"ಹಲೋ ?" ಮಾಮೂಲಿಗಿಂತ ತುಸು ಏರಿದ ವಿಶ್ವನ ದ್ವನಿ ಟೆಲಿಫೋನಿನಲ್ಲಿ ಮೊಳಗಿತು.
"ಹೇಗಿತ್ತು ಒಥೆಲೋ ನಾಟಕ"
ಹಿಂದಿನ ದಿನ ನಾಟಕ ನೋಡುವುದಾಗಿ ವಿಶ್ವ ಹೇಳಿದ್ದು ನೆನಪಾಗಿ ಕೇಳಿದೆ.
"ನಾಟಕದ ಮನೆ ಹಾಳಾಯಿತು! ನನ್ನ ಜೀವನ ನಾಟಕದ ದುರಂತ ದೃಶ್ಯ ನೆನ್ನೆ ನಡೆಯಿತು!"
ವಿಶ್ವನ ಧ್ವನಿ ಭಾರವಾಗಿತ್ತು. ಶುದ್ಧ ವೇದಾಂತಿಯ ಮಾತಿನ ಧಾಟಿ ಕಂಡಿತು.
ವಿಶ್ವನ ಮಾತಿಗೆ ವಿವರಣೆ ಬೇಕಾಗಿರಲಿಲ್ಲ. ಅವನು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ ಎಂದು ನನಗಾಗಲೇ ತಿಳಿದುಹೋಗಿತ್ತು! ಎರಡು ದಶಕಗಳ ಸ್ನೇಹದಲ್ಲಿ ವಿಶ್ವನ ವಿಶ್ವದರ್ಶನವಾಗಿತ್ತು.
ನನ್ನ ಟೇಬಲ್ಲಿನ ಆಚೆ ಸಹೋದ್ಯೋಗಿಗಳು ಕುಳಿತಿದ್ದರು. ಅವರು ಕೊಡುತ್ತಿದ್ದ ಮಾಹಿತಿಯನ್ನು ಆಧರಿಸಿ ಸ್ಟೇಟ್‌ಮೆಂಟೊಂದನ್ನು ತಯಾರಿಸುತ್ತಿದ್ದೆ.
"ವಿಶ್ವ ನಾನೀಗ ಬಿಜಿಯಾಗಿದ್ದೇನೆ..ಲಂಚ್ ಟೈಮಿನಲ್ಲಿ ಮಾತಾಡೋಣ"
ವಿಶ್ವನಿಗೆ ಈ ಮಾತಿನಿಂದ ಖಂಡಿತವಾಗಿಯೂ ಬೇಜಾರಾಗುವುದು ಗೊತ್ತಿದ್ದರೂ ಬೇರೆ ದಾರಿ ಇರಲಿಲ್ಲ.
"ಹೌದೌದು ಇಡೀ ಫ್ಯಾಕ್ಟರಿಯನ್ನು ತಲೆಯ ಮೇಲೆ ಹೊತ್ತಿರುವ ಹಿರಣ್ಯಾಕ್ಷ ನೀನು! ಟೈಂ ಇಲ್ಲಾಂತ ಹೇಳ್ತಿದ್ದೀಯಾ..? ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ ಅನ್ನೋ ಜ್ಞಾನಿಗಳ ಮಾತನ್ನು ನೀನಿಂದು ಸತ್ಯ ಮಾಡಿದೆ"
ಹಳೆಯ ಸಿನೀಮಾ ಹಾಡೊಂದನ್ನು ನೆನಸಿಕೊಂಡು ವಿಶ್ವ ಕಟಕಿಯಾಡಿದ.
"ಈಗ ನಾನು ಮಾಡ್ತಿರೋ ಸ್ಟೇಟ್ಮೆಂಟು ನನ್ನ ಬಾಸು ಹಿರಣ್ಯಕಶಿಪುಗೆ ಸಿಗದಿದ್ದರೆ ನನ್ನ ತಲೆಯನ್ನು ಚೆಂಡಾಡುತ್ತಾರೆ..ಐಯಾಂ ಸಾರಿ"
ನನಗೆ ಬೇರೇ ದಾರಿಯೂ ಇರಲಿಲ್ಲ. ಹಿಡಿದಿದ್ದ ಕೆಲಸವನ್ನು ಬಿಟ್ಟು ವಿಶ್ವನ ಮಾತಿಗೆ ಕಿವಿಯೊಡ್ಡಿ ಕೂರುವಂತಿರಲಿಲ್ಲ ಪರಿಸ್ಥಿತಿ. ಈ ವೇಳೆಗಾಗಲೇ ವಿಶ್ವ ತಾನು ಹೆಂಡತಿಯೊಂದಿಗೆ ಜಗಳವಾಡಿರುವುದನ್ನು ಕನಿಷ್ಠ ನಾಲ್ಕಾರು ಜನರ ಬಳಿ ಹೇಳಿರುತ್ತಾನೆ! ವಿಶ್ವನ ಸ್ವಭಾವವೇ ಹಾಗೆ. ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಎದುರು ಸಿಕ್ಕವರಿಗೆ ಹೇಳಿ ಮನಸ್ಸು ಹಗುರ ಮಾಡಿಕೊಳ್ಳುವ ಜಾಯಮಾನದವನು!
ನಾನೂ ವಿಶ್ವ ಒಂದೇ ಕಾರ್ಖಾನೆಯಲ್ಲಿ, ಪುಣ್ಯವಶಾತ್ ಬೇರೆಬೇರೆ ಡಿಪಾರ್ಟುಮೆಂಟುಗಳಲ್ಲಿ ಕೆಲಸ ಮಾಡುತ್ತಿರುವವರು. ಮಧ್ಯಾನ್ಹ ಫ್ಯಾಕ್ಟರಿಯ ಕ್ಯಾಂಟೀನಲ್ಲಿ ಊಟ ಮಾಡುತ್ತಿದ್ದಾಗ ವಿಶ್ವ ಹುಡುಕಿಕೊಂಡು ಬಂದ. ಮುಖದಲ್ಲಿ ಮ್ಲಾನತೆ ಇತ್ತು.
"ಈ ಹರಳೆಣ್ಣೆ ಮುಖ ಹೊತ್ತು ಯಾಕೆ ತಿರುಗುತ್ತಿದ್ದೀಯಾ?" ವಿವರಣೆ ಕೇಳಿದೆ.
"ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ಮಾತನ್ನು ಕೇಳಿದ್ದೀಯಾ?"
"ಇಂತಾ ಪ್ರಸಿದ್ಧವಾದ ಗಾದೆಯನ್ನು ಕೇಳಿಲ್ಲದೆ ಇರುತ್ತೇನೆಯೇ? ಗಂಡ ಹೆಂಡಿರು ಜಗಳವಾಡಿದರೆ ಅವರ ನಡುವಿನ ಪ್ರೀತಿ ಇನ್ನೂ ಹೆಚ್ಚುತ್ತದೆಯಂತೆ! ಇದಕ್ಕೆ ನೂರಾರು ದೃಷ್ಟಾಂತಗಳಿವೆ. ಈ ಮಾತನ್ನ ಮನಶಾಸ್ತ್ರಜ್ಞನರು ಕೂಡಾ ಪುಷ್ಟೀಕರಿಸಿದ್ದಾರೆ" ಗಿಳಿ ಪಾಠದಂತೆ ಒಪ್ಪಿಸಿದೆ.
"ಬುಲ್ಷಿಟ್!" ಕೋಪದಿಂದ ವಿಶ್ವ ಡೈನಿಂಗ್ ಟೇಬಲನ್ನು ಗುದ್ದಿದ! ಆ ಏಟಿಗೆ ಟೇಬಲ್ಲಿನ ಮೇಲಿದ್ದ ರಸಂನ ಬಟ್ಟಲು ಒಂದು ಇಂಚು ಮೇಲೆ ಹಾರಿ ಕೆಳಗಿಳಿಯಿತು!
"ಅದರ ಬದಲು ಅಚ್ಚ ಕನ್ನಡದಲ್ಲಿ ಸಗಣಿ ಎಂದೇಕೆ ಹೇಳಬಾರದೋ ಮಿತ್ರಾ?"
ನನ್ನ ಭಾಷಾ ಪ್ರೇಮವನ್ನು ವ್ಯಕ್ತಪಡಿಸಿದೆ.
"ಗಾದೆ ಮಾತು ಬರೀ ಸುಳ್ಳು! ಬರೀ ಜೊಳ್ಳು!" ತನ್ನ ಮನದಲ್ಲಿದ್ದ ಕಹಿಯನ್ನು ಕಕ್ಕಿದ ವಿಶ್ವ.
"ಉದಾಹರಣೆಗೆ..?" ಬರಿಯ ಮಾತಿಗೆ ಒಪ್ಪುವವನಲ್ಲ ನಾನು.
"ಉದಾಹರಣೆ ನಾನೇ.."
"ಅಂದರೆ ..?" ಅರ್ಥವಾಗದೆ ಕೇಳಿದೆ.
"ಒಟ್ಟಿಗೆ ಎರಡು ಗಾದೆಗಳು ಸುಳ್ಳಾಗಿರುವುದಕ್ಕೆ ನನ್ನ ಬದುಕೇ ಜ್ವಲಂತ ಸಾಕ್ಷಿಯಾಗಿದೆ! ನೆನ್ನೆ ಒಥೆಲೋ ನಾಟಕ ನೋಡಲು ಹೋಗಬೇಕಾಗಿದ್ದ ನಾನು ನನ್ನದೇ ಜೀವನ ನಾಟಕದಲ್ಲಿ ಪಾತ್ರವಹಿಸಬೇಕಾಗಿ ಬಂತು; ನಾನು ವಿಶಾಲೂ ಜಗಳವಾಡಿದೊ" ವಿಶ್ವ ಅಸಲಿ ವಿಷಯ ಹೇಳಿದ.
"ಓಹೋ..ಹೀಗೋ.." ನಾನು ಮೂಗೆಳೆದೆ.
"ಏನು..? ಈ ವಿಷಯ ನಿನ್ನ ಪಾಲಿಗೆ ಅಷ್ಟೊಂದು ಉದಾಸೀನದ ವಿಷಯವಾ ? ವಿಧಾನ ಸಭೆ, ಲೋಕ ಸಭೆಗಳಲ್ಲಿ ಕೂಡ ನಡೆಯದಷ್ಟು ವಾಗ್ವಾದ! ಇಬ್ಬರು ಮಕ್ಕಳೂ ಒಂದೊಂದು ಪಕ್ಷವನ್ನು ವಹಿಸಿಕೊಂಡರು. ಘೋರವಾದ ವಾಗ್ಯುದ್ಧ ನಡೆಯಿತು!"
"ಕಾರಣ" ನನಗೆ ಅದು ಮುಖ್ಯವಾಗಿತ್ತು.
"ನೀನೊಬ್ಬ ಹುಚ್ಚ! ಗಂಡ ಹೆಂಡಿರ ನಡುವೆ ಜಗಳಕ್ಕೆ ಕಾರಣ ಬೇಕೇನೋ ? ನೆನ್ನೆ ನನ್ನ ಬಾಸು ನಂದಿನಿಗೆ (ಕಾಫಿ, ಟೀ ಕುಡಿಯದೆ ಬರೆಯ ಹಾಲು ಕುಡಿಯುವ ಅಭ್ಯಾಸದ ಬಾಸಿಗೆ ಇಟ್ಟ ಅಡ್ಡ ಹೆಸರು) ಸಹಾಯ ಮಾಡೋದಕ್ಕೆ ಹೋಗಿ, ಎಲ್ಲಾ ಮುಗಿದು ಮನೆಗೆ ಮರಳಿದಾಗ ರಾತ್ರಿ ಏಳು ಗಂಟೆಯಾಗಿತ್ತು"
"ಅಷ್ಟಕ್ಕೆಲ್ಲಾ ಜಗಳವಾ?" ನನಗೆ ಅಚ್ಚರಿಯಾಗಿತ್ತು.
"ನೀನು ಮಧ್ಯೆ ಬಾಯಿ ಹಾಕದೆ ಕೇಳೋದನ್ನ ಮೊದಲು ಕಲಿ" ವಿಶ್ವ ಕಹಿಯಿಂದ ಹೇಳಿ ಮಾತು ಮುಂದುವರಿಸಿದ. "ನಾನು ಮನೇಗೆ ಹೋಗೋದ್ರಲ್ಲಿ ವಿಶಾಲೂ ಅಣ್ಣ ಬಂದು ನನಗಾಗಿ ಕಾದು ಹೋಗಿದ್ದನಂತೆ!"
ಸರಿ, ಇನ್ನು ಜಗಳಕ್ಕೆ ಕಾರಣ ತಿಳಿದುಕೊಳ್ಳಬೇಕಾದ ಅವಶ್ಯಕತೆ ನನಗಿರಲಿಲ್ಲ!
"ಅಲ್ಲಾ ಇವಳೇನು ತನ್ನ ಅಣ್ಣನ್ನ ಬಿಲ್ ಗೇಟ್ಸು ಅಂತ ತಿಳಿದುಕೊಂಡಿದ್ಡಾಳೋ ? ನನ್ನ ತಾಪತ್ರಯ ನನಗೆ! ಅವನು ಬಂದಾಗ ನಾನು ಸರಿಯಾದ ಸಮಯಕ್ಕೆ ಬರದೆ ಇದ್ದುದು ಅವಳಿಗೆ ಅವಮಾನವಾಯಿತಂತೆ!"
"ಅಲ್ಲಾ ವಿಶ್ವ, ತನ್ನ ಅಣ್ಣ ಬಂದಿದ್ದನ್ನ ವಿಶಾಲೂ ಫೋನು ಮಾಡಿ ನಿನಗೆ ತಿಳಿಸಿದ್ದರೆ ನೀನೂ ಉದಾಸೀನ ಮಾಡದೆ ಸರಿಯಾದ ಸಮಯಕ್ಕೆ ಮನೆಗೆ ಹೋಗಬಹುದಿತ್ತು ಅಲ್ಲವೆ ?" ಅವನ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಹೆಮ್ಮೆಯಲ್ಲಿ ಹೇಳಿದೆ.
"ಅವಳೇನೋ ಫೋನು ಮಾಡಿದ್ದಳು! ಆಗ ನಾನು ಸಾರಿ ರಾಂಗ್ ನಂಬರ್ ಅಂತ ಹೇಳಿ ಫೋನಿಟ್ಟುಬಿಟ್ಟೆ!" ಅವನ ಮುಖದಲ್ಲಿ ಖಳನಾಯಕನ ಛಾಯೆ ಕಂಡಿತು!
"ಎಂಥ ಕಟುಕನೋ ನೀನು ?"
"ವಿಶಾಲೂನ ಕಟ್ಕೊಂಡು ನನ್ನ ತರಾ ಹತ್ತು ವರ್ಷ ಏಗಿದ್ದರೆ ನನ್ನನ್ನು ಮೀರಿಸಿದ ಕಟುಕ ನೀನಾಗಿರ್ತಿದ್ದೆ"
ವಿಶ್ವನ ಮಾತಿಗೆ ಬೆದರಿದೆ! ಬೆಚ್ಚಿದೆ! ‘ನೀರೊಳಗಿರ್ದು ಬೆಮರ್ದನುರಗ ಪತಾಕಂ’ ಎನ್ನುವಂತೆ! ಇಂತಾ ಜೀವಭಯವನ್ನು ಈವರೆಗೆ ಯಾರೂ ಒಡ್ಡಿರಲಿಲ್ಲ!
"ಇಷ್ಟೆಲ್ಲಾ ಆದ ಮೇಲೆ ಜಗಳ ಆಗದೆ ಇರೋಕೆ ಸಾಧ್ಯವೆ ?"
"ಜಗಳ ಆಗಿದ್ದಕ್ಕೆ ನನಗೆ ಚಿಂತೆ ಇಲ್ಲ. ನನ್ನ ಚಿಂತೆ ಅದರ ಆಫ್ಟರ್ ಎಫೆಕ್ಟ್ಸ್ ಬಗ್ಗೆ! ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಅನ್ನೋ ನಿನ್ನ ಆ ಸುಟ್ಟ ಗಾದೆಯನ್ನು ನಂಬ್ಕೊಂಡ್ರೆ ದೇವ್ರೇ ಗತಿ! ಗಂಧದ ಪರಿಮಳ ಇರಲಿ, ಅದು ಸುತ್ತ ನಾಲ್ಕು ಮನೆಗೆ ಪಸರಿಸುವ ದುರ್ಗಂಧವಾಗದೀತು ಅನ್ನೋ ಚಿಂತೆ ನನ್ನ ಕಾಡ್ತಾ ಇದೆ!"
"ಕಾಲು ಕೆರೆದು ಜಗಳ ಆಡಿ, ಗಾದೆ ಮಾತು ಸುಳ್ಳಾಯಿತು ಅನ್ನೋದು ಯಾವ ನ್ಯಾಯವೋ ?"
ಹಂಗಿಸಿದೆ.
"ಯಾಕೆ ಸುಳ್ಳಾಗಿಲ್ಲ ? ನನ್ನ-ವಿಶಾಲೂ ಜಗಳ ಉಂಡು ಮಲಗಿ. ಎದ್ದು ಎಲ್ಲಾ ಆದರೂ ಇನ್ನೂ ಇಬ್ಬರೂ ಒಂದಾಗಿಲ್ಲ! ಗಾದೆ ಮಾತು ಸುಳ್ಳಾಗಲಿಲ್ಲವೆ? ಬೆಳಿಗ್ಗೆ ಕಲಗಚ್ಚಿನ ಥರಾ ಕಾಫಿ ಮಾಡಿ ಕೊಟ್ಟಳು ?"
"ನೀನೇನು ಮಾಡಿದೆ ?"
"ಮಾಡೋದೇನು ? ಅದನ್ನ ಅವಳ ಎದುರೇ ವಾಷ್ ಬೇಸಿನ್ನಿನಲ್ಲಿ ಸುರಿದೆ"
"ಲೋ ವಿಶ್ವ ಹೋಲ್ಡ್ ಆನ್! ಈ ತರಾ ಹೋದ್ರೆ ಇದಕ್ಕೆ ಕೊನೆ ಎಲ್ಲೋ ?"
ದಿಗಿಲಾಗಿ ಕೇಳಿದೆ!
"ಕೊನೆ..? ಕೊನೆಯೆಲ್ಲಿ ಇರುತ್ತೆ ಇದಕ್ಕೆ ? ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರೋದು. ಮುಂದೆ ಕೇಳು, ನಾನು ಸ್ನಾನ ಮುಗಿಸಿ ಡೈನಿಂಗ್ ಟೇಬಲ್ ಹತ್ರ ಬಂದು ಗಟ್ಟಿಯಾಗಿ ‘ತಿಂಡಿ’ ಅಂದೆ. ‘ಬೆವರು ಸುರಿಸಿ ಮಾಡೋದನ್ನ ತಿಪ್ಪೆಗೆ ಸುರಿಯೋರಿಗೆ ಬೇಯಿಸೋಕೆ ನನಗೇನು ಹುಚ್ಚು ಹಿಡಿದಿಲ್ಲ ಅಂಟ ಹೇಳು ರಾಣಿ’ ಎಂದು ಅಡಿಗೆ ಮನೆಯಿಂದ ಹಂಗಿಸಿದಳು"
"ನೀನೇನು ಮಾಡಿದೆ ?"
"ಮಾಡೋದೇನು ? ಚೇರೊಂದನ್ನು ಒದ್ದು ಬೀಳಿಸಿ ಫ್ಯಾಕ್ಟ್ರಿಗೆ ಬಂದೆ"
ವಿಶ್ವನ ಮಾತಿಗೆ ಮೈಯ್ಯಲ್ಲಿನ ರೋಮಗಳೆಲ್ಲ ರೋಮಾಂಚನದಿಂದ ನಿಮಿರಿ ನಿಂತವು! ಅವನ ರಣೋತ್ಸಾಹಕ್ಕೆ ಬೆಚ್ಚಿದೆ! ಸಣ್ಣಗೆ ಬೆವರಿದೆ! ಮನಸ್ಸಿನಲ್ಲಿ ಅನುಮಾನವೊಂದು ಕೊರೆಯಿತು..ವಿಶ್ವನ ಮಕ್ಕಳು ಪಿಂಕಿ ಮತ್ತು ರಜತ್…ಈಗ ರಾಣಿ ಎಂಬ ಹೊಸ ಹೆಸರು ಕೇಳಿಸಿತಲ್ಲ ? ಯಾರು ಈ ರಾಣಿ ? ಈಕೆಯಿಂದಲೇ ವಿಶ್ವ ಮತ್ತು ವಿಶಾಲೂರ ನಡುವೆ ವಿರಸ ಪ್ರಾರಂಭವಾಗಿರಬಹುದೆ ?
"ವಿಶ್ವಾ…ಈ ರಾಣಿ ಯಾರೋ ?"
"ಓ..ರಾಣೀನಾ..? ನಿಂಗೆ ಹೇಳೋದು ಮರ್ತಿದ್ದೆ. ವಾರದ ಹಿಂದೆ ಎಲ್ಲಿಂದಲೋ ಒಂದು ಬಿಳಿ ಬಣ್ಣದ ಪೊಮರೇನಿಯನ್ ನಾಯಿ ಬಂದು ನಮ್ಮ ಮನೆ ಸೇರಿಕೊಂಡಿದೆ. ಅದರ ಹೆಸರೇ ರಾಣಿ…ಅದೆಂತಾ ತಿಕ್ಕಲು ನಾಯಿ ಅಂದರೆ ವಿಶಾಲೂಗೆ ಬಾಲ ಅಲ್ಲಾಡಿಸುತ್ತೆ…ನನ್ನ ಕಂಡರೆ ಗುರ್ರೆನ್ನುತ್ತೆ…ಅದಕ್ಕೇ ಅದನ್ನ ಕಂಡ್ರೆ ವಿಶಾಲೂಗೆ ತುಂಬಾ ಪ್ರೀತಿ!"
ವಿಶ್ವನ ಮಾತಿಗೆ ಕೊನೆ ಮೊದಲೇ ಇಲ್ಲವೆನಿಸಿತು. ಊಟ ಮಾಡಿದ ಕೈ ಒಣಗುತ್ತಿತ್ತು. ಕ್ಯಾಂಟೀನಿನಲ್ಲಿ ಜನ ಕಮ್ಮಿಯಾಗುತ್ತಿದ್ದರು. ಲಂಚ್ ಟೈಮು ಮುಗಿದಿತ್ತು. ವಿಶ್ವನನ್ನು ಎಚ್ಚರಿಸಿ ಕ್ಯಾಂಟೀನಿನ ಬಾಗಿಲು ಮುಚ್ಚುವುದರಲ್ಲಿ ಈಚೆ ಎಳೆದುಕೊಂಡು ಬಂದೆ!
ಹತ್ತಾರು ಜಾಹೀರಾತುಗಳ ನಂತರ ಮತ್ತೆ ಸುರುವಾಗುವ ಟಿವಿ ಸೀರಿಯಲ್ಲಿನಂತೆ ನನ್ನ ಆಫೀಸಿಗೆ ಬಂದ ನಂತರ ವಿಶ್ವ ಮತ್ತೆ ತನ್ನ ಮತ್ತು ವಿಶಾಲೂರ ಜಗಳದ ಬಗೆಗೆ ಶುರು ಮಾಡಿದ.
"ಎಲ್ಲಾ ಸರಿ ವಿಶ್ವ, ಈಗ ನನ್ನೇನು ಮಾಡೂಂತೀಯಾ ?"
‘ಯಾಕೆ ಹೀಗೆ ಕೊರೀತಿದ್ದೀಯ ?’ ಎಂದು ನೇರವಾಗಿ ಕೇಳಲು ಸಾಧ್ಯವಿಲ್ಲದುದರಿಂದ ಹೀಗೆ ಕೇಳಿದೆ.
"ನೀನಾ..? ಏನು ಮಾಡ್ತೀಯ ಪಾಪ ? ನೀನೇ ಸ್ವತಂತ್ರನಲ್ಲ…ಇನ್ನು ನನಗೇನು ಮಾಡೀಯ?"
"ವಿಶ್ವ, ನನ್ನ ರೇಗಿಸಬೇಡ! ಅತ್ತೆಯ ಮೇಲಿನ ಸಿಟ್ಟು ಕೊತ್ತಿಯ ಮೇಲೆ ಬೇಡ" ಎಂದು ಗದರಿಸಿದೆ.
"ನಿನಗೆ ಯಾಕೆ ಹೇಳ್ತಿದ್ದೀನಿ ಅಂದ್ರೆ… ಮಾತಿಗೊಂದು ಗಾದೆ ಹೇಳ್ತೀಯಲ್ಲ..? ಕನ್ನಡ ನಾಡು, ಸಂಸ್ಕೃತಿ ಅಂತ ನಮಗೆಲ್ಲಾ ಕೊರೆದು ಅಷ್ಟಕ್ಕೂ ತೃಪ್ತಿಯಾಗದೆ ಸಭೆ, ಸಮಾರಂಭಗಳೆಲ್ಲೆಲ್ಲಾ ಕೊರೀತಿರ್ತೀಯಲ್ಲ..? ನೋಡು ನಿನ್ನ ಗಾದೆಗಳ ಕತೆಯನ್ನ!"
ನನ್ನ ಮೇಲೆ ಸೇಡು ತೀರಿಸಿಕೊಳ್ಳುವವನಂತೆ ಹೇಳಿದ.
"ವಿಶ್ವ, ವೇದ ಸುಳ್ಳಾದರೂ ಗಾದೆ ಸುಳ್ಳಾಗೋದಿಲ್ಲವೋ ?" ಅವನ ಅಜ್ಞಾನಕ್ಕೆ ಮರುಗಿ ನುಡಿದೆ.
"ಓ..ಅದಕ್ಕೂ ಒಂದು ಗಾದೆ! ಇದೇ ನನ್ನ ತಗಾದೆ..! ನಿನ್ನ ಗಾದೆಗಳೆಲ್ಲ ಸುಳ್ಳಾದವು ಅಂತ ಹೇಳಿದ್ರೆ..ಅದಕ್ಕೂ ಒಂದು ಗಾದೆ ಹೇಳ್ತಿದ್ದೀಯ"
"ವಿಶ್ವ, ನೀನೊಬ್ಬ ಅಜ್ಞಾನಿ. ಗಾದೆ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಕಂಕುಳಲ್ಲಿ ಮಗು ಎತ್ಕೊಂಡು ಊರೆಲ್ಲಾ ಹುಡುಕಿದ ಹೆಂಗಸಿನಂತೆ ಮಾತಾಡಬೇಡ! ನೀನು ಮದ್ವೆಯಾಗಿ ಎಷ್ಟು ವರ್ಷಗಳಾದುವು ?"
"ಯಾಕೆ ? ಅದಕ್ಕೂ ಒಂದು ಗಾದೆ ಹೇಳ್ತೀಯಾ ?" ಅಣಕಿಸಿದ ವಿಶ್ವ.
"ಇಲ್ಲ. ಈ ಹತ್ತು ವರ್ಷಗಳಲ್ಲಿ ನೀನೂ ವಿಶಾಲೂ ಎಷ್ಟು ಸಲ ಜಗಳ ಆಡಿದ್ದೀರಿ ?"
"ನಿನ್ನ ತಲೆಯಲ್ಲಿರುವ ಬಿಳಿ ಕೂದಲಿನಷ್ಟು ಸಂಖ್ಯೆಯಷ್ಟು ಸಲ" ಎನ್ನುತ್ತಾ ಗಹಗಹಿಸಿ ನಗುತ್ತಾ ಪೂರಾ ಬೆಳ್ಳಗಾದ ನನ್ನ ತಲೆಯತ್ತ ಕೈತೋರಿಸಿದ.
"ಸರಿ, ಲೆಕ್ಕವಿಲ್ಲದಷ್ಟು ಸಲ ಜಗಳವಾಡಿದ್ದೀರಲ್ಲವೆ ? ಅದರೂ ಒಟ್ಟಿಗೆ ಜೀವನ ಮಾಡ್ತೀರಲ್ಲವೆ ? ನಿಮಗಿಬ್ಬರು ಮಕ್ಕಳಾಗಿವೆಯಲ್ಲವೆ ? ಗಂಡ-ಹೆಂಡಿರ ಜಗಳ ಉಂಡು ಮಲಗುವವರೆಗೆ ಅಲ್ಲದಿದ್ದರೆ..ಈ ಕಾಲಕ್ಕೆ ಸಮೃದ್ಧವೆನಿಸುವ ಸಂತಾನದ ಬಗೆಗೆ ಏನು ಹೇಳ್ತೀಯ ? ಮೊನ್ನೆ ಎರಡು ಸಾವಿರವೋ…ಮೂರು ಸಾವಿರವೋ ತೆತ್ತು ಟಿಕೇಟು ತಗೊಂದು ‘ಆದರ್ಶ ದಂಪತಿ’ ಕಾರ್ಯಕ್ರಮಕ್ಕೆ ಹೋಗಿ ಕೈತುಂಬಾ ಗಿಫ್ಟು ತಗೊಂಡು ಬಂದ್ರಲ್ಲಾ? ಅದಕ್ಕೇನು ಹೇಳ್ತೀಯಾ ? ‘ಗಂಡ-ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಅಲ್ಲವೇನೋ ?"
ವಿಶ್ವನ ಅಣಕಕ್ಕೆ ನಾನು ಪ್ರತಿಕ್ರಿಯೆ ತೋರದೆ ಅತ್ಯಂತ ಸಮಾಧಾನ ಚಿತ್ತದಿಂದ ವಿವರಣೆ ನೀಡಿದೆ.
ವಿಶ್ವ ಕುಳಿತಲ್ಲೇ ಚಡಪಡಿಸಿದ. ನನ್ನ ಮಾತನ್ನು ಮಧ್ಯದಲ್ಲೇ ತುಂಡಿರಿಸಲು ಪ್ರಯತ್ನಿಸಿದರೂ ನಾನು ಅವಕಾಶ ನೀಡಿರಲಿಲ್ಲ!
"ಚೆನ್ನಾಗಿ ಮಾತಾಡೋಕೆ ಬರುತ್ತೇಂತ ಬಾಯಿ ಮುಚ್ಚಿಸೋ ಪ್ರಯತ್ನ ಬೇಡ! ನನ್ನ ವಿಶಾಲೂ ಜಗಳ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯ ಆ ರಾಣಿ ಬೇರೆ ಸೇರ್ಕೊಂಡಿರೋದ್ರಿಂದ ನಿನ್ನ ಗಾದೆ ಮಾತು ನಿಜ ಆಗುವ ಸಾಧ್ಯತೆ ಇಲ್ಲ. ಸುಮ್ಮನೆ ಒಪ್ಪಿಕೋ ಗಾದೆ ಮಾತು ಬರೀ ಸುಳ್ಳು"
ವಿಪರೀತ ಮತಗಳ ಅಂತರದಿಂದ ಠೇವಣಿ ಕಳೆದುಕೊಂಡ ಮರು ಎಣಿಕೆಗೆ ಅಪೀಲು ಮಾಡುವ ಅಭ್ಯರ್ಥಿಯಂತೆ ವಿಶ್ವ ಮತ್ತೆ ವಾದ ಹೂಡಲು ಪ್ರಯತ್ನಿಸಿದ.
ಆಚೆಯಿಂದ ನನ್ನ ಡಿಪಾರ್ಟ್ಮೆಂಟಿನ ಸ್ಟಾಫ್ ಒಬ್ಬರು ಓಡಿ ಬಂದು, "ಸಾರ್, ಜಿ.ಎಮ್ಮು ಸಾಹೇಬ್ರು ಇತ್ಲಾಗೇ ಬರ್ತಾ ಅವ್ರೆ!" ಎಂದು ಅವಸರದಿಂದ ತಮ್ಮ ಸೀಟಿಗೆ ತೆರಳಿದರು.
"ಶಿವ ಪೂಜೇಲಿ ಕರಡಿ ಬಿಟ್ಟ ಹಾಗೆ ಈಗ ಇವರು ಯಾಕೆ ಬಂದರು ?" ಎಂದು ಸ್ವಗತ ಹೇಳಿಕೊಂಡು ನಂತರ ವಿಶ್ವನಿಗೆ ಹೇಳಿದೆ. "ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೇನು ? ನನ್ನ ಡಿಪಾರ್ಟ್ಮೆಂಟಿಗೆ ಬಂದ ಜಿ.ಎಮ್ಮು ನಿನ್ನ ಡಿಪಾರ್ಟ್ಮೆಂಟಿಗೂ ಬರುತ್ತಾರೆ…ಅದಕ್ಕೂ ಮುಂಚೆ ನೀನು ಅಲ್ಲಿ ಸೇರುವುದು ಒಳ್ಳೆಯದು"
ಎಂದು ಮಾತಿಗೆ ತೆರೆ ಎಳೆದೆ.
"ನಾನು ಸೋತೆ ಅಂತ ತಿಳೀಬೇಡ…ನಿನ್ನ ಗಾದೆಗಳನ್ನ ಸುಳ್ಳು ಮಾಡಿಯೇ ತೋರಿಸ್ತೀನಿ" ಎಂದು ನುಣ್ಣಗೆ ಬೋಳಿಸಿದ, ಮೀಸೆ ಇರಬಹುದಾದ ಖಾಲಿ ಜಾಗದಲ್ಲಿ ಕೈಯಾಡಿಸುತ್ತಾ ವಿಶ್ವ ಎದ್ದು ಹೋದ!
-ಎಸ್.ಜಿ.ಶಿವಶಂಕರ್
*****
sogasagide! thili hasya sulalithavagi thili nageyannu tharisuthade