ವೃದ್ದಾಪ್ಯದಲ್ಲಿ ಮಕ್ಕಳ ಜವಾಬ್ದಾರಿ: ವೇದಾವತಿ ಹೆಚ್. ಎಸ್.


ಹಳ್ಳಿಯಿಂದ ಡೆಲ್ಲಿಯವರೆಗೆ ವೃದ್ದಶ್ರಾಮಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಕಾರಣ ಬೇಕಾದಷ್ಟು ಇರಬಹುದು. ಇಂದಿನ ಮಕ್ಕಳ ನಡವಳಿಕೆ,ಹೊಂದಾಣಿಕೆಯ ಕೊರತೆಯಿಂದಲೂ ಇರಬಹುದು. ಮೂವತ್ತು ವರ್ಷಗಳ ಹಿಂದೆ ತುಂಬಿದ ಕುಟುಂಬ ಇರುತ್ತಿದ್ದ ದಿನಗಳವು. “ಮನೆ ತುಂಬಾ ಮಕ್ಕಳಿರಲವ್ವ”ಎನ್ನುವ ಕಾಲವಾಗಿತ್ತು. ಒಂದು ಮನೆಯಲ್ಲಿ ಐದಾರು ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಮಕ್ಕಳಿಗೆ ತಂದೆ ತಾಯಿಯು ಮನೆಯಲ್ಲಿ ಸಂಸ್ಕಾರವನ್ನು ಕಲಿಸುತ್ತಿದ್ದರು. “ಮನೆಯೇ ಮೊದಲ ಪಾಠ ಶಾಲೆ”ಎಂಬ ಹಾಗೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಬೆರೆತು ಬಾಳಬೇಕು ಎನ್ನುವುದು ಮನೆಯ ಜನರಿಂದಲೇ ನೋಡಿ ಕಲಿಯುವ ದಿನ ಅಂದಿನ ಕಾಲದ್ದು ಎಂದರೆ ತಪ್ಪಾಗಲಾರದು. ಇಂದಿನ ರೀತಿಯ ವಿಧ್ಯಾಭ್ಯಾಸ ಸಹ ಅಂದು ಇರಲಿಲ್ಲ. ಕಷ್ಟಪಟ್ಟು ಜೀವನ ನೆಡೆಸುತ್ತಿದ್ದ ಕಾಲವದು. ಹಳ್ಳಿಗಳಲ್ಲಿ ಶಾಲೆಗೆ ಮಕ್ಕಳು ಹೋಗಬೇಕಾದರೆ ಕಿಲೋ ಮೀಟರ್ ನೆಡೆದು ಹೋಗಬೇಕಿತ್ತು. ಹಳ್ಳಿಗಾಡಿನ ಮಕ್ಕಳು ಬಿಸಿಲು, ಮಳೆಗೆ ಅಂಜದೆ,ಕಾಡುಮೇಡು, ಗುಡ್ಡ ಬೆಟ್ಟಗಳನ್ನು ದಾಟಿ ಯಾರ ಸಹಾಯ ಬಯಸದೆ ಅಕ್ಕಪಕ್ಕದ ಮನೆಯ ಮಕ್ಕಳೋಂದಿಗೆ ಜೊತೆಯಲ್ಲಿ ಸಂತೋಷದಿಂದ ಶಾಲೆ ಕಡೆಗೆ ಪಯಣ ಮಾಡುತ್ತಿದ್ದ ದಿನಗಳವು. ತಂದೆ ತಾಯಿ ಸಹ ಅತಿಯಾಗಿ ಮಕ್ಕಳ ಬಗ್ಗೆ ಕಾಳಜಿಯನ್ನು ತೋರಿಸುವುದು ಕಡಿಮೆ ಇತ್ತೆಂದು ಹೇಳಬಹುದು. ಅಂದಿನ ತಂದೆ ತಾಯಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಹೇಳಿಕೊಟ್ಟಿದ್ದರು. ಓದುಬರಹ ಚೆನ್ನಾಗಿ ಬರುವವರನ್ನು ಮಾತ್ರ ಓದಿಸುತ್ತಿದ್ದರು. ಒತ್ತಾಯ ಪೂರ್ವಕವಾಗಿ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ತಂದೆ ತಾಯಿಯ ಜೊತೆ ಮಕ್ಕಳಿಗೆ ಒಳ್ಳೆಯ ಬಾಂಧವ್ಯ ಇರುತ್ತಿತ್ತು. ಅಂದಿನ ಕುಟುಂಬ ಹೊಂದಾಣಿಕೆಯಿಂದ ಬಾಳುವೆ ನೆಡೆಸುವುದು ಸಾಮಾನ್ಯವಾಗಿತ್ತು. ಹಿರಿಯರ ಮೇಲೆ ಮಕ್ಕಳಿಗೆ ಗೌರವವಿದ್ದ ಕಾಲವಾಗಿತ್ತು.

ನಂತರ ದಿನಗಳಲ್ಲಿ ಅವರ ಮಕ್ಕಳೇ ಹೆಚ್ಚಿನ ವಿಧ್ಯಾಭ್ಯಾಸವನ್ನು ಮಾಡಲು ಹಳ್ಳಿಯಿಂದ ಪೇಟೆ ಕಡೆಗೆ ಪಯಣ ಬೆಳೆಸಿದರು. ಪೇಟೆಗೆ ವಿಧ್ಯಾಭ್ಯಾಸಕ್ಕೆ ಬಂದವರು ಇಲ್ಲಿಯೇ ನೌಕರಿ ಹಿಡಿದು, ಮನೆಯನ್ನು ಮಾಡಿ ಹಳ್ಳಿಯ ಕಡೆ ಮರೆತು ಹೋದರು ಎನ್ನಬಹುದು.

ಇತ್ತೀಚೆಗೆ ಹಳ್ಳಿಯ ಮನೆಯಲ್ಲಿ ಸಹ ತುಂಬಿದ ಕುಟುಂಬ ಒಡೆದು ಎಲ್ಲಾ ಮನೆಯಲ್ಲಿ ತಂದೆ ತಾಯಿ ಎರಡು ಮಕ್ಕಳು ಜೀವನ ನೆಡೆಸುವುದು ಕಂಡುಬರುತ್ತದೆ. ಎಲ್ಲಾ ಸೌಕರ್ಯಗಳೂ ಇದ್ದರೂ ತಂದೆ ತಾಯಿಯನ್ನು ಬಿಟ್ಟು ಸಣ್ಣಪುಟ್ಟ ಕೆಲಸಕ್ಕೆ ಪೇಟೆಗೆ ಮುಖ ಮಾಡುತ್ತಿರುವುದು ವಿಷಾದನೀಯ. ಪೇಟೆಗೆ ಬಂದ ಮಕ್ಕಳು ಹಳ್ಳಿಯ ಕಡೆ ಮುಖ ಹಾಕಿ ಮಲಗುವುದು ಸಹ ಇಲ್ಲ ಎನ್ನಬಹುದು. ಪೇಟೆಯ ರುಚಿ ಹಳ್ಳಿಯ ಸಕಲ ಸೌಕರ್ಯಗಳನ್ನು ಮರೆಯುವಂತೆ ಮಾಡುತ್ತಿದೆ.

ಹಳ್ಳಿಯಿಂದ ಪೇಟೆಗೆ ಬಂದವರು ಅಥವಾ ಪೇಟೆಯಲ್ಲಿ ವಾಸಿಸುವ ಮಂದಿ ಸಂಸಾರ ನೆಡೆಸಲು ಖಾಯಂ ಕೆಲಸ ಮಾಡಲು ಪ್ರಾರಂಭ ಮಾಡಿಕೊಳ್ಳುತ್ತಾರೆ. ನಂತರ ದಿನಗಳಲ್ಲಿ ಅವರ ಖರ್ಚು ವೆಚ್ಚ ಜಾಸ್ತಿ ಅಗುತ್ತಾ ಹೋಗುತ್ತದೆ. ಬರುವ ಸಂಬಳವನ್ನು ಇರುವ ಒಂದು ಅಥವಾ ಎರಡು ಮಕ್ಕಳ ವಿಧ್ಯಾಭ್ಯಾಸಕ್ಕೆ ವಿನಿಯೋಗ ಮಾಡುತ್ತಾರೆ. ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರಿಂಗ್ ಓದಿಸಲು ದುಡಿದ ಹಣವನ್ನು ಖರ್ಚು ಮಾಡುತ್ತಾರೆ ತಮಗೆ ಬರುವ ಸಂಬಳಕ್ಕಿಂತ ಖರ್ಚು ವೆಚ್ಚಗಳು ಜಾಸ್ತಿಯಾಗಲು ಪ್ರಾರಂಭವಾಗುತ್ತದೆ. ಮಕ್ಕಳನ್ನು ಬ್ಯಾಂಕ್ ಲೋನ್ ಮಾಡಿ,ಅಥವಾ ಸಾಲವನ್ನು ಮಾಡಿ ಓದಿಸಿದವರು ಇದ್ದಾರೆ.

ಓದಿದ ಮಕ್ಕಳು ದೊಡ್ಡ ದೊಡ್ಡ ಕಂಪನಿಯಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಅರ್ಹತೆ ಪಡೆದು ಕೆಲಸಕ್ಕೆ ಸೇರಿ ಕೊಳ್ಳುವುದು ಸಾಮಾನ್ಯವಾಗಿದೆ. ಕಂಪನಿಯಲ್ಲಿ ಕೊಡುವ ಎರಡರಷ್ಟು ಕೆಲಸವನ್ನು ಮಾಡಿ, ಯಾವ ದೇಶಕ್ಕೆ ಹೋಗು ಎಂದರು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಆಂಥಹ ಸಂದರ್ಭದಲ್ಲಿ ತಂದೆತಾಯಿಗಳನ್ನು ಬಿಟ್ಟು ಮೂರು ತಿಂಗಳು ಕೆಲಸದ ಮೇಲೆ ಮೊದಲು ಹೋಗಿ, ನಂತರ ದಿನಗಳಲ್ಲಿ ಆರು ತಿಂಗಳು, ವರ್ಷ, ಐದು ವರ್ಷ ಕಳೆದು ಹೋಗುತ್ತದೆ. ಐದು ವರ್ಷಗಳ ನಂತರ ಆ ದೇಶದ ಸಿಟಿಜನ್ ಸಿಪ್ ಪಡೆದು ಕೊಂಡು ತಾಯ್ನಾಡಿನ ನೆನಪು ಕಡಿಮೆಯಾಗುತ್ತಾ ಬರುತ್ತದೆ. ಮುಂದಿನ ದಿನಗಳಲ್ಲಿ ಅಲ್ಲಿಯೇ ಮನೆ ಮಾಡಿ ತಮ್ಮ ಸ್ವಂತ ತಂದೆ ತಾಯಿಯನ್ನು ಮರೆತು ಬಿಡುವ ಬಹು ಮಂದಿಯನ್ನು ನೋಡಿದ್ದೇವೆ. ಕೆಲವರು ತಂದೆ ತಾಯಿಯನ್ನು ತಾವು ಇರುವ ಜಾಗಕ್ಕೆ ಕರೆದುಕೊಂಡು ಹೋಗುವ ಮನಸ್ಸಿದ್ದರೂ ಅವರ ತಂದೆ ತಾಯಿಗೆ ಅಲ್ಲಿನ ವಾತಾವರಣ ಸರಿ ಹೊಂದುವುದಿಲ್ಲ. ಇದರಿಂದ ಪೋಷಕರು ಮತ್ತು ಮಕ್ಕಳು ಬೇರೆ ಬೇರೆಯಾಗಿ ವಾಸ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಕೆಲವರಿಗೆ ಬೇಕಾದ ಐಶ್ವರ್ಯ ಅವರದೇ ಪರಿಸರದಲ್ಲಿ ಇದ್ದರೂ ಹೊರದೇಶಗಳ ವ್ಯಾಮೋಹದಿಂದ ಹುಟ್ಟಿ ಬೆಳೆದ ಊರು, ಜನ,ತನ್ನ ಸ್ವಂತ ಬಂದು ಬಳಗದವರನ್ನು ತೊರೆದು ಗೋತ್ತಿಲ್ಲದ ಊರಿನಲ್ಲಿ ವಾಸ ಮಾಡುತ್ತಿದ್ದಾರೆ. ಅಂತಹ ಕುಟುಂಬ ನಮ್ಮ ಅಕ್ಕಪಕ್ಕದ ಮನೆಯಲ್ಲಿ ಸಹ ಇದ್ದಾರೆ ಅನ್ನುವುದು ಶೋಚನೀಯ.

ಮಕ್ಕಳೊಂದು ಕಡೆ ಪೋಷಕರು ಒಂದು ಕಡೆ ನೆಲೆಸುವುದು ಬಹಳಷ್ಟು ಕುಟುಂಬದಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದೇವೆ. ದಿನ ಕಳೆದಂತೆ ಪೋಷಕರ ಮತ್ತು ಮಕ್ಕಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಎರಡು ಬೇರೆ ಬೇರೆ ಕುಟುಂಬಗಳಾಗಿ ವಾಸ ಮಾಡುವುದು ಪ್ರಾರಂಭವಾಗುತ್ತದೆ. ಮಕ್ಕಳು ಸಹ ಉದ್ಯೋಗದ ನಿಮಿತ್ತ ಹೊರ ದೇಶಕ್ಕೆ ಹೋದವರು ಅಲ್ಲಿಯೇ ತಮ್ಮದೇ ಸ್ವಂತ ಮನೆಗಳನ್ನು ಮಾಡಿ ಜೀವನ ನೆಡೆಸುತ್ತಿರುತ್ತಾರೆ. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಟ್ಟು ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಕೊಟ್ಟ ತಂದೆ ತಾಯಿಗಳು ಒಂಟಿಯಾಗಿ ಬಾಳುತ್ತಾರೆ. ನೂರಾರು ಆಸೆಯನ್ನು ಹೊತ್ತು ಮಕ್ಕಳನ್ನು ಸಲುಹಿದ ತಂದೆ ತಾಯಿಗೆ ಕೊನೆಗಾಲದಲ್ಲಿ ನೆರವಿಗೆ ಬಾರದಿರುವುದು ನೋವಿನ ಸಂಗತಿ.

ದಿನ ಕಳೆದಂತೆ ಮಕ್ಕಳ ಮತ್ತು ಪೋಷಕರ ಬಾಂಧವ್ಯದಲ್ಲಿ ಹೊಂದಾಣಿಕೆ ಎಂಬುದು ಇನ್ನೂ ದೂರವಾಗುತ್ತಾ ಹೋಗುತ್ತದೆ. ಕಷ್ಟಪಟ್ಟು ವಿಧ್ಯಾಭ್ಯಾಸ ಕೊಡಿಸಿ, ಸಾಲವನ್ನು ಮಾಡಿ ಓದಿಸಿದ ಮಕ್ಕಳಿಗೆ ತಮ್ಮ ಹೆತ್ತವರ ಸಂಕಟ ಗೊತ್ತಾಗುವುದಿಲ್ಲ. ಮಕ್ಕಳು ತಮ್ಮ ಜೀವನ ಮಾತ್ರ ಮುಖ್ಯ ಎಂದು ತಿಳಿಯುತ್ತಾರೆ. ಹೆತ್ತವರು ದಿನ ಕಳೆದಂತೆ ತಮ್ಮ ದೈನಂದಿನ ಬದುಕನ್ನು ಸಂಕಷ್ಟದಲ್ಲಿ ಕಳೆಯುವಂತಾಗಿದೆ. ಹಿಂದೆ ಮಕ್ಕಳಿಗೆ ಮಾಡಿದ ಖರ್ಚು ವೆಚ್ಚಗಳ ಜೊತೆಗೆ ವಯಸ್ಸಿನ ಸಹಜ ಖಾಯಿಲೆಗಳು ಅವರೋಂದಿಗೆ ಬಂದಿರುವುದು ಕಾಣಬಹುದು. ವಯಸ್ಸಾದಂತೆ ಒಂಟಿ ಬದುಕು ಸಾಕಾಗಿ ಹೋಗುತ್ತದೆ. ದಿನದ ಚಿಕ್ಕ ಪುಟ್ಟ ಕೆಲಸ ಕಾರ್ಯಕ್ಕೂ ಬೇರೆಯವರ ಸಹಾಯ ಕೇಳುವ ಸ್ಥಿತಿ ನಿರ್ಮಾಣವಾಗುತ್ತದೆ. ಎತ್ತಿ ಆಡಿಸಿದ ಮಕ್ಕಳು ಕೊನೆಗಾಲದಲ್ಲಿ ನೆರವಾಗಿ ತಮ್ಮ ಬಾಳಿಗೆ ಬರುತ್ತಾರೆ ಎಂಬ ನಂಬಿಕೆ ಹುಸಿಯಾಗುತ್ತದೆ. ತಮ್ಮ ಕಷ್ಟದ ದಿನಗಳಲ್ಲಿ ಮಕ್ಕಳಿಗೆ ಮಾಡಿದ ತ್ಯಾಗದ ಬಗ್ಗೆ ಹಳಿಯುತ್ತಾ ಎತ್ತಕ್ಕಾದರೂ ಮಕ್ಕಳನ್ನು ಓದಿಸಿದ್ದೇವು,ಓದಿಸದದ್ದರೆ ಹಣವೂ ನಮ್ಮ ಜೊತೆ ಇರುತ್ತಿತ್ತು. ಮಕ್ಕಳು ಸಹ ನಮ್ಮೊಂದಿಗೆ ಇರುತ್ತಿದ್ದರು ಎನ್ನುವ ಮಂದಿ ಬಹಳಷ್ಟು ಇದ್ದಾರೆ. ಇಂತಹ ಷೋಷಕರು ಮುಂದೆ ದಾರಿ ಕಾಣದೆ ವೃದ್ದಶ್ರಾಮಕ್ಕೆ ಸೇರುತ್ತಿರುವದು ಖೇದಕರ. ತಂದೆ ತಾಯಿಗೂ ಬೇರೆ ಮಾರ್ಗವಿಲ್ಲ.

ಕೆಲವು ಕುಟುಂಬಗಳಲ್ಲಿ ಮಕ್ಕಳು ಸಹ ಅವರೊಂದಿಗೆ ಷೋಷಕರನ್ನು ಕರೆದುಕೊಂಡು ಹೋದರೆ ಖರ್ಚು ವೆಚ್ಚ ಜಾಸ್ತಿಯಾಗುತ್ತದೆ ಎಂದು ಮಕ್ಕಳೇ ಷೋಷಕರನ್ನು ವೃದ್ದಶ್ರಾಮಕ್ಕೆ ಸೇರಿಸುವುದು ನೋಡಿದ್ದೇವೆ. ಹೊರದೇಶಗಳಲ್ಲಿ ಅಸ್ಫತ್ರೆ ಖರ್ಚು ಜಾಸ್ತಿ ಇರುವುದರಿಂದ ಇಲ್ಲಿಯೇ ಚಿಕ್ಕ ಪುಟ್ಟ ಅಸ್ಫತ್ರೆಗೆ ಸೇರಿಸುವುದು ನೋಡಿದ್ದೇವೆ. ಷೋಷಕರು ಏನಾದರೂ ಹೇಳಿದರೆ ನಿಮಗೆ ವಯಸ್ಸಾಯಿತು ನಮ್ಮ ಜೊತೆಗೆ ಬಂದರೆ ಖರ್ಚು ಜಾಸ್ತಿಯಾಗಿ ನಮ್ಮ ಕುಟುಂಬ ಇಲ್ಲಿಗೆ ವಾಪಸ್ಸು ಬರಬೇಕಾಗುತ್ತದೆ. ನಾವು ನಿಮ್ಮೋಂದಿಗೆ ಇಲ್ಲಿಗೆ ಬಂದರೆ ಈ ದೇಶದ ವಾತಾವರಣ ಹೊಂದಿಕೆ ಆಗುವುದಿಲ್ಲ ಎನ್ನುವವರು ಬಹಳಷ್ಟು ಮಂದಿ. ಇಲ್ಲೇ ಹುಟ್ಟಿ ಬೇಳೆದ ಮಕ್ಕಳಿಗೆ ಹತ್ತು ವರ್ಷಗಳ ನಂತರ ಈ ದೇಶದ ವಾತಾವರಣ ಹೊಂದಾಣಿಕೆ ಆಗುವುದಿಲ್ಲ ಎಂದರೆ ಇದಕ್ಕಿಂತಲೂ ಹಾಸ್ಯಾಸ್ಪದ ಇನ್ನೊಂದಿಲ್ಲ. ಷೋಷಕರು ವಿಧಿಯಿಲ್ಲದೆ ತಮ್ಮ ಆಸ್ತಿಪಾಸ್ತಿ ಮಾರಿ ವೃದ್ದಶ್ರಾಮಕ್ಕೆ ಸೇರುತ್ತಿರುವುದು ಕಾಣಬಹುದು.

ಪೇಟೆಯವರ ಪಾಡು ಒಂದು ರೀತಿ ಆದರೆ ಹಳ್ಳಿಗಳಲ್ಲಿ ಇನ್ನೊಂದು ರೀತಿ. ಹಳ್ಳಿಯಿಂದ ಪೇಟೆಗೆ ಬಂದ ಮಕ್ಕಳು ತಮ್ಮ ಪೋಷಕರನ್ನು ಹಳ್ಳಿಯಲ್ಲಿ ಬಿಟ್ಟು ಅವರ ಕಷ್ಟಸುಖ ನೋಡುವುದು ಕಡಿಮೆ ಎನ್ನಬಹುದು. ತಮ್ಮ ಕಷ್ಟವನ್ನು ಅನುಭವಿಸಲೀಕ್ಕೂ ಆಗದೇ ಬೇರೆಯವರ ಹತ್ತಿರ ಹೇಳಲಿಕ್ಕೂ ಆಗದೆ ಮನಸ್ಸಿನಲ್ಲಿ ಕೋರಗುತ್ತಿರುತ್ತಾರೆ. ಕೊನೆಗಾಲದಲ್ಲಿ ತಮ್ಮ ಸೇವೆ ಮಾಡುತ್ತಾರೆಂದು ಮುದ್ದಾಗಿ ಬೆಳೆಸಿದ ಮಕ್ಕಳು ಅವರ ಬೇಕು ಬೇಡಗಳನ್ನು ವಿಚಾರಿಸದೆ ವೃದ್ದಶ್ರಾಮಕ್ಕೆ ತಳ್ಳುತ್ತಿದ್ದಾರೆ.

ಒಂದು ಮಗುವನ್ನು ಹೆತ್ತು ಹೊತ್ತು ಸಾಕಿ ದೊಡ್ಡವರಾನ್ನಾಗಿ ಮಾಡಲು ಪೋಷಕರು ತಮ್ಮ ಜೀವನದ ಎಲ್ಲಾ ಕಷ್ಟ ಸುಖವನ್ನು ತ್ಯಾಗ ಮಾಡಿರುತ್ತಾರೆ. ಷೋಷಕರು ತಮ್ಮ ಮಕ್ಕಳನ್ನು ಸ್ವಾರ್ಥದಿಂದ ಸಾಕುವುದಿಲ್ಲ. ಕೊನೆಗಾಲದಲ್ಲಿ ತಮಗೆ ತನ್ನದೇ ಕರುಳಿನ ಕುಡಿ ನೆರವಾಗ ಬಹುದು ಎಂಬ ಮಮಕಾರದಿಂದ ಜೋಪಾನವಾಗಿ ಬೆಳೆಸಿರುತ್ತಾರೆ. ಆದರೆ ಮಕ್ಕಳು ಷೋಷಕರ ಮನಸ್ಸನ್ನು ಅರ್ಥ ಮಾಡಿ ಕೊಳ್ಳದೇ ವೃದ್ದಶ್ರಾಮಕ್ಕೆ ದೂಡುತ್ತಿರುವುದು ತುಂಬಾ ದುಃಖಕರವಾದ ಸಂಗತಿ. ಈ ದಿನ ನಾವು ಏನು ಮಾಡುತ್ತೇವೆ ಅದನ್ನೇ ನಮ್ಮ ಪೀಳಿಗೆ ಮಾಡುತ್ತದೆ ಎಂಬುದು ಮರೆತ್ತಿರುತ್ತಾರೆ. ವಿಧ್ಯೆಯೊಂದಿಗೆ ತಿಳುವಳಿಕೆಯನ್ನು ಮರೆತು ಹೋಗಿರುವ ಇಂದಿನ ಜನಾಂಗ ಎಚ್ಚತ್ತು ಕೊಳ್ಳದಿದ್ದರೆ. . ಮುಂದೆ ಊರಿಗೊಂದು ವೃದ್ದಶ್ರಾಮ ಅಗುವುದರಲ್ಲಿ ಸಂಶಯವಿಲ್ಲ. ಷೋಷಕರನ್ನು ಪೂಜಿಸುವ ದೇಶ ನಮ್ಮದು. ಅವರ ಆಶೀರ್ವಾದವಿಲ್ಲದೆ ಕೆಲಸ ಕಾರ್ಯ ನೆಡೆಸದ ದೇಶ ನಮ್ಮದು. ಕೊನೆಗಾಲದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಅವರ ಕಣ್ಣೀರಿಗೆ ಕಾರಣರಾಗದೆ. . ಷೋಷಕರ ಸಂತೋಷದಲ್ಲಿ ಭಾಗಿಯಾಗೋಣ. ಭಾರತದ ಸಂಸ್ಕೃತಿ. ಸಂಸ್ಕಾರವನ್ನು ಎತ್ತಿ ಹಿಡಿದು ದೇಶದಲ್ಲಿ ಹೆಚ್ಚುತ್ತಿರುವ ವೃದ್ದಶ್ರಾಮವನ್ನು ಕಡಿಮೆ ಮಾಡೋಣ. ಷೋಷಕರನ್ನು ವೃದ್ದಶ್ರಾಮಕ್ಕೆ ಸೇರಿಸಿ ಅವರುಗಳ ಸಂಕಟಕ್ಕೆ ಗುರಿಯಾಗುವುದು ಬೇಡ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಷೋಷಕರ ಸಂಬಂಧ ವೃದ್ದಿಸೋಣ. ಹಂಚ್ಚಿ ತಿನ್ನುವುದರಿಂದ ಸಿಗುವ ಸಂತೋಷ ಬೇರೊಂದಿಲ್ಲ. ಇರುವುದರಲ್ಲಿ ನೆಮ್ಮದಿ ಬದುಕು ಕಟ್ಟೋಣ. ಇಂದಿನ ಮಕ್ಕಳು ಮುಂದಿನ ಷೋಷಕರು. ಅವರ ಮಕ್ಕಳು ಸಹ ತಂದೆ ತಾಯಿಯ ನಡವಳಿಕೆಯನ್ನು ಗಮನಿಸುತ್ತಿರುತ್ತಾರೆ. ಮುಂದೆ ಅದೇ ಪರಿಸ್ಥಿತಿ ಇವರದ್ದು ಅಗಬಾರದು ಅಲ್ಲವೇ?ಹೊಂದಾಣಿಕೆ ಎಂಬುದು ಎಲ್ಲವನ್ನು ಒಂದು ಮಾಡುತ್ತದೆ.

ವೃದ್ದಾಪ್ಯದ ದಿನಗಳಲ್ಲಿ ಷೋಷಕರು, ಮಕ್ಕಳ ಮನಸ್ಸುನ್ನು ಹೊಂದಿರುತ್ತಾರೆ. ಅವರನ್ನು ಮಕ್ಕಳಂತೆ ನೋಡೋಣ.
ಎಷ್ಟೇ ಧನ ಸಂಪಾದನೆ ಮಾಡಿದರೂ ಹಂಚಿ ತಿನ್ನಿವುದರಲ್ಲಿ ಇರುವ ಸುಖ ಕೂಡಿಟ್ಟ ಸಂಪತ್ತಿನಲ್ಲಿ ಇರುವುದಿಲ್ಲ. ಸಂಪಾದನೆ ಮಾಡುವುದು ಅನುಭವಿಸಲು.
“ವಸುದೈವ ಕುಟುಂಬಕಂ”ಎನ್ನುವ ರೀತಿಯಲ್ಲಿ ಜೀವನ ನಡೆಸೋಣ.
-ವೇದಾವತಿ ಹೆಚ್. ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x