ಪಂಚ್ ಕಜ್ಜಾಯ

ವಿಮಾನಾಲಯ ಅಂದ್ರ ಏನ್ ಮೀನಿಂಗು?: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ…)

ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… )

ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ ಮಾಡುತ್ತಿದ್ದರೋ? ಆಗೆಲ್ಲ ಕೆಲವೇ ಕೆಲವು ಜನರು ವಿದೇಶಕ್ಕೆ ಹೋಗುತ್ತಿದ್ದುದರಿಂದ ಅದೂ ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೊ? ಹಾಗೆ ಶುಭ ಕೋರುವವರು ಆ ವಿದೇಶ ಪ್ರಯಾಣಿಕರ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ತಮ್ಮ ಪ್ರತಿಷ್ಠೆ ಮೆರೆಯುತ್ತಿದ್ದರೇನೊ! ಅಥವಾ ಅದಕ್ಕಿದ್ದ ಇನ್ನೊಂದು ಕಾರಣವೆಂದರೆ ಆಗ ಫೆಸ್ ಬುಕ್ ಇರಲಿಲ್ಲವೆಂದೆ?! ಆದರೆ ಈಗ ಇದೆಯಲ್ಲ! 

ಅದಕ್ಕೆ ಜಾನು ತನ್ನ ಫೆಸ್ ಬುಕ್ಕ್ ನ ಮುಖಪುಟದಲ್ಲಿ ದೊಡ್ಡದಾಗಿ "going to miss you India … ನಾವು ಹೊರಟೆವು ಅಮೆರಿಕಾಕ್ಕೆ…   " ಅಂತೇನೊ ಬರೆದದ್ದೇ  ತಡ ಅವಳ ಪೋಸ್ಟಿಗೆ ಬಂಧುಮಿತ್ರರು ಲಗ್ಗೆ ಹಾಕಿ ಲೈಕ್ ಒತ್ತಿದ್ದರು! ಕಮೆಂಟು ಗೀಚಿದರು. ಇದನ್ನು ನೋಡಿ ವೆಂಕಣ್ಣನಿಗೆ ಕೆಂಡದಂಥ ಕೋಪ ಬಂದಿತ್ತು.

"ಹಿಂಗೆಲ್ಲಾ ಸ್ಟೇಟಸ್ ಹಾಕಿ, ಊರಾಗಿನ ಕಳ್ಳರಿಗೆಲ್ಲಾ ನಾವು ಒಂದ ತಿಂಗಳ ನಮ್ಮ ಮನಿ ಬಿಟ್ಟು ಹೊಂಟೇವಿ ಅಂತ ಗೊತ್ತಾಗತದ. ನಾವ್ ವಾಪಸ ಬರೋದರಾಗ ಎಲ್ಲ ಕಳುವು ಮಾಡಿ ಮನಿ ಖಾಲಿ ಮಾಡತಾರ!" ಅಂತ  ಬೈದಿದ್ದಕ್ಕೆ, ಜಾನು ತನ್ನ ಹುಬ್ಬೇರಿಸಿ

"ನಮ್ಮ ಮನ್ಯಾಗ ಅಂಥ ಸಾಮಾನು ಏನೂ ಇಲ್ಲಾ ಬಿಡ್ರಿ. ಕಳ್ಳರು ಬಂದ್ರ ಅವ್ರಿಗೆ ಏನೂ ಸಿಗೂದಿಲ್ಲ." ಅಂದಾಗ ಟ್ರ್ಯಾಕು ಬದಲಿಸುವ ಅವಶ್ಯಕತೆ ಉಂಟಾಗಿ.

"ಅಂಧಂಗ ನಾವು ಹೊಂಟಿದ್ದು ನಿನ್ನ ಅಪ್ಪ ಅಮ್ಮಗ ಹೇಳಿದಿಲ್ಲೊ?" ಅನ್ನುವ ದಡ್ಡತನದ ಪ್ರಶ್ನೆಯೊಂದನ್ನು ಕೇಳಿದನು. ಆಯಾ ದಿನದ ಅಡಿಗೆಯಲ್ಲಿ ಏನು ಮಾಡಿದ್ದೇನೆಂಬುದರಿಂದ ಹಿಡಿದು ಕೆಲಸದವಳು ಇವತ್ತು ಬಂದಿಲ್ಲ ಅನ್ನುವ ಪ್ರತಿಯೊಂದು ವಿಷಯಗಳನ್ನು ಅಮ್ಮನಿಗೆ ಚಾಚುತಪ್ಪದೆ ವರದಿ ಒಪ್ಪಿಸುವ ಜಾನು ವಿದೇಶ ಪ್ರಯಾಣದಂತಹ ದೊಡ್ಡ ವಿಷಯವನ್ನು ಅವರಮ್ಮನಿಗೆ ಹೇಳಿರುವುದಿಲ್ಲವೆ? ಆ ತರಹದ ಪ್ರಶ್ನೆ ಕೇಳುವುದು ದಡ್ಡತನವಲ್ಲದೆ ಮತ್ತೇನು?!    

"ನಿನ್ನೆನ ಹೇಳೇನಿ. ನಾಳೆ ಎಲ್ಲಾರೂ ಬರ್ಲಿಕತ್ತಾರ. ಒಂದ ವಾರ ಇಲ್ಲೇ ಇದ್ದು ನಮ್ಮನ್ನ ವಿಮಾನದಾಗ ಕುಡಿಸಿದ ಮ್ಯಾಲೇ ಊರಿಗೆ ವಾಪಸ್ಸು ಹೋಗ್ತಾರಂತ" ಅಂದಳು.

"ಎಲ್ಲಾರು ಅಂದ್ರ?!" ವೆಂಕಣ್ಣ ಉಗುಳು ನುಂಗುತ್ತ ಕೇಳಿದ.

"ಅಪ್ಪಾ, ಅಮ್ಮಾ, ಇಬ್ಬರೂ  ಅಣ್ಣಂದರು, ಅತ್ತಿಗೆಂದರು ಮತ್ತ ಅವರ ಮಕ್ಕಳು."

"ಒಹ್ ಹೌದಾ?! ಭಾರಿ ಆತಲ್ಲ!" ಅಂತ ಹೇಳಿ, ತನಗಾಗದ ಖುಷಿಯನ್ನು ತೋರಿಸುವ ವ್ಯರ್ಥ ಪ್ರಯತ್ನ ಮಾಡಿ, ಮುಖವನ್ನು ಅರಳಿಸಲು ಸಾಧ್ಯವಾಗದೆ ಬೇರೆ ಕಡೆ ಹೊರಳಿಸಿದ! 

’ಒಂದು ವಾರ ಇಕಿ ತೌರುಮನಿಯವ್ರು ಇಲ್ಲೆ ಟೆಂಟ್ ಹೊಡದರ ಸುದ್ದ ಆತು’ ಅಂತ ಸ್ವಗತದಲ್ಲೆ ಹೇಳಿಕೊಂಡ. ಹೆಂಡತಿಯೆದುರು ಹೇಳಿಕೊಳ್ಳುವ ಧೈರ್ಯಶಾಲಿ ಗಂಡ ಇವನಲ್ಲವಲ್ಲ.

ಅಂತೂ ಇಂತೂ ಇವನು ಅಮೆರಿಕಾಕ್ಕೆ ಹೋಗುವ ಸುದ್ದಿ ಎಲ್ಲಾ ದಿಕ್ಕಿನಲ್ಲೂ ವಿಚಿತ್ರ ರೀತಿಯಲ್ಲಿ ಪಸರಿಸತೊಡಗಿತು. ಹೀಗಿರುವಾಗ ಒಂದು ದಿನ ಇವನ ಫೋನು ರಿಂಗಣಿಸಿ ಹೆಲೋ ವೆಂಕಟ್ ಹಿಯರ್ ಅಂದವನಿಗೆ. 

"ಮತ್ತೇನಪಾ ದೋಸ್ತ, ಭಾರಿ ಧೊಡ್ಡ ಮನಶ್ಯಾ ಆಗಿ ಬಿಡು. ನಾವ ಫೋನ್ ಮಾಡಬೇಕ್ ನೋಡು ನಿನಗ. ನೀನಂತೂ ಮರ್ತಬಿಟ್ಟಿ ನಮ್ಮನ್ನ. ನಾನು ನಿನ್ನ ಗೆಳೆಯಾ ರವಿ ಅನ್ನೋದರೆ ನೆನಪದನೊ ಇಲ್ಲೊ…" ಅಂತ ಬಹಳ ದಿನಗಳ ಮೇಲೆ ಫೋನ್ ಮಾಡಿದ್ದರಿಂದ ಮತ್ತೆ ತನ್ನ ಪರಿಚಯವನ್ನು ಮಾಡಿಕೊಂಡ ಇವನ ಗೆಳೆಯ. ಅದು ಇದು ಮಾತನಾಡಿ ’ಅಮೇರಿಕಾಕ್ಕ ಹೊಂಟಿಯಂತ ಸುದ್ದಿ ಬಂತು…’ ಅಂತ ಅವನಂದಾಗ, ವೆಂಕಣ್ಣ ಹುಷಾರಾದ! 
"ಹೌದಪಾ ಒಂದ ತಿಂಗಳಿಗೆ ಹೊಂಟಿನಿ" ಅಂದ.
"ಏ ಅಂಧಂಗ ಅಲ್ಲೆ ಲ್ಯಾಪ್ ಟಾಪ್ ಭಾರಿ ಸಸ್ತಾದಾಗ ಸಿಗತಾವಂತ ಕೇಳ್ದೆ. ನನಗೊಂದು ತೊಗೊಂಬಾ. ಹಂಗ ಒಂದು ಬಾಟಲ್ ವಿಸ್ಕಿನೂ ತೊಗೊಂಡು ಬಾರಪಾ. ಒಮ್ಮೆರೆ ಫಾರಿನದ್ದು ಕುಡ್ಯೋಣಂತ." ಅಂದ. ಗೆಳೆಯ ಬಹಳ ದಿನಗಳ ಮೇಲೆ ಇವನನ್ನು ನೆನಪಿಸಿಕೊಂಡ ಉದ್ದೇಶ ಈಗ ಸ್ಪಷ್ಟವಾಗಿತ್ತು. 
"ಆತು ತೊಗೊ ನೋಡೊಣಂತ. ಈಗ ನಂದ ಮೀಟಿಂಗ್ ಅದ, ಅಮ್ಯಾಲೆ ಫೋನ್ ಮಾಡ್ತೀನಿ." ಅಂತ ಹೇಳಿ ಕರೆಯನ್ನು ಮೊಟಕುಗೊಳಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ.

ಹೀಗೆ ಒಬ್ಬೊಬ್ಬರಾಗಿ, ಯಾರ್ಯಾರೊ ಫೋನ್ ಮಾಡಿ, ನನಗೆ ಅದು ಬೇಕು ಇದು ಬೇಕು ಅಂತ ಕೇಳತೊಡಗಿ ಇವನ ಇಂಪೊರ್ಟೆಡ್ ವಸ್ತುಗಳ ಪಟ್ಟಿ ಉದ್ದವಾಗತೊಡಗಿತು! ಅಮೇರಿಕಾದಲ್ಲಿ ಸಿಗೋದೆ ’ಮೇಡ್ ಇನ್ ಚೈನಾ’ ಸಾಮಾನುಗಳು. ಅದನ್ನ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕೆಂಬ ಜನರ ಬಯಕೆ ಕಂಡು ಬೆರಗಾದನವನು. 

ಇವನ ಇನ್ನೊಬ್ಬ ಗೆಳೆಯ ಇವನ ಜೊತೆಗೆ ತನ್ನ ಸಂಕಟವನ್ನೂ ತೋಡಿಕೊಂಡ. ಏನಾಗಿತ್ತೆಂದರೆ, ಇವನು ತನ್ನ ಪರಿವಾರ ಸಮೇತ ಅಮೇರಿಕಾಕ್ಕೆ ಹೊರಟ ಸುದ್ದಿ ಕೇಳಿ ಆ ಗೆಳೆಯನ ಹೆಂಡತಿ,  
"ವೆಂಕಣ್ಣನ್ನ ನೋಡಿ ಸ್ವಲ್ಪ ಕಲೀರಿ. ನಾವಂತೂ ಇಲ್ಲೆ ಭಾಂಡಿ ತೊಳಕೋತ ಕೂಡೊದ ಆತು. ನಾನು ಯಾವಾಗ ಅಮೇರಿಕಾ ಕಾಣತೇನೊ ಏನೊ. ಎಲ್ಲಾ ನಮ್ಮ ಕರ್ಮ" ಅಂತ ಅವನೊಂದಿಗೆ ಜಗಳ ಮಾಡಿದ್ದಳಂತೆ.
"ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅಂತ ಕೋಪಗೊಂಡಿದ್ದ ಇವನ ಮಿತ್ರ. 
’ಇದೊಳ್ಳೆ ಕಥೆ ಆಯ್ತಲ್ಲ! ನನ್ನ ಹೆಂಡತೀನ ನಾ ಕರ್ಕೊಂಡು ಹೊಂಟ್ರ ಇವರಿಗೇನ್ ಸಮಸ್ಸೆ’ ಅಂತ ವೆಂಕಣ್ಣ ತಲೆ ಚಚ್ಚಿಕೊಂಡ.

ಇದೆಲ್ಲದರ ಜೊತೆಗೆ ಅಮೇರಿಕಾಕ್ಕೆ ಏನೇನು ಒಯ್ಯುವುದು ಅನ್ನುವ ಬಗ್ಗೆ ಜಾನು ತುಂಬಾ ತಲೆ ಕೆಡಿಸಿಕೊಂಡಳು. ತನ್ನ ಬಳಿ ಇದ್ದ ಬಟ್ಟೆಗಳೆಲ್ಲಾ ಅವಳಿಗೆ ತುಂಬಾ ಹಳೆಯದಾಗಿ ಕಾಣತೊಡಗಿ ಒಂದಿಷ್ಟು ಹೊಸ ಹೊಸ ಮಾಡರ್ನ್ ಬಟ್ಟೆಬರೆಗಳನ್ನು ತನಗೂ ತನ್ನ ಮಗಳಿಗೂ ಅಂತ ಖರಿದಿಸಿ ಇವನ ಕ್ರೆಡಿಟ್ ಕಾರ್ಡಿಗೆ ಕತ್ತರಿ ಹಾಕಿದಳು! ಕಾಯಿ ಪಲ್ಲೆಗಳನ್ನೊಂದು ಬಿಟ್ಟು ಉಳಿದೆಲ್ಲ ದಿನಸಿಗಳನ್ನೂ ಖರಿದಿಸಿ ಅಮೇರಿಕಾಕ್ಕೆ ಒಯ್ಯಲು ಪ್ಯಾಕ್ ಮಾಡಿಟ್ಟುಕೊಂಡಳು. 
"ಅಲ್ಲೆ ಹೋಗಿ ಅಂಗಡಿ ಹಾಕು ವಿಚಾರದ ಏನ್ಲೆ? ಅಲ್ಲೆ ಎಲ್ಲಾ ಸಿಗತಾವು. ನಾವು ಮರಭೂಮಿಗೆ ಹೊಂಟಿಲ್ಲ" ಅಂತ ವೆಂಕಣ್ಣ ದಬಾಯಿಸಿದಾಗ,
"ನಿಮಗ ಗೊತ್ತಾಗಂಗಿಲ್ಲ ಸುಮ್ಮನಿರ್ರಿ, ಆಲ್ಲೆ ತೊಗೊಂಡ್ರ ದುಬಾರಿ ಆಗ್ತದ. ಅದೂ ಅಲ್ಲದ ಡಾಲರ್ ಕೊಟ್ಟು ಕೊಂಡಕೊಬೇಕು. ಇದಕ್ಕ ಎಲ್ಲಾ ರೊಕ್ಕಾ ಖರ್ಚು ಮಾಡಿದರ ಅಮ್ಯಾಲೆ ಅಲ್ಲೆ ಶಾಪಿಂಗ್ ಏನ್ ಮಾಡೋದು?" ಅಂತ ಹೇಳಿ, ಇವನ ಎದೆಯ ಕಂಪನಕ್ಕೆ ಕಾರಣಳಾದಳು.

ತೌರು ಮನೆಯವರೆಲ್ಲಾ ಬಂದದ್ದರಿಂದ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಯಾರಿಗೆ? ಜಾನುಗೆ! ವೆಂಕಣ್ಣನಿಗಲ್ಲ!! ಅಂತೂ ಹೊರಡುವ ದಿನ ಬಂದಾಗ ನಿಟ್ಟುಸಿರಿಟ್ಟ. ಟ್ಯಾಕ್ಸಿ ಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದಂತೆ "ವಿಮಾನಾಲಯ" ಅನ್ನುವ ಕನ್ನಡದಲ್ಲಿ ಬರೆಸಿಕೊಂಡ ಬೋರ್ಡು ಗೋಚರಿಸಿತು. ಅದನ್ನು ಕಂಡು, "ಅಪ್ಪಾ ವಿಮಾನಾಲಯ ಅಂದ್ರ ಏನ್ ಮೀನಿಂಗು?" ಅಂತ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡಾ ಓದುತ್ತಿದ್ದ ಮಗಳು ಕೇಳಲಾಗಿ "ಹಂಗಂದ್ರ ಟರ್ಮಿನಲ್ ಅಂತ ಅರ್ಥ ಮಗಳ ಅಂತ ಹೇಳಿ, ಮೇಲೆರುತ್ತಿದ್ದ ವಿಮಾನವೊಂದನ್ನು ಟ್ಯಾಕ್ಸಿಯ ಕಿಟಕಿಯಿಂದಲೆ ನೆಟ್ಟ ದೃಷ್ಟಿಯಿಂದ ನೋಡತೊಡಗಿದನವನು.

***** 

(ಮುಂದುವರಿಯುವುದು…) 

ಕನ್ನಡದ ಬರಹಗಳನ್ನು ಹಂಚಿ ಹರಡಿ

13 thoughts on “ವಿಮಾನಾಲಯ ಅಂದ್ರ ಏನ್ ಮೀನಿಂಗು?: ಗುರುಪ್ರಸಾದ ಕುರ್ತಕೋಟಿ

 1. ಅಮೆರಿಕಾದಲ್ಲಿ ಸಿಗುವ ಸಾಮಾನುಗಳೆಲ್ಲ "ಮೇಡ್ ಇನ್ ಚೈನಾ" ವಸ್ತು ಸಂಗತಿಯಾಗಿದೆ. ಹಾಸ್ಯದಲ್ಲೇ ಕುಟುಕಿದ್ದೀರಾ. ಚೆನ್ನಾಗಿದೆ. ಧನ್ಯವಾದಗಳು ಕುರ್ತಕೋಟಿ.

   

  1. ಪ್ರಿಯ ಅಖಿಲೇಶ, ಅಲ್ಲಿ ಸಿಗುವ ಬಹುತೇಕ ವಸ್ತುಗಳು ಚೈನಾದ್ದೆ. ಇನ್ನೂ ಕೆಲವು ವರ್ಷಗಳಲ್ಲಿ ಇಲ್ಲೂ ಹಾಗೆ ಆಗಿಬಿಡುತ್ತೇನೊ ಅನ್ನೊ ಭಯ ನನಗೆ!  ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

 2. ಈ ನಿಮ್ಮ ಲೇಖನ ಗೋಡಂಬಿ ಪಾಯಸದ ಥರಾ ಇದೆ. ಲೇಖನದಲ್ಲಿ ಅಲ್ಲಲ್ಲಿ ಒಳ್ಳೊಳ್ಳೆ ಪಂಚ್ ಗಳಿದ್ದರೆ, ಅದು ಪಾಯಸದಲ್ಲಿ ನಡುನಡುವೆ ಸಿಗುವ ಗೋಡಂಬಿಯಂತಿರುತ್ತದೆ. ಆದರೆ ಪೂರ್ಣ 'ಪಂಚ್'ಗಳ ಪುಲ್-ಪ್ಯಾಕ್ಡ್ ಈ ಬರಹ ನಿಜಕ್ಕೂ ಗೋಡಂಬಿ ಪಾಯಸವೇ ! ಅಥವಾ ಇದನ್ನು ಪಂಚ್-ಗಜ್ಜಾಯ ಅನ್ನಬಹುದೇನೋ. ( ಅಂದಹಾಗೆ, ತಮ್ಮ ಎಲ್ಲ ಲೇಖನ ಮಾಲೆಯನ್ನು, "ಪಂಚ್ ಗಜ್ಜಾಯ" ಎನ್ನುವ ತಲೆಬರಹದ ಸರಣಿಯಡಿ ಪ್ರಕಟಿಸಬಹುದೇನೋ ಅನ್ನಿಸುತ್ತಿದೆ. ಇದನ್ನು 'ಪಂಜು' ಪ್ರಕಾಶಕರು ಗಮನಿಸಬೇಕಾಗಿ ವಿನಂತಿ ).

  ಇಲ್ಲಿಯ ಪ್ರತಿ ಸಂಭಾಷಣೆಯಲ್ಲಿಯ sense of  humor ಅನನ್ಯ ! ವೆಂಕಣ್ಣನ ಅಮೇರಿಕಾ ಪ್ರವಾಸ ನಮಗೆಲ್ಲ ಹಬ್ಬದೂಟ ಉಣ್ಣಿಸುತ್ತಿದೆ. ಪ್ರಯಾಣ ಮುಂದುವರಿಯಲಿ ! 

  1. ಮೂರ್ತಿ ಬಾವಾ, ನೀವು ಕೊಟ್ಟ "ಪಂಚ್-ಕಜ್ಜಾಯ" ಹೆಸರು ತುಂಬಾ ಇಷ್ಟವಾಯ್ತು! ಪಂಜು ಸಂಪಾದಕರ ಜೊತೆಗೆ ಇದರ ಪ್ರಸ್ತಾಪ ಮಾಡಿಯೇ ತೀರುತ್ತೇನೆ. ಪ್ರೀತಿಯಿಂದ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು!

   1. 'ಪಂಚ್-ಕಜ್ಜಾಯ' ಹೆಸರು ಚೆನ್ನಾಗಿ ಒಪ್ಪುತ್ತದೆ!

 3. ಅಂತೂ ಗಂಟೂ ಮೂಟೆ ಕಟ್ಗ್ಯಂಡು ಹೊಂಡಾಕ ರೆಡಿಯಾದ್ರೆನ್ನಿ ವೆಂಕಣ್ಣೋರು……….ಮುಂದಾ? …. ಮುಂದ್ಲುವಾರಕ್ಕಿರ್ಲಿ ಅಂದ್ರೇನು?

 4. ಮಸ್ತ್ ಅನಸ್ತು ಗುರು!
  ಖರೆ ಅದ ಗೆಳೆಯರ್ ಹೆಂಡತ್ಯಾರು FB ನ್ಯಾಗ ಫ್ರೆಂಡ ಇರಬಾರದು… ಇದ್ರ ಹಿಂಗ "ನೀ ಬರೆ ಇಂಥಾ ಬ್ಯಾಟಾ ಹಚ್ಚತಿ ನೋಡಪಾ. ನೀ ಮಾಡೊ ಕೆಲಸಕ್ಕ ಮನ್ಯಾಗ ನಾವ್ ಬೈಸಿಕೋಬೇಕು." ಅನಿಸಗೊಬೆಕಾಗತದ… 

Leave a Reply

Your email address will not be published. Required fields are marked *