ಅಮೇರಿಕಾದ ಕ್ರಮ ಪ್ರಜಾಪ್ರಭುತ್ವಕ್ಕೆ ಅಪಾಯ : ಎಡ್ವರ್ಡ್ ಸ್ನೋಡೆನ್, ಮಾಜಿ ಸಿಐಎ ಉದ್ಯೋಗಿ
“ನಾನು ಮತ್ತೆ ಮನೆಗೆ ತೆರಳುತ್ತೇನೆಂಬ ಭರವಸೆಯಿಲ್ಲ. ತಮ್ಮ ಹೆಸರಿನಲ್ಲಿ ಸರ್ಕಾರಗಳು ನಡೆಸುತ್ತಿರುವ ಕೃತ್ಯಗಳನ್ನು ಜನತೆಗೆ ತಿಳಿಸುವುದಷ್ಟೇ ನÀನ್ನ ಉದ್ದೇಶ. ನನಗೆ ರೂ. 1 ಕೋಟಿ ಸಂಬಳ, ಒಳ್ಳೆಯ ಗೆಳತಿ, ಹವಾಯಿ ದ್ವೀಪದಲ್ಲೊಂದು ಐಷಾರಾಮಿ ಮನೆ ಮತ್ತು ಆತ್ಮೀಯ ಬಂಧುವರ್ಗದವರೆಲ್ಲರೂ ಇದ್ದು ಆರಾಮ ಜೀವನ ನಡೆಸಬಹುದು. ಆದರೆ, ಇವೆಲ್ಲವನ್ನೂ ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ಏಕೆಂದರೆ, ಅಮೇರಿಕಾ ವಿಶ್ವದಾದ್ಯಂತ ರಹಸ್ಯವಾಗಿ ನಿರ್ಮಿಸುತ್ತಿರುವ ಬೇಹುಗಾರಿಕಾ ವ್ಯವಸ್ಥೆಯು ಪ್ರತಿಯೊಬ್ಬರ ಖಾಸಗಿ ಸ್ವಾತಂತ್ರ್ಯ, ಅಂತರ್ಜಾಲ ಸ್ವಾತಂತ್ರ್ಯ ಮತ್ತು ನಾಗರೀಕ ಸ್ವಾತಂತ್ರ್ಯಗಳನ್ನು ನಾಶಗೊಳಿಸುತ್ತಿರುವುದು ಗೊತ್ತಿದ್ದೂ ಸುಮ್ಮನೆ ಕೂರಲಾರೆ”. – ಎಡ್ವರ್ಡ್ ಸ್ನೋಡೆನ್, ಮಾಜಿ ಸಿಐಎ ಉದ್ಯೋಗಿ, ಮಾಹಿತಿ ಸೋರಿಕೆದಾರ
ಅಮೇರಿಕಾದ ಇತಿಹಾಸದಲ್ಲೇ ಕಂಡರಿಯದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‍ಎಸ್‍ಎ) ಕುರಿತು ರಹಸ್ಯ ಮಾಹಿತಿ ಸೋರಿಕೆಯಾಗಿದ್ದು, ಅಮೇರಿಕಾ ಸರ್ಕಾರ ಮಾತ್ರವಷ್ಟೇ ಅಲ್ಲ ವಿಶ್ವದ ಹಲವು ರಾಷ್ಟ್ರಗಳ ಸರ್ಕಾರ ಮತ್ತು ಪ್ರಜೆಗಳನ್ನು ಇದು ದಂಗುಬಡಿಸಿದೆ. ಅಮೇರಿಕಾ ಸರ್ಕಾರ ತನ್ನ ಶತ್ರುಗಳ ದೂರವಾಣಿ ಕರೆ ಮತ್ತು ಇ-ಮೇಲ್‍ಗಳನ್ನು ಮಾತ್ರವೇ ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿಲ್ಲ, ತನ್ನ ಪ್ರತಿ ಪ್ರಜೆಯ ದೂರವಾಣಿ ಮತ್ತು ಇ-ಮೇಲ್ ಸಂಭಾಷಣೆಗಳನ್ನು ಸಹ ರೆಕಾರ್ಡ್ ಮಾಡಿಕೊಳ್ಳುತ್ತಿರುವ ಆಘಾತಕಾರಿ ಅಂಶ ಬಟಾಬಯಲಾಗಿದೆ. ಹೀಗೆ ಅಂತರ್ಜಾಲ ಮತ್ತು ದೂರವಾಣಿ ಕರೆಗಳನ್ನು ಸಂಗ್ರಹಿಸಿ ಬೇಹುಗಾರಿಕೆ ಮಾಡುತ್ತಿರುವುದರಿಂದ ಭಯೋತ್ಪಾದಕ ಕೃತ್ಯಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆಂದು ಅಮೇರಿಕದ ಸೆನೆಟ್ ಮತ್ತು ಬೇಹುಗಾರಿಕಾ ಸ್ಥಾಯಿ ಸಮಿತಿಗಳು ಸಮರ್ಥಿಸಿಕೊಂಡಿದ್ದರೆ, ಇದು ವ್ಯಕ್ತಿಗಳ ಖಾಸಗಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿಬರತೊಡಗಿದೆ. ಯೂರೋಪ್ ಒಳಗೊಂಡು ಹಲವು ರಾಷ್ಟ್ರಗಳು ಅಮೇರಿಕಾ ಸರ್ಕಾರದ ಈ ಕ್ರಮದ ಕುರಿತು ಸ್ಪಷ್ಟನೆ ಕೇಳಿವೆ.
ಮಾಹಿತಿ ಕದಿಯುವ ತಂತ್ರಾಂಶ ಮತ್ತು ಪ್ರಿಸಂ ಎಂಬ ಗೋಪ್ಯ ಯೋಜನೆ:
‘ಪ್ರಿಸಂ’ ಎಂಬ ಗೋಪ್ಯ ಯೋಜನೆಯಡಿ ಎನ್‍ಎಸ್‍ಎ ಮತ್ತು ಫೆಡರಲ್ ಬ್ಯೂರೋ ಆಫ್ ಇನ್‍ವೆಸ್ಟಿಗೇಷನ್ (ಎಫ್‍ಬಿಐ) ಸಂಸ್ಥೆಗಳು ದೇಶದ ಪ್ರಮುಖ ಇಂಟರ್‍ನೆಟ್ ಕಂಪನಿಗಳಾದ ಮೈಕ್ರೋಸಾಫ್ಟ್, ಯಾಹೂ, ಎಒಎಲ್, ಸ್ಕೈಪ್, ಯೂಟ್ಯೂಬ್, ಆಪಲ್, ಫೇಸ್‍ಬುಕ್, ಗೂಗಲ್, ಇತ್ಯಾದಿಗಳಿಂದ ವ್ಯಕ್ತಿಗಳ ಧ್ವನಿ, ವೀಡಿಯೋ, ಪೋಟೋಗಳು, ಇ-ಮೇಲ್‍ಗಳು, ದಾಖಲೆಗಳು ಮತ್ತು ವ್ಯಕ್ತಿಗಳು ಕಂಪ್ಯೂಟರ್ ಬಳಸುವ ಸಮಯಗಳನ್ನು ಪಡೆದುಕೊಂಡು ಈ ಮುಖೇನಾ ವ್ಯಕ್ತಿಗಳ ಚಲನವಲನಗಳು ಮತ್ತು ಅವರು ಇತರರೊಂದಿಗೆ ಹೊಂದಿರುವ ಸಂಪರ್ಕಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ.
ಎನ್‍ಎಸ್‍ಎ ಅಭಿವೃದ್ಧಿ ಪಡಿಸಿರುವ ‘ಬೌಂಡ್‍ಲೆಸ್ ಇನ್‍ಫಾರ್ಮಂಟ್’ (ದತ್ತಾಂಶ ಕದಿಯುವ ತಂತ್ರಾಂಶ) ಮೂಲಕ ಇದುವರೆಗೆ ರಹಸ್ಯವಾಗಿ ಬೇಹುಗಾರಿಕೆ ನಡೆಸಿ ಸಂಗ್ರಹಿಸಿರುವ ಹಲವು ದಾಖಲೆಗಳು ತನ್ನ ಬಳಿಯಿವೆ ಎಂದು ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ. ಹಲವು ದೇಶಗಳ ಅಂತರ್ಜಾಲ, ಸಾಮಾಜಿಕ ಜಾಲ ತಾಣಕ್ಕೆ ಲಗ್ಗೆಯಿಟ್ಟ ನಕ್ಷೆ, ಕಂಪ್ಯೂಟರ್ ಮತ್ತು ದೂರವಾಣಿ ಮೂಲಕ ಶೋಧಿಸಿ ಕಲೆ ಹಾಕಿದ ಮಹತ್ವದ ದಾಖಲೆಗಳ ರಾಶಿಯೇ ತನ್ನಲ್ಲಿದೆ ಎಂದು ಪತ್ರಿಕೆ ತಿಳಿಸಿದೆ. ‘ಬೌಂಡ್‍ಲೆಸ್ ಇನ್‍ಫಾರ್ಮಂಟ್’ (ದತ್ತಾಂಶ ಕದಿಯುವ ತಂತ್ರಾಂಶ) ಮೂಲಕ ಜಾಗತಿಕವಾಗಿ ಸುಮಾರು 9,700 ಕೋಟಿ ರಹಸ್ಯ ಮಾಹಿತಿಗಳನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆಯು ಹೆಕ್ಕಿ ತೆಗೆದಿದೆ ಎನ್ನಲಾಗಿದೆ. ವೆರಿಜೋನ್ ಎಂಬ ದೂರವಾಣಿ ಕಂಪನಿಯು ಅಮೇರಿಕಾ ಸರ್ಕಾರದ ಆದೇಶದ ಮೇರೆಗೆ ಪ್ರಜೆಗಳ ಎಲ್ಲ ದೂರವಾಣಿ ಕರೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕೊಡುತ್ತಿದ್ದು, ಇದೇ ರೀತಿ ಇತರೆ ದೂರವಾಣಿ ಕಂಪನಿಗಳು ಮಾಡುತ್ತಿರಬಹುದು ಎಂದು ಬ್ರಿಟನ್‍ನ ಗಾರ್ಡಿಯನ್ ಪತ್ರಿಕೆ ವರದಿ ಮಾಡಿತ್ತು.
ಸೈಬರ್ ಸೆಕ್ಯುರಿಟಿ ಹೆಸರಿನಲ್ಲಿ ಜನತೆ ಟಾರ್ಗೆಟ್:
ಗೂಢಲಿಪಿಶಾಸ್ತ್ರದಲ್ಲಿ ಅಮೇರಿಕಾದ ಸಂಶೋಧನೆ ಮತ್ತಷ್ಟು ಪ್ರಗತಿ ಹೊಂದಿದ್ದು ಇತರೆ ದೇಶಗಳ ಸರ್ಕಾರಗಳ ಮಾಹಿತಿ ಮಾತ್ರವನ್ನಷ್ಟೇ ತಡೆಹಿಡಿದು ವಿಶ್ಲೇಷಿಸುವುದಿಲ್ಲ, ಸಂವಹನ ಸಾಧನ ಹೊಂದಿರುವ ಜಗತ್ತಿನ ಪ್ರತಿಯೊಬ್ಬರೂ ಅದಕ್ಕೆ ಟಾರ್ಗೆಟ್. ಅಮೇರಿಕಾದ ಉಟಾ ಎಂಬ ಸ್ಥಳದಲ್ಲಿ ಎನ್‍ಎಸ್‍ಎ ಸಂಸ್ಥೆಯು ರೂ. 12,000 ಕೋಟಿ ವೆಚ್ಚದಲ್ಲಿ ವಿಶ್ವದ ಅತಿದೊಡ್ಡ ಬೇಹುಗಾರಿಕಾ ನೆಲೆ ಸ್ಥಾಪಿಸುತ್ತಿದೆ. ಅದನ್ನು ಉಟಾ ದತ್ತಾಂಶ ಕೇಂದ್ರ ಎಂದು ಕರೆದರೂ ಅದರ ಕೆಲಸವೆಂದರೆ ವಿಶ್ವದ ಎಲ್ಲೆಡೆ ಹರಡಿರುವ ಸಂವಹನ ಉಪಗ್ರಹಗಳು ಮತ್ತು ಭೂಮಿಯೊಳಗೆ ಹಾಗೂ ಸಮುದ್ರದೊಳಗೆ ಹಾದುಹೋಗಿರುವ ರಾಷ್ಟ್ರೀಯ, ಅಂತರಾಷ್ಟ್ರೀಯ, ದೇಶೀಯ ಮತ್ತು ವಿದೇಶಿ ಕೇಬಲ್ ಜಾಲಬಂಧಗಳನ್ನು ಎಡತಾಕಿ ಅಗಾಧ ಪ್ರಮಾಣದ ಮಾಹಿತಿಗಳನ್ನು ತಡೆಹಿಡಿದು, ಹೆಕ್ಕಿತೆಗೆದು, ವಿಶ್ಲೇಷಿಸಿ ಸಂಗ್ರಹಿಸಿಡುವ ಯೋಜನೆ. ಈ ಕೇಂದ್ರವು ಹಣಕಾಸು ಮಾಹಿತಿ, ಬಿಸಿನೆಸ್ ಡೀಲ್‍ಗಳು, ವಿದೇಶಿ ಮಿಲಿಟರಿ ಮತ್ತು ರಾಯಭಾರ ರಹಸ್ಯಗಳು, ಕಾನೂನು ದಾಖಲಾತಿಗಳು, ರಹಸ್ಯವಾದ ಕೋಟಿಗಟ್ಟಲೆ ವೈಯುಕ್ತಿಕ ಸಂವಹನಗಳನ್ನು ಸೂಪರ್ ಕಂಪ್ಯೂಟರ್‍ಗಳ ನೆಟ್‍ವರ್ಕ್ ಮೂಲಕ ಹೆಕ್ಕಿತೆಗೆಯುತ್ತದೆ.
ಒಂದು ಕಿರುಬೆರಳಿನ ಗಾತ್ರದ ಪೆನ್‍ಡ್ರೈವ್‍ನಲ್ಲಿ 1 ಟೆರಾಬೈಟ್ (1 ಟೆರಾಬೈಟ್ ಅಂದರೆ 1000 ಗಿಗಾ ಬೈಟ್, ಜಿಬಿ – ಸಾಮಾನ್ಯ ಬಳಕೆದಾರರು ಬಳಸುವ ಕಂಪ್ಯೂಟರ್‍ನ ಮೆಮೊರಿಯು ಸುಮಾರು 500ಜಿಬಿ ಇರುತ್ತದೆ.) ಮಾಹಿತಿ ಸಂಗ್ರಹಿಸಿಡಬಹುದು. ಅಮೇರಿಕಾದ ರಕ್ಷಣಾ ವಿಜ್ಞಾನ ಮಂಡಳಿಯ 2010ರ ವರದಿ ಪ್ರಕಾರ ಬೇಹುಗಾರಿಕೆ ಸಂಸ್ಥೆ ಪೆಂಟಗನ್, ವಿಶ್ವದಾದ್ಯಂತ ತನ್ನ ತಂತು ಮತ್ತು ತಂತು-ರಹಿತ ಸೆನ್ಸಾರ್ ಜಾಲಬಂಧ (ನೆಟ್‍ವರ್ಕ್)ಗಳನ್ನು ವಿಸ್ತರಿಸಿ ಯೊಟ್ಟಾ ಬೈಟ್ ಗಾತ್ರದಷ್ಟು (1 ಯೊಟ್ಟಾಬೈಟ್ ಅಂದರೆ 1024 ಬೈಟ್‍ಗಳಷ್ಟು. ಇದರ ಮುಂದಿನ ಹಂತದ ಸಂಖ್ಯೆಗೆ ಯಾರೂ ಕೂಡ ಹೆಸರು ಕಂಡುಹಿಡಿದಿಲ್ಲ!) ಮಾಹಿತಿ ಸಂಗ್ರಹಿಸುವ) ಮೆಮರಿ ಇರುವ ಜಾಗತಿಕ ಮಾಹಿತಿ ಜಾಲಬಂಧವನ್ನು ನಿರ್ಮಿಸುತ್ತಿದೆ. ಗೂಗಲ್ ಕಂಪನಿಯ ಹಿಂದಿನ ಮುಖ್ಯಸ್ಥ ಎರಿಕ್ ಸ್ಮಿಮ್ಟ್ ಪ್ರಕಾರ 2010 ರಿಂದ 2015 ರ ನಡುವೆ ಜಾಗತಿಕ ಇಂಟರ್‍ನೆಟ್ ಟ್ರಾಫಿಕ್ ಸುಮಾರು 966 ವಾರ್ಷಿಕ ಎಕ್ಸಾಬೈಟ್ ತಲುಪತ್ತದೆ (10 ದಶಲಕ್ಷ ಎಕ್ಸಾಬೈಟ್‍ಗಳು ಒಂದು ಯೊಟ್ಟಾಬೈಟ್‍ಗೆ ಸಮ). ಮನುಷ್ಯನ ಉಗಮದಿಂದ ಆರಂಭಿಸಿ 2003 ರವರೆಗೆ ಸೃಷ್ಟಿಯಾಗಿರುವ ಒಟ್ಟಾರೆ ಮಾನವನ ಜ್ಞಾನದ ಕೇವಲ 5 ಎಕ್ಸಾಬೈಟ್ ಅಷ್ಟೇ! 2011 ರ ಹೊತ್ತಿಗೆ ವಿಶ್ವದ 690 ಕೋಟಿ ಜನರ ಪೈಕಿ 200ಕೋಟಿ ಜನ ಇಂಟರ್‍ನೆಟ್ ಸಂಪರ್ಕ ಹೊಂದಿದ್ದರು. 2015ರ ಹೊತ್ತಿಗೆ ಅವರ ಸಂಖ್ಯೆ 270 ಕೋಟಿ ತಲುಪುತ್ತದೆ.
ಬೇಹುಗಾರಿಕೆ ಸಂಸ್ಥೆಯ ಸ್ಫೋಟಕ ಮಾಹಿತಿ ಸೋರಿಕೆ ರೂವಾರಿ ಎಡ್ವರ್ಡ್ ಸ್ನೋಡೆನ್:
ಅಮೇರಿಕಾದ ವಿದೇಶಿ ರಹಸ್ಯ ಬೇಹುಗಾರಿಕೆ ನ್ಯಾಯಾಲಯ (ಎಫ್.ಐ.ಎಸ್.ಸಿ) ಅಮೇರಿಕನ್ನರ ಪೋನ್ ದಾಖಲೆಗಳನ್ನು ಸಂಗ್ರಹಿಸಲು ಹೊರಡಿಸಿದ್ದÀ ರಹಸ್ಯ ನ್ಯಾಯಾಲಯ ಆದೇಶ ಮತ್ತು ಅಮೇರಿಕಾದ 9 ಅಂತರ್ಜಾಲ ಸೇವಾ ಪೂರೈಕೆದಾರ ಕಂಪನಿಗಳಿಂದ ಸರ್ಕಾರ ನಿರಂತರವಾಗಿ ಮಾಹಿತಿ ಪಡೆಯುತ್ತಿರುವ ರಹಸ್ಯ ಯೋಜನೆ ವಿವರಗಳು ಮೊದಲಿಗೆ ಗಾರ್ಡಿಯನ್ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಈ ಸ್ಫೋಟಕ ಮಾಹಿತಿಯನ್ನು ಬಯಲಿಗೆಳೆದಿರುವುದು 29 ವರ್ಷದ ಎಡ್ವರ್ಡ್ ಸ್ನೋಡೆನ್.
ಸ್ನೋಡೆನ್ ಅಮೇರಿಕಾದ ಕಾಲೇಜೊಂದರಲ್ಲಿ ಕಂಪ್ಯೂಟರ್‍ಸೈನ್ಸ್ ವಿಷಯ ಅಭ್ಯಸಿಸುತ್ತಿದ್ದ. ನಂತರ ಪೂರ್ಣಗೊಳಿಸಲಾಗದೆ ಕಾಲೇಜು ತೊರೆದು ಅಮೇರಿಕಾದ ಸೇನೆಯಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ. ಸೇನೆಯಲ್ಲಿ ತರಬೇತಿ ಸಮಯಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ತರಬೇತಿ ತೊರೆದು ರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ. ಆದರೆ ಶಾಲಾಭ್ಯಾಸ ಪೂರ್ಣಗೊಳಿಸದಿದ್ದರೂ, ಅವನ ಕಂಪ್ಯೂಟರ್ ಪ್ರೋಗ್ರಾಂ ಕುರಿತ ಆಗಾಧ ಜ್ಞಾನ ಮತ್ತು ಇಂಟರ್‍ನೆಟ್ ತಿಳುವಳಿಕೆಯಿಂದಾಗಿ ಬಹುಬೇಗ ಅಮೇರಿಕಾದ ಕೇಂದ್ರೀಯ ಬೇಹುಗಾರಿಕಾ ಸಂಸ್ಥೆ (ಸಿಐಎ) ಯಲ್ಲಿ ಕೆಲಸ ದೊರೆಯಿತು. ಸಿಐಎ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ತಾನು ಒಳ್ಳೆಯದು ಮಾಡುತ್ತಿರುವುದಕ್ಕೆ ಬದಲು ಕೆಟ್ಟ ಕೆಲಸದಲ್ಲಿ ಭಾಗಿಯಾಗದ್ದೇನೆಂದು ಅನಿಸತೊಡಗಿತು. ನಂತರ ಸಿಐಎ ಕೆಲಸ ತೊರೆದು ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಕಂಟ್ರ್ಯಾಕ್ಟ್ ಕೆಲಸ ಮಾಡುವ ಕಂಪನಿಯೊಂದಕ್ಕೆ ಸೇರಿದ.
2013 ಮೇ 20ರಂದು ಮೂರ್ಛೆ ರೋಗಕ್ಕೆ ಚಿಕಿತ್ಸೆ ಪಡೆಯಬೇಕೆಂದು ರಜೆ ಪಡೆದು ರಹಸ್ಯವಾಗಿ ಹಾಂಕಾಂಗ್ ತಲುಪಿದ. ಚೀನಾ ದೇಶದ ಭಾಗವಾಗಿರುವ ಹಾಂಕಾಂಗ್‍ನಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಮೇರಿಕಾಗಿಂತಲೂ ಹೆಚ್ಚಿನ ಅವಕಾಶವಿರುವುದರಿಂದ ತನ್ನನ್ನು ರಕ್ಷಿಸಿಕೊಳ್ಳಬಹುದೆಂದು ಇಲ್ಲಿಗೆ ಬಂದಿದ್ದೇನೆ ಎನ್ನುತ್ತಾನೆ. ಇತ್ತ ಅವನ ಬೇಟೆಗಾಗಿ ಅಮೇರಿಕಾದ ಪೊಲೀಸ್ ಮತ್ತು ಬೇಹುಗಾರಿಕೆ ಸಂಸ್ಥೆಗಳು ಹಾಂಕಾಂಗ್ ಗೆ ಲಗ್ಗೆಯಿಟ್ಟಿವೆ. ತಾನು ಮಾಡಿರುವ ಕಾರ್ಯಗಳಿಂದಾಗಿ ತಾನು ಅತೀವ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆಂದು ತಿಳಿದಿರುವ ಸ್ನೋಡೆನ್ ‘ಇಂದು ವಿಶ್ವವನ್ನು ಆಳುತ್ತಿರುವ ರಹಸ್ಯ ಕಾನೂನುಗಳು, ಅಸಮಾನ ಕ್ಷಮಾದಾನ ಮತ್ತು ಜನತೆಯ ಮೇಲೆ ಸವಾರಿ ಮಾಡುವ ಸರ್ಕಾರಗಳ ಅಧಿಕಾರಗಳನ್ನು ಒಂದು ಕ್ಷಣವಾದರೂ ನನ್ನ ಕಾರ್ಯಗಳು ಬಯಲಿಗೆಳೆದಿದ್ದಲ್ಲಿ ನನಗೆ ತೃಪ್ತಿ’ ಎನ್ನುತ್ತಾನೆ.
ಅಮೇರಿಕಾದ ಬೇಹುಗಾರಿಕೆಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಾಹಿತಿ ಸೋರಿಕೆದಾರರು:
ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಪೆಂಟಗನ್ ರಹಸ್ಯ ದಾಖಲೆಗಳನ್ನು ಬಯಲಿಗೆಳೆದ ಡೇನಿಯಲ್ ಎಲ್ಸ್‍ಬರ್ಗ್, ಅಮೇರಿಕಾ ತನ್ನ ರಾಯಭಾರಿ ಕಛೇರಿಗಳ ಮೂಲಕ ಇತರೆ ದೇಶಗಳಲ್ಲಿ ನಡೆಸುತ್ತಿರುವ ಬೇಹುಗಾರಿಕೆ ಸಂಭಾಷಣೆಗಳನ್ನು ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿ ಸೆರೆವಾಸದಲ್ಲಿರುವ ಅಮೇರಿಕಾ ಸೈನಿಕ ಬ್ರ್ಯಾಡ್ಲಿ ಮ್ಯಾನಿಂಗ್, ವಿಕಿಲೀಕ್ಸ್ ವೆಬ್‍ಸೈಟ್ ಮೂಲಕ ಅಮೇರಿಕಾದ ಕೋಟ್ಯಾಂತರ ಗೋಪ್ಯ ಮಾಹಿತಿಗಳನ್ನು ಹೊರಗೆಡಗಿ ಸದ್ಯ ಆಫ್ರಿಕಾ ದೇಶವೊಂದರ ರಾಯಭಾರ ಕಛೇರಿಯಲ್ಲಿ ಅಡಗಿರುವ ಜೂಲಿಯನ್ ಅಸ್ಸಾಂಜ್ ರಂಥಹ ಅತಿದೊಡ್ಡ ಮಾಹಿತಿ ಸೋರಿಕೆದಾರರ ಪ್ರತಿಷ್ಟಿತರ ಪಟ್ಟಿಯಲ್ಲಿ ಇದೀಗ ಎಡ್ವರ್ಡ್ ಸ್ನೋಡೆನ್ ಸೇರ್ಪಡೆಯಾಗಿದ್ದಾನೆ.
ಅಮೇರಿಕಾದಲ್ಲಿ ಸ್ವಾತಂತ್ರ್ಯವೆಂಬ ಬೊಗಳೆ:
‘ನಾನು ಇರಾಕ್ ಯುದ್ದದಲ್ಲಿ ಪಾಲ್ಗೊಂಡು ಹೋರಾಡಬಯಸಿದ್ದೆ. ಏಕೆಂದರೆ ಒಬ್ಬ ಮಾನವೀಯ ಪರ ವ್ಯಕ್ತಿಯಾಗಿ ಇರಾಕ್‍ನಲ್ಲಿ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಒಳಗಾಗಿ ನರಳುತ್ತಿರುವ ಜನತೆಗೆ ಸಹಾಯ ಒದಗಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೆ. ಆದರೆ ಸೇನಾ ತರಬೇತಿಯಲ್ಲಿ ಹಲವು ಶಿಬಿರಾರ್ಥಿ ಸೈನಿಕರು ಅರಬ್ಬರಿಗೆ ಸಹಾಯ ನೀಡುವ ಬದಲು ಅವರನ್ನು ಸಾಯಿಸುವ ಕುರಿತು ಉತ್ಸುಕರಾಗಿದ್ದರು.’ ಹೀಗೆ ತನ್ನ ನಂಬಿಕೆಗಳನ್ನು ಛಿದ್ರಗೊಳಿಸಿದ ಸಂಗತಿಗಳನ್ನು ಹಂಚಿಕೊಂಡಿದ್ದಾನೆ.
‘ಖಾಸಗಿಯಾಗಿ ಬದುಕಲು ಸಾಧ್ಯವಿಲ್ಲದ ಮತ್ತು ಬೌದ್ದಿಕ ಶೋಧನೆ ಹಾಗೂ ಸೃಜನಶೀಲತೆ ಜಾಗವಿಲ್ಲದ ವಿಶ್ವದಲ್ಲಿ ನಾನು ಬದುಕಲು ಸಾಧ್ಯವಿಲ್ಲ’ ‘ಇಂಟರ್‍ನೆಟ್ ಶೋಧನೆ ಜನರ ನಡುವೆ ಅಡೆತಡೆಯಿಲ್ಲದೆ ಸಂಪರ್ಕ ಸಾಧಿಸಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು, ಜ್ಞಾನ ಹರಡಲು ಸಹಕಾರಿಯಾಗಿತ್ತು, ಆದರೆ ಅದನ್ನು ಸರ್ಕಾರಗಳು ತಮ್ಮ ನಿಯಂತ್ರಣದ ಮೂಲಕ ಬುಡಮೇಲು ಮಾಡುತ್ತಿವೆ, ಸರ್ಕಾರಗಳು ಜನತೆ ತಮಗೆ ನೀಡದೇ ಇರುವ ಶಕ್ತಿಯನ್ನು ಜಳಪಿಸತೊಡಗಿವೆ’ ಎನ್ನುತ್ತಾನೆ.
ಭಾರತೀಯ ಜನತೆ ಅಮೇರಿಕಾ ಸರ್ಕಾರದ ಅಂತರ್ಜಾಲ ಬೇಹುಗಾರಿಕಾ ವ್ಯವಸ್ಥೆ ಕುರಿತು ಆತಂಕಪಡುತ್ತಿರುವಾಗಲೇ, ಭಾರತ ಸರ್ಕಾರ ಕೂಡ ಭಯೋತ್ಪಾದನೆ ಕುರಿತು ಮಾಹಿತಿ ಶೋಧಿಸುವ ಹೆಸರಿನಲ್ಲಿ ರಾಷ್ಟ್ರೀಯ ಸೈಬರ್ ಸಂಯೋಜನಾ ಕೇಂದ್ರವನ್ನು ರಚಿಸಿದೆ. ಅದೂ ಕೂಡ ಎಲ್ಲ ಆನ್‍ಲೈನ್ ಅಕೌಂಟ್ ಗಳನ್ನು ನೋಡುವ ಅಧಿಕಾರ ಹೊಂದಿದ್ದು, ಸಂದೇಹಾಸ್ಪದ ಅಕೌಂಟ್‍ಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ಕುರಿತು ವ್ಯಾಪಕ ಚರ್ಚೆ ನಡೆದು ಭಯೋತ್ಪಾದನೆ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರದ ಸೈಬರ್ ನೀತಿ ರೂಪುಗೊಳ್ಳಬೇಕಿದೆ.
********
Informative!! superb..
ಈ ಲೇಖನಕ್ಕಾಗಿ ಧನ್ಯವಾದಗಳು ಜೈಕುಮಾರ್. ಇದನ್ನು ಯಾರಾದರು ಕನ್ನಡದಲ್ಲಿ ಬರೆಯಲಿ ಎಂದು ನಿರೀಕ್ಷಿಸುತ್ತಿದ್ದೆ.
ಒಂದು ಚಿಕ್ಕ ಕರೆಕ್ಷನ್
1 ಯೊಟ್ಟಾ ಬೈಟ್ = 1024 ಝೆಟ್ಟಾಬೈಟ್ 🙂
ಕೆಲ ತಿಂಗಳುಗಳ ಹಿಂದೆ ಮೊದಲಿಗೆ 'ದ ಎನೆಮಿ ಆಫ್ ದಿ ಸ್ಟೇಟ್ 'ಎನ್ನುವ ಚಿತ್ರ ಮತ್ತು ಆಮೇಲೆ 'ಲಾ ಅಬೈಡಿಂಗ್ ಸಿಟಿಜೆನ್' ಚಿತ್ರ ನೋಡಿದ್ದೆ . ಹಾಗೆಯೇ 'ಬಾಡಿ ಆಫ್ ಲೈಸ್ ' ಚಿತ್ರವನ್ನೂ … ಆಗ ನನ್ನ ಮನದಲ್ಲಿ ಮೂಡಿದ ಭಾವ – ಅಬ್ಬಾ ಈ ಅಮೆರಿಕನ್ನರು -ನಿಜವಾಗಿಯೂ ಅಮೆರಿ'ಖನ್ನರು'.. ಸಾಮಾನ್ಯರಲ್ಲ …! ಅವಳಿ ಗೋಪುರಗಳ ವಿದ್ವಂಸಕ ಕೃತ್ಯದ ನಂತರ ಅವರ ರಕ್ಷಣಾ ವ್ಯವಸ್ಥೆ ಎಷ್ಟು ಬಲ ಪಡಿಸಿರುವರು – ಜಗತ್ತಿನ ಯಾವುದೇ ಭಾಗದಲ್ಲಿ ನಡೆವ ಸಂಭಾವ್ಯ ಧಾಳಿ – ಯೋಜನೆ ರೂಪು ರೇಷೆ ಅವರಿಗೆ ಮೊದಲೇ ಗೊತ್ತಾಗುತ್ತದೆ – ಅದ್ಯಾಗ್ಗು ಅವರ ಈ ಮುನ್ನ್ನೋಟ – ತಂತ್ರ ಮೀರಿ ಅವರದೇ ದೇಶದಲ್ಲಿ ಧಾಲಿಗಳೂ ಆಗುವುದಿದೆ -ಆದರೆ ಅದು ಮಾಡಿದವರನ್ನು ಹುಡುಕಿ ಮಟ್ಟ ಹಾಕಲು ಅವರಿಗೆ ಕೆಲ ಕ್ಷಣ- ದಿನ ಸಾಕು ಅಸ್ತೆ ..
ಎನೆಮಿ ಆಫ್ ದಿ ಸ್ಟೇಟ್ ಚಿತ್ರದಲ್ಲಿ ಜನ ಸಾಮಾನ್ಯನೊಬ್ಬನ ಬೆನ್ನ ಹಿಂದೆ ಬೀಳುವ ಸರ್ಕಾರಿ ಅಧಿಕಾರಿಗಳು ಹೇಗೆಲ್ಲ ಅವನ ಸ್ವಾತಂತ್ರ್ಯ ಹರಣ ಮಾಡುವರು ಎಂದರೆ -ಆಕಾಶದಲ್ಲಿನ ಉಪಗ್ರಹಗಳು -ರಸ್ತೆ ಮೇಲಿನ ಕ್ಯಾಮೆರಾಗಳು -ಕೊನೆಗೆ ಅವನದೇ ಪೆನ್ನು ಫೋನು -ಸಹಾ ಅದೇ ರೀತಿ ಕಾಣುವ ತಮ್ಮ ವಸ್ತುಗಳೊಡನೆ ಬದಲಾಯಿಸುವರು -ಅವನನ್ನು ಹಗಲು ಇರುಳು ಫಾಲೋ ಮಾಡುವರು ..!!ಕೊನೆಗೂ ಆ ನಾಗರಿಕ ಹೇಗೋ ಪಾರಾಗುತ್ತಾನೆ ಎನ್ನಿ ..! ಹಾಗೆಯೇ ಲಾ ಅಬೈಡಿಂಗ್ ಸಿಟಿಜೆನ್ ಚಿತ್ರದಲಿ ಮತ್ತು ಬಾಡಿ ಆಫ್ ಲೈಸ್ ಚಿತ್ರದಲ್ಲಿ -ಸರಕಾರ ಅಧಿಕಾರಿಗಳು ಹೇಗೆಲ್ಲ ಜನ ಸಾಮಾನ್ಯರ ಅಧಿಕಾರ ಸ್ವಾತಂತ್ರ್ಯ ಹಕ್ಕು ಕಸಿಯುವರು ಎಂಬುದ್ರ ಬಗ್ಗೆ ಒಳ್ಳೆ ಸನ್ನಿವೇಷಗಳಿವೆ.. ಉಪಗ್ರಹ – ಕ್ಯಾಮೆರ -ವಯುಕ್ತಿಕ ಮಾಹಿತಿ -ಸಂಪೂರ್ಣ ದೇಹ ಭಾವ ಚಹರೆ ದತ್ತಾಂಶ ಇಟ್ಟುಕೊಂಡಿರುವ ಪಾಶ್ಚಾತ್ಯ ದೇಶಗಳ ಪೊಲೀಸರಿಗೆ -ಈ ಮಾಹಿತಿ ಕಲೆ ಹಾಕಿ ಕ್ಷಣ ಮಾತ್ರದಲ್ಲಿ ಯಾರನ್ನೇ ಎಲ್ಲಿದ್ದರೂ ಕಂಡು ಹಿಡಿಯಬಲ್ಲರು ..
ಈ ಪ್ರಿಸಂ ವಿಷಯದ ಬಗ್ಗೆ ಬಯ್ಲಾಗುತ್ತಿದ್ದಂತೆ ಸ್ನೋಡ್ ನ ಮುಗಿಸಲು ಅಮೆರಿಖನ್ನರು ಅದಾಗಲೇ ಬಹು ಪ್ರಯತ್ನ ಮಾಡಿರುವರು ಆದರೆ ಚೀನಾ ಮಾತು ರಷ್ಯನ್ನರ ಅಸಹಕಾರ ಕಾರಣ ಅದು ಸಾಧ್ಯವಾಗಲ್ಲ , ಆದರೆ ಅಮೆರಿಖನ್ನರ ಉಪಗ್ರಹಗಳು ಈಗಲೂ ಅವನ ಕ್ಷಣ ಕ್ಷಣದ ಚಲನ ವಲನಗಳ ಮೇಲೆ ಕಣ್ಣಿಟ್ಟಿರ ಬಹುದು ..
ಹಲ ದೇಶಗಳು ಅಮೇರಿಕಾದ ಈ ಕೃತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಅಸಹನೆ ವ್ಯಕತಪಡಿಸಿವೆ ಆದರೆ ನಮ್ ಭಾರತ ಮಾತ್ರ ಅದು(ಪ್ರಿಸಂ ಕಾರ್ಯಾಚರಣೆ) ಒಳ್ಳೇದೆ ಎಂದಿದೆ ..! ಯಾರ ಯಾವುದರ ಭಯವೋ>? ರಹಸ್ಯ ..!
ಸಕಾಲಿಕ ಬರಹ
ಇಷ್ಟ ಆಯ್ತು ..
ಶುಭವಾಗಲಿ
\।/
Nima lekanadinda aneka mahithigallanu thilidanthayithu danyavadagallu