ಕಥಾಲೋಕ

ವೀಣಾ: ಶ್ರೀಮಂತ್ ಎಮ್. ಯನಗುಂಟಿ

’ಏ ಮಾಮು ಏಳೋ ಇನ್ನು ಎಷ್ಟೊತ್ತು ಮಲಗ್ತೀಯಾ’ ರಾತ್ರಿಯೆಲ್ಲಾ ಸೀಟು ಸಿಗದೆ ನಿಂತುಕೊಡಿದ್ದವನಿಗೆ ನಸುಕಿನ ಮೂರು ಗಂಟೆಯಲ್ಲೊಂದು ಸೀಟು ಸಿಕ್ಕಿತ್ತು. ನಿದ್ದೆಬರುವುದಿಲ್ಲ ಅಂತ ಗೊತ್ತಿತ್ತು. ಆದರೂ ಸುಮ್ಮನೆ ಬೋರಲಾಗಿ ಮಲಗಿದ್ದೆ. ಯಾರೋ ಚಪ್ಪಾಳೆ ಹಾಕುತ್ತಾ ಮೈದಡವಿದಂತಾಯ್ತು. ಎದ್ದು ಸಮಯ ನೋಡಿದೆ ಇನ್ನೂ ಗಂಟೆಯ ಮುಳ್ಳು ಐದನ್ನೆ ದಾಟಿರಲಿಲ್ಲ. ಸ್ವಲ್ಪ ಹಿಂತಿರುಗಿ ನೋಡಿದೆ. ಮಂಗಳಮುಖಿಯೊಬ್ಬಳು ಬಹಳ ಸಹಜವೆಂಬಂತೆ ಮಾಮೂಲಿ ಕೇಳಲು ಬಂದಿದ್ದಳು. 

"ರೀ ನಿಮಗೆ ಹೊತ್ತು ಗೊತ್ತು ಏನೂ ಇಲ್ವಾ. ಇಗಲಾದ್ರೂ ಮಲಗಿದ್ದಿನಿ ನಿಮ್ಮದೊಳ್ಳೆ ಸಹವಾಸ" ಎಂದು ನಿದ್ದೆಯಲ್ಲಿ ಗೊಣಗುತ್ತಲೇ ಹಿಂದಿನ ಕಿಸೆಯಲ್ಲಿ ಕೈ ಹಾಕಿ ಒಂದು ರೂಪಾಯಿ ತೆಗೆದುಕೊಟ್ಟೆ. ಅವಳು ತೆಗೆದುಕೊಂಡು ಮತ್ತೆ ಚಪ್ಪಾಳೆ ತಟ್ಟುತ್ತ ಮುಂದಿನ ಸೀಟುಗಳತ್ತ ಹೋದಳು. ನಾನು ಮತ್ತೆ ಮಲಗಿಬಿಟ್ಟೆ.

ಹಾಗೂ ಹೀಗೂ ಅವತ್ತೂ ಏಳು ಗಂಟೆ ಹೊತ್ತಿಗೆ ಸೂರ್ಯ ನಾನು ಕುಳಿತಿದ್ದ ಬೋಗಿಯ ಮೇಲೆ ಬೆಳಕು ಚೆಲ್ಲಿಬಿಟ್ಟಿದ್ದ. "ಟೀ ಚಾಯ್ ಗರಂ ಗರಂ ಟೀ ಚಾಯ್" ಅನ್ನುವ ಶಬ್ದಗಳು ಸುಪ್ರಭಾತದಂತೆ ಕೇಳಿ ನನ್ನನ್ನ ಎಬ್ಬಿಸಿದವು. ಸ್ವಲ್ಪ ಹೊತ್ತು ಎದ್ದು ಕೆಳಗೆ ನೋಡಿದೆ. ಎಲ್ಲಾ ಕಡೆ ಫುಲ್ ರಷ್. ಜನರಲ್ ಬೋಗಿ ಅಂದರೆ ನಿಮಗೆ ಗೊತ್ತಲ್ಲ. ಅಲ್ಲಿ ನಡೆದಾಡಿಕೊಂಡು ಹೋಗಬೇಕಾದರೆ ಮನುಷ್ಯರ ಮೇಲೆ ಕಾಲಿಟ್ಟೇ ಹೋಗಬೇಕು. ಹಾಗಂತ ಹೋಗದಿದ್ದರೂ ನಡೆಯುವುದಿಲ್ಲ. ಅನಿವಾರ್ಯ. ಸ್ವಲ್ಪ ಧೈರ್ಯ ಮಾಡಿ ಮಖ ತೊಳೆಯಲು ಶಿಂಕ್ ಹತ್ತಿರ ನಡೆದೆ. ಬಾಗಿಲ ಕಡೆಗೆ ನೋಡಿದೆ. ಆ ಮಂಗಳಮುಖಿ ಇನ್ನೂ ಅಲ್ಲೇ ಇದ್ದಳು. ಕಾಲದ ಜೊತೆ ಸ್ಪರ್ಧೆ ಕಟ್ಟಿದಂತೆ ವೇಗವಾಗಿ ಮುನ್ನುಗ್ಗುತ್ತಿದ್ದ ರೈಲಿನ ಬಾಗಿಲಲ್ಲಿ ಅವಳು ಏನೋ ಧಿರ್ಘವಾಗಿ ವಿಚಾರ ಮಾಡುತ್ತಿದ್ದವಳಂತೆ ಕುಳಿತಿದ್ದಳು. ಅವಳನ್ನು ನೋಡಿ ನನಗೆ ಒಂದು ಕ್ಷಣ ಭಯವಾಯ್ತು. ನಾನು ನಿದ್ದೆಗಣ್ಣಲ್ಲಿ ಏನಾದರೂ ಬೈದೆನೇ ಅದಕ್ಕಾಗಿ ನನಗೆ ಅವಳು ಎನಾದರೂ ಮಾಡುವುದಕ್ಕೊಸ್ಕರ ಇಲ್ಲಿ ಕುಳಿತದ್ದಾಳೆಯೇ ಎಂಬ ಅನುಮಾನಗಳು ಬಂದವು. ಆದರೆ ಹಾಗೇನೂ ಆಗಲಿಲ್ಲ. ಬಹುಶಃ ನಮ್ಮದೇ ಕೊನೆ ಬೋಗಿಯಾಗಿದ್ದರಿಂದ ನನ್ನಿಂದಲೇ ಕೊನೆಯದಾಗಿ ಮಾಮೂಲಿ ತೆಗೆದುಕೊಂಡಿದ್ದಳು ಅಂತ ಅನಿಸುತ್ತೆ. ಅದಕ್ಕೆ ಮುಂದೆ ಎಲ್ಲಿಯೂ ಹೋಗಿರಲಿಲ್ಲ. 

ಯಾಕೊ ನನಗೂ ಅವರಿಗೆ ಮಾತನಾಡಿಸಬೇಕೇನಿಸಿತು. ಅವರಿಗೆ ಮೇಡಂ ಅನ್ನಬೇಕೋ ಸರ್ ಅನ್ನಬೇಕೋ ಅಂತ ತಕ್ಷಣಕ್ಕೆ ತಿಳಿಯಲಿಲ್ಲ. ಆದರೂ ಹಲೋ ಎನ್ನುತ್ತಾ ಮಾತು ಶುರುಮಾಡಿದೆ. "ನೀವು ಇನ್ನೂ ಇಲ್ಲೇ ಕುಳಿತಿದ್ದಿರಾ. ಆವಾಗ್ಗೆ ಹೋಗಿದ್ದಿರಿ ಅಂತ ಅನ್ಕೊಂಡಿದ್ದೆ" ಎಂದೆ ನಿಧಾನವಾಗಿ. ನಾನು ಅಂದುಕೊಂಡಂತೆ ಅವರು ತಕ್ಷಣ ನನ್ನ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಅವರ ಮುಖದಲ್ಲಿ ಯಾಕೊ ಸ್ವಲ್ಪ ಗಾಂಭಿರ್ಯತೆ ಕಾಣಿಸಿತು. ಗದ್ದಕ್ಕೆ ಕೈ ಹಚ್ಚಿಕೊಂಡು ಕುಳಿತ ಅವರ ಭಂಗಿ ಏನೋ ಚಿಂತೆ ಮಾಡುತಿರುವಂತೆ ತೋರಿತು. ಬೆಳಿಗ್ಗೆ ಬಂದು "ಏ ಮಾಮು" ಎನ್ನುವಾಗ ಅವರ ಮುಖದಲ್ಲಿ ಇದ್ದ ಕಳೆ ಈಗ ಮಾಯವಾಗಿ ಹೋಗಿತ್ತು. ಯಾವುದೋ ವಿಚಾರ ಅವರ ಕಳೆಯ ಮೇಲೆ ಧುಳು ಸುರಿದಿತ್ತು. ಮಂಗಳ ಮುಖಿಯರು ಹೀಗೆ ಗಾಂಭಿರ್ಯವಾಗಿ ವಿಚಾರ ಮಾಡುತ್ತ ಕುಳಿತುಕೋಳ್ಳುವುದು ಬಹಳ ಕಡಿಮೆ. ಅವರೇನಿದ್ದರೂ ಇತರರನ್ನು ಚುಡಾಯಿಸಿ ಆಟ ಆಡಿಸುವುದರಲ್ಲೇ ಸಂತೋಷ ಪಡುವವರು. ಆದರೆ ಇವರನ್ನು ನೋಡಿದ ಕೂಡಲೇ ನನ್ನ ಮನಸ್ಸಿಗೆ ಸ್ವಲ್ಪ ಬೇಸರವಗಿತ್ತು. ಯಾವಾಗಲೂ ಅವರನ್ನು ಕಂಡರೇ ಕೋಪ ಮಾಡಿಕೊಳ್ಳುತ್ತಿದ್ದ ನನಗೆ ಅವತ್ತು ಅವರ ಮೇಲೆ ಕರುಣೆ ಬಂದುಬಿಟ್ಟಿತು. ಒಂದು ವೇಳೆ ಸಂತೋಷವಾಗಿದ್ದರೇ ನನಗೆ ಸಿಟ್ಟು ಬರುತಿತ್ತೇನೋ.

ನಿಧಾನವಾಗಿ ನಾನೇ ಹತ್ತಿರ ಹೋಗಿ "ಹಲೋ ಇವತ್ತಿನ ಕಲೆಕ್ಷನ್ ಮುಗೀತಾ" ಅಂತ ಕೇಳಿದೆ. "ಹು ಮಾಮು ನಿಂದೇ ಲಾಸ್ಟು" ಎಂದಳು. ಅವರ ಪ್ರತಿಕ್ರಿಯೆ ನನಗೆ ಮತ್ತಷ್ಟು ಮಾತನಾಡಿಸಲು ಅನುಮತಿ ಕೊಟ್ಟಿತು. ಒಂದೇ ಒಂದ್ ಮಿನಿಟು ಮುಖ ತೊಳೆದುಕೊಂಡು ಬರುತ್ತೇನೆ ಎಂದು ಶಿಂಕ್ ಗೆ ಹೋಗಿ ಬಂದೆ. ವರ್ಷದ ಕೊನೆಯ ತಿಂಗಳ ಚಳಿಗಾಲ. ಸಿಕ್ಕಾಪಟ್ಟೆ ಸೆಕೆಯಲ್ಲ ಚಳಿ! ಸ್ವಲ್ಪ ಬಿಸಿಲು ಬಂದಿದ್ದರೂ ನಾವು ಪಕ್ಕದ ಬಾಲಲ್ಲಿ ಕುಳಿತುಕೊಂಡದ್ದರಿಂದ ಅದಕ್ಕೂ ನಮಗೂ ಹೆಚ್ಚಿನ ಸಂಬಂಧವಿರಲಿಲ್ಲ. ಆದರೂ ಎದುರುಗಡೆ ಕಾಣುತ್ತಿದ್ದ ಬೆಟ್ಟಗುಡ್ಡಗಳು, ಅಲ್ಲಲ್ಲಿ ಬೆಳೆದ ಹಸಿರು ಮರಗಳ ಸೌಂಧರ್ಯ ನನಗೆ ಚಳಿಯಲ್ಲಿ ನಡುಗುವ ಬದಲು ನಲಿಯುವಂತೆ ಮಾಡಿತ್ತು. 

ಇದನ್ನೆಲ್ಲಾ ನೋಡುತ್ತಾ ಸೌಂಧರ್ಯವನ್ನು ಆಸ್ವಾದಿಸುತ್ತಿದ್ದ ನನಗೆ ಪಕ್ಕದಲ್ಲಿ ಕುಳಿತಿದ್ದ ಮಂಗಳಮುಖಿಯನ್ನು ನೋಡಿದ ಕೂಡಲೇ ಅಲ್ಲಿ ಬಂದು ಕುಳಿತ ಉದ್ದೇಶದ ನೆನಪಾಗಿದ್ದು. ಸಮಾಜದಲ್ಲಿ ಈ ಕಡೆ ಹೆಣ್ಣೂ ಎನಿಸಿಕೊಳ್ಳದ ಆ ಕಡೆ ಗಂಡೂ ಎನಿಸಿಕೊಳ್ಳದೆ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುತ್ತಿರುವ ಇವರ ಬದುಕು ಯಾವ ರೀತಿ ಇರುತ್ತೆ? ಇವರ ಜೀವನದಲ್ಲಿ ಎಂತಹ ಅನುಭವಗಳು ಇರುತ್ತವೆ? ಇವರಿಗೂ ಒಂದು ಗುರಿ ಅಂತ ಇರುತ್ತಾ? ಹಾಗಾದರೆ ಏನು?…ಹೀಗೆ ಅನೇ ವಿಚಾರಗಳನ್ನು ಅವರಿಂದಲೇ ತಿಳಿದುಕೊಳ್ಳುವ ಕೂತೂಹಲ ನನಗೆ. ಅಂತಹ ಅವಕಾಶ ಆ ಮಂಗಳಮುಖಿ ಕೊಡುತ್ತಾಳೆನ್ನುವ ಭರವಸೆ ನನಗಿತ್ತು.

" ಏ ಚಾಯ್" ಎಂದು ಪಕ್ಕದಲ್ಲೇ ಹೋಗುತ್ತಿದ್ದ ಟೀಯವನನ್ನು ಕರೆದೆ. "ನೀನಗೆ ಟೀ ಬೇಕಾ ಕಾಫಿನಾ" ಎಂದು ಆ ಮಂಗಳಮುಖಿಗೆ ಕೇಳಿದೆ. ಅವರು ಉತ್ತರಿಸುವ ಬದಲು ಆಶ್ಚರ್ಯದಿಂದ ನನ್ನ ಮುಖ ನೋಡುತ್ತಿದ್ದರು. "ಅಯ್ಯೋ ಬೇಗ ಹೇಳಿ" ಎನ್ನುತ್ತ ಅವರ ಉತ್ತರಕ್ಕೆ ಕಾಯದೇ ನಾನೇ ಎರಡು ಕಾಫಿ ಹೇಳಿದೆ. ಕಾಫಿ ಕುಡಿಯುತ್ತಾ ಕುಳಿತೆವು. "ಮತ್ತೆ ಹೇಳಿ ಏನು ಸಮಾಚಾರ" ಎನ್ನುತ್ತಾ ನಾನೇ ಮಾತಿಗೆ ಪ್ರಸ್ತಾವನೆ ಹಾಕಿದೆ. 

"ನಿಮ್ಮ ಹೆಸರು ಗೊತ್ತಾಗ್ಲಿಲ್ಲ" 

"ವೀಣಾ" ಎಂದಳು ಸಣ್ಣ ಧ್ವನಿಯಲ್ಲಿ. ಈಗ ನನಗೆ ಖಾತ್ರಿಯಾಯಿತು ಅವರಿಗೆ ಅವಳು ಅಂತ ಅನ್ನಬಹುದೆಂದು! ಮತ್ತೆ ಮಾತು ಮುಂದುವರೆಯಿತು.

"ವೀಣಾ. ಹೆಸರು ತುಂಬಾ ಚೆನ್ನಾಗಿದೆ. ಅಂದ ಹಾಗೆ ಈ ಕಡೆ ಎಲ್ಲಿಗೆ ಹೊರಟಿದ್ದಿರಿ" ಎಂದೆ ಬೆಂಗಳೂರಿನ ಕಡೆಗೆ ಕೈ ಮಾಡಿ.

"ಬೆಂಗಳೂರಿಗೆ."

"ನಿಮ್ಮ ಸ್ವಂತ ಊರು ಬೆಂಗಳೂರೆನಾ?"

"ಊಹುಂ. ಬೆಳಗಾವಿ."

"ಬೆಳಗಾಂವಿನಾ? ಮತ್ತೆ ಇಲ್ಲಿ?" ಎಂದೆ ಆಶ್ಚರ್ಯದಿಂದ. ಯಾವ ಹೆಣ್ಣು ಮಕ್ಕಳೂ ಎಂಟು ನೂರ ಐವತ್ತು ಕೀಲೋಮಿಟರ್ ದೂರ ಕೆಲಸಕ್ಕೆಂದು ಬರುವುದಿಲ್ಲ. ಹಾಗೇನಾದರೂ ಬಂದರೆ ಒಂದು ಅವರು ಉನ್ನತ ವಿದ್ಯಾಭ್ಯಾಸ ಮಾಡಿ ಉತ್ತಮ ಉದ್ಯೋಗದಲ್ಲಿರಬೇಕು ಇಲ್ಲಾ ಅವಳು ಮದುವೆಯಾಗಿರಬೇಕು. ಆದರೆ ಅದಾವುದೂ ವೀಣಾಳಲ್ಲಿ ಕಾಣಲಿಲ್ಲ.

"ಇಲ್ಲಿ ಕೆಲಸ ಮಾಡಿಕೊಂಡಿದ್ದೀನಿ" ಎಂದಳು ಸ್ವಲ್ಪ ನಾಚಿಕೆಯಿಂದ.

"ಅಲ್ಲೇ ಯಾವುದಾದ್ರೂ ಕೆಲಸ ಮಾಡಿಕೊಂಡಿರಬಹುದಿತ್ತಲ್ಲ ಬೆಂಗಳೂರಿಗೆ ಯಾಕೆ ಬಂದ್ರಿ" ಎಂದು ಕೇಳಿದೆ ಸ್ವಲ್ಪ ಅಂಜುತ್ತಲೇ!

ಬಹುಶಃ ಅವಳಿಗೆ ಈಗ ನನ್ನ ಉದ್ದೇಶ ಸ್ಪಷ್ಟವಾಯಿತೆನಿಸುತ್ತೆ. ಅದಕ್ಕೆ ಅವಳೇ ನೇರವಾಗಿ "ಒಂದು ನಿಮಿಷ ಇರಿ ನಾನೇ ನನ್ನ ಬಗ್ಗೆ ಹೇಳುತ್ತೆನೆ" ಎಂದಳು ಕೈಯಲ್ಲಿ ಗುಟಕಾ ತಿಕ್ಕಿಕೊಳ್ಳುತ್ತಾ.

"ನಮ್ಮ ಸ್ವಂತ ಊರು ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ. ಅಪ್ಪ ಅಮ್ಮ ಎಲ್ಲರೂ ಅಲ್ಲೇ ಇರೋದು. ನಾವು ನಾಲ್ಕು ಜನ ಮಕ್ಕಳು. ನಾನೇ ದೊಡ್ಡವಳು. ಅಲ್ಲೇ ಒಬ್ಬ ತಮ್ಮ ಇಬ್ಬರು ತಂಗಿಯರು ಒದುತ್ತಿದ್ದಾರೆ. ಅಪ್ಪ ಕೂಲಿ ಕೆಲಸ ಮಾಡುತ್ತಾರೆ. ಇನ್ನು ಅಮ್ಮ ಮನೆಕೆಲಸ. ನಾಲ್ಕು ಜನ ಮಕ್ಕಳಿದ್ದರೂ ನಮ್ಮ ಅಪ್ಪ ಎಲ್ಲರನ್ನೂ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಎಲ್ಲರೂ ಚೆನ್ನಾಗಿಯೇ ಒದುತ್ತಿದ್ದೆವು. ಇಡೀ ಕ್ಲಾಸಿನಲ್ಲಿ ನಾನೇ ಮುಂದಿದಿದ್ದೆ. ಆದರೆ…." ಹೇಳುತ್ತಾ ಹೇಳುತ್ತಾ ಅವಳ ಕಣ್ಣುಗಳು ನೀರಿನಿಂದ ತುಂಬಿಕೊಂಡವು. ನಾನು ಸಮಾಧಾನಪಡಿಸಬೇಕೆಂದೆ. ಆದರೆ ಏನು ಮಾಡಲಿಲ್ಲ. ಅವಳೆಲ್ಲ ಹೇಳಲಿ ಆಮೇಲೆ ನೋಡೊಣವೆಂದುಕೊಂಡು ಸುಮ್ಮನಾದೆ.

"ನನ್ನ ದುರಾದೃಷ್ಟವೋ ಏನೋ ನಾಲ್ಕನೇ ಕ್ಲಾಸ್ ಸೇರುತ್ತಿದ್ದಂತೆ ನನ್ನ ಧ್ವನಿಯಲ್ಲಿ ವಿಪರೀತ ಬದಲಾವಣೆಯಾಯಿತು. ಬೆಳೆದ ಹೆಣ್ಣಿನಲ್ಲಿ ಹುಟ್ಟಬೇಕಾಗಿದ್ದ ಕೋಗಿಲೆಯ ಸ್ವರದ ಬದಲಾಗಿ ಗಂಡಸರ ಧ್ವನಿಗಿಂತಲೂ ಕರ್ಕಶ ಧ್ವನಿ ಹುಟ್ಟಿಕೊಂಡಿತು. ನಮ್ಮ ಅಪ್ಪ ಅಮ್ಮ ಇಬ್ಬರೂ ಗಾಬರಿಯಾದರು. ಮೊದಲು ಮೊದಲು ಇದೇನು ನನಗೆ ಸಮಸ್ಯೆಯಾಗಿರಲಿಲ್ಲ. ಆದರೆ ಶಾಲೆಯಲ್ಲೂ ಸಹ ನಮ್ಮ ಟೀಚರ್‍ಸಗಳೆಲ್ಲ ಒಂದು ರೀತಿಯಲ್ಲಿ ನೋಡಲು ಶುರುಮಾಡಿದರು. ನಮ್ಮ ಮನೆಯಲ್ಲಿ ನನಗೆ ಎಲ್ಲಾ ದೊಡ್ಡ ಆಸ್ಪತ್ರೆಗಳಲ್ಲೂ ತೋರಿಸಿದರು. ಅದರೂ ಯಾವುದೇ ಪ್ರಯೋಜನಗಳು ಆಗಲಿಲ್ಲ. ಕೆಲವು ಡಾಕ್ಟರುಗಳು ಈ ಧ್ವನಿ ಬದಲಯಿಸಲು ಸಾಧ್ಯವಿಲ್ಲ ಎಂದರೆ ಇನ್ನು ಕೆಲವರು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತೆ ಎಂದು ಹೆದರಿಸಿದರು. ನಮಗೂ ಏನೂ ಮಾಡಲಾಗಲಿಲ್ಲ. ಕೊನೆಗೆ ಹಣೆಬರಹ ಎಂದುಕೊಂಡು ಸುಮ್ಮನಾದೆವು. 

ಹೇಗೋ ಎಲ್ಲದರ ನಡುವೆ ಎಂಟನೆ ಕ್ಲಾಸ್ ಮುಗಿಸಿದೆ. ಅಲ್ಲಿಯವರೆಗೂ ನಾನು ಸಂಪೂರ್ಣವಾಗಿ ಬದಲಾಗಿಬಿಟ್ಟಿದ್ದೆ. ನನ್ನ ಧ್ವನಿ ಕೇಳಿದವರು ತಕ್ಷಣ ನನ್ನಿಂದ ದೂರ ಸರಿಯುತ್ತಿದ್ದರು. ನಾನು "ವೀಣಾ" ಅಂತ ನನಗೆ ಗೊತ್ತಿತ್ತು. ಆದರೆ ಅವರು ನಾನು ಹೆಣ್ಣು ಹಾಗೂ ಗಂಡೂ ಅಲ್ಲದ ಮೂರನೇಯ ವ್ಯಕ್ತಿ ಎಂದುಕೊಂಡುಬಿಟ್ಟಿದ್ದರು! ಅವರ ಆ ವರ್ತನೆ ನೋಡಿ ನನಗೆ ಬಹಳ ನೋವಾಗುತ್ತಿತ್ತು. ಜೊತೆಗೆ ಭಯವೂ ಆಗುತ್ತಿತ್ತು. ಕೇವಲ ಧ್ವನಿಯಲ್ಲಿ ಬದಲಾವಣೆಯಾಗಿದ್ದಕ್ಕೆ ಯಾಕೆ ಸಮಾಜ ನನ್ನ ಬಗ್ಗೆ ಹೀಗೆ ವಿಚಾರ ಮಾಡುತ್ತಿದೆ? ಯಾಕೆ ಯಾವುದು ನಿಜ ಎಂದು ತಿಳಿದುಕೊಳ್ಳದೆ ಸಮಾಜದಿಂದ ಪ್ರತ್ಯೇಕಿಸಲ್ಪಟ್ಟ ಸಮುದಾಯಕ್ಕೆ ನನ್ನನ್ನು ಸೇರಿಸುತ್ತಿದ್ದಾರೆ? ಇದು ಯಾರು ಮಾಡಿದ ತಪ್ಪು? ಹುಟ್ಟಿಸಿದ ನನ್ನ ಅಪ್ಪ ಅಮ್ಮ ಅವರದಾ? ಅಥವ ಹುಟ್ಟಿಸಲು ಅನುಮತಿ ಕೊಟ್ಟ ಆ ದೇವರದಾ? ಯಾರು ಹೊಣೆ ಈ ಆಗಬಾರದ ತಪ್ಪಿಗೆ?" ಎಂದು ವೀಣಾ ತನ್ನ ಕಥೆಯನ್ನು ಹೇಳುತ್ತಲೇ ಉತ್ತರಿಸಲಸಾಧ್ಯವಾದ ಬಹಳ ಕಠಿಣ ಪ್ರಶ್ನೆಗಳನ್ನು ನನ್ನ ಮೇಲೆಸೆಯುತ್ತಿದ್ದಳು. ನಾನು ಮಾತ್ರ ಅವಳು ಹೇಳಿದ್ದಕ್ಕೆಲ್ಲ ಗಂಭೀರವಾಗಿ ತಲೆ ಅಲ್ಲಾಡಿಸುತ್ತ ಅವಳು ಮುಂದೆ ಎನು ಮಾಡಿದಳು ಎಂಬ ಉಳಿದ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ. 

"ದಿನ ಕಳೆದ ಹಾಗೆ ನನ್ನಿಂದ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ದೂರ ಸರಿಯಲಾರಂಭಿಸಿದರು. ಇದೇ ನೆಪ ನೀಡಿ ಕೊನೆಗೆ ನನ್ನನ್ನು ಶಾಲೆಯಿಂದ ಹೊರಹಾಕಿದರು.  ನನ್ನ ಅಪ್ಪ ಅಮ್ಮ ಎಷ್ಟೇ ಅತ್ತು ಕರೆದರೂ ನಮ್ಮ ಹೆಡ್‌ಮಾಸ್ಟರ್‌ಮ್ಮ ಮಾತ್ರ ನನ್ನನ್ನು ಮರಳಿ ಶಾಲೆಗೆ ಸೇರಿಸಿಕೊಳ್ಳಲೇ ಇಲ್ಲ. ಬೇರೆ ಶಾಲೆಗಳಲ್ಲೂ ನನಗೆ ಇದೇ ಪರಿಸ್ಥಿತಿ ಎದುರಾಯಿತು. ವರ್ಷ ಕಳೆಯಿತು. ಎರಡು ವರ್ಷ ಕಳೆಯಿತು. ಬರುಬರುತ್ತ ನನಗೆ ಕಲಿಯುವ ಆಸೆಯೇ ಹೊರಟುಹೋಯಿತು. ಆಗಿದ್ದಾಯಿತು ನನ್ನ ತಮ್ಮ ತಂಗಿಯರಾದರೂ ಚೆನ್ನಾಗಿ ಒದಲಿ ಅಂತ ನಾನು ಎಲ್ಲಾದರೂ ಕೆಲಸ ಮಾಡಲು ನಿರ್ಧಾರ ಮಾಡಿದೆ. ಹೇಗೂ ನಮ್ಮ ಅಪ್ಪ ನಮ್ಮನ್ನೇಲ್ಲಾ ಒದಿಸಲು ಬಹಳ ಕಷ್ಟ ಪಡುತ್ತಿದ್ದರು. ಈಗ ನಾನೂ ಅವರಿಗೆ ಸಹಾಯ ಮಾಡಬಹುದೆನಿಸಿತು. ಕೆಲಸ ಹುಡುಕಲಾರಂಭಿಸಿದೆ. ಸ್ವಲ್ಪ ದಿನಗಳ ನಂತರ ಬಟ್ಟೆ ಅಂಗಡಿಯಲ್ಲೊಂದು ಕೆಲಸವೂ ಸಿಕ್ಕಿತು. ಸಂಬಳ ತಿಂಗಳಿಗೆ ಮೂರುವರೆ ಸಾವಿರ" ಎಂದು ಹೇಳುವಾಗ ವೀಣಾಳ ಮುಖ ದುಃಖದಿಂದ ಹೊರಬಂದು ಸ್ವಲ್ಪ ಸಹಜತೆ ಪಡೆದುಕೊಂಡಿತ್ತು. ಆದರೆ ಅಲ್ಲಿ ಕೆಲಸ ಸಿಕ್ಕಿದರೂ ಯಾಕೆ ವೀಣಾ ಬೆಂಗಳೂರಿಗೆ ಬಂದಳು? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. 

"ಮೂರು ಸಾವಿರನಾ. ಮತ್ತೆ ಅಲ್ಲೇ ಕೆಲಸ ಮಾಡಿಕೊಂಡಿರಬಹುದಿತ್ತಲ್ಲ"

"ಮುಚ್ಕೊಂಡು ಮುಂದ ಏನಾಯಿತು ಅಂತ ಕೇಳು" ಎಂದಳು ವೀಣಾ ಸಿಟ್ಟಿನಲ್ಲೇ.

"ನನ್ನ ಅಪ್ಪ ಬಟ್ಟೆ ಅಂಗಡಿ ಮಾಲೀಕರಿಗೆ ನನ್ನ ಪರಿಸ್ಥಿತಿಯ ಬಗ್ಗೆ ಮೊದಲೇ ಎಲ್ಲ ಹೇಳಿದ್ದರಿಂದ ಅವರು ನನ್ನನ್ನು ಒಬ್ಬ ಕೆಲಸಗಾರ್ತಿಯಂತೆಯಲ್ಲದೇ ಹತ್ತಿರದ ಸಂಬಂಧಿಯಂತೆ ನೋಡಿಕೊಳ್ಳುತ್ತಿದ್ದರು. ಆದರೆ ಅನಗತ್ಯವಾಗಿ ಕರುಣೆ ತೋರಿಸುತ್ತಿದ್ದರು. ಅದೇ ನನಗೆ ಆಗಿಬರುತ್ತಿರಲಿಲ್ಲ. ಯಾವುದರಲ್ಲೂ ಕಡಿಮೆಯಿರದ ನನಗೆ ಕರುಣೆ ಯಾಕೆ ಬೇಕು? ಬದಲಾಗಿ ಸರಿಯಾಗಿ ಮಾತನಾಡಿಸಿಕೊಂಡಿದ್ದರೆ ಸಾಕೆನಿಸುತ್ತಿತ್ತು. ಆದರೂ ಅನಿವಾರ್ಯವಾಗಿ ನಾನು ಆ ವಾತಾವರಣಕ್ಕೆ ಹೊಂದಿಕೊಂಡಿದ್ದೆ. ಬಹುಶಃ ಹೊಂದಿಕೊಳ್ಳಲೇಬೇಕಾಗಿತ್ತೆನೊ!

ಆದರೆ ಕೆಲವು ದಿನಗಳ ನಂತರ ಮತ್ತೆ ನನಗೆ ದುರಾದೃಷ್ಟ ಕಾಡಲಾರಂಭಿಸಿತು. ಅಂಗಡಿಗೆ ಬಂದ ಗ್ರಾಹಕರಾರೂ ನನ್ನ ಬಳಿ ಬಟ್ಟೆಗಳನ್ನು ನೋಡಲು ಬರುವುದಕ್ಕೆ ಒಪ್ಪುತ್ತಿರಲಿಲ್ಲ. ಕಾರಣ ನನ್ನ ಒರಟು ಧ್ವನಿ. ಇನ್ನು ಅವರ ಜೊತೆ ಬರುತ್ತಿದ್ದ ಮಕ್ಕಳಂತೂ ನನ್ನ ನೋಡಿ ಹೆದರುತ್ತಾ ಅಂಗಡಿಯಿಂದ ಹೊರಗೆ ಓಡುತ್ತಿದ್ದರು. ಇದರಿಂದಾಗಿ ಸಹಜವಾಗಿಯೇ ಮಾಲೀಕರಿಗೆ ನನ್ನಿಂದ ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗುತ್ತಿದೆಯೆನಿಸಿತು. ಹಾಗಾಗಿ ಅವರು ನನ್ನ ಅಪ್ಪನಿಗೆ ಭೇಟಿಯಾಗಿ ನಡೆದಿದ್ದೆಲ್ಲಾ ಹೇಳಿ "ನಾನು ಬೇಕು ಅಂತ ಹೀಗೆ ಮಾಡುತ್ತಿಲ್ಲ ಗ್ರಾಹಕರು ಗಲಾಟೆ ಮಾಡುತ್ತಿದ್ದಾರೆ ಅದಕ್ಕೆ ಕೆಲಸದಿಂದ ತೆಗೆದು ಹಾಕುತ್ತಿದ್ದೇವೆ. ದಯವಿಟ್ಟು ತಪ್ಪು ತಿಳಿದುಕೋಳ್ಳಬೇಡಿ" ಎಂದು ಹೇಳಿದರಂತೆ.

ನನ್ನ ಅಪ್ಪನಿಗೆ ಸ್ವಲ್ಪ ಶಾಕ್ ಆಯಿತು. ಆದರೂ ತೋರಿಸಿಕೊಳ್ಳಲಿಲ್ಲ. "ನೀನೇನು ನಮಗೆ ಭಾರವಲ್ಲ. ಮನೆಯಲ್ಲೇ ಇದ್ದು ಕೆಲಸ ಮಾಡಿಕೊಂಡು ಆರಾಮವಾಗಿರು. ಏನೂ ಚಿಂತೆ ಮಾಡಬೇಡ ಸ್ವಲ್ಪ ದಿನ ಕಳೆಯಲಿ ಬೇರೆ ಕೆಲಸ ಹುಡುಕಿದರಾಯಿತು" ಎಂದು ಸಮಾಧಾನ ಮಾಡಿದರು. ಆದರೆ ನನಗೆ ಮಾತ್ರ ಬಹಳ ಬೇಸರವಾಯಿತು. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೆ ನನ್ನ ಜೀವನದ ಗತಿಯೇನು ಎಂದು ಚಿಂತೆಯಾಯಿತು. ಈ ಕರ್ಕಶ ಧ್ವನಿಯಿಂದಾಗಿ ನನ್ನನ್ನು ಒಂದು ಅಂಗಡಿಯಲ್ಲಿ ಗ್ರಾಹಕರೇ ಈ ರೀತಿ ತಿರಸ್ಕರಿಸಿದರೆಂದರೇ ಇನ್ನು ನನ್ನ ಮದುವೆಯಾಗಿ ನನ್ನ ಜೊತೆ ಜೀವನಪರ್ಯಂತ ಬದುಕಲು ಯಾರು ಮುಂದೆ ಬರುತ್ತಾರೆ? ನನಗೆ ಕೆಲಸವೇ ಸಿಗದಿದ್ದರೆ ನನ್ನ ಕಾಲಮೇಲೆ ನಾನು ನಿಂತುಕೊಳ್ಳುವುದು ಹೇಗೆ? ನನ್ನ ಅಪ್ಪ ಅಮ್ಮನಿಗೆ ನೋಡಿಕೊಳ್ಳುವವರಾದರೂ ಯಾರು? ನನ್ನ ತಂಗಿಯರ ಓದು, ಮದುವೆ ಎಲ್ಲ ಹೇಗೆ ಸಾಧ್ಯ? ಎಂಬ ಅನೇಕ ವಿಚಾರಗಳು ನನ್ನನ್ನು ಕಾಡಿದವು. ಸ್ವಲ್ಪ ದಿನಗಳ ಬಳಿಕ ಒಂದು ಗಾರ್ಮೆಂಟ್ಸ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತು. ಮೊದಲಿನದಿನಗಳು ಸರಿಯಾಗಿಯೇ ಇದ್ದವು. ಆದರೆ ಅಲ್ಲೂ ಕೆಲಸಗಾರರು ನನ್ನ ಬಗ್ಗೆ ಬಹಳ ಹೀನಾಯವಾಗಿ ಮಾತನಾಡಿಕೊಳ್ಳಲು ಶುರುಮಾಡಿದರು. ನನ್ನನ್ನ ಚುಡಾಯಿಸಿ ಗೇಲಿ ಮಾಡುತ್ತಿದ್ದರು. ಯಾರೂ ನನ್ನ ಜೊತೆ ಕುಳಿತುಕೊಳ್ಳುತ್ತಿರಲಿಲ್ಲ. ಹೀಗಾಗಿ ನಾನೇ ಅಲ್ಲಿನ ಕೆಲಸ ಬಿಟ್ಟೆ. ಹೀಗೆ ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ನನಗೆ ಊರೇ ಬಿಟ್ಟು ಬೇರೆ ಎಲ್ಲಾದರೂ ಹೋಗಬೇಕೆನಿಸಿತು." ಎಂದಳು ವೀಣಾ ಬಹಳ ವಿಷಾದದ ಧ್ವನಿಯಲ್ಲಿ.

"ಓ ಆವಾಗ ಬೆಂಗಳೂರಿಗೆ ಬಂದೆ. ಅಲ್ವಾ?" ಎಂದು ಕೇಳಿದೆ ಬಹಳ ಸಹಜವಾಗಿ. ಅವಳು ಸ್ವಲ್ಪ ದಿಟ್ಟಿಸಿ ನೋಡಿದಳು. ಮತ್ತೆ ನಾನು ಅವಳ ಮುಖ ನೋಡಲಾರಂಭಿಸಿದೆ ಮುಂದೆ ಹೇಳಲು ಅನುಮತಿ ಕೊಟ್ಟ ಹಾಗೆ.

"ತಕ್ಷಣ ಬೆಂಗಳೂರಿನಲ್ಲಿದ್ದ ನಮ್ಮ ಅಂಕಲ್ ಒಬ್ಬರು ನೆನಪಾದರು. ಕೆಲವೇ ವರ್ಷಗಳ ಹಿಂದೆ ಅವರು ನಮ್ಮ ಅಪ್ಪನ ಜೊತೆಗೆ ಕೂಲಿ ಮಾಡಿಕೊಂಡಿದ್ದರು. ನಮ್ಮ ಮನೆಯ ಪಕ್ಕನೇ ಅವರ ಮನೆ. ಹೆಚ್ಚಿನ ಸಂಬಳ ಸಿಗಬಹುದೆಂದು ಬೆಂಗಳೂರಿಗೆ ಬಂದಿದ್ದರು. ಹೇಗೋ ಅವರಿಗೆ ಫೋನ್ ಮಾಡಿ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿದೆ. ಅದಕ್ಕವರು "ಸರಿ ಬೆಂಗಳೂರಿಗೆ ಬಾ. ಇಲ್ಲಿ ಯಾವ ರೀತಿಯ ಸಮಸ್ಯೆ ಇರುವುದಿಲ್ಲ. ನಮ್ಮ ಮನೆಯಲ್ಲೇ ಇರುವೆಯಂತೆ. ಇಲ್ಲೇ ಒಂದು ಕೆಲಸ ಹುಡುಕಿ ಕೊಡುತೀನಿ ಬಾ" ಎಂದು ಹೇಳಿದ್ದರು. ಮನೆಯಲ್ಲಿ ಬೆಂಗಳೂರಿಗೆ ಹೋಗುವ ವಿಷಯ ಹೇಳಿದೆ. ಮೊದಲು ವಿರೋಧಿಸಿದರೂ ಆಮೇಲೆ ಅಪ್ಪ ಅಮ್ಮ ಅಂಕಲ್ ಮೇಲೆ ಭರವಸೆಯಿಟ್ಟು ನನಗೆ ಕಳುಹಿಸಲು ಒಪ್ಪಿದರು.

ಅಂದುಕೊಂಡ ಹಾಗೆ ಬೆಳಗಾಂವಿ ಬಿಟ್ಟು ಬೆಂಗಳೂರಿಗೆ ಬಂದೆ. ನನಗೆ ಸರಿಯಾಗಿ ನಮ್ಮ ಅಂಕಲ್ ಮನೆ ವಿಳಾಸ ಗೊತ್ತಿರಲಿಲ್ಲ. ಅವರು ಫೋನಿನಲ್ಲಿ ಹೇಳುವಾಗ ಗಡಿಬಿಡಿಯಲ್ಲಿ ಒಂದು ಸಣ್ಣ ಚೀಟಿಯಲ್ಲಿ ಬರೆದುಕೊಂಡಿದ್ದೆ. ಆದರೆ ಅಲ್ಲಿಗೆ ಯಾವ ಬಸ್ಸು ಹೋಗುತ್ತೆ? ಯಾವ ಪ್ಲಾಟಫಾರ್ಮನಲ್ಲಿ ನಿಲ್ಲುತ್ತೆ ಅಂತ ಗೊತ್ತಿರಲಿಲ್ಲ. ಆ ಚೀಟಿ ಹಿಡಿದುಕೊಂಡು ಬಸ್ ಸ್ಟ್ಯಾಂಡ್‌ನಲ್ಲಿ ಬಸ್‌ನ ಬಗ್ಗೆ ವಿಚಾರಿಸತೊಡಗಿದೆ. ಯಾರಿಗೆ ವಿಳಾಸ ಕೇಳಬೇಕೋ ತಿಳಿಯಲಿಲ್ಲ. ಒಂದು ಕಡೆ ಗುಂಪಾಗಿ ಹೇಣ್ಣುಮಕ್ಕಳು ನಿಂತುಕೊಂಡಿದ್ದರು. ಅವರೂ ಸಹ ಸ್ಥಳೀಯ ಪ್ರಯಾಣಿಕರಿರಬಹುದೆಂದುಕೊಂಡಿದ್ದೆ. ಹಾಗಾಗಿ ವಿಳಾಸ ಕೇಳಲು ಅವರ ಹತ್ತಿರ ಹೋದೆ. ನನ್ನ ಧ್ವನಿ ಕೇಳುತ್ತಲೇ ಅವರೆಲ್ಲ ನಗಲಾರಂಭಿಸಿದರು. ನನ್ನ ಹಳೆ ಬಟ್ಟೆಗಳನ್ನು ನೋಡಿ " ಏ ನೋಡ್ರೆ ಇದೂ ನಮ್ ಪಾರ್ಟಿನೆ" ಎಂದು ಒಬ್ಬಳು ಅಂದರೆ ಇನ್ನೊಬ್ಬಳು "ಎಲ್ಲಿ ಬಾಂಬೆಯಿಂದ ಬಂದಿದ್ದಿಯಾ ಅಲ್ಲಿ ಸರಿಯಾಗಿ ಕಮಾಯಿ ಆಗಲಿಲ್ವಾ" ಎನ್ನುತ್ತಾ ಗೇಲಿ ಮಾಡಿ ನಕ್ಕಳು. ಆಗ ನನಗೆ ಗೊತ್ತಾಯ್ತು ಅವರು ಹೆಣ್ಣುಮಕ್ಕಳಲ್ಲ ಸೂಳೆಯರು ಅಂತ. ನನಗಂತೂ ಒಂದು ಕ್ಷಣ ಉಸಿರು ನಿಂತು ಹೋದ ಹಾಗಾಗಿತ್ತು. ಹೋಗಿ ಹೋಗಿ ಎಂಥವರ ನಡುವೆ ಸಿಕ್ಕಿಹಾಕಿಕೊಂಡೆನಲ್ಲ ಎನಿಸಿತು.

ಹೇಗಾದರೂ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಬೇಕೆನ್ನುವಷ್ಟರಲ್ಲಿ ’ವಿಳಾಸ ಹೇಳ್ತಿವಿ ಬಾ’ ಎನ್ನುತ್ತ ನನ್ನ ಕೈ ಹಿಡಿದು ಒಬ್ಬಳು ಕರೆದುಕೊಂಡು ಹೋದಳು. ಎಲ್ಲಿಗೆ ಹೋಗುತ್ತಿದ್ದಾಳೆ ಎನ್ನುವಷ್ಟರಲ್ಲಿ ಹೊರಗೆ ನಿಂತಿದ್ದ ಒಂದು ಕಾರಿನಲ್ಲಿ ನನ್ನ ಕುಳ್ಳಿರಿಸಿ ಡ್ರೈವರಿಗೆ ಎಲ್ಲಿಗೋ ಹೋಗುವಂತೆ ಕಣ್ಸನ್ನೆ ಮಾಡಿದಳು. ಅವನಂತೂ ಏನೂ ಹೇಳದೇ ಯಾವುದೋ ಒಂದು ಸ್ಲಂ ಏರಿಯಾ ಇತ್ತು ಅಲ್ಲಿಗೆ ಕರೆದುಕೊಂಡು ಹೋಗಿ "ತೊಗೊಳ್ಳಿ ಇವತ್ತು ಹೊಸ ಎಂಟ್ರಿ" ಎಂದು ಹೇಳುತ್ತ ನನ್ನನ್ನು ಅಲ್ಲಿನ ಮಹಿಳೆಯೋಬ್ಬಳಿಗೆ ಒಪ್ಪಿಸಿ ಹೋದ.

ಒಂದೇ ದಿನದಲ್ಲಿ ನನಗೆ ಗೊತ್ತಾಯಿತು ಅದು ವೇಶ್ಯೆಯರ ಮನೆ ಅಂತ. ಬೇರೆ ಎಲ್ಲಾ ವೇಶ್ಯೆಯರು ನನ್ನನ್ನು ತಮ್ಮ ಧಂಧೆಗೆ ಇಳಿಯಲು ಒತ್ತಾಯಿಸಿದರು. ಕೆಲವು ದಿನಗಳ ನಂತರ ನಾನೇ ಒಪ್ಪಬಹುದೆಂದು ಸಮಯ ಕೊಟ್ಟರು. ಆದರೆ ನನ್ನ ಪ್ರತಿಕ್ರಿಯೆ ನೋಡಿದ ಅವರು ಬಲವಂತವಾಗಿ ತಮ್ಮ ವೃತ್ತಿಗೆ ಶರಣಾಗುವಂತೆ ಮಾಡಿದರು. ಕೆಲವು ದಿನಗಳವರೆಗೆ ನನಗೂ ತಪ್ಪು ಮಾಡುತ್ತಿದ್ದೇನೆ ಎನಿಸಿತು. ಆದರೆ ಬರುಬರುತ್ತ ರೂಢಿಯಾಗಿ ಹೋಯಿತು. ಆರಾಮವಾಗಿ ಎಂಜಾಯ್ ಮಾಡಿ ಹಣ ಮಾಡಿಕೊಳ್ಳುವುದು ಒಂದು ರೀತಿ ಹಣ ಗಳಿಸಲು ಬಹಳ ಸುಲಭದ ಹಾದಿ ಎನಿಸಿತು. ನನ್ನ ತಮ್ಮ ತಂಗಿಯರ ಶಿಕ್ಷಣಕ್ಕೆ ಹಣ ನೀಡಬೇಕಾಗಿದ್ದ ನನಗೆ ಈ ಧಂಧೆ ಅನಿವಾರ್ಯವೂ ಅನಿಸಿತು. ಊರಲ್ಲಿ ನನ್ನ ಹತ್ತಿರ ಯಾರೂ ಬರಲಿಲ್ಲ. ಅದಕ್ಕಾಗಿಯೇ ತಿಂಗಳಿಗೆ ಮೂರುವರೆ ಸಾವಿರ ಸಂಬಳದ ಕೆಲಸ ಬಿಡಬೇಕಾಯಿತು. ಆದರೆ ಇಲ್ಲಿ ಜನ ನನಗೊಸ್ಕರವೇ ಬಂದು ಹೋಗುತ್ತಾರೆ. ಮೂರುವರೆ ಸಾವಿರ ತಿಂಗಳಿಗಲ್ಲ ದಿನಕ್ಕೆ ಗಳಿಸುತ್ತಿದ್ದೆನೆ" ಎಂದು ಹೇಳುತ್ತಿದ್ದ ವೀಣಾಳ ಮನಸ್ಸಿನಲ್ಲಿ ನೋವು ಇತ್ತೋ ಅಥವ ಸಂತೋಷವಿತ್ತೋ ಅಥವ ಜಿಜ್ಞಾಸೆ ಇತ್ತೋ ಅವಳಿಗೇ ಗೊತ್ತು.

"ಮತ್ತೆ ಇದೆಲ್ಲಾ ಮನೆಯಲ್ಲಿ ಗೊತ್ತಿದೆಯಾ" ಎಂದು ಕೇಳಿದೆ.

"ಇಲ್ಲಾ. ಅವರಿಗೆ ಗಾರ್ಮೆಂಟನಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದ್ದೇನೆ. ತಿಂಗಳು ತಿಂಗಳು ಮನೆಗೆ ಹಣ ಕಳುಹಿಸುತ್ತೇನೆ" ಎಂದು ಹೇಳುತ್ತ ಮಾತುಕಥೆ ಮುಗಿಸಿದಳು ವೀಣಾ.

ನಾನು ನಿಜವಾಗಿಯೂ ದಂಗಾಗಿಬಿಟ್ಟಿದ್ದೆ ಸಮಾಜ ಹೀಗೂ ವಿಚಾರ ಮಾಡುತ್ತಾ ಅಂತ. ಯಾವುದೇ ದೋಷಗಳಿಲ್ಲದೇ ಹೆಣ್ಣಾಗಿಯೇ ಇದ್ದ ವೀಣಾಳನ್ನು ಕೇವಲ ಅವಳ ಗಡಸು ಧ್ವನಿಗೊಸ್ಕರ ಯಾಕೆ ಸಮಾಜ ಗಂಡು ಅಲ್ಲದ ಹೆಣ್ಣೂ ಅಲ್ಲದ ವರ್ಗಕ್ಕೆ ಸೇರಿಸಿತು? ಯಾಕೆ ಅಮಾಯಕಳಾಗಿದ್ದ ಒಬ್ಬ ಹೆಣ್ಣುಮಗಳ ಮೇಲೆ ಸಂಶಯಪಟ್ಟು ಸಮಾಜ ವೇಶ್ಯಾವೃತ್ತಿಗೆ ತಳ್ಳುವಂತೆ ಮಾಡಿತು? ನಿಜವನ್ನು ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ, ವ್ಯವಧಾನ ಸಹ ಸಮಾಜದ ಹತ್ತಿರ ಇರಲಿಲ್ವಾ? ಬದುಕಿನಲ್ಲಿ ಏನೇನೋ ಸಾಧಿಸಬೇಕೆಂದುಕೊಂಡು ಈಗ ಅನ್ಯಾಯವಾಗಿ ವೇಶ್ಯಾವೃತ್ತಿಗೆ ಇಳಿದ ವೀಣಾಳ ದುರ್ಬಲ ಬದುಕಿಗೆ, ಭವಿಷ್ಯಕ್ಕೆ ಈಗ ಯಾರು ಹೊಣೆ?….ಹೀಗೆ ಸಮಾಜದ ಬಗ್ಗೆ ಅನೇಕ ವಿಚಾರ ವಿಮರ್ಶೆಗಳು ನನ್ನಲ್ಲಿ ಅಸಹನೆಯನ್ನು ಮೂಡಿಸುತ್ತಿದ್ದವು.

"ಏ ಮಾಮಾ ಏಳೋ ಸ್ಟೇಶನ್ ಬಂತು" ಎಂದು ವಿಚಾರದಲ್ಲಿ ಮುಳುಗಿದ್ದ ನನ್ನ ಮೈ ತಡವಿದಳು ವೀಣಾ.

"ನನ್ನ ಬಗ್ಗೆ ಎಲ್ಲಾ ಗೊತ್ತಾಯಿತಲ್ಲ. ಈಗ ಹೆಚ್ಚಿಗೆ ವಿಚಾರ ಮಾಡಬೇಡ. ನನ್ನ ಹಾಗೇ ಇನ್ನೂ ಎಷ್ಟೋ ಜನ ಏನೂ ತಪ್ಪೇ ಮಾಡದೇ ಸಮಾಜದಲ್ಲಿ ಕೆಟ್ಟುಹೋಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ನಡಿ ಹೋಗೊಣ" ಎನ್ನುತ್ತಾ ನನ್ನ ಕೈ ಹಿಡಿದು ಕೆಳಗಿಳಿದಳು.

"ನೀನು ಯಾವ ಕಡೆ ಹೋಗ್ತಾಯಿದ್ದಿ" ಎಂದು ಕೇಳಿದಳು ವೀಣಾ.

"ನಾ ಬಸವೇಶ್ವರ ನಗರಕ್ಕೆ. ಮತ್ತೆ ನೀ?"

"ಅದೇ ಮಾಮೂಲಿ ಮೆಜೆಸ್ಟಿಕ್ ಅಂಡರ್ ಗ್ರೌಂಡ್ ನಲ್ಲಿ ಮೂಲೆಯಲ್ಲಿ ನಿಂತಿರ್ತಿನಿ. ಆ ಕಡೆ ಬಂದರೆ ಭೇಟಿಯಾಗು" ಎನ್ನುತ್ತಾ ಕೈ ಬೀಸಿಕೊಂಡು ಹೊರಟುಹೋದಳು ವೀಣಾ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ವೀಣಾ: ಶ್ರೀಮಂತ್ ಎಮ್. ಯನಗುಂಟಿ

  1. ಬರವಣಿಗೆ ಇಷ್ಟವಾಯಿತು ಶ್ರೀಮಂತ. ಬರಿತಾ ಇರಿ.

Leave a Reply

Your email address will not be published. Required fields are marked *