ವೀರ್ಯವಂತನಾದ ಆಮೆಯೊಂದು ತನ್ನ ಸಂತತಿ ಉಳಿಸಿದ ಕಥೆ: ಅಖಿಲೇಶ್ ಚಿಪ್ಪಳಿ

Akhilesh chippali column1
ಸ್ಥಳೀಯವಾದ ಒಂದು ಘಟನೆ ಹಾಗೂ ಅಂತಾರಾಷ್ಟ್ರೀಯ ಎರಡು ಘಟನೆಗಳು ಈ ವಾರ ದಾಖಲೆ ಮಾಡಬೇಕಾದ ವಿಷಯಗಳೇ ಸೈ. ಸಾಗರದ ಅಗ್ರಹಾರದಲ್ಲಿ ಬೆಂಗಳೂರು ಮೂಲದ ಶ್ರೀಮಂತ ಉದ್ಯಮಿಯೊಬ್ಬರು ಮನೆ ಕಟ್ಟಲು ಪರವಾನಿಗೆ ತೆಗೆದುಕೊಂಡು, ಮನೆ ಕಟ್ಟಲು ಪ್ರಾರಂಭಿಸಿದರು. ಅವರಿಗೆ ಅಡ್ಡಿಯಾಗಿದ್ದು, ರಸ್ತೆ ಬದಿಯ ಎರಡು ಮರಗಳು. ತುಪ್ಪ ತಿಂದ ತಲೆಯನ್ನು ಓಡಿಸಿದರು. ಅದು ಹೇಗೋ ಒಂದಿಷ್ಟು ಜನ ಮರ ಕಡಿತಲೆಯನ್ನು ವಿರೋಧಿಸುವ ಮನೋಭಾವ ಹೊಂದಿದವರು ಅಡ್ಡಿ ಮಾಡಿದರೆ ಕಷ್ಟ ಎಂದುಕೊಂಡು ಎಲ್ಲವನ್ನೂ ಕಾನೂನಾತ್ಮಕವಾಗಿ ಮಾಡಿ ಮುಗಿಸುವ ಪ್ಲಾನ್ ರಚನೆಯಾಯಿತು. ಅರಣ್ಯ ಇಲಾಖೆಗೆ ಅರ್ಜಿ ಕೊಟ್ಟರು. ಇಲಾಖೆಯಲ್ಲಿ ಬೇಗ ಕೆಲಸವಾಗಬೇಕೆಂದರೆ ಏನು ಮಾಡಬೇಕು ಎನ್ನುವುದು ಹೇಗೂ ಗೊತ್ತಲ್ಲ. ಇವರಂತೂ ಸಾಹುಕಾರರು. ಲಗುಬಗೆಯಲ್ಲಿ ಅರ್ಜಿ ಮುಂದೆ ಹೋಯಿತು. ಖಾಕಿಧಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಇನ್ನೂ ನಿರ್ಮಾಣವಾಗದಿರುವ ಮನೆಗೆ ಈ ಮರಗಳಿಂದ ತೊಂದರೆ ತಪ್ಪಿದ್ದಲ್ಲ ಎಂದು ಷರಾ ಬರೆದರು. ಇಲ್ಲೊಂದು ತೊಡಕಾಯಿತು. ವಾಸ್ತವಿಕವಾಗಿ ಮರಗಳನ್ನು ಕಡಿಯುದಾದಲ್ಲಿ ಸದರಿ ಮರವನ್ನು ಹರಾಜಿನ ಮೂಲಕ ಹೆಚ್ಚು ಹಣ ನೀಡುವ ಗುತ್ತಿಗೆದಾರರಿಗೆ ನೀಡಬೇಕು. ಇದಕ್ಕೆ ಸಾಕಷ್ಟು ಸಮಯ ತಗಲುತ್ತದೆ. ಈ ಶ್ರೀಮಂತರಿಗೆ ಅಷ್ಟು ಸಮಯ ಇಲ್ಲ. ಹಾಗಾದರೆ ಏನು ಮಾಡಿದರು? ಇದನ್ನು ಕಡೆಯಲ್ಲಿ ನೋಡೋಣ.

50 ವರ್ಷದ ಹಿಂದೆ ಜಗತ್ತಿನ ಜನಸಂಖ್ಯೆ 4 ಕೋಟಿ ಮುಟ್ಟುವ ಹೊತ್ತಿನಲ್ಲಿ, ಗ್ಯಾಲೋಪಾಗಸ್ ದ್ವೀಪದ ಬೃಹತ್ ಆಮೆಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇತ್ತು. ಅಂದರೆ ಎರಡು ಗಂಡು ಹಾಗೂ 12 ಹೆಣ್ಣು. ವಿಜ್ಞಾನಿಗಳ ಪ್ರಕಾರ ಯಾವುದೇ ಒಂದು ಸಣ್ಣ ವ್ಯತ್ಯಾಸವೂ ಇವುಗಳ ಅಳಿವಿಗೆ ಕಾರಣವಾಗಬಹುದಿತ್ತು. ಇವುಗಳ ಉಳಿವಿಗಾಗಿ ಗ್ಯಾಲೋಪಾಗಸ್ ರಾಷ್ಟ್ರೀಯ ಪಾರ್ಕ್‍ನ್ನು ಸರ್ಕಾರ ನಿರ್ಮಾಣ ಮಾಡಿತ್ತು. ಆಗ 50 ವರ್ಷ ವಯಸ್ಸಾಗಿದ್ದ ಗಂಡಾಮೆಯ ಹೆಸರು ಡಿಗೋ. ಅಲ್ಲಿನ ಸಿಬ್ಬಂದಿ ಈ ಆಮೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿತ್ತು. ಡಿಗೋಗೆ ಎಲ್ಲಿಲ್ಲದ ಮಹತ್ವ ಬಂದಿತ್ತು. ಏಕೆಂದರೆ ಇವುಗಳ ಸಂತತಿಯನ್ನು ಉಳಿಸಲು ಡಿಗೋನೇ ಆಧಾರವಾಗಿದ್ದ. ಇದೇ ಆಮೆಯ ಉಪಪ್ರಭೇದಕ್ಕೆ ಸೇರಿದ ಹಾಗೂ 2012ರಲ್ಲಿ ತೀರಿಕೊಂಡ “ಲೋನ್‍ಸಮ್ ಜಾರ್ಜ್” ಹೆಸರಿನ ಆಮೆಗೆ ಲೈಗಿಂಕ ಆಸಕ್ತಿಯೇ ಇರಲಿಲ್ಲ. ಇದು ಕಳವಳಕಾರಿಯ ಸಂಗತಿ. ಇದಕ್ಕೆ ವ್ಯತಿರಿಕ್ತ ಮನೋಭಾವ ಹೊಂದಿದ ಡಿಗೋ ದಿನದ ಹದಿನಾರು ತಾಸು ವಿಶ್ರಾಂತಿಯಲ್ಲೆ ಕಳೆಯುತ್ತಿದ್ದ ಇನ್ನುಳಿದ ಸಮಯದಲ್ಲಿ ಹೆಣ್ಣುಗಳೊಡನೆ ಸರಸ. ಈಗ ಈ ಆಮೆಗಳ ಸಂತತಿ 2000 ದಾಟಿದೆ ಮತ್ತು ಇದರಲ್ಲಿ 80% ಸಂತಾನ ಡಿಗೋದೇ ಆಗಿದೆ. ಗ್ಯಾಲೋಪಗಸ್ ದ್ವೀಪದ ಆಮೆಗಳ ಸರಾಸರಿ ಆಯುಸ್ಸು 170 ವರ್ಷಗಳು. ಈಗ ಡಿಗೋಗೆ 100 ವರ್ಷ. ಇನ್ನು ಮೂರು-ನಾಲ್ಕು ದಶಕಗಳ ಕಾಲ ಡಿಗೋ ತಂದೆಯಾಗುತ್ತಲೇ ಇರಬಲ್ಲ ಎಂದು ಅಲ್ಲಿನ ಮೂಲಗಳ ಅಂದಾಜು. 

ಗ್ಯಾಲೋಪಗಸ್ ದ್ವೀಪ ಸಮೂಹದಲ್ಲಿ ಅತಿ ದೊಡ್ಡ ದ್ವೀಪವೆಂದರೆ ಸಾಂತಾಕ್ರೂಸ್ ದ್ವೀಪ. ಈ ದ್ವೀಪವೇ ಡಿಗೋನ “ಕಾರ್ಯಾಚರಣೆ”ಯ ಸ್ಥಳ. ಶುದ್ಧ ಸಸ್ಯಹಾರಿಯಾದ ಡಿಗೋ ಅಲ್ಲಿನ ಸಾಮ್ರಾಟ. ಹಾಗಂತ ಡಿಗೋನೇ ಅತಿದೊಡ್ಡದಾದ ಆಮೆಯೂ ಅಲ್ಲ. ಇದಕ್ಕಿಂತ ದೊಡ್ಡದಾದ ಆಮೆಗಳು ಅಲ್ಲಿವೆ. ಆದರೆ ಡಿಗೋನಿಗಿರುವಷ್ಟು ಲೈಗಿಂಕ ಸಾಮಥ್ರ್ಯ ಇತರ ಆಮೆಗಳಿಗಿಲ್ಲ. ಹೆಣ್ಣಾಮೆಗಳು ಬಾಲ ಆಡಿಸುತ್ತಾ ಗುರುಗುಟ್ಟಲು ಶುರು ಮಾಡಿದವೆಂದರೆ ಅವು ಲೈಗಿಂಕ ಕ್ರಿಯೆಗೆ ಸಿದ್ದವಾಗಿವೆ ಎಂದು ಅರ್ಥ. ಹೆಣ್ಣಾಮೆಗಳ ಸಂತತಿ ವೃದ್ಧಿಯ ಈ ಕ್ರಿಯೆಗೆ ಡಿಗೋ ಯಾವತ್ತೂ ಇಲ್ಲವೆಂದು ತಲೆಯಾಡಿಸಿಯೇ ಇಲ್ಲ. ತಮ್ಮಗಳ ಸಂತತಿ ವಿನಾಶದಂಚಿಗೆ ಬಂದು ಮುಟ್ಟಿದ ಭಯ ಡಿಗೋಗೆ ಇರಬಹುದು ಹಾಗೂ ನಿರಂತರವಾಗಿ ಉತ್ಸಾಹದಿಂದ ಇರುವ ಪ್ರತಿಜ್ಞೆ ಕೈಗೊಂಡು ದಣಿವರಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರಬಹುದು. ಏನೇ ಇರಲಿ ಡಿಗೋಗೊಂದು ಸಲಾಂ!

Diego, a tortoise of the endangered Chelonoidis hoodensis subspecies from EspaÒola Island, is seen in a breeding centre at the Galapagos National Park on Santa Cruz Island in the Galapagos archipelago, located some 1,000 km off Ecuador's coast, on September 10, 2016. / AFP PHOTO / RODRIGO BUENDIARODRIGO BUENDIA/AFP/Getty Images 

ಸೈಬೀರಿಯಾದ ಉತ್ತರ ಭಾಗದಲ್ಲಿ ಕಾರಾ ಎಂಬ ಹೆಸರಿನ ಸಮುದ್ರವೊಂದಿದೆ. ಇದರ ಮಧ್ಯದಲ್ಲೊಂದು ದ್ವೀಪ ಟ್ರಾಯ್‍ನೋಯ್. ಈ ಪ್ರದೇಶವೂ ಅರ್ಕ್‍ಟಿಕ್ ಪ್ರದೇಶದ ವ್ಯಾಪ್ತಿಯಲ್ಲೇ ಬರುತ್ತದೆ. ಇದೇ ದ್ವೀಪದಲ್ಲೊಂದು ಹವಾಮಾನ ಕೇಂದ್ರವೂ ಇದೆ. ವಾತವರಣ ಬದಲಾವಣೆಯ ಪರಿಸ್ಥಿತಿಯ ಅಧ್ಯಯನಕ್ಕಾಗಿ ರಷ್ಯಾದ ಐದು ವಿಜ್ಞಾನಿಗಳು ಈ ಹವಾಮಾನ ಕೇಂದ್ರದಲ್ಲಿ ಸಂಶೋಧನೆ ನಿರತರಾಗಿದ್ದಾರೆ. ಹವಾಮಾನ ಬದಲಾವಣೆ ಪರಿಸ್ಥಿತಿಯನ್ನು ದಾಖಲಿಸಲು ಬಂದ ತಂಡವೇ, ಈ ವಿದ್ಯಮಾನಕ್ಕೆ ಸಿಲುಕಿಕೊಂಡ ವಿಚಿತ್ರ ಸ್ಥಿತಿಯಿದು. ಡೋನಾಲ್ಡ್ ಟ್ರಂಪ್‍ನಂತಹ ಅರೆಸುತ್ತಿನ ತರಲೆಗಳು ಹವಾಮಾನ ಬದಲಾವಣೆಯಾಗುತ್ತಿರುವುದು ಸುಳ್ಳು. ಎಲ್ಲಾ ವಿಜ್ಞಾನ ಹಾಗೂ ವಿಜ್ಞಾನಿಗಳು ಸುಳ್ಳು ಎಂದು ಪಳೆಯುಳಿಕೆ ಇಂಧನಗಳ ಪರ ವಕಾಲತ್ತು ನಡೆಸುತ್ತಿರುವ ಹೊತ್ತಿನಲ್ಲೇ ಈ ಘಟನೆಯೂ ನಡೆದಿದೆ. ಮೇಲೆ ಹೇಳಿದ ಹವಾಮಾನ ಕೇಂದ್ರದಲ್ಲಿ ಐದು ವಿಜ್ಞಾನಿಗಳು ಹಾಗು ಎರಡು ನಾಯಿಗಳು ಇವೆ. ತಿಂಗಳುಗಟ್ಟಲೆ ಕಳೆಯಲು ಆಹಾರ ದಾಸ್ತಾನು ಇದೆ. ವಿಜ್ಞಾನಿಗಳ ಕೆಲಸವೆಂದರೆ, ಕೇಂದ್ರದ ಹೊರಗಡೆ ತಿರುಗಾಡಿ, ಎಲ್ಲಾ ರೀತಿಯ ಸೂಕ್ಷ್ಮ ವಿದ್ಯಮಾನಗಳನ್ನು ಗಮನಿಸಿ ದಾಖಲಿಸುವುದು. ಒಂದು ಬೆಳಗ್ಗೆ ಎದ್ದು ನೋಡಿದರೆ ಒಂದು ನಾಯಿ ನಾಪತ್ತೆಯಾಗಿದೆ. ಒಟ್ಟು ಹನ್ನೆರೆಡು ಹಸಿದ ಹಿಮಕರಡಿಗಳು ನಾಯಿಯನ್ನು ಕೊಂದು ತಿಂದಿದ್ದಾವೆ. ಇನ್ನೊಂದಕ್ಕೆ ಕೊಂಚ ಆಯುಸ್ಸು ಬಾಕಿಯಿತ್ತೇನೋ ತಪ್ಪಿಸಿಕೊಂಡಿದೆ. ಹಿಮಕರಡಿಗಳ ಸ್ವಾಭಾವಿಕ ಆಹಾರವೆಂದರೆ, ಸೀಲ್ ಮೀನುಗಳು. ದಪ್ಪ ಮಂಜಿನ ಪದರಗಳ ಮೇಲೆ ಕಾದು ಕುಳಿತಿರುವ ಹಿಮಕರಡಿಗಳು ವಿಶ್ರಾಂತಿಗೆ ಬರುವ ಸೀಲ್‍ಗಳನ್ನು ಹೊಂಚಿ ತಿನ್ನುತ್ತವೆ. ಈ ಬಾರಿ ಟ್ರಾಯ್‍ನೋಯ್ ದ್ವೀಪದ ಆಸುಪಾಸಿನಲ್ಲಿ ಎಲ್ಲೂ ಹಿಮಗಟ್ಟಲೇ ಇಲ್ಲ. ಹವಾಮಾನ ವೈಪರೀತ್ಯದ ಪರಿಣಾಮವಿದು. ಸೀಲ್ ಮೀನುಗಳು ದೂರ ಪ್ರದೇಶಗಳಿಗೆ ವಲಸೆ ಹೋದವು ಹಾಗೂ ಹಿಮಕರಡಿಗಳಿಗೆ ಊಟವಿಲ್ಲವಾಯಿತು. ಸೀಲ್‍ಗಳ ಹೇರಳ ಲಭ್ಯತೆಯಿದ್ದಾಗ, ಯಥೇಚ್ಛ ಕೊಬ್ಬನ್ನು ಬೆಳೆಸಿಕೊಳ್ಳುವ ಹಿಮಕರಿಡಿಗೆಳು “ಸುಶುಪ್ತಿ”ಗೆ ತೆರಳುತ್ತವೆ. ಈ ಬಾರಿ ಆಹಾರವಿಲ್ಲದೇ ಅವುಗಳು ದೀರ್ಘ ನಿದ್ರೆಗೆ ಜಾರಲಿಲ್ಲ. ಬೇರೆ ಎಲ್ಲೂ ಆಹಾರ ಲಭ್ಯತೆ ಇಲ್ಲದಿರುವುದರಿಂದ, ಅವು ಆಹಾರ ಹುಡುಕುತ್ತಾ ಹವಾಮಾನ ಕೇಂದ್ರಕ್ಕೆ ಲಗ್ಗೆಯಿಟ್ಟವು. ಒಳಗೆ ತಮಗೆ ಬೇಕಾದ ಆಹಾರವಿದೆ ಎಂದು ಅಲ್ಲೇ ಹೊರಗಡೆ ಕಾಯುತ್ತಾ ಕುಳಿತವು. ಥೇಟ್ ಸಿನಿಮಾಗಳಲ್ಲೆ ತೋರಿಸುವಂತೆ, ಒಂದು ಹಿಮಕರಡಿಯಂತೂ ಕಿಟಕಿಯ ಗಾಜನ್ನೇ ಕುಟ್ಟಿ ಪುಡಿ ಮಾಡಿತು. ಯಾವ ವಿಜ್ಞಾನಿಯೂ ಅಪ್ಪಿ-ತಪ್ಪಿ ಹೊರಗಡೆ ಬರದ ಸನ್ನಿವೇಶ ನಿರ್ಮಾಣವಾಯಿತು. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ವಿಜ್ಞಾನಿಗಳು ಪಟಾಕಿಯಂತಹ ಸುರು-ಸುರು ಬತ್ತಿಯನ್ನು ಇಟ್ಟುಕೊಂಡಿದ್ದರು. ಬೆಂಕಿ ಹಚ್ಚಿ ಇವುಗಳನ್ನು ಎಸೆದರೆ ಹಿಮಕರಡಿಗಳು ಹಿಮ್ಮೆಟ್ಟುತ್ತವೆ. ಆದರೆ ಹಿಮಕರಡಿಗಳಿಗೆ ಎಷ್ಟೊಂದು ಹಸಿವೆಯಾಗಿದೆಯೆಂದರೆ, ಪಟಾಕಿಗೂ ಅವು ಬಗ್ಗಲಿಲ್ಲ. ಸ್ವಲ್ಪವೂ ಹೆದರಲಿಲ್ಲ. ಮರಿಯಿರುವ ತಾಯಿ ಕರಡಿಯಂತೂ ಬಾಗಿಲ ಬಳಿಯೇ ಮಲಗಿತು. 

ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಒಂದು ಕೋವಿಯೇನೋ ಮುಖ್ಯಸ್ಥನ ಹತ್ತಿರವಿತ್ತು. ರೇಡಿಯೋ ಮೂಲಕ ಮುಖ್ಯ ಕಛೇರಿಯನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಲಾಯಿತು. ಇಡೀ ಆರ್ಕ್‍ಟಿಕ್ ಪ್ರದೇಶದಲ್ಲಿ ಇರುವ ಹಿಮಕರಡಿಗಳ ಸಂಖ್ಯೆ ಬರೀ 26 ಸಾವಿರ. ಇದನ್ನು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ತೀರ್ಮಾನಿಸಲಾಗಿದೆ. ಅಲ್ಲಿನ ಸರ್ಕಾರ ಹಿಮಕರಡಿಗಳನ್ನು ಕೊಲ್ಲುವುದಕ್ಕೆ 1957ರಲ್ಲೇ ನಿಷೇಧ ಹೇರಿದೆ. ಆದ್ದರಿಂದ ಮುಖ್ಯ ಕಚೇರಿಯಿಂದ ಬಂದ ಸಂದೇಶ, ಯಾವುದೇ ಕಾರಣಕ್ಕೂ ಅವುಗಳನ್ನು ಕೊಲ್ಲಬಾರದು. ಜೀಮೂತವಾಹನನ ಔದಾರ್ಯವಂತೂ ನಮಗಿಲ್ಲ. ಹಸಿವೆಯಿಂದ ಬಳಲುತ್ತಿರುವ ಹಿಮಕರಡಿಗಳನ್ನು ಸಂದರ್ಶಿಲು ಡೋನಾಲ್ಡ್ ಟ್ರಂಪ್ ಮತ್ತವನ ಟೀಮ್ ಕಳುಹಿಸಲು ಇದು ಯೋಗ್ಯವಾದ ಸಮಯ. ಬಹುಷ: ಹಿಮಕರಡಿಗಳು ಹವಾಮಾನ ಬದಲಾವಣೆ ಸುಳ್ಳು ಎಂಬುವವರನ್ನು ಬೇಟಿಯಾಗಲು ತವಕದಿಂದ ಕಾಯುತ್ತಿವೆ ಎಂದು ಹೇಳಬಹುದು. ಮತ್ತೆ ಈಗ ಅಗ್ರಹಾರಕ್ಕೆ ಬರೋಣ. ಒಂದು ನೀರ್ಕಾಯ್ ಹಾಗೂ ಒಂದು ಹಲಸಿನ ಮರವನ್ನು ಕಡಿತಲೆ ಮಾಡಲು ಪಣತೊಟ್ಟವರು ಶ್ರೀಮಂತರು, ಬುದ್ದಿವಂತರೂ ಹಾಗೂ ವ್ಯವಹಾರಸ್ತರೂ ಹೌದು. ಮರಗಳನ್ನು ಹರಾಜಿಗೆ ಹಾಕೆ ಕಾಯುವಷ್ಟು ಪುರುಸೊತ್ತು ಅವರಿಗೆ ಇಲ್ಲ. ಇದಕ್ಕೆ ಗಾಂಧಿನೋಟು ದಾರಿ ತೋರಿಸಿತು. ಖುದ್ದು ಫಾರೆಸ್ಟರ್ ಇದಕ್ಕೊಂದು ದಾರಿ ತೋರಿಸಿದ. ಕಳ್ಳದಾರಿಯನ್ನೇ ಹೆದ್ಧಾರಿಯನ್ನಾಗಿ ಮಾಡಿಕೊಳ್ಳುವ ತಂತ್ರವಿದು. ಮರಕಡಿಯಲು ಅರ್ಜಿ ನೀಡಿದ್ದು ಹೌದು. ಎಲ್ಲಾ ನಿಯಮಗಳನ್ನೂ ಮೀರಿ ಮರ ಕಡಿದರೆ ಏನೂ ಶಿಕ್ಷೆಯಾಗಬಹುದು. ಇಲಾಖೆಯ ನಿಯಮಗಳ ಪ್ರಕಾರ ಒಂದಿಷ್ಟು ದಂಡ ಹಾಕಬೇಕು. ಜೊತೆಗೆ ಕಡಿದ ಮರವನ್ನು ಅರಣ್ಯ ಇಲಾಖೆಯ ಡಿಪೋಗೆ ಸಾಗಿಸಿದರೆ ಆಯಿತು. ದಂಡ ಕಟ್ಟಲು ಪಾರ್ಟಿ ರೆಡಿ ಇದ್ದಾನೆ. ಮರ ಕಡಿಸಲು ಖುದ್ಧು ಫಾರೆಸ್ಟರ್ ಮುಂದೆ ನಿಂತಿದ್ದಾನೆ. ಇನ್ನು ತಡೆಯುವವರು ಯಾರು? 

ಸಂಜೆ ನಾಲ್ಕೂವರೆಗೆ ಉಷಾಕಿರಣ ಕಾಡಿನಿಂದ ವಾಪಾಸಾಗುತ್ತಿದ್ದೆ. ಒಬ್ಬರು ನನ್ನ ಚರದೂರವಾಣಿಗೆ ಕರೆ ಮಾಡಿದರು. ಸಾಗರದ ಅಗ್ರಹಾರದಲ್ಲಿ ಎರಡು ಮರ ಕಡಿದಿದ್ದಾರೆ. ಸೀದಾ ಸ್ಥಳಕ್ಕೆ ಹೋದೆ. ಕರೆ ಮಾಡಿದವರು ಹೇಳಿದ್ದು ನಿಜವಾಗಿತ್ತು. ಇನ್ನೂ ಗಟ್ಟಿಯಾಗಿದ್ದ ಎರಡು ಮರಗಳು ಧರೆಗೆ ಉರುಳಿದ್ದವು. ನಿರ್ಕಾಯ್ ಮರದ ತುಂಬಾ ಕೆಂಪು ಹೂ ಬಿಟ್ಟಿತ್ತು. ನೂರಾರು ಪಕ್ಷಿಗಳಿಗೆ ಸಾವಿರಾರು ಜೇನುಗಳಿಗೆ ಮಕರಂದ ನೀಡುತ್ತಿದ್ದ ನಿರ್ಕಾಯ್ ಮಾನವ ದೌರ್ಜನ್ಯದ ಸಂಕೇತವಾಗಿ ಅಡ್ಡ ಬಿದ್ದಿತ್ತು. ಹೂಗಳು ಅದಾಗಲೇ ಬಾಡಲು ತೊಡಗಿದ್ದವು. ಹೀಚು ಕಾಯಿ ಬಿಟ್ಟಿದ್ದ ಹಲಸಿನ ಮರದ ಕತೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಫಾರೆಸ್ಟರ್‍ಗೆ ಫೋನ್ ಮಾಡಿದೆ. ಬಹಳ ದೊಡ್ಡ ತಪ್ಪು ಮಾಡಿದ್ದೀರಾ, ಇದಕ್ಕೆ ನೀವು ದಂಡ ತೆರಲೇ ಬೇಕು ಎಂದು ದಬಾಯಿಸಿದೆ. ಸಾರ್ ಅಂತದ್ದೇನು ಮಾಡಬೇಡಿ, ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದ. ಸಾಮಾನ್ಯವಾಗಿ ಪರಿಸರವಾದಿಗಳನ್ನು ಎಲ್ಲರೂ ಐಬಿನ ದೃಷ್ಟಿಯಿಂದ ನೋಡುತ್ತಾರೆ. ಇವರಿಗೆ ಸಿಗುವ ಗೌರವ ಕಡಿಮೆ. ಹೆಚ್ಚಿನ ಬಾರಿ ವಿಲನ್ ಪಟ್ಟವನ್ನು ಕಟ್ಟಿಸಿಕೊಳ್ಳಬೇಕಾಗುತ್ತದೆ. ಇಂತಹ ಅಪಾಯಗಳ ನಡುವೆ ಇನ್ನೊಂದು ಅಪಾಯವೂ ಈ ಘಟನೆಯಿಂದ ಸಾಬೀತಾಯಿತು. ಪಾರೆಸ್ಟರ್ ಬಂದ. ಸ್ವಲ್ಪ ಈಚೇಗೆ ಬನ್ನಿ ಎಂದ. ಸಾಹುಕಾರರು ಐದು ಸಾವಿರ ಕೊಟ್ಟು ಕಳುಹಿಸಿದ್ದಾರೆ ಇಟ್ಟುಕೊಳ್ಳಿ ಎಂದ. ಇದಕ್ಕೇನು ಮಾಡುವುದು? 

ಕಾನೂನು ಪ್ರಕಾರ ಮರ ಕಡಿದದ್ದಕ್ಕೆ ದಂಡ ಹಾಕಲಾಗಿದೆ. ಈಗ ಸ್ವಲ್ಪ ತಕರಾರು ಬಂದಿದ್ದರಿಂದ ಹಣ ನೀಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಕ್ಕೆ ನಿಂತಿದ್ದಾರೆ. ಆಯ್ತು ಮಾರಾಯ ನಾನೇ ಹಣ ನೀಡುತ್ತೇನೆ. ಈ ಎರಡೂ ಮರಗಳನ್ನು ಮೊದಲಿದ್ದ ಹಾಗೆ ಮಾಡಿ ಕೊಡಲು ಸಾಧ್ಯವೆ ಎಂದೆ. ಫಾರೆಸ್ಟರ್ ಮುಖ ಚಿಕ್ಕದಾಯಿತು. ಇಲ್ಲಾ ಸಾಹುಕಾರರೇ ನಿಮ್ಮನ್ನು ಬಂದು ಕಾಣುತ್ತಾರೆ ಎಂದು ಪ್ಲೇಟು ಹಾಕಿದ. ಈ ವಿಚಾರದಲ್ಲಿ ಮಾತನಾಡುವುದು ಏನೂ ಇಲ್ಲವೆಂದು ಹೇಳಿದೆ. ಈಗಲಾದರೂ ಬೆಂಗಳೂರಿನ ಆ ಶ್ರೀಮಂತರು ಗಾಂಧಿಯ ನೋಟಿಗಿಂದ ಹಸಿರೆಲೆಗಳೇ ಹೆಚ್ಚು ಬೆಲೆ ಬಾಳುತ್ತವೆ ಎಂದು ತಿಳಿದುಕೊಳ್ಳಲಿ ಎಂದು ಆಶಿಸುತ್ತಾ. . .


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x