ತನಗೆ ನಲವತ್ತು ವರುಷ ತುಂಬುವ ಮುನ್ನ ಭಾರತವ ವಿಶ್ವಮಾನ್ಯವಾಗಿಸಿ, ಭಾರತದ ಧರ್ಮ, ಸಂಸ್ಕೃತಿಯ ಜಗಕೆ ಸಾರಿ, ಹಿಂದೂ ಧರ್ಮದ ಉದಾತ್ತತೆಯನ್ನು ಅರ್ಥೈಸಿ, ಭಾರತದ ಬಗೆಗೆ ಮಹಾನ್, ಉದಾತ್ತ ಭಾವನೆ, ಬರುವಂತೆ ಮಾಡಿ, ಅದ್ಬುತವ ಸಾಧಿಸಿ, ವಿಶ್ವಮಾನ್ಯನಾದ. ಆ ವೀರ ಸನ್ಯಾಸಿ ತನ್ನ ಆಕರ್ಷಕ ನಿಲುವಿನಿಂದ, ಉದಾತ್ತ ಮಾತಿನಿಂದ, ಸಿರಿ ಕಂಠದಿಂದ ಜನರ ಮಂತ್ರಮುಗ್ದಗೊಳಿಸಿ ಜಗವ ಗೆದ್ದ !
ಭಾರತ ರೂಪುಗೊಳ್ಳದ ಮುನ್ನ ಭಾರತೀಯತೆಯ ಪರಿಚಯ ವಿಶ್ವಕ್ಕೆ ಅಷ್ಟಾಗಿ ಆಗಿರಲಿಲ್ಲ. ಆಗಲು ಸಾಧ್ಯವಿರಲಿಲ್ಲ. ಏಕೆಂದರೆ ೧೯೪೭ ಕ್ಕಿಂತ ಹಿಂದೆ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು. ಅದಕ್ಕಿಂತ ಮುನ್ನ ಭಾರತ ೬೦೦ ಕ್ಕೂ ಹೆಚ್ಚು ಆಡಳಿತದಲ್ಲಿ ಹಂಚಿ ಹೋಗಿ ಭಾರತ ರೂಪುಗೊಂಡಿರಲಿಲ್ಲ. ಪ್ರಯುಕ್ತ ಭಾರತೀಯತೆಯೂ ರೂಪುಗೊಂಡಿರಲಿಲ್ಲ. ಆದ್ದರಿಂದ ಹಿಂದೂ ಧರ್ಮ ವಿಶ್ವಕ್ಕೆ ಪರಿಚಯ ಅಷ್ಟಾಗಿ, ಸ್ಪಷ್ಟವಾಗಿ ಆಗಲು ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ ಇದನ್ನೆಲ್ಲಾ ಮೀರಿ ಭಾರತೀಯತೆಯನ್ನೂ, ಹಿಂದೂಧರ್ಮದ ಮಹತ್ವವನ್ನು ಅರ್ಥಮಾಡಿಕೊಂಡು ಜಗತ್ತಿಗೆ ಸಾರಿ ಜಗತ್ತನ್ನು ಬೆರಗುಗೊಳಿಸಿದ ಅಪರೂಪದ ಭಾರತ ಪುತ್ರ!
ಯಾವನನ್ನಾದರೂ ಆಗಲಿ ಚೆನ್ನಾಗಿ ಪರೀಕ್ಷಿಸದೆ ಗುರುವಾಗಿ ಸ್ವೀಕರಿಸಬಾರದು ಎಂದು ತಮ್ಮ ಶಿಷ್ಯರಿಗೆ ಪರಮಹಂಸರು ಆಗಾಗ ಹೇಳುತ್ತಿದ್ದರು. ಪ್ರಯುಕ್ತ ಮತ್ತು ಈ ವೀರ ಸನ್ಯಾಸಿಯು ವೈಚಾರಿಕ ಮನೋಭಾವದವನಾದ್ದರಿಂದ ಗುರುವನ್ನು ಸ್ವೀಕರಿಸುವಾಗಲೂ ಪರೀಕ್ಷಿಸಿಯೇ ಸ್ವೀಕರಿಸಬೇಕೆಂದು ಗುರುವನ್ನು ಪರೀಕ್ಷಿಸಿದ ಸಂದರ್ಭವುಂಟು. ಇವರ ಗುರುವಾದ ರಾಮಕೃಷ್ಣ ಪರಮಹಂಸರು ಕಾಮ, ಕಾಂಚಾನ ತ್ಯಾಗದ ಬಗ್ಗೆ ಆಗಾಗ ಒತ್ತಿ ಒತ್ತಿ ಹೇಳುತ್ತಿದ್ದರು. ಹೊನ್ನು ಮಣ್ಣನ್ನು ಸಮನಾಗಿ ಕಾಣುತ್ತಿದ್ದರು. ಕಾಸು ಸೋಂಕಿದರೆ ಸಾಕು ವಿದ್ಯುತ್ ಸ್ಪರ್ಷವಾದವರಂತೆ ವರ್ತಿಸುತ್ತಿದ್ದರು. ಒಂದು ದಿನ ಗುರುಗಳು ಹೊರಗೆ ಹೋಗಿದ್ದಾಗ ಅವರು ಬರುವ ಮುನ್ನ ಅವರ ಹಾಸಿಗೆಯ ಕೆಳಗೆ ಒಂದು ನಾಣ್ಯವನ್ನು ಇಟ್ಟರು. ಆ ಹಾಸಿಗೆಯ ಮೇಲೆ ಗುರುಗಳು ಕುಳಿತೊಡನೆಯೆ ಕೆಳಗೆ ನಾಣ್ಯವಿರುವುದು ಅವರಿಗೆ ತಕ್ಷಣ ತಿಳಿಯಿತು. ಇದು ತನ್ನ ಶಿಷ್ಯನ ಕೆಲಸವೆಂದು ತಿಳಿದು ಕೋಪಗೊಳ್ಳದೆ " ನನ್ನನ್ನು, ನನ್ನ ಮಾತುಗಳನ್ನು , ವ್ಯಾಪಾರಿ ಹಣವನ್ನು ಪರೀಕ್ಷಿಸಿ ಸ್ವೀಕರಿಸುವಂತೆ ಪರೀಕ್ಷಿಸಿ ಸ್ವೀಕರಿಸು " ಎಂದರಂತೆ! ಹೀಗೆ ಯಾರೇ ಆಗಲಿ ತಮಗೆ ಬೇಕಾದುದ ಪಡೆಯಲು ಕೊಡುವ ಸಾಮರ್ಥ್ಯ ಇರುವವರಲ್ಲಿಗೆ ಹೋಗಬೇಕಾಗುತ್ತದೆ. ಇಲ್ಲವಾದರೆ ಬದುಕು ವ್ಯರ್ಥವಾಗುತ್ತದೆ. ಆದ್ದರಿಂದ ತನಗೆ ಬೇಕಾದುದ ಕೊಡುವ ಸಾಮರ್ಥ್ಯ ಈ ವ್ಯಕ್ತಿಗೆ ಇದೆಯೋ ಇಲ್ಲವೋ ಎಂದು ಎಲ್ಲರೂ ತಿಳಿಯುವುದು ಅಗತ್ಯ. ಪ್ರಯುಕ್ತ ಪರೀಕ್ಷಿಸಿ ಉತ್ತೀರ್ಣರಾದ ನಂತರ ಪರಮಹಂಸರನ್ನು ಗುರುವಾಗಿ ಸ್ವೀಕರಿಸಿತೀ ವಿವೇಕಮತಿ !
ಇವರು ಯುವ ಶಕ್ತಿಯ ಸಾಮರ್ಥ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರು. ಆದ್ದರಿಂದ " ಏಳಿ ! ಎದ್ದೇಳಿ ! ಗುರಿ ಮುಟ್ಟುವವರೆಗೂ ನಿಲ್ಲದಿರಿ " ಎಂದು ಯುವಕರಿಗೆ ದೇಶ ನಿರ್ಮಾಣ ಮಾಡಲು ಕರೆಕೊಟ್ಟರು. " ಯುವ ಶಕ್ತಿ ಹುಚ್ಚು ಹೊಳೆಯಿದ್ದಂತೆ " ಅದರಲ್ಲಿ ಅಧಮ್ಯ ಶಕ್ತಿಯಿದೆ ಎಂದು ತಿಳಿದಿದ್ದರು. ಹುಚ್ಚು ಹೊಳೆ ಹರಿಯುವಾಗ ದಾರಿಗೆ ಅಡ್ಡ ಬಂದುದನೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಅಷ್ಟು ಅಪರಿಮಿತ ಶಕ್ತಿ ಅದಕ್ಕಿರುತ್ತದೆ. ಆ ಹುಚ್ಚು ಹೊಳೆಗೆ ಇತ್ತಕಡೆ ಹರಿಯ ಬೇಕು, ಇದನ್ನೇ ಕೊಚ್ಚಿಕೊಂಡು ಹೋಗಬೇಕೆಂದು ಮಾರ್ಗ ತೋರಿದರೆ ಸಾಕು ಅದನ್ನು ಕ್ಷಣಾರ್ಧದಲ್ಲಿ ಕೊಚ್ಚಿಹಾಕುತ್ತದೆ. ಇಂಥಾ ಹುಚ್ಚು ಹೊಳೆಯಿದ್ದಂತೆ ಯುವಶಕ್ತಿ. ಅದಕ್ಕೆ ಗುರಿ ತೋರಿ ಮಾರ್ಗದರ್ಶನ ಮಾಡುವವರು ಅವಶ್ಯ. ಆಗ ಯುವ ಶಕ್ತಿ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ ! ಹಿಂದೆ ಗುರು ಇದ್ದ ಮುಂದೆ ಗುರಿಯಿತ್ತು, ದಂಡು ಸಾಗುತ್ತಿತ್ತು. ಅಪಾರ ಸೈನ್ಯದ ಸದುಪಯೋಗ ಆಗಬೇಕಾದರೆ ಅದಕ್ಕೆ ಮಾರ್ಗದರ್ಶನ ಮಾಡುವವರು ಮುಖ್ಯವಾಗಿ ಇರಬೇಕು. ಆಗ ಅಸಾಧ್ಯವಾದುದನ್ನು ಸಾಧಿಸಬಹುದು. ಅಪಾರ ಯುವ ಸೈನ್ಯವಿದ್ದೂ ಮಾರ್ಗದರ್ಶಕರಿಲ್ಲದಮೇಲೆ ಆ ಅಪಾರ ಸೈನ್ಯದ ಶಕ್ತಿ ವ್ಯರ್ಥ ! ಯುವ ಶಕ್ತಿಯ ಸದುಪಯೋಗ ಆಗಬೇಕಾದರೆ ಅದಕ್ಕೆ ಸರಿಯಾದ ಗುರಿ ತೋರಿಸುವವರು ಅವಶ್ಯ. ಗುರಿ ತೋರಿದಲ್ಲಿ ಅರ್ಧ ಸಾಧಿಸಿದಂತೆ ! ಎಂದು ಅಪಾರವಾಗಿ ಯುವಕರ ಶಕ್ತಿಯನ್ನು ನಂಬಿತ್ತು ಆ ಯುವಶಕ್ತಿ! ಅದಕ್ಕಗಿಯೇ ಸಧೃಢ ರಾಷ್ಟ್ರ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ ಎಂದು ಯುವಕರಿಗೆ ಕರೆಕೊಟ್ಟಿತು. ಆದರೆ ಇಂದು ಅಪಾರವಿರುವ ಯುವಶಕ್ತಿ ಸರಿಯಾದ ಮಾರ್ಗದರ್ಶನವಿರದೆ ಸೊರಗುತ್ತಿದೆ, ವ್ಯರ್ಥವಾಗುತ್ತಿದೆ. ಮಾರ್ಗದರ್ಶನ ಮಾಡಬೇಕಾಗಿರುವವರು ಹಣ, ಆಸ್ತಿ, ಅಧಿಕಾರದ ಹಿಂದೆ ಬಿದ್ದು ದೇಶವನ್ನು ಕೊಳ್ಳೆ ಒಡೆಯುತ್ತಿರುವುದರಿಂದ ಯುವಜನತೆ ದಿಕ್ಕುಗಾಣದಾಗಿದೆ!
ಈ ಸನ್ಯಾಸಿ ಎಷ್ಟು ದೊಡ್ಡ ತತ್ವಜ್ಞಾನಿಗಳೋ, ದೈವಭಕ್ತರೋ, ಧ್ಯಾನಸಿದ್ಧರೋ, ಕರ್ಮಯೋಗಿಗಳೋ ಅಷ್ಟೇ ಮಹಾನ್ ದೇಶಭಕ್ತರಾಗಿದ್ದರು. ಭರತ ಖಂಡ ಆಧ್ಯಾತ್ಮ ಸಂಪತ್ತಿನ ಉಗಮ ಸ್ಥಾನ. ಉಪನಿಷತ್ತು, ಭಗವಧ್ಗೀತೆ, ವೇದಗಳು ಮುಂತಾದ ಆಧ್ಯಾತ್ಮ ಶಾಸ್ತ್ರವನ್ನು ಪ್ರಪಂಚಕ್ಕೆ ಕೊಡುಗೆ ಕೊಟ್ಟ ಮಹಾಮಹಿಮರ ನಾಡು, ಜನನಿ, ಜನ್ಮ ಭೂಮಿ ಸ್ವರ್ಗಾದಪಿ ಗರೀಯಸಿ ಎಂಬ ಭಾವನೆ ಜನ್ಮ ಭೂಮಿಯ ಬಗ್ಗೆ ಹೊಂದಿದ್ದರು. ನಾವು ಬಲಾಢ್ಯರಾಗಬೇಕು " ನಮಗೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡ, ಉಕ್ಕಿನಂತಹ ನರ, ವಿಶ್ವದ ರಹಸ್ಯ ಅಂತರಾಳವನ್ನು ಭೇದಿಸಿ, ಸಮಯ ಬಂದರೆ ಕಡಲಿನ ಆಳಕ್ಕೆ ನುಗ್ಗಿ ಮೃತ್ಯುವನ್ನು ಎದುರಿಸಿ ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಬಲ್ಲಂತಹ ಇಚ್ಛಾಶಕ್ತಿ " ಎಂದು ಹೇಳುತ್ತಿದ್ದರು ! ಕನ್ಯಾಕುಮಾರಿಯ ಸಮುದ್ರತೀರದಲ್ಲಿ ಸ್ವಲ್ಪ ದೂರದ ಸಮುದ್ರದಲ್ಲಿ ಒಂದು ಹೆಬ್ಬಂಡೆ ಇದೆ. ಆ ಹಬ್ಬಂಡೆಯವರೆಗೆ ದೈರ್ಯದಿಂದ ಈಜಿ ಹೆಬ್ಬಂಡೆ ಏರಿ ಭರತಖಂಡವ ಉದ್ಧರಿಸಲು, ದರಿದ್ರನಾರಾಯಣರ ಸೇವೆಗಾಗಿ ನನಗೆ ಆಶೀರ್ವಾದ ಮಾಡೆಂದು ದೇವಿಯ ಧ್ಯಾನದಲ್ಲಿ ಬಹು ಕಾಲ ಮುಳುಗುತ್ತಿದ್ದ. ಆ ಶಿಲೆಯು ಇವರ ಹೆಸರಿನಿಂದಲೇ ಪ್ರಖ್ಯಾತವಾಗಿದೆ ! ಆ ಶಿಲೆಯ ಮೇಲೆ ಇಂದು ಇವರ ೨. ೫ ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. "ಭರತಖಂಡದ ಉದ್ಧಾರಕ್ಕಾಗಿ ಕೋಟಿಜನ್ಮವೆತ್ತಿ ಬರುವೆ ; ದರಿದ್ರ ನಾರಾಯಣನ ಸೇವೆಗಾಗಿ ನನ್ನ ಸ್ವಂತ ಮುಕ್ತಿಯನ್ನು ತ್ಯಜಿಸುವೆ "… ಎಂದು ಹೇಳುವಲ್ಲಿ ಅವರ ಪ್ರಚಂಢ ದೇಶಭಕ್ತಿ, ದೀನ ದಲಿತರ ಬಗೆಗಿನ ಅಪಾರ ಕಾಳಜಿ ಅವಿಚ್ಛಿನ್ನವಾಗಿ ಪ್ರಕಟವಾಗಿರುವುದನ್ನು ಕಾಣಬಹುವುದು!
ಭಾರತೀಯರ ಆಧ್ಯಾತ್ಮ, ಪರಂಪರೆ, ಪರಧರ್ಮ ಸಹಿಷ್ಣುತೆ, ಸಂಸ್ಕೃತಿ ಮುಂತಾದವನ್ನು ಹೇಗೆ ಹೊಗಳಿದರೋ ಹಾಗೇ ಅವರ ಅವಗುಣಗಳನ್ನು ತೆಗಳಿ ಭಾರತೀಯರ ತಿದ್ದಲು ಪ್ರಯತ್ನಿಸಿದರು. ಸ್ತ್ರೀಯರಿಗೆ ಪುರುಷರ ಸಮಾನ ಸ್ಥಾನಮಾನ ದೊರೆಯದ ಹೊರತು ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ನಮ್ಮಲ್ಲಿನ ಮೌಢ್ಯತೆ, ಅರ್ಥರಹಿತ ಆಚಾರಗಳು, ಜಾತಿಮತಗಳ ಕಟ್ಟಳೆಗಳು, ತಿರುಳನ್ನು ಮರೆತು ಕರಟದ ಕಡೆಗೆ ಗಮನ ಹರಿಸುವ ರೀತಿಯನ್ನು, ಗತವೈಭವವನ್ನೇ ಮೆಲುಕು ಹಾಕುತ್ತಾ ಜೀವನವನ್ನು ವ್ಯರ್ಥ ಮಾಡುವವರನ್ನು ಧಿಕ್ಕರಿಸಿ ಸಮಾಜ ಸುಧಾರಕರಾದರು!
ಅಮೆರಿಕಾದ ಚಿಕಾಗೋದಲ್ಲಿ ಆರ್ಟ್ ಪ್ಯಾಲೇಸ್ ಇದೆ. ಅಲ್ಲಿ ೧೧ ಸೆಪ್ಟಂಬರ್ ೧೮೯೩ ರಲ್ಲಿ ವಿಶ್ವಧರ್ಮ ಸಮ್ಮೇಳನ ನಡೆಯಿತು. ಅನೇಕರ ಸಹಕಾರದಿಂದ ಅಮೇರಿಕಾಕ್ಕೆ ಬಂದರೂ, ಆ ಸಮ್ಮೇಳನಕ್ಕೆ ಬರಲು ದಿಕ್ಕು ಕಾಣದೆ, ಅರ್ಹತಾ ಪತ್ರವಿಲ್ಲದೆ, ಹಣವಿಲ್ಲದೆ ಅನಾಥರಾಗಿ ಅಮೇರಿಕದಲ್ಲಿ ಭಿಕ್ಷೆ ಬೇಡುವ ಪರಿಸ್ಥತಿ ಉಂಟಾಗಿತ್ತು! ಅಮೆರಿಕದ ಒಬ್ಬ ಸ್ತ್ರೀ ಅರ್ಹತಾಪತ್ರ ಕೊಡಿಸಿ ಸಹಕರಿಸಿದರೆ ಇನ್ನೊಬ್ಬ ಸ್ತ್ರೀಯಿಂದ ಸಮ್ಮೇಳನದಲ್ಲಿ ಸಕಾಲದಲ್ಲಿ ಭಾಗವಹಿಸುವಂತಾಯಿತು. ಸಮ್ಮೇಳನದಲ್ಲಿ ಕೊನೆಯ ಭಾಷಣಕಾರರಾಗಿ, ಕಿರಿಯ ಧರ್ಮ ಪ್ರಚಾರಕ ಪ್ರತಿನಿಧಿಯಾಗಿ, ಕೇವಲ ೧೫ ನಿಮಿಷ ಮಾತನಾಡಿ, ಒಂದು ದಿನದ ಹಿಂದೆ ಅನಾಥರೂ, ಅಪರಿಚಿತರೂ ಆಗಿದ್ದ ಆ ವೀರಸನ್ಯಾಸಿ ವಿಶ್ವ ವಿಖ್ಯಾತರೂ, ಲೋಕವಂದ್ಯರೂ ಆದರು ! ಭಾರತವ ವಿಶ್ವಮಾನ್ಯವಾಗಿಸಿದರು ! ಇದಕ್ಕೆ ಕಾರಣ ಅವರ ಆ ವಿಶ್ವಧರ್ಮ ಸಮ್ಮೇಳನದಲ್ಲಿನ ಉದಾರವಾಣಿ ! ವೇದವಾಣಿ!
ಎಲ್ಲರೂ ನೆರೆದವರನ್ನು ಮಹನಿಯರೆ, ಮಹಿಳೆಯರೇ ಎಂದು ಸಂಬೋಧಿಸಿದರೆ ಇವರು ಆತ್ಮೀಯವಾಗಿ ಸಂಬಂಧೀಕರಂತೆ ಪರಕೀಯರನ್ನು ಸಹೋದರರೇ, ಸಹೋದರಿಯರೆ ಎಂದು ಸಂಬೋಧಿಸಿದ್ದು ಎರಡು ನಿಮಿಷಗಳವರೆಗೆ ನಿಲ್ಲದಂತೆ ಮಾಡಿತು ಕೇಳುಗರ ಕರತಾಡನ! ನಿಶಬ್ದವಾದಮೇಲೆ ನದಿಗಳು ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟಿ ಯಾವುದೋ ಮಾರ್ಗವಾಗಿ ಹರಿದು ಕಟ್ಟಕಡೆಗೆ ಕಡಲನ್ನು ಸೇರಿ ಒಂದಾಗುವಂತೆ, ಮಾನವರು ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟಿ ಭಿನ್ನ ಮಾರ್ಗದಲ್ಲಿ ಬದುಕಿದಂತೆ ಕಂಡರೂ ಕೊನೆಗೆ ಭಗವಂತನಲ್ಲೇ ಐಕ್ಯವಾಗುತ್ತಾರೆ ! ಯಾರು ಯಾವ ರೂಪದಲ್ಲಿ ಭಜಿಸುತ್ತಾರೋ ನಾನವರಿಗೆ ಆ ರೂಪದಲ್ಲಿ ದೊರಕುತ್ತೇನೆ. ಮಾನವರೆಲ್ಲ ನನ್ನಲ್ಲಿ ಒಂದಾಗಲು ಭಿನ್ನ ಭಿನ್ನ ಮಾರ್ಗದಲ್ಲಿ ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಧರ್ಮಗಳು ಸಮ, ಯಾವ ಧರ್ಮ ಮೇಲೂ ಅಲ್ಲ, ಕೀಳೂ ಅಲ್ಲ ಎಂಬ ಪುಟ್ಟ, ದಿಟ್ಟ, ಸಮರ್ಥ, ಸತ್ವಪೂರ್ಣ, ತರತಮವೆಸಗದ ಉದಾರವಾಣಿ, ವೇದವಾಣಿ ಎಲ್ಲರ ಹೃದಯ ತುಂಬುವಂತೆ ಮಾಡಿತು!
ಇತರ ಧರ್ಮಕ್ಕಿಂತ ನಮ್ಮ ಧರ್ಮವೆ ಶ್ರೇಷ್ಠ., ಇತರರಿಗಿಂತ ನಾವೇ ಮೇಲು, ನಮ್ಮ ದರ್ಮ ಗ್ರಂಥವೆ ಶ್ರೇಷ್ಠ. ಎಂಬ ಎಲ್ಲರ ಭಾಷಣದ ಪಲ್ಲವಿಗಳನ್ನು ಕೇಳಿ ಕೇಳಿ ರೋಸಿಹೋದವರಿಗೆ ತರತಮವೆಸಗದ, ಎಲ್ಲಾ ಧರ್ಮಗಳು ಸಮ, ಯಾವ ದರ್ಮವೂ ಮೇಲೂ ಅಲ್ಲ, ಕೀಳೂ ಅಲ್ಲ ಎಂಬ ಉದಾರವಾಣಿಗೆ ಎಲ್ಲರೂ ಮನಸೋತು ಆಕರ್ಷಿತರಾದರು ! ಇವರ ಭಾಷಣ ಕೇಳಲು ಸಾಗರದೋಪಾದಿಯಲ್ಲಿ ಜನ ಬರುತ್ತಿದ್ದರು. ಇದನ್ನು ಅರಿತ ಆಯೋಜಕರು ಇವರ ಭಾಷಣವನ್ನು ಕಾರ್ಯಕ್ರಮದ ಕೊನೆಯಲ್ಲಿ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಉಳಿದವರ ಭಾಷಣ ನೀರಸವಾಗಿ ಕೇಳಲು ಯಾರೂ ಇಲ್ಲದ ಪರಿಸ್ಥಿತಿ ಬರಬಾರದೆಂದು ಹೀಗೆ ಮಾಡುತ್ತಿದ್ದರಂತೆ. ಇದನ್ನು ಒಂದು ಪತ್ರಿಕೆ ಬರೆಯಿತು. ಇದರಿಂದ ಇವರ ಭಾಷಣದ ಸತ್ವ, ಆಕರ್ಷಣೆ ಎಷ್ಟು ಪ್ರಭಾವಶಾಲಿಯಾಗಿತ್ತೆಂದು ತಿಳಿಯಬಹುದು.
ಇವರ ವಿಶ್ವಧರ್ಮ ಸಮ್ಮೇಳನದ ಉಧಾತ್ತವಾಣಿ ಎಲ್ಲಾ ಪತ್ರಿಕೆಗಳ ಮುಖ ಪುಟಗಳಲ್ಲಿ ಪ್ರಕಟವಾಯಿತು. ಪ್ರಮುಖ ಪತ್ರಿಕೆಯೊಂದು " ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠ ವ್ಯಕ್ತಿ. ಅವರ ಭಾಷಣವನ್ನು ಕೇಳಿದ ಮೇಲೆ ಇಂತಹ ಸುಸಂಸ್ಕೃತ ಜನಾಂಗಕ್ಕೆ ನಾವು ಕ್ರೈಸ್ತ ಮತ ಪ್ರಚಾರಕರನ್ನು ಕಳುಹಿಸುವುದು ಶುದ್ಧ ಮೂರ್ಖತನವೆಂದೇ ಭಾವಿಸುತ್ತೇವೆ " ಎಂದು ಪ್ರಕಟಿಸಿತು. ಇದು ಈ ವೀರ ಸನ್ಯಾಸಿಯು ಹಿಂದೂ ಧರ್ಮ ಅರ್ಥೈಸಿದುದಕೆ ಹಿಡಿದ ಕನ್ನಡಿಯಾಗಿದೆ.
ಮಕರ ಸಂಕ್ರಾಂತಿಯಂದು ಜನಿಸಿ ವಿಶ್ವದಾದ್ಯಂತ ಧರ್ಮ ಕ್ರಾಂತಿ ಮಾಡಿ ಕ್ರಾಂತಿ ಪುರುಷನಾದ ! ವಿಶ್ವಧರ್ಮ ಸಮ್ಮೇಳನದ ಖ್ಯಾತಿ ಪ್ರಪಂಚದ ಮೂಲೆಮೂಲೆಗಳಿಂದ ಇವರ ಉಪನ್ಯಾಸಕ್ಕೆ ಬೇಡಿಕೆ, ಬೆಲೆ ತರತೊಡಗಿತು. ಅಮೇರಿಕದಿಂದಲೆ ಯೂರೋಫಿನ ಬೇರೆ ಬೇರೆ ರಾಷ್ಟ್ರಗಳಿಗೆ ಹೋಗಬೇಕಾಯಿತು. ಹೋದಲ್ಲೆಲ್ಲಾ ಭವ್ಯ ಸ್ವಾಗತಗಳ ಕಂಡರು, ಇವರ ಬೋಧನೆ ಕೇಳಿ ಅನೇಕರು ಇವರ ಅನುಯಾಯಿಗಳಾದರು. ಅಪಾರ ಹಣ, ಆಸ್ತಿ ಧಾರೆಯೆರೆದರು. ಇಂಗ್ಲೆಂಡಿನ ಮಾರ್ಗರೇಟ್ ನಿವೇದಿತಾಳಾದಳು. ಮತ್ತೆ ಮತ್ತೆ ವಿಶ್ವದಾದ್ಯಂತ ಇವರ ಭಾಷಣಕೆ ಕರೆಗಳು ಬಂದವು . ವಿಶ್ವದಾದ್ಯಂತ ವೇದವಾಣಿ ನಿರಂತರವಾಗಿ ಮೊಳಗಿಸಿದರು. ಹರಿದು ಬಂದ ಹಣದಿಂದ ಇವರು ರಾಮಕೃಷ್ಣ ಮಿಷನ್ ವಿವಿಧ ದೇಶಗಳಲ್ಲಿ ಸ್ಥಾಪಿಸಿ ಅದರ ಮೂಲಕ ಗುರುಗಳ ಉಪದೇಶವನ್ನು, ರಾಷ್ಟ್ರದ ಉದ್ಧಾರ, ಮಾನವನ ಆತ್ಮೋದ್ದಾರದ ಬಗ್ಗೆ ವಿವರಿಸಿದರು, ಬೋಧಿಸಿದರು. ಪ್ರಪಂಚದಾದ್ಯಂತ ಈ ವೇದವಾಣಿ ನೆಲೆ, ಬೆಲೆ, ಅನುಯಾಯಿಗಳ, ಪ್ರಸಾರ ಕೇಂದ್ರಗಳ ಪಡೆಯಿತು! ಅನೇಕರಿಗೆ ನೆಮ್ಮದಿ ನೀಡಿತು! ನೀಡುತ್ತಾ ಇದೆ! ಇಂಥಾ ವಾಣಿಗೆ ಜನ್ಮ ನೀಡಿದ ಭಾರತ ಧನ್ಯ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.