ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ


ಕನ್ನಡಿಯಲ್ಲಿ ಕಂಡದ್ದು ಕಾಲ

ತದೇಕ ಚಿತ್ತದಿ ಕನ್ನಡಿಯನ್ನೆ

ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ

ಕಂಡೊಂದು ನೆರಿಗೆಗೆ

ಪಿಚ್ಚೆನಿಸಿತು ಬುನಾದಿ! 

ನಾನು ಸುಳ್ಳೋ ಕನ್ನಡಿ ಸುಳ್ಳೋ

ಕಾಯದ ಕಾಲಕ್ಕೆ

ಒಡಂಬಡಿಕೆ ಪತ್ರ ಬಿಂಬಿಸುವೆ …

ಅರ್ಧ ತೆರೆದ ಬಾಗಿಲ ಸಂಧಿಯಲಿ

ಇಣುಕಿ ನಕ್ಕ ಬಾಲ್ಯ

ಈಗ ತಾಳೆ ಹಾಕಿ ಗುಣಿಸಿದರೂ,

ಗುನುಗಿದರೂ

ಉತ್ತರವಿಲ್ಲದ ಲೆಕ್ಕಾಚಾರಕ್ಕೆ

ನನ್ನ ನೋಡಿ ನಗುತ್ತದೆ ಕಂದ

ಸವೆಸಿದ ಮಜಲುಗಳ ಮುಖದಲಿ

ಬಿದ್ದರೆ ಮಾತ್ರನೇ ಚೂರಾಗುವ

ಕನ್ನಡಿಯಲಿ ಕಾಣುವ ನೂರಾರು ಮುಖಗಳು!

ಕಂಡ ಒಂದೇ ಒಂದು ಸುಕ್ಕು

ಚಹರೆ ಬಿಡಿಸಿ ಕಾಲವನ್ನೆ ಮನಗಾಣಿಸಿದೆ.

ಪ್ರತಿರೂಪ ನೋಡುವ ಹಪಾಹಪಿ

ಕಾಣದ ಕಾಲದ ಕನ್ನಡಿಯ ಚಪಲದಲ್ಲಿ

ತೇಪೆ ಹಾಕುವುದರೊಂದಿಗೆ

ಕಾಣುತ್ತಿದೆ ಮರುಹುಟ್ಟು.

ನೋಡಳಾಗದ ಬೆನ್ನ ಹಿಂದೆಗೆ

ಇನ್ನೊಂದು ಕನ್ನಡಿಯಿಟ್ಟು ನೋಡುತ್ತಿರುವೆ

ಮುಂದಿನ ತಿರುವಿಗೆ ಸೂಚನೆಯನ್ನೀಯಲು …..

-ಸಂಗೀತ ರವಿರಾಜ್


 

ಆದ ಗಾಯದ ಮೇಲೆ 

ಬಿದ್ದ ಚಾಣದ ಪೆಟ್ಟು.. 

ತಿಂದ ನೋವಿಗೆ ಸಿಡಿದ

ಕಲ್ಲೊಳಗಿಹುದೇ….

ಅಸಹಾಯಕತೆಯ

ಸಿಟ್ಟು…. ? 

 

ಬೆವೆತ ಹಣೆ ಕುಂಕುಮ 

ಕಣ್ಣಲಿಳಿದು ಬಸಿದಿದೆ.. 

ದುಡಿದೋ?! 

ದಣಿದೋ..?!

 

ನೀರ ಸೆಲೆಯ ಕಟು 'ವಿದಾಯ' 

ಶಿಲೆಯು 'ಏಕಾಂಗಿ'ಯೋ..

ದೊರೆತ 'ಏಕಾಂತ'ವೋ….!! 

 

ಅಸಲಿಗದು 

ಶಿಲೆಯೋ

ಮಾಸದ ಕಲೆಯೋ……?

ಪಲ್ಲವಿ ಹೆಗಡೆ


 

ಸಾಲು ಸಾಲು ಹನಿಗಳು …

ನಿನ್ನಷ್ಟು ಎತ್ತರಕ್ಕೆ 

ನಾ ಏರಲಾರೆ ..

ಏನು ಮಾಡಲೀ? 

ನನಗೆ ಎತ್ತರವೆಂದರೆ ಭಯ !!      

        *

ಹಗಲುಗನಸುಗಳ ಮೇಲೆನಗೆ 

ಸಂಪೂರ್ಣ ಸಾರ್ವಭೌಮತ್ವವಿದೆ!

ಎಷ್ಟೆಂದರೆ ಅದನು ಜಯಿಸಲು

ಇರುಳೇ ಬಂದು ಗುದ್ದಾಡಬೇಕಾಗುತ್ತದೆ!

            *

ನಾನು ನಿನಗಾಗಿ ಕಾಯುತ್ತೇನೆ..

ಕಾಯಿಸುವ ಇರಾದೆಯ 

ನೀನು ಹೊಂದಿರದಿದ್ದಷ್ಟು ದಿನ !

          *

ನಿನ್ನ ಬಗ್ಗೆ ತಿಳಿಯುವ 

ಕುತೂಹಲ ನನಗಿಲ್ಲ

ಏಕೆಂದರೆ ನೀನು- ನಾನೇ!! 

           *

ಹೇಗೆ ತಿಳಿಹೇಳಲಿ

ನಾ ನಿನಗೆ 

ನೀ ಹೋಗಗೊಡುತ್ತಿರುವುದು 

ವ್ಯಕ್ತಿಯನ್ನಲ್ಲ 

ನಿನ್ನದೇ ಅದೃಷ್ಟವನೆಂದು !!

            ***

~ಸುಷ್ಮಸಿ೦ಧು, ಹಾಸನ 


 

ಬಿಂಬ

ಕನ್ನಡಿಯಲಿ ನನ್ನೊಡನೆಯೇ

ಕಾಣುತ್ತಿದ್ದ ಆ ಮುಗ್ದ ಮೊಗವೆಲ್ಲಿ?

ಏನೂ ತಿಳಿಸದೇ ಕಾಲದ ಓಟವು

ವ್ಯಾಘ್ರರೂಪ ತಾಳಿತಿಲ್ಲಿ..!

 

ಮೊದಲಿನಾ ಬಿಂಬದ ಬಂಧದ

 ನಂಟು,ಅದರೊಡನೆಯ ಒಡನಾಟ..

ಕನ್ನಡಿಯಂತೇ ನಾಜೂಕು ನುಣುಪು,

ತನ್ನಂತೇ ಆದರಿಸಿ,ಗೌರವಿಸಿದ್ದೇ ತಪ್ಪು..!

 

ಎಲ್ಲವೂ ಒಡೆದಿತ್ತು,ಮುಂದೆ..

ತನ್ನದೇ ಅಜಾಗರೂಕತೆಯಲಿ..

ಈಗ ತುಣುಕುಗಳಲಿ ಕಾಣ್ವ ಸಾವಿರ ನಾನು,

ಆ ಮುಗ್ದ ಮೊಗವಿಲ್ಲಿ.. ಚೂಪು ಚೂರುಗಳಲಿ..!

 

ಇರಿವ ಮೊನೆಗಳನೆ ಒಂದುಗೂಡಿಸಿ

ನೋಡುವ ವ್ಯರ್ಥ ಪ್ರಯತ್ನವಲ್ಲಿ..

ಆ ಮೊದಲ ಕಳೆಯಿಲ್ಲ..ಇನ್ನು ನೋಡಲು,

ಮೊದಲಂತೆ ಯಾವ ಹಳೆತನವು ಜೀವಂತವಿಲ್ಲ..!!

-ರಾಣಿ.ಪಿ.ವಿ


 

ಮಡಚಿಟ್ಟ ಕನಸುಗಳ ಬಿಚ್ಚಿ ಎಣೆಸುವಾಗ 

ಕನಸೊಂದು ಇಲ್ಲದ ಅರಿವಾಯಿತು!

ನಿಂತಲೇ ಒಂದೈದು ನಿಮಿಷ ನೆನೆದು

ರೆಕ್ಕೆ ಕಟ್ಟಿಕೊಂಡು ನಭಕ್ಕೆ ಜಿಗಿದೆ

ನಭದ ತುಂಬೆಲ್ಲ ಹುಡುಕಾಟ ಅಲೆದಾಟ ದಿಟದ 

ಅರಿವಿಲ್ಲದೆ.

ಸೊರಗಿ ಸುಸ್ತಾಗಿ ಬೆಂಡಾಗಿ ಬಳಲಿದ್ದೆ, ಇದ್ದರೂ.. ರೆಕ್ಕೆ.

ಅಲ್ಲೇ ಎಲ್ಲೋ ಮೂಲೆಯೊಂದರಲ್ಲಿ ಕುಳಿತಿದ್ದ ಚಂದ್ರ 

ಕಂಡ,ಕಾಪಿಟ್ಟ ಅವನ ತೊಡೆಕಂಡು ಬೆವರಿತೊಮ್ಮೆ ಮುಖ,

ಕೊಂಚ ಹತ್ತಿರಕ್ಕೆ ಬಂದು ನೋಡಿದೆ ಅರೆ! ನನ್ನದೇ ಕನಸು.

ಕರಿ ಬಟ್ಟೆತೊಟ್ಟ ಅದೇ ಕನಸು, ಚಂದ್ರ ತೊಡೆಯ

ಮೆಲಾಕಿಕೊಂಡು ತಟ್ಟುತ್ತಿದ್ದ ಕನಸು ನಿದಿರೆಗೆ

ಜಾರಿತ್ತು.

-ನವೀನ್ ಪವಾರ್


 

ನಿಸರ್ಗದಲ್ಲಿ

ಸುಳಿಗಾಳಿಯೆ ರವಿಯೊಂದಿಗೆ

ಬಿರುಸಿಂದ ನುಗ್ಗಿ ಭಾ…

ವರ್ಣ ಮೌಡ್ಯ ಮನಗಳ

ಬುಡ ಸಮೇತ ಕಿತ್ತೊಗೆಯಲು

 

ಅಸಹ್ಯ ಜಾತಿ ಮನಸ್ಸಿನ

ಕತ್ತಲು ಕಲ್ಲಿನ ಕಳೆಗಳು 

ನಿನ್ನ ಈ ರಭಸಕ್ಕೆ ಸಿಡಿದು

ಭಾವ ರಾಗವ ಹಾಡಲಿ 

 

ಭೂಕಂಪವೆ ನಿನ್ನ ಎದೆಯನ್ನೊಮ್ಮೆ

ಹಾಗೆ ಕಂಪಿಸು 

ನಿನ್ನ ಅಲೆಯ ಕಂಪನಕ್ಕೆ

ಮೌಡ್ಯ ಮೂರ್ಚೆ ಮನೆಗಳು ಬೀಳಲಿ

 

ವರ್ಣಪರ ಕರ್ಕಶ ಮಠ ಮಂದಿರ

ಹುಳುಕು ಭಾವುಟಗಳು ಹರಿದು

ನಿನ್ನ ಅ ಒಡಲಿಗೆ ಆಹಾರವಾಗಿ

ಜೀರ್ಣದ ದೇಗಲಿ ಬೆಳಕು ಮೂಡಲಿ

ಕರಿಮೋಡ ನಮ್ಮ ನೋಡಿ 

ನಿನ್ನೊಮ್ಮೆ ಕಣ್ಣಿರ ಸುರಿಸು

ಬಿರಿದಿರುವ ಭೂಮಿಯದಳಿದು

ಹಸಿರು ಮನಸ್ಸುಗಳು ಬೆಳೆಯಲಿ 

 

ಭೇದ ಕೊಚ್ಚೆಗಳ ಕಂಠ ಹೊಡೆದು

ಸ್ಪರ್ಶದ ನದಿ ಹರಿಯಲಿ

ಇದರೊಳಗೆ ಹುಟ್ಟಿದ ಜೀವಗಳು

ನಿಸರ್ಗದಲ್ಲಿ ಮನುಷ್ಯರಾಗವ ಹಾಡಲಿ…

– ಎಂ.ಎನ್. ನವೀನ್ ಕುಮಾರ್


 

ಉಡಿ ತುಂಬ ದಕ್ಕಿದ ಕವಿತೆ ಚೂರಿಗಿಂತ…

ಅಷ್ಟೊಂದು ನೆನಪುಗಳನ್ನು ಬಿಟ್ಟು

ಉಸಿರು ಉಸಿರಿನ ನಡುವಲ್ಲೊಂದು

ಹಸಿ ಹಸಿ ಒನಪು ಕವಿತೆಯನ್ನು

ಹೊಸೆದು ಕೊಟ್ಟಿರುವಾಗ…

ಬೇರೆ ಇನ್ನೇನು ತಾನೇ ನಾ 

ಬೇಡಲು ಸಾಧ್ಯ?

ಬಾಡಿ ಹೋದ ಕಂಗಳ ತುದಿಯಲ್ಲಿ

ನಗು ಬೆಳಕ ಚುರಿದು

ಎದೆ ತುಂಬ ಹರವಿಟ್ಟ ಕಾಡುವ 

ಭಾವಗಳ ಕಾವಿಗೆ ಮೊಗ್ಗೆಯೊಡೆಯುತ್ತಿದೆ

ಕವಿತೆ ಕನಸು.

ಬೆಳಗಲ್ಲೂ ಕತ್ತಲು ಕಂಡು 

ಬೆಚ್ಚುವ ಗಳಿಗೆ

ಕತ್ತಲಲ್ಲೂ ಬೆಳಕಾದಾಗ ದಿಗ್ಭ್ರಮೆ

ವಿಸ್ಮಯದ ಬದಲಾದ ಗತಿಗೆ

ಬದುಕೇ ಬೆರಗಾಗಿ ನಿಂತಿದೆ

ಕವಿತೆಯಾಗಿ.

ಎಷ್ಟೆಲ್ಲ ದಕ್ಕಿಸಿಕ್ಕೊಂಡೆ

ಇನ್ನೇನು ಬಯಸಲು ಸಾಧ್ಯ?

ಅಗಾಧ ದೂರ ಕಡಲು ವಿಸ್ತಾರ

ನಾನು ಹನಿ ಬಿಂದು

ತಾಳೆಯಾಗಬಹುದೇ ಬದುಕು?

ಒಂದೊಮ್ಮೆ ಬಯಕೆ ಫಲಿಸಿದರೂ…

ನಿರಾಸೆಯ ಹೊಳೆಯಲ್ಲಿ

ಭರವಸೆಯ ಅಲೆಗಳು

ನಡುವೆ ತೇಲಿ ತೇಲಿ ಬರುವ

ಕವಿತೆ ಚೂರು

ಆಯುತ್ತಲೇ ಸಾಗುವ ಅವಳು

ಸಂತೃಪ್ತೆ

ಭಾವಗಳನ್ನೆಲ್ಲಾ ಕಡಲಿಗೆ ನೂಕಿಟ್ಟ

ನಿರ್ಲಿಪ್ತೆ.

ಈ ಜನ್ಮಕ್ಕಿಷ್ಟು ಬದುಕ ಬಯಕೆ 

ಸಾಲದೇ?

ಉಡಿ ತುಂಬ ದಕ್ಕಿದ ಕವಿತೆ ಚೂರಿಗಿಂತ

ಮಿಗಿಲಾದ ಬದುಕು ಬೇರೆ ಇರಲು

ಸಾಧ್ಯವೇ?!.

-ಸ್ಮಿತಾ ಅಮೃತರಾಜ್.


 

ನಾ ಬದುಕಿನ ಹಾದಿಯಲಿ

ಆಸರೆಯಿರದೆ

ಅಲೆಮಾರಿಯಾದೆ..

ಪುರುಷ ಸಮಾಜದ

ನೂಕುನುಗ್ಗಲಲಿ

ಅಲೆದಲಿದು

ನಾ ಬಸವಳಿದೆ..

ಸಹೋದರಿಯೆನ್ನುವ

ಪುರುಷ ಸಿಗಲಿಲ್ಲ..

ಮನೆಮಗಳೆಂಬ

ಕರುಣೆ ತೋರಲಿಲ್ಲ..

ಮಾಂಸದೆಲುಬಿನ ದೇಹ

ಬಯಸಿದವರೆ ಎಲ್ಲ..

ಉಂಡು ಸುಖಿಸಿದ ಮೇಲೆ

ಸೂಳೆಯೆನ್ನುವರೆಲ್ಲ..

ಎಲೈ ಪುರುಷ

ನಿನಗಿದು ತರವೇ..

ನಾಳೆಯ ಪುರುಷಗೆ

ನಾ ಅವ್ವನಲ್ಲವೇ..?

 

ಶತ-ಶತಮಾನದ

ಪಳೆಯುಳಿಕೆಯಲಿ

ಅವಿತು ಕುಳಿತಿದೆ

ಸೃಷ್ಠಿಯ ಒಡಲು..

ಪ್ರತಿ ಕಣ-ಕಣದ

ಜೀವರಾಶಿಗೂ ಮೂಲ

ಕಾರಣ ತಾಯಿಯ

ಒಡಲು..

ಜನಿಸಿದ ಕೂಡಲೆ

ಅವ್ವನೆಂದು ಮೊದಲು ಕೂಗಿದೆ ನೀ ಪುರುಷ..

ಅದೇ ಹೆಣ್ಣಿನ ದೇಹದ ಸುಖಕೆ ಹೊಂಚು ಹಾಕುತಲಿರುವೆ

ನೀ ಪುರುಷ..

ಎಲೈ ಪುರುಷ ನಿನಗಿದು ತರವೇ..

ನಾಳೆಯ ಪುರುಷಗೆ

ನಾ ಅವ್ವನಲ್ಲವೇ..?

 

ಕಣ್ಣನೋಟದ ಸೆರೆಯಲ್ಲಿಡಿದು

ಮನದಲಿ ಅತ್ಯಾಚಾರ ಮಾಡಿದೆ..

ಜನಿಸುವ ದೈವ ಗುಡಿಯ ಶೀಲಕೆ

ಅದೆಷ್ಟೋ ಹೆಣ್ಣುಗಳ ಬಲಿಪಡೆದೆ..

ತಾಯಿಯಾದೆ ತಂಗಿಯಾದೆ

ಅಕ್ಕನಾದೆ ನಾ ನಿನಗೆ..

ಸ್ತ್ರೀ ಕುಲವನರಿಯದೆ

ವೇಶ್ಯೆಯೆಂದೆ ನೀ ನನಗೆ..

ಇಂದಿನ ನನ್ನಾ ನೋವಿನ ದಿನ..

ನಾಳೆ ನಿನಗೆ ಮರಣ ಶಾಶನ..

ಎಲೈ ಪುರುಷ ನಿನಗಿದು ತರವೇ

ನಾಳೆಯ ಪುರುಷಗೆ

ನಾ ಅವ್ವನಲ್ಲವೇ..?

-ಸಾಬಯ್ಯ ಕಲಾಲ್


 

ಅಸ್ತ

ಆಗಸ ಮುಟ್ಟುವಷ್ಟು,

ಎಣಿಕೆ ಹಾಕಿದರೆ ದಣಿವಷ್ಟು

ಸಂಪತ್ತು, ಲಕ್ಷ್ಮಿ ನನ್ನವಳು.

ಆಕೆಯದು ಪರಿದಿ

ಉಟ್ಟ ಬಟ್ಟೆ ಮಡಿಯಾಗಿದೆಯೋ, ಇಲ್ಲವೋ     

ಬೆರ್ಸೊಲು ಎಳೆದರೆ 

ಬಿದ್ದು ಹೋಗುವ ಜೋಪುಡಿ. 

ಹೃದಯ ಶ್ರೀಮಂತಿಕೆಗೆ,

ಸೋಸಿದಷ್ಟು ಮುಗಿಯದ ಪ್ರೀತಿಗೆ,

ಮನಸೋತೆ ಬದುಕಿನ ಛಲಗಾತಿಗೆ.

ಎನ್ನ ಅಷ್ಟ ಐಶ್ವರ್ಯವನ್ನು ಬದಿಗಿಟ್ಟು,

ಅವಳಿಗೆ ಸಂಪೂರ್ಣ ಸೋತು,

ಇಬ್ಬರೂ ಬಿದ್ದೆವು ಪ್ರೇಮದೊಳಗೆ.

ಮುಗಿಯಿತು ಮದುವೆ ಸೂರ್ಯಾಸ್ತದೊಳಗೆ.

– ಅಕ್ಷಯ ಕಾಂತಬೈಲು


 

ಭಾರತವ್ವನ ಕೂಗು

ನಾನು ಭಾರತಾಂಬೆಯಲ್ಲ, ನಾನೊಂದು ಹೆಣ್ಣು ಜೀವ ಅಲ್ಲವೇ ಅಲ್ಲ, 

ಆದರೆ ನಾನೊಂದು ಮಾಲು, ಅದು ಮಾತ್ರ ನಿಜ!

ಮಾರ್ಕೆಟ್, ಮೆಜೆಸ್ಟಿಕ್, ರೆಡ್‌ಲೈಟ್ ಏರಿಯಾಗಳಂಥ ಪಟ್ಟಣಗಳಲ್ಲಿ ಬಿಕರಿಗಿರುವ ಮಾಲು,

ಬ್ರಾಹ್ಮಣಕೇರಿ, ಒಕ್ಕಲಗೇರಿ, ಹೊಲಗೇರಿಗಳಲ್ಲಿ ತೋಳ್ಬಲಕ್ಕೆ ಸಿಕ್ಕಿ ಅಪ್ಪಚ್ಚಿಯಾದ ಮಾಲು.

 

ನನಗೇ, ನನ್ನ ಹಸಿ ದೇಹಕ್ಕೆ ವಯಸ್ಸೆಂಬುದೇ ಇಲ್ಲ,

ಶಿಶುವಿಹಾರ, ಶಾಲಾ ಕಾಲೇಜು, ಕಛೇರಿ ಕಾರ್ಖಾನೆಗಳಲ್ಲಿ ಮಾತ್ರವಲ್ಲ,

ತವರು, ಗಂಡನ ಮನೆಗಳಲಿ ಇರುವ ಗಂಡು ಕಾಮುಕರಿಗೆ 

ಹಸಿದ ರಣಹದ್ದುಗಳಿಗೆ ಸಿಕ್ಕಿ ಸೀರುಂಡೆಯಾಗಿರುವ ಕಾಮದಾಟಿಕೆ!

 

ಎಳೆ ಬಸಿರು ಸೀತೆಯ ಕಾಡಿಗಟ್ಟಿದ ಶ್ರೀರಾಮನಂದು

ಅವನ ಭಂಟರ ವಿಷಬಾಣ ಎದೆಗೆ ತೂರಿದೆ ನೋವುಗಳನಿಂದು.

ಸಂಸ್ಕೃತಿ ರಕ್ಷಕರ ಕಟ್ಟುಪಾಡುಗಳಲಿ ಸದಾ ನರಳುತ್ತಾ,

ಮನೆತನದ ಮರ್ಯಾದೆ ಉಳಿಸಲು ಆಗುತಿಹೆ ಮೂಕಬಲಿ ನಿತ್ಯ!

 

ಇಂಡೋ-ಅಮೇರಿಕಾ ಪರಮಾಣು ಡೀಲುಗಳೊಂದಿಗೆ ಹರಿದು ಬರುತಿದೆ

ಬೆತ್ತಲೆಯ ಉದ್ದಿಮೆ, ಹಣಕಾಸು ಬಂಡವಾಳ ನಾಗಾಲೋಟ ಹಾಕುತಿದೆ

ಮಾರುಕಟ್ಟೆ ಲಾಭದ ಪ್ರವಾಹಕ್ಕೆ ಸಿಕ್ಕಿ ಬದುಕ ಕಳಕೊಂಡಿರುವೆ 

ಬಂಡವಾಳದ ಗಾಲಿಗೆ ನನ್ನುಡುಪು ಸಿಕ್ಕಿ  ಬೆತ್ತಲಾಗಿರುವೆ.

 

ನನಗಿದೆ ಧರ್ಮಾತೀತ ಸ್ವತಂತ್ರ ಮನಸುಗಳ ಬೆಂಬಲದ ಬಲ

ಮನುವಾದಿ ಜಡ ಮನಸ್ಸುಗಳ ಜಯಿಸುವ ಛಲ.

ಸಾವಿನ ನಡುವೆಯೂ ಬದುಕಲು ಸೆಣಸುವ ನಿರ್ಭಯಳು 

ಭರವಸೆಯ ನಾಳೆಗಳಿಗಾಗಿ ಸದಾ ಹೋರಾಡುವವಳು.

-ಜೈಕುಮಾರ್.ಹೆಚ್.ಎಸ್


 

ಮರಳಿ ಬರುವೆ 🙂

ರಸ್ತೆ ಬದಿಯಲ್ಲಿರುವ ಮನೆ ನಮ್ಮದು  

ಊರಿಗೆ ಬರ್ತೀನಿ ಅಂತ ಹೇಳುದ್ರೆ 

ಬಾರೋ ಬಸ್ಸುಗಳನೆಲ್ಲ 

ನೋಡುತ … ಕಾದು ನಿಂತಿರ್ತಾರೆ 

ಅಪ್ಪ .. ಅಮ್ಮ .. ಅಕ್ಕ 

ಬಸ್ಸು ಇಳಿದ ತಕ್ಷಣ 

ಚನ್ನಾಗಿದಿಯ ? ಈಗ ಬಂದ ?

ಅಂತ ಮಾತಾಡಿಸೋ ಅಕ್ಕ ಪಕ್ಕದ 

ಮನೆಯವರು … 🙂

ದೂರದ ಮನೆ ಅವಳದು 

ನನ್ನ ಬರುವಿಕೆಯ ಕಾಯೋ 

ಮತ್ತೊಂದು ಜಾತಕ ಪಕ್ಕ್ಷಿ,

ಬಾಲ್ಯದ ಗೆಳತಿ … 

ಪಕ್ಕದ ಬಯಲು ರಂಗ 

ಗೋಲಿ, ಲಗೋರಿ, ಕೋಲು ಕುಟಿಕ 

ಹೀಗೆ ಹಲವಾರು ಆಟ ಆಡಿ ಸೋತು ಗೆದ್ದು 

ನಕ್ಕು ನಲಿದು ಹೊರಳಾಡಿದ ಕ್ಷಣಗಳು 

ಆಲೆಮನೆಯ ಬೆಲ್ಲದ ಪಾಕ 

ಕದ್ದು ತಿಂದ ಹಲಸಿನ ಹಣ್ಣು 

ಸೀಬೆ, ಮಾವಿನ ಹಣ್ಣು 

ಸಿಕ್ಕಿ ಬಿದ್ದಾಗ ತಿಂದ ಒದೆಗಳು 

ಹಾಗೆ ಕಣ್ ಮುಂದೆ … ಒಂದು ಸಿನಿಮಾ ರೀತಿ 

ಮುಂದೆ ಬಂದು ನಿಲ್ಲೋ ಆ ದೃಶ್ಯಗಳು 

ಅಬ್ಬಾ ..!!!! ಬೀದಿ ನಾಟಕ, ದೊಂಬರಾಟ 

ಹೀಗೆ ಹತ್ತು ಹಲವಾರು …. 

ಎರಡೇ ದಿವಸಕ್ಕೆ ಬಿಟ್ಟು ಬಾರೋ 

ಮನಸ್ಸಿಲ್ಲ ಎಲ್ಲವನ್ನು, ಎಲ್ಲರನ್ನು, ಮತ್ತೆ 

ಮತ್ತೆ ಅಲ್ಲೇ ಕುಳಿತು  

ಮೆಲುಕು ಹಾಕಬೇಕು ಅನ್ನಿಸುತ್ತೆ …. !!!!

ಆದರು ಮಾರನೆ ದಿನ ಮಹಾನಗರಿಯಲ್ಲಿ…!!!!! 

(ತಿಳಿಯಲೇ ಬೇಕಾದ ವಿಷಯ ಅಂದ್ರೆ ಅಂದು ಅಂದಿಗೆ ಇಂದು ಇಂದಿಗೆ ಇರಲಿ ನಾಳೆ ನಾಳೆಗೆ )

ಘತಕಾಲ ನೆನಪು ಅಸ್ಟೇ ಎಂದೆಂದಿಗೂ 

-ನಗೆಮಲ್ಲಿಗೆ 

(ಅನುಪಮ ಎಸ್ ಗೌಡ)


ಮಾರ್ಚ್ ಇಪ್ಪತ್ತೊಂದನ್ನು "ವಿಶ್ವ ಕವಿತಾ ದಿನ"ವನ್ನಾಗಿ ಆಚರಿಸುವ ಪ್ರಯುಕ್ತ ಈ ಸಂಚಿಕೆಯಲ್ಲಿ ಇವಿಷ್ಟು ಕವಿತೆಗಳನ್ನು ಓದುವ ಸುಖ ಪಂಜುವಿನ ನಲ್ಮೆಯ ಓದುಗರಾದ ನಿಮ್ಮದಾಗಲಿ..

ಪ್ರೀತಿಯಿಂದ

ಪಂಜು ಬಳಗ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
Roopa
10 years ago

Ella kavanagaLu Chennaagive, abhinandegaLu ella kavigaLigu.

Ibbaroo NaveengaLa kavanagalu haagu Sushma Sindhu ravara hanigaLu bahala ishtavaadavu…..
 

ನಳಿನ ಡಿ
ನಳಿನ ಡಿ
10 years ago

good concept worked out, 

ಸ್ವರ್ಣಾ
ಸ್ವರ್ಣಾ
10 years ago

ತುಂಬಾ ಚಂದದ ಕವಿತೆಗಳು.

ಸ್ಮಿತಾ ಅವರು  ಹೇಳಿದಂತೆ ಉಡಿಯಲ್ಲಿನ ಕವಿತೆಗಿಂತ ಬೇರೆ ಬದುಕು ಬೇಕೇ ?

shadakshari.Tarabenahalli

its really a wooooowww.. to all poets…. 
keep writing 

my best wishes…

ಶಿದ್ರಾಮ
ಶಿದ್ರಾಮ
10 years ago

ಇಲ್ಲಿನ ಎಲ್ಲಕವಿತೆಗಳೂ ಒಂದಕ್ಕಿಂತ ಒಂದು ಚಡನ್ನಾಗಿವೆ ಎಲ್ಲ ಕವಿ ಹಾಗೂ ಕವಯತ್ರಿರಿಗೂ ಶುಭವಾಗಲೀ

amardeep.ps
amardeep.ps
10 years ago

ಎಲ್ಲಾ ಕವಿತೆಗಳು ಚೆನ್ನಾಗಿವೆ…. ಎಲ್ಲಾರಿಗೂ ಅಭಿನಂದನೆಗಳು..

Rani P V
Rani P V
10 years ago

Dhanyavadagalu… 🙂 🙂

narayana.M.S.
narayana.M.S.
10 years ago

ಎಲ್ಲಾ ಕವಿತೆಗಳೂ ನಿಜಕ್ಕೂ ಚೆನ್ನಾಗಿವೆ. ಬರೆದ ಕವಿಮನಗಳಿಗೆ ಅಭಿನಂದನೆಗಳು. ಸಂಗೀತ, ಅದು ಬಾಗಿಲ ಸಂಧಿ ಅಲ್ಲ ಸಂದಿ, ಅನುಪಮ ಅದು ಜಾತಕ ಪಕ್ಷಿ ಅಲ್ಲ ಚಾತಕ ಪಕ್ಷಿ ಮತ್ತು ಘತ ಕಾಲ ಅಲ್ಲ ಗತ ಕಾಲ ಅಸ್ಟೆ ಅಲ್ಲ ಅಷ್ಟೆ. ಅಕ್ಷಯ, ನಿನ್ನ ಹಸ್ತದಿಂದ ಮೂಡಿದ ಅಸ್ತ ಚೆನ್ನಾಗಿದೆ, ಆದರೆ ಆಕೆಯದು ಪರಿದಿನೋ ಪರಿಧಿನೋ? ಗೊತ್ತಾಗ್ಲಿಲ್ಲ.  🙂

K.M.Vishwanath
10 years ago

ಎಲ್ಲರ ಕವಿತೆಗಳಲ್ಲಿ ಸಾರತೆ ಸತ್ವ ಎದ್ದು ಕಾಣುತ್ತದೆ 

Ashok Shettar
Ashok Shettar
10 years ago

Lovely poems

Nandi Hoovina Hole
10 years ago

Ella kavitegalu thumbhane channagive hagu panjuvina e prayathna shlaganiya yuva kavigalannu prothsahisuva kelsa munduvareyali…all the best team PANJU all the best all the young kavis all the best pallavi

mahantesh yaragatti
mahantesh yaragatti
10 years ago

Ellar kavitegalu channagive…………

prabhamaninagaraja
prabhamaninagaraja
10 years ago

ವಿಶ್ವ ಕವಿತಾ ದಿನದ ಪ್ರಯುಕ್ತ ಪ್ರಕಟಿಸಿರುವ ಎಲ್ಲ ಕವನಗಳೂ ಹೊಸತನದಿ೦ದ ಕೂಡಿದ್ದು ಸು೦ದರವಾಗಿವೆ. ಸುಷ್ಮ ಸಿ೦ಧುರವರ ಸಾಲುಹನಿಗಳು ಅರ್ಥಪೂರ್ಣವಾಗಿವೆ. ಎಲ್ಲ ಕವಿಗಳಿಗೂ, `ಪ೦ಜು' ಬಳಗಕ್ಕೂ ಅಭಿನ೦ದನೆಗಳು.

harsha
harsha
10 years ago

Good efforts.

14
0
Would love your thoughts, please comment.x
()
x