ಕಳೆದ ಲೇಖನದಲ್ಲಿ ವಿಷಾದ, ರಿಗ್ರೆಟ್ ಮ್ಯಾಟ್ರಿಕ್ಸ್ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ನಮ್ಮ ಸಂಬಂಧಗಳಲ್ಲಿ ವಿಷಾದದ ಕುರಿತು ಮಾತಾಯಿತು. ಸಂಬಂಧಗಳು ಬೇರೆಯವರ ಮೇಲೆ ಸಾಕಷ್ಟು ನಿರ್ಭರವಾಗಿರುತ್ತೆ. ನಾವು ಸರಿ ಇದ್ದರೂ ಅವರಿರದೆ ಇರಬಹುದು. ಇಲ್ಲಾ, ಇಬ್ಬರೂ ಸರಿ ಇಲ್ಲದಿರಬಹುದು. ಅಥವಾ ಇಬ್ಬರೂ ಸರಿ ಇದ್ದರೂ ಪರಿಸ್ಥಿತಿ, ಸುತ್ತಮುತ್ತಲಿನ ಜನ ಸರಿ ಇಲ್ಲದಿರಬಹುದು. ಹೀಗೆ ಬಹಳಷ್ಟು ನಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳು ಇದ್ದಾಗ ವಿಷಾದ ಹುಟ್ಟುವ ಸಾಧ್ಯತೆ ಹೆಚ್ಚು. ವೈಯಕ್ತಿಕ ಜೀವನಕ್ಕೆ ಬಂದಾಗ ವಿಷಾದ ಉಂಟು ಮಾಡುವ ಪರಿಸ್ಥಿತಿಗೆ ಬಹಳಷ್ಟು ಸಲ ನಾವೇ ಕಾರಣರಾಗಿರುತ್ತೇವೆ, ಕೆಲವೊಂದನ್ನು ಜಾಗರೂಕತೆಯಿಂದ ನಿಭಾಯಿಸಿದಾಗ ವಿಷಾದ ಖಂಡಿತ ಉಂಟಾಗುವುದಿಲ್ಲ. ಇಷ್ಟರ ಮೇಲೆ ಆದರೂ ನಮ್ಮ ಪ್ರಯತ್ನ ನಾವು ಮಾಡಿರುವ ತೃಪ್ತಿ ಇರುತ್ತದೆ. ನಮ್ಮ ಕನಸುಗಳಿಗೆ ಜೀವ ತುಂಬುವ, ಅದನ್ನು ಸಾಕಾರಗೊಳಿಸುವ ಭಾದ್ಯತೆ ಕೇವಲ ನಮ್ಮದು. ಅದಕ್ಕೆ ಬೇಕಾಗುವಷ್ಟು ಆಯೋಜನೆ, ಪರಿಶ್ರಮ ಮುಂತಾದುವುಗಳನ್ನು ಯೋಚಿಸಿ ಮುಂದುವರಿಯಬೇಕು. ಕೆಲವೊಂದು ಸಮಯದಲ್ಲಿ ಕನಸುಗಳನ್ನು ಸ್ವಲ್ಪ ಸಮಯದ ಮಟ್ಟಿಗೆ ತಡೆಹಿಡಿಯಬೇಕಾಗಿ ಬಂದರೂ ಆಮೇಲೆ ಅವುಗಳನ್ನು ಮತ್ತೆ ನಮ್ಮ ವಶಕ್ಕೆ ತೆಗೆದುಕೊಳ್ಳಬಹುದು.
ಮದುವೆಯಾಗಿ ೨೫ ವರುಷದ ಮೇಲೆ ಪತಿಯಿಂದ ದೂರ ಸರಿದ ಹೆಣ್ಣಿನ ಸ್ಪಷ್ಟನೆ: ನನ್ನ ಬದುಕು ನನ್ನಿಷ್ಟದಂತೆ ನಡೆದೇ ಇಲ್ಲ. ಗಂಡ, ಅವನ ಅನಿಸಿಕೆಗಳು, ಇಚ್ಚೆಗಳು ನನ್ನ ಬಾಳಿನ ದಿಕ್ಕನ್ನು ಬರೆದವು. ಈಗ ನನ್ನ ಕರ್ತವ್ಯಗಳೆಲ್ಲಾ ಮುಗಿದಿವೆ. ನನ್ನ ಬಾಳು ನನ್ನಿಷ್ಟದಂತೆ ಬದುಕಲು ನನಗೆ ಈಗಲಾದರೂ ಅವಕಾಶ ಬೇಕು. ಅವಳ ಮಾತಲ್ಲಿ ತಪ್ಪು ಇರಬಹುದೇನೊ. ಆದರೆ ಅವಳ ದೃಷ್ಟಿಕೋನದಲ್ಲಿ ಅವಳು ಹೇಳುವುದು ಸರಿ. ಎಲ್ಲರಿಗೂ ಇರುವುದು ಒಂದೇ ಬದುಕು. ಅದು ಬೇರೆಯವರಿಂದ ಕಷ್ಟಕ್ಕೆ ಸಿಲುಕಿದರೆ, ನಮ್ಮ ಕನಸುಗಳಿಗೆ ಅವರು ಅಡ್ಡಿಯಾದರೆ, ಅದಕ್ಕೆ ನಾವು ಅವಕಾಶ ಕೊಟ್ಟರೆ ತಪ್ಪು ನಮ್ಮದೇ.
” ಹಾಗಲ್ಲ, ಗಂಡನ ಜತೆ ಇದ್ದೂ ತನ್ನ ಕನಸುಗಳನ್ನು ನೆನಸು ಮಾಡಿಕೊಳ್ಳಬಹುದಿತ್ತಲ್ಲ” ಎಂದೊಬ್ಬರು ಟೀಕಿಸಿದಾಗ ಆಕೆ ನುಡಿದ್ದು : ನಾ ಪ್ರಯತ್ನಿಸಿಲ್ಲ, ಯೋಚಿಸಿಲ್ಲ ಎಂದು ನೀವೆಣಿಸುವುದ್ಯಾಕೆ?”
ಬದುಕಿನಲ್ಲಿ ವಿಷಾದ ಮೂಡುವುದು ನಾವು ಸಾಕಷ್ಟು ಪರಿಶ್ರಮ ಪಡದಿದ್ದಾಗಲೂ. ಕನಸು ಕಾಣುವುದಷ್ಟೆ ಮುಖ್ಯ ಅದಕ್ಕಾಗಿ ಶ್ರಮ ಪಡುವುದು. “ನಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಬೇಕೆಂದಿದ್ದೆ. ಆದರೆ ಪೀಯೂ ಓದುವಾಗ ಸ್ವಲ್ಪ ಏಮಾರಿದೆ. ಓದನ್ನು ನಿರ್ಲಕ್ಷಿಸಿದ್ದಕ್ಕೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಆಮೇಲೆ ಸಿಕ್ಕ ಸಣ್ಣ ಸಣ್ಣ ನೌಕರಿ, ಅದರಿಂದ ಮನೊವ್ಯಥೆ, ದುಗುಡ… ಸಣ್ಣ ಕಂಪನಿಯಲ್ಲಿ ಕ್ಲರ್ಕ್ ಆಗಿರುವ ಪರಿಣೀತಾ ಅಳಲು. ಬದುಕು ಸುಲಭವಲ್ಲ, ಅದರನ್ನು ಹಸನು ಮಾಡಿ ನಮ್ಮೆಡೆ ತಿರುಗಿಸಿಕೊಳ್ಳುವುದು ನಮ್ಮ ಕೈಲಿದೆ.
” ಮಾಡದೇ ಇರುವುದಕ್ಕಿಂತ ಮಾಡಿ ಸೋಲುವುದು ಎಷ್ಟೋ ಮೇಲು” ಈ ಮಾತನ್ನು ಸಾಕಷ್ಟು ಸಲ ಕೇಳಿದೀವಿ. ” ಅಯ್ಯೊ, ನನಗೆ ಟೈಮ್ ಇಲ್ಲ, ನನಗೆ ಅನುಕೂಲವಿಲ್ಲ, ದುಡ್ಡಿಲ್ಲ, ಸಹಾಯಕರಿಲ್ಲ, ಬೆನ್ನು ತಟ್ಟುವವರಿಲ್ಲ, ನಾಳೆ ನೋಡೋಣ, ಇತ್ಯಾದಿ ಇತ್ಯಾದಿ…ಯಾವುದೇ ಕೆಲಸ ಮಾಡಬೇಕಾದರೆ ಮನಸ್ಸು ಪ್ರತಿಭಟಿಸುವುದು ಸಹಜ. ಅದು ಮನಸ್ಸಿನ ಸ್ವಭಾವ. ಅದನ್ನು ಮೀರಿ ನಾವು ಕಷ್ಟ ಪಟ್ಟಾಗಲೇ ಕಾಲಕ್ರಮೇಣ ಕಷ್ಟ ಸುಖವಾಗಿ ಬದಲಾಗುವುದು. ಮಾಡಿ ಸೋತರೂ ಪರವಾಗಿಲ್ಲ. ಮಾಡಿಯೇ ತೀರುತ್ತೇನೆ ಎಂಬ ಛಲ ನಮ್ಮನ್ನು ಶೀಘ್ರವಾಗಿ ಗಮ್ಯದತ್ತ ಕರೆದೊಯ್ಯುತ್ತದೆ.
ವಿಷಾದ ಉಂಟು ಮಾಡುವ ಮತ್ತೊಂದು ಸಂಗತಿ ನಮ್ಮ ಸುತ್ತ ಮುತ್ತಲಿನ ಜನ ಹಾಗು ಎಷ್ಟರ ಮಟ್ಟಿಗೆ ಅವರನ್ನು ನಾವು ಹತ್ತಿರ ಮಾಡಿಕೊಳ್ಳುತ್ತೇವೆ ಎಂದು. ಸತ್ಸಂಗ ಎನ್ನುವುದು ಇದಕ್ಕೇ. ನಮ್ಮ ಕನಸುಗಳು ನೆನಸಾಗಲು ಅಡ್ಡಗಾಲು ಹಾಕುವುದು ಕೆಲವೊಮ್ಮೆ ಈ ತರದ ಜನರೇ. ಕನಿಷ್ಟ ಪಕ್ಷ ಅವರ ಪಾಡಿಗೆ ಅವರಿರುವುದು ಬಿಟ್ಟು ನಮ್ಮ ದಾರಿಗೂ ಅಡ್ಡಿ ಆತಂಕಗಳನ್ನು ತಂದೊಡ್ಡುವುದು, ನಮ್ಮ ಕೈಲಿ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳುವುದು, ನಮ್ಮನ್ನು ನಿರುತ್ಸಾಹಗೊಳಿಸುವುದು, ಇದೆಲ್ಲ ಕೊನೆಗೆ ನಮ್ಮನ್ನು ವಿಷಾದಕ್ಕೆ ದೂಡುತ್ತವೆ. ” ನಾ ಹೊರದೇಶಕ್ಕೆ ಹೊರಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೆ. ನನ್ನ ಆಪ್ತ ಸ್ನೇಹಿತೆ ಅಲ್ಲಿನ ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ, ನನ್ನ ಮನಸ್ಸು ಡೋಲಾಯಮಾನಗೊಳಿಸಿದಳು. ಈಗ ಒಳ್ಳೆ ಅವಕಾಶ ಕಳೆದುಕೊಂಡಿದ್ದಕ್ಕೆ ವಿಷಾದವಾಗುತ್ತಿದೆ” ದಿವ್ಯಳ ಮಾತು ಕೇಳಿ ಮನಸ್ಸಿಗೆ ಬಂದದ್ದು ಒಂದೇ” ನಿನ್ನ ಬುದ್ಧಿ ಎಲ್ಲಿ ಹೋಗಿತ್ತು, ಹೆಣ್ಣೇ?”
ಒಮ್ಮೆ ಸೋತರೂ ಎದ್ದು ಮುಂದುವರೆಯಬೇಕು. ಎಷ್ಟು ಸಲ ಬಿದ್ದರೂ ಏಳುವುದು ಮುಖ್ಯ. ಅದು ಬಿಟ್ಟು ಸೋಲೊಪ್ಪಿಕೊಳ್ಳುವುದು ಮುಂದೆ ಖಂಡಿತ ವಿಷಾದಕ್ಕೆ ಎಡೆಮಾಡಿಕೊಡುತ್ತದೆ. ” ಒಮ್ಮೆ ಪರೀಕ್ಷೆಯಲ್ಲಿ ನಪಾಸಾದೆ. ಮರಳಿ ಯತ್ನವ ಮಾಡಲೇ ಇಲ್ಲ. ಈಗ ಕಳೆದುಕೊಂಡ ಸಮಯ ಮತ್ತೆ ಬರುತ್ತದೆಯೇ? ಕಾಲ ಮೀರಿ ಹೋದ ಮೇಲೆ ಚಿಂತಿಸಿ ಪ್ರಯೋಜನವೇನು” ಇದು ಒಬ್ಬರ ವಿಷಾದ ತುಂಬಿದ ಮಾತುಗಳು. ವಿಷಾದದ ಹಾದಿಯಲ್ಲಿ ಮತ್ತೆ ನಡೆಯದಿರೋಣ, ರಿಗ್ರೆಟ್ ಜಾಸ್ತಿ ಮಾಡಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳದಿರುವ ದಿಕ್ಕಿನಲ್ಲಿ ನಮ್ಮ ಪ್ರಯಾಣವಿರಲಿ!
–ಸಹನಾ ಪ್ರಸಾದ್
ಬಹಳ ಅರ್ಥಗರ್ಭಿತ ಲೇಖನ, ಉದಾಹರಣೆಗಳೊಂದಿಗೆ ಉತ್ತಮವಾಗಿ ವಿಶ್ಲೇಷಣೆ ನೀಡಿದ್ದೀರಿ.
ವಿಷಾದ ಎನ್ನುವುದು ನಮ್ಮಿಂದಲೇ ಪ್ರಾರಂಭವಾಗುತ್ತದೆಯೇ ಹೊರತು ಮತ್ತೊಬ್ಬರು ನಮ್ಮ ಮೇಲೆ ಮಾಡುವ ಒತ್ತಡದಿಂದಲ್ಲ. ಪರಿಸ್ಥಿತಿಗೆ ಹೊಂದಿಕೊಂಡು 25 ವರ್ಷ ಗೃಹಿಣಿಯಾಗಿ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿದ್ದಾಳೆಂದರೆ ಅಲ್ಲಿ ವಿಷಾದವಿರುವುದಿಲ್ಲ. ನೆಪ ಮಾತ್ರಕೆ ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳಲು ಹೇಳಿದ ಮಾತು. ತನ್ನ ಮಗಳನ್ನು ಮದುವೆ ಮಾಡಿ ಕೊಟ್ಟ ಮೇಲೆ, ಅವಳ ಹೊಸ ಕುಟುಂಬಕ್ಕೆ ಅವಳು ಹೊಂದಿಕೊಳ್ಳುತ್ತಾಳೆ. ಅಥವಾ ಸೊಸೆಯನ್ನು ತಂದುಕೊಂಡರೆ ಸೊಸೆ ತನ್ನ ಮನೆಗೆ ಹೊಂದಿಕೊಳ್ಳಲಿ ಎಂಬ ಅಭಿಲಾಷೆ ಆಕೆಗಿರುತ್ತದೆ. ಇಲ್ಲಿ ಹೊಂದಾಣಿಸಿಕೊಂಡು ಸಂತೋಷಕಾಣುವುದು ಮುಖ್ಯವೇ ಹೊರತು, ಎಲ್ಲ ಮುಗಿದ ಮೇಲೆ ವಿಷಾದ ಪಡುವ ಅಗತ್ಯವಿಲ್ಲ. ಓದಿನ, ಕೆಲಸದ, ಸಾಧನೆಯ ವಿಷಯದಲ್ಲೂ ಅಷ್ಟೆ….