ವಿಶ್ರಾಂತ

 

ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ ಕೈಯೊಳಗ ಇದ್ದಿದ್ದರ ಈ ಗೋಳಾಟ ಬರತಿರಲಿಲ್ಲ. ನಿದ್ದೆ ಎಳೆಯುತ್ತಿತ್ತು ಚಿಂತೆ ಕಾಡುತ್ತಿತ್ತು. ಈಗ ಇನ್ನೊಂದು ಚಣ ಹೊತ್ತಲ್ಲಿ ಮೂಡಲಿರುವ ಸೂರ್ಯ ನೆಲದಿಂದ ಮೇಲೇಳುವುದೆ ಬೇಡ ಅನ್ನಿಸಿತ್ತು. ಬೆಳದಿಂಗಳ ತಿಳ್ಳಿಯಾಟ ಮತ್ತು ಬದುಕಿನಾಟ ಎಲ್ಲೂ ಫರಕಾಗಿ ಕಾಣಿಸಲಿಲ್ಲ. ’ಏ ಇವಳ ನಮಗ ವಯಸ್ಸಾತು ನೋಡು ಅದಕ ಸೋತುಬಿಟ್ಟಿದ್ದೀವಿ’ ಅಂತ ಹೆಂಡತಿಗೆ ತಿಳಿಸಿ ಹೇಳಲಿಕ್ಕಾಗದ ಒದ್ದಾಡುತ್ತಿದ್ದ. ಯಾವ ಮಗನ ತಾಯಿ ಏನನ್ನು ಬಯಸುತ್ತಾಳೋ ಅದನ್ನೆ ಬಯಸಿದ್ದ ಆಕೆಗೆ, ಸಾವು ಕೈ ಮಾಡಿ ಕರೆಯುತ್ತಿದೆ ಎಂದು ಭ್ರಮೆ ಮೂಡಿದಂದಿನಿಂದ-ಮಗನ ಮುಖ ನೋಡಿ ಸಾಯಬೇಕು ಅನ್ನೊ ಇಚ್ಛಾ ವ್ಯಕ್ತಪಡಿಸಿದ್ದು ತಾಯತನದ ಸಹಜ ಗುಣವೇ ಆಗಿತ್ತು. ಮಗ ಬರುವುದಿರಲಿ ಬರೆದ ಪತ್ರಕ್ಕೆ ಉತ್ತರವನ್ನು ತಿಳಿಸದೆ, ಹುಡುಕಲು ಹೋದವರಿಗೆ ವಿಳಾಸಕ್ಕೂ ಸಿಕ್ಕದೆ ಇರುವುದು ಅಂಜನಪ್ಪನ ಮನಸಿನ ತಳಮಳಕ್ಕೆ ತುಪ್ಪ ಹಾಕಿತ್ತು.

ಪ್ರೇಮಾಂಕುರ ಮದುವೆಗೆ ಮುಗಿದು, ಪ್ರೀತಿ ಸಂಸಾರವಾಗಿ, ಅಲ್ಲೊಂದು ಶಿಶುವಿನ ತಂದೆಯಾಗಿ, ಒಂದರ ಬೆನ್ನು ಮತ್ತೊಂದು ಹೀಗೆ ಸಂಬಂಧದ ಎಳೆಗಳನ್ನು ಲಾಳಿಯ ಅಸ್ತಿತ್ವದಲ್ಲಿ ನೆಯ್ದಿದ್ದ ನೆಯ್ಗೆ. ಈಗ ಅದೆ ಆ ಮುಖ್ಯ ನೂಲು ನುಣುಚಿಕೊಂಡಿರುವುದು ಯಾವ ಗಳಿಗೆಯ ತೊಡಕಿನಲ್ಲಿ ಎಂಬುದು ತಿಳಿಯಲಾರದಾಗಿತ್ತು. ಎಳ್ಳಷ್ಟು ಬಿಡುವಿಲ್ಲದೆ ಪ್ರಾಮಾಣಿಕವಾಗಿ ದುಡಿದು ಗಳಿಸಿದ್ದ ಅಂಜನಪ್ಪನ ಆಸ್ತಿ ಎಂದರೆ ವಿಶ್ವಾಸ ಒಂದೇ ಆಗಿತ್ತು. ಹೊಸದಾಗಿ ಕೆಲಸಕ್ಕೆ ಸೇರಿದ ದಿವಸ ಗ್ರಂಥಾಲಯದ ಮುಂಬಾಗಿಲು ಮುಚ್ಚಿ, ಒಳಗೆ ಧೂಳು ತಿನ್ನುತ್ತಿದ್ದ ಪುಸ್ತಕಗಳನ್ನು ಕೊಡವಿ, ತಿಪ್ಪೆಗುಂಡಿಯಾಗಿದ್ದ ಪುಸ್ತಕ ರಾಸಿಯನ್ನ ಹಳೆ ರ್‍ಯಾಕಿನಲ್ಲಿ ಒಪ್ಪ ಓರಣ ಮಾಡಿ ಜೋಡಿಸಿಟ್ಟು,ಸ್ವಾತಂತ್ರ್ಯ ಹೋರಾಟಗಾರರು, ಪುರಸ್ಕೃತರು-ಮಹಾನ್ ಕವಿ ಕಲಾವಿದರು ಆಗಿದ್ದವರ ಫೋಟೋಗಳನ್ನು ಸರಿಮಾಡಿ ಅಚ್ಚುಕಟ್ಟಾಗಿಟ್ಟು, ಕನ್ನಡ ಮಾತೆಯ ಚಿತ್ರಕ್ಕೆ ಮಾಲೆ ಹಾಕಿ ಸಿಂಗರಿಸಿಯೇ…. ಗ್ರಂಥಪಾಲಕನ ಖುರ್ಚಿಯಲ್ಲಿ ಕುಳಿತಿದ್ದ. ಬದುಕ ಮಾಡುವ ಹಂಚಿಕೆ ಅಂದರ ’ಪ್ಯಾಟಿಯೊಳಗ ಒಂದು ಮನಿ ಇರಬೇಕು, ಹಳ್ಳಿಯೊಳಗ ಒಂದು ಹೊಲ ಇರಬೇಕು’ ಅಂತ ಭಾವಿಸಿದ್ದ ಅಂಜನಪ್ಪನ ನಿವೃತ್ತಿ ಯಾಕೋ ಸುಸೂತ್ರ ನಡಿದಿರಲಿಲ್ಲ. ಹೊರಗೆ ಗೇಟ್ ಕಿರಗುಡುತ್ತಿದ್ದಂತೆ ನಾಲ್ಕಾರು ಹೆಜ್ಜೆ ಸಪ್ಪಳ ಕೇಳಿಸಿತು. ಏನು ನಡೆಯುತ್ತಿದೆ ಹೊರಗೆಂದು ಅತ್ತ ಕಿವಿಗೊಟ್ಟ, ಒದರುವ ನಾಯಿಗಳು ಊರಿಂದಾಚೆ ಗುಡ್ಡದ ಕಡೆ ಕೂಗುತ್ತ ಓಡುತ್ತಿದ್ದ ಹಾಗೆ ಕೇಳಿಸಿತು. ಈಗಷ್ಟೆ ಹೆಂಡತಿಯನ್ನು ಒಂದಾ ಮಾಡಿಸಿಕೊಂಡು ಬಂದು ಮಲಗುವಾಗ ಬೆಳ್ಳಿ ಚುಕ್ಕಿ ಇನ್ನು ಮೂಡಿರಲಿಲ್ಲ, ದಿಢಿರನೆ ಬೆಳಕಾಯಿತಲ್ಲ, ಏನೇನೋ ನಿದ್ದೆ ಮಂಪರಿನಲ್ಲಿ ಲೊಚಗುಟ್ಟಿದ.

’ರೀ, ರೀ…ಮಲಗೀರೇನ್ರಿ’ ಸವಿಗನಸ ಕಾಣೋ ಮುಂಜಾನಿ ಯಾಳೇದಾಗ ಅಪಶಕುನದಂತ ಕೆಟ್ಟ ಕನಸು ಕಂಡ ಹೆಂಡತಿ ಉಸುರು ತಿದಿಗೊತ್ತೊತ್ತಿ ಕರೆಯುತ್ತಿದ್ದಳು. ಈ ಗೌಢಾಣದಂತ ಮನಿಯೊಳಗ ಗಂಡ ಹೆಂಡತಿ ಇಬ್ಬರ ಇದ್ದದ್ದು. ’ಆಕಿ ಹೊರಗ ಹೋಗ್ಯಾಳೇನು’ ಅಂತ ಘನ ಗಾಬರಿಯಲ್ಲಿ ಎದ್ದು  ಅವಳ ಖೋಲಿಗೆ ನುಗ್ಗಿದ, ಆಕೆ ಅಲ್ಲೆ ಮಲಗಿದ್ದು ಕಂಡು ನಿಡುಸುಯ್ದ. ಸುಣ್ಣಾಳ ಊರಿನ ಬಾಲ್ಯ ಮತ್ತ ಮತ್ತ ನೆನಪಾಗೋದು ಇತ್ತಿತ್ತಲಾಗಿ ಒಂದು ಚಾಳಿ ಆಗಿಬಿಟ್ಟಿತ್ತು. ಆ ಹಳ್ಳಿ ಮನಿ ಸಣ್ಣದು ಖರೆ, ಅಲ್ಲಿ ಒಬ್ಬರಿಗೆ ಒಬ್ಬರು ಆಗುವ, ಕಷ್ಟ ಸುಖ ಹಂಚಿಕೊಂಡು ಜತನದಿಂದ ಬಾಳೆ ಹೂಡುವ ಮನುಷ್ಯರಿದ್ದರು. ಚಂದಪ್ಪ ಚಂದ್ರವ್ವ ಕೂಡಿ ಹೂವಿನ ತೋಟ ಮಾಡಿ, ಅಂತ ಕೈಕೈ ಹಿಡಿದು ಆಟ ಆಡೋ ಎಳೆ ಮಕ್ಕಳೂ ಭವಿಷ್ಯದಲ್ಲಿ ಒಳ್ಳೆ ಬದುಕು ಕಟ್ಟಿಕೊಳ್ಳುವ ಭ್ರಮೆಯ ಆಟ ಆಡುತ್ತಿರುತ್ತವೆ. ’ರೀ ಯಾಕ ಅಲ್ಲೇ ನಿಂತ್ರಿ, ಏನು ಯೋಚಸಲಿಕ್ಕ ಹತ್ತೀರಿ, ಸಂಗಮೇಶ ಇವತ್ತು ಬರತಾನ ಅಂತ ಹೇಳೀರಲ್ಲ, ಬಂದ ಬರ್‍ತಾನ ಬಿಡ್ರೀ’ ಆಕೆ ಅಂಜನಪ್ಪನ್ನ ಹತ್ತಿರ ಕರೆದು ಅವನ ಎರಡೂ ಕೈ ಹಿಡಿದು ನಾನು ನಿಮ್ಮ ಜೊತೆಗಿದ್ದೇನಂತ ಭರವಸೆ ಕೊಟ್ಟಳು. ಆದರ ಅವನು ಬರಲಾರ, ಇಡೀ ಮುಂಬೈ-ಪುಣೆಯೊಳಗ ಅವನ ಸುಳುವು ಸಿಕ್ಕಿಲ್ಲ ಅಂತ ಹೇಳೋದಾದರೂ ಹೆಂಗ. ’ಕೆಟ್ಟ ಕನಸ ಬಿದ್ದಿತ್ತರೀ, ಮುತ್ತೈದೆ ಕನಸು ಸುಳ್ಳಾಗೂದಿಲ್ಲ ಅಂತ ಹೆದರಿಕಿ ಆಯ್ತು ಅದಕ್ಕ ನಿಮ್ಮನ್ನ ಒದರಿದೆ.’ ಪಾಪ! ತಾಯಿ ಕರಳ ಕೊರಗಿದಷ್ಟು ಮಗನ ಮನಸ್ಸಾದರೂ ಮರುಗಬಾರದಾ ಅಂದುಕೊಂಡ. ತಾನು ಕಲಿತದ್ದು ದಾಸರ ಮಾಸ್ತರರ ಕೈಕೋಲಿನ ಹೆದರಿಕೆಯಲ್ಲಿಯೆ ಜಾಸ್ತಿ, ಅಂಥ ಪೆಟ್ಟಿನ ಶಿಕ್ಷಣ ಮಗನಿಗೆ ಬೇಡ ಅಂದುಕೊಂಡು ಕಾನ್ವೆಂಟ್‌ಗೆ ಕಳಿಸಿದ್ದು. ತನಗ ಇಲ್ಲದ್ದು ಮಗನಿಗೂ ಇಲ್ಲ ಆಗಬಾರದು ಅಂತ ಯೋಚಿಸಿಯೇ ರಾಮದುರ್ಗದಿಂದ ಅಷ್ಟೇನು ದೂರ ಇಲ್ಲದ ಸುಣ್ಣಾಳ ತೊರೆದು ಪ್ಯಾಟಿಯೊಳಗ ಮನೆ ಮಾಡಿದ್ದು. ಎಳವೆಯಲ್ಲಿದ್ದ ಹುರುಪು ಹರೆಯದಲ್ಲಿ ಇಲ್ಲವಾದಾಗ ಮುದ್ದಿನ ಮಗ ದಾರಿ ತಪ್ಪುತ್ತಾನೆಂದು ಯಾರು ಬಗೆದಿದ್ದರು.

’ರೀ ನನ್ನ ಕನಸಿನ್ಯಾಗ ಇಲಿ ಹಿಡಿಲಿಕ್ಕ ಹೊಂಟಿದ್ದ ಬೆಕ್ಕು, ಗಕ್ಕನ ಹಿಂದಕ್ಕ ತಿರಗಿ ಜೀವ ಭಯದಿಂದ ಓಡಲಿಕ್ಕ ಸುರುಮಾಡಿತು! ಗಣೇಶನೊಳಗ ಇಲಿ ಬಂದಿತ್ತೋ, ಗಣಪನ ಇಲಿ ಮೈಯಾಗ ಹೊಕ್ಕಿದ್ದನೋ ಏನಮನ್ನೋ, ಈಟಿದ್ದದ್ದು ಇಡೀ ನೆಲದ ತುಂಬ ಹರಡಿಕೊಂಡಿತ್ತು. ಹಂಗ ಈಟಗಲ ಬಾಯ ತಗದು ಬೆಕ್ಕನ್ನ ನುಂಗಿದ ಕನಸು.’ ಆಕೀ ಮುಗ್ಧ ಕಣ್ಣಾಗ ಮೊದಲ ರಾತ್ರಿಯ ಮೊದಲ ವಾರೆನೋಟದ ಒಲವು ಇನ್ನು ಹಾಂಗ ಉಳದದ, ಏನ ಚಲುವಿ ತನ್ನ ಹೆಂಡತಿ ಮನಸಿನಲ್ಲೆ ಒಳ್ಳೆ ಆಯ್ಕೆಗೆ ಶಭಾಷ ಹೇಳಿಕೊಂಡ. ಉಡಾಳ ಮಗನ ಮದವಿ ಒಂದ ಮುಗದು ಹೋಗಿದ್ದರ ನಿಶ್ಚಿಂತರಾಗಿ ಶಿವನ ಜಪ ಮಾಡಕೊಂಡು ನಿರಂಬಳ ಆಗಿರುತ್ತಿದ್ದೇವು. ಹೆಣ್ಣು ನೋಡಿ ಬಾ ಅಂದ್ರ ಕುಡದ ಓಡ್ಯಾಡಕೊಂಡ ಬರತಿದ್ದ, ಹೆಣ್ಣಿನ ಕಡೆಯವರು ಇಲ್ಲಿಗೆ ಬರತಾರ ಅಂದ ದಿನ ಮಾರಿ ತಪ್ಪಿಸಿ ಇಸ್ಪೀಟ ಆಡಲಿಕ್ಕ ಹೋಗತಿದ್ದ. ಒಳ್ಳೆವರ ಸಂಗ ಮಾಡು ಅಂದ್ರ ’ಅವರ್‍ಯಾರೂ ಕೆಟ್ಟವರಲ್ಲ, ನಾ ಮಾಡು ಧಂದಾ ಅಂತಾದ್ದು ಹಂಗಾಗಿ ಅಲ್ಲಿ ಒಳ್ಳೆವರೂ ಕೆಟ್ಟವರೂ ಎಲ್ಲಾರೂ ಇರತಾರ’ ಅಂತ ಎದರು ವಾದಿಸುತ್ತಿದ್ದ. ಮಾನಗೆಟ್ಟ ಗಂಡಸತನದ ಸೊಕ್ಕು, ಸೂಳೆಯರ ಸಹವಾಸ, ರೊಕ್ಕದ ಮದ ಏನೆಲ್ಲ ಮಾತಾಡಸತದ. ಒಮ್ಮೆ ಅವರ ಸೋದರಮಾವ ’ಏನಪ್ಪಾ ಅಂಥದ್ದು, ನೀನು ಮಾಡುತ್ತಿರುವ ಘನಂದಾರಿ ಕೆಲಸ’ ಅಂತ ಕೇಳಿದರೆ ’ಅದೆಲ್ಲ ನಿಮ್ಮಂತ ಹಳ್ಳಿ ಮಂದಿಗೆ ತಿಳಿಯುದಿಲ್ಲ, ರೊಕ್ಕ ದುಡಿಸುವ ಬಿಸಿನೆಸ್’ ಅಂತ ಏನೇನೋ ಹಾರಿಸಿ ಮಾತಾಡಿದ್ದ. ಹೌದಲ್ಲ ನಾನು ಸಹಿತ ಹಳ್ಳಿಯಿಂದ ಬಂದಂವ? ಇಂವ ನನ್ನ ಮಗ ಅಂದರೂ ಪ್ಯಾಟೇಲಿ ಹುಟ್ಟಿ ಬೆಳೆದಂವ, ಕಣ್ಣು ಕಿಡಿಯಾದ ಮತ್ತೊಂದು ದಿನ ಅಂದ್ರೆ ಅವತ್ತೇ. ಆ ಗಳಿಗೆಯಲ್ಲಿ ಅವರ ಮಾವ ತಡೆಯದೇ ಹೋಗಿದ್ದರೆ ಮಗ ಹುಟ್ಟಿದ್ದ ಅನ್ನೋದು ಸೈತ ಸುಳ್ಳಾಗಿರುತ್ತಿತ್ತು.  ಲಡತ್‌ಪಡತ್ ಮಾತಿಗೆ ಪ್ರತಿ ಮಾತು ಜಗಳ ಆದ ಮ್ಯಾಲ ಸಂಗಮೇಶ ಮನಿಗಿ ಬರೋದು ಅಪರೂಪ ಆಯ್ತು. ಆಗೀಗ ಮನೆಗೆ ಬಂದು ಹೋದರೂ ಕೆಲಸದ ಬಗ್ಗೆ ಯಾವ ಸುಳವೂ ಕೊಡತಿರಲಿಲ್ಲ.

ಒಮ್ಮೆ, ಅಂದ್ರ ಚಿಗುರು ಮೀಸಿ ಮುಖದ ಮ್ಯಾಲ ಆಗಷ್ಟ ಮೂಡುತ್ತಿದ್ದ ವಯಸ್ಸಿನ್ಯಾಗ ಎರಡು ದಿನ ಮನೆಯಿಂದ ಮಾಯವಾಗಿದ್ದ. ಆವತ್ತು ಅಂಜನಪ್ಪ ಹಳೇ ಸ್ಕೂಟರ್ ತಗೊಂಡು ಸಂದುಗೊಂದು, ಆಟದ ಬಯಲು, ಗೆಳ್ಯಾರ ಮನೀ, ಕಾಲೇಜ್ ಕಾಂಪೌಂಡು ಎಲ್ಲಾ ಕಡೆ ಹುಡುಕಿದ್ದ. ಅಲ್ಲದ ಇರೋ ಬರೋ ಬಂಧು ಬಳಗದವರ ಮನೆಗೆಲ್ಲ ಫೋನ್ ಮಾಡಿ ವಿಚಾರಿಸಿಯೂ ಆಗಿತ್ತು. ಅವನ ಸಲುವಾಗಿ ಗಂಡ-ಹೆಂಡತಿ ನಡುವೆ ಸಣ್ಣ ಶೀತಲ ಸಮರವೇ ನಡೆದು ಹೋಗಿತ್ತು. ಅಂಜನಪ್ಪನವರಿಗೆ ಸಂಸಾರದ ಮ್ಯಾಲೆ ಅಂದಾಜು ಈ ತೆರನಾದ ವಿರಸ ಮೂಡಿದ್ದು ಇದೇ ಮೊದಲಾಗಿತ್ತು. ನಿಮಗ ಮಗನ ಮ್ಯಾಲ ಕಾಳಜಿ ಇದ್ದಿದ್ದರ ಹಿಂಗ ಆಗತಿದ್ದಿಲ್ಲ. ಬರೇ ಅಕ್ಕರತೆಯಿಂದ ಮುದ್ದು ಮಾಡಿದರ ತಂದೆ ಅನ್ನಿಸಿಕೊಳ್ಳೋದಿಲ್ಲ. ಮಗ ಏನ ಮಾಡತಾನು, ಏನು ಓದತಾನು,ಏನು ಬರಿತಾನು ಎಲ್ಲಿ ಹೊಕ್ಕಾನು ಅಂತ ಒಂದ ಸಲನಾದರೂ ಕೇಳಿದಿರ. ಆಫೀಸು, ಪೇಪರ್ರೂ, ಪುಸ್ತಕ ಇದ ನಿಮ್ಮ ಕೆಲಸ ಅಂತ ಅವಳು ದೂರಿದರ, ಅದಕ್ಕ ಪ್ರತಿಯಾಗಿ ಲೇ ಈಕೀನ.. ನಿನ್ನ ಸಲುಗೆ ಅವನನ್ನ ಹಿಂಗ ಮಾಡಿದ್ದು. ನಿನಗೇನ ಧಾಡಿ ಆಗಿತ್ತು, ನೀ ನೋಡಕೋಬೇಕಿತ್ತು. ಒಬ್ಬನ ಮಗ, ಶ್ಯಾಣ್ಯಾ ಅದಾನು, ಅಷ್ಟ ಮಾರ್ಕ್ಸ ತಗದಾನು, ಇಷ್ಟ ಓದತಾನು ಅಂತ ಹೇಳತಿದ್ದೆಲ್ಲ, ಯಾವತ್ತಾದರೂ ಅಂವ ಹೊರಗ ಹೆಂಗ, ಮಂದಿ ಬಳಕಿ ಹೆಂಗ ಇಟಕೊಂಡಾನು ದೋಸ್ತರ ಸಂಗಾಟ ಹೆಂಗ ನಡಕೋತಾನು ಅಂತ ವಿಚಾರಿಸಿದ್ದ ಐತ್ಯಾ ಅಂತ ಅಂಜನಪ್ಪ ಜಬರಿಸಿದ್ದ. ಗಂಡ-ಹೆಂಡ್ರ ಜಗಳ ಅದೆಷ್ಟ ಹೊತ್ತು ಬಾಳತದ, ಆದರೂ ಸಿಟ್ಟು ಮುಂದಿಟಕೊಂಡು ಉಪವಾಸ ಆಚರಿಸಿದರು.

ಮರುದಿನದ ಸಾಯಂಕಾಲಕ್ಕ ಸಂಗಮೇಶ ಮನೆಗೆ ಬಂದದ್ದೆ ತಡ ಇಬ್ಬರು ಕರಗಿ ಬಂಗಾರ ಕಂಡ ಖುಷಿ ಅನಭವಿಸಿದ್ದರು. ಅಷ್ಟಕ್ಕೂ ಏನೂ ತಪ್ಪೆ ಆಗಿಲ್ಲ ಅನ್ನೋರ ಥರ ಇದ್ದವನಿಗೆ ಎಲ್ಲಿ ಹೋಗಿದ್ದೆ ಅಂತ ಕೇಳಿದರ ’ಎಮ್ಮೆಲ್ಲೇ ಅವರ ಮಗನ ಜೋಡಿ ಗೋವಾಕ್ಕ ಹೋಗಿದ್ದೆ’ ಅಂದ.  ಅಂಜನಪ್ಪನಿಗೆ ಅಂಥವರ ಸೆರಗು ನಮಗ್ಯಾಕ ಅನ್ನೋ ಚಿಂತಿ,ತಾಯಿಗೆ ಮಗ ದೊಡ್ಡದೊಡ್ಡ ಮಂದಿ ಸಹವಾಸದಾಗ ಇದ್ದಾನಂತ ಹೆಮ್ಮೆ. ’ಅಲ್ಲ ಒಂದ್ಮಾತು ತಿಳಿಸಿ ಹೋಗಬಾರದೇನು, ಪಾಪ ನಿಮ್ಮವ್ವ ನಿನ್ನೆಯಿಂದ ಗೋಳ ಸೋಸತಿದ್ದಳು.’ಅಂದ. ಈಕೆ ’ನಿಮ್ಮಪ್ಪಗಂತೂ ಜೀವದ ಮ್ಯಾಲ ಸೊಗಸ ಇರಲಿಲ್ಲ’ ಅಂದಳು. ಮಗ ಮಾತ್ರ ನನಗ ತಿಳಿತದ, ನಾನೇನು ಸಣ್ಣ ಕೂಸಲ್ಲ, ನೀವ್ಯಾಕ ಹಳಾಡಿಸಬೇಕಿತ್ತು. ಇಲ್ಲೇ ಹೋಗಿ ಬರೂಣು ಬಾ, ಅಗದಿ ತುರ್ತಿನ ಕೆಲಸ, ಸಂಜೀ ಯಾಳೆಕ್ಕಂದ್ರ ಮನೆಗೆ ಬರ್‍ತೀವಿ ಅಂದ, ನಾ ನಂಬಿ ಹೋದೆ, ಅಲ್ಲಿ ಕೆಲಸ ಕೈಗೆ ಹತ್ತೂದು ತಡ ಆಯ್ತು. ನಿಂತು ಮಾತಾಡಲೂ ಪುರಸೊತ್ತಿಲ್ಲ ಎಂಬಷ್ಟು ಅವಸರ ಮಾಡಿ, ಮತ್ತೆಲ್ಲೋ ಹೊಂಟು ಹೋದ. ಅಲ್ಲೇ ಅವನ ಗಣಿತ ಉಲ್ಟಾ ಹೊಡೆದದ್ದು. ಮುಂದಲ ಬೈ ಎಲೆಕ್ಷನ್ನಿನ್ಯಾಗ ಅವನ ಫೋಟೋ ರಸ್ತಾದ ಪರದೆಯೊಳಗ ಕಂಡಾಗ ಮಗನ ಮ್ಯಾಲಿನ ಪ್ರೀತಿ ಎರಡರಷ್ಟಾಯ್ತು. ಆದರೂ ಈ ಇಂಥದ್ದೆಲ್ಲ ನಮ್ಮಂತ ಮಂದೀದಲ್ಲ…. ನಾಲಗೆ ಕಚ್ಕೊಂಡ ಅಂಜನಪ್ಪ ಶಿವನ ಮ್ಯಾಲ ಭಾರ ಬಿಟ್ಟಿದ್ದ.

ಆವತ್ತು ಲಕ್ಷ್ಮೀ ನಗರದ ತಿರುವಿನ್ಯಾಗ ಕಂಡ ಮಗನ ರೂಪ ಬೇರೆಯದೇ ಆಗಿತ್ತು. ಹಣೆ ಮ್ಯಾಲಿನ ಕೇಸರಿ ಮೂಗಿನ ನೆರ್ತಿಗೆ ಇಳಿದು ಮುಖವನ್ನೆ ಸೀಳಿಕೊಂಡು ಎರಡಾಗಿತ್ತು. ಆ ಹೆಂಗಸು ನನ್ನ ಗಂಡನ್ನ ಏನು ಮಾಡಬ್ಯಾಡ್ರೀ ಅಂತ ಕೂಗತಿದ್ದರ ಅಂಜನಪ್ಪನ ಕರಳು ಹಿಂಡಿದಂಗಾಗತಿತ್ತು. ಅಂವ ’ಭಯ್ಯಾ … ಸಂಗಮ ಭಯ್ಯಾ ನನಗ ಯಾಳೆ ಕೊಡು, ನಾನ ಖುದ್ದ ಬಂದು ಸಾವ್ಕಾರ ಕಡೆ ಜೀತ ನಿಂತು ಸಾಲಾ ತೀರಸ್ತೀನಿ, ಭಯ್ಯಾ ಹೊಡಿಬ್ಯಾಡ’ ಮಗುವಿನ ಥರ ಬೇಡಿಕೊಳ್ಳುತ್ತಿದ್ದರೂ ಇವನೊಳಗಿನ ರೋಷ ಕಮ್ಮಿ ಆಗಿರಲಿಲ್ಲ. ಇದನ್ನೆಲ್ಲ ಅವಳಿಗೆ ತಿಳಿಸಿದರೆ ಎದೆ ಒಡೆದು ಸತ್ತೇ ಹೋಗುತ್ತಾಳೆಂದು ಮುಚ್ಚಿಟ್ಟದ್ದು ಈಗ ಫರಕ ಒಡೆದು ಕಾಣಿಸಿತು. ತಮ್ಮ ಸುದೀರ್ಘ ಸಂಸಾರದೊಳಗ ಹಂಗ ಮುಚ್ಚಿಟ್ಟ ಒನ್ನೇ ಸತ್ಯ ಇದಾಗಿತ್ತು. ಇಲ್ಲಿಂದಲೇ ಅವನ ಅಪರಾಧಗಳು, ಜೈಲು ವಾಸಗಳು, ಭೂಗತ, ಮಾಫಿಯಾ ದಂಧೆಗಳು ಪ್ರಮೋಶನ್ ರೀತಿಯಲ್ಲಿ ನಡೆದವು. 

ಬೆಳಕಾಯಿತು, ಮುಂಬೈನಿಂದ ಮಗ ಬರತಾನ ಬಾಗಲು ತೆರದು ಬರ್ರೀ ಅಂತ ಹಾಸಿಗೆಯಲ್ಲಿನ ಹೆಂಡತಿ ಚಡಪಡಿಸಿದಳು. ನಿವೃತ್ತನಾಗಿ ಐದು ವರ್ಷ ಕಳೆದರೂ ಮಗ ಮನೆಗೆ ಬಂದಿರಲಿಲ್ಲ. ಆದರ ತಿಂಗಳ ಪಹಿಲಾಕ್ಕ ರೊಕ್ಕ ಅಕೌಂಟಿನ್ಯಾಗ ಬಂದ ಬೀಳತಿತ್ತು. ಅಂತಃಕರಣ, ಪ್ರೀತಿ, ದಯಾ ಅನ್ನೋ ಮನುಷ್ಯತ್ವ  ಕೊಂದು ಗಳಿಸಿದ ಶ್ರೀಮಂತಿಕೆ ಎಷ್ಟಿದ್ದರ ಏನು ಬಂತು… ತನ್ನ ಹೆಂಡತಿಗೆ ಮಾತ್ರ ಮಗನ ಪಗಾರ ಮ್ಯಾಲ ಕೆಟ್ಟ ಮೋಹ. ಆಗಷ್ಟ ಫಂದ್ರಾ ಅಂದ್ರ ಭಾರತಕ್ಕ ಸ್ವಾತಂತ್ರ್ಯ ಸಿಕ್ಕ ದಿವಸ, ಹಿಂಡಲಗಾ ಜೇಲಿನಿಂದ ಬಿಡುಗಡೆಯಾಗಿ ನೇರ ಮನೆಗೆ ಬಂದಿದ್ದ. ಆವತ್ತೇ ಕಡೆ ಅನ್ನಬೇಕು ತಾನು ತನ್ನ ಹೆಂಡತಿ ಮಗನ ಮುಖ ನೋಡಿದ್ದು. ಅಂದು ತಿಳವಳಿಕಸ್ಥನ್ಹಂಗ ಮಾತಾಡಿದ್ದ. ಅಪ್ಪ, ಅವ್ವಗ ನನ್ನ ಹಲಕಟ್ಟಗಿರಿ ಯಾಕ ಹೇಳಲಿಲ್ಲ..? ನಾ ಕೊಲೆಗಡುಕ, ಕಳ್ಳ, ಮೋಸಗಾರ ಅನ್ನೋದನ್ನ ಅವ್ವನಿಗ್ಯಾಕ ಹೇಳಲಿಲ್ಲ ಅಂತ ಕಣ್ದುಂಬಿ ಕೇಳಿದಾಗ ಅಂಜನಪ್ಪನೂ ಅತ್ತಿದ್ದ.

ನಾ ಪಾಪಿ! ಅನ್ನೋ ಅರಿವು ಮೂಡಿದ್ದು ಕಂಡು ಖರೆ, ನನ್ನ ಮಗ ಈಗ ಖಂಬೀರ ಆದ ಅನ್ನಿಸಿತ್ತು. ತಮ್ಮ, ಹೆತ್ತ ತಾಯಿ ಕರಳು ಎಷ್ಟ ಕನಸ ಕಟಗೊಂಡರೂ ಅದು-ಗಂಡನಾದ ನಾನು ಮತ್ತು ಮಗನಾದ ನೀನೂ ಇಬ್ಬರನ್ನೂ ಸುತಗೊಂಡಿರತದ. ಮಕ್ಕಳ ತರದ ಮನಸ ಆಕೀದು.. ನೋಡು, ಇವತ್ತು ನೀ ಬರುವವನಿದ್ದೀ ಅನ್ನೋದು ಗೊತ್ತಾಗಿ ಹೆಸರಕಾಳು ಪಾಯಸ, ಮೊಸರಮೆಣಸ ಹುರದಿಟ್ಟಾಳು.ಅದು ತಾಯಿ ಕರಳು ತಿಳಿಸಿ ಹೇಳಿದ. ಸಂಗಮೇಶ ಅಲಿಯಾಸ ಈಶ ಎಂದು ಕಾನೂನಿನ ಕಟ್ಟುಗಳಲ್ಲಿ ಗುರುತಿಸಿಕೊಂಡಂವ ತನ್ನ ಮಗನಾಗಿ ಉಳಿಯಲು ಬಯಸಲಿಲ್ಲ. ಈ ಊರಿನ ನಿಮ್ಮ ಮರ್‍ಯಾದೆಯಿಂದ ನಾನು ದೂರ ಇರ್‍ತೀನಿ ಅಂತ ಅಂಜನಪ್ಪನವರಲ್ಲಿ ಅಲವತ್ತುಕೊಂಡೂ, ಆಕೆಗೆ ಪುಣಾಕ್ಕ ನೌಕರಿಗೆ ಹೋಗ್ತೀನಿ ಇನ್ನೆರಡು ವರ್ಷದಾಗ ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ತೀನಿ ಅನ್ನೋ ಸುಳ್ಳ ಮಾತಾಡಿ ಲಗೂಣ ಕಣ್ಮರೆಯಾದ. ಆ ತಿಂಗಳಿನಿಂದಲೆ, ಅವರ ಅವ್ವನ ನಂಬಿಕೆ ಉಳಿಸಲಿಕ್ಕಂತ ಪಗಾರ ಕಳಿಸಲಿಕ್ಕ ಸುರುಮಾಡಿದ್ದ. ಆ ರೊಕ್ಕದಲ್ಲಿ ಒಂದ ನಯಾಪೈಸಾ ಸೈತ ಬಳಸಬಾರದೆಂದು ತಾಕೀತು ಮಾಡಿದ್ದ ಅವಳ ಮೈಗೆ ಸ್ತನ ಕ್ಯಾನ್ಸರ್ ಅಂಬೋ ಉಪಾಧಿ ಬಡಕೊಂಡಾಗಲೂ ಆಕೆ ಆ ಗಂಟು ಮುಟ್ಟದಿರಲು ಹೇಳಿದ್ದಳು. 

ಆರೇಳು ತಿಂಗಳಿಂದ ಮೊಬೈಲ್ ಬಂದ್ ಆಗಿತ್ತು, ಅಕೌಂಟ ಬ್ಯಾಲೆನ್ಸ್ ಎಷ್ಟಿತ್ತೋ ಅಷ್ಟೆ ಉಳಿದಿತ್ತು. ನಾಪತ್ತೆ ಆಗಿದ್ದ ಮಗ ಏನಾದ ಅನ್ನೋದು ಒಂದಾದರೆ, ಇವಳ ಕಾಯಿಲೆ ಇನ್ನೊಂದಾಗಿತ್ತು. ನಿವೃತ್ತಿ ಇಷ್ಟು ತ್ರಾಸದಾಯಕ ಆಗಿದ್ದು ಯಾಕೋ ನರವಸ ಮಾಡಿತ್ತು. ಗುರುತಿನವರಿಗೆ ವಿಳಾಸ ಕೊಟ್ಟು, ಅಂಜನಪ್ಪನ ಮಗ ಅಲಿಯಾಸ ಈಶನನ್ನ ಹುಡುಕಲಿಕ್ಕ ಹಚಗೊಟ್ಟಿದ್ದ. ಹೋದವರು ಅಂಥ ಹೆಸರಿನ ಓಣಿಗಳು ಆ ನಂಬರಿನ ಮನೆಗಳು ಆ ರಸ್ತೆಗಳು ಪುಣೆಯ, ಮುಂಬೈನ ಯಾವ ಮಗ್ಗುಲಲ್ಲಿಯೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಬಂದರು. ಆವತ್ತು ಒಂದು ಮಾತು ನಿಜ ಹೇಳಿದ್ದರೆ ಅವಳೂ ತನ್ನಂತೆ ಸ್ವಸ್ಥಳಾಗಿ ಇದ್ದುಬಿಡುತ್ತಿದ್ದಳೇನೋ ಅಂದುಕೊಂಡ. ಅವಳ ಎದೆಯಲ್ಲಿ ಸತ್ಯ ಅರಗಿಸಿಕೊಳ್ಳುವ ತಾಕತ್ತಿರಲಿಲ್ಲವಾದ್ದರಿಂದ ಮತ್ತೊಂದು ಗೊಜಮೊಟ್ಟೆ ಹುರಿದುಬಿಟ್ಟಿದ್ದ ’ಮಗ ಆಫಿಸಿನ ಕೆಲಸಕ್ಕ ಅದ್ಯಾವದೋ ದೇಶಕ್ಕ ಹೋಗಿದಾನಂತ, ಎಂಟು ದಿನದಾಗ ಬರ್‍ತಾನಂತ.’ ಮತ್ತೊಂದು ದಿವಸ ನಿಖರವಾಗಿ ಇಂಥ ತಾರಖಿನ ಇಂಥ ಬೆಳಗಿಗೆ ಬರತಾನೆಂದು ಕತೆ ಕಟ್ಟಿ ಸಮಾಧಾನ ಮಾಡಿದ್ದದ್ದು ಈಗ ಉರುಳಾಗಿತ್ತು.

ಅಂತರಂಗದ ಕತ್ತಲಲ್ಲಿ ಬಾಹ್ಯದ ಬೆಳಕು ಕರಗಿಬಿಡುವುದಾದರೆ ತಕ್ಷಣಕ್ಕೆ ಒಂದರೊಳಗೊಂದು ಬೆಸೆದು ಈ ಲೋಕವೆಲ್ಲ ಗವ್ವಗತ್ತಲಾಗಲಿ, ನನ್ನದು ಎಂಬ ವ್ಯಾಮೋಹದ ಬಂಡೆ ಸ್ಪೋಟಿಸಿ ಸಣ್ಣ ಸಣ್ಣ ಹುಡಿಯಾಗಿ ಎಲ್ಲವೂ ಒಂದೆ ಆಗಿ ಬಿಡಲಿ. ಆಗ ಬರುತ್ತದೆ, ಈಗ ಬರುತ್ತೆ ಅಂತ ಕಾಯುತ್ತಿರುವ ಆ ಭಯಂಕರ ಮಹಾ ಪ್ರಳಯ ಈ ಕೂಡಲೆ ಬರುವಂತಾಗಿದ್ದರೆ…. ’ಒಂದ ನಮೂನೆ ಬಣ್ಣಗೆಟ್ಟವರಂಗ ಯಾಕ ಅದೀರಿ, ಇವತ್ತು ನಿಮ್ಮ ಮಗ ಬರುವವನಿದ್ದಾನ, ಹೋಗಿ ಬಾಗಲಾ ತಗೀರಿ? ನನ್ನ ಮೈ ಸ್ವಾಸ್ಥ್ಯ ಚಲೋ ಇದ್ದಿದ್ದರ ನಿಮಗ ಹೇಳತಿರಲಿಲ್ಲರೀ’ ನುಂಗಿದ್ದ ಚಿಂತೆಯನ್ನ ಹಿಡಿದು ಅಲ್ಲಾಡಿಸಿದಳು. ಮುಂಬಾಗಿಲ ಮುಂದೆ ಮರಾಠಿ ಮಾತುಗಳು ಕೇಳಿಸಿದವು. ಚಾಲೂ ಆಗದಿರುವ ವಾಹನವನ್ನ ತಳ್ಳಿಕೊಂಡು ಹೋಗುತ್ತಿರುವ ಮಾತುಗಳವು. ಈ ಮೊದಲು ಗೇಟ್ ಸಪ್ಪಳಾಗುವದಕ್ಕಿಂತ ಮುಂಚೆ ಕಾರೊಂದು ಬಂದು ನಿಂತ ಹಾಗಾಗಿದ್ದು, ನಿದ್ದೆಯ ಮಂಪರಿನ ಭ್ರಮೆಯಲ್ಲಿ ಸೇರಿಕೊಂಡು ದಿಗಿಲು ಮೂಡಿಸಿತು. ಯಾರಿರಬಹುದು? ಅನುಮಾನಿಸುತ್ತ ಅವಸರದಿಂದ ಬೆಳಕನ್ನೆದುರಿಸಲು ಮನಸ್ಸು ಗಟ್ಟಿ ಮಾಡಿಕೊಂಡು ಬಾಗಿಲು ತೆರೆದ…. ಅಂಬಾಸಿಡರ್ ಹೊಗೆ ಎಬ್ಬಿಸಿಕೊಂಡು ಮನೆಯ ತಿರುವು ದಾಟಿತು.

 ’ಏ ಹುಚ್ಚಿ ನಿನ್ನ ಮಗ ಖರೇನ ಬಂದಾನ ನೋಡು ಬಾ, ಮಗ ಬರತಾನೋ ಇಲ್ಲೋ ಅಂತ ಮನಸ ಕಲ್ಲು ಮಾಡಕೊಂಡು ಒದ್ದಾಡತಿದ್ದ ನನಗ ಇದನ್ನೆಲ್ಲ ನೋಡಿ ನಂಬಲಿಕ್ಕಾಗತಿಲ್ಲ.’ ಗಡತ್ತರ ಬಾಗಿಲಿಗೆ ಅಡ್ಡ ನಿಂತವನು ಕುಸಿದಿದ್ದೆ ತಡ ಆ ಎಳೆ ಬಿಸಿಲು ಅವನನ್ನ ದಾಟಿಕೊಂಡು ದೇವರ ಖೋಲಿಯ ಹೊಸ್ತಿಲಕ್ಕ ಬಂದು ನಿಂತಿತು. ಹಾಸಿಗೆ ಹಿಡಿದವಳ ಮೈ ಬೆಚ್ಚಗಾಯ್ತು. ಒಳಕೋಣೆಯಿಂದಲೇ ಬೆಳಕನ್ನ ದಿಟ್ಟಿಸಿದಳು.  ಕಾಂಪೌಂಡಿಗೆ ಒರಗಿದ್ದ ಆಕೃತಿಯೊಂದು ವಿಚಿತ್ರ ವೇಷದಲ್ಲಿ ಮಾತು ಬಾರದ ಮೂಕನ ಹಾಗೆ ಕೈ/ಬಾಯ ಸನ್ನೆ ಮಾಡುತ್ತ ಮುಂದಕ್ಕೆ ಬಂದಿತು. ಸೂರ್ಯ ಅವನ ಬೆನ್ನ ಹಿಂದೆ ಪ್ರಭಾವಳಿ ಸೃಷ್ಟಿದ್ದರಿಂದ ಯಾರಂಬೋದು ತಿಳಿಯದೆ ಮಂಚದಿಂದೆದ್ದು ಅಂಗಳಕ್ಕೆ ಬಂದಳು. ಸಂಗಮೇಶ….! ಅವರಪ್ಪನನ್ನ ಎತ್ತಿ ತಂದು ಒಳ ಹಾಕುವ ಸ್ಥಿತಿಯಲ್ಲಿ ಅವನಿರಲಿಲ್ಲ. ಇಂವ ಮಗನೇ ಹೌದೋ… ಅಲ್ಲವೋ… ಅವಳ ಕಣ್ಣು ಆರ್ದ್ರವಾಗಿದ್ದವು. ಹುಚ್ಚನಂತಿದ್ದ ಮಗ ಒಳಗೆ ಓಡಿ ಯಾರಿಂದಲೋ ಬಚಾವ ಆಗಲು ಅವುತುಕೊಳ್ಳುತ್ತಿದ್ದ. ಆಕೆ ಬಗ್ಗಿ ಗಂಡನ ತೋಳಿಗೆ ಹಾಕಿ ಅಂಜನಪ್ಪನನ್ನ ಕರೆದುಕೊಂಡು ಒಳಗೆ ನಡೆದಳು. ನಿವೃತ್ತಿ ಸಿಕ್ಕ ಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. 

–ಮಹದೇವ ಹಡಪದ

 

 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
kiran gajanur
kiran gajanur
11 years ago

nice olleya baraha balasiruva bhashe nijakku super 

ರಾಜೇಂದ್ರ ಬಿ. ಶೆಟ್ಟಿ

ಮನ ಕರಗುವ ರೀತಿ ಕಥೆ ಹೆಣೆದಿದ್ದೀರಿ. ದಾರಿ ತಪ್ಪಿದ ಮಗನ ತಂದೆಯ ಬವಣೆ, ಅದಾವುದನ್ನೂ ಅರಿಯದ ತಾಯ ಕರುಳು, ನಿವೃತ್ತ ಜೀವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. "ಅಂತರಂಗದ ಕತ್ತಲಲ್ಲಿ…….ಪ್ರಳಯ ಈ ಕೂಡಲೇ ಬರುವಂತಾಗಿದ್ದರೆ…" ಈ ಸಾಲುಗಳು ಮನಸ್ಸಿನ ಬೇಗುದಿಯನ್ನುಚೆನ್ನಾಗಿ ತೋರಿಸುತ್ತವೆ.

mahantesh mundaragi
mahantesh mundaragi
11 years ago

sir nanage tumbane ishta aaytu

ಮಂಜುನಾಥ ಕೊಳ್ಳೇಗಾಲ

ಒಳ್ಳೆಯ ಕತೆ… ಮನಮುಟ್ಟಿತು

4
0
Would love your thoughts, please comment.x
()
x