ವಿಸ್ಮಯದ ಮಾಯಾಲೋಕ!: ಗುರುಪ್ರಸಾದ ಕುರ್ತಕೋಟಿ

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ ಅವಕಾಶ ಆ ಔಟಿಂಗಿನ ನೆಪದಲ್ಲಿ ಲಭ್ಯವಾಗುತ್ತದೆ. ಅದು ಕಂಠ ಪೂರ್ತಿ ಮದ್ಯಪಾನ ಮಾಡುವ ಒಂದು ಸುವರ್ಣ(?) ಅವಕಾಶ. ಒಟ್ಟಿನಲ್ಲಿ ಎಲ್ಲಾ ಆತ್ಮಗಳ ಸಂತೃಪ್ತಿಗಾಗಿಯೇ ಕಂಪನಿಗಳು ಈ ತರಹದ ಔಟಿಂಗುಗಳನ್ನು ಆಗಾಗ ನಡೆಸುತ್ತಾರೆ. ಅದರ  ಬಗ್ಗೆ ವಿವರವಾಗಿ ಮುಂದೆ ಯಾವಾಗಲಾದರೂ ಬರೆಯುವ ಮನಸ್ಸಿದೆ. 

ಮೊನ್ನೆ ೧೯ ನೇ ದಿನಾಂಕಕ್ಕೆ ಇಂಥದೊಂದು ಔಟಿಂಗಿಗೆ ನಾನು ಹೋಗುವದಿತ್ತು. ನನಗೊಳ್ಳೆಯ ಧರ್ಮ ಸಂಕಟ! ಅದಕ್ಕೆ ಕಾರಣವೆಂದರೆ, ಅದೇ ದಿನ ಸಂಜೆ ನಮ್ಮ ನಾಟಕ ತಂಡವಾದ 'ರಂಗ ವಿಸ್ಮಯ' ದ ನಾಟಕವೊಂದರ ಮೊಟ್ಟ ಮೊದಲ ಪ್ರದರ್ಶನವಿತ್ತು. ನನಗೆ ಔಟಿಂಗು ತಪ್ಪಿಸಲಾಗದು, ನಾಟಕವನ್ನಂತೂ ಬಿಡುವ ಚಾನ್ಸೇ ಇರಲಿಲ್ಲಾ. ಇದು ಬೆಂಗಳೂರಿನ ಉತ್ತರ ದಿಕ್ಕಿಗಿದ್ದರೆ, ನಾಟಕದ ಪ್ರದರ್ಶನವಿದ್ದದ್ದು ದಕ್ಷಿಣಕ್ಕೆ! ಆದರೆ ಇದು ಬೆಳಿಗ್ಗೆ, ಅದು ಸಂಜೆ ಇದ್ದದ್ದು ಒಂದು ರೀತಿಯಲ್ಲಿ ಅನುಕೂಲ ವಾಗಿತ್ತು. ಔಟಿಂಗಿನಲ್ಲಿ ದೈಹಿಕವಾಗಿ ಹಾಜರಾಗಿದ್ದೆನಾದರೂ ನನ್ನ ಗಮನವೆಲ್ಲಾ ಸಂಜೆ ನಡೆಯುವ ನಾಟಕದ ಕಡೆಗೇ  ಇತ್ತು. ಇಲ್ಲಿ ಮದ್ಯಾಹ್ನದ ಊಟ ಮುಗಿಸಿ, ಅಂತೂ ಇಂತೂ ಎಲ್ಲರ ಕಣ್ಣು ತಪ್ಪಿಸಿಕೊಂಡು ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಆಗಮಿಸಿದಾಗ ಸಂಜೆ ೫:೩೦.

ಅದು ಶ್ರೀ. ಪೂರ್ಣಚಂದ್ರ ತೇಜಸ್ವಿ ಬರೆದ ಮಾಯಾಲೋಕ ಕೃತಿಯ ನಾಟಕ ರೂಪ. ಅದಕ್ಕೆ ಆ ರೂಪ ಕೊಟ್ಟು ನಿರ್ದೇಶಿಸಿದವರು 'ರಂಗ ವಿಸ್ಮಯ' ದ ರುವಾರಿ ಹಾಗೂ ಸತತ ಮೂರು ದಶಕಗಳಿಂದ ವಿವಿಧ ರೀತಿಯಲ್ಲಿ ರಂಗ ಸೇವೆ ಮಾಡಿಕೊಂಡಿರುವ ಅ. ನಾ. ರಾವ್ ಜಾಧವ್. ಅವರು ನನ್ನ ಗುರುಗಳು. ನಾನು  ಕಳೆದ ಕೆಲವು ತಿಂಗಳಿನಿಂದ ರಂಗ ವಿಸ್ಮಯದಲ್ಲಿ ರಂಗ ತರಬೇತಿ ಪಡೆಯುತ್ತಿದ್ದೇನೆ. ಪ್ರತಿ ಭಾನುವಾರ ಅಲ್ಲಿ ನಾನು ಭಾಗವಹಿಸುವ ನಾಲ್ಕು ಗಂಟೆಗಳು ಕಳೆದು ಹೋದದ್ದೇ ಗೊತ್ತಾಗುವುದಿಲ್ಲ.                 

ಅವರು ಕೊಡುವ ತರಬೇತಿ ವಿಶಿಷ್ಠವಾದದ್ದು. ಅಲ್ಲಿ ಅವರು ಮೊಟ್ಟ ಮೊದಲು ಕಲಿಸೋದು ಕನ್ನಡ ಓದುವುದನ್ನ! ಅದೂ ಗಟ್ಟಿಯಾಗಿ, ಸ್ಫುಟವಾಗಿ ಓದಬೇಕು. ಅಲ್ಲಿಯವರೆಗೆ ಅವರು ಬಿಡುವುದಿಲ್ಲ! ಜಾಧವ್ ಅವರು ಹೇಳುವಂತೆ, ನಾವು ಮನದೊಳಗೆ ಓದಿಕೊಳ್ಳುವುದನ್ನು ಎಷ್ಟು ಬಳಕೆ ಮಾಡಿಕೊಂಡಿದ್ದೇವೆಂದರೆ, ನಮ್ಮ ನಾಲಿಗೆಗೆ ಕೆಲವು ಅಕ್ಷರಗಳ ಉಚ್ಚಾರದ ರೂಢಿಯೇ ತಪ್ಪಿ ಹೋಗಿರುತ್ತದೆ. ಅದಕ್ಕೆ, ಸರಿಯಾದ ಸಮಯದಲ್ಲದು ಕೈ ಕೊಡುತ್ತದೆ! ಅವರು ಹೇಳೋದು ಸರಿಯೆ. ಇದರ ಜೊತೆಗೆ ಪೇಪರ್ ಓದಿಸುತ್ತಾರೆ, ಅಲ್ಲಿ ಬಂದವರೆಲ್ಲರೂ ಒಂದೊಂದು ಹಾಡು ಹೇಳಲೇಬೇಕು. ಈ ಎಲ್ಲ ವಿಧಾನಗಳಿಂದ ನಮ್ಮಲ್ಲಿನ ನಾಚಿಕೆ ಹೆದರಿ ಓಡಿ ಹೋಗುತ್ತೆ! ಇದೆಲ್ಲ ಆದ ಮೇಲೆ ಸಂಭಾಷಣೆಯನ್ನು ವಿವಿಧ ಹಾವಭಾವಗಳೊಂದಿಗೆ ಹೇಳುವದನ್ನು ಕಲಿಸಿಕೊಡುತ್ತಾರೆ. ತುಂಬಾ ಜನರು ಅವರಿಂದ ತರಬೇತಿ ಪಡೆದು ಬರೀ ನಾಟಕದಲ್ಲಷ್ಟೇ ಅಲ್ಲ, ಶಾಲೆಗಳಲ್ಲಿ ಹಾಗೂ ವೃತ್ತಿಯಲ್ಲಿ ಒಳ್ಳೆ ಪ್ರಗತಿ ಹೊಂದಿದ್ದಾರೆ. ಅಲ್ಲಿ ಬರುವವರು ವಿವಿಧ ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ. ಅಲ್ಲಿ ಯಾವುದೇ ಭೇದವಿಲ್ಲ. ಎಲ್ಲರೂ ಕಲಾವಿದರೇ! 

ಶ್ರೀಯುತ. ಜಾಧವ್ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದರೆ, ಅವರು ತುಂಬಾ ಓದಿಕೊಂಡಿದ್ದಾರೆ. ತೇಜಸ್ವಿಯವರ ನಿಕಟವರ್ತಿಗಳು, ಹಾಗೂ ಅವರ ಹಲವು ಕೃತಿಗಳಿಗೆ ನಾಟಕದ ರೂಪ ಕೊಟ್ಟು ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ್ದಾರೆ. ಅವರ ಇನ್ನೊಂದು ವಿಶೇಷತೆಯೆಂದರೆ, ಅವರ ನಾಟಕಗಳಲ್ಲೆಲ್ಲ ಅವರ ವಿದ್ಯಾರ್ಥಿಗಳೇ ಇರುತ್ತಾರೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರೇ! ಅವರಿಗೆಲ್ಲ ಅದೊಂದು ವಿಬಿನ್ನ ಅನುಭವ ಹಾಗೂ ಕಲಿಕೆ. 

ಅವತ್ತಿನ ನಾಟಕ  'ಮಾಯಾ ಲೋಕ' ದಲ್ಲಿ ಗುರುಗಳು ನನಗೂ ಒಂದು ಪಾತ್ರ ವಹಿಸಿದ್ದರು. ಆದರೆ ಪ್ರತಿ ದಿನ ಸಂಜೆ ೭ ಗಂಟೆಗೆ ರಿಹರ್ಸಲ್ ಇರುತ್ತಿತ್ತು. ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಕಂಪನಿಯಲ್ಲಿ ನಮ್ಮ ಅಸಲಿ ನಾಟಕ ಶುರುವಾಗುವುದೇ ಸಂಜೆಗೆ! ಅದೇನೆ ಇರಲಿ, ನಾನು ಅದರಲ್ಲಿಲ್ಲದಿದ್ದರೂ ನಮ್ಮ ತಂಡದ ನಾಟಕ ನೋಡುವ ಸೌಭಾಗ್ಯವನ್ನಾದರೂ ತಪ್ಪಿಸಿಕೊಳ್ಳದೆ ಅಲ್ಲಿಗೆ ಹೋಗಿದ್ದೆ.    

ಆ ನಾಟಕದ ವಿಶೇಷವೆಂದರೆ, ಅದರಲ್ಲಿದ್ದ ಒಟ್ಟು ಪಾತ್ರಗಳು ೪೦! ಹದಿನಾರು ದೃಶ್ಯಗಳು. ಇಷ್ಟೆಲ್ಲ ಪಾತ್ರಗಳ ಜೊತೆಗೆ, ಹೆಚ್ಚು ಕಡಿಮೆ  ಮುಕ್ಕಾಲು ಪ್ರತಿಶತ ಜನ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಿಸುವುದೆಂದರೆ ಅದೊಂದು ಸಾಹಸವೇ ಸರಿ! ಅದೂ ಅಲ್ಲದೆ ಅವತ್ತು ಡಾ. ಚಂದ್ರಶೇಖರ್ ಕಂಬಾರ್ ಹಾಗೂ ಡಾ. ಬಿ.ವಿ. ರಾಜಾರಾಮ್ ವಿಶೇಷ ಅಹ್ವಾನಿತರು. ಸಭಾಂಗಣವಂತೂ  ಕಿಕ್ಕಿರಿದು ತುಂಬಿತ್ತು. ನಾಟಕವಂತೂ ಅದ್ಭುತವಾಗಿ ಮೂಡಿ ಬಂತು. 'ವೇಷಧಾರಿಗಳ ಅಸಲಿ ನಾಟಕ' ಅನ್ನುವ ಟ್ಯಾಗ್ ನೊಂದಿಗೆ ಸುಂದರ ನಿರೂಪಣೆ, ತೆಳುವಾದ ಹಾಸ್ಯ, ವ್ಯಂಗ್ಯಗಳಿಂದ ಒಳ್ಳೆ ಮನರಂಜನೆ ಕೊಡುವಂತಹ ನಾಟಕವದು. ಹಿನ್ನೆಲೆ ಗಾಯನವಂತೂ ಮನೆಗೆ ಹೋಗುವ ತನಕವೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅವರ ಹಾಗೂ ತಂಡದ ಪ್ರಯತ್ನ ಅದ್ಭುತ ಯಶಸ್ಸು ಕಂಡಿತು! ಪ್ರೇಕ್ಷಕರ ನಗು ಹಾಗೂ ಚಪ್ಪಾಳೆಗಳಲ್ಲೇ ಅದು ಸ್ಪಷ್ಟವಾಗಿತ್ತು.

ಆ ಯಶಸ್ವಿ ಪ್ರದರ್ಶನದ ಬಳಿಕ ಆ ತಂಡದಲ್ಲಿ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಭಾಗವಹಿಸಿದ ತಂಡದ ಸದಸ್ಯರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಏನೋ ಸಾಧಿಸಿದ ತೃಪ್ತಿ ಇದೆಯಲ್ಲ, ಅದನ್ನು ನೋಡಿ ಖುಷಿಯಾಯ್ತು. ಆ ಖುಷಿ ನಮ್ಮ ಕಾರ್ಪೋರೇಟ್ ಔಟಿಂಗಿನಲ್ಲಿ ದೊರೆಯುವ ಖುಷಿಗಿಂತ ಮೇಲು ಅನಿಸಿತು. ಇದು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನಸ್ಸಿಗೆ ಮುದ ನೀಡುತ್ತ ಶಾಶ್ವತವಾಗಿರುತ್ತದೆ. ಅದೇ, ಔಟಿಂಗು ಆ ಮಟ್ಟಿಗಿನ ತಾತ್ಕಾಲಿಕ, ಕ್ಷಣಿಕ ಸುಖವೆನಿಸಿ, ಮತ್ತೆ ಸೋಮವಾರ ಕೆಲಸಕ್ಕೆ ಹೋಗುವ ಚಿಂತೆಯೊಂದಿಗೆ ಮುಗಿಯುತ್ತೆ. ಅದರ ಬದಲು ಔಟಿಂಗುಗಳು ಕೂಡ ಇದೇ ತರಹ ಸೃಜನ ಶೀಲವಾಗಿದ್ದರೆ ಅದಕ್ಕೊಂದು ಸಾರ್ಥಕತೆ ಇರುತ್ತದಲ್ಲವೆ? ಇದು ಅವತ್ತು ನನ್ನ ಮನದಲ್ಲಿ ಮೂಡಿದ ಪ್ರಶ್ನೆ.   

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
Vitthal Kulkarni
Vitthal Kulkarni
10 years ago

ನಿಮ್ಮಂತ ಸೃಜನ ಶೀಲ ಮ್ಯಾನೇಜರಗಳು ಔಟಿಂಗುಗಳನ್ನ ಮಜವಾಗಿಸಬೊಹುದು…ಪ್ರಯತ್ನಿಸಿ ಔಟಿಂಗಗಳಲ್ಲಿ ಸೃಜನ ಶೀಲತೆ ನೀವೆ ತನ್ನಿ ಗುರು… 

Guruprasad Kurtkoti
10 years ago

ವಿಟ್ಠಲ, ಖಂಡಿತವಾಗಿ ಪ್ರಯತ್ನಿಸುವೆ! ಒಂದು ಸಲ ಮಾಡಿದ್ದೆವು ಕೂಡ. ಆದರೆ, ಇದು ಸಾಧ್ಯವಾಗಬೇಕಾದರೆ ನಮ್ಮ ಬಾಸ್ ಕೂಡ ಸೃಜನಶೀಲ ಇರಬೇಕು 🙂

Akhilesh Chipli
Akhilesh Chipli
10 years ago

ಖಂಡಿತಾ ನಿಜವಾದ ಮಾತು. ಕಾರ್ಪೋರೇಟ್
ಕಂಪನಿಗಳೇ ಔಟಿಂಗ್ ಗಳ ಬದಲು
ಈ ತರಹದ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸಿ
ಕಲಾವಿದರನ್ನು ಪ್ರೋತ್ಸಾಹಿಸಬಹುದು ಎಂಬುದೊಂದು
ನನ್ನ ದಡ್ಡ ಆಲೋಚನೆ.

Guruprasad Kurtkoti
10 years ago

ಅಖಿಲೇಶ್, ನಿಮ್ಮ ಅಲೋಚನೆ ಸರಿಯಾಗೇ ಇದೆ. ಧನ್ಯವಾದಗಳು!

anita
anita
10 years ago

"ಸ್ತರಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತಾರೆ"    should be replaced with

"ಸ್ಥಳಗಳಿಂದ ಬಂದವರೂ, ಬೇರೆ ಬೇರೆ ವಯೋಮಾನದವರೂ ಇರುತ್ತಾರೆ"

ಇದು ಒ೦ದು ಚಿಕ್ಕ ಸರಿಪದಕೆ ಬಿಟ್ಟರೆ,  ಎಲ್ಲ ಬರಹ ಮತ್ತು ವಿಷಯಗಳು ತು೦ಬ ಚೆನ್ನಾಗಿ ಮೂಡಿಬ೦ದಿದೆ

-ಅನಿತ

'ರಂಗ ವಿಸ್ಮಯ' ದ ವಿದ್ಯಾರ್ಥಿನಿ

 

ಗುರುಪ್ರಸಾದ ಕುರ್ತಕೋಟಿ
Reply to  anita

ಅನಿತಾ, ಅಭಿಮಾನದಿಂದ ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

ಅಂದ ಹಾಗೆ, 'ಸ್ತರ' ಪದಕ್ಕೆ 'ಪದರು' ಅನ್ನುವ ಅರ್ಥವಿದೆ. ಅದನ್ನು ಅದೇ ಅರ್ಥದಲ್ಲಿ ಬಳಸಿದ್ದು. ಸಾಮಾಜಿಕವಾಗಿ ಅಥವ ಅರ್ಥಿಕವಾಗಿ ವಿವಿಧ ಸ್ತರಗಳ ಜನರು ಅಲ್ಲಿ ಇದ್ದರೂ, ಕಲಾವಿದರಲ್ಲಿ ಭೇಧಭಾವವಿಲ್ಲ ಅನ್ನುವ ಅನಿಸಿಕೆ ಅಲ್ಲಿ ವ್ಯಕ್ತವಾಗಿದೆ.

ಸಿದ್ದರಾಮು ರಂಗವಿಸ್ಮಯ

ಪ್ರದರ್ಶನ ಮುಗಿದ ನಂತರ ಪ್ರೇಕ್ಷಕರು ಕಲಾವಿದರನ್ನು ಭೇಟಿ ಮಾಡಿ ಅಭಿಪ್ರಾಯ ತಿಳಿಸುವುದು ಸಹಜ, ಅದು ಖಂಡಿತ ಕಲಾವಿದರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಇನ್ನೂ ಹೆಚ್ಚಿನ ಸಂತೋಷ ಆಗುವುದು, ನಿಜ ಜೀವನದ ಆಗು ಹೋಗುಗಳಿಗೆ ತಾಳೆ ಹಾಕಿ ಹೇಳಿದಾಗ. ಈ ನಿಮ್ಮ ಅನಿಸಿಕೆಗಳಿಗಾಗಿ ನಮ್ಮ ತಂಡದ ವತಿಯಿಂದ ಧನ್ಯವಾದಗಳು.
ನೀವು ಪ್ರಸ್ತಾಪಿಸಿದ ಕಾರ್ಪೋರೇಟ್ ಔಟಿಂಗ್ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಸಂಪೂರ್ಣ ಒಪ್ಪುತ್ತೇನೆ.
ನಮ್ಮ ತಂಡದ ಬಗೆಗೆ ಅದರಲ್ಲೂ ಭಾಷೆಯ ಬಳಕೆಯ ಕುರಿತಾದ ನಮ್ಮ ನಿರ್ದೇಶಕರ ಅಭಿಪ್ರಾಯ ಪ್ರಸ್ತಾಪಿಸಿದ್ದೀರಿ – Brilliant minds ಗಮನಿಸಲೇಬೇಕು.
ನಾಟಕ ಮತ್ತು ಸನ್ನಿವೇಶದ ಕುರಿತು ಸೊಗಸಾಗಿ ಹೇಳಿದ್ದೀರಿ. ಪ್ರತಿದಿನ ಸಂಜೆ ಅಸಲಿ ನಾಟಕ ನಡೆಯುವ ಹೊತ್ತಿನಲ್ಲಿ, ಅದನ್ನೇ ಕುರಿತಾದ ನಕಲಿ ನಾಟಕದ ತಯಾರಿಯ ಕುರಿತಾದ ನಿಮ್ಮ ಮಾತುಗಳು ನಮ್ಮ Rehearsal ಬವಣೆಗಳನ್ನು ಪ್ರತಿನಿಧಿಸುತ್ತವೆ. ಮುಂದಿನ ಪ್ರದರ್ಶನಗಳಲ್ಲಿ ನಿಮ್ಮನ್ನು ಸಹ ಕಲಾವಿದರನ್ನಾಗಿ ನಿರೀಕ್ಷಿಸುತ್ತೇವೆ.
ಶೋ ಮುಗಿದ ಬಳಿಕ ತಡವಾಗಿದ್ದರೂ ಸಹ ನಮ್ಮ ಕಣ್ಣುಗಳ ಆನಂದವನ್ನು ನೋಡಿಕೊಂಡು ಹೋಗಿದ್ದೀರಿ. ಒಟ್ಟಾರೆ ಈ ನಿಮ್ಮ ಬರಹ ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.

Guruprasad Kurtkoti
10 years ago

ಸಿದ್ಧರಾಮು, ನಿಮ್ಮ ಸುಂದರ ಪ್ರತಿಕ್ರಿಯೆ ಓದಿ ಸಿಕ್ಕಾಪಟ್ಟೆ ಖುಷಿ ಆಯ್ತು! 🙂

amardeep.p.s.
amardeep.p.s.
10 years ago

ಒಹ್….ನೀವು ರಂಗಾಸಕ್ತರೂ ಹೌದು….. ಯಶಸ್ವಿಯಾಗಲಿ ನಿಮ್ಮ ಪಯಣ…. ಬರಹ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಕುಳಿತು ಹೇಳಿಕೊಂಡಂತಿದೆ…

Guruprasad Kurtkoti
10 years ago
Reply to  amardeep.p.s.

ಹೌದು ಅಮರ್! ಓದಿ, ಮೆಚ್ಚಿ, ಹಾರೈಸಿದ್ದಕ್ಕೆ ಧನ್ಯವಾದಗಳು!

ಆದರ್ಶ
ಆದರ್ಶ
10 years ago

ವಿವಿಧ ಆಸಕ್ತಿಗಳನ್ನು ತಲೆಯಲ್ಲಿ ತು೦ಬಿಕೊ೦ಡಿರುವವರು ನೀವು, ದಿನದಲ್ಲಿ ೨೪ ಘ೦ಟೆ ಸಾಕಾ? 🙂
ಮಾಯಾಲೋಕ ಪುಸ್ತಕ ಇನ್ನೂ ಬಿಡುವಾಗಿದ್ದಿಲ್ಲ, ಮೈಸೂರಿನಲ್ಲಿ ಶ್ರೀರಾಮ್ ( ಪೂಚ೦ತೇ ಅವರ ಆಪ್ತರು) ಅವರ ಪ್ರಿ೦ಟಿ೦ಗ್ ಪ್ರೆಸ್ ಗೆ ಹೋಗಿದ್ದೆ. 'ಮಾಯಾಲೋಕ'ದ ಗರಿಗರಿಯಾದ ಪುಸ್ತಕಗಳು ಆವಾಗ್ಲೆ ಪ್ರಿ೦ಟ್ ಆಗಿ ಸಾಲಾಗಿ ಜೋಡಿಸಲಾಗಿತ್ತು.ಪೂಚ೦ತೇ ಅವರ ಕಟ್ಟಾ ಅಭಿಮಾನಿಯಾದ ನನಗೆ, ಪುಸ್ತಕ ನೋಡುತ್ತಿದ್ದ೦ತೆ ಅದರ ಮೇಲೆ ಮೋಹ ಬಲವಾಯಿತು. ಶ್ರೀರಾಮ್ ಅವರಿಗೆ ಕೇಳಿಯೇ ಬಿಟ್ಟೆ, 'ಬಿಡುಗಡೆ' ಆಗದ ಪುಸ್ತಕ ಕೊಡುತ್ತಾರೋ ಇಲ್ಲವೋ, ಅದು ಬೇರೆ ಮಾತು. 

ಅವರು ನಸುನಗುತ್ತಾ, ನಿಮ್ಮ೦ತವರಿರೋದ್ರಿ೦ದಲೇ ನಮ್ಮ ಕನ್ನಡ ಸಿರಿವ೦ತವಾಗಿದೆ. ಈ ರೀತಿ ಓದಲು ಮನದಾಳದಿ೦ದ ಆಸೆ ಹುಟ್ಟಬೇಕು. ತೋಗೊಳ್ಳಿ.. ಅ೦ತ 'ಮಾಯಾಲೋಕ'ದ ಪ್ರತಿಯೊ೦ದನ್ನು ಕೈಯಲ್ಲಿಟ್ಟರು. 

ಓದುಗ ಪುಸ್ತಕವನ್ನು ಹುಡುಕಿಕೊ೦ಡು ಹೋದರೆ, ಪುಸ್ತಕ ಓದುಗನನ್ನು.

ಈ ವಿಸ್ಮಯದ ಮಾಯಾಲೋಕ, ರ೦ಗಭೂಮಿಗೆ ಅಳವಡಿಸಿಕೊ೦ಡು ನಾಟಕದ ರೂಪದಲ್ಲಿ ಬ೦ದಿದ್ದು, ಹೆಮ್ಮೆಯ ವಿಷಯ. ನಿಮ್ಮ ಮೇಲೆ ಹೊಟ್ಟೆ ಕಿಚ್ಚ್ಜಾಗ್ತಿದೆ, ನಿಮಗೆ ಇ೦ತಹ ಅಪರೂಪದ ನಾಟಕಗಳನ್ನು ನೋಡಲು ಅವಕಾಶ ಮತ್ತು ಆಸಕ್ತಿ ಇರುವದನ್ನು ಕ೦ಡು. 🙂

ಯುಟೂಬಲ್ಲಿ , ನಾಟಕದ ವಿಡಿಯೋ ಹಾಕಿದ್ರೆ ನೋಡಲು ಮರೆಯುವುದಿಲ್ಲ. 

ನಿಮ್ಮ ಬರವಣಿಗೆ, ಹೊಸ ಹೊಸ ವಿಚಾರಗಳನ್ನು ರಸವತ್ತಾಗಿ ನಮಗೆ ತಿಳಿಸುತ್ತದೆ. ಧನ್ಯವಾದಗಳು.

Guruprasad Kurtkoti
10 years ago

ಆದರ್ಶ, ನಿಮ್ಮ ಅನಿಸಿಕೆಗಳ ಓದಿ ಧನ್ಯನಾದೆ! ತುಂಬಾ ಖುಷಿಯಾಯ್ತು… ಅಂದ ಹಾಗೆ ಬೆಂಗಳೂರಿಗೆ ಆಗಾಗ ಬರುತ್ತಾ ಇದ್ದರೆ ನಿಮನ್ನೂ ಕರೆದೊಯ್ಯುವೆ. 🙂

ಶ್ರೀಧರ್. ಜಿ
ಶ್ರೀಧರ್. ಜಿ
10 years ago

ಐ .ಟಿ  ಕಂಪನಿಗಳು ಈ ರೀತಿ ಸೃಜನ ಶೀಲತೆ ಶಿಬಿರ ಗಳೊಂದಿಗೆ ಔಟಿಂಗ್ ಮಾಡಿ ಅತೃಪ್ತ ಆತ್ಮಗಳಲ್ಲಿ ಚೈತನ್ಯ ಮೂಡಿಸುವುದು ಸರಿ. ಆದರೆ ಜೀತದಾಳುಗಳಿಗೆ ಮನರಂಜನೆ ನೀಡುವ ಜಮೀನುದಾರಿಕೆ ತೋರಿಸುತ್ತಿದ್ದಾರೆ ದುರದೃಷ್ಟಕರ . ನಿಮ್ಮ ಲೇಖನ ದಲ್ಲಿ ಆ ಭಾವ ಇಲ್ಲಾ . ಹಾಗಾದರೆ ಇದೊಂದು ಪ್ರಶಂಸನೀಯ . 

ಗುರುಪ್ರಸಾದ ಕುರ್ತಕೋಟಿ

ಗುರುಗಳೆ, ಬರಹವನ್ನು ಪ್ರೀತಿಯಿಂದ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಖುಷಿಯಾಯ್ತು!

14
0
Would love your thoughts, please comment.x
()
x