ಕರುಳ ಬಳ್ಳಿ ಚಿಗುರಬೇಕೆಂಬುದು ಎಲ್ಲ ಜೀವಿಗಳ ಸಹಜ ಬಯಕೆ. ಅದರಂತೆ ಮನುಷ್ಯನು ಮಕ್ಕಳಿಂದ ತನ್ನ ವಂಶದ ಬಳ್ಳಿ ಚಿಗುರಲಿ ಎಂದು ಹಂಬಲಿಸುತ್ತಾನೆ. ಮಕ್ಕಳಾಗದೇ ಇದ್ದಾಗ ಹತ್ತು ಹನ್ನೆರಡು ದೇವರುಗಳಿಗೆ ಹರಕೆ ಹೊತ್ತು ಸುಸ್ತಾಗುತ್ತಾನೆ. ಛಲದಂಕಮಲ್ಲನಂತೆ ಎಡೆಬಿಡದೆ ಅನೇಕ ಡಾಕ್ಟರಗಳನ್ನು ಸಂಪರ್ಕಿಸುತ್ತಾನೆ. ಮಕ್ಕಳಾಗುವ ಮುನ್ಸೂಚನೆ ಅವನನ್ನು ಪುಲಕಿತಗೊಳಿಸುತ್ತದೆ. ಹೆತ್ತ ಮಕ್ಕಳನ್ನು ಚನ್ನಾಗಿ ಬೆಳೆಸಿ, ವಿದ್ಯಾವಂತರನ್ನಾಗಿಸಲು ಹಗಲಿರುಳು ತನ್ನ ಜೀವ ಸವೆಸುತ್ತಾನೆ. ಜೀವಮಾನದಲ್ಲಿ ಗಳಿಸಿದ ಎಲ್ಲ ಹಣವನ್ನು ವ್ಯಯಿಸಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಪ್ರಯತ್ನಿಸುತ್ತಾನೆ. ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲಿ, ಉತ್ತಮ ಜೀವನ ನಡೆಸಲಿ ಎಂಬ ಮಹತ್ವಾಕಾಂಕ್ಷೆ ಇಟ್ಟುಕೋಡು ಕರುಳ ಬಳ್ಳಿಗಳನ್ನು ಬೆಳೆಸಿ ಜತನದಿಂದ ಕಾಪಾಡುತ್ತಾನೆ. ಲಕ್ಷಗಟ್ಟಲೆ ಹಣ ಸುರಿದು ಪದವಿ ಪಡೆದ ಮಕ್ಕಳು ನೌಕರಿಗಾಗಿ ಹುಡುಕಾಡಿ, ಕೆಲಸ ಪಡೆದು ನಗರ, ಪಟ್ಟಣಗಳನ್ನು ಸೇರಿಬಿಡುತ್ತಾರೆ. ಅವರನ್ನು ಡಾಕ್ಟರ್, ಇಂಜನೀಯರ್ ಗಳನ್ನಾಗಿ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ನಮ್ಮ ಸಂಸ್ಕೃತಿ ಏನು ಎಂಬುದನ್ನು ಕಲಿಸಲು ಮರೆತು ಬಿಟ್ಟಿರುತ್ತೇವೆ.
ಅವರನ್ನು ಆಧುನಿಕ ಬಣ್ಣದ ಲೋಕಕ್ಕೆ ನಮಗೆ ತಿಳಿಯದಂತೆ ತಳ್ಳಿ ಬಿಟ್ಟಿದ್ದೇವೆ. ದೀಪಕ್ಕೆ ಮುತ್ತಿಡುವ ಪತಂಗದಂತೆ ಇಂದು ಹುರಪಳಿಸಿಹೋಗುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಅವರಿಗೆ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣುವ ಆಸೆ ಚಿಗುರುತ್ತಿರುವಂತೆ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾನೆ. ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳ ಕಂಡು ಜೀವನ ಸಾರ್ಥಕವಾಯಿತು ಎಂದು ಬೀಗುತ್ತಾರೆ. ಆದರೆ ನವ ಪೀಳಿಗೆ ಇಂದು ವಿದೇಶಿ ಸಂಸ್ಕøತಿಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವುದನ್ನು ಕಂಡಾಗ ಕರುಳು ಚುರಗುಡುತ್ತದೆ. ನಮ್ಮ ಸಂಸ್ಕøತಿಯ ಗಂಧಗಾಳಿ ಇಲ್ಲದ ಇಂದಿನ ಬಹುತೇಕ ಯುವಕರು ಹಿರಿಯರನ್ನು ನಿರ್ಲಕ್ಷಿಸುತ್ತಿದ್ದಾರೆ. ಬುದ್ಧಿವಾದದ ಮಾತುಗಳಿಗೆ ಬೆಲೆ ಕೊಡದೇ ಸ್ವೇಚ್ಛಾಚಾರ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಸಿನೇಮಾ, ಪಬ್, ಕುಡಿತ, ಧೂಮ್ರಪಾನ, ಗುಂಡಾವೃತ್ತಿ, ಸ್ತ್ರೀವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ, ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ನೆನೆಸಿಕೊಂಡರೆ ಭಾರತ ಎತ್ತ ಸಾಗಿದೆ ಎಂಬ ಭಯ ಕಾಡುತ್ತದೆ.
ಕಾಲ ತುಂಬಾ ಬದಲಾಗುತ್ತಿದೆ, ಬೇರು ಕಳಚಿದ ಮರದಂತೆ ಜೀವನ ಅತಂತ್ರವಾಗುತ್ತಿದೆ. ತಮ್ಮ ಬದುಕಿನ ಕಷ್ಟ ಕಾಲದಲ್ಲಿದ್ದರೂ ಮಕ್ಕಳ ಭವಿಷ್ಯ ಉಜ್ವಲ ಆಗಲಿ, ಅವರು ಸುಖದಿಂದ ಬಾಳಲಿ, ಸ್ವಾವಿಲಂಬಿಗಳಾಗಲಿ ಎಂದು ಹಂಬಲಿಸಿದ ಪಾಲಕರು ಮಕ್ಕಳು ಹಣ ಕೇಳಿದೊಡನೆ ಏ. ಟಿ. ಎಂ. ನಂತೆ ಹಣ ಕೊಡುತ್ತಾ ಬರುತ್ತಾರೆ. ಮಕ್ಕಳನ್ನು ಹೆತ್ತು ಹೊತ್ತು, ಬೆಳೆಸಿ, ಶಿಕ್ಷಣ ನೀಡುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಅವರನ್ನು ಬೆಳೆಸಿರುತ್ತಾರೆ. ಆದರೆ ಪಾಲಕರು ಮುಪ್ಪಾವಸ್ಥೆಗೆ ಬರುತ್ತಿದ್ದಂತೆ ಅವರನ್ನು ಅಸ್ಥಿರತೆ, ಅನಾಥ ಪ್ರಜ್ಞೆ ಕಾಡಲು ಪ್ರಾರಂಭವಾಗುತ್ತದೆ. ಉನ್ನತ ಸ್ಥಾನದಲ್ಲಿದ್ದರೂ ತಂದೆತಾಯಿಗಳನ್ನು ಮಕ್ಕಳು ಕಡೆಗಣಿಸುತ್ತಾರೆ. ಈ ದುರಂತ ಸತ್ಯ ಎಂಥವರನ್ನೂ ಮನಕಲಕುತ್ತದೆ. ಕೆಲಸದಲ್ಲಿ ಬಿಜೀ ಎನ್ನುವ ನೆಪ ಒಂದು ಕಡೆ ಆದರೆ, ಇನ್ನೊಂದೆಡೆ ಹೆಂಡತಿಯ ಗುಲಾಮರಂತೆ ನಡೆಯುತ್ತಾ ತಮ್ಮ ಪಾಲಿನ ಕರ್ತವ್ಯ ಏನು ಎಂಬುದನ್ನು ಮರೆತು, ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ನೂಕುವ ಪ್ರಮಾದ ಎಸಗುತ್ತಾರೆ. ಹಡೆದ ಜೀವಗಳಿಗೆ ಎಷ್ಟೊಂದು ಹಿಂಸೆ, ನೋವು ಆಗುತ್ತದೆ ಎಂಬ ಪರಿವೆ ಇಲ್ಲದೆ, ಅವರನ್ನು ನರಕಕ್ಕೆ ನೂಕಿ ಐಷಾರಾಮಿ ಜೀವನ ನಡೆಸುತ್ತ ಹೆಂಡತಿ, ಮಕ್ಕಳು, ತಮ್ಮ ಅತ್ತೆ ಮಾವರೇ ಸರ್ವಸ್ವ ಎಂದು ನಂಬಿ ದೊಡ್ಡ ಪಾಪ ಮಾಡುತ್ತಿದ್ದಾರೆ ಇಂದಿನ ಪೀಳಿಗೆ.
ಜನ್ಮ ನೀಡಿದ ಜೀವಗಳನ್ನು ಮರುಗಿಸಿ, ಅವರನ್ನು ಅನಾಥ ಪ್ರಜ್ಞೆ ಕಾಡುವಂತೆ ಮಾಡುತ್ತಾರೆ. ಮುಪ್ಪಿನಲ್ಲಿ ತಮಗೆ ಆಸರೆ ಆಗುತ್ತಾರೆಂದು ನಂಬಿ ಬದುಕು ನೂಕುತ್ತಿರುವ ಹಿರಿಯ ಜೀವಗಳು ಇಂದು ಅನಾಥ ಆಗತ್ತಿವೆ. ಸೊಸೆಯಂದಿರು ಗಂಡನ ತಂದೆತಾಯಿಗಳನ್ನು ಮನೆಯ ಆಳಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿರುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಇಂಥ ಪಾಲಕರು ತಾವೇ ಗಳಿಸಿ ಕಟ್ಟಿದ ಮನೆಯ ಮೂಲೆಯಲ್ಲಿ ಮುದುಡಿ ಬಿದ್ದುಕೊಂಡು, ಮುದಿ ಜೀವಗಳು ಅಡಿಗೆ ಮಾಡಿ ಉಣ್ಣುವ ಸ್ಥಿತಿ ನಿರ್ಮಾಣವಾಗುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ. ಹಣವಂತರಾದ ಮಕ್ಕಳು ತನ್ನ ತಂದೆ ತಾಯಿಗಳನ್ನು ವೃದ್ಧಾಶ್ರಮಗಳೆಂಬ ಪಾಪ ಕೂಪಕ್ಕೆ ತಳ್ಳುತ್ತಿವೆ. ಅವರಿಗೆ ಬಂಧುಬಳಗ, ಬಾಂಧವ್ಯಗಳಿಲ್ಲದ ನರಕ ಸದೃಶ ವೃದ್ಧಾಶ್ರಮಗಳೇ ಗತಿ ಆಗುತ್ತಿವೆ. ಮಕ್ಕಳನ್ನು ಪಡೆದು, ಅವರ ಹೊಲಸು ತೊಳೆದು ತಮ್ಮ ಅಂತ್ಯ ಕಾಲಕ್ಕೆ ಸಾಕಿ ಸಲಹುವರು ಎಂದು ನಂಬಿದ ಮುದಿ ಜೀವಗಳು, ಈ ದುರಾದೃಷ್ಟ ಸ್ಥಿತಿ ಅನುಭವಿಗೋಸ್ಕರವೇ ಮಕ್ಕಳು ಬೇಕೇ ಎಂದು ಕಣ್ಣೀರಿಡುವಂಥ ಸ್ಥಿತಿ ಈಗ ಸರ್ವೇಸಾಮಾನ್ಯವಾಗಿದೆ.
ಯುವಕರೇ ನಿಮಗೂ ಒಂದು ದಿನ ಈ ಕಾಲ, ಈ ಪರಿಸ್ಥಿತಿ ಬಂದೇ ಬರುತ್ತದೆ. ಮಾಡಿದ್ದುಣ್ಣೋ ಮಹಾರಾಯಾ ಎಂಬಂತೆ ನಿಮಗೂ ಇದು ಕಟ್ಟಿಟ್ಟ ಬುತ್ತಿ, ಈಗಲೇ ಎಚ್ಚೇತ್ತು ಮುಪ್ಪಾವಸ್ಥೆಯಲ್ಲಿರುವ , ಅನಾರೋಗ್ಯದಿಂದ ಬಳಲುತ್ತಿರುವ, ನಿಮಗೆ ಜನ್ಮ ನೀಡಿದ ಹಿರಿಯ ಜೀವಗಳು ನಿಮ್ಮ ಪಾಲಿನ ದೇವರು ಎಂದು ತಿಳಿದು ಬಾಳ ಸಂಜೆಯಲ್ಲಿರುವ ನಡೆದಾಡುವ ದೇವರುಗಳನ್ನು ಸತ್ಕರಿಸಿ, ಪೂಜಿಸಿ ಪುಣ್ಯ ಕಟ್ಟಿಕೊಳ್ಳಿ, ಇಲ್ಲವಾದರೆ ನೀವು ಈ ನೋವನ್ನು, ಸಂಕಟವನ್ನು , ಇಂಥ ಪರಿಸ್ಥಿತಿಯನ್ನು ಅನುಭವಿಸಬೇಕಾದೀತು ಎಚ್ಚರ. .
-ಈಶ್ವರ. ಜಿ. ಸಂಪಗಾವಿ, ಕಕ್ಕೇರಿ.