ವಿಜ್ಞಾನ-ಪರಿಸರ

ವಿಶ್ವ ಜನಸಂಖ್ಯಾ (ಸ್ಪೋಟ!) ದಿನಾಚರಣೆ – ಜುಲೈ ೧೧: ಅಖಿಲೇಶ್ ಚಿಪ್ಪಳಿ


ತುಂಬಾ ನೇರವಾಗಿ ಹೇಳಬೇಕೆಂದರೆ, ನೊಣ, ಸೊಳ್ಳೆ, ಇಲಿ-ಹೆಗ್ಗಣ, ತಿಗಣೆ, ಉಣ್ಣಿ, ಊಜಿನೊಣ ಇತ್ಯಾದಿಗಳು ಈ ಸೃಷ್ಟಿಯ ರಾಕ್ಷಸ ರೂಪಗಳು. ಇವುಗಳನ್ನು ಸಂಹಾರ ಮಾಡಲು ಯಾವುದೇ ಆಯುಧಗಳಿಲ್ಲ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕ ಬಲ್ಲ ಸಾಮರ್ಥ್ಯವನ್ನು ಈ ರಾಕ್ಷಸ ರೂಪಿಗಳು ಹೊಂದಿವೆ. ಯಾವುದೇ ರಾಸಾಯನಿಕಗಳಿಂದಲೂ ಇವುಗಳನ್ನು ನಾಶ ಮಾಡಲು ಆಗದು. ಇವುಗಳ ಸಂಖ್ಯೆಯೂ ಅಧಿಕ. ಇದೇ ಸಾಲಿಗೆ ಇನ್ನೊಂದು ಜೀವಿ ಸೇರ್ಪಡೆಯಾಗಿದೆ. ಅದೇ ಆಧುನಿಕ ಮಾನವ. ಕಳೆದೊಂದು ಶತಮಾನದಲ್ಲಿ ತನ್ನ ಸಂಖ್ಯೆಯನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿಕೊಂಡು ಭೂಮಿಯ ಇತರೆ ಜೀವಿಗಳ ಪಾಲಿಗೆ ಕಂಟಕನಾಗಿ ಮೆರೆಯುತ್ತಿದ್ದಾನೆ. ಜುಲೈ ೧೧ ೧೯೮೭ರಂದು ಈ ಭೂಮಿಯ ಜನಸಂಖ್ಯೆ ೫೦೦ ಕೋಟಿ ಮುಟ್ಟಿತು. ಇದರ ಅಂಗವಾಗಿ ಪ್ರತಿ ವರ್ಷ ಇದೇ ದಿನದಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಪ್ರತಿ ಸೆಂಕೆಂಡಿಗೂ ಮಕ್ಕಳು ಹುಟ್ಟುತ್ತಲೇ ಇದ್ದಾರೆ. ಪ್ರಸ್ತುತ ಜಗತ್ತಿನ ಜನಸಂಖ್ಯೆ ೭,೧೭೧,೦೬೧,೬೯೮ ಎಂದು ಅಂದಾಜಿಸಿದ್ದಾರೆ. ಈಗ ನೀವು ಈ ಲೇಖನವನ್ನು ಓದಿ ಮುಗಿಸುವಷ್ಟರಲ್ಲಿ ಈ ಸಂಖ್ಯೆ ಹಲವು ಸಾವಿರಗಳಷ್ಟು ಹೆಚ್ಚಾಗಿರುತ್ತದೆ. ಇಡೀ ವಿಶ್ವದ ಒಟ್ಟು ವಿಸ್ತೀರ್ಣ (ಸಮುದ್ರ-ಸರೋವರಗಳನ್ನೂ) ಸೇರಿ ೧೯೬.೯ ಮಿಲಿಯನ್ ಚದರ ಮೈಲಿಗಳು. ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ಗಾತ್ರವೇನು ಹೆಚ್ಚಾಗುವುದಿಲ್ಲ.

ಜಗತ್ತಿನಲ್ಲಿ ದಿನಂಪ್ರತಿ ಸುಮಾರು ೩೭೦೦೦೦ ಮಕ್ಕಳು ಜನ್ಮ ತಾಳುತ್ತಾರೆ. ಇದೇ ಗತಿಯಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದರೆ, ೨೦೫೦ ಇಸವಿಯ ಹೊತ್ತಿಗೆ ಭೂಮಿಯ ಜನಸಂಖ್ಯೆ ೯೦೦ ಕೋಟಿಗಳನ್ನೂ ಮೀರುತ್ತದೆ. ಜನಸಂಖ್ಯೆ ಹೆಚ್ಚಳವೆಂದರೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ, ಎಲ್ಲಾ ತರಹದ ವಸ್ತಗಳಿಗೂ ಬೇಡಿಕೆ, ನೀರು-ಆಹಾರ ಇತ್ಯಾದಿಗಳಿಗಾಗಿ, ಒಟ್ಟಾರೆ ಜನಸಂಖ್ಯೆ ಹೆಚ್ಚಾಗುವುದರಿಂದಾಗಿ ನಿಸರ್ಗದ ಮೇಲೆ ನಿಶ್ಚಿತವಾಗಿ ಪ್ರತಿಕೂಲ ಪರಿಣಾಮಗಳಾಗುತ್ತವೆ. ಎಲ್ಲಾ ತರಹದ ಮಾಲಿನ್ಯಗಳ ಪ್ರಮಾಣ ಹೆಚ್ಚಾಗುತ್ತದೆ. ದೈನಂದಿನ ಅತೀ ಅಗತ್ಯಗಳಾದ ನೀರು-ಆಹಾರಕ್ಕೇ ತತ್ವಾರವಾಗುತ್ತದೆ. ಕೆಲವರ ಪ್ರಕಾರ ಜನಸಂಖ್ಯೆ ಹೆಚ್ಚಳದಿಂದ ಈ ಭೂಮಿಯೇನು ಮುಳುಗಿ ಹೋಗುವುದಿಲ್ಲ. ಇದೇ ಜನಸಂಖ್ಯೆಯನ್ನು ನೈತ್ಯಾತ್ಮಕ ದೃಷ್ಟಿಯಿಂದ ನೋಡದೆ, ಧನಾತ್ಮಕ ದೃಷ್ಟಿಯಿಂದ ನೋಡಿದರೆ, ಮಾನವ ಸಂಪನ್ಮೂಲ ಒಂದು ಶಾಪವಲ್ಲ ಬದಲಿಗೆ ಜನಸಂಖ್ಯೆಯೊಂದು ವರ ಎನ್ನುತ್ತಾರೆ. ಹತ್ತು ಜನರಿರುವ ಒಂದು ಕುಟುಂಬದ ಎಲ್ಲರೂ ಸೇರಿ ದುಡಿದರೆ ಜನಸಂಖ್ಯೆಯೊಂದು ವರದಾನವಾಗಬಲ್ಲದು, ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಬಲ್ಲದು. ವೃದ್ಧರು ಮತ್ತು ಚಿಕ್ಕಮಕ್ಕಳನ್ನು ದುಡಿಯಲು ಹಚ್ಚುವುದು ತರವಲ್ಲ. ಚೀನಾದಂತಹ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಉಣ್ಣುವ ಬಾಯಿಗಳು ಹೆಚ್ಚಾಗಿ, ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇವತ್ತಿನ ವೈದ್ಯಲೋಕದ ಆವಿಷ್ಕಾರದ ಫಲಿತಾಂಶವನ್ನು ನೋಡುವುದಾದಲ್ಲಿ, ಜನರ ಆಯುಸ್ಸು ಹೆಚ್ಚಾಗುತ್ತಿದೆಯಾದರೂ, ಗುಣಮಟ್ಟದ ಜೀವನ ಕಂಡುಕೊಳ್ಳುವಲ್ಲಿ ವಿಫಲವಾಗುತ್ತಿವೆ. ಅಂದರೆ ಕಾಯಿಲೆಯಿಂದ ನರಳುವವರ ಸಂಖ್ಯೆಯೂ ಹೆಚ್ಚುತ್ತದೆ. ಅವರಿಗಾಗಿ ಔಷಧೋಪಚಾರಗಳು ದುಬಾರಿಯಾಗಿ ಪರಿಣಮಿಸುತ್ತವೆ. ಉಳ್ಳವರು ಮಾತ್ರ ತುಸು ನೆಮ್ಮದಿಯ ಜೀವನ ಸಾಗಿಸಬಹುದಾದ ವಾತಾವರಣ ನಿರ್ಮಾಣಗೊಂಡಿದೆ. ಶುದ್ಧ ನೀರು, ಶುದ್ಧ ಗಾಳಿ ಹಾಗೂ ಶುದ್ಧ ಆಹಾರಗಳು ಮರೀಚಿಕೆಯಾಗಲಿವೆ.

ಹುಟ್ಟು ಮತ್ತು ಸಾವು ಇವೆರಡರ ಮಧ್ಯದ ಅಂತರ ಹೆಚ್ಚಾಗುತ್ತಿದೆ. ಅಂದರೆ ಪ್ರತಿ ೧೦೦೦/೨೦ ಮಕ್ಕಳು ಜನಿಸಿದರೆ, ಸಾಯುವ ಪ್ರಮಾಣ ೧೦೦೦/೮ ಮಾತ್ರ. ಅದರಲ್ಲೂ ಜಗತ್ತಿನ ಹೆಚ್ಚು ಬಡರಾಷ್ಟ್ರಗಳಿರುವ ಏಷ್ಯಾ ಖಂಡದಲ್ಲೇ ಜನಸಂಖ್ಯೆ ಹೆಚ್ಚಳ ಅಧಿಕವಾಗುತ್ತಿದೆ. ಬರೀ ಚೀನಾ ಮತ್ತು ಭಾರತವೇ ಜಗತ್ತಿನ ಒಟ್ಟು ಪ್ರಮಾಣದ ೨/೫ ಭಾಗದಷ್ಟು ಜನಸಂಖ್ಯೆಯನ್ನು ಹೊಂದಿವೆ. ಈ ಹಿಂದೆ ಚೀನಾದಲ್ಲಿ ದಂಪತಿಗೊಂದೇ ಮಗು ಎಂಬ ತತ್ವ್ತದಡಿಯಲ್ಲಿ ಜನಸಂಖ್ಯೆಯ ನಿಯಂತ್ರಣವನ್ನು ಸಾಧಿಸಿದರು. ಆದಾಗ್ಯೂ ಇವತ್ತು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಹೆಸರಿಗೆ ಪಾತ್ರವಾಗಿದೆ. ನಾವು ಅಂದರೆ ಭಾರತ ನಂ.೨. ನಾವು ಈಗಾಗಲೇ ೧೨೭ ಕೋಟಿ ಸಂಖ್ಯೆಯನ್ನು ದಾಟಿದ್ದೇವೆ, ಅದೂ ಮಹಿಳಾ ಅಸಮಾನತೆಯೊಂದಿಗೆ. ಅಂದರೆ ರಾಷ್ಟ್ರಮಟ್ಟದ ಲಿಂಗಾನುಪಾತದಲ್ಲಿ ಪ್ರತಿ ೧೦೦೦ ಗಂಡಿಗೆ ಬರೀ ೯೪೦ ಮಹಿಳೆಯರಿದ್ದಾರೆ. ಕೇರಳವೊಂದನ್ನು ಬಿಟ್ಟರೆ ಉಳಿದೆಲ್ಲಾ ರಾಜ್ಯಗಳಲ್ಲೂ ಈ ತಾರತಮ್ಯವಿದೆ (೧೦೦೦:೧೦೫೮). ಅತಿ ಹೆಚ್ಚು ಲಿಂಗಾನುಪಾತದ ವ್ಯತ್ಯಾಸ ಇರುವ ಕೇಂದ್ರಾಡಳಿತ ಪ್ರದೇಶವಾದ ಡಿಯೂದಾಮನ್. ಇಲ್ಲಿ ಪ್ರತಿ ೧೦೦೦ ಪುರುಷರಿಗೆ ಬರೀ ೭೧೦ ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ ಈ ಪ್ರಮಾಣ ೧೦೦೦:೯೬೮. ದೇಶದ ರಾಜಧಾನಿ ದೆಹಲಿಯಲ್ಲಿ ೧೦೦೦:೮೬೬. ಬರೀ ಅಂಕಿ-ಅಂಶಗಳನ್ನೇ ಹೇಳುತ್ತಾ ಹೋದರೆ ಓದುಗರೀಗೂ ತಲೆಬೇನೆಯಾದೀತು. ಆದರೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು ಗಮನಿಸಿದರೆ ಲಿಂಗಾನುಪಾತದ ತಾರತಮ್ಯವೂ ಒಂದು ಕಾರಣವಾದೀತು. ಇರಲಿ ವಿಷಯಾಂತರವಾಗುವುದು ಬೇಡ.

೨೦೫೦ರ ಹೊತ್ತಿಗೆ ಜಗತ್ತಿನ ಜನಸಂಖ್ಯೆ ೯೦೦ ಕೋಟಿ ದಾಟುತ್ತದೆ. ಇವರಿಗೆ ಆಹಾರ ಒದಗಿಸುವ ಬಗೆ ಹೇಗೆ? ಇಡೀ ಜೀವಸಂಕುಲವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಅತ್ಯಾಧುನಿಕ ತಂತ್ರಜ್ಞಾನ, ರಾಸಾಯನಿಕ ಒಳಸುರಿಗಳು ಕೆಲಸಕ್ಕೆ ಬರುವುದಿಲ್ಲ. ನೈಸರ್ಗಿಕ ವಿಕೋಪಗಳು ಅಂದರೆ ಅತಿವೃಷ್ಟಿ-ಅನಾವೃಷ್ಟಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಕಡೇಪಕ್ಷ ಈಗಿರುವ ನಿಸರ್ಗವನ್ನು ಸಂಪೂರ್ಣ ಕಾಪಿಟ್ಟುಕೊಂಡೇ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಯಾಗಬೇಕು. ಮುಂದಿನ ಆರೋಗ್ಯವಂತ ಪೀಳಿಗೆಯನ್ನು ಸೃಷ್ಟಿಸುವ ಕಾಯಕವನ್ನು ಈಗಲೇ ಪ್ರಾರಂಭಿಸಬೇಕು. ಈಗಾಗಲೇ ಕೃಷಿ ಸಂಬಂಧಿತ ಕಾರ್ಯಗಳಿಂದಾಗಿ ವಾತಾವರಣ ಹದಗೆಟ್ಟಿದೆ. ಹವಾಮಾನ ವೈಪರೀತ್ಯಕ್ಕೆ ಕೃಷಿ ಚಟುವಟಿಗಳೂ ಬಹುಮುಖ್ಯ ಕಾರಣವೆಂದು ಈಗಾಗಲೇ ಸಾಬೀತಾಗಿದೆ. ಕೃಷಿಯಲ್ಲಿ ಬಳಸುವ ವಿಷಕಾರಕ ರಾಸಾಯನಿಕಗಳು ನಮ್ಮ ಕೆರೆ-ಕುಂಟೆ, ನದಿ, ಸಮುದ್ರಗಳನ್ನು ಕಲುಷಿತಗೊಳಿಸಿವೆ. ಭೂಒತ್ತುವರಿಯಿಂದಾಗಿ ನಮ್ಮ ಅಮೂಲ್ಯ ಅರಣ್ಯ ಮತ್ತು ವನ್ಯಸಂಪತ್ತು ಆಪತ್ತಿನಲ್ಲಿದೆ. 

ಇತಿಹಾಸವನ್ನು ನೋಡಿದಾಗ ಯಾವಾಗ್ಯೂ ಆಹಾರ ಉತ್ಪಾದನೆಯನ್ನು ಹೆಚ್ಚು ಮಾಡುವುದೆಂದರೆ, ಕಾಡನ್ನು ನಾಶ ಮಾಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದೇ ಆಗಿದೆ. ಹೀಗೆ ಅರಣ್ಯ ನಾಶ ಮಾಡುವುದರ ಮೂಲಕ ಕೃಷಿ ಚಟುವಟಿಕೆಗಳೆಂದರೆ ಪ್ರತ್ಯಕ್ಷವಾಗಿ ಪೃಥ್ವಿಯನ್ನು ನಾಶ ಮಾಡಿದಂತೆ ಎಂಬ ಹಣೆಪಟ್ಟಿಗಳಿಸಿದೆ. ಈಗಿರುವ ಸವಾಲು ಎಂದರೆ ಪರಿಸರದ ಮೇಲಿನ ಕೃಷಿಯ ಹೆಜ್ಜೆ ಗುರುತನ್ನು ನಿಲ್ಲಿಸುವುದೇ ಆಗಿದೆ. ಮೊಟ್ಟ ಮೊದಲಿಗೆ ಯಾವುದೇ ಕಾರಣಕ್ಕೂ ಕೃಷಿಗಾಗಿ ಅರಣ್ಯ ನಾಶ ಸಲ್ಲ ಎಂಬುದು ಜಾಗತಿಕ ಮಂತ್ರವಾಗಬೇಕು. ಅರಣ್ಯ ಒತ್ತುವರಿಯನ್ನು ನಿಲ್ಲಿಸಲೇ ಬೇಕು. ಇಷ್ಟು ಅರಣ್ಯ ನಾಶ ಮಾಡಿ ಕೃಷಿಭೂಮಿಯನ್ನು ಹೆಚ್ಚು ಮಾಡಿದಾಗಲೂ ಕೂಡ ಪ್ರಪಂಚದ ೮೫೦ ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎನ್ನುತ್ತದೆ ಅಂಕಿ-ಅಂಶ. ಹಾಗಾದರೆ ಬೆಳೆಯುವ ಬೆಳೆ ಎಲ್ಲಿ ಹೋಗುತ್ತದೆ? ಕೃಷಿಯಿಂದ ಬರುವ ಬೆಳೆಗಳ ಹೆಚ್ಚಿನಂಶ ದನದ ಮೇವಿಗಾಗಿ, ಮಾಂಸಕ್ಕಾಗಿ ಸಾಕುವ ಪ್ರಾಣಿಗಳ ಹೊಟ್ಟೆ ತುಂಬಲು, ನಾಟಕ್ಕಾಗಿ ಮತ್ತು ಎಣ್ಣೆಗಾಗಿ ವಿನಿಯೋಗವಾಗುತ್ತಿದೆ. ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕಾಗಳು ೧೯೬೦ರ ದಶಕದಲ್ಲಿ ಹಸಿರು ಕ್ರಾಂತಿ ಮಂತ್ರ ಜಪಿಸಿದವು. ಇದರ ಪರಿಣಾಮ ಹೆಚ್ಚು-ಹೆಚ್ಚು ರಸಗೊಬ್ಬರ, ಹೆಚ್ಚು-ಹೆಚ್ಚು ಕೀಟನಾಶಕಗಳನ್ನು ಉಪಯೋಗಿಸಿ, ನೆಲ-ಜಲ-ಆಕಾಶಗಳನ್ನು ಮಲಿನಗೊಳಿಸಿ ಹೆಚ್ಚು ಆಹಾರ ಉತ್ಪಾದನೆಯನ್ನು ಸಾಕಾರಗೊಳಿಸಿದವು. ಇಂತಹ ಪ್ರಕೃತಿವಿರೋಧಿ ಕಾರ್ಯಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದವು. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಅಥವಾ ನಮ್ಮದೇ ಆದ ಬಹಳಷ್ಟು ಫಲವತ್ತಾದ ಭೂಮಿಗಳು ಹಸಿರು ಕ್ರಾಂತಿಯ ಫಲಶೃತಿಯಾಗಿ ಬರಡುಗೊಂಡಿವೆ. ಪರಿಸರಕ್ಕೆ ಧಕ್ಕೆಯಾಗದಂತಹ, ವಿನೂತನ ತಂತ್ರಜ್ಞಾನವಿಂದು ಈ ಜಗತ್ತಿನ ಅವಶ್ಯಕತೆಯಾಗಿದೆ. ಸಾವಯವ ಪದ್ಧತಿಯ ಕೃಷಿಗೆ ಆಧುನಿಕ ಕೃಷಿಕರ ವಿರೋಧವಿದೆ. ಆಧುನಿಕ ಕೃಷಿಕರ ಅನ್ನುವುದಕ್ಕಿಂತ ಕುಲಾಂತರಿ, ಮತ್ತು ವಿಷಯುಕ್ತ ರಾಸಾಯನಿಕಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿಗಳ ವಿರೋಧವೆಂದರೆ ಸಮಂಜಸವಾದೀತು.

ಆದ್ದರಿಂದ, ಕೃಷಿಭೂಮಿಯ ವಿಸ್ತರಣೆ ಮಾಡಿ ಹೆಚ್ಚು ಆಹಾರ ಬೆಳೆಯುವುದು ಈಗಿನ ಪರಿಸ್ಥಿತಿಯಲ್ಲಿ ಸೂಕ್ತವಾಗಲಾರದು. ಲಭ್ಯವಿರುವ ಜಮೀನಿನಲ್ಲೇ ಇಳುವರಿಯನ್ನು ಹೆಚ್ಚು ಮಾಡಬೇಕಾದದು ಈ ಹೊತ್ತಿನ ತುರ್ತು ಅಗತ್ಯವಾಗಿದೆ. ಈಗ ಉತ್ಪಾದನೆಯಾಗುತ್ತಿರುವ ಕೃಷಿ ಉತ್ಪನ್ನಗಳ ಪೈಕಿ ಶೆ.೫೫ ಭಾಗ ಮಾತ್ರ ನೇರವಾಗಿ ಜನರಿಗೆ ತಲುಪುತ್ತದೆ. ಇನ್ನುಳಿದ ಶೆ.೪೫% ಭಾಗ ಮಾಂಸದ, ಹೈನುಗಾರಿಕೆ ಮತ್ತು ಮೊಟ್ಟೆಗಳ ಮೂಲಕ ಲಭಿಸುತ್ತದೆ. ಹಸಿರು ಕ್ರಾಂತಿಯ ಫಲವಾದ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಲೆಕ್ಕಾಚಾರ ಹಾಕಿ ಬಳಸದಿರುವುದು ಕೂಡ ಪರಿಸರಕ್ಕೆ ಧಕ್ಕೆ ತರುವ ಪರೋಕ್ಷ ಪ್ರಯತ್ನವಾಗಿದೆ. ಅಂದರೆ, ಆಧುನಿಕ ತಂತ್ರಜ್ಞಾನದಿಂದ ಮಣ್ಣಿನ ಗುಣಧರ್ಮಗಳನ್ನು ಲೆಕ್ಕ ಹಾಕಿ ಎಷ್ಟು ಗೊಬ್ಬರ ಬೇಕು ಎಂಬುದನ್ನು ಕರಾರುವಕ್ಕಾಗಿ ನಿರ್ಧರಿಸುವುದು. ಬೆಳೆಗಳಿಗೆ ಸಿಂಪರಣೆ ಮಾಡುವ ಅಗತ್ಯವಿಲ್ಲದಿದ್ದರೂ, ಕೀಟನಾಶಕಗಳನ್ನು ಅನಗತ್ಯವಾಗಿ ಸಿಂಪರಣೆ ಮಾಡಿ ಬೆಳೆಯನ್ನು ಹಾಳು ಮಾಡಿಕೊಳ್ಳದಿರುವುದು ಮುಂತಾದ ಪ್ರಯತ್ನಗಳು ಕೂಡ ಉತ್ತಮ ಫಲ ನೀಡಬಲ್ಲವು. ಆಧುನಿಕ ಕೃಷಿತಂತ್ರಜ್ಞಾನವು ಹೆಚ್ಚು ನೀರು ಮತ್ತು ಇತರೆ ಒಳಸುರಿಗಳನ್ನು ಬೇಡುತ್ತದೆ. ಸಾವಯವ ಪದ್ಧತಿಯಲ್ಲಿ ಒಳಸುರಿಯ ಪ್ರಮಾಣ ಕಡಿಮೆಯಾಗುವುದರಿಂದಾಗಿ ಉತ್ಪಾದನಾ ವೆಚ್ಚವೂ ಕಡಿಮೆಯಾಗಿ, ಪರಿಸರದ ಮೇಲಿನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಕಡಿಮೆ ಹನಿ – ಹೆಚ್ಚು ಬೆಳೆ ಎಂಬ ಮನೋಭಾವವನ್ನು ರೈತರು ತೋರಬೇಕಾಗಿದೆ. 

ಅಲ್ಲದೆ, ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲೂ ಜಾಗತಿಕ ಮಟ್ಟದಲ್ಲಿ  ಗಮನಹರಿಸಬೇಕಿದೆ. ಏಕೆಂದರೆ, ೧೦೦ ಗ್ರಾಂ ಬೇಳೆಯನ್ನು ಸೀದಾ ಆಹಾರ ರೂಪದಲ್ಲಿ ಬಳಸಿದಾಗ ಮುಂದಿನ ಪೀಳಿಗೆಗೆ ಸಾಕಷ್ಟು ಆಹಾರ ಲಭ್ಯವಾಗಲಿದೆ. ಇದೇ ೧೦೦ ಗ್ರಾಂ ಬೇಳೆಯನ್ನು ಹೈನುಗಾರಿಕೆಯ ಮೂಲಕ ಪಡೆದಾಗ ಅಂತಿಮವಾಗಿ ಸಿಗುವ ಲಭ್ಯವಾಗುವ ಮೊತ್ತ ಬರೀ ೪೦ ಗ್ರಾಂಗಳು ಮಾತ್ರ. ಇದೇ ರೀತಿಯಲ್ಲಿ ಮೊಟ್ಟೆಯ ರೂಪದಲ್ಲಿ ಸೇವಿಸಿದಾಗ ಸಿಗುವ ಮೊತ್ತ ೨೨ ಗ್ರಾಂ, ಚಿಕನ್ ರೂಪದಲ್ಲಿ ೧೨ ಗ್ರಾಂ ಲಭ್ಯವಾದರೆ,  ಹಂದಿಯ ಮಾಂಸದಿಂದ ೧೦ ಗ್ರಾಂ ಹಾಗೂ ದನದ ಮಾಂಸದಿಂದ ಬರೀ ೩ ಗ್ರಾಂ ಮಾತ್ರ ಲಭ್ಯವಾಗುತ್ತದೆ. ಇದಲ್ಲದೆ, ಮತ್ತೊಂದು ಅತಿದೊಡ್ಡ ಸಮಸ್ಯೆಯೆಂದರೆ, ಹಾಳಾಗುತ್ತಿರುವ ಕಚ್ಚಾ ಆಹಾರ ಉತ್ಪನ್ನಗಳು. ಪ್ರಪಂಚದ ಒಟ್ಟೂ ಆಹಾರ ಉತ್ಪಾದನೆಯ ೪೦-೫೦% ಆಹಾರ ಧಾನ್ಯಗಳು ಬಳಕೆಗೂ ಮುಂಚಿತವಾಗಿ ಹಾಳಾಗುತ್ತಿವೆ. ಲಕ್ಷೆಪಲಕ್ಷ ಟನ್ ಅಕ್ಕಿ-ಗೋಧಿಗಳು ತಿಪ್ಪೆಗುಂಡಿಗೆ ಸೇರುತ್ತಿರುವ ವಿದ್ಯಮಾನಗಳು ನಮ್ಮ ದೇಶದಲ್ಲೇ ಆಗುತ್ತಿವೆ. ಶ್ರೀಮಂತರ ಮನೆಗಳಲ್ಲಿ, ೫ ಸ್ಟಾರ್ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಹಾಳಾಗುತ್ತಿರುವ ಪ್ರಮಾಣ ಹಾಲಿ ಜಗತ್ತಿನ ೮೫೦ ಮಿಲಿಯನ್ ಹಸಿದವರ ಹೊಟ್ಟೆಯನ್ನು ತುಂಬಿಸುವುದಕ್ಕೆ ಸಮನಾಗಿದೆ.

ಹೆಚ್ಚು ಬೆಳೆ, ಹೆಚ್ಚು ಲಾಭ, ಹೆಚ್ಚು ಭೂಮಿ, ಹೆಚ್ಚು ಹಣ ಇತ್ಯಾದಿ ಮನ:ಸ್ಥಿತಿಯನ್ನು ಬಿಟ್ಟು, ಈಗಿರುವ ಭೂಪ್ರದೇಶದಲ್ಲೇ ಮುಂದಿನ ಪೀಳಿಗೆ ಆಗುವಷ್ಟು ಬೆಳೆಯುವುದಕ್ಕೆ ಸಾಧ್ಯವೆಂದು ವಿಜ್ಞಾನಿಗಳ ಅಭಿಮತವಾಗಿದೆ. ನಮ್ಮ ದೇಶದಲ್ಲೂ ಕೂಡ ಜನಸಂಖ್ಯಾ ಸ್ಪೋಟವಾಗಿದೆ. ದುಡಿಯುವ ಕೈಗಳು ಬೇಕಾದಷ್ಟಿವೆ. ಮೊನ್ನೆ ೧ ಜುಲೈ ೨೦೧೪ರಂದು ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ ೨೪ ವರ್ಷಗಳಿಗೂ ಕೆಳಗಿನ ಸುಮಾರು ೪೭ ಮಿಲಿಯನ್ ಯುವಕರು ಕೆಲಸವಿಲ್ಲದೆ ಕುಳಿತಿದ್ದಾರೆ. ಅಂದರೆ ಒಟ್ಟು ಯುವಕರ ಶೇ ೨೦ ಯುವಕರಿಗೆ ಈ ದೇಶದಲ್ಲಿ ಕೆಲಸವಿಲ್ಲವಾಗಿದೆ. ಇನ್ನುಳಿದ ೮೦% ಯುವಕರಿಗೆ  ಕೆಲವರಿಗೆ ವರ್ಷದಲ್ಲಿ ಕೆಲವೇ ತಿಂಗಳು ಮಾತ್ರ ಕೆಲಸ ಲಭ್ಯವಿದೆ ಎಂಬ ಈ ಸತ್ಯವನ್ನು ಅರಗಿಸಿಕೊಳ್ಳುವುದು ತುಸು ಕಷ್ಟವಾಗಬಹುದು. 

ಇಂತಹ ಒಂದು ಲೇಖನದಿಂದಾಗಿ ಜನಸಂಖ್ಯಾ ಸ್ಪೋಟದ ಮೇಲೆ ಯಾವುದೇ ಪರಿಣಾಮವಾಗದಿರಬಹುದು. ಆದರೂ ಮುಂದಿನ ೫೦ ಅಥವಾ ೧೦೦ ವರ್ಷಗಳಿಗೆ ಯೋಜನೆಯನ್ನು ಸಿದ್ಧಪಡಿಸುವಾಗ ಜನಸಂಖ್ಯಾ ಸ್ಪೋಟದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದು ಜಾಣತನವಾದೀತು. ಕುಟುಂಬ ಯೋಜನೆಯನ್ನು ಬಲವಂತವಾಗಿ ಹೇರುವುದು ಮಾನವ ಹಕ್ಕುಗಳ ಉಲ್ಲಂಘನೆಯಾದೀತು. ಆದರೂ ಸಹ ಸಾಮಾಜಿಕವಾಗಿ ಜಾಗೃತಿಯನ್ನುಂಟು ಮಾಡುವು ಮೂಲಕ ಸ್ವಲ್ಪ ಮಟ್ಟಿನ ಪರಿಹಾರ ಕಾಣಬಹುದಾಗಿದೆ. 

(ಅಂಕಿ-ಅಂಶಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ- ಲೇಖಕ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ವಿಶ್ವ ಜನಸಂಖ್ಯಾ (ಸ್ಪೋಟ!) ದಿನಾಚರಣೆ – ಜುಲೈ ೧೧: ಅಖಿಲೇಶ್ ಚಿಪ್ಪಳಿ

  1. ತುಂಬಾ ಉಪಯುಕ್ತ ಮಾಹಿತಿಯುಳ್ಳ ಲೇಖನ! ಹೀಗೇ ಪರಿಸ್ಥಿತಿ ಮುಂದುವರಿದರೆ, ಮುಂದೆ ಬದುಕಿ ಬಾಳಬೇಕಾದ ನಮ್ಮ ಮುಂದಿನ ಪೀಳಿಗೆಯ ಗತಿ ಏನು ಅಂತ ಭಯವಾಗುತ್ತದೆ!

  2. ಸರ್, ಬಹು ಅಮೂಲ್ಯವಾದ ಮಾಹಿತಿಯಿಂದ ಕೂಡಿದ ಲೇಖನವಾಗಿದೆ. ಇದರಿಂದ ಸಾಕಷ್ಟು ಮಾಹಿತಿಗಳು ಲಭ್ಯವಾದವು. ಬರಿ ಘೋಷಣೆ ಮೂಲಕ ಜನಸಂಖ್ಯೆ ನಿಯಂತ್ರಣ ಸಾಧ್ಯವಿಲ್ಲ, ಅದು ಎಲ್ಲರಲ್ಲಿ ಅರಿವು ಮೂಡಿದಾಗ ಮಾತ್ರ ಸಾಧ್ಯ. ಮಹತ್ವದ ಮಾಹಿತಿ ತಿಳಿಸುವ ತಮ್ಮ ಲೇಖನಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

                                                                          ದಿಗಂಬರ  ಎಂ.ಪೂಜಾರ  ಲಕ್ಷ್ಮೇಶ್ವರ. ಗದಗ ಜಿಲ್ಲೆ.

Leave a Reply

Your email address will not be published. Required fields are marked *