ಅನಿ ಹನಿ

ವಿಶ್ವ ಯೋಗ ದಿನ: ಅನಿತಾ ನರೇಶ್ ಮಂಚಿ.

ಅವರ ಹೆಸರು ಪಾರ್ವತೀಪತಿಯೆಂದು ಗೊತ್ತಿದ್ದದ್ದು ಪೋಸ್ಟ್ ಮ್ಯಾನ್ ಮತ್ತು ಅವರು ಕೆಲಸ ಮಾಡುತ್ತಿದ್ದ ಆಫೀಸಿನ ಬಾಸ್ ಇಬ್ಬರಿಗೇ..  ಇವರೂ ಕೂಡಾ ಆ ಹೆಸರನ್ನು ಕೊಂಚ ತಿರುಚಿ ಪರ್ವತ ಪತಿ ಎಂದು ನಗೆಯಾಡುತ್ತಿದ್ದುದು ಪಾರ್ವತೀಪತಿಯವರಿಗೆ ತಿಳಿಯದ ವಿಷಯವೇನೂ ಆಗಿರಲಿಲ್ಲ. ನಮಗಂತೂ ಅವರ ಹೆಸರು ನಾಮ್ ಕೇ ವಾಸ್ತೆ ಮಾತ್ರ ಬೇಕಾಗುವುದರಿಂದ  ನಾವು  ಆ ಹೆಸರನ್ನು ಬಬ್ಬಲ್ ಗಮ್ಮಿನಂತೆ ಅಷ್ಟುದ್ದ ಎಳೆಯದೇ ಪಿ ಪಿ ಎಂದು ಶಾರ್ಟ್ ಆಗಿ ಕರೆಯೋಣ.  

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಈಗ ಹಲವು ವಿಷಯಗಳಲ್ಲಿ ಸುದ್ದಿ ಮಾಡುತ್ತಿದ್ದು ಸದ್ಯದ ಸುದ್ದಿಯಾಗಿ ನಮ್ಮ ಅತ್ಯಮೂಲ್ಯ ವಿದ್ಯೆಯಾದ ಯೋಗಕ್ಕೊಂದು ದಿನವನ್ನು ಗುರುತಿಸಿ ಆ  ದಿನವನ್ನು ವಿಶ್ವವೆಲ್ಲಾ  ಯೋಗ ದಿನವನ್ನಾಗಿ ಆಚರಿಸುವಂತೆ ಮಾಡಿದ್ದು ಸಣ್ಣ ಸಾಧನೆಯೇನೂ ಅಲ್ಲ. 
ಯೋಗ ದಿನಕ್ಕೂ ಪಿ ಪಿ ಗೂ ಏನ್ರೀ ಸಂಬಂಧ ಅಂತ ಹರಿ ಹಾಯಬೇಡಿ. ಪಿ ಪಿ ಸುದ್ದಿಯನ್ನು ಏಕಾಏಕಿ ಬಿಟ್ಟು ಯೋಗದ ವಿಷಯವನ್ನು ಎಳೆದು ತಂದಿದ್ದಕ್ಕೆ ಸಕಾರಣವಿದೆ. ನಿಮಗೆ ಮೊದಲೇ ತಿಳಿಸಿದಂತೆ ಅವರ ಹೆಸರು ಗೊತ್ತಿರುವವರ ಬಗ್ಗೆ ಹೇಳಿದೆ. ಹಾಗಾದ್ರೆ ಉಳಿದವರು ಅವರನ್ನು ಯಾವ ಹೆಸರಿನಲ್ಲಿ ಗುರುತಿಸುತ್ತಾರೆ ಎಂಬ ಕುತೂಹಲ ನಿಮ್ಮಲ್ಲೂ ಮೂಡಿರಬೇಕಲ್ಲ. ಅವರನ್ನು ಜನ ಗುರುತಿಸುವುದು ಸರಸೋತಮ್ಮನ ಗಂಡ ಎಂಬ ಹೆಸರಿನಲ್ಲಿ. ಇದಕ್ಕೂ ಕಾರಣವಿದೆ.

ಗಂಡ ಹೆಂಡತಿ ಜೊತೆಯಾಗಿ ಹೋದರೆ ಹತ್ತು ಎಂದು ಬರೆದಂತೆ ಕಾಣುವ ಜೋಡಿ ಜೀವಗಳಿವು. ಸರಸೋತಮ್ಮ ಸುಮೋ ಪೈಲ್ವಾನರನ್ನು ನಾಚಿಸುವಂತೆ ಬರೋಬ್ಬರಿ ನೂರಾ ಎಂಟು ಕೆ.ಜಿ ತೂಕವೂ ಐದೂವರೆ ಅಡಿ ಉದ್ದವೂ ಉದ್ದಕ್ಕೆ ಸರಿಯಾಗಿ ಮೂರೂವರೆ ಅಡಿ ಅಗಲವನ್ನೂ ಹೊಂದಿದ ಭೂಮಿ ತೂಕದ ಹೆಂಗಸಾದರೆ ಪಿ ಪಿ ಯವರದ್ದು ನೇರ ಅಡಿಕೆ ಮರದಂತಹ ರಚನೆ ಹೊಂದಿದ ಆರಡಿ ಉದ್ದದ ಅರ್ಧ ಅಡಿ ಅಗಲದ ಶರೀರ. 

ತಮ್ಮನ್ನು ಹೆಂಡತಿಯ ಹೆಸರಿನಲ್ಲಿ ಗುರುತಿಸುವುದಕ್ಕೆ ಪಿ ಪಿ ಯವರ ವಿರೋಧವಿದ್ದರೂ ಅದನ್ನು ಸರಸೋತಮ್ಮನ ಎದುರಿನಲ್ಲಿ ಪ್ರದರ್ಶಿಸುವ ಧೈರ್ಯ ಅವರಲ್ಲಿರಲಿಲ್ಲ. ಯಾಕೆಂದರೆ ಸರಸೋತಮ್ಮನ ಅಪ್ಪ ತಮ್ಮ ಮಗಳನ್ನು ಕೊಟ್ಟು ಆಸ್ತಿಯನ್ನು ಕೊಟ್ಟು ಉದ್ಯೋಗ ತೆಗೆಸಿಕೊಟ್ಟು ಪಿ ಪಿ ಯವರನ್ನು ಉದ್ಧರಿಸಿದ ಉದಾರ ಪುರುಷರಾಗಿದ್ದ ಕಾರಣ ಪಿ ಪಿ ಯವರ ಗಂಟಲಿನಿಂದ ಸ್ವರ ಹೊರಡುವಂತಿರಲಿಲ್ಲ. 
ಆದರೂ ಸರಸೋತಮ್ಮನ ತೂಕ ಇಳಿಸಲು ಪಿ ಪಿ ಯವರು ಪಡ ಬಾರದ ಕಷ್ಟಗಳನ್ನೆಲ್ಲಾ ಪಟ್ಟು ತಮ್ಮ ತೂಕ ಇಳಿಸಿಕೊಂಡು ಬಿ ಪಿ ಏರಿಸಿಕೊಂಡಿದ್ದರು. 

ಇದೀಗ ವಿಶ್ವವೇ ಆಚರಿಸುವ ಯೋಗ ದಿನವನ್ನು ತಮ್ಮ ಹೆಂಡತಿಯ ಆರೋಗ್ಯಕ್ಕಾಗಿ ಬಳಸಿಕೊಳ್ಳುವ ಬಗ್ಗೆ ಪಿ ಪಿ ಯವರಿಗೆ ಹೊಳೆದದ್ದೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. 

ಸರಸೋತಮ್ಮ ಅನಿವಾರ್ಯ ಕಾರಣಗಳಿಂದ ಟಿ ವಿ ಯ ಮುಂದಿನಿಂದ ಎದ್ದಾಗ ಅಲ್ಲಿದ್ದ ರಿಮೋಟನ್ನು ಹಿಡಿದು ಯೋಗದ ಚ್ಯಾನೆಲ್ಲಿಗೆ ತಿರುಗಿಸುತ್ತಿದ್ದರು. ಆಕೆಯೂ ಅದನ್ನು ಒಮ್ಮೆ ನೋಡಿದಂತೆ ಮಾಡಿ ಕೂಡಲೇ ತನ್ನ ಅಳುಬುರುಕ ಸೀರಿಯಲ್ ಬರುವ ಚ್ಯಾನೆಲ್ಲಿಗೆ ಹಾಕುತ್ತಿದ್ದರು. ಆದರೆ ಪಿ ಪಿ ಯವರ ಸತತ ಪ್ರಯತ್ನಗಳ ಫಲವೇನೋ ಎಂಬಂತೆ ಒಂದು ದಿನ ಆಕೆ ಯೋಗ ಕಾರ್ಯಕ್ರಮದ ಚ್ಯಾನೆಲ್ಲನ್ನು ಬದಲಾಯಿಸದೇ ನೋಡ ತೊಡಗಿದರು. 

ಅದೇ ದಿನ ಶಾಪಿಂಗಿಗೆ ಪಿ ಪಿ ಯವರನ್ನು ಎಳೆದೊಯ್ದ ಸರಸೋತಮ್ಮ ಮರಳಿ  ಬರುವಾಗ ಒಂದಕ್ಕೆ ಮೂರರಷ್ಟು ಕ್ರಯ ಕೊಟ್ಟು  ಯೋಗ ಮಾಡಲೆಂದೇ ಇರುವ ಡ್ರೆಸ್‍ಗಳ ಕಟ್ಟು ಹೊತ್ತ ಪಿ ಪಿ ಬಸವಳಿದು ಬೆಂಡಾಗಿದ್ದರು. 

ಆದರೇನು  ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಯೋಗ ಡ್ರೆಸ್ ತೆಗೆಸಿಕೊಡುತ್ತಾರೆ ಎಂಬ ಹೊಸ ಟ್ಯಾಗ್ ಲೈನ್ ನ ಅಡಿಯಲ್ಲಿ ಖರೀದಿಸಿದ ಬಟ್ಟೆಗಳಾದ ಕಾರಣ  ಗಂಡನ ಬಗ್ಗೆ ಹೆಮ್ಮೆ ತಾಳಿದ ಸರಸೋತಮ್ಮನ ಪ್ರಸನ್ನ ಚಿತ್ತ ಅವರನ್ನೂ ಪ್ರಸನ್ನವಾಗಿಸಿತ್ತು.  

ಹೀಗಾದರೂ ಸರಿ ಅವಳು ಯೋಗ ಮಾಡಿ ನನ್ನಂತೆ ಜೀರೋ ಸೈಜಿಗೆ ಬಂದರೆ ಎಂಬ ಹೊಸ ಕನಸು ಪಿ ಪಿ ಯವರನ್ನು ಹಗಲು ಇರುಳು ಕಾಡತೊಡಗಿತು. 

ವಿಶ್ವ ಯೋಗ ದಿನದಂದು ನೀನು ಕೂಡಾ ಯೋಗ ಮಾಡಲು ಪ್ರಾರಂಭಿಸಿದರೆ ಅದೊಂದು ಐತಿಹಾಸಿಕ ದಾಖಲೆಯಾಗಿ ಉಳಿಯುತ್ತದೆ. ಎಂದು ಪಿ ಪಿ ಯವರೂ ತಮ್ಮ ಹೆಂಡತಿಯನ್ನು ಹುರಿದುಂಬಿಸಿದರು. ಬಾಯಲ್ಲಿರುವ ಹುರಿಗಾಳಿನಿಂದಾಗಿ ಮಾತನಾಡಲು ಸಾಧ್ಯವಾಗದೇ ಉದ್ದುದ್ದಕ್ಕೆ ತಲೆ ಆಡಿಸಿದ ಹೆಂಡತಿಯನ್ನು ಕಂಡು ಪಿ ಪಿ ಗೆ ಸಮಾಧಾನವಾಯಿತು. 

ಹೆಂಡತಿಗೆ ಇನ್ನಷ್ಟು ಉತ್ತೇಜನ ನೀಡಲು ತಾವೂ ಆ ದಿನದಿಂದ ಯೋಗಾಭ್ಯಾಸ ಪ್ರಾರಂಭಿಸುವುದಾಗಿ ಹೇಳಿದರು. 

ಬೆಳ್ಳಂಬೆಳಗ್ಗೆಯೇ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ  ಖಾಲಿ ಹೊಟ್ಟೆಯಲ್ಲಿ ಪಿ ಪಿ ಸಿದ್ಧವಾದರೆ ಸರಸೋತಮ್ಮನವರು ತಮ್ಮ ಮೈಯನ್ನು ಹೇಗೋ ಹೊಸ ಬಟ್ಟೆಯೊಳಗೆ ತೂರಿಸಿಕೊಂಡು ಮುನ್ನಾದಿನವೇ ತಂದಿಟ್ಟಿದ್ದ ಬ್ರೆಡ್ಡಿಗೆ ಒಂದಿಷ್ಟು ಬೆಣ್ಣೆ,ಒಂದಷ್ಟು ಜ್ಯಾಮ್ ಸವರಿ ತಟ್ಟೆಯ ಮೇಲೆ ಪೇರಿಸಿದರು. ಪಕ್ಕದಲ್ಲೇ ಒಂದು ದೊಡ್ಡ ಚೆಂಬು ತುಂಬುವಷ್ಟು ಕಾಫಿಯನ್ನೂ ಇರಿಸಿಕೊಂಡರು. ಟಿ ವಿ ಆನ್ ಮಾಡಿ ಯೋಗ ಕಾರ್ಯಕ್ರಮ ಆರಂಭ ಆದೊಡನೇ ಸೋಫಾದ ಮೇಲೆ ಕಾಲು ಚಾಚಿ  ಬ್ರೆಡ್ ತಿನ್ನುತ್ತಾ ಕಾಫಿ ಕುಡಿಯುತ್ತಾ ಮಂತ್ರಿ ಮಹೋದಯರು ಯೋಗ ಮಾಡುವುದನ್ನು ನೋಡುತ್ತಾ ಕುಳಿತು ಬಿಟ್ಟರು. 
ಈ ವೈಪರೀತ್ಯವನ್ನು ನೋಡಿದ ಪಿ ಪಿ ಇನ್ನೂ ಶವಾಸನದಲ್ಲಿಯೇ ಮಲಗಿದ್ದಾರೆ ಎಂಬುದು ಇದೀಗ ಬಂದ ಸುದ್ದಿ. 
-ಅನಿತಾ ನರೇಶ್ ಮಂಚಿ 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *