ವಿಶೇಷ ಮಕ್ಕಳ ಪೋಷಣೆಯೂ ಘಾಸಿಗೊಳಿಸುವ ಮತಾಂಧತೆಯೂ: ಅಮರ್ ದೀಪ್ ಪಿ.ಎಸ್.

ಮಕ್ಕಳು ದೇವರ ಸಮಾನ ಅಂತಾರೆ.   ಅಂಥ ಮಕ್ಕಳು ಹುಟ್ಟಿದ ಸಮಯದಿಂದ ಹಿಡಿದು ಬೆಳೆದು ನಾಲ್ಕು ಹೆಜ್ಜೆ ಇಟ್ಟು ನಾಲ್ಕು ತೊದಲು ಮಾತಾಡುವಂತಾಗುವಷ್ಟರಲ್ಲಿ ತಂದೆ ತಾಯಿಯರು ಅದೆಷ್ಟೇ ಮೊಂಡರು, ಸಿಡುಕರು, ದುಡುಕರು, ಗತ್ತು ಗೈರತ್ತಿನವರಿದ್ದರೂ ಮಕ್ಕಳ ಮುಂದೆ ಮೊಳಕಾಲೂರಿ “ಬಾಲೇ ಕಂದಾ, ಬಾರೇ ಬಂಗಾರಿ, ಹೌದಾ ಚಿನ್ನು, ನನ್ ಸೋನು, ಮೈ ಸ್ವೀಟಿ ಅಂತೆಲ್ಲಾ ಕರೆದು ಮುದ್ದು ಮಾಡದೇ ಬೇರೆ ಕಾರಣವೇ ಇಲ್ಲದಂತೆ ರಿಲೇಟ್ ಆಗಿಬಿಡುತ್ತಾರೆ.  ಅದು ದೊಡ್ಡವರನ್ನು ಬೆಂಡ್ ಮಾಡಲು ಮಕ್ಕಳಿಗಿರುವ ಶಕ್ತಿಯೂ ಹೌದು ಮತ್ತು ಅವರ ಮುಗ್ಧತೆಯ ಆಕರ್ಷಣೆಯೂ ಹೌದು.  ಚಿಕ್ಕ ಮಕ್ಕಳಿದ್ದ ಪೋಷಕರು ತಮ್ಮ ವಯಸ್ಸಾದ ತಂದೆ ತಾಯಂದಿರಿಗೆ ಹೆದರುವುದು ದೂರದ ಮಾತಾಗಿರಬಹುದು.   ಆದರೆ, ಅದೇ ಪೋಷಕರು ತಮ್ಮ ತಂದೆ ತಾಯಂದಿರ ಎದುರು ತಮ್ಮ ಚಿಕ್ಕ ಮಕ್ಕಳು ಹಠ ತೆಗೆದು ರಂಪ ಮಾಡಿ ಕುರ್ರೋ… ಅಂದರೆ ಸಾಕು,  ಅವರ ಎಷ್ಟೋ ಕಮಿಟ್ಮೆಂಟ್ ಗಳ ತರಾತುರಿ, ಟೆನ್ಷನ್ನು ರೆಸ್ಟ್ ಲೆಸ್ ನೆಸ್ ಎಲ್ಲವೂ ಜರ್ರನೇ ಇಳಿದು ಅವೆಲ್ಲವನ್ನೂ ಮರೆತು ಮಕ್ಕಳೆದುರು ಗಂಟೆಯಾದರೂ ಕಾಲ ಕಳೆಯುವಷ್ಟು ತಾಳ್ಮೆ ಬೆಳೆಸಿಕೊಂಡಿರುತ್ತಾರೆ.  ನಾವು ಬರೀ ಮಕ್ಕಳಾಗಿದ್ದಾಗ ನಮ್ಮ ನಮ್ಮ ತಂದೆ ತಾಯಿಯರ ಕಾಳಜಿ, ಆರೈಕೆ, ಮುದ್ದು, ಅರ್ಥವಾಗಲ್ಲವೆಂದಲ್ಲ.  ಆದರೆ, ನಾವು ಮದುವೆಯಾಗಿ ನಮಗೆ ಮಕ್ಕಳಾಗುತ್ತವಲ್ಲ? ಆಗ ಹೆಚ್ಚು ಅರ್ಥವಾಗುತ್ತದೆ. 

ಮಗು ಆರೋಗ್ಯವಾಗಿ, ಮುದ್ದಾಗಿ, ಬೆಳೆಯುತ್ತಿದ್ದರೆ, ಆ ಮಗುವಿನ ವಯಸ್ಸು ಬೆಳೆಯುತ್ತಿರುವುದಿರಲಿ, ಪೋಷಕರ ವಯಸ್ಸನ್ನೇ ಮರೆತುಬಿಡುವ ಸಂತೋಷ ತುಂಬುತ್ತವೆ.  ಇಷ್ಟೆಲ್ಲದರ ನಡುವೆ ಆಕಸ್ಮಿಕಗಳಿಗೆ ಎದೆಗೊಟ್ಟು ನಿಲ್ಲುವ ಪ್ರಸಂಗಗಳೂ ಇಲ್ಲದಿಲ್ಲ. ಮಕ್ಕಳು ತಂದೆ ತಾಯಿಯರ ಪ್ರೀತಿ, ಆರೈಕೆಯಿಂದಲೂ ದೂರವಾಗಬಹುದು.  ಇಲ್ಲವೇ ಪೋಷಕರಿಗೆ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲೇ ಹೈರಾಣಾಗಲೂಬಹುದು.  “ಆಯುರಾರೋಗ್ಯ ಕೊಟ್ಟು ದೇವ್ರು ನಿಮ್ಮನ್ನು ಚೆನ್ನಾಗಿಟ್ಟರ್ಲಿ” ಅಂತ ಹಾರೈಸುತ್ತಾರಲ್ಲ?   ಎಷ್ಟು ಜನಕ್ಕೆ ಆ ಭಾಗ್ಯ ಸಿಕ್ಕಿರುತ್ತೇ ಹೇಳಿ?.  ಸಿಕ್ಕವರು ನಿಜಕ್ಕೂ ಪುಣ್ಯವಂತರು. 

ಅಂಥ ಮಕ್ಕಳ ಹುಟ್ಟು ಸಹಜವಾಗಿ ಖುಷಿಯನ್ನು ತರುವಂಥಾದ್ದಾಗಿದ್ದರೂ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತವಾಗುವ ಲಕ್ಷಣಗಳು ಗೋಚರಿಸಿದರೆ?  ಆಗ ನೋಡಬೇಕು ಆ ಪೋಷಕರ ತಳಮಳ.   ಯಾವತ್ತು ಕೈಯೇ ಮುಗಿಯದ ದೇವರಿಗೆ ಅಡ್ಡಡ್ಡ ಬಿದ್ದು ಬೇಡಿಕೊಳ್ಳುತ್ತಾರೆ.  ಗೊತ್ತಿರುವ ತಜ್ಞರನ್ನೆಲ್ಲಾ ಹುಡುಕಿ, ಇದ್ದಬದ್ದದ್ದನ್ನೆಲ್ಲಾ ತಡಕಾಡಿಯಾದರೂ ಒಟ್ಟುಗೂಡಿಸಿದ ಹಣದ ಜೊತೆ ಅವರೆದುರು ನಿಂತು “ನಮ್ಮಗೂನಾ ಆರೋಗ್ಯವಂತನನ್ನಾಗಿ ಮಾಡಿ” ಎಂದು ಅಂಗಲಾಚುತ್ತಾರೆ.   ಅದಕ್ಕಿಂತ ಹೆಚ್ಚಾಗಿ ಆ ಮಕ್ಕಳಲ್ಲಿ ಕಾಣಿಸಿಕೊಂಡ ವಯೋಸಹಜ ಬೆಳವಣಿಗೆಯ ಕುಂಠಿತ ಆ ಪೋಷಕರಿಗೆ ದೊಡ್ಡ ಆತಂಕವಾಗಿರುತ್ತದೆ.  ಆತಂಕಕ್ಕಿಂತ ಹೆಚ್ಚು ಅದರ ನಿವಾರಣೆಯ ದಾರಿಯಲ್ಲಿ ನಿಂತು ಕಣ್ಣುದ್ದಕ್ಕೂ ಕಾಣುವ, ಮಗುವಿಗೆ ಭವಿಷ್ಯದಲ್ಲಿ ಈಗ ಕಾಣಿಸಿಕೊಂಡಿರುವ ಆತಂಕ ಎಷ್ಟು ಅವಘಡಗಳನ್ನು ಸೃಷ್ಟಿಸಬಹುದು?  ಒಬ್ಬರ ಆಸರೆಯನ್ನೇ, ಅವಲಂಬನೆಯನ್ನೇ ನೆಚ್ಚಿಕೊಳ್ಳುವಂತಾದರೆ ಏನು ಗತಿ? ಎಂಬ ಊಹೆಗಳ ಮೂಟೆ ಆ ಪೋಷಕರನ್ನು ತಳಮಳಿಸುವಂತೆ ಮಾಡಿರುತ್ತದೆ.  

ಮೊದಲೆಲ್ಲಾ ಪೋಲಿಯೋ ಪೀಡಿತ ಮಕ್ಕಳ ಜನನ ಸಮಾಜದಲ್ಲಿ ಒಂದು ಬಗೆಯ ಚಿಂತೆಗೆ ಕಾರಣವಾಗಿತ್ತು. ಬರುಬರುತ್ತಾ ದೇಶದಲ್ಲಿ ಪೋಲಿಯೋ ಮುಕ್ತ ವಾತವರಣ ನಿರ್ಮಿಸಲು ಸರ್ಕಾರಗಳು ಸಾಕಷ್ಟು ಯೋಜನೆ ಕೈಗೊಂಡು ಪೋಷಕರಲ್ಲಿ ಜಾಗೃತಿ ಮೂಡಿಸಿ ಮಗುವಿನ ವಯಸ್ಸಿಗನುಗುಣವಾಗಿ ಪೋಲಿಯೋಗೆ ಮಾತ್ರವಲ್ಲದೇ ಆರೋಗ್ಯದ ಹಿತದೃಷ್ಟಿಯಿಂದ ಇತರೇ ಅವಶ್ಯವಿರುವ ಲಸಿಕೆಗಳನ್ನು ಪೂರೈಸಿ ಮಾರಣಾಂತಿಕ ಖಾಯಿಲೆಗಳು ಸೇರಿದಂತೆ ಇನ್ನಿತರ ರೋಗ ರುಜಿನಗಳಿಂದ ದೂರವಿರಿಸಿ ಆರೋಗ್ಯ ಕಾಪಾಡುವಲ್ಲಿ ಕ್ರಮ ಕೈಗೊಂಡಿವೆ. ಗರ್ಭದಲ್ಲೇ ಪೂರ್ಣ ದೈಹಿಕ ಬೆಳವಣಿಗೆಯಾಗದ, ಮಾನಸಿಕವಾಗಿ ಬೆಳವಣಿಗೆಯಾಗದ, ಹೆರಿಗೆ ಸಂಧರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಉಂಟಾಗುವ ತೊಂದರೆಯಿಂದ ದೈಹಿಕ ಅಥವಾ ಮಾನಸಿಕ ಖಾಯಿಲೆಗೆ ಒಳಗಾಗುವ ಮಕ್ಕಳ ಸಂಖ್ಯೆಯೂ ಇದೆ.  ಆದರೆ, ಇತ್ತೀಚೆಗೆ ಮಕ್ಕಳಲ್ಲಿ ಆರೋಗ್ಯದಲ್ಲಿ ಒಂದು ಸಣ್ಣ ಸುಳಿವೂ ನೀಡದೇ ವಕ್ಕರಿಸುವ ಈಗಿನ ಒಂದು ಲಕ್ಷಣವೆಂದರೆ, ಆಟಿಸಂ (Autism).  ವಿಪರೀತ ಜ್ವರ ಕಾಣಿಸಿಕೊಳ್ಳುವ, ಜ್ವರದಿಂದ ಬರುವ ಕನ್ವಲ್ಷನ್.  ಅದರಿಂದ ನರಗಳ ದೌರ್ಬಲ್ಯ, ದೈಹಿಕ ಬೆಳವಣಿಗೆಗೆ ತಕ್ಕಂತೆ ಮಾನಸಿಕ ಬೆಳವಣಿಗೆಯೂ ಆಗದೇ ಕಾಣಿಸಿಕೊಳ್ಳುವ ಲಕ್ಷಣವದು.   ಮಾತು ಬರುವುದಿಲ್ಲ ( Non-verbal communication), ವಿಪರೀತ ಹಠ, ನಿಯಂತ್ರಿಸಲಾಗದ ಚಟುವಟಿಕೆ (Hyper Active), ದುಡುಕುತನ (Impulsivity), ಸಿಟ್ಟು, ತಲೆ ಹೊಡೆದುಕೊಳ್ಳುವುದು ( Head Banding)  ಇನ್ನಿತರೇ ಸಾಕಷ್ಟು ರೀತಿಯ ವೈಪ್ಯರೀತ್ಯಗಳನ್ನು ಎದುರಿಸುತ್ತಿರುವ ಮಕ್ಕಳಿದ್ದಾರೆ.  ಸುಮಾರು  ಎರಡೂವರೆ ವರ್ಷದಿಂದ ಹದಿನಾರು ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಲಕ್ಷಣಗಳನ್ನು ನಾನು ನೋಡಿದ್ದೇನೆ. ಈ ಲಕ್ಷಣಗಳು ಸುಮಾರು ಮಗುವಿನ ಎರಡು ವರ್ಷ ವಯಸ್ಸಿನಿಂದ ಮೂರು ವರ್ಷಗಳ ವಯಸ್ಸಿನ ಮಕ್ಕಳಲ್ಲಿ  ಗುರುತಿಸಬಹುದಾಗಿದೆ.  

ಬಂಧುಗಳಲ್ಲಿ, ಅಕ್ಕಪಕ್ಕದಲ್ಲಿ, ಅಪರಿಚಿತ ಸ್ಥಳಗಳಲ್ಲಿ ಮಗುವಿನ ಓಡಾಟ, ನಡವಳಿಕೆ ನೋಡುತ್ತಲೇ ಆ ಮಕ್ಕಳನ್ನು “ಮಾನಸಿಕ ರೋಗಿ” ಎಂಬಂತೆ  ಎಲ್ಲಿ ನೋಡುತ್ತಾರೋ ಎನ್ನುವ ಆತಂಕ ಇಂತಹ ಮಕ್ಕಳಿದ್ದ ಪೋಷಕರದ್ದು.  ಬಾಯಿ ಬಿಟ್ಟು “ನಿಮಾನ್ಸ್ ಗೆ ಕರ್ಕೊಂಡು ಹೋಗಿ ತೋರ್ಸಿ” ಅಂದವರ ಸಂಖ್ಯೆಯೂ ಇದ್ದಿರಬಹುದು. ಕೆಲವು ಸಲ ಹೇಳುವ, ಸಲಹೆ ಕೊಡುವ ಉದ್ದೇಶ ಒಳ್ಳಯದೇ.  ಆದರೆ, ಅದನ್ನು ಹೇಳುವ ರೀತಿಯಲ್ಲಿ ವ್ಯತ್ಯಾಸವಾಗಿಬಿಡುತ್ತವೆ. ಇದೇ ಕಾರಣಕ್ಕೆ ಯಾವುದೇ ಕಾರ್ಯಕ್ರಮಕ್ಕೂ, ಊರಿಗೂ, ಮನೆಗೂ ಅಂಥ ಮಗುವನ್ನು ಕರೆದು ತರಲು ಹಿಂಜರಿದು ಉಳಿಯುವ ತಂದೆ ತಾಯಂದಿರೂ ಇದ್ದಾರೆ.  ಹೋದಲ್ಲಿ ಬಂದಲ್ಲಿ ಆ ಮಗುವಿನ ಬಗ್ಗೆ ಅಪ್ಪಿತಪ್ಪಿ ಯಾರಾದರೂ ನಾಲಗೆ ತಪ್ಪಿ ಏನಾದರೂ ಅಂದುಬಿಟ್ಟರೆ, ಅಂಥ ಮಾತುಗಳನ್ನು ಅರಗಿಸಿಕೊಳ್ಳುವುದು ಪೋಷಕರಿಗೆ ಕಷ್ಟವಾಗುತ್ತೆ.  ಮಗು ಇಂದಲ್ಲಾ ನಾಳೆ ಗುಣಮುಖವಾಗುವ ಭರವಸೆಯನ್ನಿಟ್ಟುಕೊಂಡೇ ದಿನ ದೂಡುತ್ತಿರುವ ಪೋಷಕರಿಗೆ ಸುತ್ತಲಿನ ಜನರೂ ಸಹ ಚೂರು ತಾಳ್ಮೆಯಿಂದ ಸಮಾಧಾನಿಸಿ, ಮಗುವಿನ ಬಗ್ಗೆ “ ಅಯ್ಯೋ” ಎಂದು ಕನಿಕರಪಡುವ ಬದಲು ಆ ಮಗುವಿನಲ್ಲಿರುವ ಸಕಾರಾತ್ಮಕ ಗುಣಗಳಿಂದಲೇ ಬೆಳವಣಿಗೆಗೆ ಸಹಕಾರಿಯಾದರೆ ಅದೇ ದೊಡ್ಡ ಉಪಕಾರವಾದೀತು. ಜೊತೆಗೆ ಸೂಕ್ತ ಸಮಯದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ವೈದ್ಯರ ಚಿಕಿತ್ಸಾ ಸಲಹೆ ಮೇರೆಗೆ  ನಿಗದಿತ ಗೃಹಾಧರಿತ ಚಟುವಟಿಕೆಗಳ(Home based Activities) ಮೂಲಕ ಪೋಷಕರು ಅಂಥ ಮಕ್ಕಳ ಬೆಳೆಯುವಲ್ಲಿ ಶ್ರಮ ಪಟ್ಟರೇ ನಿಜಕ್ಕೂ ಆ ಮಕ್ಕಳು ಸಾಧಾರಣ ಮಕ್ಕಳಿಗಿಂತ ಹೆಚ್ಚು ಚುರುಕಾಗಿಯೂ ಚಟುವಟಿಕೆಯಿಂದಲೂ ಇರುತ್ತವೆ.  ಇದೂ ಮಾನಸಿಕಕ್ಕೇ ಸಂಬಂಧಿಸಿದ್ದಾಗಿರಬಹುದು. ಆದರೆ, ಇಂಥ ನರದೌರ್ಬಲ್ಯವಿರುವ ಮಕ್ಕಳು ಹಂತ ಹಂತದ ಬೆಳವಣಿಗೆಯಲ್ಲಿ ಬದಲಾವಣೆ ಕಂಡು ಕ್ರಮೇಣ ಸಾಧರಣ ಮಕ್ಕಳಂತೆ ಬೆಳೆಯುತ್ತವೆ.  

ಇಂಥ ಮಗುವಿರುವ ಪೋಷಕರಲ್ಲಿ ನಡೆದ ಒಂದು ಘಟನೆ ಹೇಳುತ್ತೇನೆ.  ಆ ಮಗು ಎರಡು ವರ್ಷದವನಿದ್ದಾಗಲೇ ಕಾಣಿಸಿಕೊಂಡ ಈ ಲಕ್ಷಣಗಳನ್ನು ಒಬ್ಬ (General Physician) ವೈದ್ಯರಲ್ಲಿ ಪೋಷಕರು ಆ ಮಗುವನ್ನು ತೋರಿಸುತ್ತಾರೆ.  ಆ ವೈದ್ಯರ ಪತ್ನಿಯು ಪೋಷಕರ ಅತ್ಯಾಪ್ತರೂ ಆಗಿರುತ್ತಾರೆ. ಮಕ್ಕಳ ತಜ್ಞರಲ್ಲಿಗೆ ತೆರಳಲು ಸೂಚಿಸಿದ ನಂತರ ಇದರ ಪತ್ತೆ ಮತ್ತು ಆರೈಕೆ ವಿಧಾನಗಳು ಲಭ್ಯವಾಗುತ್ತವೆ.  ಆದರೆ, ಮೊದಲು ತೋರಿಸಿದ ವೈದ್ಯರ (General Physician) ಪತ್ನಿ ಈ ಪೋಷಕರಿಗೆ “ನನ್ ಗೆಳತಿ ಒಬ್ಬಳು ತನ್ನ ಮಗನ ಈ ಥರದ ಸ್ಥಿತಿಯಿಂದಾಗಿ ತನ್ನ ವೃತ್ತಿಯನ್ನೇ ಬಿಟ್ಟು ಪೂರ್ತಿ ಮಗುವಿನ ಆರೈಕೆಯಲ್ಲೇ ಇಪ್ಪತ್ಮೂರು ವರ್ಷ ಕಳೆದುಬಿಟ್ಟಳು. ಆಕೆಯ ಮಗನೇನೋ ಈಗ ಆರೋಗ್ಯವಾಗಿದ್ದಾನೆ, ಉನ್ನತ ವ್ಯಾಸಂಗವನ್ನೂ ಮಾಡುತ್ತಿದ್ದಾನೆ.   ಪಾಪ, ಆಕೆ ಮಗನ ಆರೈಕೆಯಲ್ಲೇ ವಯಸ್ಸು ಕಳೆದು ಆಕೇಯೇ ಒಬ್ಬ ರೋಗಿಯಂತಾಗಿದ್ದಾಳೆ.”  ಅಂದುಬಿಟ್ಟರು.  ಈಗಿನ್ನೂ ಎರಡು ವರ್ಷದ ಹಸಿಗೂಸನ್ನು ಕೈಯಲ್ಲಿಟ್ಟುಕೊಂಡ  ಈ ಪೋಷಕರ ಮುಖದಲ್ಲಿ ಸಣ್ಣಗೆ ಬೆವರು.   ಮಗುವಿನ ಪೂರ್ಣ ತಪಾಸಣೆ, ಆರೈಕೆಯ ಮೇಲೆ ಆರೋಗ್ಯ ವೃದ್ಧಿಸುವ ಭರವಸೆ ನೀಡುವ ಬದಲು ದಿಗಿಲುಗೊಳ್ಳುವಂತೆ ಯಾರಾದರೂ ಹೇಳಿದರೆ ಹೇಗೆ?  ಬಹುಶ: ಅವರು ಹೇಳಿದ್ದರಲ್ಲಿ ಸುಳ್ಳಿಲ್ಲದಿರಬಹುದು. ಆದರೆ, ಸುಶಿಕ್ಷಿತರಾಗಿ ಅದರಲ್ಲೂ ಒಬ್ಬ ವೈದ್ಯರ ಪತ್ನಿಯಾಗಿ ವೈದ್ಯಕೀಯ ಜ್ಞಾನದ ಗಂಧಗಾಳಿಯೂ ಗೊತ್ತಿರದ ಪೋಷಕರಿಗೆ ಹೀಗೆ ಹೇಳಿದ ಸಂಧರ್ಭದಲ್ಲಿ ಹೇಗಾಗಿರಬೇಡ?

ಸುಮಾರು ಐದಾರು ವರ್ಷಗಳ ಕಾಲ ಪೋಷಕರು ಆ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು, ಕಷ್ಟಪಟ್ಟು ತಿದ್ದಿ, ತೀಡಿ, ರಮಿಸಿ, ಮುದ್ದಿಸಿ ಆರೈಕೆ ಮಾಡಿದ ನಂತರ ಆ ಮಗುವೀಗ ಮಾತಾಡುತ್ತೆ, ಓಡಾಡುತ್ತೆ, ಶಾಲೆಗೆ ಹೋಗುತ್ತೆ, ವಸ್ತುಗಳನ್ನು, ಜಾಗಗಳನ್ನು ಮನುಷ್ಯರನ್ನು ಪ್ರಕೃತಿಯನ್ನು, ಎಲ್ಲವನ್ನೂ ಗುರುತಿಸುತ್ತೆ. ಸವಿಯುತ್ತೆ; ಸಾಧಾರಣ ಮಗುವಿನಂತೆ, ಒಮ್ಮೊಮ್ಮೆ ಸಾಧರಣ ಮಗುವಿಗಿಂತ ಹೆಚ್ಚು.  ಕೆಲವೇ ವರ್ಷಗಳ ಹಿಂದೆ ನೋಡಿದಂತಹ ಮಗು ಈಗ ಬದಲಾದ ಸ್ಥಿತಿಯಲ್ಲಿ.   ಆಶ್ಚರ್ಯ ಮತ್ತು ಖುಷಿ ಎರಡನ್ನೂ ವ್ಯಕ್ತಪಡಿಸಿದ, ವ್ಯಕ್ತಪಡಿಸುವ ಮುಖಗಳು.  “ಅಂಗವಿಕಲ” “ವಿಕಲಚೇತನ” ಎನ್ನುವ ಪದಗಳನ್ನು ತೆಗೆದು “ವಿಶೇಷ ಅರ್ಹತೆಯುಳ್ಳ ಮಕ್ಕಳು”  ಎನ್ನುವ ಸಾಲಿಗೆ ಈ ಮಗುವೂ ಸೇರಿದ ಸಂತೋಷ; ಆ ದಂಪತಿಗೆ. ಅಷ್ಟು ಸಾಕಲ್ಲವೇ?    

ಅದ್ಸರಿ, ಇಷ್ಟೆಲ್ಲಾ ಕಷ್ಟ, ಶ್ರಮ ಪಟ್ಟು ಮಕ್ಕಳನ್ನು ಪೋಷಿಸುವ ನಾವುಗಳು  ಒಮ್ಮೊಮ್ಮೆ “ನಾವ್ ಪಟ್ಟ ಕಷ್ಟ ಬೇರೆ ಯಾರ್ಗೂ ಬರ್ಬಾರದಪ್ಪಾ.  ನಮ್ ಮಗೂಗೆ ಬಂದಂತೆ ಬೇರೆ ಯಾವ ಮಗೂಗೂ ಆಗಬಾರದಪ್ಪಾ, ಭಗವಂತಾ” ಅಂತೀವಲ್ಲವಾ?   ಮೊನ್ನೆ ಪಾಕಿಸ್ತಾನದಲ್ಲಿ ಶಾಲೆಯೊಂದರಲ್ಲಿದ್ದ ಅಷ್ಟೂ ಮಕ್ಕಳನ್ನು, ಬೆಂಚ್ ಕೆಳಗೆ ಅಲ್ಲಿ ಇಲ್ಲಿ ಅವಿತು ಕುಳಿತ ಕಂದಮ್ಮಗಳನ್ನು ಎಳೆದೆಳೆದು ಗುರಿಯಿಟ್ಟು ಕಣ್ಣಿಗೆ, ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದರಲ್ಲಾ ಪಾಪಿಗಳು?  ಅಂಥ ದುಷ್ಟರಿಗೆ ಅಂಗವೈಕಲ್ಯತೆ ಕೊಟ್ಟು, ಮತಾಂಧರನ್ನು ಅಂಧರನ್ನಾಗಿಸಿ ಯಾಕಾದರೂ ಹುಟ್ಟಿಸಲಿಲ್ಲ ಆ ದೇವರು? ಹೀಗನ್ನಿಸುವುದರಲ್ಲಿ ತಪ್ಪೇನಿಲ್ಲ. ಹಾಗಾದರೂ ಅಸಹ್ಯ ಹುಟ್ಟಿಸುವಂಥ ಆ ದರಿದ್ರರಿಗೆ ಪೋಷಕರ ಪ್ರೀತಿ, ಮಕ್ಕಳಾಗಿದ್ದಾಗಿನ ಮುದ್ದುತನ ಅರ್ಥವಾಗಿ “ಉಗ್ರ” ತನ ತರವಲ್ಲ ಅನ್ನುವುದಾದರೂ ತಿಳಿಯುತ್ತಿತ್ತೇನೋ.  ಪಾಪಿಗಳು ದೇವರ ಹೆಸರಲ್ಲಿ ದೇವರಂಥ ಮಕ್ಕಳನ್ನೇ ಕೊಂದರಲ್ಲಾ? ಮನುಷ್ಯನ ಕಣ್ಣಿನಲ್ಲಿ ದೇವರು ಏನಲ್ಲಾ ರೂಪದಲ್ಲಿ ಕಲ್ಪಿತನಾಗುತ್ತಾನೆ.  ಅದೇ ದೇವರ ಕಣ್ಣಗೆ ಮನುಷ್ಯನ ಕ್ರೂರತನ ಕಾಣುತ್ತಿಲ್ಲವೇ ಅಥವಾ ಅವನು ನೋಡಲೊಲ್ಲನೇ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
C.M.Srinivasa
9 years ago

Its a good writing sir

ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ಲೇಖನ ತುಂಬಾ ಚೆನ್ನಾಗಿದೆ, ಕಣ್ಣು ತೆರೆಸುವಂತಿದೆ!

ganesh
ganesh
9 years ago

ಚೆನ್ನಾಗಿದೆ. ಅರ್ಥಪೂರ್ಣವಾಗಿದೆ. ಪ್ರಕೃತಿಯ ವೈಚಿತ್ರಗಳು ಹೀಗೆ. ಭಗವಂತನ ಶಾಪವೋ ಪೂರ್ವಜನ್ಮದ ಫಲವೋ ಎಂದು ದೂರಿ ಸಮಧಾನ ಮಾಡಿಕೊಳ್ಳಬೇಕು ಅಷ್ಟೇ.  ಮಕ್ಕಳಿರುವವರಿಗೆ ಮಕ್ಕಳ ಬೆಲೆಗೊತ್ತಿರಲ್ಲ.  ಈಗಿನ ಮಕ್ಕಳಿಗೆ ತಂದೆತಾಯಿರ ಬೆಲೆಗೊತ್ತಿರಲ್ಲ. ಮಕ್ಕಳಿಲ್ಲದವರೇ ಈ ರೀತಿಯ ಹೇಯ ಕೃತ್ಯಗೈಯಲು ಸಾಧ್ಯ.

3
0
Would love your thoughts, please comment.x
()
x