ಲೇಖನ

ವಿಶ್ವ ರೇಡಿಯೋ ದಿನಾಚರಣೆ: ಎಂ.ಎಚ್.ಮೊಕಾಶಿ


ನಾಲಿಗೆಯಿಲ್ಲದೇ ಮಾತನಾಡುವ ವಸ್ತು ಎಂದೇ ಖ್ಯಾತಿಯಾದ ರೇಡಿಯೋವನ್ನು ಇಟಲಿ ದೇಶದ ವಿಜ್ಞಾನಿ ಗುಗ್ಲಿಯೊಲ್ಮೋ ಮಾರ್ಕೋನಿ ಆವಿಷ್ಕಾರ ಮಾಡಿದರು. 1886 ರಲ್ಲಿ ‘ಹೆನರಿಜ್ ಹಟ್ರ್ಜ್’ ಎಂಬ ವಿಜ್ಞಾನಿ ತರಂಗಗಳ ಸಂಶೋಧನೆಯನ್ನಾರಂಭಿಸಿದರು. ಮಾರ್ಕೊನಿಯು ಹಟ್ರ್ಜ್‍ರವರ ತರಂಗಗಳ ಕುರಿತು ಅಧ್ಯಯನ ಕೈಗೊಂಡು ಕೊನೆಗೆ ಜಯ ಪಡೆದರು. ಹೀಗಾಗಿ ಮಾರ್ಕೋನಿಯನ್ನು ರೇಡಿಯೋದ ಜನಕನೆಂದು ಕರೆಯುವರು.
ಮಾರ್ಕೊನಿಯು 1896ರಲ್ಲಿ ಒಂದು ಏರಿಯಲ್ ಮುಖಾಂತರ 15 ಕಿಲೋ ಮೀಟರ್ ದೂರದಲ್ಲಿದ್ದ ಒಂದು ಸ್ಥಳಕ್ಕೆ ತಂತಿ ಇಲ್ಲದೇ ಸಂದೇಶ ಕಳಿಸಿದರು. ಇದೇ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಯಿತು. ಇವರು ತಯಾರಿಸಿದ ರಿಸೀವ್ಹರನ್ನು ‘ಕೋಹಿರರ್’ ಎಂದು ಕರೆಯಲಾಯಿತು.

1906 ರಲ್ಲಿ ಮೊಟ್ಟ ಮೊದಲ ಭಾಷಣದ ಪ್ರಸಾರ ಕಾರ್ಯವನ್ನು ಅಮೇರಿಕಾ ಮತ್ತು ಜರ್ಮನಿಯಲ್ಲಿ ಮಾಡಲಾಯಿತು. ಅಮೇರಿಕಾದ ‘ಪಿಟ್ಸ್‍ಬರ್ಗ’ನಲ್ಲಿ ಮೊದಲ ಶಾಶ್ವತ ರೇಡಿಯೋ ಪ್ರಸಾರ ಕೇಂದ್ರ ಸ್ಥಾಪನೆಗೊಂಡು ‘ವೆಸ್ಟಿಂಗ್ ಹೌಸ್’ ಎಂಬ ಸಂಸ್ಥೆಯ ಮೂಲಕ ಕಾರ್ಯಾರಂಭ ಮಾಡಿತು. 1922 ರಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪನಿಯು ಸ್ಥಾಪನೆಯಾಗಿ ನಂತರ ಇದು 1927 ರಲ್ಲಿ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ಆಯಿತು.

ಬಾರತದಲ್ಲಿ ರೇಡಿಯೋ ಪ್ರಾರಂಭವಾದದ್ದು 1927 ರಂದು. ರೇಡಿಯೋ ‘ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್’ ಎನ್ನುವ ಸಂಘಟಿತ ಭಾರತೀಯ ಪ್ರಸಾರ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಮೊದಲ ಪ್ರಸಾರ ಕೇಂದ್ರವನ್ನು ಭಾರತದ ಬ್ರಿಟಿಷ್ ವೈಸ್ರಾಯ್ ಆದ ಇರ್ವಿನ್ ಮುಂಬಯಿಯಲ್ಲಿ ಉದ್ಘಾಟಿಸಿದರು. 1936 ‘ಇಂಡಿಯನ್ ಬ್ರಾಡ ಕಾಸ್ಟಿಂಗ್ ಸರ್ವಿಸ್’ ಹೆಸರಿನ ಬದಲಾಗಿ ‘ಆಲ್ ಇಂಡಿಯಾ ರೇಡಿಯೋ’ ಎಂದು ಕರೆದರೆ. ನಂತರ ಆಕಾಶವಾಣಿ ಎಂದು ಕರೆಯಲಾಯಿತು. ಅಲ್ಲದೇ ರೇಡಿಯೋಕ್ಕೆ ಪ್ರಾರಂಭದ ಸ್ವರ ನೀಡಿದವರು ‘ವಾಲ್ಟರ್ ಕೌಫಮ್ಯಾನ್’. ಇದು ಶಿವರಂಜನಿ ರಾಗದಲ್ಲಿದೆ.

ನಮ್ಮ ದೇಶದಲ್ಲಿ ಮೊಟ್ಟ ಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾದದ್ದು ಮೈಸೂರಿನಲ್ಲಿ. ಡಾ.ಎನ್.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ತಮ್ಮ ಸ್ವಗೃಹ ವಿಠಲವಿಹಾರದಲ್ಲಿ ರೇಡಿಯೋ ಕೇಂದ್ರವನ್ನು 1935ರಲ್ಲಿ ಸ್ಥಾಪಿಸಿದರು. ರಾಷ್ಟ್ರಕವಿ ಕುವೆಂಪುರವರ ಕವನ ವಾಚನದೊಂದಿಗೆ ಭಾರತದಲ್ಲಿ ಅಧಿಕೃತವಾಗಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು. ಇದನ್ನು ಆಲಿಸಲು ಸ್ವತಃ ಮೈಸೂರಿನ ಮಹಾರಾಜರು ಹಾಜರಾಗಿದ್ದರು. ‘ಆಕಾಶವಾಣಿ’ ಎಂಬ ಪದವನ್ನು ಮೊದಲು ಬಳಸಿದ್ದು ಮೈಸೂರಿನಲ್ಲಿ.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯಬಂದಾಗ ಆಲ್ ಇಂಡಿಯಾ ರೇಡಿಯೋ ಕೇವಲ 6 ಸ್ಟೇಷನ್‍ಗಳನ್ನು ಮಾತ್ರ ಹೊಂದಿತ್ತು. 1957ರ ಅಕ್ಟೋಬರನಲ್ಲಿ ವಿವಿಧ ಭಾರತಿ ಕೇಂದ್ರವನ್ನು ರೇಡಿಯೋ ಸಿಲೋನ್ ನೊಂದಿಗೆ ಪ್ರಾರಂಭಿಸಲಾಯಿತು. ಅಲ್ಲದೇ ಇದರ ಭಾಗವೆಂಬಂತೆ 1959ರಲ್ಲಿ ದೆಹಲಿಯಲ್ಲಿ ದೂರದರ್ಶನವನ್ನು ಪ್ರಾರಂಭಿಸಲಾಯಿತು. ಆದರೆ 1976ರಲ್ಲಿ ಇದನ್ನು ರೇಡಿಯೋದಿಂದ ಪ್ರತ್ಯೇಕಿಸಲಾಯಿತು. ನಂತರ 1977ರಲ್ಲಿ ಮದ್ರಾಸ್Àನಿಂದ ಎಫ್.ಎಂ ಪ್ರಸಾರವನ್ನು ಪ್ರಾರಂಭಿಸಲಾಯಿತು.

ಇಂದು ದೃಕ್ ಶ್ರವ್ಯ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾದರೂ ಆಕಾಶವಾಣಿಯು ತನ್ನದೇ ಆದ ಶ್ರೋತೃವರ್ಗವನ್ನು ಹೊಂದಿದೆ. ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಆಶಯವನ್ನು ಹೊಂದಿರುವ ಆಕಾಶವಾಣಿಯು ಇಂದು ದೇಶದಲ್ಲಿ 600ಕ್ಕೂ ಅಧಿಕ ಬಾನುಲಿ ಕೇಂದ್ರಗಳನ್ನು ಹೊಂದಿದೆ. 24 ಪ್ರಮುಖ ಹಾಗೂ 146 ಉಪಭಾಷೆಗಳಲ್ಲಿ ಆಕಾಶವಾಣಿಯಿಂದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಆದುದರಿಂದ ರೇಡಿಯೋ ಇಂದು ನಮಗೆ ಅತೀ ಅಗತ್ಯ ಹಾಗೂ ಅನಿವಾರ್ಯವಾದ ಮಾಧ್ಯಮಗಳಲ್ಲಿ ಒಂದಾಗಿದೆ.

ಅರ್ಥಪೂರ್ಣ ಸರ್ವವ್ಯಾಪಿಯಾದ ರೇಡಿಯೋ ಅಪರಿಮಿತ ವ್ಯಾಪ್ತಿ ಹೊಂದಿದ್ದು ಕ್ಷಣಾರ್ಧದಲ್ಲಿ ಅಪಾರ ಜನರನ್ನು ತಲುಪಬಲ್ಲ ಸಾಮಥ್ರ್ಯ ಹೊಂದಿದೆ. ಸ್ಥಳೀಯ ಪ್ರಸ್ತುತತೆ, ಸರಳತೆ, ಕಡಿಮೆ ವೆಚ್ಚ, ಆತ್ಮೀಯತೆಯನ್ನು ಹೊಂದಿದ ರೇಡಿಯೋ ಇಂದಿಗೂ ಜನಸಾಮಾನ್ಯರ ಆಪ್ತಮಿತ್ರ, ಒಡನಾಡಿ, ಹಿತಚಿಂತಕವಾಗಿದ್ದು ಎಲ್ಲ ವಯೋಮಾನದ ಶ್ರೋತೃಗಳ ಮನಗೆದ್ದಿದೆ. ಇದು ನೈಸರ್ಗಿಕ ಇಲ್ಲವೇ ಮಾನವ ನಿರ್ಮಿತ ವಿಕೋಪ ಸಂಭವಿಸಿದಾಗ ಆಪದ್ಬಾಂಧವವಾಗಿದೆ. ಸಂಕಷ್ಟದಲ್ಲಿದ್ದವರಿಗೆ ಕಣ್ಣು ಕಿವಿಯಂತಾಗಿದೆ.

“ರೇಡಿಯೋ ಆಶ್ಚರ್ಯಕರವಾದ ಮಹಾನ್ ಶಕ್ತಿ, ಅದರಲ್ಲಿ ನಾನು ಭಗವಂತನ ಅದ್ಭುತ ಶಕ್ತಿಯನ್ನು ಕಾಣುತ್ತೇನೆ”ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ. ನಮ್ಮ ದೇಶದ ಮಾನ್ಯ ಪ್ರಧಾನಮಂತ್ರಿಗಳೂ ಕೂಡ ತಮ್ಮ ಮನದಾಳದ ಮಾತುಗಳನ್ನು ತಿಳಿಸಲು ರೇಡಿಯೋವನ್ನು ಆಯ್ಕೆಮಾಡಿದ್ದು ಶ್ಲಾಘನೀಯ. ಅಲ್ಲದೇ ಅವರು “ರೇಡಿಯೋ ಸಕ್ರೀಯ ಹಾಗೂ ರೋಮಾಂಚಕಾರಿ ಮಾಧ್ಯಮವಾಗಿದ್ದು ನನ್ನ ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಹಲವಾರು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಇದೊಂದು ಅದ್ಭುತ ಅನುಭವವಲ್ಲದೇ ರೇಡಿಯೋವನ್ನು ಉಳಿಸಿ ಬೆಳೆಸಿ” ಎಂದಿದ್ದಾರೆ.

ರೇಡಿಯೋ ಜಗತ್ತಿಗೆ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ ನವಂಬರ್ 2011 ರಲ್ಲಿ ಜರುಗಿದ ಯುನೆಸ್ಕೋದ 36ನೇ ಸಾಮಾನ್ಯ ಸಭೆಯಲ್ಲಿ ಫೆಬ್ರುವರಿ 13ನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ರೇಡಿಯೋ ನಮಗೆ ಮನರಂಜನೆಯನ್ನು ನೀಡುವುದಲ್ಲದೇ ಶಿಕ್ಷಣ, ಮಾಹಿತಿ, ನೀಡುವುದರೊಂದಿಗೆ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ತೊಟ್ಟಿಲಾಗಿದೆ. ನಮ್ಮ ನಾಡಿನ ಉಳಿವು ಬೆಳವಣಿಗೆಯಲ್ಲಿ ರೇಡಿಯೋ ಪ್ರಮುಖ ಪಾತ್ರವಹಿಸುತ್ತದೆ.

ಎಂ.ಎಚ್.ಮೊಕಾಶಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ವಿಶ್ವ ರೇಡಿಯೋ ದಿನಾಚರಣೆ: ಎಂ.ಎಚ್.ಮೊಕಾಶಿ

Leave a Reply

Your email address will not be published. Required fields are marked *