ್ಲಿನ ವಿಶೇಷಗಳನ್ನು ಗುರುತಿಸು, ಅದನ್ನು ಜನಸಾಮಾನ್ಯರಿಗೆ ತಿಳಿಸು.  ಜನಸಾಮನ್ಯರೂ ಇವರಿಂದ ಹೊರತೇನಲ್ಲ.  ಊಟದ ವಿಚಾರದಲ್ಲಿ ಅವರೂ ಇವರೂ ಇಬ್ಬರೂ ಒಂದೇ ಎಂದೆನಿಸುತ್ತೆ. ಎಂದಾಗ ಮನಪಟದ ಉದ್ದೇಶ ನನಗರ್ಥವಾಯ್ತು.  ಅದಕ್ಕೊಂದು ಥ್ಯಾಂಕ್ಸ್ ಎಸೆದು ಬರೆಯಲು ತೊಡಗಿದೆ.  ಅದನ್ನೇ ನಿಮ್ಮ ಮುಂದೆ ಇಡುತ್ತಿದ್ದೇನೆ. 

ಎಲ್ಲಾ ಟೇಬಲ್‌ಗಳಿಗೂ ಛಾವಣಿಯಂತ ಬಿಳಿ ಟೋಪಿ ಏರಿತ್ತು.  ಒಂದು ಬದಿಯಲ್ಲಿ ಬಿಳಿ ಉಡುಗೆಯ ಅಡುಗೆಯವರು ತಲೆಮೇಲೊಂದು ಟೋಪಿ ಧರಿಸಿ ಆಹಾರ ಬಡಿಸಲು ಸಿದ್ಧರಾಗಿದ್ದರು. ಮತ್ತೊಂದು ಬದಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನ ಆಹಾರ ಸವಿಯಲು ಸಿದ್ದರಾಗಿದ್ದರು.  ಕೆಲವರು ಆಗಲೇ ತಮ್ಮ ಬ್ಯಾಟಿಂಗ್ ಶುರು ಮಾಡಿಬಿಟ್ಟಿದ್ದರು.  ನನಗೂ ತಿನ್ನಬೇಕೆಂಬ ಹಂಬಲ ಬಲವಾಗಿದ್ದರೂ ಬಹಳಷ್ಟು ಸ್ವಪ್ರಯತ್ನದಿಂದಲೇ ತಡೆದೆ.  ಏಕೆಂದರೆ ಮಾನ ಮರ್ಯಾದೆಗಳಿಗೆ ಅಂಜುವವನು ನಾನು.  ಹಾಗೇ ಕಣ್ಣಾಡಿಸುತ್ತಾ ನಡೆದೆ.  ಕೆಲವರು ಕುಳಿತು, ಹಲವರು ನಿಂತು ತಿನ್ನುವುದನ್ನು ನೋಡಿದೆ. ನೋಡಿದೆ ಅನ್ನುವುದಕ್ಕಿಂತ ’ಗಮನಿಸಿದೆ’ ಎಂದರೆ ಸೂಕ್ತವೇನೊ ಅನ್ನಿಸುತೆ. ಒಪ್ಪಓರಣವಾಗಿ ತಟ್ಟಿಗಳಲ್ಲಿ ಅಲ್ಲಿ ಮಾಡಿದ್ದ ಎಲ್ಲಾ ಬಗೆಯ ತಿಂಡಿಗಳನ್ನು ಹೊಂದಿಸಿಕೊಂಡು ಹರಟೆಯ ಜೊತೆಗೆ ಸವಿಯಲಾರಂಭಿಸಿದ್ದರು.   ನಾನು ಮನೆಯಲ್ಲಿ ಊಟಮಾಡಿದ್ದನ್ನು, ಅಮ್ಮ ಬಡಿಸಿ ಹೇಳಿದ್ದನ್ನು ಒಮ್ಮೆ ನೆನಪು ಮಾಡಿಕೊಂಡೆ. ಊಟ ಮಾಡುವಾಗ ನಮ್ಮ ಐದು ಕೈಬೆರಳುಗಳು ತಟ್ಟೆಯಲ್ಲಿರುವ ತಿನಿಸುಗಳನ್ನು ಮುಟ್ಟಬೇಕು, ಅಂಗೈ ಸಾರಿನಲ್ಲಿ ನೆನೆಯಬೇಕು ಆಗಲೇ ಅನ್ನಪೂರ್ಣೇಶ್ವರಿಯ ಕೃಪೆ ನಮ್ಮ ಮೇಲಾಗುವುದು. ಅನ್ನಬ್ರಹ್ಮನು ಸಂತುಷ್ಟಗೊಂಡು, ತೃಪ್ತಿಯಾಗುವುದು  ಎಂಬ ಮಾತುಗಳು ನನ್ನ ಮನದಾಳದಲ್ಲಿಂದ ಹೊರಬಂದು ಮತ್ತೊಮ್ಮೆ ಕಣ್ಣು ಅಲ್ಲಿನ ಜನರು ತಿನ್ನುತ್ತಿದ್ದ ಕಡೆಗೆ ಹೊರಳಿತು.

 ಪ್ಯಾಶನ್ನಿಗೆಂಬಂತೆ ಕೇವಲ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಳಸಿ ರುಚಿ ನೋಡುತ್ತ ಕೆಲವರು, ಇನ್ನು ಕೆಲವರು ಸ್ಪೂನ್ ಬಳಸಿ ತಿನ್ನುವ ಶಾಸ್ತ್ರ ಮಾಡುತ್ತಾ ಮಾತಿನಲ್ಲಿ ತೊಡಗಿದ್ದರು.  ಮಾತು ಮುಗಿದ ಕೂಡಲೆ ಕೈಯಲ್ಲಿದ್ದ ತಟ್ಟೆಗಳನ್ನು  ಅದೇ ಟೇಬಲ್ ಮೇಲೋ ಅಥವಾ  ತಟ್ಟೆ ಹಾಕುವ ಡಬರಿಯಲ್ಲೋ ಹಾಕಿ ಹೊರಟುಬಿಡುತ್ತಿದ್ದರು. ಅರೆ, ಯಾಕೆ ಹೀಗೆ? ತಟ್ಟೆಯಲ್ಲಿ ಎಷ್ಟೊಂದು ಆಹಾರ ಇದೆ. ಅದನ್ನೆಲ್ಲ ತಿನ್ನದೆ ಬಿಸಾಡಿ ಹೊಗುತ್ತಿದ್ದಾರಲ್ಲಾ? ಎಂದು ಆಶ್ಚರ್ಯದಿಂದ ನೋಡತೊಡಗಿದೆ.  ಅಷ್ಟರಲ್ಲಿ ಅಲ್ಲಿ ಸ್ವಚ್ಚ ಮಾಡುವ ಹೆಂಗಸೊಬ್ಬಳು ಬಂದು ಅದನ್ನೆಲ್ಲಾ ತೆಗೆದು ಕಸದ ಪಾತ್ರೆಗೆ ಹಾಕಿಕೊಳ್ಳುತ್ತಾ ಏನೋ ಗೊಣಗಿಕೊಳ್ಳತೊಡಗಿದಳು.  ಕಣ್ಣು ಕಿವಿಯನ್ನು ಸ್ವಲ್ಪ ಆ ಕಡೆ ಕೊಟ್ಟೆ.   ಆಕೆಯ ಮುಖದಲ್ಲಿ ಯಾವುದೋ ಬೇಸರ ತುಂಬಿತ್ತು.  ಕಣ್ಣುಗಳು ತಟ್ಟೆಯಲ್ಲಿದ್ದ, ಎಸೆಯಲೇ ಬೇಕಾದ ಆಹಾರದ ಕಡೆ ದಿಟ್ಟಿಸ ತೊಡಗಿದವು.   ಆಸೆ ನಿರಾಸೆಯ ಹೊಯ್ದಾಟದಲ್ಲಿ ನಿರಾಸೆ ವಿಜೃಂಬಿಸತೊಡಗಿತು.   ಏನ್ ಬಂದಿದೆ ಈ ಜನಗಳಿಗೆ, ಒಪ್ಪೊತ್ತು ಊಟ ಇಲ್ದೆ ಸಾಯೋ ನಮ್ಮಂತ ಬಡ ಜನಗಳು, ’ದೊಡ್ಡೋರು’ ಅನ್ನಿಸ್ಕೊಂಡು ಬದುಕ್ತಾ ಇರೋ  ಈ ಮಂದಿಗೆ ಕಾಣಾಕಿಲ್ವಾ?  ತಿನ್ನೋಲ್ಲಾ ಅಂದಮ್ಯಾಕೆ ಆಕಿಸ್ಕೋಬಾರದು. ಆಕಿಸ್ಕೊಂಡ ಮ್ಯಾಕೆ ತಟ್ಟೇಲಿ ಬಿಡಬಾರದು.  ಊರಿಗೆಲ್ಲ ಉಪದೇಸ ಕೊಡೋ ಈ ಮಂದಿನೇ ಹೀಗೆ ಮಾಡಿಬಿಟ್ಟರೆ ಇವರ ಉಪದೇಸಕ್ಕೆ ಏನು ಬೆಲೆ ಬಂತು?  ಅದೇನೊ ಅಂತಾರಲ್ಲ, ’ಮಾಡೋದು ಅನಾಚಾರ; ಮನೆ ಮುಂದೆ ಬೃಂದಾವನ’ ಅನ್ನೊ ಅಂಗಾಯ್ತು.  ಅಷ್ಟರಲ್ಲಿ ಏನಮ್ಮ ಮಾಡ್ತಾ ಇದ್ದೀಯಾ? ಬೇಗಬೇಗನೆ  ಕ್ಲೀನ್ ಮಾಡ್ಕೊಂಡು ಬಾಮ್ಮ.  ಏನು ಮಹಾರಾಣಿತರ ಪೋಸ್ ಕೊಟ್ಟುಕೊಂಡು ನಿಂತುಬಿಟ್ಟಿದ್ದಿಯಲ್ಲಾ, ಎಂಬ ಧ್ವನಿ ಬಂದ ಕಡೆ ತಿರುಗಿ ಏ ತೆಗಿತಾ ಇದ್ದೀನಿ ಇರಣ್ಣ, ನೀನ್ಯಾಕೆ ಇಂಗ್ ಆಡೀಯೇ?  ಎಂದವಳೇ ತನ್ನ ಕೆಲಸದ ಕಡೆ ಗಮನ ಹರಿಸಿದಳು.

 ಇದನ್ನೆಲ್ಲಾ ನೋಡುತ್ತಿದ್ದ ನನಗೆ ಈ ಕೆಲಸದಾಕೆಗೆ ಇರುವಷ್ಟು ’ಕನಿಷ್ಠ ಪ್ರಜ್ಞೆ’ ತಿಳಿದವರು, ಉಪದೇಶ ನೀಡುವವರು, ಸಮಾಜದಲ್ಲಿ ದೊಡ್ಡವರು ಅನ್ನಿಸಿಕೊಂಡು ಡಂಬಾಚಾರದ ಬದುಕನ್ನು ಬದುಕುತ್ತಿರುವ ವಿದ್ಯಾವಂತ ಶ್ರೀಮಂತ ಪ್ರಜೆಗಳಿಗೆ ಇದ್ದು ಬಿಟ್ಟರೆ ನಮ್ಮ ದೇಶ ಒಂದೆರಡು ವರ್ಷದಲ್ಲಿ ಅಭಿವೃದ್ಧಿಯ ಪಥಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲಾ ಎಂದುಕೊಂಡು ಹೊರಬಂದೆ. ಇದು ಕೇವಲ ಒಂದು ಸಮಾರಂಭದ ಉದಾಹರಣೆಯಷ್ಟೆ.  ಇಂತಹ ಅದೆಷ್ಟೋ ಕಾರ್ಯಕ್ರಮಗಳು ದೇಶದ ಪ್ರತಿಯೊಂದು ಮೂಲೆಮೂಲೆಯಲ್ಲೂ, ಕೆಲವಾರು ಸಂಘ ಸಂಸ್ಥೆಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಆಫೀಸು ಕಛೇರಿಗಳಲ್ಲಿ, ಮಠ ಮಾನ್ಯಗಳಲ್ಲಿ ಪ್ರತಿ ದಿನವೂ ನಡೆಯುತ್ತಿರುತ್ತವೆ. ಉಚಿತವಾಗಿ ಸಿಗುತ್ತದೆಂದು ಖಚಿತವಾಗುತ್ತಿದ್ದಂತೆ, ಹೊಟ್ಟೆ ಬೇಡವೆಂದರೂ ಕಣ್ಣು ಬೇಕು ಎನ್ನುವಂತೆ ತಟ್ಟೆಗೆ ಹಾಕಿಸಿಕೊಂಡು ಒಂದೆರಡು ತುತ್ತು ತಿಂದು ಕಸದ ಬುಟ್ಟಿಗೆ ಎಸೆಯುವಂತಹ ಪ್ಯಾಷನ್ನಿನ  ಮನೋಭಾವಗಳು ಬದಲಾಗಬೇಕು.  ಒಂದು ದಿನದ ಕಸದಬುಟ್ಟಿ ಸೇರುವ ಆಹಾರ ಒಂದೆಡೆ ಸೇರಿಸಿದರೆ ಎಷ್ಟೋ ಕುಟುಂಬಗಳ ಆಹಾರ ಸಮಸ್ಯೆಯನ್ನು ನೀಗಿಸಬಹುದಾಗಿದೆ.  ಈ ವಿಚಾರವಾಗಿ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಅನ್ನದ ಕೂಗು ಮುಗಿಲುಮುಟ್ಟುವುದರಲ್ಲಿ ಸಂಶಯವಿಲ್ಲ.  ಈ ಕೂಗು ಕೇವಲ ಅರಣ್ಯ ರೋಧನವಾಗುತ್ತದೆ.  ತುತ್ತು ಅನ್ನಕ್ಕೂ ಕೈ ಚಾಚುವ ಪ್ರಸಂಗ ಬಹುಬೇಗ ಬರುತ್ತದೆ.  ಇವಲ್ಲದರ ನಡುವೆ ನನ್ನನ್ನು ಕಾಡುವ ಪ್ರಶ್ನೆ ತಮ್ಮ ಮನೆಗಳಲ್ಲೂ ಸಹ ಇವರು ಹೀಗೆಯೇ ಮಾಡುತ್ತಾರ? ಆಹಾರವನ್ನು ಕಸದ ಬುಟ್ಟಿಗೆ ಎಸೆಯುತ್ತಾರ? 

ಬಹುಶಃ ಈ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದಲ್ಲವೇ? ಕಾಡಿದ್ದರೆ ನನ್ನ ಶ್ರಮ ಸಾರ್ಥಕ.       


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಫೈವ್ ಸ್ಟಾರ್ ಹೋಟೆಲ್ ಗಳ ಪಕ್ಕದಲ್ಲೆ
ಕೊಳೆಗೇರಿಗಳಿರುತ್ತವೆ. ಉಳ್ಳವರಿಗೂ
ಇಲ್ಲದವರಿಗೂ ಬರೀ ಕಾಂಕ್ರೀಟ್ ಗೋಡೆಯ‍ಷ್ಟೆ
ವ್ಯತ್ಯಾಸ. ಫ್ಯಾಷನ್ ರೂಪದ ಈ ತರಹದ
ಡಂಭಾಚಾರಕ್ಕೆ ಧಿಕ್ಕಾರ!!. ಸಾಮಾಜಿಕ
ಕಳಕಳಿಯ ಲೇಖನ. ಚೆನ್ನಾಗಿದೆ.

ಪಾ.ಮು.ಸುಬ್ರಮಣ್ಯ.ಬ.ಹಳ್ಳಿ.
ಪಾ.ಮು.ಸುಬ್ರಮಣ್ಯ.ಬ.ಹಳ್ಳಿ.
10 years ago

ಧನ್ಯವಾದಗಳು ಅಖಿಲೇಶ್ ರವರೆ

 

2
0
Would love your thoughts, please comment.x
()
x