ವಿಷಾದ-೧ (ಸಂಬಂಧಗಳಲ್ಲಿ): ಸಹನಾ ಪ್ರಸಾದ್‌

ಮ್ಯಾನೇಜುಮೆಂಟಿನಲ್ಲಿ “ಅಪರೇಷನ್ಸ್ ರಿಸರ್ಚ್” ಎಂಬ ವಿಷಯವುಂಟು. ಮೂಲತಃ ಅದು ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಒಂದು ವಿಭಾಗ. ಇರುವ ಸಮಯ, ಸಾಮಾಗ್ರಿ, ಸಂಪನ್ಮೂಲಗಳು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಹೇಗೆ? ಎಂಬುದು ಇದರ ತಿರುಳು. ಇದರಲ್ಲಿರುವ ಬಹಳಷ್ಟು ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಗಮನಾರ್ಹವಾಗಿ ಸುಧಾರಿಸುತ್ತದೆ. ಇದನ್ನು ಅಳವಡಿಸಿಕೊಳ್ಳಲು ನಾವು ಗಣಿತ ಮತ್ತಿತರ ವಿಷಯಗಳಲ್ಲಿ ನಿಪುಣರಾಗಬೇಕೆಂದಿಲ್ಲ. ಸಾಮಾನ್ಯ ಮಟ್ಟದಲ್ಲಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ವಿವೇಚನೆ, ಯೋಚನೆ, ವಿವೇಕ ಇರಬೇಕು ಅಷ್ಟೆ!

ಇವತ್ತಿನ ಲೇಖನದ ವಿಷಯ ” ರಿಗ್ರೆಟ್ ಮ್ಯಾಟ್ರಿಕ್ಸ್” ಅಂದರೆ ವಿಷಾದಗಳನ್ನು ನಾವು ಅಳತೆ ಮಾಡುವುದಕ್ಕೆ ಸಾಧ್ಯವಾದರೆ ಅದರ ಪರಿಮಾಣ ಎಷ್ಟು ಎಂದು ಬರೆಯುವುದು. ಉದಾ: ನಿಮಗೆ ಒಂದು ಕೆಲಸ ಸಿಗುತ್ತದೆ, ಒಂದು ಲಕ್ಷ ಸಂಬಳ ಎಂದಿಟ್ಟುಕೊಳ್ಳಿ. ಒಪ್ಪಿ ಕೆಲಸಕ್ಕೆ ಸೇರಿದ ನಂತರ ಇನ್ನೂ ಇಪ್ಪತ್ತು ಸಾವಿರ ಜಾಸ್ತಿ ಸಂಬಳದ ಕೆಲಸ ಸಿಗುತ್ತದೆ. ಆಗ ನಿಮ್ಮ ವಿಷಾದದ ಪರಿಮಾಣ ೨೦,೦೦೦ ರುಪಾಯಿಗಳು.
ಒಂದು ಕಡೆ ೨೦ ರುಪಾಯಿ ಕೊಟ್ಟು ಟೊಮ್ಯಾಟೊ ಕೊಂಡಿರುತ್ತೀರ, ಮನೆಗೆ ಹಿಂದಿರುಗುತ್ತಿರುವಾಗ ೧೫ ರುಪಾಯಿ ಕೇಜಿಗೆ ಒಬ್ಬಾತ ಮಾರುತ್ತಿರುತ್ತಾನೆ. ಆಗ ನಿಮ್ಮ ವಿಷಾದದ ಪರಿಮಾಣ ೫ ರುಪಾಯಿಗಳು, ನೀವು ಒಂದು ಕೇಜಿ ಕೊಂಡಿದ್ದರೆ.

ಬದುಕಿನಲ್ಲಿ ಎಲ್ಲರಿಗೂ ವಿಷಾದ ಕಟ್ಟಿಟ್ಟಿದ್ದು. ನಾವು ಅಂದುಕೊಂಡಂತೆ ನಡೆಯುವುದು, ಬಯಸಿದಂತೆ ಆಗುವುದರ ಸಾಧ್ಯತೆ ಬಹಳ ಕಡಿಮೆ. ಆಗ ವಿಷಾದದ ಪರಿಮಾಣ ಜಾಸ್ತಿ ಆಗುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿನಿಂದಲೂ ಇದು ಜಾಸ್ತಿಯಾಗಬಹುದು. ಯಾವುದೋ ಕೋಪಕ್ಕೆ, ಹಟಕ್ಕೆ, ಯಾರಿಗೋ ಏನೊ ” ಕಲಿಸಲು” ನಾವು ವಿಷಾದದ ದಾರಿಯಲ್ಲಿ ಸಾಗಬಹುದು. ನನ್ನ ವಿದ್ಯಾರ್ಥಿನಿಯೊಬ್ಬಳು ತಾಯಿ ಬೈತಾರೆ ಯಾವಾಗಲೂ, ಅವರಿಗೆ ಬುದ್ಧಿ ಕಲಿಸುವೆ, ಅವರು ಬೇಡ ಅಂದಿದ್ದೆಲ್ಲಾ ಮಾಡಿ ಎಂದು ಹುಚ್ಚು ವಾದ ಮಾಡುತ್ತಿದ್ದಾಗ ನಾ ಹೇಳಿದ್ದು ಇದನ್ನೇ. ಮುಂದೆ ಎಂದಾದರೂ ಒಂದು ದಿನ ನಾವು ಮಾಡಬಾರದಿತ್ತು ಅನಿಸುವುದರ ಬಗ್ಗೆ ನಮಗೆ ಹೆಚ್ಚು ಕಾಳಜಿ ಇರಬೇಕು. ನಮ್ಮ ಪರಿಸ್ಥಿತಿಗಳು ಕೈಮೀರಿದಾಗ, ಅದರ ಬಗ್ಗೆ ನಮಗೆ ಒಂದು ಚೂರು ನಿಯಂತ್ರಣವಿಲ್ಲದೆ ಹೋದಾಗ, ವಿಷಾದ ಮೂಡುವುದು ಸಹಜ. ಆದರೆ ಅದರ ಬಗ್ಗೆ ಚಿಂತಿಸುವುದು ಅರ್ಥಹೀನ. ಸಂದರ್ಭಗಳು ಎದುರಾದಾಗ ಅದರಲ್ಲಿ ಕಂಟ್ರೋಲ್ ಮಾಡಬಹುದಾದ ಅಂಶಗಳು ಎಷ್ಟಿವೆ, ನಮ್ಮ ಕೈ ಮೀರಿದ್ದು ಯಾವುದು ಎಂದು ಯೋಚಿಸುವುದು ಮುಖ್ಯ. ಎರಡನೆಯದು ಹೊರತುಪಡಿಸಿ ಮೊದಲನೆಯದರ ಬಗ್ಗೆ ಕಾರ್ಯೋನ್ಮುಖರಾಗುವುದು ಅತ್ಯವಶ್ಯಕ.

ಈಗ ಸಂಬಂಧಗಳಲ್ಲಿ ವಿಷಾದ ಕಡಿಮೆ ಮಾಡಿಕೊಳ್ಳುವುದು ಹೇಗೆ? ಮೊಟ್ಟಮೊದಲನೆಯದಾಗಿ ಸಂಬಂಧ ನಮಗೆ ಸರಿಯಾದ ಜೋಡಿಯಾಗಿದ್ದಲ್ಲಿ ವಿಷಾದದ ಮಾತೇ ಬರುವುದಿಲ್ಲ. ಆಂಗ್ಲ ಭಾಷೆಯಲ್ಲಿ ಇದಕ್ಕೆ “ಕಂಪಾಟೆಬಿಲಿಟಿ” ಎಂದು ಕರೆಯುತ್ತಾರೆ. ಕನ್ನಡದಲ್ಲಿ ” ಹೊಂದಾಣಿಕೆ” ಎನ್ನಬಹುದೇನೊ. ಮನೆ ಶಾಂತವಾಗಿರಲು, ಮನಸ್ಸುಗಳು ಉಲ್ಲಸಿತವಾಗಿರಲು ಇದು ಬಲು ಮುಖ್ಯ. ಮನೆಯ ಸದಸ್ಯರ ನಡುವೆ ಹೊಂದಾಣಿಕೆಯ ಬದಲು ಬರೀ “ಸಹಿಸುವಿಕೆ” ಇದ್ದರೆ ಬಲು ಕಷ್ಟ, ಯಾರದೊ ಮನಸ್ಸಿನಲ್ಲಿ ಇದು ಅಶಾಂತಿಯ ಅಲೆಗಳನ್ನು ಎಬ್ಬಿಸುತ್ತೆ. ನಾನು ರಾಜಿಯಾಗುತ್ತಿದ್ದೇನೆ, ನನ್ನ ಮನಸ್ಸಿನ ವಿರುದ್ಧ ಶಾಂತಿಗಾಗಿ, ಬೇರೆಯವರ ಎದುರು ಮರ್ಯಾದೆ ಉಳಿಸಿವುದಕ್ಕಾಗಿ ನನ್ನತನವನ್ನು ಕಳೆದುಕೊಳ್ಳುತ್ತಾ ಇರುವೆ ಎಂಬ ಭಾವನೆ ಬಲು ಕೆಟ್ಟದ್ದು. ಪತಿ, ಪತ್ನಿಯರ ಮಧ್ಯೆ ಇದು ಬಲು ಅಪಾಯಕಾರಿ. ಎಲ್ಲವನ್ನೂ ಮನಸ್ಸಿನಲ್ಲಿ ಕೂಡಿಟ್ಟುಕೊಳ್ಳುವುದು ಅಕ್ಷರಶ್ಃ ಸೆರಗಲ್ಲಿ ಕೆಂಡ ಇಟ್ಟುಕೊಂಡ ಹಾಗೆ, ಮನಸ್ಸನ್ನು ನಿರಂತರವಾಗಿ ದಹಿಸುತ್ತ, ಬೇಯಿಸುತ್ತಾ ಇರುತ್ತದೆ.

ಸಮೀಕ್ಷೆಗಳ ಪ್ರಕಾರ, ತಮ್ಮ ಪರಿವಾರವನ್ನು, ಅದರಲ್ಲೊ ಪತಿ ಅಥವಾ ಪತ್ನಿಯನ್ನು ನನ್ನ ಜೀವನದ ಅತ್ಯಂತ ಮುಖ್ಯವಾದ ಅಂಗ ಎಂದು ಪರಿಗಣಿಸದಿರುವುದು ಮುಂದೆ ಬಹಳ ವಿಷಾದಕ್ಕೀಡುಮಾಡುತ್ತದೆ. ನಮ್ಮ ನಮ್ಮೆ ಮೊಬೈಲ್, ಟೀವಿ ವೀಕ್ಷಣೆ, ನಮ್ಮ ಪರಿವಾರದ ಬೇರೆ ಸದಸ್ಯರೊಡನೆ ಜಾಸ್ತಿ ಸಮಯ ಕಳೆಯುವುದು ನಮ್ಮ ಬದುಕಿನ ಅತ್ಯಂತ ಮಹತ್ವಪೂರ್ಣ ಸಂಬಂಧಗಳಿಗೆ ಮೋಸ ಮಾಡಿದ ಹಾಗೆ. ಅವಳು/ ಅವನು ಬದಲಾಗಲಿ, ಆಮೇಲೆ ನಾನು ಯೋಚಿಸುವೆ ಎಂದು ಬಹಳಷ್ತು ಜನ ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಪತಿ ಅಥವಾ ಪತ್ನಿ ಮೊದಲು ಪ್ರಿಯತಮ/ ಪ್ರೇಯಸಿ. ಯಾವಾಗಲೂ ಅಲ್ಲದಿದ್ದರೂ ಒಮ್ಮೊಮ್ಮೆ ಒಂದು ಅಪ್ಪುಗೆ, ಚುಂಬನ, ಒಳ್ಳೆಯ ಮಾತು, ಒಟ್ಟಿಗೆ ಸಮಯ ಕಳೆಯುವುದು ಮುಂದೆ ವಿಷಾದವನ್ನು ಕಡಿಮೆ ಮಾಡುತ್ತದೆ.

ಎಲ್ಲದಕ್ಕೂ ಮೀರಿದ್ದು ಮಾತು. ಎಷ್ಟೇ ಜಗಳವಾಡಿದರೂ ಮಾತು ಬಿಟ್ಟರೆ ನಿಮಗೆ ಸಂಬಂಧಕ್ಕೆ ಮೌಲ್ಯ ಇಲ್ಲವೆಂದು ಆಯಿತು. ಕೆಲವರು ಸಣ್ಣ ಸಣ್ಣ ವಿಷಯಕ್ಕೆ ತಿಂಗಳುಗಟ್ಟಲೆ ಮಾತು ಬಿಡುತ್ತಾರೆ. ಇಲ್ಲ ದುರುದುರು ನೋಟ, ಚುಚ್ಚುವ ಮಾತುಗಳು, ನಿಂದನೆ ಇವುಗಳಲ್ಲಿ ಬದುಕಿನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಮುಂದೊಂದು ದಿನ, ಹಿಂತಿರುಗಿ ನೋಡಿದಾಗ ಎದೆ ಜಲ್ಲೆನ್ನುತ್ತದೆ. ಅ ಸಮಯದಲ್ಲಿ ನಿಮ್ಮ ಸಂಗಾತಿಯ ಮನಸ್ಸು ಬೇರೆ ಯಾರ ಕಡೆಗಾದರೂ ವಾಲಿದರೆ ತಪ್ಪು ನಿಮ್ಮದೇ ನೆನಪಿರಲಿ. ಆಮೇಲೆ ವಿಷಾದದ ಮ್ಯಾಟ್ರಿಕ್ಸ್ ಸಿಕ್ಕಾಪಟ್ಟೆ ದೊಡ್ಡದಾಗಿ ಜೀವನದ ಖುಶಿಯೆಲ್ಲವನ್ನೂ ನುಂಗಿ ಹಾಕಿಬಿಡುತ್ತದೆ!
ಸಹನಾ ಪ್ರಸಾದ್‌

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x