ವೃದ್ಧಾಪ್ಯ: ವೈ. ಬಿ. ಕಡಕೋಳ

KADAKOL Y.B.

ವೃದ್ಧಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯೌವನ. ಗೃಹಸ್ಥ, ನಂತರ ಬರುವುದು ವೃದ್ಧಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಧಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ಸಂತಸವನ್ನು ತಂದರೆ ಇನ್ನು ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಘಟ್ಟದ ಗಳಿಗೆಯನ್ನು ತಂದೊಡ್ಡುತ್ತಿದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ. ಹಾಗೂ ಒದುತ್ತೇವೆ. ತನ್ನ ವೃದ್ದ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆ ಮಾಡಿಸಿದ್ದನ್ನು ಮತ್ತೊಬ್ಬರಿಗೆ ಆದರ್ಶಪ್ರಾಯವೆಂಬ ಉದಾಹರಣೆ ಕೊಡುತ್ತೇವಲ್ಲವೇ, ? ಹಾಗಾದರೆ ಇಂದು ಅನೇಕರು ತಮ್ಮ ತಂದೆ-ತಾಯಿಯನ್ನು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ? ಎಂಬುದನ್ನು ಊಹಿಸಿದರೆ ತುಂಬ ಬೇಸರವೆನಿಸುತ್ತದೆ.

ಇಂದು ಕೂಡು ಕುಟುಂಬಗಳು ವಿರಳವಾಗುತ್ತಿರುವ ಹಿನ್ನಲೆಯಲ್ಲಿ ತಮ್ಮೊಂದಿಗೆ ವೃದ್ದ ತಂದೆ-ತಾಯಂದಿರನ್ನು ಎಷ್ಟು ತೃಪ್ತಿಕರವಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ಇತ್ತೀಚಿಗೆ ಒಂದು ಸರ್ಕಾರೇತರ ಸಂಸ್ಥೆ Help India ಸಮೀಕ್ಷೆ ನಡೆಸಿದ್ದು ಅದರ ವರದಿಯಲ್ಲಿ ಶೇಕಡಾ 23 % ರಷ್ಟು ವೃದ್ದರು ಇಂದು ಮಾನಸಿಕ ಹಾಗೂ ದೈಹಿಕ ಹಿಂಸೆಗೊಳಗಾಗುತ್ತಿದ್ದಾರೆ ಎಂದು ತಿಳಿಸಿದೆ.

ವಯೋವೃದ್ಧರು ತಮ್ಮ ತಮ್ಮ ಮನೆಯಲ್ಲಿರಬಹುದು. ಹೊರಗಿರಬಹುದು ಅವರನ್ನು ನೋಡಿಕೊಳ್ಳುವವರು ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅವರು ಉಪಟಳಕ್ಕೊಳಗಾಗುತ್ತಿರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಅಂಥಹ ವೃದ್ಧರು “ವೃದ್ಧಾಶ್ರಮ ಅಥವ ಡಂಪಿಂಗ್ ಯಾರ್ಡ ಅಥವ ಓಲ್ಡ ಏಜ್ ಹೋಮ್” ಮೊರೆ ಹೋಗುತ್ತಿರುವುದನ್ನು ಸೂಚಿಸುತ್ತದೆ. ಇಂಥ ವೃದ್ದರ ಸಹಾಯಕ್ಕಾಗಿ ಸರ್ಕಾರಗಳು ಸಹಾಯವಾಣಿಯನ್ನು ಕೆಲವು ರಾಜ್ಯಗಳಲ್ಲಿ ಸ್ಥಾಪಿಸಿದ್ದಾರೆ ಇದು ಇಂದಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಹೊಂದಾಣಿಕೆಯ ಕೊರತೆಯನ್ನು ಸೂಚಿಸುತ್ತದೆ.

ಘಟನೆ 1

ಅದೊಂದು ಚಿಕ್ಕ ಕುಟುಂಬ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಆ ಕುಟುಂಬದಲ್ಲಿ ಗಂಡನ ವಯೋವೃದ್ದ ತಂದೆಯಿದ್ದರು. ಮದುವೆಯಾದ ಮೊದಲು ಕೆಲವು ವರ್ಷ ಪತ್ನಿ ತನ್ನ ಮಾವನನ್ನು ತನ್ನ ತಂದೆಯ ಸಮಾನವಾಗಿ ನೋಡಿಕೊಳ್ಳುತ್ತಿದ್ದಳು. ಮೊದಲ ಹೆರಿಗೆಯಾಗಿ ಮಗು ನಾಲ್ಕು ವರ್ಷವಾಗುವವರೆಗೂ ಕೂಡ ಚೆನ್ನಾಗಿ ಅವರ ಪಾಲನೆ-ಪೋಷಣೆ ಮಾಡುತ್ತಿದ್ದಳು. ಯಾವಾಗ ಮಗುವನ್ನು ಎಲ್. ಕೆ. ಜಿ ಶಿಕ್ಷಣಕ್ಕೆಂದು ಶಾಲೆಗೆ ಹೆಸರು ದಾಖಲಿಸಲಾಯಿತೋ ಮನೆಯಲ್ಲಿ ಒಂಟಿಯಾಗಿರುವ ಮುದುಕನ ಪರಿಸ್ಥಿತಿ ಅಷ್ಟಕಷ್ಟೇ ಎಂಬಂತಾಗತೊಡಗಿತು. ಸಂಜೆ ಶಾಲೆಯಿಂದ ಬರುವ ಮೊಮ್ಮಗನನ್ನು ಎತ್ತಿ ಆಡಿಸುವ ಮುದುಕ ಮಗುವಿನ ತಂದೆ-ತಾಯಿ ಮನೆಗೆ ಬಂದು ಮಗುವಿನ ಹೋಂ ವರ್ಕ ಅದು ಇದು ಅಂತಾ ತಮ್ಮ ತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗುವುದರಲ್ಲಿ ಕಾಲಹರಣ ಮಾಡತೊಡಗಿದರು.

ಮನೆಯಲ್ಲಿ ತನ್ನ ಪರಿಸ್ಥಿತಿ ಕುರಿತು ಒಳಗೊಳಗೆ ವ್ಯಾಕುಲತೆಗೆ ಒಳಗಾಗತೊಡಗಿದ ಮುದುಕನಿಗೆ ಕ್ರಮೇಣ ಬಿ. ಪಿ ಮತ್ತು ಶುಗರ್ ಆರಂಭವಾದವು. ಮುದುಕನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಅವನಿಗೆ ಚಿಕಿತ್ಸ ನಂತರ ಕೊಡಮಾಡುವ ಔಷಧೋಪಚಾರಕ್ಕಾಗಿ ಹಣ ಖರ್ಚಾಗುವುದನ್ನು ತಿಳಿದ ಮಗ ಕೂಡ ತಾತ್ಸಾರದಿಂದ ನೋಡತೊಡಗಿದ. ಹೀಗೆ ಹಲವು ವರ್ಷಗಳುರುಳಿದವು. ಒಂದು ದಿನ ತನ್ನ ಪತ್ನಿಯೊಡನೆ ತಮ್ಮ ಊರಿನ ಹತ್ತಿರವಿದ್ದ ವೃದ್ದಾಶ್ರಮದಲ್ಲಿ ತಂದೆಯನ್ನು ಇಡುವ ಬಗ್ಗೆ ಚರ್ಚಿಸಿದ. ಆ ಪ್ರಕಾರ ವೃದ್ದಾಶ್ರಮಕ್ಕೆ ಗಂಡ-ಹೆಂಡತಿ ಇಬ್ಬರೂ ಹೋಗಿ ಅಲ್ಲಿನ ನಿಯಮಗಳನ್ನು ತಿಳಿದುಕೊಂಡು ಬಂದರು.

ಇನ್ನು ತನ್ನ ತಂದೆಯ ಮನವೊಲಿಸಬೇಕಲ್ಲ ಏನು ಮಾಡುವುದು ಆಲೋಚಿಸತೊಡಗಿದ. ಮೊದಮೊದಲು ತನ್ನ ಪತ್ನಿಯ ಮೂಲಕ ಚುಚ್ಚು ಮಾತುಗಳನ್ನಾಡಿಸತೊಡಗಿದ. ಅವುಗಳನ್ನು ಕೇಳಿದ ಅವನ ತಂದೆಗೆ ಈ ಮನೆಯಲ್ಲಿರುವುದು ಅಸಹ್ಯವೆನಿಸತೊಡಗಿತು. ತನ್ನ ಮಗನ ಪ್ರೊತ್ಸಾಹದಿಂದಲೇ ಇದೆಲ್ಲ ನಡೆಯುತ್ತಿರುವುದನ್ನು ಅರಿತ ಆತ ತಾನಾಗಿಯೇ ಒಂದು ದಿನ ಕೇಳಿದ “ ನನ್ನನ್ನು ಎಲ್ಲಿಯಾದರೂ ಬಿಟ್ಟು ಬಂದು ಬಿಡು” ಎಂದ. ಆಗ ಮೊಸಳೆ ಕಣ್ಣೀರು ಸುರಿಸಿದ ಮಗ ಇಲ್ಲಪ್ಪ ಅವಳ ಸ್ವಭಾವ ಹಾಗೆ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವೃದ್ಧಾಶ್ರಮಕ್ಕೆ ಸೇರಿಸುವೆ. ನೀ ಅಲ್ಲಿ ಸುಖವಾಗಿರಬಹುದು. ನಾನು ಆಗಾಗ ಅಲ್ಲಿಗೆ ಬಂದು ನಿನ್ನನ್ನು ನೋಡಿಕೊಂಡು ಹೋಗುವೆ. ಎಂದೆಲ್ಲ ಹೇಳಿ ತಂದೆಯನ್ನು ಒಪ್ಪಿಸಿದ.

ಮರುದಿನ ವೃದ್ಧಾಶ್ರಮ ಅರ್ಜಿ ಭರ್ತಿ ಮಾಡಿ ಎಲ್ಲೆಲ್ಲಿ ತನ್ನ ತಂದೆಯ ಸಹಿ ಪಡೆಯಬೇಕಾಗಿತ್ತೋ ಅಲ್ಲೆಲ್ಲ ಸಹಿ ಪಡೆದು ತನ್ನ ಒಪ್ಪಿಗೆಯ ಸಹಿ ಮಾಡಿ ಅರ್ಜಿಯನ್ನು ವೃದ್ದಾಶ್ರಮಕ್ಕೆ ಸಲ್ಲಿಸಿ ತಂದೆಯನ್ನು ಅಲ್ಲಿ ಕರೆದುಕೊಂಡು ಹೋಗುವ ದಿನಾಂಕವನ್ನು ಗೊತ್ತು ಪಡಿಸಿಕೊಂಡು  ಮನೆಗೆ ಬಂದನು.

ಆ ದಿನಾಂಕದ ಹಿಂದಿನ ದಿನ ತನ್ನ ತಂದೆಗೆ ಒಂದು ತಿಂಗಳಿಗಾಗುವಷ್ಟು ಔಷಧೋಪಚಾರ ಅವರಿಗೆ ವೃದ್ಧಾಶ್ರಮದಲ್ಲಿ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಂಡ. ಮರುದಿನ ವಾಹನವೊಂದನ್ನು ಮಾಡಿಕೊಂಡು ಗಂಡ-ಹೆಂಡತಿ ಮಗುವಿನೊಂದಿಗೆ ವೃದ್ಧ ತಂದೆಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರಲು ಹೊರಟರು. ವೃದ್ದಾಶ್ರಮ ತಲುಪಿ ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿ ತಂದೆ ಉಳಿದುಕೊಳ್ಳುವ ಮಂಚದ ಬಳಿ ಸಾಮಗ್ರಿಗಳನ್ನು ಇಟ್ಟು ಅಪ್ಪಾ ನಾವಿನ್ನು ಹೊರಡುತ್ತೇವೆ ಎನ್ನಲು ಮಗು ಅಜ್ಜನ ಕೈ ಹಿಡಿದಿತ್ತು ಬಿಡಿಸಿದಾಗ “ಅಪ್ಪಾ ಅಜ್ಜನನ್ನು ಕರೆಯಪ್ಪ. ಅಜ್ಜ ಇಲ್ಲಿ ಇರಬೇಕಾ. ? “ ಎಂದೆಲ್ಲ ಗೋಗರೆಯಿತು. “ಮಗು ಅಜ್ಜ ಇನ್ಮುಂದೆ ಇಲ್ಲಿಯೇ ಇರುತ್ತಾನೆ. ನಾವೇ ಆಗಾಗ ಇಲ್ಲಿಗೆ ಬಂದು ಹೋಗೋದು ಮಾಡೋದು”ಎಂದೆಲ್ಲ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ ತಂದೆಯ ದುಃಖದ ಕಟ್ಟೆಯೊಡೆದು ಕಣ್ಣೀರಧಾರೆ ಹೊರಬರುತ್ತಿತ್ತು. ಇದಾವುದನ್ನು ಲೆಕ್ಕಿಸದ ಮಗ-ಸೊಸೆ ಮೊಮ್ಮಗನೊಂದಿಗೆ ಹೊರಟುಹೋಗಿದ್ದರು. ಮಗು ಅಜ್ಜ ಅಜ್ಜ ಅಂತ ಅಳತೊಡಗಿತ್ತು.

ಘಟನೆ 2

19-5-2015 ರ ವಿಜಯವಾಣಿ ದಿನಪತ್ರಿಕೆಯ ಪುಟ 6 ರಲ್ಲಿ “ಮಗನಿಂದಲೇ ವಂಚನೆಗೊಳಗಾಗಿದ್ದ ವಿಶಾಲಾಕ್ಷಮ್ಮನಿಗೆ ನ್ಯಾಯ ಸಿಕ್ಕಿತು” ಎಂಬ ವರದಿಯಲ್ಲಿನ ಘಟನೆ ಹೀಗಿದೆ. ”10 ವರ್ಷದ ಹಿಂದೆ ಪತಿ ಕಳೆದುಕೊಂಡಿದ್ದ ಬೆಂಗಳೂರಿನ ಗೊಟ್ಟಗೆರೆಯ ವಿಶಾಲಾಕ್ಷಮ್ಮನ ಕುಟುಂಬಕ್ಕೆ 2 ಮನೆಗಳಿದ್ದವು. ಒಂದು ಮನೆ ಆಕೆಯ ಹೆಸರಿನಲ್ಲಿದ್ದರೆ ಇನ್ನೊಂದು ಆಕೆಯ ಪತಿಯ ಹೆಸರಿನಲ್ಲಿತ್ತು. ಪತಿಯ ಹೆಸರಿನಲ್ಲಿದ್ದ ಮನೆಯನ್ನು ಒಬ್ಬನೇ ಮಗ ಪ್ರಶಾಂತ 2007 ರಲ್ಲೇ ತನ್ನ ಹೆಸರಿಗೆ ತನ್ನ ಹೆಸರಿಗೆ ಬರೆದುಕೊಂಡಿದ್ದು. ಈ ವಿಷಯ ಆಕೆಗೆ ಗೊತ್ತಿರಲಿಲ್ಲ. ಆಕೆಗೆ ಇದ್ದ ಒಂದು ಮನೆಯನ್ನು ಕೂಡ ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸತೊಡಗಿದ. 2009 ರಲ್ಲಿ ಅದನ್ನೂ ಮಗನ ಹೆಸರಿಗೆ ವರ್ಗಾಯಿಸಲಾಯಿತು. ಇದಾಗಿ ಕೆಲವೇ ತಿಂಗಳುಗಳಲ್ಲಿ ಆಕೆಗೆ ಕಿರುಕುಳ-ಹಿಂಸೆ ಆರಂಭಿಸಿದ ಮಗ, ಕೊನೆಗೆ ಆಕೆಯನ್ನು ಮನೆಯಿಂದ ಹೊರಹಾಕಿದ. ವಿಶಾಲಾಕ್ಷಮ್ಮ ಅನಾಥಾಶ್ರಮಕ್ಕೆ ಸೇರಿದಳು. ಬಳಿಕ ವಿಶಾಲಾಕ್ಷಮ್ಮ ತನ್ನ ಮನೆ ವಾಪಸು ಪಡೆಯಲು ಹೋರಾಟ ಆರಂಭಿಸಿದರು. ಅದಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾಪನದ ಸಹಾಯ ಪಡೆದರು. ಪ್ರತಿಷ್ಠಾಪನ ಹೋರಾಟದ ಫಲದಿಂದ ಆಕೆಗೆ ಜಯ ಸಿಕ್ಕಿದೆ.

ಘಟನೆ 3

ಇತ್ತೀಚಿಗೆ ಒಂದು ಕುಟುಂಬದಲ್ಲಿ ಇಬ್ಬರೇ ಗಂಡು ಮಕ್ಕಳನ್ನು ಹೊಂದಿದ್ದ ತಂದೆ-ತಾಯಿಗಳು ಇಬ್ಬರಿಗೂ ಸರ್ಕಾರಿ ನೌಕರಿ ದೊರೆತು ಸಮಾಜದಲ್ಲಿ ಜವಾಬ್ದಾರಿ ನೀಡುವವರೆಗೂ ತಮಗಿದ್ದ ತೋಟ ಜಮೀನು ಸಾಲ ಮಾಡಿ ಅವರಿಗೆ ಹೊಸ ಬದುಕನ್ನು ನೀಡಿದರು. ಮಕ್ಕಳಿಬ್ಬರಿಗೂ ನೌಕರಿ ಸಿಕ್ಕ ತಕ್ಷಣ ಮದುವೆಯನ್ನು ಕೂಡ ಮಾಡಿದರು. ಒಬ್ಬ ಮಗ ತನ್ನ ವೃತ್ತಿಯ ವರ್ಗಾವಣೆಯೊಂದಿಗೆ ಬೇರೆ ಊರಲ್ಲಿ ನೆಲೆಸಿದ ವiತ್ತೊಬ್ಬ ಮಗ ತಂದೆ-ತಾಯಿಗಳೊಟ್ಟಿಗೆ ನೆಲೆಸತೊಡಗಿದ. ಅವನ ಹೆಂಡತಿಗೂ ತನ್ನ ತಾಯಿಗೂ ಹೊಂದಾಣಿಕೆಯ ಕೊರತೆ ಕಾಡಲಾರಂಭಿಸಿತು. ಈ ಘಟನೆ ಎಲ್ಲಿಯವರೆಗೂ ಹೋಯಿತೆಂದರೆ ಅವರಿಗೆ ಹುಟ್ಟಿದ ಮಗುವನ್ನು ಅಜ್ಜಿಯಾದವಳು ಕೊಲ್ಲ ಬಯಸಿದಳು ಎಂದು ಹೆಂಡತಿ ಗಂಡನಿಗೆ ಹೇಳುವ ಮಟ್ಟಿಗೆ ಹೋಗಿ ಆ ಮಗನೂ ಕೂಡ ತಂದೆ ತಾಯಿ ಇಬ್ಬರನ್ನು ತೋಟದ ಮನೆಯಲ್ಲಿ ಬಿಟ್ಟು ಬೇರೆ ಮನೆ ಮಾಡಿ ಹೆಂಡತಿಯೊಂದಿಗೆ ವಾಸ ಮಾಡತೊಡಗಿದೆ. ಇದರ ಪರಿಣಾಮ ತಂದೆ-ತಾಯಿಗಳು ಒಂದೇ ಕಡೆಗೆ ವಾಸ ಮಾಡತೊಡಗಿದರೆ ಮಕ್ಕಳು ಮತ್ತೊಂದೆಡೆ ವಾಸ ಮಾಡತೊಡಗಿದ್ದು ದುರಂತವಲ್ಲದೇ ಇನ್ನೇನು. ?

ಈ ರೀತಿಯ ಅನೇಕ ರೀತಿಯ ಘಟನೆಗಳಿಂದ ಸಮಾಜದಲ್ಲಿ ಹೆತ್ತ ತಂದೆ-ತಾಯಿಗಳ ಬದುಕಲ್ಲಿ ನಡೆಯುತ್ತಿವೆ . ಹಿರಿಯ ಜೀವಿಗಳನ್ನು ನೋಡಿಕೊಳ್ಳಬೇಕಾದ ಮಕ್ಕಳೇ ಒಂದಲ್ಲ ಒಂದು ರೀತಿ ಅವರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಮೇಲಿನ ಎರಡು ಘಟನೆಗಳಿಂದ ನಾವು ಕಾಣಬಹುದಾಗಿದೆ.

ಇದು ಒಂದು ಕುಟುಂಬದ ಘಟನೆ ಮಾತ್ರ. ಇಂಥಹ ವಿಭಿನ್ನ ಘಟನೆಗಳನ್ನು ನಾವು ಸಮಾಜದಲ್ಲಿ ಕಾಣಬಹುದು. ಇಂದಿನ ಯುಗದಲ್ಲಿ ಎಲ್ಲ ಕಡೆಗಳಲ್ಲಿಯೂ ವೃದ್ಧಾಶ್ರಮಗಳು ತಲೆ ಎತ್ತಿವೆ. ಅಷ್ಟೇ ಅಲ್ಲ ಅನೇಕ ವೃದ್ಧರು ತಮ್ಮದೇ ಕೂಪದಿಂದ ಹೊರಬಂದು ವೃದ್ಧಾಶ್ರಮಗಳಲ್ಲಿ ದಾಖಲಾಗುತ್ತಿರುವರು ಇಲ್ಲವೇ ಒಂಟಯಾಗಿ ಬದುಕುತ್ತಿರುವರು. . ಮಕ್ಕಳನ್ನು ಹೆತ್ತು ಹೊತ್ತು ಲಾಲನೆ-ಪೋಷಣೆ ಮಾಡಿದ ತಂದೆ-ತಾಯಂದಿರನ್ನು ಜೋಪಾನ ಮಾಡಬೇಕಾದ ಮಕ್ಕಳು ಅವರಿಂದ ತಮಗೇನು ಲಾಭ. ? ಎಂಬುದನ್ನು ವಿಚಾರಿಸಿ ಅವರಿಂದ ತಮಗೆ ಬರಬೇಕಾದ ಆದಾಯದ ಮೇಲೆ ಲೆಕ್ಕ ಹಾಕಿ ನೋಡಿಕೊಳ್ಳುತ್ತಿರುವರು ಕೆಲವರಾದರೆ ಎನೂ ಇಲ್ಲದೇ ಬದುಕನ್ನು ನರಕ ಸದೃಶ ಮಾಡಿಕೊಂಡು ಬದುಕುತ್ತಿರುವವರ ಬದುಕು ಮತ್ತೊಂದೆಡೆ ಕಾಣಬಹುದು.

“ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ” ಎನ್ನುವ ನಾಡಲ್ಲಿ ಇಂದು ವೃದ್ಧಾಶ್ರಮಗಳಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಬದುಕುತ್ತಿರುವವರು ಬದುಕನ್ನು ಕಂಡಾಗ ಕರುಳು ಕಿತ್ತು ಬರುತ್ತಿದೆ. . ಸಾವು ಹೊಸಲಿನಾಚೆ ಸಾವು ಬಂದು ನಿಂತಿರುತ್ತದೆ. ಅದು ಹೊಸಿಲು ದಾಟಿ ಒಳ ಬರುವ ಕ್ಷಣಗಳವರೆಗಾದರೂ ಅವರು ನೋಡಿಕೊಂಡ ಮಕ್ಕಳು ಅವರನ್ನೇ ದೂರ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇಂಥ ತಂದೆ ತಾಯಂದಿರು ತಮ್ಮ ಮಕ್ಕಳಿಗಾಗಿ ತಮ್ಮ ವಯಸ್ಸು ಶ್ರಮ ಎಲ್ಲವನ್ನೂ ತ್ಯಾಗ ಮಾಡಿ ವಿದ್ಯೆ, ಸಂಪಾದನೆ, ಮದುವೆ, ಮನೆ, ಮೊಮ್ಮಕ್ಕಳು ಆಗುವವರೆಗೂ ಜೊತೆಗೆ ಮೊಮ್ಮಕ್ಕಳ ಜನನದ ನಂತರವೂ ಕೂಡ ಅವರನ್ನು ಎತ್ತಿ ಆಡಿಸುವ ಮೂಲಕ ತಮ್ಮ ಜೀವನವನ್ನು ತೇಯುತ್ತ ಬದುಕುತ್ತಿರುವುದನ್ನು ಕಂಡರೆ ವೃದ್ಧಾಪ್ಯದಲ್ಲಿ ಅವರನ್ನು ದೂರ ಮಾಡುತ್ತಿರುವ ಮಕ್ಕಳ ಮನಸ್ಸು ಅದೆಷ್ಟು ಕ್ರೂರರಲ್ಲವೇ. ?

ಕಾರಣ ತಂದೆ-ತಾಯಿಗಳನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬರಬೇಕಾಗಿದೆ. ಮುಪ್ಪನ್ನು ತಡೆಯುವುದು ಅಸಾಧ್ಯ. ತಮಗೂ ಕೂಡ ಮುಂದೊಂದು ದಿನ ಮುಪ್ಪು ಬರುವುದು ಸಹಜ ಎಂಬ ಅರಿವು ಮಕ್ಕಳಲ್ಲಿ ಮೂಡಬೇಕು. ಉದ್ಯೋಗದಲ್ಲಿ ಇದ್ದವರು ನಿವೃತ್ತಿಯಾಗಲೇಬೇಕು. ಹಾಗಂತ ಇಂದಿನ ಯುಗದಲ್ಲಿ ಅವರೂ ಕೂಡ ಸುಮ್ಮನೆ ಕುಳಿತುಕೊಳ್ಳುವ ಯೋಚನೆ ಮಾಡಬಾರದು. ತಮ್ಮಲ್ಲಿ ಶಕ್ತಿ ಇರುವವರೆಗೂ ತಮ್ಮದೇ ಆದ ಆಸಕ್ತಿಯುತ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಕ್ಕಳೊಂದಿಗೆ ಬೆರೆತು ಕೊನೆಯವರೆಗೂ ತಮ್ಮ ತಂದೆ-ತಾಯಿ ತಮ್ಮೊಡನಿರಲಿ ಎಂಬಂತೆ ಬದುಕುವುದು ತಂದೆ-ತಾಯಿಗಳಾದವರು ಕೂಡ ತಮ್ಮ ವರ್ತನೆಯಲ್ಲಿ ಮಾಡಿಕೊಳ್ಳಬೇಕು.

ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು ಎಂದು ಗೊಣಗುತ್ತ ಕೂಡ್ರುವ ಬದಲಾಗಿ ಪರಿಸ್ಥಿತಿಯ ವಿಷಯ ಆಲೋಚನೆಗಳಿಗೆ ಹೊಂದಿಕೊಂಡು ಇಳಿ ವಯಸ್ಸನ್ನು ಕಳೆಯಬೇಕು. ತಲೆಮಾರಿನ ಅಂತರ ಜೀವನದಲ್ಲಿ ಹೊಸಬರ ಆಗಮನ(ಸೊಸೆ, ಅಳಿಯ, ಮೊಮ್ಮಕ್ಕಳು) ಅವರೊಡನೆ ತಾವು ಕೂಡ ಹೊಂದಿಕೊಳ್ಳುವ ವಾತಾವರಣಕ್ಕೆ ಅವರ ಅಭಿರುಚಿಗಳು ಮತ್ತು ಭಿನ್ನವಾದ ಆಲೋಚನೆಗಳಿಗೆ ಸ್ಪಂಧಿಸುತ್ತ ಮುಪ್ಪಿನ ದಿನಗಳನ್ನು ಕಳೆಯಬೇಕಾದ ಅನಿವಾರ್ಯತೆ ಇಂದು ವಯೋವೃದ್ಧರಿಗೆ ಬಂದೊದಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಜೀವನದಲ್ಲಿ ಮರಣ ಮತ್ತು ಮುಪ್ಪು ಇವು ಅನಿವಾರ್ಯ ಕೊನೆಯ ಅವಸ್ಥೆಗಳು. ಅದರಲ್ಲಿಯೂ ಮುಪ್ಪು ಅಸಹನೀಯ ಮತ್ತು ಆರ್ಥಿಕ ತೊಂದರೆಯ ಸನ್ನಿವೇಶವಾಗಿದೆ. ಹಿರಿಯ ನಾಗರಿಕರ ಜೀವನ ಸಂಧ್ಯಾ ಜೀವನ. ಎಷ್ಟೋ ಕುಟುಂಬಗಳಲ್ಲಿ ಈ ಜೀವನ ಸುಖಮಯವಾಗಿ ಸಾಗದೇ ಇದ್ದು ಮನಗಂಡು ಅವರಿಗೆ ಹಣಕಾಸಿನ ಸಹಾಯ ಅತ್ಯಾವಶ್ಯಕ ಎಂಬುದನ್ನು ಅರಿತು 2007-08 ರಲ್ಲಿ “ಸಂಧ್ಯಾ ಸುರಕ್ಷಾ” ಯೋಜನೆ ಜಾರಿಗೆ ಬಂದಿದೆ. ಇದು ಕೂಡ ನಿರ್ಗತಿಕರಾಗುವ ವೃದ್ಧರಿಗಾಗಿ ಮಾತ್ರ.

ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿಗಳೊಡನೆ ಅಜ್ಜ ಅಮ್ಮನೊಡನೆ ಬದುಕಿ ರಜೆ ಅವಧಿಯಲ್ಲಿ ಅಜ್ಜನ ಊರಿಗೆ ಹೋಗಿರುವ ನೆನಪುಗಳನ್ನು ಸ್ನೇಹಿತರೊಡನೆ ಹಂಚಿಕೊಳ್ಳುತ್ತ ಬದುಕಿದ ದಿನಗಳ ಕಳೆಯುತ್ತಿದ್ದ ದಿನಗಳು ಈಗ ನೆನಪುಗಳು ಮಾತ್ರ. ಶ್ರವಣ ಕುಮಾರನ ಮಾತೃಭಕ್ತಿ, ಶ್ರೀರಾಮನ ಪಿತೃವಾಕ್ಯ ಪರಿಪಾಲನೆ ನಮಗೆ ಕಥೆಗಳಾಗಿ ಮಾತ್ರ ಉಳಿದಿವೆ. ಅವಿಭಕ್ತ ಕುಟುಂಬ ಪರಂಪರೆ ಕೂಡ ಇಂದು ಉಳಿಯುತ್ತಿಲ್ಲ. ನಗರೀಕರಣದ ಜೀವನವು ಕೂಡ ಇದಕ್ಕೆ ಕಾರಣ. ಆದರೂ ಕೂಡ ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಸ್ಕಾರವನ್ನು ನಾವಿಂದು ಮಕ್ಕಳಿಗೆ ಕೊಡಬೇಕಾಗಿದೆ. ನೈತಿಕ ಶಿಕ್ಷಣ ಕೂಡ ಶಾಲಾ ಹಂತದಿಂದಲೇ ಬರಬೇಕಾಗಿದ್ದು ಅಂಥಹ ಬದುಕು ನಮ್ಮೆಲ್ಲರದಾಗುವ ಮೂಲಕ ಹಿರಿಯರ ಕಡೆಗೆ ಲಕ್ಷ ಕೊಡುವ ದಿನಗಳು ಬಂದು ವೃದ್ಧಾಶ್ರಮ ಪರಿಕಲ್ಪನೆ ಏನೂ ಇಲ್ಲದ ನಿರ್ಗತಿಕರಿಗಾಗಿ ಎನ್ನುವ ವಾತಾವರಣ ಬರಬೇಕು.

-ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x