ಸತತವಾಗಿ ಹತ್ತು ವರ್ಷ ಯಾವುದೋ ಖಾಸಗಿ ವಿದೇಶಿ ಕಂಪನಿಗೆ ಜೀತದಾಳಾಗಿ ದುಡಿದ ಮೇಲೆ ಯಾಕೋ ಬೇಸರ, ಒಂಟಿತನ, ಜಿಗುಪ್ಸೆ ನಿತ್ಯ ನೋಡೋ ಮಾನಿಟರ್ ಗಿಂತ ಹತ್ತಿರವಾಗಿ ಕಾಣುತ್ತಿತ್ತು. ಟ್ರಾಫಿಕ್ ಜಾಮ್ ನಲ್ಲಿ ನಿಂತಾಗ ನಮ್ಮೂರು ಜಾತ್ರೇಲಿ ನಿಂತ ನೆನಪು, ಯಾರದೋ ಬೈಕ್ ಹಿಂದಿನಿಂದ ಹಾರ್ನ್ ಮಾಡಿದಾಗ ನಮ್ಮೂರ ಗಣೇಶ ಹಬ್ಬ ದಲ್ಲಿ ಹೊಡೆದ ತಮಟೆ ಸದ್ದಿನ ಹಾಗೆ ಭಾಸವಾಗುತ್ತಿತ್ತು. ಆರಂಭದ ದಿನಗಳಲ್ಲಿ ಇಷ್ಟವಾಗುತಿದ್ದ ಮಾಲ್ಗಳು ಹೀಗೇ ಮಾಮೂಲಿಯಾಗಿ ಕಾಣುತ್ತಿವೆ. ಬೆಂಗಳೂರಿನ ದೆವ್ವಗಳೆಲ್ಲ ಒಂದು ಕಡೆ ಸೇರಿ ಜೋರಾಗಿ ಸಡ್ಡು ಮಾಡಿ ಕುಣಿದಾಡೊ ಜಾಗ ‘ಪಬ್’ ಗಳನ್ನ ನೋಡಿದಾಗ ಅಹಸ್ಯದ ನಗೆ ಬೀರುತ್ತೆ. ಜನರೇಶನ್ ಗ್ಯಾಪ್ ಅಂತ ಕುಂಟು ನೆಪ ಹೇಳಿಕೊಂಡು ಅನಾಗರಿಗರಾಗಿ ವರ್ತಿಸೋ ಯುವಕ ಯುವತಿಯವರಿಗೆ ಬೆಂಗಳೂರು ಕಾಸಿಗೆ ಸಿಗುವ ಸ್ವರ್ಗ. ಈ ಕೃತಕ ಬದುಕಿಗೆ ತಾತ್ಕಾಲಿಕವಾಗಿ ರೆಜೆ ಮಾಡಿ ಹುಟ್ಟೂರಿನಲ್ಲಿ ನೆಮ್ಮದಿಯಾಗಿ ಒಂದು ವಾರ ಕಳೆಯಲು ಬಂದೆ.
ಹಳ್ಳಿ ವಾತಾವರಣ ಕಣ್ಣಿಗೆ ಸಾಕು ಎನ್ನಿಸುವಷ್ಟು ನಿದ್ರೆಯನ್ನು ಧಾರೆ ಎಳೆದಿತ್ತು. ಅಮ್ಮ ನನ್ನ ಕೊಣೆ ಯಲ್ಲಿ ಕಾಫಿ ಇಟ್ಟು ಸುಮಾರು ಘಂಟೆಗಳೇ ಉರುಳಿತ್ತು ಅನ್ನಿಸುತ್ತೆ. ಕಾಫಿ ಅದಾಗಲೇ ತಣ್ಣಗೆ ಆಗಿತ್ತು. ನಾಲ್ಕೈದು ನೊಣಗಳಿಗೆ ಅದು ಸ್ವಿಮ್ಮಿಂಗ್ ಪೂಲ್ ಬೇರೆ ಆಗಿತ್ತು. ಪ್ರಾಣಾಪಾಯದಲ್ಲಿದ್ದ ನೊಣಗಳನ್ನು ಪಾರು ಮಾಡಿ ತಣ್ಣಗಾದ ಕಾಫಿಯನ್ನು ಅಮ್ಮನಿದ್ದ ಅಡುಗೆ ಕೋಣೆಯ ಕಡೆಗೆ ನೆಡೆದೆ. ಲೋಟದಲ್ಲಿದ್ದ ಕಾಫಿ ನೋಡಿ ಅಮ್ಮ “ಯಾಕೆ ಕುಡಿದಿಲ್ಲ? ಕಾಫಿ ಟೀ ಕುಡಿಯೋದು ಬಿಟ್ಟಿದ್ಯ” ಎಂದಳು. ನಾನು ಇಲ್ಲ ತಣ್ಣಗಾಗಿದೆ, ನೀ ನನ್ನ ಕೋಣೆಯಲ್ಲಿ ಇಟ್ಟು ಸುಮಾರು ಹೊತ್ತೇ ಆಗಿರಬೇಕು ಅಂದೆ. ಅದಕ್ಕೆ ಅಮ್ಮ ಬರೀ ನಾನಿಟ್ಟ ಕಾಫಿ ಅಲ್ಲ , ನಾ ಹಡೆದ ಮಗನ ವಯಸ್ಸು ಕೂಡ ಹೀಗೆ ಹಾಗಿದೆ. ಬರೋ ಆಗಸ್ಟ್ ಗೆ ನೀನು 31 ತುಂಬಿ 32 ಕ್ಕೆ ಬೀಳ್ತಿಯಾ ಆಗ ಹುಡುಗಿಯರ ಕಡೆಯವರು ನಿನ್ನನ್ನು ಈ ರೀತಿ ತಣ್ಣಗಾದ ಕಾಫಿ ಥರಾನೇ ದೂರ ತಳ್ತಾರೆ ಹುಷಾರು ಎಂದಳು. ಪರ್ವಾಗಿಲ್ಲ ಬೆಂಗಳೂರಿನಲ್ಲಿ ಜನ ಕೋಲ್ಡ್ ಕಾಫಿ ನ ಕೂಡ ಇಷ್ಟ ಪಡ್ತಾರೆ ಅಂತ ಇಂದು ಮುಂದು ನೋಡದೆ ನೊಣಗಳನ್ನು ಆಚೆ ಎಸೆದಿದ್ದ ಕಾಫಿನ ಎರಡೇ ಗುಟುಕಿಗೆ ಹೊಟ್ಟೆಗೆ ಇಳಿಸಿದೆ.
ಅಮ್ಮನ ಬಳಿ ಮಾತಿನ ಯುದ್ಧ ಗೆದ್ದ ನಾನು ಸೀದಾ ನೆಡೆದ್ದದ್ದು ದನಗಳ ಕೊಠಡಿಯ ಕಡೆಗೆ. ನಾನು ಶಾಲಾ ದಿನಗಳಲ್ಲಿ ಉಪಯೋಗಿಸುತ್ತಿದ್ದ ಸೈಕಲ್ ಅನಾಥವಾಗಿರೋದನ್ನ ನೋಡಿ ಕೊಂಚ ಮನಸ್ಸಿನಲ್ಲಿ ಕಸಿ ವಿಸಿ ಉಂಟಾಯಿತು. ಸೈಕಲ್ ಇನ್ನೂ ತುಳಿಯುವ ಸ್ಥಿತಿಯಲ್ಲೇ ಇತ್ತು. ನನ್ನ ಅಕ್ಕನ ಮಕ್ಕಳು ರಜೆಗೆಂದು ಬಂದಾಗ ಅವರಿಗೆ ಇದೆ ಆಟ ಸಾಮನೆಂದು ಅಮ್ಮ ಫೋನ್ ಮಾಡಿ ನನಗೆ ಹೇಳುತ್ತಿದ್ದದ್ದು ನೆನಪಾಯ್ತು. ಪಾದಕ್ಕೆ ಚಪ್ಪಲಿ ಏರಿಸಿ ಸೈಕಲ್ ಹತ್ತಿ ಹೊರಟೆ.
ನಾರಾಯಣಕೆರೆ ದಾಟಿ ಕಲಕುಂಟೆ ಅಗ್ರಹಾರಕ್ಕೆ ಹೋಗಿ ನಾ ಓದಿದ ಸ್ಕೂಲು ಬಳಿ ಸ್ವಲ್ಪ ಕಾಲ ಕಳೆದು, ಗಣೇಶನ ಗುಡಿಯ ಬಳಿ ಸ್ವಲ್ಪ ಹೊತ್ತು ಮೌನಿಯಾಗಿ ಕೂತು ನಂತರ ಯಟ್ಟಕೋಡಿ ಹಾದಿ ಹಿಡಿದು ಚಿಕ್ಕ ತಿರುಪತಿ ಗೆ ಬಂದು ದರ್ಶನ ಪಡೆದು ಲಕ್ಕೂರು ಹಾದಿ ಹಿಡಿದು ಬರಗೂರು ದಾಟಿ ಇನ್ನೇನು ಊರು ಬಂತು ಅನ್ನುವಷ್ಟರಲ್ಲಿ ನನ್ನ ಸೈಕಲ್ ನ ಹಿಂದಿನ ಚಕ್ರ ಬ್ಲಾಸ್ಟ್ (ಬಾಯಿ ತೆರೆದಿತ್ತು). ಛೇ, ಒಳ್ಳೆ ಕೆಲಸ ಆಯ್ತಲ್ಲ ಅಂತ ಸೈಕಲ್ ತಳ್ಳಿಕೊಂಡು ಬರುವ ಹಾದಿಯಲ್ಲೇ ವೆಂಕ್ಟಣ್ಣ ನ ಸೈಕಲ್ ಶಾಪ್ ತೆರೆದಿತ್ತು. ನಾನು ಸ್ಕೂಲು ಹೋಗುವ ದಿನಗಲ್ಲಿ ತುಂಬಾ ರಿಪೈರಿಗೆ ಬಂದ ಸೈಕಲ್ ಗಳು ಹಾಗು ಕಸ್ಟಮರ್ಸ್ ಇದ್ದ ಶಾಪ್ ಹೀಗ ಖಾಲಿ ಖಾಲಿಯಾಗಿ ಬಿಟ್ಟಿದೆ. ಇಲ್ಲಿ puncture ಹಾಕಲಾಗುತ್ತದೆ ಎಂಬ ಬೋರ್ಡ್ ತುಕ್ಕು ಹಿಡಿದು ಅರ್ಧ ಗಾಳಿಯ ದಾಳಿಗೆ ಶರಣಾಗಿ ಅರ್ಧ ಭೂಮಿಯ ಕಡೆ ಇನ್ನರ್ಧ ಬಾನಿನ ಕಡೆ ನೋಡುತ್ತಿದೆ.
ತುಂಬಾ ವಿಚಾರ ಮುಕ್ತನಾಗಿ ನಾಲ್ಕು ರೋಡು ಸಂಧಿಸೋ ಸರ್ಕಲ್ ನನ್ನೇ ನೋಡುತ್ತಾ ಕೂತಿದ್ದ ವೆಂಕ್ಟಣ್ಣನಿಗೆ ನಾ ಬಂದದ್ದು ಅರಿವಿಗೆ ಬರಲಿಲ್ಲ. ನಾನು ಹತ್ತಿರ ಹೋಗಿ “ವೆಂಕ್ಟಣ್ಣ , ಚೆನ್ನಾಗಿದ್ದೀರ ಅಂದೆ”. ಅದಕ್ಕೆ ವೆಂಕ್ಟಣ್ಣ ‘ಹಾ ಚೆನ್ನಾಗಿದ್ದೀನಿ….ಯಾರು ಅಂತ ನೆನಪಿಗೆ ಬರ್ತಾ ಇಲ್ಲ’ ಅಂದ. ನಾನು ನನ್ನ ಪೂರ್ತಿ ಪರಿಚಯ ಮಾಡಿಕೊಂಡ ಮೇಲೆ ವೆಂಕ್ಟಣ್ಣ ‘ಒಹ್ ಹೀಗ ನೆನಪಿಗೆ ಬಂತು, ತುಂಬಾ ಓದ್ಕೊಂಡು ಬೆಂಗಳೂರಿಗೆ ಹೋದವ ತಾನೇ ನೀನು…ಸಂತೋಷ ಸಂತೋಷ ಎಂದು ನಕ್ಕ.
ಸೈಕಲ್ ಕೆಟ್ಟಿದ್ಯಾ ಎಂದ.
ಹೂ ವೆಂಕ್ಟಣ್ಣ, ಹಿಂದಿನ ಚಕ್ರ ಬಾಯಿ ಬಿಟ್ಟಿದೆ ಅಂದೆ.
ಅದಕ್ಕೂ ನನ್ ಥರ ವಯಸ್ಸಾಯ್ತು ನೋಡು ಎಂದು ಹಲ್ಲಿಲ್ಲದ ಬಾಯನ್ನು ತೆರೆದು ಜೋರಾಗಿ ನಕ್ಕು ತನ್ನ ಕನ್ನಡಕ ಸರಿಮಾಡಿಕೊಂಡು ನನ್ನ ಸೈಕಲ್ ಕಡೆ ನೆಡೆದ.
ಅದೇ ಹಳೆ ಕೋಟ್, ಅಲ್ಲಲ್ಲೇ ತೂತು ಬಿದ್ದಿದ್ದರೂ ವೆಂಕ್ಟಣ್ಣ ನನ್ನ ಸದಾ ಬೆಚ್ಚಗಿಡುವ ಕೋಟ್ ಅದಾಗಿತ್ತು. ನನಗೆ ನೆನಪು ಬಂದ ದಿನದಿಂದ ವೆಂಕ್ಟಣ್ಣ ಈ ಕೋಟ್ ಬಿಟ್ಟು ಬೇರೆ ಯಾವ ವಸ್ತ್ರದಲ್ಲಿ ನಾನು ನೋಡೇ ಇಲ್ಲ. ಕೋಟ್ ಗೆ ಹೊಂದಿಕೊಳ್ಳುವಂತೆ ಒಂದು ಬ್ಲಾಕ್ ಪ್ಯಾಂಟ್. ಇತ್ತೀಚಿಗೆ ಕನ್ನಡಕ ಧರಿಸಿದ್ದಾನೆ. ವಯಸ್ಸು ಸುಮಾರು 80 ರ ಆಸು ಪಾಸು. ತನ್ನ ಈ ಕೆಲಸವನ್ನು ವೆಂಕ್ಟಣ್ಣ ಇಷ್ಟಪಡುವಷ್ಟು ನನ್ನ ತಾಲೂಕಿನಲ್ಲಿ ಯಾವ IAS ಆಫೀಸರ್ ಕೂಡ ಇಷ್ಟಪಡೋದಿಲ್ಲ. ಯಾಕೆ ಅಂತ ಕೇಳಿದ್ರೆ “ನಾನು ಮಾತನಾಡದ ಗಾಡಿಗಳ ಆರ್ಥನಾದ ತಿಳಿದು ಚಿಕಿತ್ಸೆ ಕೊಡೊ ಡಾಕ್ಟ್ರು ಕಣಪ್ಪ” ಅಂತಾರೆ. ವೆಂಕ್ಟಣ್ಣ ನಿಗೆ ಈ ಸೈಕಲ್ ಶಾಪ್ ಮನೆ ಹಾಗು ಆಫೀಸ್ ಕೂಡ…ತಾನು ಬಿಚ್ಚಿಟ್ಟ ಚಕ್ರಗಳೇ ತಲೆದಿಂಬುಗಳು ಹಾಗು ಟ್ಯೂಬ್ ಗಳೇ ಹಾಸಿಗೆ , ತನ್ನ ಕೋಟ್ ಹೊದಿಕೆ.
ಈ ಚಕ್ರ ತುಂಬಾ ವೀಕ್ ಆಗಿದೆ ಕಣಪ್ಪ, ಇದು ಜಾಸ್ತಿ ದಿನ ಗುಡುಗೋದಿಲ್ಲ ಚೇಂಜ್ ಮಾಡ್ಬೇಕು ಚಕ್ರನ ಅಂದ ವೆಂಕ್ಟಣ್ಣ. ಚೇಂಜ್ ಮಾಡು ವೆಂಕ್ಟಣ್ಣ ಆಗದ್ರೆ ಅಂದೆ. ಸೊಂಟದ ಮೇಲೆ ಒಂದು ಕೈಯಿಟ್ಟು ಮೇಲಕ್ಕೆ ಎದ್ದ ವೆಂಕ್ಟಣ್ಣ ಹೊಸ ಚಕ್ರ ತಂದು ಜೋಡಿಸುತ್ತಿದ್ದ. ನಾನು ನನ್ನ ಕೈನಲ್ಲಿ ಸಾಧ್ಯವಾಗುವಷ್ಟು ಸಹಾಯ ಮಾಡುತ್ತಿದ್ದೆ.ಬ್ಯಾಡ ಬಿಡೋ ಮಾರಾಯ ನಾ ಮಾಡ್ತೀನಿ, ನೀವು ತುಂಬಾ ಓದ್ಕೊಂಡಿರೋರು ಕೈ ಮಸಿ ಮಾಡ್ಕೊಬಾರದು ಅಂತಿದ್ದ. ಪರವಾಗಿಲ್ಲ ವೆಂಕ್ಟಣ್ಣ ನಾನು ನಿಮ್ ಥರ ಡಾಕ್ಟ್ರು ಆಗ್ಬೇಕು ಎಂದಾಗ ಗಿಳ್ಳನೆ ನಕ್ಕು ಬಿಡುತ್ತಿದ್ದ.
ಹೊಸ ಚಕ್ರ ಹೇರಿಸಿದ ಮೇಲೆ ಸೈಕಲ್ ನ ರಂಗು ಬದಲಾಯಿತು. ಎಷ್ಟಾಯ್ತು ವೆಂಕ್ಟಣ್ಣ ಅಂದೆ. ಚಕ್ರ ಗೆ 200 + ನಂಗೆ 20 ಕೊಡಪ್ಪ ಅಂದ. ನಾನು 200 ವೆಂಕ್ಟಣ್ಣ ನ ಕೈನಲ್ಲಿ ಇಟ್ಟೆ. ವೆಂಕ್ಟಣ್ಣ ದುಡ್ಡನ್ನು ಕಣ್ಣಿಗೆ ಹೊತ್ತಿ ತನ್ನ ಡಬ್ಬಿನಲ್ಲಿ ಇಟ್ಟುಕೊಂಡ. ಒಳ್ಳೆ ಕಂಪನಿ ಚಕ್ರ ಅದು , ಏನಿಲ್ಲ ಅಂದ್ರು ಎರಡು ವರ್ಷ ಬಾಳಿಕೆ ಬರುತ್ತೆ ಎಂದ. ನಾನು ಏನು ಮಾತಾಡಲಿಲ್ಲ.ವೆಂಕ್ಟಣ್ಣ ಮಾತು ಮುಂದುವರಿಸಿ ಶಿವಾಜಿ ನಗರದ ಬಾಸಿಂ ಭಾಯ್ ಅಂಗಡೀಲಿ ತಂದಿದ್ದು ಒಳ್ಳೆ ಮಾಲ್ ಅದು ಎಂದ.
ನೀವೇ ಶಿವಾಜಿ ನಗರಕ್ಕೆ ಹೋಗ್ತೀರಾ ಅಂದೆ.
ಹೂ ಕಣಪ್ಪ ಕೊನೆ ವರ್ಷ ಹೋಗಿದ್ದೆ. ಈ ವರ್ಷ ಇನ್ನೂ ಹಳೆ ಪಾರ್ಟ್ಸ್ ಇದಾವೆ ಹೋಗೋ ಅವಶ್ಯಕತೆ ಅಂತ ತನ್ನ ಕನ್ನಡಕ ಸರಿ ಮಾಡ್ಕೊಂಡು warehouse ನೋಡಿಕೊಂಡ. ನಾನು ಸರಿ ವೆಂಕ್ಟಣ್ಣ ಟೈಮ್ ಆಯ್ತು ಬರ್ತೀನಿ ಅಂದೆ. ಹೂ ಸರಿ ಕಣಪ್ಪ ಅಂದ. ಸೈಕಲ್ ಹತ್ತು ಮೀಟರ್ ತುಳಿದು ಸರ್ಕಲ್ ಹತ್ರ ನಿಲ್ಲಿಸಿ ಮತ್ತೆ ವೆಂಕ್ಟಣ್ಣ ನ ಕಡೆ ನೋಡಿದೆ. ಅದೇ ಚಿಂತಾ ಮುಕ್ತನಾಗಿ ಸರ್ಕಲ್ ನನ್ನೇ ದಿಟ್ಟಿಸಿ ನೋಡ್ತಾ ಇದಾನೆ. ಸೈಕಲ್ ಮನೆ ಕಡೆ ಗುಡುಗಿಸಿದೆ.
ಹೀಗೆ ನಾಲ್ಕು ದಿನ ಊರಲ್ಲೇ ಕಳೆದೆ. ಅಮ್ಮ ಅವತ್ತು ಅಪ್ಪನ ಕೂಡ ಸೈಕಲ್ puncture ಅಂಗಡಿ ವೆಂಕ್ಟಣ್ಣ ಹೋಟೆಲ್ನಲ್ಲಿ ಊಟ ಮಾಡ್ತಿದಾನೆ ಇತ್ತೀಚಿಗೆ ಅಂದ್ಲು. ಒಳ್ಳೆ ವ್ಯಾಪಾರ ಆಗ್ತಿರ್ಬೇಕು ಎಂದ ಅಪ್ಪ. ಈ ಊರಲ್ಲಿ ಎಣಿಸಿದ್ರೆ ನಾಲ್ಕು ಸೈಕಲ್ ಇಲ್ಲ , ಯಾವ ಸೀಮೆ ವ್ಯಾಪಾರ ಆಗಿರ್ತದೆ ಅಂದಳು ಅಮ್ಮ.ಹೋಗ್ಲಿ ಬಿಡೆ ಕಂಡೋರ ಬಗ್ಗೆ ಮಾಡನಾಡದೇ ತಿಂದದ್ದು ಅರಗೋದೇ ಇಲ್ಲ ಅನ್ಸುತ್ತೆ ನಿಮ್ ಹೆಂಗಸರಿಗೆ ಅಂದ ಅಪ್ಪ. ಸಿಡುಕ್ಮಾರ್ ಸಿದ್ದ ಅಂದ ಅಮ್ಮ ಅಡುಗೆ ಮನೆ ಕಡೆ ಹೊರಟಳು.
ನನಗೆ ಕುತೂಹಲ ಹೆಚ್ಚಿತು. ಅಮ್ಮ ಇದ್ದ ಅಡುಗೆ ಮನೆ ಕಡೆ ನೆಡೆದೆ. ವೆಂಕ್ಟಣ್ಣ ಊಟಕ್ಕೆ ಏನ್ ಮಾಡ್ಕೋತಾನೆ ಹಾಗಾದ್ರೆ ಅಂದೆ. ಅದಕ್ಕೆ ಅಮ್ಮ ನಮ್ಮೂರಲ್ಲಿ ಮೀನು ಹಿಡೀತಾನೆ , ಸ್ವಲ್ಪ ಹಸಿ ಮೀನು ಸುಟ್ಟಿ ತಿಂತಾನೆ ಇನ್ನೂ ಸ್ವಲ್ಪ ಮೀನು ಬಿಸಿಲಿಗೆ ಹಾಕಿ ಕರಿಮೀನು ಮಾಡಿ ತಿಂತಾನೆ ಅಂದ್ಲು ಅಮ್ಮ. ಪಾಪ ವಯಸ್ಸಾಗಿದೆ ಯಾರಾದರೂ ಊಟಕ್ಕೆ ಸಹಾಯ ಮಾಡೋದು ತಾನೇ ಅಂದೆ. ವೆಂಕ್ಟಣ್ಣ ನಿಗೆ ಸ್ವಾಭಿಮಾನ ಜಾಸ್ತಿ ಹಂಗೆಲ್ಲಾ ಬೇರೆ ಯವರ ಬಳಿ ಕೈ ಚಾಚೋನಲ್ಲ ಅಂದ್ಲು ಅಮ್ಮ.
ವೆಂಕ್ಟಣ್ಣ ಅಂಗಡಿ ಕಡೆ ಸೈಕಲ್ ಹತ್ತಿ ಹೊರಟೆ. ಅಂಗಡೀನ ಮುಚ್ಚಿ ಮೀನು ಹಿಡಿಯುವ ಗಾಳ ಹಿಡಿದು ನಡೆಯುತ್ತಿದ್ದ. ನನ್ನ ನೋಡಿ ಯಾಕಪ್ಪ ಮತ್ತೆ ಸೈಕಲ್ ರಿಪೈರಿಗೆ ಬಂತಾ? ಎಂದ. ಇಲ್ಲ ವೆಂಕ್ಟಣ್ಣ ಸುಮ್ನೆ ಬಂದೆ , ಮನೇಲಿ ಬೇಜಾರಾಗುತ್ತಿತ್ತು ಅಂದೆ. ಬಾ ಹಂಗಾದ್ರೆ ನನ್ ಜೊತೆ ಮೀನು ಹಿಡಿಯೋಣ ಅಂದ. ನಾನು ಸೈಕಲ್ ಅಲ್ಲೇ ಬಿಸಾಡಿ ವೆಂಕ್ಟಣ್ಣ ನ ಜೊತೆ ನಡೆದೆ. ಕೆರೆಗೆ ಹೋಗುವ ದಾರಿಯಲ್ಲಿ ಒಂದು ತಿಪ್ಪೆಯಲ್ಲಿ ಸಿಕ್ಕ ಎರೆಹುಳುಗಳನ್ನು ತನ್ನ ಚೀಲಕ್ಕೆ ಹಾಕಿ ಮುಂದೆ ನಡೆದ ವೆಂಕ್ಟಣ್ಣ ನನ್ನ ನಾನು ಅನುಸರಿಸಿದೆ.
ನಾನು ಮೌನ ಮುರಿದು ವೆಂಕ್ಟಣ್ಣ ಎಷ್ಟು ಮೀನು ಹಿಡಿತೀರಾ ಇವತ್ತು ಅಂದೆ. ವೆಂಕ್ಟಣ್ಣ ನಾನು ಇವತ್ತು ತಿಂದು ಬದುಕೋಕೆ ಬೇಕಾದಷ್ಟು ಮೀನುಗಳನ್ನ ಹಿಡಿತೀನಿ. ಜಾಸ್ತಿ ಹಿಡಿದು ಮೀನುಗಳ ಕಾರ್ಖಾನೆ ಕಟ್ಟಳೇನು ಈ ವಯಸ್ಸಲ್ಲಿ ಎಂದ. ಮುಂಗಾರು ಸರಿಯಾಗಿ ಶುರುವಾಗದ ಕಾರಣ ಕೆರೆ ಸಂಪೂರ್ಣವಾಗಿ ತುಂಬಿರಲಿಲ್ಲ. ಕೊನೆಯ ಹಳ್ಳದಲ್ಲಿ ಮಾತ್ರ ವರ್ಷ ಪೂರ್ತಿ ನೀರು ಇರುತ್ತೆ. ವೆಂಕ್ಟಣ್ಣ ನಿಗೆ ಅಂತ ಒಂದು ಮೀಸಲು ಕಲ್ಲಿತ್ತು. ಆ ಕಲ್ಲಿನ ಮೇಲೆ ವೆಂಕ್ಟಣ್ಣ ಕೂತು ನನಗೊಂದು ಕಲ್ಲು ರೆಡಿ ಮಾಡಿ ಗಾಳಕ್ಕೆ ಎರೆಹುಳ ಸೇರಿಸಿ ನೀರಿಗೆ ಬಿಟ್ಟ. ನಾ ಸುಮ್ಮನೆ ಕೂತಿದ್ದೆ. ಎಷ್ಟೋ ಹೊತ್ತಿಗೆ ವೆಂಕ್ಟಣ್ಣ “ಎಷ್ಟು ಜನ ಮಕ್ಳು ” ಅಂದ.
ನಾನಿನ್ನು ಮದುವೆ ಆಗಿಲ್ಲ ಅಂದೆ.
ಯಾಕೆ ಮಗ ಅಂದ. ಅದ್ರಲ್ಲಿ ಒಲವಿಲ್ಲ ಅಂದೆ.
ನೋಡು ವಿಚಾರ ಮಾಡು, ಎಲ್ಲ ಆ ಆ ವಯಸ್ಸಿಗೆ ಆಗ್ಲೇ ಬೇಕು ಅಂತ ಏನು ಇಲ್ಲ. ಹಂಗೇನಾದ್ರೂ ಇದ್ದಿದ್ರೆ ಸ್ವಾಮಿ ವಿವೇಕಾನಂದರು , ಭಗತ್ ಸಿಂಗ್, ಕಲ್ಪನಾ ಚಾವಲ ಸಾಯೋ ವಯಸ್ಸು ಅದಾಗಿರಲಿಲ್ಲ ಅಂದ.
ಮೊದಲ ಬಾರಿಗೆ ಒಬ್ಬರು ಮದುವೆಯ ಬಗ್ಗೆ ಆರಾಮಾಗಿ ಈ ರೀತಿ ಮಾತನಾಡುತ್ತಿರೋದು ಅನ್ನಿಸ್ತು.
ಎಷ್ಟನೇ ಕ್ಲಾಸ್ ಓದ್ಕೊಂಡಿದ್ದೀರಾ ಅಂದೆ?
ತಿಳ್ಕೊಳ್ಳೋಕೆ ಓದ್ಕೋಳ್ಳೆ ಬೇಕು ಅಂತ ಏನು ಇಲ್ವೋ ಮಾರಾಯ, ತಿಳ್ಕೊಂಡ್ರು ಸಾಕು ಎಂದ ವೆಂಕ್ಟಣ್ಣ.
ಹಾ ಅಗಾ…ಒಂದು ಮೀನು ಬಿತ್ತು ಅಂತ ಗಾಳವನ್ನು ನಿದಾನವಾಗಿ ತನ್ನ ಕಡೆ ಎಳೆದು ಮೀನು ಗಾಳದ ಬಾಯಿಂದ ಬಿಡಿಸಿ ನನ್ನ ಕಡೆ ಎಸೆದ. ನಾನು ತಂದಿದ್ದ ಗೋಣಿ ಚೀಲಕ್ಕೆ ಹಾಕಿಕೊಂಡೆ.
ವೆಂಕ್ಟಣ್ಣ, ಹೆಂಗೆ ನೆಡಿತಾ ಇದೆ ನಿಮ್ಮ ಸೈಕಲ್ ಅಂಗಡಿ ವ್ಯಾಪಾರ ಅಂದೆ. ವೆಂಕ್ಟಣ್ಣ ನಕ್ಕು ನಿಂಗೆ ಗೊತ್ತಲಪ್ಪ ಒಳ್ಳೊಳ್ಳೆ ಶಾಲೆಗಳು ಊರು ಪಕ್ಕದಲ್ಲೇ ಸುಮಾರು ಆಗಿದ್ದಾವೆ. ಇಸ್ಕೂಲು ವಾನ್ ಗಳೇ ಮಕ್ಕಳನ್ನ ಕರ್ಕೊಂಡು ಹೋಗಿ ಬಿಟ್ಟು ಹೋಗ್ತಾವೆ. ನಿಮ್ ಕಾಲದಲ್ಲಿ ಕಲಕುಂಟೆ ಅಗ್ರಹಾರದವರೆಗೆ ಸೈಕಲ್ ತುಳ್ಕೊಂಡು ಹೋಗ್ತಾ ಇದ್ರಿ, ಆಗ ನನ್ಗೆ ಸ್ವಲ್ಪ ದುಡ್ಡು ಆಗ್ತಾ ಇತ್ತು. ಆಗ ಮನೆಗೆ ಒಂದು ಸೈಕಲ್ ಇತ್ತು ಹೀಗ ಕಾಲ ಬದಲಾಗಿದೆ. ಸೈಕಲ್ ಬದಲು ಮನೆಗೆ ಎರಡು ಮೂರು ಕಾರುಗಳಿವೆ. ಹೀಗಿನ ಮಕ್ಳಿಗೆ ಮೊಬೈಲ್ ಬಿಟ್ರೆ ಜಗತ್ತು ಇಲ್ಲ. ಹಂಗೂ ಯಾರಾದರೂ ಮಕ್ಳು ಧೈರ್ಯ ಮಾಡಿ ಸೈಕಲ್ ಹತ್ರೆ ಅಪ್ಪ ಅಮ್ಮಾನೆ ಬೈದು ಕೈಗೆ ಮೊಬೈಲ್ ಕೊಟ್ಟು ಮನೇಲೇ ಆತ ಆಡು ಅಂತ ಕೂರಿಸ್ತಾರೆ.
ಕಷ್ಟ ಕಣಪ್ಪ ಸೈಕಲ್ ಉಪಯೋಗಿಸದೆ ಇದ್ರೆ ನನ್ನ ವ್ಯಾಪಾರ ಹೆಂಗೆ ನೆಡೆಯೋದು ನೀನೆ ಹೇಳು. ನನಗೂ ಬೇರೆ ಕಸಬು ಗೊತ್ತಿಲ್ಲ. ಕಾರು , ಗಾಡಿಗಳಿಗೆ ರಿಪೈರಿ ಮಾಡುವಷ್ಟು ತಿಳುವಳಿಕೆ ಇಲ್ಲ ಬೇರೆ. ಈ ಕೆರೆ ಮೀನು ಇಲ್ದೆ ಹೋಗಿದ್ರೆ ಈ ಜೀವ ಇಲ್ಲಿ ವರೆಗೆ ಬದುಕಿರ್ತ್ತಿತ್ತೇನೋ ಅಂತ ಆಕಾಶನ ನೋಡಿ ಮಳೆ ಬರೋ ಆಗಿದೆ ಅಲ್ವಾ ಅಂದ. ನಾನು ಇಲ್ಲ ಆಗೇನಿಲ್ಲ ಅಂದೆ. ಕಣ್ಣು ಮಬ್ಬು ಮಬ್ಬು ಆಕಾಶ ಕರ್ರಗೆ ಕಾಣಿಸ್ತು ಅಂದ ವೆಂಕ್ಟಣ್ಣ.
ಸಂಭದಿಕರು ಯಾರು ಇಲ್ವಾ ವೆಂಕ್ಟಣ್ಣ ಅಂದೆ. ಇಲ್ಲ ಕಣಪ್ಪ ನಾನೊಬ್ಬನೇ , ಆಗ ವಯಸ್ಸಲ್ಲಿ ಮದ್ವೆ ಆಗ್ಲಿಲ್ಲ. ಅರವತ್ತು ವಯಸ್ಸಿನ ವರೆಗೂ ನನಗೆ ಒಂಟಿತನ ಕಾಡ್ಲಿಲ್ಲ. ಯಾಕಂದರೆ ಕೈ ತುಂಬಾ ಕೆಲಸ, ಬಿಡುವಿಲ್ಲದೆ ಜನಗಳ ಜೊತೆ ವ್ಯವಹಾರ ಮಾಡ್ತಿದ್ದ ಕಾರಣ ಯಾವತ್ತೂ ನಾನು ಒಂಟಿ ಅನ್ನಿಸಲಿಲ್ಲ. ಆದರೆ ಇತ್ತೀಚಿಗೆ ಒಂಟಿತನ ಕಾಡೋಕೆ ಶುರು ಆಗಿದೆ. ಬರೀ ಸೈಕಲ್ ಕೆಟ್ಟಾಗ ನನ್ ಅಂಗಡಿಗೆ ಬರೋ ಜನ ನಯವಾಗಿ ಮಾತನಾಡಿಸ್ತಾರೆ. ಸೈಕಲ್ ಸರಿ ಹೋಗಿ ದುಡ್ಡು ಕೊಟ್ಟ ಮೇಲೆ ವಾಯದ ಮುಗೀತು. ಅವರ ಸೈಕಲ್ ಮತ್ತೆ ಕೆಡೋ ವರೆಗೂ ವೆಂಕ್ಟಣ್ಣ ಬದುಕಿದ್ದಾನೋ ಅಥವಾ ಸತ್ತಿದ್ದಾನೊ ಅಂತ ವಿಚಾರಿಸೋರೆ ಇಲ್ಲ. ತಪ್ಪು ಅವರದಲ್ಲ, ನನದು ಅಲ್ಲ , ಭಾಗವಂತನದು ಅಲ್ಲ, ಎಲ್ಲರಿಗು ಅವ್ರದೇ ಆದ ತೊಂದರೆಗಳು ಇರ್ತಾವಲ್ಲ ಅಂದ.
ಸತತ ಎರಡು ಘಂಟೆಯ ನಂತ್ರ ಎರಡು ಕೆಜಿ ಮೀನು ಸಿಕ್ಕಿದ್ವು. ಮೀನು ತಿಂತೀಯಾ ಅಂದ ವೆಂಕ್ಟಣ್ಣ. ನಾನು ಹೂ ಎಂದೆ.
ನೀನೊಳ್ಳೆ ಬೆಂಗಳೂರು ಹುಡ್ಗ ಕಣಯ್ಯಾ ಅಂತ ಎದ್ದು ಅಲ್ಲೇ ಇದ್ದ ಒಣ ಸೌದೆ ತಂದು ಬೆಂಕಿ ಹಾಕಿದ. ಎರಡು ಕಡ್ಡಿ ಮಾಡಿ ಮೀನನ್ನು ಸಿಗಿಸಿ ಒಂದು ಕಡ್ಡಿಯನ್ನು ನನಗೆ ಕೊಟ್ಟು ಮತ್ತೊಂದು ಕಡ್ಡಿ ತಾನು ಬೆಂಕಿಗೆ ಹಿಡಿದು ನಿಂತ.
ಇಬ್ಬರು ಅಲ್ಲೇ ಮೀನು ತಿಂದು, ವೆಂಕ್ಟಣ್ಣ ಅಲ್ಲೇ ನೀರಲ್ಲಿ ಮೈ ತೊಳೆದುಕೊಂಡು ಮನೆ ಕಡೆ ಬಂದ್ವಿ. ನಾನು ನಾಳೆ ಬೆಂಗಳೂರಿಗೆ ಹೋಗ್ತಾ ಇದೀನಿ ವೆಂಕ್ಟಣ್ಣ ಅಂದೆ. ಒಳ್ಳೆದಪ್ಪ , ಹುಷಾರಾಗಿ ಹೋಗು , ಆ ದೇವ್ರು ಒಳ್ಳೇದು ಮಾಡ್ಲಿ ಎಂದ. ವೆಂಕ್ಟಣ್ಣ ನ ಧನಿಯಲ್ಲಿ ಅಳು ವಿತ್ತು. ನಾನು ಮನೆ ಕಡೆ ಬಂದೆ.
ಮರುದಿನ ಬೆಳಿಗ್ಗೆ ಎದ್ದು ರೆಡಿ ಆಗಿ ಬೆಂಗಳೂರಿಗೆ ಹೊರಟಿದ್ದೆ. ಆಫೀಸ್ ಗೆ ಟೈಮ್ ಆದ ಕಾರಣ ವೆಂಕ್ಟಣ್ಣ ನನ್ನ ಮಾತನಾಡಿಸದೆ ಹೋಗುವ ನಿರ್ಧಾರ ಮಾಡಿದ್ದೆ. ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿ ಕಾರತ್ತಿ ವೆಂಕ್ಟಣ್ಣ ನ ಅಂಗಡಿ ಬಳಿ ಬಂದ ತಕ್ಷಣ ಕಾರಿನ ಮುಂದಿನ ಚಕ್ರ ಬ್ಲಾಸ್ಟ್ ಆಯ್ತು. ಕಾರಿನ ಕಿಟಕಿಯಿಂದ ವೆಂಕ್ಟಣ್ಣ ನ ಅಂಗಡಿ ಕಡೆ ನೋಡಿದೆ. ವೆಂಕ್ಟಣ್ಣ ಕಣ್ಣು ಬಿಟ್ಟವನಂತೆಯೇ ಆಕಾಶ ನೋಡುತ್ತಾ ಕುಳಿತಿದ್ದ. ನಾಲ್ಕೈದು ಬಾರಿ ಹಾರ್ನ್ ಮಾಡಿದೆ , ವೆಂಕ್ಟಣ್ಣ ಪ್ರತಿಕ್ರಿಯಿಸಲಿಲ್ಲ. ಕಾರಿಂದ ಇಳಿದು ಜೋರಾಗಿ ಕೂಗಿದೆ , ಹೂ ಹೂ ಉತ್ತರವಿಲ್ಲ. ಮೆಲ್ಲಗೆ ಹತ್ತಿರ ನೆಡೆದೆ, ಉಸಿರಾಡೋ ಸದ್ದಿಲ್ಲ. ಕೈ ನಾಡಿ ಹಿಡಿದೆ ಆದರೆ ನನಗೇನು ನಾಡಿಯ ಜ್ಞಾನ ಸರಿಯಾಗಿ ಭಾಸವಾಗುತ್ತಿಲ್ಲ. ಕೂಡಲೇ ವೆಂಕ್ಟಣ್ಣ ಎಚ್ಚರವಾದ. ನನ್ನ ಎದೆ ಬಡಿತ ಕೊನೆಗೂ ಹಿಡಿತಕ್ಕೆ ಬಂದು ಸಂತೋಷ ವಾಯ್ತು.
ವೆಂಕ್ಟಣ್ಣ ಕಣ್ಣುಜ್ಜಿ ಕನ್ನಡಕ ಧರಿಸಿ ‘ ಒಹ್ ಬೆಂಗಳೂರಿನವ , ಹೋರಾಟ ಬೆಂಗಳೂರಿಗೆ? ಎಂದ.
ನಾ ಹೂ ವೆಂಕ್ಟಣ್ಣ ಹೊರಟಿದ್ದೆ ಆದರೆ ಕಾರಿನ ಟೈಯರ್ ಬ್ಲಾಸ್ಟ್ ಆಯ್ತು , ಹಂಗೆ ನಿಮ್ಮನ ಮಾತನಾಡಿಸ್ಕೊಂಡು ಹೋಗೋಣ ಅಂತ ಕಾರಿಂದ ಜೋರಾಗಿ ಕೂಗಿದೆ ಆದರೆ ನೀವು ಮಾತನಾಡಲೇ ಇಲ್ಲ ಎಂದೆ. ಸ್ವಲ್ಪ ನಿದ್ದೆಗೆ ಜಾರಿದ್ದೆ ಕಣಪ್ಪ ಎಂದ ವೆಂಕ್ಟಣ್ಣ.
ಇರು , ಟೂಲ್ಸ್ ತಗೊಂಡು ಬರ್ತೀನಿ , ಯಾವತ್ತೂ ಕಾರಿಗೆ ಚಕ್ರ ಬದಲಾಯಿಸಿರಲಿಲ್ಲ ಅಂದ ವೆಂಕ್ಟಣ್ಣ. ಅದಕ್ಕೆ ನಾನು ‘ನನ್ನ ಹತ್ರ ಇನ್ನೊಂದು ಎಕ್ಸ್ಟ್ರಾ ಚಕ್ರ (spare ವೀಲ್) ಇದೆ ಎಂದೆ. ಹಾಗಾದ್ರೆ ಸಂತೋಷ ಕಣಪ್ಪ ಅಂದೆ. ಇಬ್ಬರು ಸೇರಿ ಚಕ್ರ ಬದಲಾಸಿದ್ವಿ.
ನಾನು ಹೊರಡಲು ಮುಂದಾಗಿ , ಕಾರೊಳಗೆ ಕೂತೆ. ವೆಂಕ್ಟಣ್ಣ ನಗುತ್ತ ಹಳೆ ಚಕ್ರ ಗಳ ಜೊತೆ ತುಂಬಾ ಸಂಭಂದ ಇಟ್ಕೊಬೇಡ ಮಾರಾಯ…. ಹೊಸ ಚಕ್ರ ಗಳ ಜೊತೆ ಸಂಭಂದ ಬೆಳೆಸ್ಕೊ ಅಂದ.
ನನಗೆ ಸರಿಯಾಗಿ ಅರ್ಥವಾಗಿಲ್ಲ ವೆಂಕ್ಟಣ್ಣ ನೀವು ಹೇಳಿದ್ದು ಅಂದೆ.
ಹಳೆ ಚಕ್ರಗಳು ಜಾಸ್ತಿ ದಿನ ಜೊತೆ ಬರೋದಿಲ್ಲ ನಿನ್ ಜೊತೆ ಕಣಪ್ಪ , ನಿನ್ನ ಬಾಳೆಂಬ ಜರ್ನಿಯಲ್ಲಿ ಮಧ್ಯದಲ್ಲಿ ಕೈ ಕೊಡ್ತಾವೆ ನನ್ ಥರ ಅಂದ. ನನಗೆ ಸರಿಯ್ಯಾಗಿ ವೆಂಕ್ಟಣ್ಣ ನ ಭಾಷೆ ಹಾಗು ಅದರ ಒಳ ಅರ್ಥ ಅರ್ಥವಾಗಲಿಲ್ಲ.
ಸರಿ ವೆಂಕ್ಟಣ್ಣ ಬರ್ತೀನಿ , ಟೈಮ್ ಆಯ್ತು ಅಂದೆ.
ವೆಂಕ್ಟಣ್ಣ ಸರಿ “ಸಿಗೋಣ ಮಗ,” ಅಂದ.
ಆಫೀಸ್ ಇವತ್ತು ಹೊಸದಾಗಿ ಕಾಣ್ತಿದೆ. ಆಫೀಸ್ ನಲ್ಲೆ ನನ್ನ ಪಕ್ಕದ ಟೀಮ್ ನಲ್ಲಿದ್ದ ಹುಡುಗಿ ಮೇಲೆ ತುಂಬಾ ದಿನದಿಂದ ಎದೆಯೊಳಗೆ ನೆಡಿತಿದ್ದ ಭಾವನೆಗಳಿಗೆ ಮಣಿದು ಆ ಹುಡುಗೀನ ಕಾಫಿಗೆ ಕರೆದೆ. ಕಾಫಿಗೆ ಬಂದ ಹುಡುಗಿಗೆ ಕಾಫಿ ಹೀರುತ್ತಾ “ಮದುವೆ ಆಗ್ತೀರಾ ನನ್ನನ್ನ ” ಅಂದೆ. ಅವಳು ನಾಚುತ್ತ ತಲೆ ತಗ್ಗಿಸಿದಳು. ನಿಮ್ಮ ನಾಚಿಕೆ ಒಪ್ಪಿಗೆ ಅಂತ ತಿಳಿತೀನಿ ಅಂದೆ. ಅವಳು ಏನಾದರು ತಿಳ್ಕೊಳ್ಳಿ ನನ್ಗೆ ನಾಚಿಕೆ ತಡೆಯೋಕೇ ಆಗ್ತಾ ಇಲ್ಲ ಎಂದು ಎದ್ದು ಹೊಡಿ ಹೋದಳು.
ನಾನು ಆ ಸಂಜೆ ಮನೆಗೆ ಫೋನ್ ಮಾಡಿ “ಅಮ್ಮ , ನಿನಗೆ ಸೊಸೆ ಸಿಕ್ಕಿದ್ದಾಳೆ ನಾ ಕೆಲಸ ಮಾಡೋ ಆಫೀಸ್ ನಲ್ಲೆ ಅಂದೆ”. ಕೊನೆಗೂ ನಾ ಪೂಜೆ ಮಾಡೋ ರಂಗ ನಿಂಗೆ ಮದ್ವೆ ಮಾಡ್ಕೊಳ್ಳೋ ಬುದ್ದಿ ಕೋಟ್ನಲ್ಲ ಅಂತ ಖುಷಿಯಾದ್ಲು.
ಅಪ್ಪನಿಗೆ ಫೋನ್ ಕೊಡಮ್ಮ ಅಂದೆ. ಅದಕ್ಕೆ ಅಮ್ಮ, ನಿಮ್ಮಪ್ಪ ವೆಂಕ್ಟಣ್ಣ ನ ಮಣ್ಣು ಮಾಡಿ ಬರೋಕೆ ಹೋಗಿದ್ದಾನಪ್ಪ… ಬೆಳಿಗ್ಗೆ 11 ಘಂಟೇಲಿ ತೀರಿ ಹೋದನಂತೆ ಅಂದ್ಲು. ಸಿಗ್ನಲ್ ಇಲ್ಲದೆ ಫೋನ್ ಕಟ್ ಆಯ್ತು.
ಒಂಟಿತನ ಬೇಡ , ಹಳೆ ಟೈಯರ್ ಬೇಡ ಅಂದ ವೆಂಕ್ಟಣ್ಣ ಬೈ ಹೇಳದೆ ಒಬ್ಬಂಟಿಗನಾಗಿ ಹಳೆ ಚಕ್ರದಲ್ಲೇ ಬಾರದ ಜಾಗಕ್ಕೆ ಹೊರಟಿದ್ದಾನೆ ಎಂದು ಕಣ್ಣೀರು ವರೆಸಿಕೊಂಡೆ.
-ದಯಾನಂದ ರಂಗದಾಮಪ್ಪ