ಸಿನಿಮಾ ಎಂದಾಗ ನೆನಪಾಯ್ತು. ನೀವು ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಅನ್ನೋ ಚಿತ್ರ ನೋಡಿದ್ದೀರಾ? ನೋಡಿಲ್ಲದಿದ್ದರೆ ಖಂಡಿತಾ ನೋಡಿ. ಎಲ್ಲರೂ ನೋಡಲೇಬೇಕಾದ ಚಿತ್ರವದು. ಆ ಚಿತ್ರದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ ಹನಿ ಗೈಡ್ ಹಕ್ಕಿ ಮತ್ತು ಹನಿ ಬ್ಯಾಡ್ಜರ್ ಅಥವಾ ರಾಟೆಲ್ ಎನ್ನುವ ಪ್ರಾಣಿಯ ಜೊತೆಗಿನ ಸಿಂಬಯೋಸಿಸ್ಸಿನ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಹನಿ ಗೈಡ್ ಹಕ್ಕಿಗೆ ಜೇನುತುಪ್ಪ ಮತ್ತು ರಸವತ್ತಾದ ಜೇನುಮೇಣವೆಂದರೆ ಎಲ್ಲಿಲ್ಲದ ಆಸೆ. ಜೇನು ಹುಳುಗಳು ರಹಸ್ಯವಾಗಿ ಸಂದಿಗೊಂದಿಗಳಲ್ಲಿ ಕಟ್ಟಿರುವ ಜೇನುಗೂಡುಗಳನ್ನು ಹುಡುಕುವುದರಲ್ಲೂ ಅದು ನಿಸ್ಸೀಮ. ಆದರೆ ಪಾಪ, ಹನಿ ಗೈಡ್ ನೇರವಾಗಿ ತಾನೇ ಜೇನುಗೂಡಿನಿಂದ ಜೇನು ತೆಗೆಯುವ ಸಾಮರ್ಥ್ಯ ಹೊಂದಿಲ್ಲ. ಆದರೆ ಆ ಜಾಣಪಕ್ಷಿಗೆ, ಇನ್ನೊಂದು ವಿಶೇಷವಾದ ಸಾಮರ್ಥ್ಯವೇನೋ ಚೆನ್ನಾಗಿಯೇ ಇದೆ. ಹನಿ ಗೈಡ್, ಜೇನುಗೂಡಿನಿಂದ ನೇರವಾಗಿ ಜೇನುತೆಗೆಯುವ ಸಾಮರ್ಥ್ಯವುಳ್ಳ, ನೋಡಲು ಸ್ವಲ್ಪ ಮುಂಗುಸಿಯಂತೆ ಕಾಣುವ ಹನಿ ಬ್ಯಾಡ್ಜರ್ರನ್ನು ಸುಲಭವಾಗಿ ಗುರುತಿಸುತ್ತದೆ. ಹಾಗೆ ಗುರುತಿಸಿದ ಮೇಲೆ, ಅದು ಹನಿ ಬ್ಯಾಡ್ಜರನ್ನು ಪೀಡಿಸಿ, ಅದಕ್ಕೆ ಮಾರ್ಗದರ್ಶನ ಮಾಡಿ, ಜೇನುಗೂಡಿರುವಲ್ಲಿಗೆ ಕರೆದುಕೊಂಡು ಹೋಗುತ್ತದೆ. ಹಾಗೆ ಅದು ಹನಿ ಬ್ಯಾಡ್ಜರಿಗೆ ಜೇನುಗೂಡನ್ನು ತೋರಿದ ತಕ್ಷಣ, ಹನಿ ಬ್ಯಾಡ್ಜರ್, ಜೇನುಗೂಡಿನಿಂದ ಜೇನು ತೆಗೆದು ತನ್ನ ಪಾಲನ್ನು ಸವಿಯುತ್ತದೆ. ನಂತರ, ನೈತಿಕ ಮೌಲ್ಯಗಳನ್ನು ಗೌರವಿಸುವ ಪ್ರಾಮಾಣಿಕ ಪಾಲುದಾರನಾದ ಹನಿ ಬ್ಯಾಡ್ಜರ್, ತನ್ನನ್ನು ಜೇನುಗೂಡಿಗೆ ಕರೆತಂದ ಹನಿಗೈಡಿಗೆಂದು, ಅದರ ನ್ಯಾಯಯುತವಾದ ಪಾಲನ್ನು ಸ್ವಯಂಪ್ರೇರಣೆಯಿಂದ ಅಲ್ಲಿಯೇ ಬಿಟ್ಟು ನಿರ್ಗಮಿಸುತ್ತದೆ.
ಚಿತ್ರದಲ್ಲಿರುವ, ದೃಷ್ಟಾಂತ ನಿದರ್ಶನದ ರೇಖಾಚಿತ್ರ ಹನಿಗೈಡ್ ಮತ್ತು ಹನಿಬ್ಯಾಡ್ಜರಿನ ಸಹಜೀವನದ ಪ್ರಕ್ರಿಯೆಯನ್ನು ಬಿಂಬಿಸುತ್ತದೆ. ಆದರೆ ಇಲ್ಲಿ ಚರ್ಚಿಸಲಾಗಿರುವ ಕೆಲವು ಸಹಜೀವನ ಕ್ರಿಯೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವ ಅವಿಶ್ವಾಸಿಗಳೂ ಇಲ್ಲದಿಲ್ಲ. ಅಂಥವರು ರೇಖಾ ಚಿತ್ರಗಳನ್ನೂ ಸ್ಥಿರ ಛಾಯಾ ಚಿತ್ರಗಳನ್ನೂ ಅನುಮಾನದಿಂದ ನೋಡುವುದು ಸಹಜ. ಆದರೆ ‘ಲೈಫ್ ಆಫ್ ಪೈ’ ಚಿತ್ರದಲ್ಲಿ ಬಳಸಿರುವಂಥಾ ಗ್ರಾಫಿಕ್ ತಂತ್ರಜ್ಞಾನವನ್ನೇನೂ ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಚಿತ್ರದಲ್ಲಿ ಬಳಸಲಾಗಿಲ್ಲ. ಆ ಚಿತ್ರದ ಹೆಚ್ಚಿನ ದೃಶ್ಯಗಳಂತೆ, ಈ ದೃಶ್ಯವೂ ಕೂಡ ವಾಸ್ತವ ಘಟನೆಯ ಚಿತ್ರೀಕರಣವಾಗಿದೆ. ಈ ಚಿತ್ರಣ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಯೂ ಟ್ಯೂಬ್ ನಲ್ಲಿ ಅದರ ವಿಡಿಯೋ ಲಭ್ಯವಿದೆ. ಕೊಂಡಿ ಕಲ್ಪಿಸಿ ಕೊಟ್ಟಿದ್ದೇನೆ. http://www.youtube.com/watch?v=D544WoTj5qI ಅನ್ನು ಕ್ಲಿಕ್ಕಿಸಿ ನೋಡಿ ಆನಂದಿಸಿ.
ತಜ್ಞರು ಭಿನ್ನಜೀವಿಗಳ ನಡುವಿನ ಸಹಜೀವನದ ಅಸಂಖ್ಯಾತ ಸಂಬಂಧಗಳನ್ನು ಜಲಚರಗಳಲ್ಲೂ ಗುರುತಿಸಿದ್ದಾರೆ. ಕೇವಲ ಪ್ರಾಣಿ ಸಂಕುಲದಲ್ಲಿ ಮಾತ್ರವಲ್ಲ, ಸಸ್ಯ ಸಂಕುಲದಲ್ಲೂ ಇದೇ ರೀತಿಯ ಸಹಜೀವನದ ಅನೇಕ ಅಚ್ಚರಿಗೊಳಿಸುವ ನಿದರ್ಶನಗಳಿಲ್ಲದಿಲ್ಲ. ಅಷ್ಟೇ ಅಲ್ಲದೆ, ಈ ವಿಸ್ಮಯ ಜಗತ್ತಿನಲ್ಲಿ ಪ್ರಾಣಿಗಳೂ ಮತ್ತು ಸಸ್ಯಗಳೂ ಸೇರಿ ಸಹಜೀವನ ನಡೆಸುವುದನ್ನೂ ಕಾಣಬಹುದು. ಹೀಗೇ ನಾವು ನೋಡುತ್ತಾ ಹೋದಂತೆಲ್ಲಾ ಈ ವಿರಾಟ ವಿಶ್ವದಲ್ಲಿ ವಿಚಿತ್ರ ವಿಸ್ಮಯಗಳ ಸರಮಾಲೆಗಳು ತೆರೆದುಕೊಳ್ಳುತ್ತಲೇ ಹೋಗುವುದು ವಿಶೇಷ. ನಿಜವಾಗಿಯೂ ಸೃಷ್ಟಿಯಲ್ಲಿನ ಇಷ್ಟೆಲ್ಲಾ ಜೀವ ವೈವಿಧ್ಯಗಳ ನಡುವೆ ಸಮನ್ವಿತ ಸೌಹಾರ್ದ ಸಹಜೀವನವನ್ನು ನೋಡುವುದು ಒಂದು ಅದ್ಭುತ ಅನುಭವ. ಆದರೆ ಇಡೀ ಸೃಷ್ಟಿಯಲ್ಲೇ ಅತ್ಯಂತ ಪರಿಷ್ಕೃತ ಜೀವಿಯೆನ್ನಬಹುದಾದ ಮನುಷ್ಯ ಮಾತ್ರ, ಹೆಚ್ಚಿನಂತೆ ನಿಸರ್ಗದ ಸೌಹಾರ್ದತೆಗೆ ಒಂದು ಅಪವಾದದಂತೆಯೇ ವರ್ತಿಸಿಬಿಡುವುದೊಂದು ಕಹಿ ಸತ್ಯ. ಪ್ರಕೃತಿಯು ಎಲ್ಲ ಜೀವಿಗಳ ಅಗತ್ಯಗಳನ್ನೂ ಧಾರಾಳಾವಾಗಿಯೇ ತೃಪ್ತಿಪಡಿಸುವಷ್ಟು ಶ್ರೀಮಂತವಾಗಿರುವುದು ನಿಜ. ಮಾನವನ ಹೊರತಾಗಿ ಸೃಷ್ಟಿಯಲ್ಲಿನ ಇತರ ಜೀವಿಗಳೆಲ್ಲವೂ ಕೇವಲ ತಮ್ಮ ಅಗತ್ಯಗಳನ್ನು ಮಾತ್ರ ಪೂರೈಸಿಕೊಂಡು ಜೀವಿಸುತ್ತವೆ ಎನ್ನುವುದೂ ನಿಜ. ಆದರೆ ದುರಾಸೆ ತುಂಬಿದ ಮನುಷ್ಯ ಮಾತ್ರ ಯಾವುದೇ ನೈತಿಕ ಮೌಲ್ಯಗಳಿಲ್ಲದೆ, ನಿಸರ್ಗವನ್ನು ಇನ್ನಿಲ್ಲದಂತೆ ಶೋಷಿಸುತ್ತಾ, ನಾಳೆಯೆಂಬುದೇ ಇಲ್ಲವೇನೋ ಎಂಬಂತೆ, ಇನ್ನೂ ಬರಲಿರುವ ಹತ್ತು ಹಲವು ಪೀಳಿಗೆಗಳಿಗಾಗುವ ಸಂಪನ್ಮೂಲಗಳನ್ನು ಇಂದೇ ದೋಚಿ ಪ್ರಪಂಚವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವುದೊಂದು ದುರಂತದ ಸಂಗತಿ. ಸದಾ ಸ್ವಾರ್ಥದಿಂದಲೇ ವರ್ತಿಸುವ ಮಾನವನು ಮೂಕಪ್ರಾಣಿಗಳಾದ ನಾಯಿಗಳಿಂದ ವಿಶ್ವಾಸಾರ್ಹತೆಯನ್ನೂ ಹನಿ ಬ್ಯಾಡ್ಜರ್ ನಿಂದ ನೈತಿಕತೆಯನ್ನೂ ಕಲಿಯದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಇಷ್ಟು ಅಗಾಧವಾದ ವಿಷಯವನ್ನು ಈ ಒಂದು ಪುಟ್ಟ ಪ್ರಬಂಧದ ಪರಿಧಿಯಲ್ಲಿ ನಿರ್ವಹಿಸುವುದು ಸಾಧ್ಯವಿಲ್ಲವೆನ್ನುವುದು ಮಾತ್ರವಲ್ಲ, ಅದು ವಿಷಯಾಂತರವೂ ಆದೀತು. ಹಾಗಾಗಿ, ಅದು ಒತ್ತಟ್ಟಿಗಿರಲಿ.
ನೀವು ಈಗಾಗಲೇ ಗಮನಿಸಿರುತ್ತೀರಿ. ಇದುವರೆಗೆ ಇಲ್ಲಿ ಚರ್ಚಿಸಿದ ಎಲ್ಲಾ ಪ್ರಸಂಗಗಳಲ್ಲೂ ವಿವಿಧಜೀವಿಗಳು, ಸಹಜೀವನದ ಪ್ರಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾಗಿಯೇ ಭಾಗವಹಿಸುತ್ತವೆಯಲ್ಲವೇ? ಆದರೆ ದೈವಸೃಷ್ಟಿಯಾದ ನಿಸರ್ಗದಲ್ಲಿ ನಮ್ಮ ತಿಳುವಳಿಕೆಯನ್ನು ಮೀರಿದಂಥಾ ಕಾರ್ಯಕಾರಣಳಿಂದ ಕೂಡಿದ ಹಲವಾರು ಸಂಬಂಧಗಳೂ ಇರಬಹುದಲ್ಲವೇ? ನಿಸರ್ಗದ ನಿಜವಾದ ಇಂಗಿತ, ಕೆಲವೊಮ್ಮೆ ನಮ್ಮ ಮೇಲ್ನೋಟದ ಗ್ರಹಿಕೆಗೆ ನಿಲುಕದಿರಬಹುದಲ್ಲವೇ? ಉದಾಹರಣೆಗೆ, ಕಾಡಿನ ಪರಿಸರದಲ್ಲಿ, ದಿನಾಲೂ ನಡೆಯುವ ಘಟನೆಯೊಂದನ್ನು ಪರಿಗಣಿಸೋಣ. ದಟ್ಟವಾದ ಕಾಡುಗಳಲ್ಲಿ ಸಿಂಹಗಳು ಜಿಂಕೆಗಳನ್ನು ಬೇಟೆಯಾಡುವುದು ನಮ್ಮೆಲ್ಲರಿಗೂ ತಿಳಿದ ಸಾಮಾನ್ಯ ಸಂಗತಿಯೇ ಆಗಿದೆ. ನಾವೇನಾದರೂ, ‘ಸಿಂಹವು ಜಿಂಕೆಯ ಶತ್ರುವೋ ಮಿತ್ರನೋ?’ ಎಂಬ ವಿಷಯವಾಗಿ ಅಭಿಪ್ರಾಯಮತ ಸಂಗ್ರಹಿಸಿದಲ್ಲಿ, ಅನುಮಾನವಿಲ್ಲದೆ, ಹೆಚ್ಚಿನವರು ಸಿಂಹವು ಜಿಂಕೆಯ ಶತ್ರುವೆಂಬ ಅಭಿಮತವನ್ನೇ ವ್ಯಕ್ತಪಡಿಸುತ್ತಾರಲ್ಲವೇ? ಆದರೆ, ನಾನು ಎಲ್ಲೋ ಕೇಳಿದಂತಹ ಬಹಳ ಸ್ವಾರಸ್ಯಕರ, ತರ್ಕಬದ್ಧ ವ್ಯಾಖ್ಯೆಯೊಂದು ಹೇಗೆ ಜನಪ್ರಿಯ ಅಭಿಮತವನ್ನು ಹುಸಿಗೊಳಿಸುವುದೆಂದು ಗಮನಿಸೋಣ.
ಕಾನನದ ಕಾನೂನಿನಲ್ಲಿ ಉಳಿವಿಗಾಗಿ ಸತತ ಹೋರಾಟ ಅನಿವಾರ್ಯ. ಕಾಡಿನಲ್ಲಿ ಬದುಕಿ ಉಳಿಯಬೇಕಾದರೆ ಸಿಂಹ, ಕನಿಷ್ಟ ಅತ್ಯಂತ ನಿಧಾನವಾಗಿ ಓಡುವ ಜಿಂಕೆಗಿಂತ ವೇಗವಾಗಿ ಓಡಲೇಬೇಕು. ಇಲ್ಲವಾದಲ್ಲಿ ಅದಕ್ಕೆ ಬೇಟೆಯೇ ಸಿಗದೆ ಉಪವಾಸ ಸಾಯಬೇಕಾದೀತಲ್ಲವೇ? ಅದೇ ರೀತಿ ಜಿಂಕೆ ಬದುಕುಳಿಯಲು ಕನಿಷ್ಟ, ಅತ್ಯಂತ ವೇಗವಾಗಿ ಓಡುವ ಸಿಂಹಕ್ಕಿಂತ ವೇಗವಾಗಿ ಓಡಲೇಬೇಕು. ಇಲ್ಲವಾದಲ್ಲಿ ಅದು ಸಿಂಹದ ಬೇಟೆಯಾಗಿ ಅದಕ್ಕೆ ಆಹಾರವಾಗಬೇಕಾದೀತಲ್ಲವೇ? ಸಹಜವಾಗಿಯೇ, ಸಣ್ಣ ಪುಟ್ಟ ಮರಿಜಿಂಕೆಗಳು ತುಂಬಾ ವೇಗವಾಗಿ ಓಡಲಾರವು. ಆದರೆ ಸಿಂಹವು ಅಷ್ಟೆಲ್ಲಾ ಕಷ್ಟಪಟ್ಟು ಕೇವಲ ಒಂದು ಪುಟ್ಟಮರಿ ಜಿಂಕೆಯನ್ನು ಬೇಟೆಯಾಡಿದರೆ , ಆ ಪುಟ್ಟ ಬೇಟೆಯಿಂದ ಕಾಡಿನರಾಜನ ದೊಡ್ಡ ಹೊಟ್ಟೆ ತುಂಬೀತೆ? ಹಾಗಾಗಿ, ಸಣ್ಣ ಸಣ್ಣ ಜಿಂಕೆಮರಿಗಳತ್ತ ಮೃಗರಾಜನು ಕಣ್ಣೆತ್ತಿಯೂ ನೋಡುವುದಿಲ್ಲವಂತೆ. ಅಂದಮೇಲೆ, ಒಂದು ಜಿಂಕೆಯ ಹಿಂಡಿನಲ್ಲಿ, ಮರಿಗಳನ್ನು ಹೊರತುಪಡಿಸಿ, ಯಾವ ಜಿಂಕೆ ಮತ್ತೆಲ್ಲಾ ಜಿಂಕೆಗಳಿಗಿಂತ ನಿಧಾನವಾಗಿ ಓಡೀತು? ಹಿಂಡಿನಲ್ಲಿ ಮತ್ತೆಲ್ಲಾ ಜಿಂಕೆಗಳಿಗಿಂತ ನಿಧಾನವಾಗಿ ಓಡುವ ಜಿಂಕೆಯು ಸಿಂಹದ ಆಹಾರವಾಗಬೇಕಾದ್ದರಿಂದ ಅವು ಜೀವಭಯದಿಂದ ತಮ್ಮೆಲ್ಲಾ ಶಕ್ತಿಯನ್ನೂ ಬಳಸಿ ಓಡಿಯೇ ಓಡುತ್ತವೆ. ಇಷ್ಟಾದರೂ, ಹಿಂಡಿನಲ್ಲಿ ವೇಗವಾಗಿ ಓಡಲಾರದೇ ಹಿಂದುಳಿಯುವ ಜಿಂಕೆಗೇನಾದರೂ ಸಮಸ್ಯೆ ಇರಲೇ ಬೇಕಲ್ಲವೇ? ನಿಜ, ಹಿಂಡಿನ ರೋಗಿಷ್ಟ, ವಯೋವೃದ್ಧ ಜಿಂಕೆಗಳು ಸಹಜವಾಗಿಯೇ ಇತರ ಆರೋಗ್ಯವಂತ ಜಿಂಕೆಗಳಷ್ಟು ವೇಗವಾಗಿ ಓಡಲಾರದೇ ಅನಿವಾರ್ಯವಾಗಿ ಸಿಂಹದ ಬೇಟೆಯಾಗಿ ಬಿಡುತ್ತವೆ. ಆದರೆ, ರೋಗಿಷ್ಟ ಜಿಂಕೆಯ ಸಾವಿನಿಂದ, ಅದರ ರೋಗಗಳು ಸಾಂಕ್ರಾಮಿಕವಾಗಿ ಹಿಂಡಿನ ಇತರ ಸದಸ್ಯರಿಗೆ ಹರಡುವ ಸಾಧ್ಯತೆಗಳು ಇಲ್ಲವಾಗಿ ಹಿಂಡಿನ ಒಟ್ಟಾರೆ ಆರೋಗ್ಯ, ಆಯುಷ್ಯಗಳು ಹೆಚ್ಚಲು ಸಹಾಯವಾಗುವುದು. ಈ ಪರಿಸ್ಥಿತಿಗೆ ಕಾರಣವಾದ ಸಿಂಹ ನಿಜವಾಗಿಯೂ ಜಿಂಕೆಯ ಮಿತ್ರನಲ್ಲವೇ? ಮೊದಲು ನಾವೆಣಿಸಿದಂತೆ ಶತ್ರು ಹೇಗಾದೀತು?
ಈ ರೀತಿ ನೋಡಿದಾಗ, ಕೆಲವೊಮ್ಮೆ ನಮಗೆ ಮೇಲ್ನೋಟಕ್ಕೆ ಕಾಣುವ ಸತ್ಯಗಳು ಸತ್ಯವಲ್ಲದಿರಬಹುದೆಂದು ಅನಿಸದೇ ಇರದು, ಅಲ್ಲವೇ? ಈ ಮೇಲಿನ ದೃಷ್ಟಾಂತದ ಸತ್ಯಾಸತ್ಯತೆಯನ್ನೇನೂ ವೈಜ್ಞಾನಿಕವಾಗಿ ನಿರೂಪಿಸಲಾಗಿಲ್ಲ. ವೈಜ್ಞಾನಿಕ ಪುರಾವೆಗಳ ಕೊರತೆಯ ಹಿನ್ನಲೆಯಲ್ಲಿ, ಕೇವಲ ಕಲ್ಪನೆ ಹಾಗೂ ತರ್ಕವನ್ನಾಧರಿಸಿದ ಯಾವುದೇ ವಾದಸರಣಿಯು ವಿಜ್ಞಾನ ಲೋಕದ ಅಂಗೀಕಾರ ಪಡೆಯುವುದೂ ಇಲ್ಲ. ಆದರೆ ಪ್ರಕೃತಿಯ ಪವಾಡಗಳನ್ನು ಬಲ್ಲವರಾರು? ಈ ತರ್ಕಬದ್ಧ ವ್ಯಾಖ್ಯಾನವು ವಾಸ್ತವದಲ್ಲಿ ವೈಜ್ಞಾನಿಕ ಸತ್ಯವಲ್ಲದಿದ್ದರೂ ಅದರ ಭಾವಾರ್ಥವು ಸತ್ಯವೇ ಆಗಿದೆಯಲ್ಲವೇ? ಕೆಲವು ಭಿನ್ನಜೀವಿಗಳು ಪ್ರಜ್ಞಾಪೂರ್ವಕವಾಗಿ ಪರಸ್ಪರ ಸಹಾಯ ಮಾಡಿಕೊಂಡರೆ, ಇನ್ನು ಕೆಲವು ಅವಕ್ಕೇ ತಿಳಿಯದೇ ಪರಸ್ಪರ ಸಹಾಯ ಮಾಡುತ್ತಲೂ ಇರಬಹುದೇನೋ? ಇಲ್ಲವೆಂದು ಹೇಳಲಾಗುವುದಿಲ್ಲವಲ್ಲ. ಪ್ರಾಣಿ ಸಂಕುಲದಲ್ಲಿ, ಭಕ್ಷಕ ಮತ್ತು ಬೇಟೆಯ ನಡುವೆ ನಡೆಯುವ ವ್ಯವಹಾರಗಳ ಪ್ರಭಾವ ಇಡೀ ಪರಿಸರದ ಮೇಲಾಗುತ್ತದೆ. ಯಾವುದೇ ಜೀವಿಗಳ ಅನಿಯಂತ್ರಿತ ಅಭಿವೃದ್ಧಿ, ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆನ್ನುವುದನ್ನು ನಾವು ಅನುಭವದಿಂದ ತಿಳಿದಿದ್ದೇವೆ. ತನ್ನ ಹೊಟ್ಟೆಪಾಡಿಗಾಗಿ ಬೇಟೆಯಾಡುವ ಭಕ್ಷಕ ಪ್ರಾಣಿಯಾದ ಸಿಂಹ, ತಾನು ಬೇಟೆಯಾಡುವ ಜಿಂಕೆ ಮತ್ತು ಇತರ ಪ್ರಾಣಿಗಳನ್ನು ಕೊಲ್ಲುವ ಮೂಲಕ ಅವುಗಳ ಸಂಖ್ಯೆಯನ್ನು ನಿಗ್ರಹಿಸುತ್ತವೆ. ತತ್ಪರಿಣಾಮ, ಹಾಗೆ ಸಿಂಹದ ಬೇಟೆಯಾದ ಪ್ರಾಣಿಗಳ ಆಹಾರವಾದ ಸಸ್ಯ ಸಂಕುಲದ ಸಂರಕ್ಷಣೆಗೂ ಸಹಾಯ ಮಾಡುತ್ತದೆ. ತನ್ಮೂಲಕ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿಯೂ ನೆರವಾಗುತ್ತದೆ.
ಒಟ್ಟಿನಲ್ಲಿ, ಇನ್ನೂ ಮಾನವನ ಸೀಮಿತ ಅರಿವೆಂಬುದು ನಿಸರ್ಗದ ಗಾರುಡಿಯ ಒಳ ಮರ್ಮಗಳನ್ನರಿಯುವಷ್ಟು ವಿಸ್ತರಿಸಿಲ್ಲ. ಅಪಾರ ಜೀವ ವೈವಿಧ್ಯತೆ ಇರುವ ಈ ವಿಶಾಲ ಜಗತ್ತಿನಲ್ಲಿ, ಎಲ್ಲ ಜೀವಿಗಳೂ, ಒಂದೇ ಬೃಹತ್ ಸಂಗೀತವಾದ್ಯದ ಸಣ್ಣ ಸಣ್ಣ ಅಂಗಾಂಗಳೆಂಬಂತೆ ಮಾಂತ್ರಿಕವಾಗಿ ಐಕ್ಯಗೊಂಡು ಪ್ರಕೃತಿಯು ಹೊರ ಹೊಮ್ಮಿಸುವ ಮಂಜುಳ ಮಾಧುರ್ಯದಲ್ಲಿ ಭಾಗವಹಿಸುವುದೊಂದು ವಿಸ್ಮಯವಲ್ಲವೇ? ಹಾಗೆ ಈ ವಿರಾಟ ವಿಶ್ವದಲ್ಲಿ ನಮಗೆ ತಿಳಿವ ವಿಸ್ಮಯಗಳೆಷ್ಟೋ, ತಿಳಿಯದ ವಿಸ್ಮಯಗಳೆಷ್ಟೋ? ತಿಳಿಯದಾಗಿ ನಿಜಕ್ಕೂ ವಿಸ್ಮಯವಾಗುತ್ತಿದೆ!
*****
As usual very informative and the video link is amazing… Once again a good job…
Kharenu nimma lekhana odi Vismayavagide… Prani sankulagala naduve adenenu accharigalive… odi khushi aaytu… hige baritiri…. ishta aaytu..
Thank you madam.
Thanks ram, hope every reader bothers to explore the wonderful u-tube link, 🙂
ಲೇಖನ ತುಂಬಾ ಮಾಹಿತಿಪೂರ್ಣವಾಗಿದೆ! ನಿಮ್ಮ ಬರವಣಿಗೆಯ ಶೈಲಿಯೂ ಇಷ್ಟವಾಯ್ತು.
Thanks ಗುರೂ ಅವರೆ.
Thumba chennagide! Hige Baritha eri….