ಗೂಳೂರು ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಗಣಪತಿ ಆಕಾರ ಮತ್ತು ಗಾತ್ರಗಳಲ್ಲಿ ತನ್ನದೇ ಆದ ವಿಶೇಷ ಶೈಲಿಯನ್ನು ಹೊಂದಿದೆ.
ಎಲ್ಲಾ ಕಡೆಗಳಲ್ಲಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಅಂದು ಮಣ್ಣಿನಿಂದ ಗಣಪತಿ ಮೈಳೆದಯಲು ಆರಂಭಿಸುತ್ತಾನೆ. ದೀಪಾವಳಿ ಹಬ್ಬದ ದಿನ ಈ ಗಣೇಶ ಪ್ರಥಮ ಪೂಜೆಗೆ ಸಿದ್ಧಗೊಳ್ಳುತ್ತಾನೆ.
ಅಂದಿನಿಂದ ನಲವತ್ತೈದು ದಿನಗಳ ಕಾಲ ವಿವಿಧ ಪೂಜೆ ಪುನಸ್ಕಾರಗಳಿಂದ ಆರಾಧನೆಗೊಳ್ಳುವ ಈ ಗಣಪತಿ ಕಾರ್ತಿಕ ಮಾಸದ ಕೊನೆಯಲ್ಲಿ ಕೆರೆಯೊಳಕ್ಕೆ ವಿಸರ್ಜನೆಗೊಳ್ಳುತ್ತಾನೆ. ಭೃಗು ಮುನಿಗಳಿಂದ ಮೊದಲು ಸ್ಥಾಪನೆಗೊಂಡಿರುವ ಐತಿಹ್ಯವಿರುವ ಈ ಗಣಪತಿ ಮಣ್ಣಿನಿಂದ ನಿರ್ಮಾಣಗೊಂಡಿದ್ದರೂ ಸಹ ವಜ್ರ ಖಚಿತವಾದ ಬೆಳ್ಳಿ ಆಭರಣಗಳನ್ನು ಧರಿಸಿಕೊಳ್ಳುತ್ತಾನೆ! ಇದು ಈ ಗೂಳೂರು ಗಣಪನ ವಿಶೇಷ.
ಇಂತಹ ವೈಶಿಷ್ಟ್ಯಪೂರ್ಣ ಗಣಪತಿಯ ದರ್ಶನ ಪಡೆಯಬೇಕಾದರೆ ನೀವು ತುಮಕೂರು ಸಮೀಪದ ಗೂಳೂರು ಗ್ರಾಮಕ್ಕೆ ಪ್ರಯಾಣ ಮಾಡಬೇಕು.
ಸ್ಥಳ ಪುರಾಣ:
ಪುರಾಣ ಪ್ರಸಿದ್ಧ ಗೂಳೂರು ಗಣೇಶನನ್ನು ಸಾವಿರಾರು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಭೃಗುಮುನಿಗಳ ಪ್ರತಿಷ್ಠಾಪನೆ ಮಾಡಿದರೆಂಬ ಇತಿಹಾಸವಿದೆ.
ಅನಾದಿ ಕಾಲದಲ್ಲಿ ಕಾಶಿಯಾತ್ರೆ ಕೈಗೊಂಡಿದ್ದ ಭೃಗುಮುನಿಗಳು ಗೂಳೂರಿನಲ್ಲಿ ತಂಗಿದ್ದ ಸಂದರ್ಭದಲ್ಲಿ ಗಣಪತಿ ಹಬ್ಬ ಬಂದ ಕಾರಣ ಅಂದು ತಾವೇ ಚಿಕ್ಕ ಗಣಪನ ಮೂರ್ತಿಯನ್ನು ನಿರ್ಮಿಸಿ ಪೂಜಿಸಿದರು. ಅಂದು ಈ ಊರಿನಲ್ಲಿ ಗಣೇಶನ ಆರಾಧನೆ ಮುಂದುವರೆಸುವ ಬಗ್ಗೆ ಜನರಿಗೆ ಸೂಚನೆ ನೀಡಿದರಂತೆ. ಅವರ ಅಭಿಲಾಷೆ ಮೇರೆಗೆ ಅಂದಿನಿಂದ ಆರಂಭಗೊಂಡ ಈ ಗಣಪತಿಯ ಆರಾಧನೆ ಪ್ರತಿವರ್ಷ ನಿರಂತರವಾಗಿ ಸಾಗಿ ಬರುತ್ತಿದೆ.
ಗಣೇಶನ ನಿರ್ಮಾಣ:
ಗಣೇಶ ಹಬ್ಬದ ದಿನ ಗ್ರಾಮದ ಸರ್ವಜನಾಂಗದ ಜನರೆಲ್ಲರೂ ಒಟ್ಟಿಗೆ ಸೇರಿ ಊರಿನ ಕೆರೆಯ ಅಂಗಳಕ್ಕೆ ತೆರಳಿ ಚಿಕ್ಕಗಣಪತಿ ಮೂರ್ತಿಯನ್ನು ಪೂಜಿಸಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ದೊಡ್ಡ ಗಣಪತಿ ತಯಾರಿಕೆಗೆ ಅಗತ್ಯವಾದ ಕೆರೆ ಮಣ್ಣನ್ನು ಸಹ ಅದೇ ದಿನ ತಂದು ದೇವಾಲಯದ ಅಂಗಳಕ್ಕೆ ಹಾಕುತ್ತಾರೆ. ಅಂದಿನಿಂದ ಗಣಪನ ನಿರ್ಮಾಣದ ಕಾರ್ಯ ಪ್ರಾರಂಭವಾಗುತ್ತದೆ.
ಇಲ್ಲಿನ ಮತ್ತೊಂದು ಕುತೂಹಲ ಸಂಗತಿಯೆಂದರೆ ವಿಜಯದಶಮಿ ದಿನ ಊರಿನ ಮನೆಗಳಲ್ಲಿ ಪೂಜಿಸುವ ಚಿಕ್ಕಗಣಪತಿ ಮೂರ್ತಿಗಳನ್ನು ದೊಡ್ಡ ಗಣೇಶನ ಉದರದೊಳಕ್ಕೆ ಹಾಕಲಾಗುತ್ತದೆ. ಅಷ್ಟೇ ಅಲ್ಲ, ಗಣಪನಿಗೆ ಪ್ರುಯವಾದ ಭಕ್ಷ್ಯಗಳನ್ನು ಸಹ ಹೊಟ್ಟೆಗೆ ಹಾಕಿ ಗಣೇಶನನ್ನು ನಿರ್ಮಿಸಲಾಗುತ್ತದೆ.
ಎಲ್ಲೆಡೆ ದೀಪಾವಳಿಯ ಪಟಾಕಿ ಸದ್ದು ಮೊಳಗುವ ಸಮಯದಲ್ಲಿ ಈ ಗೂಳೂರು ಗಣೇಶನಿಗೆ ಪ್ರಥಮಪೂಜೆ ನಡೆಯುತ್ತದೆ. ಇಲ್ಲಿನ ಹತ್ತಡಿ ಉದ್ದ ಮತ್ತು ಅಗಲದ ಗಜಾಯ ಗಣಪತಿಯನ್ನು ಸ್ಥಳೀಯರು ನಿರ್ಮಿಸುತ್ತಾರೆ. ಈ ಗಣಪತಿಗೆ ವಜ್ರಖಚಿತವಾದ ಕಿರೀಟ, ಬೆಳ್ಳಿ ಪಾದುಕೆ, ದಂತ ಕವಚಗಳನ್ನು ಧರಿಸಲಾಗುತ್ತದೆ. ಊರಿನಲ್ಲಿ ಗಣಪತಿಗೆ ಸುಂದರವಾದ ದೇವಾಲಯವನ್ನು ನಿರ್ಮಿಸಲಾಗಿದೆ.
ಕಾರ್ತಿಕದ ಕೊನೆಯಲ್ಲಿ ಊರಿನ ಪ್ರಮುಕ ಬೀದಿಗಳಲ್ಲಿ ಗಣೇಶನ ಮೆರವಣಿಗೆ ನಡೆಸಿ ನಂತರ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಅಂದು ಇಲ್ಲಿ ನಡೆಯುವ ಉತ್ಸವ, ತೆಪ್ಪೋತ್ಸವ, ಪಟಾಕಿಯ ಸಂಭ್ರಮ ನೋಡುಗರ ಕಣ್ಮನ ಸೆಳೆಯುತ್ತದೆ. ರಾಜ್ಯದ ಹಲವು ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಿಂದಿನ ಕಾಲದಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಸಹ ಆಗಮಿಸುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ.