ಅರಳೀಕಟ್ಟೆಯಲ್ಲಿ ಕೂತಿದ್ದ ಶತಾಯುಶಿ ಹನುಮಜ್ಜ ತನ್ನಷ್ಟೇ ವಯಸ್ಸಾದಂತೆ ಕಾಣುತ್ತಿದ್ದ ಕನ್ನಡಕವನ್ನು ಸರಿಪಡಿಸಿಕೊಂಡು ತನ್ನ ಮುಂದೆ ಧೂಳೆಬ್ಬಿಸುತ್ತಾ ಹೋದ ಕಾರು ನೋಡಿದ. ಇದು ಎಷ್ಟನೆಯ ಕಾರು ಎಂದು ಅಚ್ಚರಿಪಟ್ಟ. ಸುಮಾರು ಅರ್ಧ ಗಂಟೆಯಿಂದ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಕಾರುಗಳು ಅವನು ಕೂತಿದ್ದ ಆರಳೀಕಟ್ಟೆಗೆ ಧೂಳಿನ ಅಭಿಷೇಕ ಮಾಡಿದ್ದವು.
"ಇವತ್ತೇನು ನಡೀತೈತೆ ಆ ಫಾರಮ್ಮಿನಾಗೆ..?" ಹನುಮಜ್ಜ ಗೊಗ್ಗರು ದನಿಯಲ್ಲಿ ತನಗೆ ತಾನೇ ಎಂಬಂತೆ ಹೇಳಿಕೊಂಡ.
"ಏನು ನಡದ್ರೆ ನಮಗೇನು..? ನಾವು ಹೊಲಗೈಯಾದು ತಪ್ಪತೈತ..?"
ಹನುಮಜ್ಜನಿಗಿಂತ ಹತ್ತು ವರ್ಷ ಕಿರಿಯ ಭರಮಜ್ಜ ಹೇಳಿದ.
"ಅದ್ಸರಿ! ಆದ್ರೆ ನಮ್ಮೂರ ಹೆಸರು ಪೇಪರಿನ್ನಾಗೆ ಬರೋದಕ್ಕೆ ಆವಯ್ಯಾನೇ ಕಾರಣ ಅಲ್ವಾ..? ಅವ್ನು ಬರೋಕೆ ಮುಂಚೆ ಈ ಊರಿಗೆ ಒಂದಾದ್ರೂ ಕಾರು ಬಂದಿತ್ತಾ..? ಈಗ್ನೋಡು ಆವಯ್ಯನ ದೆಸೆಯಿಂದ ನಮ್ಮೂರಿಗೆ ಟಾರು ಬಂತು.."
ಹುಲ್ಲಿನ ಹೊರೆಯನ್ನು ಹೊತ್ತು ಹೋಗುತ್ತಿದ್ದ ಬಸವರಾಜ ಕಟ್ಟೆಯ ಮೇಲೆ ಕೂತು ದಣಿವರಿಸಿಕ್ಕೊಳ್ಳುತ್ತಿದ್ದು, ಮುದುಕರ ಮಾತಿಗೆ ಪ್ರತಿಕ್ರಿಯಿಸಿದ.
"ಟಾರು, ಜೊತೀಗೇ ಬಾರು ಬಂತಲ್ಲಾ..? ರೋಡನ್ನೇನು ತಿನ್ನೋಕಾಯ್ತದ? ಮೂದೇವಿ..ನಿಂದೊಳ್ಳೆ ಲೆಕ್ಕಾಚಾರ. ಆವಯ್ಯ ಊರಿಗೆ ಕಿಂಚಿತ್ತಾದ್ರೂ ಮಾಡವ್ನ..? ಅದೇನೋ ಸಂಸೋಧನೆಯಂತೆ..? ಅದ್ರಿಂದ ಊರಿಗೇನಾದ್ರೂ ಉಪಯೋಗ ಆಯ್ತದ?"
"ಖಾಯಿಲೆಗಳಿಗೆ ಔಷಧಿ ಕಂಡುಹಿದಿದಿದ್ದಾರಂತೆ. ಅದು ನಮ್ಮ ಉಪಯೋಗಕ್ಕೆ ತಾನೆ..?"
ಅವನ ಮಾತು ಮುಗಿಯುವ ಮುನ್ನವೇ ಅವರಿಗೆ ಮತ್ತೆರೆಡು ಕಾರುಗಳ ಧೂಳಿನ ಸಿಂಚನವಾಯ್ತು!!
"ಏನು ಮಾಡಿದ್ರೇನು..? ಮುದುಕರನ್ನ ಹುಡುಗರನ್ನ ಮಾಡೋಕಾಯ್ತದ? ಸತ್ತೋರನ್ನ ಬದುಕಿಸಕಾಯ್ತದ..?" ಹನುಮಜ್ಜ ಗೊಣಗಿದ.
"ಅದನ್ನೂ ಮಾಡ್ತಿದ್ದಾರಂತೆ ಹನುಮಜ್ಜ!! ನೀನಿನ್ನೂ ನೂರು ವರ್ಷ ಬದ್ಕಿರಬಹುದು"
ಬಸವರಾಜನ ಮಾತಿಗೆ ಅರಳಿಕಟ್ಟೆಯಲ್ಲಿ ಕೂತಿದ್ದವರೆಲ್ಲ ನಕ್ಕರು!
"ಲೇ ಬಸ್ಯಾ, ಅವನೇನು ದೇವರೇನೋ? ಹುಟ್ಟು ಸಾವು ದೇವರ ಮಾಡೋದು. ನರ ಮನುಷ್ಯನ ಕೈಲಾಗೋ ಕೆಲಸವಲ್ಲ!"
ಹನುಮಜ್ಜ ವೇದಾಂತಿಯಂತೆ ನುಡಿದ.
"ಹಣ್ಣಾಗಿರೋ ಸರೀರ ಇಟ್ಕೊಂಡು ಇನ್ನೂರ ವರ್ಷ ಬದ್ಕಿ ಏನು ಪ್ರಯೋಜ್ನ ಹೇಳ್ಲಾ..?"
ಅವಮಾನವಾದಂತೆ ಭರಮಜ್ಜ ತುಸು ಕೋಪದಿಂದಲೇ ಹೇಳಿದ.
* * * * * *
ಆ ಊರಿಗೆ ಬಹಳ ಜನ ಬಂದು ಹೋಗುತ್ತಿರುತ್ತಾರೆ. ಬರುವವರು ಐಷಾರಾಮಿ ಕಾರುಗಳಲ್ಲಿ ಬರುತ್ತಾರೆ! ಅವರಲ್ಲಿ ಮಂತ್ರಿಗಳು, ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಮೀಡಿಯಾದವರೂ ಇರುತ್ತಿದ್ದರು. ಬಹುತೇಕರು ಸಂಜೆಯ ವೇಳೆಗೆ ಹಿಂತಿರುಗಿಬಿಡುತ್ತಾರೆ. ಇನ್ನು ಕೆಲವರು ಒಂದೆರಡು ದಿನ ಆ ಫಾರಮ್ಮಿನಲ್ಲೇ ಊರಿನಲ್ಲೇ ಉಳಿಯುವುದೂ ಉಂಟು. ಅಚ್ಚರಿಯೆಂದರೆ ಅದೊಂದು ಕುಗ್ರಾಮ. ಅಲ್ಲಿರುವುವು ನೂರಿನ್ನೂರು ಮನೆಗಳಷ್ಟೆ. ಬಯಲು ಸೀಮೆಯ ಆ ಊರಿನಲ್ಲಿ ಬಹಳಷ್ಟು ಜನ ರೈತಾಪಿ ವರ್ಗಕ್ಕೆ ಸೇರಿದವರು. ನೀರಿನ ಆಸರೆ ಕಮ್ಮಿ. ಕೆಲವರು ಬೋರ್ ಹಾಕಿಸಿ ಹೆಚ್ಚಿಗೆ ಬೆಳೆಯಲು ಪ್ರಯತ್ನಿಸಿದರೂ ನೀರಿನ ಕೊರತೆಯಿಂದ ಸಾಧ್ಯವಾಗುತ್ತಿರಲಿಲ್ಲ. ಮೊದಲಿಗೆ ಮುನ್ನೂರು ನಾನ್ನೂರು ಅಡಿಗೆ ನೀರು ಸಿಕ್ಕುತ್ತಿತ್ತು. ಹೆಚ್ಚೆಚ್ಚು ಜನ ಬೋರ್ ಕೊರೆಯಿಸುತ್ತಾ ಕ್ರಮೇಣ ಅದು ಸಾವಿರ ಅಡಿಗೂ ಮೀರಿತ್ತು. ಈಗಂತೂ ಹತ್ತು ಸಾವಿರ ಅಡಿ ದಾಟಿದರೂ ನೀರಿನ ಸುಳಿವೇ ಇಲ್ಲವಾಗಿತ್ತು.
ಹೆಚ್ಚಿನ ಜನ ತಾವಾಯ್ತು ತಮ್ಮ ಕೆಲಸವಾಯ್ತು ಎಂಬ ಭಾವನೆ ಬೆಳೆಸಿಕೊಂಡಿದ್ದರು. ಇತರೆ ವಿಷಯಗಳ ಬಗೆಗೆ ಎಂದೂ ಯೋಚಿಸುತ್ತಿರಲಿಲ್ಲ್ಲ. ಹಾಗಾಗಿ ತಮ್ಮ ಊರಿಗೆ ಬಂದು ಹೋಗುವ ಜನರ ಬಗೆಗೆ ಊರಿನ ಜನ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ!
ಊರಿಗೆ ಬರುವ ಹೊಸಬರು ಊರಿನ ಅರಳಿ ಕಟ್ಟೆಯ ಬಳಿ ಕಾರು ನಿಲ್ಲಿಸಿ ಅಲ್ಲಿ ಕೂತಿರುವವರನ್ನು 'ಡಾ.ಶಂತನು ಅವರ ಫಾರಮ್ಮಿಗೆ ಹೋಗುವ ದಾರಿ ಇದೇನಾ?' ಎಂದು ಕೇಳುತ್ತಾರೆ. ಜನ ನಿರಾಸಕ್ತಿಯಿಂದ ದಾರಿ ತೋರಿಸುತ್ತಾರೆ. ಅವರ ಮಾತಿನಿಂದ ಡಾ.ಶಂತನು ಮಾಡುತ್ತಿರುವ ಕೆಲಸದ ಬಗೆಗೆ, ಅವರು ಆ ಊರಿನಲ್ಲಿ ವಾಸಿಸುತ್ತಿರುವುದರ ಬಗೆಗೆ ಉದಾಸೀನ ವ್ಯಕ್ತವಾಗುತ್ತಿತ್ತು.
ಊರು ದಾಟಿ ಮೂರು ಕಿಲೋಮೀಟರು ದೂರ ಹೋದರೆ ಡಾ.ಶಂತನು ಅವರ ಫಾರಮ್ ಸಿಗುತ್ತದೆ. ಹತ್ತು ಎಕರೆ ಜಾಗಕ್ಕೆ ಅವರ ಫಾರಂ ವ್ಯಾಪಿಸಿದೆ. ಫಾರಮ್ಮಿನಲ್ಲಿ ವೈದ್ಯಕೀಯ ಸಂಶೋಧನೆಗೆ ಅಗತ್ಯವಾದ ಗಿಡ ಮೂಲಿಕೆಗಳನ್ನು ಬೆಳೆಯುತ್ತಾರೆ. ಉಳಿದಂತೆ ಫಾರಮ್ಮಿನ ಮಧ್ಯದಲ್ಲಿ ಅವರ ಪ್ರಯೋಗಶಾಲೆಯಿದೆ. ಅಲ್ಲಿ ಮಹತ್ತರÀ ಸಂಶೋಧನೆಗಳು ನಡೆಯುತ್ತವೆ. ಇಂತಾ ವಿಷಯಗಳು ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಿರುತ್ತವೆ. ಡಾ.ಶಂತನು ಅವರಿಗೆÉ ದೇಶ ವಿದೇಶಗಳಲ್ಲಿ ಅಪಾರವಾದ ಗೌರವ! ಆದರೆ ಆ ಊರಿನವರಿಗೆ ಡಾ.ಶಂತನು ಅವರ ಸಂಶೋಧನೆಗಳಲ್ಲಿ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ಇದಕ್ಕೆ ಕಾರಣ ಡಾ.ಶಂತನು ಊರಿನವರೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನೂ ಇಟ್ಟುಕೊಂಡಿಲ್ಲದಿರುವುದು.
* * * * * * * * * *
ಡಾ.ಶಂತನು ಹೆಸರಾಂತ ಜೀವ ವಿಜ್ಞಾನಿ. ಅವರ ಕೊಡುಗೆ ಮನುಕುಲಕ್ಕೆ ಅಪಾರವಾಗಿತ್ತು. ಹೊಸ ಹೊಸದಾಗಿ ಮನುಕುಲವನ್ನು ಅನೇಕ ರೀತಿಂiÀiಲ್ಲಿ ಹಿಂಸಿಸುವ ಚಿತ್ರವಿಚಿತ್ರ ರೋಗಗಳಿಗೆ ಔಷಧವನ್ನು ಕಂಡುಹಿಡಿಯುವುದು ಅವರ ಆದ್ಯತೆಯ ಕೆಲಸವಾಗಿತ್ತು. ತಮ್ಮ ಸಂಶೋಧನೆಗಳನ್ನು ಪೇಟೆಂಟ್ ಮಾಡಿ ಅವುಗಳ ಮೂಲಕ ಹಣ ಕೂಡ ಮಾಡಿದ್ದರು. ಹಣ ಅವರ ಸಂಶೋಧನೆಗಳಿಗೆ ಅಗತ್ಯವೂ ಆಗಿತ್ತು. ಆ ಹಣವನ್ನು ಇನ್ನೂ ಹೆಚ್ಚಿನ ಸಂಶೋಧನೆಗಳಿಗೆ ಉಪಯೋಗಿಸುತ್ತಿದ್ದರು.
ಡಾ.ಶಂತನುರವರ ಲ್ಯಾಬಿನ ಸಭಾಂಗಣದಲ್ಲಿ ದೇಶದ ಪ್ರಮುಖ ವಿಜ್ಞಾನಿಗಳು, ಮೀಡಿಯಾದವರು, ವೈದ್ಯರುಗಳು ನೆರೆದಿದ್ದÀರು. ಅವರೆಲ್ಲ ಅತ್ಯಾಸಕ್ತಿಯಿಂದ ಶಂತನುಗಾಗಿ ಕಾಯುತ್ತಿದ್ದರು. ಮಹತ್ವದ ಸಂಶೋಧನೆಯನ್ನು ಶಂತನು ಪ್ರಪಂಚಕ್ಕೆ ನೀಡಲಿದ್ದಾರೆ ಎಂಬುದು ಅವರ ನಿರೀಕ್ಷೆಯಾಗಿತ್ತು. ಅದು ಯಾವುದು ಎಂಬುದರ ಬಗೆಗೆ ಕುತೂಹಲ ಅವರಲ್ಲಿತ್ತು. ಅದರೆ ಶಂತನು ಈವರೆಗೆ ಯಾವುದೇ ಸುಳಿವನ್ನು ನೀಡಿರಲಿಲ್ಲ.
ಕುತೂಹಲದಿಂದ ಕಾಯುತ್ತಿದ್ದವರಲ್ಲಿ ವೀರೇಂದ್ರ ಕೂಡ ಒಬ್ಬ. ಒಂದು ತಿಂಗಳ ರಜೆಯಿಂದ ವಾಪಸ್ಸು ಕೆಲಸಕ್ಕೆ ಬಂದಿದ್ದ. ವೀರೇಂದ್ರ ಆ ಊರಿನವನೇ. ಆ ಊರಿನ ಪ್ರಥಮ ಪದವೀಧರ. ಜೀವ ಶಾಸ್ತ್ರದಲ್ಲಿ ಪದವಿ ಮುಗಿಸಿದವನು ಡಾ.ಶಂತನು ಅವರಲ್ಲಿ ಉದ್ಯೋಗ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಲ್ಲಿ ವಿರೇಂದ್ರ ಅನೇಕ ರೀತಿಯ ಸಂಶೋಧನೆಗಳನ್ನು ನೋಡಿದ್ದ. ಆದರೆ ಇಂದು ಅವರು ಲೋಕಕ್ಕೆ ಕೊಡಲಿದ್ದ ಸಂಶೋಧನೆ ಬಗ್ಗೆ ಅವನಿಗೆ ಹೆಚ್ಚಿನ ಕುತೂಹಲವಿತ್ತು. ಅದು ಅತಿ ಮಹತ್ವದ್ದು ಕೂಡ ಎಂಬುದನ್ನು ತಿಳಿದಿದ್ದ. ಇದಕ್ಕೆ ಕಾರಣವೂ ಇತ್ತು; ವೀರೇಂದ್ರನ ಹಿಂದಿನ ಘಟನೆಯೊಂದರ ನೆನಪು.
ಅಂದು ಶಂತನು ಆರೋಗ್ಯ ಸರಿ ಇರಲಿಲ್ಲ. ಲ್ಯಾಬಿನಲ್ಲೇ ಇದ್ದÀ್ದರೂ ತಮ್ಮ ಚೇಂಬರಿನಿಂದೀಚೆ ಬಂದಿರಲಿಲ್ಲ. ವೀರೇಂದ್ರ ಕೆಲಸದ ಬಗೆಗೆ ಕೆಲವು ಮಾಹಿತಿ ಪಡೆಯಲು ಶಂತನು ಚೇಂಬರನ್ನು ಪ್ರವೇಶಿಸಿದ್ದ. ಶಂತನು ತಮ್ಮ ಟೇಬಲ್ಲಿನ ಮೇಲೆ ಕೆಲವು ಗೊಂಬೆಗಳಿದ್ದವು. ಅವನಿಗೆ ಕಂಡಿದ್ದು ಗಣೇಶ, ದಕ್ಷ, ಹನುಮಂತ ಮತ್ತು ಅರ್ಧ ಮನುಷ್ಯನ ಶರೀರ, ಉಳಿದರ್ಧ ಕುದುರೆಯ ಶರೀರ ಹೊಂದಿದ್ದ ಗಂಡಸಿನ ಗೊಂಬೆ. ಶಂತನು ತದೇಕಚಿತ್ತರಾಗಿ ಆ ಗೊಂಬೆಗಳನ್ನು ನೋಡುತ್ತಿದ್ದರು! ಅವೆಲ್ಲಾ ಸುಮಾರು ಆರಿಂಚು ಎತ್ತರದ ಗೊಂಬೆಗಳು. ಶಂತನು ಗೊಂಬೆಗಳ ಜೊತೆ ಆಟವಾಡುತ್ತಿದ್ದಾರೆ ಎಂಬ ಯೋಚನೆಗೆ ಅವನಿಗೆ ಒಳಗೊಳಗೇ ನಗು ಬಂತು!
"ನಾನು ಗೊಂಬೆಗಳ ಜೊತೆಗೆ ಆಟವಾಡುತ್ತಿದ್ದೇನೆ ಅಂತಾ ನಗುತ್ತಿದ್ದೀಯಾ..?" ಅವನ ಮನಸ್ಸನ್ನು ಓದಿದವರಂತೆ ಶಂತನು ಕೇಳಿದ್ದರು.
"ಇಲ್ಲ ಸರ್"
"ಹಾಗನ್ನಿಸಿದ್ದರೆ ಆಶ್ಚರ್ಯವೇನಿಲ್ಲ ಬಿಡು. ಜೀವ ಶಾಸ್ತ್ರದ ಪದವೀಧರನಾಗಿ ಈ ಗೊಂಬೆಗಳಲ್ಲಿ ಏನು ವಿಶೇಷವಿದೆ ಹೇಳು ನೋಡೋಣ?"
ಅವನ ಜ್ಞಾನಕ್ಕೆ ಸವಾಲೆಸೆಯುವಂತೆ ಕೇಳಿದ್ದರು.
ವೀರೇಂದ್ರನಿಗೆ ಹೆದರಿಕೆಯಾಗಿತ್ತು. ತಾನು ಹೇಳುವುದು ಬಾಲಿಶವಾಗಿದ್ದರೆ ಕೆಲಸಕ್ಕೆ ಕುತ್ತಾಗುತ್ತೇನೋ ಎಂದು ಗಾಬರಿಯಾಗಿತ್ತು.
"ಇವು ಪುರಾಣದಲ್ಲಿ ಬರುವ ಪ್ರಸಿದ್ಧ ಪಾತ್ರಗಳು"
"ನಿಜ. ಇನ್ನೇನಾದರೂ ಕಾಣಿಸುತ್ತಿದೆಯೇ..?"
ಅವರು ತನ್ನನ್ನು ಪರೀಕ್ಷಿಸುತ್ತಿಲ್ಲ ಎಂಬ ನಂಬಿಕೆ ಬಂದು ಶಂತನು ಚಿಂತನೆಯ ಧಾಟಿ ಹಿಡಿಯಲು ಯತ್ನಿಸಿದ್ದ.
"ಇವುಗಳÀ ತಲೆ ಮತ್ತು ದೇಹ ಬೇರೆಬೇರೆಯಾಗಿವೆ. ಗಣಪತಿಗೆ ಆನೆಯ ತಲೆ, ಮನುಷ್ಯನ ದೇಹ, ದಕ್ಷನಿಗೆ ಕುದುರೆಯ ತಲೆ ಮತ್ತು ಮನುಷ್ಯ ದೇಹ ಮತ್ತು ಪಾಶ್ಚಿಮಾತ್ಯರ ಪುರಾಣದ ಪಾತ್ರಕ್ಕೆ ಮನುಷ್ಯನ ತಲೆ ಮತ್ತು ಕುದುರೆಯ ಶರೀರವಿದೆ"
ವೀರೇಂದ್ರ ಈ ಸಲ ಧೈರ್ಯದಿಂದ ಹೇಳಿದ್ದ.
"ಗುಡ್. ದೇಹ ಮತ್ತು ತಲೆ ಬೇರೆಬೇರೆಯವು. ಮನುಷ್ಯನ ಶರೀರದ ಅಂಗಾಗ ಕಸಿ ಕೇಳಿದ್ದೀಯಲ್ಲಾ..?"
"ಹೌದು ಸರ್. ನಮ್ಮ ಕಾನ್ಸಿಟ್ಯೂಯೆನ್ಸಿ ಎಮ್ಮೇಲ್ಲೇಯವರಿಗೆ ಕಿಡ್ನಿಯನ್ನ ಬದಲಾಯಿಸಿದೆ. ದಾನಿಯೊಬ್ಬರು ತಮ್ಮ ಒಂದು ಕಿಡ್ನಿಯನ್ನು ಅವರಿಗೆ ನೀಡಿದರಂತೆ"
"ಗುಡ್! ಅದರೆ ಈ ಗೊಂಬೆಗಳನ್ನ ನೋಡು, ತಲೆಯೇ ಬೇರೆ ದೇಹವೇ ಬೇರೆ! ಅವುಗಳನ್ನು ಬದಲಾಯಿಸಿದ ಉಲ್ಲೇಖಗಳೂ ಇವೆ!"
"ನೀವು ವಿಜ್ಞಾನದ ದೃಷ್ಟಿಯಿಂದ ನೋಡ್ತಾ ಇದ್ದೀರಿ. ಆದರೆ ಅವಕ್ಕೆ ಇರುವ ಉಲ್ಲೇಖ ಪೌರಾಣಿಕ. ಆ ಪಾತ್ರಗಳು ದೇವಾನುದೇವತೆಗಳು. ಅವರಿಗೆ ವಿಶೇಷ ಶಕ್ತಿಯಿದೆ"
"ಆಂತರಗ್ರಹ ಯಾನ ಮಾಡಿದವರು ದೇವರಾಗೊಲ್ಲವೆ..?"
"ಸರ್..?"
"ಒಂದು ಕಾಲದಲ್ಲಿ ನಡೆದ ವೈಜ್ಞಾನಿಕ ಅವಿಷ್ಕಾರಗಳ, ಪ್ರಯೋಗಗಳ ದಾಖಲೆ ಸಿಗದಿದ್ದರೆ ಅದು ಅತಿಮಾನುಷವಾದ ದೇವರ ಕೆಲಸದಂತೆ ಕಾಣುತ್ತದೆ"
"ಸರ್ ಅಂದರೆ, ಈ ಪುರಾಣದ ಪಾತ್ರಗಳ ಕಾಲದಲ್ಲಿ ವಿಜ್ಞಾನ ಮುಂದುವರಿದಿದ್ದು ಅಂಗಾಂಗ ಕಸಿಯಂತೆ ತಲೆಯನ್ನೂ ಕಸಿ ಮಾಡಿದ್ದಾರೆ ಅಂತಲೇ?"
"ದಟ್ ಇಸ್ ಎಕ್ಸಾಟ್ಲೀ ವಾಟ್ ಐ ಮೀನ್. ಆಗ ಅದು ಸಾಧ್ಯವಾಗಿದ್ದರೆ ಈಗ ನಮಗೂ ಸಾಧ್ಯವಾಗಲಾರದೇಕೆ..?"
ಶಂತನು ಯಾವುದೋ ಕನಸಿನ ಲೋಕದಲ್ಲಿದ್ದರು!
"ಅಂದರೆ ಆ ಪ್ರಯೋಗವನ್ನು ನೀವು..?"
ಆ ಮಾತಿಗೆ ಕನಸಿನಿಂದ ಮರಳಿದ ಶಂತನು ಸುಮ್ಮನೆ ನಕ್ಕರು!
ಅವರ ಉದ್ದೇಶವೇನು..? ಮನುಷ್ಯರ ತಲೆಯನ್ನೇ ಬದಲಾಯಿಸುವ ಪ್ರಯೋಗವನ್ನು ಮಾಡಲಿದ್ದಾರೇನು..? ವೀರೇಂದ್ರ ನಡುಗಿದ್ದ! ಎಂತಾ ಯೋಚನೆ..? ತಲೆಯನ್ನೇ ಬದಲಾಯಿಸುವುದೆ..? ಇದು ಪ್ರಕೃತಿಗೆ ವಿರುದ್ಧವಲ್ಲವೆ..? ದೇವರ ಸೃಷ್ಟಿಯನ್ನು ಮೀರುವ ಪ್ರಯತ್ನ ಮನುಷ್ಯ ಮಾಡಬಾರದು. ಅದು ತಪ್ಪು! ಅಪರಾಧ! ಪಾಪ!
"ಸರ್, ದೈವದ ಶಕ್ತಿಯ ಮುಂದೆ ಮಾನವ ಎಂದೂ ಗೆದ್ದಿಲ್ಲ. ಬಲಿಷ್ಠ ರಾಕ್ಷಸರೇ ದೇವರ ಕೈಯಲ್ಲಿ ಹತರಾಗಿದ್ದಾರೆ"
ವೀರೇಂದ್ರ ಭಯಭೀತನಾಗಿದ್ದ! ಶಂತನು ಅವರನ್ನು ಎಚ್ಚರಿಸುವಂತೆ ಹೇಳಿದ್ದ.
"ಆ ರಾಕ್ಷಸರು ನಮ್ಮಂತ ವಿಜ್ಞಾನಿಗಳಿರಬಹುದೆ..? ದೇವರ ಸೃಷ್ಟಿಯನ್ನು ಚಾಲೆಂಜ್ ಮಾಡಿದವರನ್ನು ಪುರಾಣಗಳಲ್ಲಿ ರಾಕ್ಷಸರಂತೆ ಚಿತ್ರಿಸಿರಬಹುದು!"
ಶಂತನು ಮಾತು ಮುಗಿಸುವುದರಲ್ಲಿ ಅವರ ಮೊಬೈಲಿಗೆ ಕಾಲ್ ಬಂತು. ನೀನು ಹೋಗಬಹುದು ಎಂಬಂತೆ ಶಂತನು ಸನ್ನೆ ಮಾಡಿದ್ದರು.
ವೀರೇಂದ್ರನ ಕಣ್ಣಿಗೆ ಡಾ.ಶಂತನು ರಾಕ್ಷಸನಂತೆ ಕಂಡಿದ್ದರು! ಈ ಮನುಷ್ಯ ಇಂತಾ ಭಯಾನಕವಾದ ಪ್ರಯೋಗ ಮಾಡಿಯೇ ತೀರುತ್ತಾನೆ ಎನಿಸಿತ್ತು! ಹಾಗೇನಾದರೂ ಅದರೆ ಈ ಜಗತ್ತಿನಲ್ಲಿ ಏನೆಲ್ಲಾ ಅನಾಹುತವಾಗಬಹುದು?!
* * * * * * * * * *
ಡಾ.ಶಂತನು ಬರುತ್ತಿದ್ದಂತೆ ಸಭಾಂಗಣ ಸ್ಥಬ್ದವಾಯಿತು. ಶಂತನು ವೇದಿಕೆಯ ಮೇಲೆ ಬಂದರು. ಎಲ್ಲರನ್ನೂ ಉದ್ದೇಶಿಸಿ ಮಾತಾಡತೊಡಗಿದರು. ವೀರೇಂದ್ರ ಉಸಿರು ಬಿಗಿಹಿಡಿದು ಅವರ ಮಾತನ್ನು ಎಚ್ಚರಿಕೆಯಿಂದ ಆಲಿಸತೊಡಗಿದ.
ಸಭಾಂಗಣದ ತೆರೆಯ ಮೇಲೆ ಡಾ.ಶಂತನು ಕಂಪ್ಯೂಟರಿನ ಮೂಲಕ ಚಿತ್ರಗಳನ್ನು ಪೆÇ್ರಜೆಕ್ಟ್ ಮಾಡಿದರು. ಒಂದೊಂದಾಗಿ ಅವುಗಳ ಬಗೆಗೆ ವಿವರಿಸುತ್ತಾ ವಿಷಯ ಮಂಡಿಸತೊಡಗಿದರು.
ಎಲ್ಲ ಧರ್ಮಗಳಲ್ಲಿ ಬೇರೆಬೇರೆ ತಲೆ ಮತ್ತು ದೇಹಗಳನ್ನು ಹೊಂದಿರುವ ಪಾತ್ರಗಳನ್ನು ತೋರಿಸುತ್ತಾ ‘ವೈದ್ಯವಿಜ್ಞಾನ ಬಹಳ ಹಿಂದೆಯೇ ಮುಂದುವರಿದಿತ್ತು. ನಾವೀಗ ಯಶಸ್ವಿಯಾಗಿ ಮಾಡುತ್ತಿರುವ ಅಂಗಾಗ ಕಸಿಗಿಂತಲೂ ಮುಂದುವರಿದು ಇಡೀ ತಲೆಯನ್ನೇ ಕಸಿ ಮಾಡುತ್ತಿದ್ದರು. ಅದನ್ನು ನಾವು ಕೂಡ ಈಗ ಮಾಡಲು ಸಾಧ್ಯ’ ಎಂದು ಸಭೆಗೆ ತಮ್ಮ ವಿಚಾರ ವಿವರಿಸಿದರು. ಅದನ್ನು ಹೇಗೆ ಮಾಡಬಹುದು ಎನ್ನುವುದರ ಬಗೆಗೆ ಸಾಕಷ್ಟು ತಾಂತ್ರಿಕ ವಿವರಗಳನ್ನೂ ನೀಡಿದರು.
ಸಭಾಂಗಣದಲ್ಲಿ ಸೂಜಿ ಕೆಳಕ್ಕೆ ಬಿದ್ದರೂ ಕೇಳುವಷ್ಟು ನಿಶ್ಯಬ್ದತೆ! ಆನ ಉಸಿರು ಬಿಗಿಹಿಡಿದು ಅವರ ಮಾತುಗಳನ್ನು ಕೇಳುತ್ತಿದ್ದರು! ಡಾ.ಶಂತನು ಮೋಡಿ ಮಾಡಿದ್ದಂತಿತ್ತು! ಅವರೆಲ್ಲ ಕಣ್ಣು ಬಾಯಿ ತೆರೆದು, ಅವರ ಪ್ರತಿಯೊಂದು ಮಾತನ್ನೂ ಮನಸ್ಸಿನಲ್ಲೇ ಮುದ್ರಿಸಿಕ್ಕೊಳ್ಳುತ್ತಿದ್ದಂತಿತ್ತು! ಯಾರೂ ಊಹಿಸದ, ಅಸಾಧ್ಯವೆನಿಸುವ ವಿಷಯವೊಂದು ಅವರೆಲ್ಲರನ್ನೂ ಬೆರೆಗಾಗಿಸಿತ್ತು! ಮನುಷ್ಯರ ತಲೆಯನ್ನೇ ಬದಲಾಯಿಸಿಬಿಡುವುದೆ..? ಸಾಧ್ಯವೆ..? ಸಾಧ್ಯವೆನಿಸುವ ಎಲ್ಲ ತಾಂತ್ರಿಕ ಸೂಕ್ಷ್ಮಗಳನ್ನೂ ಹೇಳುತ್ತಿದ್ದರು.
"ಇದು ಸಾಧ್ಯವೆ..?"
ಓರ್ವ ವಿಜ್ಞಾನಿ ಕೇಳಿದರು.
"ಖಂಡಿತವಾಗಿ ಸಾಧ್ಯ!"
"ಮೈ ಗಾಡ್!"
"ಅಮೇಜಿಂಗ್"
"ಐ ಕೆನಾಟ್ ಬಿಲೀವ್"
"ಇಟ್ ಈಜ್ ಇಂಪಾಸಿಬಲ್"
ಅಲ್ಲಿದ್ದವರೆಲ್ಲಾ ಅನೇಕ ರೀತಿಯಲ್ಲಿ ಉದ್ಗರಿಸಿದರು.
"ಐದು ವರ್ಷದ ಹಿಂದೆ ಇದು ಇಂಪಾಸಿಬಲ್..ಆದರೆ ಈಗ 21ನೆ ಶತಮಾನದಲ್ಲಿ ತಂತ್ರಜ್ಞಾನ ತುಂಬಾ ಮುಂದುವರಿದಿದೆ. ಈಗ ಇದು ಸಾಧ್ಯವಾಗಿದೆ"
ಶಂತನು ಮಾತಿನಲ್ಲಿ ಅಗಾಧವಾದ ವಿಶ್ವಾಸವಿತ್ತು.
"ಕುತ್ತಿಗೆಯಲ್ಲಿ ಹಾದು ಬರುವ ನೂರಾರು ನರಗಳು, ಬೆನ್ನು ಮೂಳೆಯ ಮೂಲಕ ಹಾದು ಹೋಗುವ ಸೂಕ್ಷ್ಮಾತಿಸೂಕ್ಷ್ಮ ನರಗಳು..? ಓ ಮೈ ಗಾಡ್ ಇಟ್ ಇಸ್ ಇಂಪಾಸಿಬಲ್"
ಜರ್ಮನಿಯ ಸ್ಟೂವರ್ಟ್ ಉದ್ಗರಿಸಿದರು.
"ಮೈ ಡಿಯರ್ ಫೆಲೋ ಸೈಂಟಿಸ್ಟ್ಸ್! ಇಟ್ ಈಜ್ ಪ್ರೂವ್ಡ್. ಅದಕ್ಕೆ ಸಾಕ್ಷಿ ಇಲ್ಲಿದೆ…" ಶಂತನು ತಮ್ಮ ಉದ್ಯೋಗಿಯೊಬ್ಬರಿಗೆ ಸನ್ನೆ ಮಾಡಿದರು. ಅವರು ಹೊರಗಿನಿಂದ ಒಂದು ಟ್ರಾಲಿಯನ್ನು ತಳ್ಳಿಕೊಂಡು ಬಂದರು. ಅದನ್ನು ಪೂರ್ಣವಾಗಿ ಬಟ್ಟೆಯಿಂದ ಮುಚ್ಚಲಾಗಿತ್ತು.
ನೆರೆದಿದ್ದವರೆಲ್ಲಾ ಏನೋ ವಿಚಿತ್ರ ಘಟನೆ ನಡೆಯಲಿದೆ ಎಂಬುದನ್ನು ಊಹಿಸಿದ್ದರು. ಭಯ ಮತ್ತು ಕುತೂಹಲದಿಂದ ಆ ಟ್ರಾಲಿಯತ್ತ ನೋಡಿದರು.
ಆ ಟ್ರಾಲಿಯ ಮೇಲಿದ್ದ ಬಟ್ಟೆಯನ್ನು ಶಂತನು ಸರಿಸಿದರು. ಒಳಗೆ ಒಂದು ಕೋತಿಯಿತ್ತು!
"ಮೂರು ತಿಂಗಳ ಹಿಂದೆ ಈ ಕೋತಿಯ ತಲೆಯನ್ನು ನನ್ನ ಪ್ರಯೋಗಶಾಲೆಯಲ್ಲಿಯೇ ಕಸಿ ಮಾಡಿದೆ" ಶಂತನು ಹೆಮ್ಮೆಯಿಂದ ಹೇಳಿ ಎಲ್ಲರತ್ತ ನೋಡಿದರು!
ವೈದ್ಯಕ್ಷೇತ್ರದ ಆ ಅಚ್ಚರಿಗೆ ಕೆಲವು ನಿಮಿಷಗಳು ಸಭೆಯಲ್ಲಿ ಮೌನ!
"ಡಾ.ಶಂತನು ಯೂ ಅರ್ ಎ ಜೀನಿಯಸ್"
ಯಾರೋ ಉಸಿರಿದರು.
"ಕೋತಿಗೇನೋ ಸರಿ, ಆದರೆ ಮನುಷ್ಯರಿಗೆ…?"
"ಸಾಧ್ಯ! ನೂರಕ್ಕೆ ನೂರು ಸಾಧ್ಯ"
"ಹೀಗೆ ತಲೆ ಬದಲಾದಾಗ ಆ ಮನುಷ್ಯ ಯಾರು? ತಲೆಯೋ ಇಲ್ಲ ದೇಹವೋ..?"
ಒಬ್ಬರು ತಮ್ಮ ಸಂದೇಹ ಮುಂದಿಟ್ಟರು.
"ಅದು, ತಲೆಯೇ. ಮಿದುಳೇ ಮನುಷ್ಯನ ಅಸ್ತಿತ್ವ; ಪ್ರಜ್ಞಾ ಕೇಂದ್ರ. ಮಿದುಳಿನ ಸಹಾಯದಿಂದಲೇ ಮನಸ್ಸು. ತಲೆಯನ್ನು ಯಾವ ದೇಹದ ಮೇಲಿಟ್ಟರೂ ಅದು ಆ ಮನುಷ್ಯನೇ! ಕುತ್ತಿಗೆಯ ಕೆಳಗಿನ ಭಾಗ ಒಂದು ಯಂತ್ರದ ಬಿಡಿ ಭಾಗದಂತೆ"
"ಕೆಲವೊಮ್ಮೆ ಬದಲಾಯಿಸಿದ ಹೃದಯವನ್ನೇ ದೇಹ ಒಪ್ಪುವುದಿಲ್ಲ. ಇಡೀ ದೇಹವನ್ನೇ ಬದಲಾಯಿಸಿದರೆ ಒಪ್ಪುತ್ತದೆಯೇ..?"
"ಒಪ್ಪುವಂತೆ ಮಾಡಲು ಒಂದು ವರ್ಷ ದೇಹ ಕಸಿ ಮಾಡಿದ ವ್ಯಕ್ತಿಯನ್ನು ಕೋಮಾ ಅವಸ್ಥೆಯಲ್ಲಿಯೇ ಇಡಲಾಗುವುದು. ಕೋಮಾ ಅವಸ್ಥೆಗೆ ಕಾರಣ ಒಂದು ಚೂರೂ ಅಲುಗದಂತೆ ದೇಹ ಮತ್ತು ತಲೆಯನ್ನು ಸ್ಥಿರವಾಗಿಡಬೇಕು. ಇಲ್ಲವಾದರೆ ನರಗಳು ಒಂದಕ್ಕೊಂದು ಬೆಸೆದುಕ್ಕೊಳ್ಳದೆ ಸರ್ಜರಿ ವಿಫಲವಾಗುವುದು! ಅದಕ್ಕಿಂತಲೂ ಎರಡು ಜೀವಿಗಳ ಹರಣವಾಗುವುದು!"
"ಎರಡು ಜೀವಿಗಳು? ಅಂದರೆ..?"
"ಒಬ್ಬ ದೇಹ ದಾನ ಮಾಡುವವನು ಇನ್ನೊಬ್ಬ ದಾನ ಪಡೆಯುವವನು"
"ದೇಹ ದಾನ ಮಾಡಿದವನ ಕತೆ..?"
"ದೇಹ ದಾನ ಮಾಡುವವನ ಮಿದುಳು ಎಲ್ಲ ರೀತಿಯಲ್ಲೂ ನಿಷ್ಕ್ರಿಯವಾಗಿದ್ದು ಆತ ಆ ಸ್ಥಿತಿಯಲ್ಲಿ ಬದುಕಿಯೂ ಸತ್ತಂತೆ ಇರುತ್ತಾನೆ. ಅಂತವನ ಶರೀರವನ್ನು ಮಾತ್ರ ದಾನ ಪಡೆಯಲಾಗುತ್ತದೆ’
“ದಾನಿಯ ಗತಿ?”
“ದಾನಿಯ ನಿಷ್ಕ್ರಿಯ ತಲೆಯನ್ನು ದಾನ ಪಡೆದವನ ದೇಹಕ್ಕೆ ಸೇರಿಸಿ ವಾರಸುದಾರರಿಗೆ ಸಂಸ್ಕಾರಕ್ಕಾಗಿ ಕೊಡಲಾಗುವುದು"
"ಅಂದರೆ ದಾನಿ ಸತ್ತಂತೆಯೇ..!!"
"ಮಿದುಳು ನಿಷ್ಕ್ರಿಯವಾಗಿರುವ ಅವನು ಎಂದೋ ಸತ್ತಿರುತ್ತಾನೆ. ದೇಹವಷ್ಟೇ ಜೀವಿಸಿರುತ್ತದೆ"
"ಅಂತವರು..?"
"ಸಿಗುತ್ತಾರೆ..ಅನೇಕ ಕಾರಣಗಳಿಂದ ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿರುವವರು ಇರುತ್ತಾರೆ. ಉದಾಹರಣೆಗೆ ಅಪಘಾತಗಳಲ್ಲ್ಲಿ ತಲೆಗೆ ಏಟು ಬಿದ್ದವರು, ಕ್ಯಾನ್ಸರಿಗೆ ತುತ್ತಾಗಿರುವವರು ಇನ್ನೂ ಹಲವಾರು ಕಾರಣಗಳಿಂದ ಸತ್ತಿರುವ ವ್ಯಕ್ತಿಗಳು ಸಿಗುತ್ತಾರೆ. ಅವರ ಬಂಧುಗಳ ಮನ ಒಲಿಸಿದರೆ ಶರೀರ ದಾನಕ್ಕೆ ಸಿದ್ಧರಾಗುತ್ತಾರೆ"
"ಅಂದರೆ ನೀವು ಈ ಶಸ್ತ್ರ ಚಿಕಿತ್ಸೆಗೆ ಸಿದ್ಧರಾಗಿದ್ದೀರ.."
"ವೈದ್ಯಕೀಯ ಕ್ಷೇತ್ರದಲ್ಲಿ ಇದು ಮಹತ್ತರವಾದ ಹೆಜ್ಜೆ. ಮನುಷ್ಯ ಸಾವನ್ನು ಗೆಲ್ಲಬಲ್ಲನೆ ಎಂಬ ಪ್ರಶ್ನೆಗೆ ಅರ್ಧ ಉತ್ತರ ಈ ಪ್ರಯೋಗ!"
"ಇದನ್ನು ಯಾವಾಗ ಕಾರ್ಯಗತಗೊಳಿಸುತ್ತೀರಿ..?"
"ಇಲ್ಲಿ ಕಾನೂನಿನ ತೊಡಕುಗಳಿವೆ. ನೈತಿಕತೆ ಎಂದು ಇಲ್ಲಿನ ಜನ ಬೊಬ್ಬೆ ಹೊಡೆಯುತ್ತಾರೆ. ಇಂತಾ ಪ್ರಯೋಗ ಪ್ರಕೃತಿಯ ವಿರುದ್ಧ, ದೇವರ ವಿರುದ್ಧ ಎಂದು ಗುಲ್ಲೆಬ್ಬಿಸುತ್ತಾರೆ. ಅದಕ್ಕೇ ಇದನ್ನು ಈ ದೇಶದಲ್ಲಿ ಮಾಡುವುದಿಲ್ಲ. ಬದಲಿಗೆ ವಿದೇಶವೊಂದರಲ್ಲಿ ಮಾಡುತ್ತೇನೆ. ಇದಕ್ಕೆ ನುರಿತ ವೈದ್ಯರ ತಂಡವೇ ಬೇಕು. ನನ್ನ ಜೊತೆಯಲ್ಲಿ ಅನೇಕ ವೈದ್ಯರು ಈ ಪ್ರಯೋಗದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗಲಿದೆ. ಆದರೆ ಈ ಮೂಲ ಸಂಶೋಧನೆ ನನ್ನದೇ! ಆ ದಿನಾಂಕ, ದೇಶ ಮತ್ತು ಜಾಗವನ್ನು ಈಗ ಹೇಳುವುದಿಲ್ಲ. ಪ್ರಯೋಗ ಯಶಸ್ವಿಯಾದ ನಂತರ ಪ್ರಕಟಪಡಿಸುತ್ತೇನೆ. ನೀವು ನನ್ನ ಈ ಪ್ರಯೋಗ ಮತ್ತು ಅವಿಷ್ಕಾರದ ಬಗೆಗೆ ಸುದ್ದಿ ಕೊಡಬಹುದು. ವಿಜ್ಞಾನ ಜಗತ್ತಿನ ಅಪ್ರತಿಮ ಶೋಧನೆ ಲೋಕಕ್ಕೆ ತಿಳಿಯಲಿ"
ಶಂತನು ಕೊನೆಯದಾಗಿ ಹೇಳಿದರು. ಅಷ್ಟರಲ್ಲಿ ಪರಿಚಾರಕರು ಬಂದವರಿಗೆ ಶಂತನು ಅವರ ವಿಶೇಷ ಅವಿಷ್ಕಾರ, ಗಿಡಮೂಲಿಕೆಗಳಿಂದ ತಯಾರಿಸಿದ ಪೇಯವನ್ನು ಸರಬರಾಜು ಮಾಡತೊಡಗಿದರು.
ಅಲ್ಲಿ ನೆರೆದಿದ್ದವರಲ್ಲಿ ನೂರಾರು ಸಂದೇಹಗಳಿದ್ದವು ಆದರೆ ಅವುಗಳೆಲ್ಲಕ್ಕೂ ಉತ್ತರಿಸುವ ಸಹನೆ ಶಂತನು ಅವರಲ್ಲಿರಲಿಲ್ಲ.
"ನನ್ನ ವಿಶೇಷ ಪೇಯವನ್ನು ಸವಿಯಿರಿ. ನಂತರ ಆಚೆ ಗಾರ್ಡನ್ನಿನಲ್ಲಿ ಊಟ ಮರೆಯದೆ ಮಾಡೋಣ. ಅಲ್ಲಿಯೂ ನನ್ನೊಂದಿಗೆ ವಿಚಾರ ವಿನಿಮಯ ಮಾಡಿಕ್ಕೊಳ್ಳಬಹುದು. ಇಲ್ಲಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು"
ಶಂತನು ಸಭಾಂಗಣದ ವೇದಿಕೆಯ ಬಳಿಯಿದ್ದ ಬಾಗಿಲಿನ ಮೂಲಕ ನಿರ್ಗಮಿಸಿದರು.
“ಇದು ಯಶಸ್ವಿಯಾಗಬಹುದಾ?”
ವಿಸ್ಮಯದಿಂದ ಶಂತನು ನೋಡುತ್ತಿದ್ದ ವೈದ್ಯರೊಬ್ಬರು ಉದ್ಗರಿಸಿದರು.
“ಈತ ಪ್ರಚಂಡ! ಹೇಳಿದ್ದೆಲ್ಲಾ ಸಾಧಿಸಿದ್ದಾನೆ!”
ಇನ್ನೊಬ್ಬರು ಶಂತನುವನ್ನು ಪ್ರಶಂಸಿದರು.
“ಕಾಲವೇ ಇದಕ್ಕೆ ಉತ್ತರ ನೀಡುತ್ತದೆ”
ಮತ್ತೊಬ್ಬ್ಬರು ಉದ್ಗರಿಸಿದರು.
ವೀರೇಂದ್ರನ ಮನಸ್ಸಿನಲ್ಲಿ ತ್ರಿಶಂಕುವಿಗೆ ಬೇರೊಂದು ಸ್ವರ್ಗ ನಿರ್ಮಿಸಿದ ವಿಶ್ವಾಮಿತ್ರನ ನೆನಪಾಯಿತು!!
-ಎಸ್.ಜಿ.ಶಿವಶಂಕರ್