ವಿಷಾದ- ೩: ಸಹನಾ ಪ್ರಸಾದ್


ಚಿಕ್ಕವರಾದಾಗ ನಮ್ಮ ವಿಷಾದಗಳು ಕಡಿಮೆ. ಸಹಜವಾಗಿ. ಇನ್ನು ಬದುಕು ಬಹಳಷ್ಟು ಇದೆ, ಆದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶಗಳಿವೆ, ಮುಂದೆ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಹಳಷ್ಟು ಅವಕಾಶಗಳಿವೆ ಎಂದಾಗ ಮನಸ್ಸು ವಿಷಾದದೆಡೆ ಜಾರುವುದಿಲ್ಲ. ಹಾ, ಕೆಲವೊಮ್ಮೆ ನಮ್ಮ ವೃತ್ತಿಯಲ್ಲಿ ಅಥವಾ ನಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವಿಡೀ ನಮ್ಮನ್ನು ವಿಷಾದಕ್ಕೆ ದೂಡಬಲ್ಲದು.

ಪೂರ್ತಿ ಅಳಿಸಲಾಗದಿದ್ದರೂ ಕಡಿಮೆ ಮಾಡಿಕೊಳ್ಳುವುದಕ್ಕೆ ತಜ್ಞರು ಕೆಲವು ಸಲಹೆಗಳು ನೀಡುತ್ತಾರೆ. “ಆಲಿಸ್ ಇನ್ ವಂಡರ್ಲ್ಯಾಂಡ್” ಎಲ್ಲರೂ ಚಿಕ್ಕ ವಯಸ್ಸಿನಲ್ಲಿ ಖಂಡಿತ ಓದಿರುತ್ತೀವಿ. “ಎಲ್ಲಿಗೆ ಹೋಗಬೇಕು, ನೀನು” ಎಂದು ಬೆಕ್ಕು ಆಲಿಸಳನ್ನು ಕೇಳುತ್ತದೆ. ” ಗೊತ್ತಿಲ್ಲ ನನಗೆ” ಅವಳು ಉತ್ತರ ನೀಡುತ್ತಾಳೆ. ” ಹಾಗಾದ್ರೆ ಎಲ್ಲಿಗೆ ಹೋದರೇನು!” ಬೆಕ್ಕಿನ ಉವಾಚ! ಎಷ್ಟು ಸತ್ಯ ಅಲ್ಲವಾ? ನಮಗೆ ಎಲ್ಲಿಗೆ ಹೋಗಬೇಕೆಂದು ಗೊತ್ತೇ ಇರದಿದ್ದರೆ ಎಲ್ಲಿಗೆ ಹೋದರೂ ವ್ಯತ್ಯಾಸ ಆಗುವುದಿಲ್ಲ. ಇದರ ಅರ್ಥ ನಮ್ಮ ಗುರಿ, ನಮಗೇನು ಬೇಕೆಂದು ನಮಗೆ ಖಚಿತವಾಗಿ ಗೊತ್ತಿರಬೇಕು. ಕೆಲವರು ಚಿಕ್ಕಂದಿನಿಂದಲೇ ತಾವು ಸಾಧಿಸಬೇಕಾದ್ದು, ಆ ಗುರಿಯನ್ನು ತಲುಪುವ ದಾರಿಯನ್ನು ಸರಿಯಾಗಿ ಗುರುತಿಸಿಕೊಂಡು ಪ್ರತಿಯೊಂದು ಹೆಜ್ಜೆಯನ್ನೂ ಅದರತ್ತಲೇ ಇಡುತ್ತಾರೆ. ಅವರಿಗೆ ವಿಷಾದ ಕಡಿಮೆ. ಗುರಿ ತಲುಪಲಾಗದಿದ್ದರೂ ಪ್ರಯತ್ನ ಪಟ್ಟಿರುವ ಆತ್ಮತೃಪ್ತಿಯಂತೂ ಇದ್ದೇ ಇರುತ್ತೆ.

ಕನಸುಗಳು, ಆಸೆಗಳು ನಮ್ಮವೇ ಆಗಿರಬೇಕು. ಬೇರೆಯವರ ಹಾದಿ, ಗಮ್ಯ ಕಂಡು ನಾವು ನಮ್ಮ ಕನಸನ್ನು ರೂಪಿಸಿಕೊಳ್ಳಬಹುದೇ ಹೊರೆತು, ನಮ್ಮ ಪ್ರಯತ್ನವಿಲ್ಲದೇ ಅದು ಹೊರಗಿನವರದಾಗಿಯೇ ಉಳಿಯುತ್ತೆ. ಅಕ್ಕ ಪಕ್ಕದ ಮನೆ ಮಕ್ಕಳನ್ನು ನೋಡಿ ತಂದೆ ತಾಯಿ ತಮ್ಮ ಮಕ್ಕಳನ್ನು ಯಾವ ದಾರಿಯಲ್ಲಿ ನಡೆಸಬಹುದು ಎಂದು ಅರಿಯಬಹುದು. ಆದರೆ ಅದರಲ್ಲಿ ನಡೆಯುವುದು,

ನಡೆಯದಿರುವುದು ಮಕ್ಕಳಿಗೆ ಬಿಟ್ಟಿದ್ದು. ಅವರ ಕನಸಿಗನುಸಾರವಾಗಿ ಅವರನ್ನು ದಾರಿ ಹುಡುಕಲು ಬಿಟ್ಟು ಬಿಡಬೇಕು. ಬಹಳಷ್ಟು ಜನ ತಪ್ಪುವುದು ಇಲ್ಲೇ. ನನ್ನ ವಿದ್ಯಾರ್ಥಿಯೊಬ್ಬ ಒಳ್ಳೆ ಡ್ಯಾನ್ಸರ್. ಅವನ ಒಲವು ನೃತ್ಯ, ಸಂಗೀತದತ್ತ. ಸಹಜವಾಗಿಯೇ ವಿಜ್ಞಾನದ ಅವನಿಗೆ ಕಬ್ಬಿಣದ ಕಡಲೆ. ಸುಮಾರು ಪೇಪರುಗಳು ಪೆಂಡಿಂಗ್ ಇತ್ತು. ಸ್ಕೂಲ್ ಒಂದರಲ್ಲಿ ಡ್ಯಾನ್ಸ್ ಟೀಚರ್ ಕೆಲಸ ಸಿಕ್ಕಾಗ ನಾನೊಬ್ಬಳೇ ಅವನಿಗೆ ಅಭಿನಂದಿಸಿದ್ದು. ” ನನ್ನಮ್ಮ ಕೂಡ ಮೂಗು ಮುರಿದರು. ಏನು ಮಗ ಸ್ಕೂಲ್ ಅಲ್ಲಿ ನೃತ್ಯ ಶಿಕ್ಷಕ ಎಂದು ಹೇಳಿ ಹೆಮ್ಮೆ ಪಡಲೇ, ಎಂದು ಬೈದರು” ಎಂದು ಬೇಸರದಲ್ಲಿ ಹೇಳಿಕೊಂಡ. ” ನಿನ್ನ ಕನಸ್ಸಿನಂತೆ ನಡೆಯುತ್ತಿದೀಯ. ಅದು ಮುಖ್ಯ. ಎಲ್ಲರಿಗೂ ಈ ಧೈರ್ಯ ಇರುವುದಿಲ್ಲ” ಎಂದು ನಾನು ಹುರಿದುಂಬಿಸಿದೆ. ಅವನ ಸಹಪಾಠಿಗಳಷ್ಟು ಹಣ, ಸ್ಥಾನಮಾನ ಅವನಿಗಿಲ್ಲದಿರಬಹುದು. ಆದರೆ ಹೆಮ್ಮೆ, ಖುಶಿಯಿದೆ. ವಿಷಾದ? ಉಹೂ ಖಂಡಿತ ಇಲ್ಲ.

” ನನ್ನಪ್ಪನ ಆಸೆಯಂತೆ ನಾನು ಆಫ಼ೀಸರ್ ಆದೆ. ಆದರೆ ನನ್ನ ಮನಸ್ಸು ರಂಗಭೂಮಿ, ಬಣ್ಣದ ಬದುಕಿನತ್ತ. ಆದರೆ ನಾವಿರುವ ಪರಿಸ್ಥಿಯಲ್ಲಿ ಅದು ಸಾಧ್ಯವಿಲ್ಲ. ಸಂಸಾರದ ಹೊಣೆ ಹೊತ್ತ ನನಗೆ ಕೈ ತುಂಬ ಸಂಬಳ ಬರುವ ಕೆಲಸ ಮುಖ್ಯ. ನೋಡೋಣ, ಮುಂದೆ ಎಂದಾದರೂ ನನ್ನಿಷ್ಟವಾಗಿರುವುದನ್ನು ಪ್ರವೃತ್ತಿಯಾಗಿ ದೊರಕಿಸಿಕೊಳ್ಳಲು ಪ್ರಯತ್ನಿಸುತೇನೆ” ಎಂದು ಒಬ್ಬರ ಅನಿಸಿಕೆ. ವಿಷಾದ? ” ಖಂಡಿತ, ಆದರೆ ಬದುಕಿಗೆ ಕನಸ್ಸೊಂದೇ ಅಲ್ಲ, ವಾಸ್ತವ ಮುಖ್ಯ. ಸ್ವಲ್ಪ ಮಟ್ಟಿಗೆ ವಿಷಾದ ಇದೆ, ಆದರೆ ಮುಂದೆಂದೊ ಸರಿ ಹೋಗಬಹುದೆಂಬ ಆಸೆಯೂ ಇದೆ”.

ಪ್ರಮುಖ ಪ್ರಾಧ್ಯಾಪಕರ ಹತ್ತಿರ ಸಣ್ಣ ವಿಷಯಕ್ಕೆ ವಿರಸ ಉಂಟಾದಾಗ ರಮ್ಯ ದುಡುಕಿನಲ್ಲಿ ಕಾಲೇಜು ಬಿಡುವ ನಿರ್ಧಾರ ಕೈಗೊಂಡಳು. ಎಲ್ಲರೂ ಬುದ್ಧಿ ಹೇಳಿದರೂ ಕೇಳದೆ, ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ವಿಷಯ ದೊಡ್ಡದಾಗಿ ಕೊನೆಗೆ ಒಂದು ವರುಷ ಹಾಳಾಗಿದ್ದಲ್ಲದೆ ಮುಂದೆ ಬೇರೆಡೆಯಲ್ಲೂ ಸೇರಿಕೊಳ್ಳಲು ಕಷ್ಟವಾಯಿತು. ಅನ್ಯಾಯ ಕಂಡರೆ ಪ್ರತಿಭಟಿಸಬೇಕು ನಿಜ. ಆದರೆ ಅದು ನಮ್ಮ ಭವಿಷ್ಯಕ್ಕೆ ಕಲ್ಲು ಹಾಕದಂತೆ ಕಷ್ಟಗಳನ್ನು ಜಾಣತನದಿಂದ ಬಗೆ ಹರಿಸಿಕೊಳ್ಳಬೇಕು. ಯಾವುದರಿಂದ ನಮಗೆ ವಿಷಾದವುಂಟಾಗುವುದೊ ಅದನ್ನು ತಪ್ಪಿಸಬೇಕು. ಬಹಳಷ್ಟು ಜನ ದುಡುಕಿ ತಮ್ಮ ಮೇಲಧಿಕಾರಿಗಳು, ಸಹೋದ್ಯೋಗಿಗಳ ಬಳಿ ವಿರಸ ಮಾಡಿಕೊಂಡು ತಮಗೆ ತಾವೇ ಕಷ್ಟ ತಂದುಕೊಳ್ಳುತಾರೆ. ಆಗ ವಿಷಾದ ಜಾಸ್ತಿ. ತಾಳ್ಮೆ, ಸಹನೆ ಎಂದೆಂದಿಗೂ ಬಹಳ ಮುಖ್ಯ. ವಿಷಾದ ತಡೆಗಟ್ಟಲು ಅದೊಂದೇ ದಾರಿ.

ಸುಮಾರು ವರುಷಗಳು ಭ್ರಷ್ಟ ಅಧಿಕಾರಿಗೆ ಆಪ್ತ ಕಾರ್ಯದರ್ಶಿಯಾಗಿ ಅವರ ದುರ್ವ್ಯವಹಾರದಲ್ಲಿ ಪಾಲುದಾರರಾಗಿದ್ದ ಒಬ್ಬರು ಈಗ ಖಾಲಿ ವಿಷಾದದಲ್ಲಿ ಬದುಕುತ್ತಿದ್ದಾರೆ. ತಾನು ಮಾಡುತ್ತಿದ್ದು ತಪ್ಪು ಎಂಬ ಅರಿವಿದ್ದರೂ ಅದೇ ತಪ್ಪನ್ನು ಮುಂದುವರೆಸಿಕೊಂಡು ಹೊಗಿದ್ದು, ಅದು ಒಂದು ದಿನ ಎಲ್ಲರಿಗೆ ಗೊತ್ತಾಗಿ ಎಲ್ಲರೆದಿರು ಛೀಮಾರಿ ಹಾಕಿಸಿಕೊಂಡದ್ದು, ಪ್ರಾಮಾಣಿಕವಾಗಿರದೆ ವೃತ್ತಿಯಲ್ಲಿ ಮುಂದುವರೆದದ್ದು ಇತ್ಯಾದಿಗಳ ಬಗ್ಗೆ ಅವರಿಗೆ ಸಾಕಷ್ಟು ಪಶ್ಚಾತ್ತಾಪವಿದ್ದರೂ ಈಗ ಕಾಲ ಮಿಂಚಿ ಹೋಗಿದೆ. ವಿಷಾದ ದತ್ತ ಮೋಡದ ಹಾಗೆ ಆವರಿಸಿಕೊಂಡಿದೆ.

-ಸಹನಾ ಪ್ರಸಾದ್



ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x