ವಾಸುಕಿ ಕಾಲಂ

ವುಡೀ ಆಲೆನ್ ಮತ್ತು ವಾಸುಕಿ ರಾಘವನ್

 

ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು!

೧೯೭೭ರಲ್ಲಿ ತೆರೆಕಂಡ ಈ ಚಿತ್ರದ ನಿರ್ದೇಶಕ ವುಡೀ ಆಲೆನ್. ವುಡೀ ಆಲೆನ್ ಹಾಗೂ ಡೈಯಾನ್ ಕೀಟನ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ, ನಿರ್ದೇಶನ, ನಟಿ, ಚಿತ್ರಕಥೆ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ವುಡೀ ಅತ್ಯದ್ಭುತ ಚಿತ್ರಕಥಾಗಾರ, ಆತನ ನಿರ್ದೇಶನ ತನ್ನದೇ ವಿಶಿಷ್ಟ ಶೈಲಿಯನ್ನು ಹೊಂದಿದೆ. ಸಂಕೀರ್ಣವಾದ ಮಾನವ ಸಂಬಂಧಗಳನ್ನು ಲಘು ಹಾಸ್ಯದ ಮೂಲಕ ನಿರೂಪಿಸುವುದರಲ್ಲಿ ನಿಸ್ಸೀಮ – ಆ ಹಾಸ್ಯ ಸಿಲ್ಲಿ ಆಗಿರೋದಿಲ್ಲ, ಅದು ನಮ್ಮನ್ನು ತಟ್ಟುತ್ತದೆ, ಚಿಂತಿಸಲು ಪ್ರೇರೇಪಿಸುತ್ತದೆ, ತುಟಿಯ ಮೇಲಿನ ನಗುವಿನ ಜೊತೆ ಕಣ್ಣಂಚಿನಲ್ಲಿ ಒಂದು ಚಿಕ್ಕ ಹನಿ ಮೂಡುತ್ತದೆ. "ಹ್ಯೂಮರ್ ಈಸ್ ಜಸ್ಟ್ ಎ ಫನ್ನೀ ವೇ ಆಫ್ ಬೀಯಿಂಗ್ ಸೀರೀಯಸ್" ಅಂತ ಎಲ್ಲೋ ಓದಿದ ನೆನಪು.

 

ಚಿತ್ರ ಆರಂಭವಾಗುವುದೇ ವುಡೀ ಆಲೆನ್ ಕ್ಲೋಸ್ ಅಪ್ ಶಾಟ್ ನಿಂದ. ಇಡೀ ಚಿತ್ರ ಆಲ್ವೀ ಸಿಂಗರ್ (ವುಡೀ ಪಾತ್ರ) ಆನೀ ಹಾಲ್ (ಡೈಯಾನ್ ಪಾತ್ರ) ಜೊತೆಗಿನ ತನ್ನ ಸಂಬಂಧದ ಬಗ್ಗೆ ಮೆಲಕು ಹಾಕುವುದು. ಆಲ್ವೀ ಕ್ಯಾಮರ ಗೆ ಮುಖ ಮಾಡಿ (ನಮ್ಮನ್ನು ನೋಡುತ್ತಾ) ಅವಳೊಂದಿಗಿನ ಹಲವಾರು ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ (ಇದಕ್ಕೆ 'ಬ್ರೇಕಿಂಗ್ ತೆ ಫೋರ್ತ್ ವಾಲ್' ಅಂತಾರೆ) ಹೊರನೋಟಕ್ಕೆ ಜೋಕ್ ಗಳನ್ನು ಹೇಳುತ್ತಾ, ಈ ಸಂಬಂಧ 'ವರ್ಕ್ ಔಟ್' ಆಗದಿರುವುದು ಅಷ್ಟೇನೂ ಬೇಸರ ತರಿಸಿಲ್ಲ ಅಂತ ಹೇಳಿದರೂ ಅವನು ಹಂಚಿಕೊಳ್ಳುವ ನೆನಪುಗಳು ಅದಕ್ಕೆ ವಿರುದ್ಧವಾದ ಸಂದೇಶವನ್ನು ಸಾರುತ್ತವೆ (ಇದಕ್ಕೆ 'ಸಬ್ ಟೆಕ್ಸ್ಟ್' ಅಂತಾರೆ) ಈ ದಪ್ಪ ಕನ್ನಡಕಧಾರಿ ಸಣಕಲು ಆಸಾಮಿ ಹೀರೋನಾ, ಇದೇನು ನಾಯಕಿ ನಾಯಕನಿಗಿಂತ ಎತ್ತರವಿದ್ದಾಳೆ, ಇದೇನು ಜೋಡಿನಪ್ಪಾ ಅಂತ ನಿಮಗೆ ಅನಿಸಿದರೆ ಅದಕ್ಕೆ ಕಾರಣ 'ಹೀರೊ / ಹೀರೋಯಿನ್' ಅಂದರೆ ಹೀಗೆ ಇರಬೇಕು ಅನ್ನುವ ನಮ್ಮರಿಜಿಡ್ ಅಭಿಪ್ರಾಯಗಳು. ಅವರನ್ನು ನಮ್ಮಂತೆಯೇ ಇರುವ ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು, ತುಂಬಾ ಸಹಜವಾದ 'ಪಾತ್ರಗಳು' ಅಂತ ಭಾವಿಸಿದಾಗ ನಾವು ನೋಡುವ ದೃಷ್ಟಿ ಬದಲಾಗುತ್ತದೆ.

ಆಲ್ವೀ ತನ್ನ ಬಾಲ್ಯ, ಶಾಲೆ, ತನ್ನ ಹಳೇ ಸಂಬಂಧಗಳು, ಆನೀ-ಳ ಹಳೇ ಸಂಬಂಧಗಳು ಹೀಗೆ ಎಲ್ಲದರ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಇದರಲ್ಲಿ ಯಾವುದು ಎಷ್ಟು ಸತ್ಯ ಅಂತ ನಮಗೆ ಗೊತ್ತಾಗುವುದಿಲ್ಲ, ಯಾಕೆಂದರೆ ಇದೆಲ್ಲ ಆಲ್ವೀ ಜೀವನವನ್ನು ನೋಡುವ ರೀತಿ, ಹಾಗೂ ಅವನ ಮನಸ್ಸಿನಲ್ಲಿರುವ ನೆನಪುಗಳಿಗೆ ಅವನು ಬಣ್ಣ ಬಳಿದಿರುವ ರೀತಿ.

ಮೊದಲನೇ ಭೇಟಿಯಿಂದಲೇ ಒಬ್ಬರೆಡೆಗೆ ಒಬ್ಬರು ಒಬ್ಬರಿಗೆ ಆಕರ್ಷಣೆ ಉಂಟಾದರೂ, ಬರಬರುತ್ತಾ ಅವರ ನಡುವಿನ ವ್ಯತ್ಯಾಸಗಳು ಅವರ ಸಂಬಂಧದಲ್ಲಿ ಬಿರುಕು ಮೂಡಿಸಲು ಶುರು ಮಾಡುತ್ತವೆ. ಆನೀ ಅನ್ನು ಉನ್ನತ ವ್ಯಾಸಂಗ ಮಾಡಲು ಪ್ರೇರೇಪಿಸುವ ಆಲ್ವೀ, ಅವಳು ತನ್ನ ಪ್ರೊಫೆಸರ್ ಜೊತೆಗಿನ ಒಡಾಟವನ್ನು ಸಹಿಸುವುದಿಲ್ಲ. ಆನೀ ಗೆ ತನ್ನ ಹಾಡುಗಾರಿಕೆಯ ಬಗ್ಗೆ ಹಿಂಜರಿಕೆ ಇರುವುದನ್ನು ಮನಗಂಡು, ಆಕೆಯನ್ನು ಹುರುದುಂಬಿಸುತ್ತಾನೆ, ಆದರೆ ಅವಳು ರೆಕ್ಕೆ ಬಿಚ್ಚಿ ಹಾರಲು ಅಣಿಯಾದಾಗ ಅವಳನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಾನೆ. ಆನೀ ಅನ್ನು ಸೈಕೊ ಅನ್ಯಾಲಿಸಿಸ್ ಗೆ ಹೋಗುವಂತೆ ಪ್ರಚೋದಿಸುತ್ತಾನೆ, ಆದರೆ ಅವಳ ಆನಲಿಸ್ಟ್ ಹೇಳುವುದು ಇವನಿಗೆ ಸರಿಹೋಗದೇ ಇದ್ದಾಗ ಹೋಗಬೇಡ ಅಂತ ತಾಕೀತು ಮಾಡುತ್ತಾನೆ.

 

ಇದರಲ್ಲಿ ನನಗೆ ತುಂಬಾ ಇಷ್ಟವಾದ ಕೆಲವು ಸನ್ನಿವೇಶಗಳಿವೆ:

ಆಲ್ವೀ ತನ್ನ ಶಾಲಾದಿನಗಳ ಬಗ್ಗೆ ನೆನಪಿಸಿಕೊಳ್ಳುವಾಗ, ನಲವತ್ತು ವಯಸ್ಸಿನ ಆತ ತನ್ನ ಶಾಲೆಯಲ್ಲಿ ಚಿಕ್ಕ ವಯಸ್ಸಿನ ತನ್ನ ಸಹಪಾಟಿಗಳ ಜೊತೆ ಕುಳಿತು ತನ್ನ ಟೀಚರ್ ಜೊತೆ ವಾದ ಮಾಡುತ್ತಾನೆ. ಇದು ನಿಜಕ್ಕೂ ಸಿಕ್ಕಾಪಟ್ಟೆ ನಗು ತರಿಸುತ್ತದೆ.

ಆಲ್ವೀ ಮತ್ತು ಆನೀ ಒಂದು ಪಾರ್ಕ್ ಅಲ್ಲಿ ಕುಳಿತು ಹೋಗೋ ಬರೋ ಜನರ ಬಗ್ಗೆ ಕಾಮೆಂಟ್ಸ್ ಪಾಸ್ ಮಾಡುತ್ತಿರುತ್ತಾರೆ: "ಇವನು ಬೀಚ್ ಆಸಾಮಿ, ಇವನು ಒಳ್ಳೇ ಗ್ಯಾಂಗ್ಸ್ಟರ್ ತರ ಇದಾನಲ್ವಾ?" [ನಾವೂ ಇದೇ ಮಾಡ್ತೀವಿ ಅಲ್ವಾ?]

ಆಲ್ವೀ ಮೊದಲ ಬಾರಿ ಆನೀ ಕುಟುಂಬದವರನ್ನ ಭೇಟಿ ಮಾಡಲು ಹೋದಾಗ ತಮ್ಮ ಮನೆಯವರಿಗೂ, ಆಕೆಯ ಮನೆಯವರಿಗೂ ಇರುವ ವ್ಯತ್ಯಾಸದ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಾನೆ, ಅದು ಬಹಳ ಮಜಾ ಕೊಡುತ್ತದೆ.

ಒಂದು ಚಿಕ್ಕ ಸನ್ನಿವೇಶದಲ್ಲಿ ತಮ್ಮ ತಮ್ಮ ಸೈಕೊ ಆನಲಿಸ್ಟ್ ಗಳ ಜೊತೆಗಿನ ಸೆಶನ್ಸ್ ಅನ್ನು ಸ್ಪ್ಲಿಟ್ ಸ್ಕ್ರೀನ್ ಮೂಲಕ ತೋರಿಸುತ್ತಾರೆ. "ನಿಮ್ಮ ಲೈಂಗಿಕ ಜೀವನ ಹೇಗಿದೆ" ಎಂಬ ಇಬ್ಬರು ಆನಲಿಸ್ಟ್ ಗಳ ಪ್ರಶ್ನೆಗೆ ಆನೀ – "ಸದಾಕಾಲ, ವಾರಕ್ಕೆರಡು ಬಾರಿ" ಅನ್ನುತ್ತಾಳೆ, ಆಲ್ವೀ – "ಬಹಳ ಅಪರೂಪ, ವಾರಕ್ಕೆರಡು ಸಲ ಅಷ್ಟೇ" ಅನ್ನುತ್ತಾನೆ. ಇಬ್ಬರ ನಡುವಿನ ಹೆಚ್ಚುತ್ತಿರುವ ಅಂತರವನ್ನು ಬಹಳ ಸಹಜತೆಯಿಂದ, ಹಾಸ್ಯಾಮಯವಾಗಿ ನಿರೂಪಿಸಿದ್ದಾರೆ.

ಹಾಗೂ ಕ್ಲೈಮ್ಯಾಕ್ಸ್. ನನಗೆ ಪ್ರತೀ ಸಲ ಕಣ್ಣು ಮಂಜಾಗುತ್ತದೆ. ಇಡೀ ಸೀನ್ ಅನ್ನು ಒಂದು ರೆಸ್ಟೋರೆಂಟ್ ಒಳಗಿನಿಂದ ಚಿತ್ರಿಸಲಾಗಿದೆ. ಒಂದು ದಿನ ಅಚಾನಕ್ಕಾಗಿ ಸಿಕ್ಕು ಸ್ವಲ್ಪ ಸಮಯ ಕಳೆದ ಆಲ್ವೀ ಮತ್ತು ಆನೀ (ಬೇರ್ಪಟ್ಟ ಹಲವು ದಿನಗಳ ನಂತರ) ರೆಸ್ಟೋರೆಂಟ್ ಹೊರಗೆ ವಿದಾಯ ಹೇಳುತ್ತಾರೆ. ಆಕೆಯ ಜೊತೆಗಿನ ಕೆಲ ದಿನಗಳ ಒಡನಾಟ ಕೂಡ ತುಂಬಾ ಸ್ಮರಣೀಯವಾಗಿತ್ತು ಅಂತ ಹೇಳಿದರೂ, ದನಿಯಲ್ಲಿನ ವಿಷಾದ ಮರೆಮಾಚಲು ಆಗುವುದಿಲ್ಲ. ಇಡೀ ಸೀನ್ ಅನ್ನು ದೂರದಿಂದ ಚಿತ್ರಿಸಿರುವ ರೀತಿ ಮನುಷ್ಯ ಮನುಷ್ಯನ ನಡುವೆ ಇರುವ ಅಂತರವನ್ನು ಸಾರಿ ಹೇಳಿದಂತಿದೆ.

ಚಿತ್ರವನ್ನು ನಾನು 'ಕಾಮೆಡೀ' ಎಂದು ಒಪ್ಪುವುದಿಲ್ಲ. ಹಾಸ್ಯದ ಲೇಪ ಇರುವ 'ರೊಮ್ಯಾನ್ಸ್' ಅಂತ ನನ್ನ ಅಭಿಪ್ರಾಯ. ವಿಚಿತ್ರ ಎಂದರೆ ಇದರಲ್ಲಿ ಎರಡು ಪಾತ್ರಗಳೂ ಇಡೀ ಚಿತ್ರದಲ್ಲಿ " ಲವ್ ಯೂ" ಅಂತ ಹೇಳೊದೇ ಇಲ್ಲ. ಜೋಕ್ ಒಂದರಿಂದ ಶುರು ಆಗುವ ಚಿತ್ರ ಇನ್ನೊಂದು ಜೋಕ್ ಒಂದಿಗೆ ಮುಗಿಯುತ್ತದೆ. ಒಂದಿಷ್ಟು ನಗು, ಒಂದಿಷ್ಟು ಪ್ರೀತಿ, ಒಂದಿಷ್ಟು ನಾವೇ ಹುಡುಕಿ ತಂದುಕೊಂಡ ತಾಪತ್ರಯಗಳು, ಒಂದಿಷ್ಟು ನೆನಪು, –ಇಷ್ಟೇ ಅಲ್ಲವಾ ಜೀವನ!

ವಾಸುಕಿ ರಾಘವನ್

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ವುಡೀ ಆಲೆನ್ ಮತ್ತು ವಾಸುಕಿ ರಾಘವನ್

  1. ವಿಶ್ಲೇಷಣೆಯೊಂದಿಗಿನ ವಿಮರ್ಶೆಯು ಚೆನ್ನಾಗಿದೆ ಸರ್. ಧನ್ಯವಾದಗಳು

  2. Good writeup. Annie Hall is a good movie but nowhere close to his best, which in my opinion is crimes and misdemeanors – Woody's take on crime and punishment. Please write a review on that too.

    1. 'Crimes and Misdemeanors' is a terrific film, which happens to have one of Woody's most loved themes, apart from death – "Crime, not getting caught, guilt" – another similar film in the superb 'Match Point'. But I personally consider 'Annie Hall' and 'Manhattan' as his masterpieces!

  3. ವುಡಿ ಅಲೆನ್ ಚಿತ್ರಗಳು ನವಿರಾಗಿರುತ್ತವೆ. ನನಗೂ ಕೂಡ ಅನಿ ಹಾಲ್, ಮನ್ಹಾಟ್ಟನ್ ಬೆಸ್ಟ್ ಅನಿಸುತ್ತದೆ. ಕಾಮಿಡಿ ಸೀರಿಯಲ್ ಪ್ರೋಡ್ಯೂಸರ್ ಒಬ್ಬ ಪ್ರತಿ ಡೈಯಾಲಾಗ್ ಕೊನೆಗೆ ಪ್ರೇಕ್ಷಕರು ನಗುವ ಕ್ಲಿಪ್ ತೂರಿಸುವ ಸೀನ್ ಸೂಪರ್. 2 1/2 ಮೆನ್, ಬಿಗ್ ಬ್ಯಾ೦ಗ್ ಥಿಯರಿ ನೆನಪಾಗುತ್ತದೆ. ಹಾಸ್ಯವಿಲ್ಲದಿದ್ದರೂ ನಗುವ ಟ್ರಾಕ್ ಸುಖಾಸುಮ್ಮನೆ ಸೇರಿಸಿರುತ್ತಾರೆ.
    ಕ್ರೈಮ್ಸ್ ಆ೦ಡ್ ಮಿಸ್ಡಿಮೀನರ್ಸ್ ಅತ್ಯುತ್ತಮ ಅಡಾಪ್ಟೇಷನ್, ಅ೦ಬರೀಷ್ ಅವರ ಏಳು ಸುತ್ತಿನ ಕೋಟೆ ಕೂಡ ಒಳ್ಳೆಯ ಅಡಾಪ್ಟೇಷನ್. 🙂
    ವುಡಿ ಅಲೆನ್ ಇನ್ನೊ೦ದು ವಿಷಯ ಆತನ ಫೇವರಿಟ್ ನಿರ್ದೇಶಕ: ಬರ್ಗ್ಮಾನ್ .. ಅದೇ ಸಾಕು. 🙂

Leave a Reply

Your email address will not be published. Required fields are marked *