ಬೆಳಗಿನ ಸೂರ್ಯನ ಕಿರಣ ಕಣ್ಣಿಗೆ ಚುಚ್ಚುತ್ತಿದ್ದು, ವೆಂಕಜ್ಜನ ಕಣ್ಣು ಭಾರವಾಗಿದ್ದರೂ ನಿಧಾನವಾಗಿ ತೆಗೆಯುತ್ತಿದ್ದ. ದೇವಸ್ಥಾನದ ಒಂದು ಮೂಲೆಯಲ್ಲಿ ಮಲಗುವ ವೆಂಕಜ್ಜ ಯಾವಾಗಲು ಚುರುಕು. ಅಷ್ಟೊಂದು ನಿಧಾನವಾಗಿ ಎದ್ದವನೇ ಅಲ್ಲ. ಇಂದೇಕೋ ಅವನ ಮನಸ್ಸು ಎಂದಿನಂತೆ ಇರಲಿಲ್ಲ. ವಸುಧಾಳ ನೆನಪು ಬಹಳವಾಗಿ ಕಾಡುತ್ತಿತ್ತು. ಅವಳು ತನ್ನನ್ನು ಎಬ್ಬಿಸುತ್ತಿದ್ದ ರೀತಿ, ಮುದ್ದು ಮಾಡುತ್ತಾ ಕಚಗುಳಿ ಇಡುತ್ತಿದ್ದ ನೆನಪು. ವೆಂಕಜ್ಜನ ಜೀವನದಲ್ಲಿ ವಸುಧಾ ಅವನ ಬಾಳ ಸಂಗಾತಿಗಿಂತ ಹೆಚ್ಚಾಗಿದ್ದಳು. ಅವನೆಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಳು. ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವನಿಗೆ ತನ್ನೆಲ್ಲ ಪ್ರೀತಿಯನ್ನು ಕೊಟ್ಟು, ಅವನ ಜೀವನಕ್ಕೆ ಸಾರ್ಥಕತೆಯನ್ನು ತಂದಿದ್ದ ಹೆಣ್ಣು. ಮೂರು ಗಂಡು ಮಕ್ಕಳನ್ನು ಕೊಟ್ಟು ಮನೆ ತುಂಬಿದ ಹೆಣ್ಣು. ಅರ್ಥವೇ ಇಲ್ಲದಂತೆ ಜೀವನ ನಡೆಸುತ್ತಿದ್ದವನಿಗೆ ಜೀವನದ ಮಾರ್ಗ ಕಲಿಸಿಕೊಟ್ಟ ಗೃಹಿಣಿ. ಕತ್ತೆಯಂತೆ ದುಡಿಯುವುದೊಂದೇ ಗೊತ್ತಿದ್ದ ಅವನ ದುಡಿಮೆಯಲ್ಲಿ ಸಂಸಾರ ನೌಕೆಯನ್ನು ಸಲೀಸಾಗಿ ನಡೆಸಿಕೊಂಡು, ಮಕ್ಕಳ ಗೆಲುವಲ್ಲಿ ತನ್ನ ಗೆಲುವನ್ನು ಕಂಡು ಸಂಭ್ರಮಿಸುತ್ತ ಬಂದವಳು. ಮಕ್ಕಳನ್ನು ಬೆಳೆಸಿ, ವಿದ್ಯೆ ಬುದ್ಧಿ ಕಲಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲುವುದನ್ನು ಕಲಿಸಿದ್ದಳು. ಒಳ್ಳೆಯ ನೌಕರಿ ಪಡೆದು ಸ್ವಾವಲಂಬಿಗಳಾಗಿ ಬದುಕಲು ಕಲಿತರು ಮಕ್ಕಳು. ತಮ್ಮ ಗೂಡುಗಳನ್ನು ಮಾಡಿಕೊಂಡು ಹಾರಿಹೋದರು. ವಸುಧಾ ಇಷ್ಟೆಲ್ಲಾ ತನ್ನ ಜೀವನದಲ್ಲಿ ಬೆಳಕನ್ನು ಮೂಡಿಸಿ, ವೆಂಕಜ್ಜನನ್ನು ಒಂಟಿ ಮಾಡಿ ಹೊರತು ಹೋದಳು. ಮಕ್ಕಳ ಮನೆಯಲ್ಲಿ ಜೀವಿಸಲು ಇಷ್ಟವಿಲ್ಲದೆ, ಅವನು ಜೀವನವೇ ಸಾಕೆಂದು ಹಾಗೆ ಹೊರಟು ಬಂದ. ನಡೆಯುತ್ತಾ ಬಹಳ ದೂರ ದಣಿವಾಗುವವರೆಗೂ ನಡೆಯುತ್ತಾ ಬಂದು ಒಂದು ಹೊಳೆಯ ದಂಡೆಯಲ್ಲಿ ಕುಳಿತ. ಮನಸ್ಸು ತಿಳಿಯಾಗಿತ್ತು. ಏನೋ ಒಂದು ರೀತಿಯ ನಿರಾಳತೆ. ಹೊಳೆಯ ದಂಡೆಯಲ್ಲೇ ಇರುವ ಶ್ರೀನಿವಾಸನ ಗುಡಿ ವೆಂಕಜ್ಜನನ್ನು ತನ್ನೆಡೆಗೆ ಆಕರ್ಷಿಸಿತ್ತು. ಮನಸ್ಸಿನ ನೋವನ್ನು ದೂರ ಮಾಡಿದ ಭಗವಂತನಿಗೆ ಶರಣಾದ ವೆಂಕಜ್ಜ ಅಂದಿನಿಂದ ದೇವಸ್ಥಾನದ ಅಂಗಳದಲ್ಲೇ ನೆಲೆಸಿದ. ತನ್ನ ಕೈಲಾದ ಸೇವೆ ಮಾಡುತ್ತಾ ಅಲ್ಲೇ ನೆಲೆಸಿದ ವೆಂಕಜ್ಜ ಎಲ್ಲರಿಗು ಅಚ್ಚು ಮೆಚ್ಚು. ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುತ್ತ ಕೈಲಾದ ಸಹಾಯ ಮಾಡುತ್ತಿದ್ದ.
ಹೂಮಾರುವ ಹುಡುಗಿ ಕುಸುಮ ಬಂದು “ಏನು ವೆಂಕಜ್ಜ. . . ಹುಷಾರಿಲ್ವಾ? ಔಷಧಿ ಏನಾದ್ರು ಬೇಕಾ? ಹಾಲು, ಗಂಜಿ ಏನಾದ್ರು ಮಾಡಿ ಕೊಡ್ಲಾ?” ಎಂದು ಕೇಳಿದಳು. “ಏನಿಲ್ಲ ಮಗ, ಯಾಕೋ ಒಂಥರಾ ಆಗತೈತೆ. ಮೈಯೆಲ್ಲಾ ಜಡ, ಮೈಗೇನಾಗಿಲ್ಲ ಬಿಡವ್ವಾ. ಸರಿ ಓಯ್ತದೆ”
ಪ್ರತಿದಿನ ದೇವಸ್ಥಾನದ ಮೆಟ್ಟಿಲುಗಳನ್ನು ಗುಡಿಸಿ, ಸ್ವಚ್ಛ ಮಾಡುತ್ತಿದ್ದ ಅವನು, ಅಂದು ಮೇಲೇಳಲು ಆಗದ ಪರಿಸ್ಥಿತಿಯಲ್ಲಿದ್ದ. ತನ್ನ ವಯಸ್ಸಿಗೆ ಸಹಜವಾದ ಅನಾರೋಗ್ಯ ಅಂದುಕೊಂಡು ಏಳಲು ಪ್ರಯತ್ನಿಸುತ್ತಿದ್ದ. ಆದರೆ ತನ್ನನ್ನು ಯಾರೋ ಹಿಡಿದುಕೊಂಡಿರುವಂತೆ ಅನ್ನಿಸುತ್ತಿತ್ತು. ಏನೂ ಮಾಡಲಾಗದೆ ಸುಮ್ಮನೆ ಮಲಗಿದ್ದ. ಅವನ ಕಿವಿಯಲ್ಲಿ ವಸುಧಾಳ ಮಾತು ಕೇಳಿಸುತ್ತಿತ್ತು. ಅವಳ ಹಿತವಾದ ಮಾತು ಅವನಿಗೆ ಒಂದು ರೀತಿಯ ಮುದ ನೀಡುತ್ತಿತ್ತು. ಆದರೆ ತನ್ನ ನಿತ್ಯದ ಕೆಲಸ ಹಾಗೆ ಉಳಿದಿದೆ, ಮಾಡಿಲ್ಲವಲ್ಲ ಅನ್ನೋ ಬೇಸರ. ವಸುಧಾಳ ಮಾತನ್ನು ಬಿಟ್ಟು ಹೋಗುವ ಮನಸ್ಸಂತೂ ಇಲ್ಲ. ಏನೀ ಜೀವ ಇಂತಹ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದೆ ಎಂದು ಯೋಚಿಸುತ್ತಿದ್ದ. ವಸುಧಾ ತನ್ನಜೊತೆಗಿದ್ದಾಗ ಅವಳ ಪ್ರೀತಿ ಆರೈಕೆಯಿಂದ ಎಂಥ ಖಾಯಿಲೆಯಿದ್ದರೂ ಬೇಗ ವಾಸಿಯಾಗಿಬಿಡುತ್ತಿತ್ತು. ಅವಳೇ ಹಾಗೆ! ನಿಧಾನವಾಗಿ ಹಣೆಯ ಮೇಲೆ ಯಾರೋ ಕೈಯಿಟ್ಟ ಹಾಗೆ ಭಾಸವಾಯಿತು!! ಮೃದು ಮತ್ತು ಹಿತವಾದ ಸ್ಪರ್ಶ! ಅದು ಹೇಗೆ ಸಾಧ್ಯ? ವಸುಧಾ ಅವನನ್ನು ಬಿಟ್ಟು ಹೋಗಿ ವರ್ಷ ವಾಗುತ್ತಾ ಬಂದಿತ್ತು. ವೈಕುಂಠ ಏಕಾದಶಿಯ ಮಾರನೇ ದಿನವೇ ಅವಳು ಹೋದದ್ದು. ಇನ್ನು ಏಕಾದಶಿಗೆ ಮೂರುದಿನವಿದೆ. ಅವಳ ಮಾತು ತನ್ನ ಕಿವಿಗೆ ಬೀಳುತ್ತಿದೆ ಅನ್ನಿಸುತ್ತಿತ್ತು. “ಮೈಗೆ ಚೆನ್ನಾಗಿಲ್ಲ ಮೊದಲೇ, ಬರಿ ಹೊಟ್ಟೇಲಿ ಇದ್ರೆ ಸುಸ್ತಾಗಲ್ವೆ? ಏಳಿ, ಬೆಚ್ಚಗೆ ಏನಾದ್ರು ಕುಡಿಯುವಿರಂತೆ”!!!
ಏನಿದು? ವಸುಧಾಳ ನೆನಪು ನನ್ನನ್ನು ಹುಚ್ಚನನ್ನಾಗಿ ಮಾಡಿದೆ ಅಂದುಕೊಂಡು ವೆಂಕಜ್ಜ ತನ್ನ ಶಕ್ತಿಯೆಲ್ಲ ಬಿಟ್ಟು ಏಳಲು ಪ್ರಯತ್ನಿಸುತ್ತಿದ್ದಂತೆ ಯಾರೋ ತನ್ನ ಬೆನ್ನನ್ನು ಹಿಡಿದು ಎಬ್ಬಿಸಿದಂತೆ ಅನುಭವ. ಏನಿದು ನನಗೆ ಭ್ರಮೆ. . . ವಯಸ್ಸಾಯ್ತಲ್ಲ ಅದಕ್ಕೆ ಅರಳೋ ಮರಳೋ ಇರಬೇಕು ಅಂದುಕೊಂಡು ಕಲ್ಯಾಣಿಯ ಬಳಿ ಮುಖ ತೊಳೆಯಲು ಹೋದ. ತಲೆಸುತ್ತಿದಂತಾಗಿ ಕುಸಿಯುವಂತಾಯಿತು. ನೀರಿನ ಬಳಿ ಬಾಗಿದ್ದರಿಂದ ದೇಹ ಸಮತೋಲನ ಕಳೆದುಕೊಂಡಿತು. ಇನ್ನೇನು ನೀರಿನಲ್ಲಿ ಬಿದ್ದೆ ಅಂದುಕೊಂಡಾಗ, ಯಾರೋ ತಮ್ಮ ಕೈಯಲ್ಲಿ ಅವನನ್ನ ಹಿಡಿದುಕೊಂಡಿದ್ದಾರೆ!! ಸುತ್ತ ಯಾರು ಕಾಣುತ್ತಿಲ್ಲ. . . . . ಏನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ. . . ಅವನಿಗೆ ಆರೋಗ್ಯದ ಸಮಸ್ಯೆಯಿಂದ ಮಾನಸಿಕ ಅಸಮತೋಲನವಾಗಿದೆ ಎಂದು ಅನಿಸುತ್ತಿತ್ತು. ಹಾಗೆಂದು ಸಮಾಧಾನ ಮಾಡುಕೊಳ್ಳುವಷ್ಟರಲ್ಲಿ “ಸ್ವಲ್ಪ ಹೊತ್ತು ಕೂತ್ಕೊಂಡು ಸುಧಾರಿಸ್ಕೊಳಿ” ಅಂತ ಮತ್ತೆ ಧ್ವನಿ ವಸುಧಾಳದ್ದು.
ಮಂಕಾಗಿ ಕುಳಿತಿದ್ದ ವೆಂಕಜ್ಜನನ್ನು ಕಂಡು ಚಪ್ಪಲಿ ಕಾಯುವ ಹುಡುಗ ವೀರೇಶ “ಯಾಕಜ್ಜ ಏನಾಯ್ತು? ಏನಾದ್ರು ತಿಂತೀಯಾ? ಔಷಧಿ ಏನಾದ್ರು ತಂದ್ಕೊಡ್ಲಾ, ಇಂಗ್ಯಾಕೆ ಕುಂತೀಯ?” ಅಂದಾಗ ವೆಂಕಜ್ಜನಿಗೆ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ನನ್ನ ವಸುಧಾಳ ಮಾತು ಕೇಳಿಸಿತು ಅಂದರೆ ಎಲ್ಲರು ಹುಚ್ಚ ಎಂದಾರು ಅನ್ನೋ ಭಯ ಬೇರೆ. . ಹಾಗಾದರೆ ನನಗಾದ ಅನುಭವ ಸುಳ್ಳೇ? ನನ್ನ ಭ್ರಮೆಯೇ? ಎಂದು ಆಲೋಚನೆಗೆ ಮುಳುಗಿದ. ವೀರೇಶ ಹತ್ತಿರ ಬಂದು “ಓಯ್ ಅಜ್ಜ” ಅಂದು ಮೈ ಅಲುಗಿಸಿದಾಗ ಎಚ್ಚರ. ಮೈಯೆಲ್ಲಾ ಬಿಸಿ ಆಗಿದೆ. . ಬಾ ಒಂಚೂರು ಗಂಜಿ ಕುಡಿದು ಗುಳಿಗೆ ತೊಗೋಳ್ಳಿವಂತೆ ಅಂತ ತನ್ನ ಪುಟ್ಟ ಗುಡಿಸಲಿಗೆ ಕರೆದೊಯ್ದ. ಬಿಸಿ ಗಂಜಿಕೊಟ್ಟು ಒಂದು ಗುಳಿಗೆ ಕೊಟ್ಟು ಸುಧಾರಿಸಿಕೊಳ್ಳಲು ಜಾಗ ಮಾಡಿದ.
ಹಾಗೆಯೇ ಚಾಪೆಯ ಮೇಲೆ ಮಲಗಿದ್ದ ವೆಂಕಜ್ಜನಿಗೆ ನಿದ್ದೆ ಹತ್ತಿತು. ವಸುಧಾ ತನ್ನ ಕೈ ಹಿಡಿದು ಎಲ್ಲಿಗೋ ಕರೆದೊಯ್ಯುತ್ತಿದ್ದಾಳೆ. ಅವಳ ಕೈಯ ಬೆಚ್ಚಗಿನ ಹಿತವಾದ ಅನುಭವ. ಎಲ್ಲಿಗೆ ಕರೆದೊಯ್ದರೇನು, ಅವಳಿದ್ದಾಳಲ್ಲ. . ಅಷ್ಟೇ ಸಾಕು ಅನ್ನೋ ಭಾವನೆ. ಕಲ್ಲು ಮುಳ್ಳುಗಳ ದಾರಿಯಿಂದ ಸಾಗುತ್ತ ಬಂದು ಒಂದು ನದಿ ತೀರದಲ್ಲಿ ಬಂದು ನಿಲ್ಲುತ್ತಾರೆ. ಅಲ್ಲಿ ವಸುಧಾ ಅವನ ಕೈಯನ್ನು ಹಿಡಿದು ನೀರಿನ ಕಡೆ ಹೋಗುತ್ತಿದ್ದಾಳೆ. ಸ್ವಲ್ಪ ದೂರ ಹೆಜ್ಜೆಗಳು ಚಂದವೆನಿಸುತ್ತದೆ. ಆಮೇಲೆ ಬರುಬರುತ್ತಾ ಅವನ ಕಟ್ಟಿನವರೆಗೂ ನೀರು ಬರುತ್ತಿದೆ. ಅವಳೇನೋ ಸುಲಭವಾಗಿ ಹೋಗುತ್ತಿದ್ದಾಳೆ. ಅವನ ಹೆಜ್ಜೆ ಮುಂದಿಡಲು ಕಷ್ಟವಾಗುತ್ತಿದೆ, ಮುಂದೆ ನೀರು ಕುತ್ತಿಗೆಯ ತನಕ ಬರುತ್ತಿದೆ. ಒಹ್! ಉಸಿರು ಕಟ್ಟುತ್ತದೆ ವಸುಧಾ! ಆಗುತ್ತಿಲ್ಲ. . . . ಎಂದು ಬೆಚ್ಚಿ ಕೂಗುತ್ತ ಎಚ್ಚರಗೊಂಡ ವೆಂಕಜ್ಜ. ಕನಸಿನಲ್ಲಿ ಆದ ಹೆದರಿಕೆಗೆ ಮೈಯೆಲ್ಲಾ ಬೆವೆತಿತ್ತು. ಸ್ವಲ್ಪ ಹೊತ್ತು ಬೇಕಾಯಿತು ಸಮಾಧಾನ ಆಗಲು. ಆದರೂ ಆ ಕನಸಿನಲ್ಲಿ ಒಂಥರಾ ಹಿತ. ವಸುಧಾ ತನ್ನ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದ್ದದ್ದು. ಅವಳ ಸನಿಹದಲ್ಲಿ ಒಂಥರಾ ತೃಪ್ತಿ. ಹಾಗೆ ಕಣ್ಮುಚ್ಚಿ ಅವಳನ್ನು ನೆನೆಸಿಕೊಳ್ಳುತಿದ್ದ. ಅಂದೇಕೋ ಅವಳು ತನ್ನ ಬಳಿಯಲ್ಲೇ ಇರುವಥರ ಅನಿಸಿಕೆ. ಅವಳು ತನ್ನ ಹತ್ತಿರವೇ ಓಡಾಡುತ್ತಿರುವಂತೆ ಅನುಭವ. ಇಂದೇಕೆ ಹೀಗೆ?
ಸಂಜೆ ಆಗುತ್ತಿದೆ ಹಾಗೆಯೇ ವೆಂಕಜ್ಜನಿಗೆ ವಸುಧಾಳೇ ತನ್ನನ್ನು ಕರೆದುಕೊಂಡು ಹೋಗಲು ಬಂದಿರುವಳೇನೋ ಅನ್ನುವ ಭಾವನೆ ಹೆಚ್ಚಾಗುತ್ತಿದೆ. ಅವಳೊಂದಿಗೆ ಎಲ್ಲಿಗಾದರೇನು? ಜೀವನದ ಪ್ರತಿಯೊಂದು ಕ್ಷಣದಲ್ಲೂ ತನಗೆ ಜೊತೆಯಾಗಿದ್ದವಳು ಅವಳು. ಆದರ್ಶ ಸತಿ ಎಂದರೆ ತಪ್ಪೇನಿಲ್ಲ. ಮುಖ ತೊಳೆದು ದೇವಸ್ಥಾನಕ್ಕೆ ಹೊರಟ. ನಡೆಯಲು ಬಹಳ ಕಷ್ಟವಾಗುತ್ತಿತ್ತು. ದೇಹ ತುಂಬ ಬಳಲಿತ್ತು. ತೋಳುಗಳನ್ನು ಯಾರೋ ಹಿಡಿದು ನಡೆಸುತ್ತಿದ್ದುದು ತಿಳಿಯುತ್ತಿತ್ತು. ಮತ್ಯಾರು ಅಲ್ಲ ವಸುಧಾ ಅಲ್ಲವೇ. . . ದೇವಸ್ಥಾನದ ಅರಳಿ ಕಟ್ಟೆಯ ಬಳಿ ಕುಳಿತು ವಿಶ್ರಮಿಸುತ್ತಿದ್ದ. ಪಕ್ಕದಲ್ಲೇ ವಸುಧಾ ಅವನ ಬೆನ್ನು ಸವರುತ್ತ “ಏಳಿ ಹೊರಡೋಣ. . ತುಂಬ ಸಮಯವಿಲ್ಲ” ಎಂದಳು. ವೆಂಕಜ್ಜ ಅವಳ ಮಾತಿಗೆ ತಲೆಯಾಡಿಸುತ್ತಾ ಎದ್ದು ಹೊರಟ. ದೇವಸ್ಥಾನದ ಒಳಗೆ ಬರುತ್ತಲೇ ಅವಳು “ಬನ್ನಿ ಇನ್ನು ಸಾಕು” ಅಂತ ಹೇಳಿದ್ದು ಕೇಳಿಸಿತು ಆಮೇಲೆ. . . . . . . . . . . . .
“ಅಯ್ಯೋ ವೆಂಕಜ್ಜ ನೋಡಿ ಇಲ್ಲಿ” ಎಂದು ಜನ ಸುತ್ತ ಸೇರಿದ್ದಾರೆ. “ಪಾಪ ದೇವಸ್ಥಾನದಲ್ಲೇ ಪ್ರಾಣ ಕಳೆದುಕೊಂಡು ದೇವರ ಪಾದ ಸೇರಿದ್ದಾರೆ. . . ಎಂಥ ಪುಣ್ಯ ಜೀವಿ” ಎಂದು ಎಲ್ಲರು ಸೇರಿ ಅಂತ್ಯ ಕಾರ್ಯ ಮಾಡಲು ನಿರ್ಧಾರ ಮಾಡುತ್ತಾರೆ.
ಹಿಂದೆ ಹೇಳುತ್ತಿದ್ರೂ ಸತ್ತ ಹೆಂಡತಿ ಬಂದು ಕರೆದಾಗಾಯ್ತು, ಸತ್ತ ಗಂಡ ಬಂದು ಕರೆದಾಗಾಯ್ತು ಅಂಥ ನಿಮ್ಮ ಕಥೆ ಓದುತ್ತಿದ್ದರೆ ಅವೆಲ್ಲಾ ನಿಜಾ ಅನ್ನುವ ಭಾವನೆ ಮೂಡುತ್ತಿದೆ.
ವೆಂಕಜ್ಜನನ್ನು ಒಂಟಿ ಮಾಡಿ ಹೊರತು ಹೋದಳು.
ಹೊರಟು ಹೋದಳು ಎಂದು ತಿದ್ದುಪಡಿ ಮಾಡಿ.
ಧನ್ಯವಾದಗಳು ಉಮ.ನಿಮ್ಮ ಅಭಿಪ್ರಾಯ ತಿಳಿದು ಬಹಳ ಸಂತೋಷವಾಯಿತು. ಈಗ ತಿದ್ದುವ ಅವಕಾಶ ಇಲ್ಲವಾದ್ದರಿಂದ ಸರಿಪಡಿಸಲು ಆಗುತ್ತಿಲ್ಲ,ಕ್ಷಮಿಸಿ.
Very emotional!True, we always remember people who would have taken care of us.. No matter where they are!!
Thank you Prathibha..:)
ನಮಸ್ತೇ ಮೇಡಮ್
ಬಹಳ ಚೆನ್ನಾಗಿ ಮೂಡಿ ಬಂದಿಧೆ ಕಥೆ ಓದುಥೇದವರೆಗೆ ನೈಜ್ಯ ಕಥೆ ಆನುಭವ್ ಹಾನಿಸುತದೆ
ಧನ್ಯವಾದಗಳು ಸರ್
Nice story .. and Very Emotional one..
Thank you Vidya
ವೆಂಕಜ್ಜ ತುಂಬ ಪುಣ್ಯ ಮಾಡಿದ್ರು..ಅಂತಾ ಹೆಂಡತೀನ ಪಡೆಯೋಕೆ..ಮತ್ತೇ ಅದೇ ಪ್ರೀತೀನ ಉಳಿಸಿಕೊಂಡು ಕೊನೆಯವರೆಗೂ ಅವಳ ನೆನಪಿನಲ್ಲೇ ಇದ್ರು..ಅದಕ್ಕೆ ಅವರಿಗೆ ಅಂತಾ ಸುಖವಾದ ಸಾವು ಸಿಕ್ತು ಅನ್ಸತ್ತೆ..ಅದು ದೇವಸ್ಥಾನದಲ್ಲಿ..ವಸುಧಾಳ ನೆನಪಲ್ಲಿ..
ಪ್ರೀತೀನೆ ಹಾಗೆ ಅದು ಒಂದು ಭಕ್ತಿ ಇದ್ದ ಹಾಗೆ.. ಅದರಲ್ಲಿ ಶೃಧ್ಧೆ ಇದ್ದಷ್ಟು ಖುಷಿ ಹೆಚ್ಚು..😊