ಇಸ್ಕೋಲಿನಲ್ಲಿ ಏಳಿದ್ದ ವಿಸಯದ್ದ ಬಗ್ಗೆನೇ ಅವತ್ತೇಲ್ಲ ಯೋಚ್ನೆ ಮಾಡ್ಕಂಡು ಏಟು ವೊತ್ತಿಗೆ ಮನಿಗೋಯ್ತಿನೊ, ಏಟು ಬ್ಯಾಗ ಅವ್ವಂಗೆ ಆ ವಿಸಯ ತಿಳ್ಸಿ ನಮ್ಮನೆಗೂ ಒಂದು ಸೌಚಾಲ್ಯ ಮಾಡಿಸ್ಕೊತಿನೋ ಅಂತ ವಿಮಲಿ ಮನಸ್ಸಿನಲ್ಲೆ ಮಂಡಿಗೆ ತಿಂತಿದ್ದಳು. ಮನೆಗೆ ಬಂದವ್ಳೆ ಅವ್ವನ್ನ ಕಾಡೊಕೆ ಸುರು ಹಚ್ಕಂಡ್ಳು.
“ಏಂತದೇ ಅದು ಸೌಚಲ್ಯ” ಅಂತ ಇಟ್ಟಿಗೆ ವೊತ್ತು ಸುಸ್ತಾಗಿದ್ದ ಪಾರು ರೇಕಂಡ್ಳು. ವಿಮಲಿ ಅತ್ಯೂತ್ಸಹದಿಂದ “ಅದೇ ಕನವ್ವ, ಕಕ್ಸದಮನೆ, ಇವತ್ತು ನಮ್ಮಿಸ್ಕೋಲಿನಲ್ಲಿ ದೊಡ್ಡವರೆಲ್ಲ ಬಂದು ಬಾಷ್ಣ ಮಾಡಿದ್ರು ಕನವ್ವ ಬಯಲಾಗೆ ಎಲ್ಡಕ್ಕೆ ವೋಗಬಾರದಂತೆ,ಅಂಗೆ ವೋದಾಗ ಹುಳ ಹುಪ್ಪತೆ ಕಡ್ದು ಎಟೋ ಜನ ಸತ್ತೊಗವ್ರಂತೆ, ಆಮೇಕೆ ಎಣ್ಣು ಮಕ್ಕಳಿಗೆ ಏನೇನೋ ಆಯ್ತದಂತೆ. ಏನೆನೊ ರ್ವಾಗನೂ ಬತ್ತದಂತೆ, ಅದಕ್ಕೆ ಎಲ್ರೋ ಅವರವರ ಮನ್ಯಾಗೆ ಕಕ್ಸದ ಮನೆ ಕಟ್ಕಳ್ಳಿ ಅಂತ ಯೋಳವ್ರೆ, ಯವ್ವ ಯವ್ವ ನಮ್ಮನೆಯಾಗೂ ಸೌಚಾಲ್ಯವ ಕಟ್ಟಸ್ಕೊಳ್ಳಣ ಕನವ್ವ’ ಅಂತ ಅಂಗಲಾಚಿದಳು. “ಅಯ್ಯೊ ಸುಮ್ಕಿರಮ್ಮಿ ,ತಿನ್ನೋಕೆ ಇಟ್ಟಿಲ್ಲ. ಕಕ್ಸದಮನೆ ಅಂತೆ ಕಕ್ಸದಮನೆ” ಪಾರು ಸಿಡುಕಿದಳು.
ಏಳ್ನೆ ಕಿಲಾಸ್ನಲ್ಲಿ ಓದ್ತಾ ಇದ್ದ ವಿಮಲಿಗೆ ಅವ್ವ ಯೋಳಿದ್ದು ಸರಿ ಕಾಣ್ಲಿಲ್ಲ. ದೊಡ್ಡ ಮನ್ಸಿಯಂತೆ “ಇಟ್ಟಿಲ್ಲದಿದ್ದರೂ ಪರ್ವಾಗಿಲ್ಲ ಕನವ್ವ, ನಾವು ತಿಂದಿಲ್ಲ ಅಂತ ಯ್ಯಾರ್ನೋಡೊಕೆ ಬತ್ತರೆ, ಚೊಂಬಿಡ್ಕಂಡು ಕೆರೆಕಡಿಕೆ ವೋಗೊದ್ನ ತಾನೆ ಎಲ್ಲಾ ನೋಡೋದು” ಅಂತ ಅಂದ್ಲು.
“ಏಯ್ ನೋಡ್ಲಿ ತಗೋ, ಎಲ್ರೂ ಅಂಗೆ ತಾನೆ ವೋಗೋದು, ಅದರಲ್ಲಿ ಏನೈತೆ” ಪಾರೂಗೆ ಇಟ್ಟುಂಡು ಮಂಗಿದ್ರೆ ಸಾಕಾಗಿತ್ತು. ಆದ್ರೆ ವಿಮಲಿ ಅವ್ವನ್ನ ಅಟ್ಸುಲ್ಬದಲ್ಲಿ ಬಿಟ್ಟಾಳೆಯೆ,
” ಅಂಗಲ್ಲ ಕನವ್ವ, ಯ್ಯಾವದೊದೊ ಹೊತ್ತಲ್ಲಿ ವೊರಿಕೆ ವೋದ್ರೆ ಏನ್ಯೋನೊ ಆಗುತ್ತೆ ಅಂತ ಅವರು ಯೋಳಿದ್ರಲ್ಲವ್ವ, ಅದೂ ನಿಜಾನೆ ತಾನೆ,ಕತ್ಲಲಿ ಅಜ್ಜಿ ಅಂಗೆ ಕೆರೆಕಡೀಕೆ ವೋಗೋವಾಗ್ಲೆ ಅಲ್ವಾ ಕಾಲ್ಮೂರ್ಕಂಡು ನಳ್ಳಿ ನಳ್ಳಿ ಸತ್ತಿದ್ದು, ನಿಂಗೂ ಅಂಗೆ ಒಂದಿನಾ ಆದ್ರೆ ನನ್ನ ಗತಿ ಏನವ್ವ” ಅವ್ವನ್ನ ಹೆದ್ರಿಸೋಕೆ ನೋಡಿದ್ಲು.
“ಅಯ್ಯೊ ಸಾಯ್ಲೇ ಬೇಕು ಅಂತ ಅಣೆಲೀ ಬರದಿದ್ರೆ ಅಂಗೆ ಸಾಯ್ತೀವಿ ತಗೋ, ಕೆರೆಕಡಿಕೇ ವೋದಾಗ್ಲೆ ಸಾಯಬೇಕು ಅಂತಿದ್ರೆ ಸಾಯೋಣ ತಗೋ” ಉದಾಸವಾಗಿ ಎಳ್ತಾ ಒಲೆ ಮೇಲೆ ಕುದಿ ಉಯ್ದಿದ್ದ ಮುದ್ದೆನಾ ಕೋಲಿಂದ ತಿರುವಿ ಒಂದಿಷ್ಟು ನೀರಾಕಿ ಪಾತ್ರೆನಾ ಮುಚ್ಚಿ ಒಲೆ ಉರಿನಾ ತಗ್ಗಿಸಿ ವಿಮಲಿಯತ್ತ ತಿರುಗಿ ಪಾರು” ನೋಡವ್ವ ವಿಮಲಿ ಅದೆಲ್ಲ ನಮಗ್ಯಾಕೆ ಯೋಳು. ಇರೋರು ನಾವಿಬ್ಬರೂ, ನಮಗ್ಯಾಕೆ ಕಕ್ಕಸದ್ಮನೆ, ಕಟ್ಟಿಸೊಕೆ ದುಡೈತಾ, ಜಾಗಾ ಐತಾ, ಸುಮ್ಕಿದ್ದು ಬಿಡು. ಇವತ್ತೋ ನಾಳೆಕೋ ನೀನು ಬ್ಯಾರೆ ಮನಿಗೋಗೋಳೊ. ಅಲ್ಲಿ ಕಕ್ಸದ್ಮನೆ ಇದ್ರೆ ಆಯ್ತಲ್ಲವಾ” ಅಂತ ವಿಮಲಿ ಆಸೆಗೆ ತಣ್ಣಿರೆರಚಿ ಆ ವಿಷಯಕ್ಕೆ ಮಂಗಳ ಆಡಿ ಬಿಟ್ಟಳು.
ವಿಮಲಿ ಮಾತ್ರ ಸುಮ್ನೆ ಕುಂತ್ಕಳ್ಳಲಿಲ್ಲ. ಏನಾದ್ರೂ ಮಾಡ್ಲೆಬೇಕು ಅಂತ ಆವತ್ತು ಇಸ್ಕೋಲಿಗೆ ಬಂದಿದ್ದ ಸಾಹೇಬ್ರೆನ್ನೇ ಮನೆಗೆ ಕರ್ಕೊಂಡು ಬಂದು ಬಿಟ್ಟಳು. ನರ್ಸಮ್ಮನೂ, ಪಿಡಿಒನೂ ತಮ್ಮನೆಗಂಟಾ ಬಂದಿದ್ದನ್ನ ನೋಡಿ ಪಾರು ಗಾಭರಿಯಾದ್ಲು. “ಏನೇ ವಿಮಲಿ ಅವರನ್ಯಾಕೆ ನಮ್ಮಟ್ಟಿಗೆ ಕರ್ಕೊಂಡು ಬಂದಿದೀಯಾ, ಅವ್ರನಾ ಕೂರ್ಸೋಕೂ ಒಂದ್ಕುರ್ಚಿ ಇಲ್ಲಾ” ಮಗಳ ಕಿವಿಲಿ ಪಿಸುಗುಟ್ತಾನೇ ಸರ್ರನೇ ಒಂದು ಚಾಪೆ ಹಾಕಿ ” ಬನ್ನಿ ಬಡವ್ರ ಮನೆ, ನಮ್ಮನೆನಾ ಉಡ್ಕೊಂಡು ಬಂದು ಬುಟ್ಟಿದ್ದೀರಾ’ ಸಂಕೊಚಿಸುತ್ತ ಒಳಿಕೆ ಕರ್ದಲು ಪಾರು.
” ನೀನೇ ಹೊರಗೆ ಬಾ ಪಾರ್ವತಮ್ಮ” ನರ್ಸಮ್ಮ ಹೇಳಿದಾಗ ಸೆರ್ಗು ಹೊದ್ಕೊಳ್ತಾ ಬಂದ ಪಾರು ಬಾಗಿಲ ಹತ್ತಿರಾನೇ ನಿಂತ್ಕೊಂಡಳು.ಅವರು ಬಂದಿರಾದ್ಯಾಕೆ ಅಂತ ಗೊತ್ಮಾಡ್ಕಂಡಿದ್ದ ಪಾರು ಮಗಳ್ನ ಮನಸ್ನಲ್ಲೇ ಬೈಯ್ದು ಕೊಳ್ತಾ ಅವರ ಕಡೆನೇ ನೋಡ್ತಾ ನಿಂತು ಬಿಟ್ಟಳು.
“ಏನಮ್ಮ ನಿನ್ನ ಮಗಳಿಗೆ ಇರೋ ಬುದ್ದಿ ನಿನಿಗಿಲ್ವಲ್ಲ, ನಮ್ಮನ್ನ ಮನೆವರೆಗೂ ಬರೋ ಹಂಗೆ ಮಾಡಿ ಬಿಟ್ಯಲ್ಲ, ನೋಡು ಪಿಡಿಒ ಸಾಹೇಬ್ರು ಏನೋ ಮಾತಾಡ್ತರಂತೆ ನೋಡು” ನರ್ಸಮ್ಮ ಹೇಳಿದಾಗ,
“ನನ್ನತ್ರ ಏನ್ ಏಳ್ತರೇ ಅವ್ವರೇ, ನಾನೋ ಅಳ್ಲಿ ಮುಕ್ಕ, ಇನ್ನನಮ್ಮ ವಿಮಲಿಗೆ ಏನೂ ಗೊತ್ತಾಗಕಿಲ್ಲ, ನಿಮ್ಮನ್ನ ಕರ್ಕೊಂಡು ಬಂದು ಬುಟವ್ಳೆ” ಸಂಕೋಚಿಸುತ್ತಾ ಹೇಳಿದಳು.
ಆಗ ಪಿಡಿಒ ಸಾಹೇಬ್ರು” ನೋಡಮ್ಮ ಪಾರ್ವತಮ್ಮ, ಈಗಾ ಶೌಚಾಲಯ ಕಟ್ಟಿಸೋದು ಕಡ್ಡಾಯ ಕಣಮ್ಮ, ಬಯಲು ಶೌಚ ಎಷ್ಟು ಅಪಾಯ ಅಂತ ಗೊತ್ತಲ್ವಾ, ಅದಕ್ಕೆ ಸರ್ಕಾರ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಕಟ್ಟಿಸ ಬೇಕು ಅಂತ ಕಾನೂನು ಮಾಡಿದೆ, ಹಾಗಾಗಿ ನೀವು ಶೌಚಾಲಯ ಕಟ್ಟಿಸಲೇ ಬೇಕು” ಅಂತ ತಾಕೀತು ಮಾಡಿದ್ರು.
“ಅಯ್ಯೋ ಸಾಹೇಬ್ರೇ,ನಮಗ್ಯಾಕೆ ಅದೆಲ್ಲ. ನಾವು ಇರೋರೆ ಇಬ್ರು, ನಂತಾವ ಜಾಗನೂ ಇಲ್ಲಾ, ದುಡ್ಡೂ ಇಲ್ಲಾ’ ಆಗೋದೇ ಇಲ್ಲಾ ಅಂತ ರಾಗ ಎಳೆದಳು.
“ಹಂಗೆಲ್ಲ ಹೇಳೋ ಹಾಗೇ ಇಲ್ಲಾ ಪಾರ್ವತಮ್ಮ, ದುಡ್ಡನ್ನ ಸರ್ಕಾರವೇ ಕೊಡುತ್ತೆ, ಜಾಗ ಮಾತ್ರ ನೀವು ಮಾಡಿಕೊಳ್ಳಲೇಬೇಕು.” ಅಂತ ಪಿಡಿಒ ಸಾಹೇಬ್ರು ಹೇಳಿದಾಗ ಪಾರು ತಬ್ಬಿಬ್ಬದಾಳು.
ಆಗ ನರ್ಸಮ್ಮ” ನೋಡು ಪಾರು, ಸರ್ಕಾರ ಶೌಚಾಲಯ ಕಟ್ಟಿಸೊಕೆ ಹಣ ಕೊಡುತ್ತೆ, ನಿಮ್ಮನೆ ಹಿತ್ತಲಿನಲ್ಲೊ, ಕೊಟ್ಟಿಗೆಯಲ್ಲೊ ಶೌಚಾಲಯ ಕಟ್ಟಿಸೋಕೆ ಸಿದ್ದತೆ ಮಾಡ್ಕೊ, ಗಂಡಸರಿಲ್ಲದ ಮನೆ ನೋಡು ನಿಮ್ಗೆ ಶೌಚಾಲಯದ ಅವಶ್ಯಕತೆ ಹೆಚ್ಚು ಇರೋದು,ಮಗಳು ಬೆಳಿತಾ ಇದ್ದಾಳೆ,ಅವಳು ಸುರಕ್ಷಿತವಾಗಿರಬೇಕೊ ಬೇಡವೊ, ವಯಸ್ಸಿಗೆ ಬಂದ ಮಗಳು ಬಯಲಿಗೆ ಹೋಗ್ತಾ ಇದ್ರೆ ಏನು ಚಂದ ಹೇಳು, ಮೊದ್ಲೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ನೀನೆ ಟಿವಿಲಿ ನೋಡ್ತಿಯಲ್ಲಾ, ಯಾವಾಗ್ಲೂ ನೀನು ಅವಳ ಜೊತೆ ಹೋಗೋಕೆ ಆಗುತ್ತಾ ಹೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು.ಮೊದ್ಲು ಅಂಗನವಾಡಿಲಿ ಅರ್ಜಿ ಕೊಡು” ಅಂತ ಹೇಳಿ ವಿಮಲಿ ಕಡೆ ತಿರುಗಿ ” ವಿಮಲಿ ನೀನೇನು ಚಿಂತೆ ಮಾಡಬೇಡಾ, ನಿಮ್ಮವ್ವ ಶೌಚಾಲಯ ಕಟ್ಟಿಸೋಕೆ ಒಪ್ಕೊಂಡಿದ್ದಾಳೆ” ಅಂತ ಹೇಳಿ ನಕ್ಕಾಗ ವಿಮಲಿ ಖುಷಿಯಿಂದ ಮುಖ ಅರಳಿಸಿ ನಕ್ಕಳು.
ಇಷ್ಟೆಲ್ಲ ಹೋರಾಟ ಮಾಡಿ ವಿಮಲಿ ತನ್ನ ಮನೆಯಲ್ಲೂ ಶೌಚಾಲಯ ಕಟ್ಟೊ ಹಾಗೇ ಮಾಡಿ ಬಿಟ್ಟಳು. ಅರ್ಜಿ ಹಾಕಿದ ಮೇಲೆ ಸರ್ಕಾರ ಹಣನೂ ಬೇಗನೇ ಸ್ಯಾಂಕ್ಷನ್ ಮಾಡ್ತು.ಅದ್ರೆ ಆ ಹಣ ಎಲ್ಲಿ ಸಾಲುತ್ತೆ. ಹಂಗಾಗಿ ಪಾರು,ಮಗಳು ಹೆಣ್ಣಾದ್ರೆ ಆರೈಕೆ, ಆರತಿಗೆ ಇರಲಿ ಅಂತ ಇಟ್ಟಕೊಂಡಿದ್ದ ಹಣನೇ ಬಳಸಿಕೊಂಡು ಮಗಳ ಬಯಕೆ ತೀರಿಸಿದಳು. ಮಗಳ ಹಟದ ಮುಂದೆ ಅವಳು ಸೋಲಪ್ಪಿ ಕೊಂಡಿದ್ದಳು.
ತಮ್ಮ ಮನೆಗೆ ಶೌಚಾಲಯ ಬಂದ ಮೇಲೆ ವಿಮಲಗೆ ಬೆಳಕು ಹರಿಯೊ ಮುಂಚೆನೇ ಚಂಬು ಹಿಡ್ಕೊಂಡು ಜೀವ ಕೈಲಿಟ್ಟುಕೊಂಡು ಬಯಲಿಗೆ ಹೋಗೋದು ತಪ್ಪಿತ್ತು. ಹೆಣ್ಣು ಮಕ್ಕಳು ಹೋಗೋದನ್ನೇ ಕಾಯ್ತ ನಿಂತಿರುತ್ತಿದ್ದ ಪೋಲಿ ಹುಡುಗ್ರ ಪೋಳ್ಳು ಪೋಳ್ಳು ಮಾತುಗಳನ್ನು ಕೇಳಿ ಅಸಹ್ಯ ಪಟ್ಟು ಕೊಳ್ಳೊದೂ ತಪ್ಪಿತು.
ಈಗಾ ವಿಮಲಿ ಮದುವೆ ವಯಸ್ಸಿಗೆ ಬಂದಿದ್ದಾಳೆ. ಎಸ್ಸಸ್ಸಲ್ಸಿ ಒಂದೇ ಸಲಕ್ಕೆ ಮುಗ್ಸಿದ್ರೂ ಕಾಲೇಜಿಗೆ ಕಳಿಸೊ ಆರ್ಥಿಕ ಚೈತನ್ಯ ಇಲ್ಲದೆ ಮಗಳನ್ನ ಪಾರೂ ಮನೆಯಲಿಯೆ ಇಟ್ಟುಕೊಂಡಿದ್ದಳು. ವಿಮಲಿ ಮನೆ ಕೆಲ್ಸ ಮಾಡ್ಕೊಂಡು, ಅವ್ವನ ಜೊತೆ ಇಟ್ಟಿಗೆ ಹೊರೋಕೆ ಹೋಗಿ ಸಂಪಾದನೆನೂ ಮಾಡ್ತ ಇದ್ದಾಳೆ. ಇಬ್ಬರೂ ದುಡಿದು ಒಂದಿಷ್ಟು ಕಾಸು ಮಾಡಿಕೊಂಡಿದ್ದಾರೆ. ಯಾವುದಾದರೂ ಒಳ್ಳೆ ಸಂಬಂಧ ಬಂದ್ರೆ ಮದ್ವೆ ಮಾಡೋ ಆಲೋಚನೆ ಪಾರುದು. ತಾನು ಮದ್ವೆ ಮಾಡಿಕೊಂಡು ಹೋಗಿ ಬಿಟ್ರೆ ಅವ್ವನ್ನ ಯಾರು ನೋಡ್ಕೋತ್ತಾರೆ ಅನ್ನೊ ಚಿಂತೆ ವಿಮಲಿಗೆ. ಅವಳ ಚಿಂತೆ ಹೆಚ್ಚಾಗೊ ಹಾಗೆ ಒಂದಿನಾ ಗಂಡಿನಾ ಕಡೆಯವ್ರು ಬಂದೆ ಬಿಟ್ರು. ಅವರ ಆಸ್ತಿ, ದೊಡ್ಡಮನೆ ನೋಡಿದ ಮೇಲೆ ಅವರು ತಮ್ಮ ವಿಮಲಿಯನ್ನ ಒಪ್ಪಿಕೊಂಡು ಬಿಟ್ರೆ ತನ್ನ ಪುಣ್ಯ ಅಂತ ಭಾವಿಸಿದ್ದ ಪಾರು ಅವರು ಒಪ್ಕಂಡ ಕೂಡಲೆ ಮದ್ವೆಗೆ ದಿನ ಗೊತ್ಮಾಡೇ ಬಿಟ್ಟಳು.ನನಗೆ ಈಗ್ಲೆ ಮದ್ವೆ ಬೇಡಾ ಅಂತ ಕೊಸರಾಡ್ತ ಇದ್ದ ಮಗಳಿಗೆ ಪಾರು”ಸುಮ್ಕರಮ್ಮಿ, ಅವ್ರು ನಿನ್ನೊಪ್ಕಂಡಿರಾದೇ ನಿನ್ಪುಣ್ಯ, ಅಂತದ್ರಲ್ಲಿ ತರ್ಲೆ ಮಾಡ್ಬೆಡಾ, ಆಸ್ತಿ ಐತೇ, ಮನೆ ಐತೆ, ಗಂಡೂ ವೈನಾಗಿದ್ದಾನೆ,ಗೇಮೇನೂ ವೈನಾಗಿಯೆ ಮಾಡ್ತನಂತೆ, ಇನ್ನೆನ್ಬೇಕು ನಿಂಗೆ. ದುಸರಾ ಮಾತಾಡಬೇಡ” ಅಂತ ಮಗಳನ್ನ ಅನುನಯಿಸಿ ಒಪ್ಪಿಸಲು ನೋಡಿದಳು.
” ಅಲ್ಲ ಕನವ್ವ, ನಾನು ಮದ್ವೆ ಮಾಡ್ಕಂಡೋದಮ್ಯಾಕೆ ನೀನೊಬ್ಳೆ ಆಗ್ತಿಯಲ್ಲವ್ವ, ನಿಂಗೆ ನೀರು ನಿಡಿ ಕೊಡವ್ರ್ಯಾರು’ ಆತಂಕದಿಂದ ಕೇಳಿದಳು.
” ಅಯ್ಯೋ ಮೂಳಾ, ನಂಗೇನು ಕೈಕಾಲು ಬಿದ್ದೋಗವಾ, ನಾನಿನ್ನೂ ಗಟ್ಟಿಯಾಗಿದ್ದಿನಿ, ಅಂತ ಕಾಲಕ್ಕೆ ಅಲ್ಲಿಗೆ ಬತ್ತಿನಿ ತಗೋ, ಆ ಮನೇಲಿ ಆಟೋಂದು ಜನ ಮದ್ಯೆ ನನೋಬ್ಳು ಎಚ್ಚಾಯ್ತಿನಾ” ಮಗಳ ತಲೆ ಸವರುತ್ತಾ ಹೇಳಿದಳು.
“ಮತ್ತೆ, ಮತ್ತೇ” ಮಗ್ಳು ರಾಗ ಎಳೆಯೊದನ್ನ ಕಂಡು ಪಾರು ಸಿಡುಕಿ” ಮತ್ತೇನೀ ನಿಂದು ಗುನುಗು” ಅಂದಾಗ ” ಅಲ್ಲ ಕನವ್ವ, ಅವ್ರ ಮನೆಯ್ಯಾಗೆ ಕಕ್ಸದ್ಮನೆ ಐತಾ ಅಂತ ತಿಳ್ಕೊ, ಇಲ್ಲ ಅಂದ್ರೆ ನಾನು ಲಗ್ನನೇ ಆಗಾಕಿಲ್ಲ” ಮುಖ ದಮ್ಮಿಸಿಕೊಂಡು ಹೇಳಿದಾಗ ಪಾರೊ ಗೊಳ್ಳನೇ ನಕ್ಕಳು.
“ನಿಂದೋಳ್ಳೆ ಕಕ್ಸದ್ಮನೆ ಕತೆ ಆಯ್ತಲ್ಲೆ. ಅಲ್ಲ ಕಣೆ ವಿಮಲಿ. ಅಟದೋಡ್ಮನೆಯಾಗೇ ಅದಿರಾಕಿಲ್ವೇನೆ,ಇರ್ತೈತೇ ಬುಡು” ಆ ವಿಷಯಕ್ಕೆ ಇತಿಶ್ರಿ ಹಾಡೋಕೆ ನೋಡಿದಳು.
ಆದರೆ ವಿಮಲಿ ಅಷ್ಟು ಸುಲಭವಾಗಿ ಒಪ್ಕಂಡಳೇ.
“ಇರ್ತೈತೆ ಬುಡು, ಪರ್ತೈತೆ ಬುಡು ಅಂತ ಸುಮ್ಕಿದ್ದುಬಿಡು ನೀನು, ಗ್ಯಾರಂಟಿ ಐತಾ ಅಂತ ನೋಡ್ಕಂಡುಬಾ,ಇಲ್ಲ ಅವ್ರನ್ನೇ ಕೇಳಿ ತಿಳ್ಕಂಡು ನಂಗೆ ಏಳು” ಕೋಪದಿಂದ ಹೇಳಿದಳು.
” ಅಯ್ಯೋ,ನಿಮ್ಮನೆಲಿ ವೊಲ ಐತಾ,ಗದ್ದೆ ಏಷ್ಟೈತೆ ಅಂತ ಕೇಳಬೋದು, ಆದ್ರೆ ನಿಮ್ಮನ್ಯಾಗೆ ಕಕ್ಸದ್ಮನೆ ಐತಾ ಅಂತ ಕೇಳಾಕಾಯ್ತದೇನೇ ವಿಮಲಿ, ಅಂಗೆಲ್ಲ ಕೇಳುದ್ರೆ
ನನ್ನ ಏನಂದ್ಕತರೇ ಯೋಳು,ಪಸಂದಾಗಿರೊ ವೆಂಟಸ್ತನ ಬಂದೈತೆ. ದುಡ್ಡು ಪಡ್ಡು, ಚಿನ್ನ ಗಿನ್ನ ಯ್ಯಾನೂ ಕೇಳ್ದೆ ಸುಮ್ಕೆ ಒಪ್ಕಂಡಿದರೆ, ನೀನು ಸುಮ್ಕಿದ್ದುಬುಡು, ಮದುವೆ ವೈನಾಗಿ ನಡ್ದು ಬುಟ್ರೆ ಆ ಬೀರಪ್ಪಂಗೆ ಕೋಳಿ ಕೋಡ್ತಿನಿ ಅಂತ ಅರ್ಕೆ ಮಾಡ್ಕಂಡಿದಿನಿ” ಅಂತ ತನ್ನದೆ ಚಿಂತೆಯಲ್ಲಿ ಮುಳಗಿಹೋದಳು.
ಇತ್ತ ವಿಮಲಿಯ ಚಡಪಡಿಕೆ ಜಾಸ್ತಿ ಆಗ್ತನೇ ಹೋಯ್ತು. ತಾನು ಲಗ್ನ ಆಗಿ ಹೋಗೋ ಮನೆಲೀ ಶೌಚಾಲಯ ಐತಾ ಇಲ್ವೊ, ಯಾರನ್ನ ಕೇಳೋದು, ಎಂಗೆ ಕೇಳೋದು ಅಂತ ಅಂದ್ಕೊಳ್ಳದ್ರಗೇ ದಿನಗ್ಳು ಕಳೆದೇ ಹೋದ್ವು. ಮದ್ವೆ ಸಂಭ್ರಮದಲ್ಲಿ ಆ ವಿಷಯಕ್ಕೆ ಹೆಚ್ಚು ಗಮನ ಕೊಡೋಕೆ ಆಗ್ಲೆ ಇಲ್ಲಾ.
ಪಾರೂ ಅರ್ಕೆ ಕಟ್ಕೊಂಡಿದ್ರೆಂದ್ಲೆನೋ ವಿಮಲಿ ಮದುವೆ ಯಾವ ಅಡ್ಡಿ ಅಗ್ದೆ ಸುಲಭವಾಗಿ ನಡ್ದು ಹೋಯ್ತು.ಮದುವೆಲಿ ವಿಮಲಿಗೆ ಅವಳ ಗಂಡನ ಮನೆಯವ್ರು ಕರಿಮಣಿ ಸರ ಹಾಕಿದ್ದು ವಿಶೇಷವಾಗಿತ್ತು.ಸಾಮಾನ್ಯವಾಗಿ ಹೆಣ್ಣಿನ ಕಡೆಯವ್ರೆ ಹೆಣ್ಣಿಗೆ ಇಷ್ಟು ತೊಲ ಬಂಗಾರ ಅಂತ ಹಾಕೋದು ಸಹಜವಾಗಿತ್ತು. ಆದ್ರೆ ಪಾರು ತನ್ನ ಬಡತನದಿಂದ ಮಗಳಿಗೆ ಕಿವಿಗೆ ವ್ಯಾಲೆ ಕೊಡದ್ರೊಳ್ಗೆ ಸುಸ್ತಾಗಿದ್ಳು. ಅಂತದ್ರಾಗೆ ಗಂಡನ್ಕಡೆಯವ್ರೆ ಮಾಂಗಲ್ಯ ಸರ ಹಾಕಿದ್ದು ಊರವ್ರ ಕಣ್ಣಲ್ಲಿ ಆಶ್ಚರ್ಯ ತರಿಸಿತ್ತು. ವಿಮಲಿ ವೊಳ್ಳೆ ಮನೆನೇ ಸೇರ್ಕಂಡ್ಳು ಅಂತ ಊರವ್ರೆಲ್ಲಾ ಕೊಂಡಾಡಿದ್ರು.
ಬಲಗಾಲಿಟ್ಟು ಅಕ್ಕಿ ವೊದ್ದು ಒಳಕ್ಬಂದ ವಿಮಲಿಗೆ ಅಲ್ಲಿವರೆಗೂ ಮರ್ತು ಹೋಗಿದ್ದ ವಿಸಯ ನೆಪ್ತಿಗೆ ಬಂದು ಎಂಗೆ ಕೇಳಾದು, ಯಾರನ್ನ ಕೇಳಾದು ಅಂತ ಗೊತ್ತಾಗ್ದೆ ಒಳ್ಗೋಳ್ಗೆ ಚಡಪಡಿಸಿದ್ಳು. ಅವ್ಳ ಚಡಪಡಿಕೆ ಕಂಡಾ ಅವ್ಳ ಹೊಸ ಗಂಡ ಬಸ್ವರಾಜ”ಯಾಕೆ ಏನಾಯ್ತೆ,ಏನಾದ್ರು ಬೇಕಾ” ಅಂತ ಕಿವಿಯಲ್ಲ ಪಿಸುಗುಟ್ಟಿದಾಗ” ಕಿವಿಕೆಂಪಾಗಿತ್ತು, “ಏನೂ ಇಲ್ಲಾ” ಅಂತ ತಲೆ ತಗ್ಗಿಸಿ ತಲೆಯಾಡಿಸಿದ್ದಳು ನಾಚಿಕೆಯಿಂದ.
ಕ್ವಾಣೆಯೋಳ್ಗೆ ಚಿಗವ್ವನ ಜೊತೆ ಮಂಗಿದ್ದ ವಿಮಲಿಯನ್ನು ಅವಳ ನಾದಿನಿ ಬೆಳಗ್ಗೆ ಅಷ್ಟೊತ್ತಿಗೆ ಎಬ್ಸಿ” ಅತ್ಗೆಮ್ಮಾ,ಎಲ್ರೂ ಏಳೋಕ್ಮುಂಚೆನೆ, ಕೆರೆಕಡಿಕೆ ವೋಗ್ಬಂದ್ಬಡೋಣ ಬನ್ನಿ” ಅಂತ ಕರೆದಾದ ಎದೆ ದಸ್ಸಕ್ಕೆಂದಿತ್ತು. ನಿದ್ದೆ ಮಂಪರಿನಲ್ಲಿಯೇ ಬೆಪ್ಪಾಗಿ ಏನು ಅಂತ ಕೇಳಿ ಮತ್ತೊಮ್ಮೆ ದೃಡಪಡಿಸಿಕೊಂಡಿದ್ದಳು.”ಬ್ಯಾಗ ಬನ್ನಿ ಅತ್ಗೆಮ್ಮಾ’ಅಂತ ಅವಳ ಕೈಹಿಡಿದು ಎಳ್ಕಂಡೇ ಹೊರಕ್ಕೆ ಬಂದಿದ್ದಳು. ಕಾಲಿಗೆ ಚಪ್ಪಲಿ ಮೆಟ್ಟಿಕೊಳ್ಳುತ್ತಾ, ತನಗಾದ ನಿರಾಶೆಯನ್ನೂ ಚಪ್ಪಲಿ ಜೊತೆ ಮೆಟ್ಟಿಕೊಳ್ಳುತ್ತಾ ನಾದಿನಿಜೊತೆ ತಂಬಿಗೆ ಹಿಡಿದು ಹೊರಟಾಗ ಅಳು ಉಕ್ಕಿ ಬಂದಿತ್ತು. ಮೊದಲ ದಿನವೇ ಅಸಮಾಧಾನದಿಂದ ಆರಂಭವಾಗಿತ್ತು. “ಅಲ್ಲಾ, ಶಿವಮ್ಮಾ, ಅಷ್ಟು ದೊಡ್ಮನೆ ಕಟ್ಸಿದ್ದಿರಾ, ಒಂದು ಕಕ್ಸದ್ಮನೆ ಕಟ್ಟಲ್ವಾ”ದುಗಡದಿಂದಲೇ ಕೇಳಿದಳು.
” ಇಲ್ಲ ಅತ್ಗೆಮ್ಮಾ, ನಮ್ಮನೆಯ್ಯಾಗೆ ಯಾರ್ಗೂ ಅದು ಬೇಕೇನ್ಸಿಲ್ಲ, ಎಲ್ರೂ ಬಯಲ್ಗೆ ವೋಗಾದು” ಅದೇನು ಅಂತ ದೊಡ್ಡ ವಿಸಯ ಅಲ್ಲ ಅನ್ನೊ ಅಂಗೆ ಹೇಳಿಬಿಟ್ಟಾಗ ವಿಮಲಿ ಸುಮ್ಮನಾಗ್ಲೆ ಬೇಕಾಯ್ತು. ಆದ್ರೆ ಗಂಡಂಗೆ ಹೇಳಿ ಕಕ್ಸದ್ಮನೆ ಕಟ್ಟಿಸ್ಬೇಕು ಅಂತ ಅಂದು ಕೊಂಡ್ಮೇಲೆನೆ ಸಮಾಧಾನದ ಉಸಿರು ಬಿಟ್ಟಿದ್ದು.
ಅವತ್ತೇ ಬೀಗ್ರೂಟನೂ ಇಟ್ಕಂಡಿದ್ದರಿಂದ ಪಾರು ನೆಂಟರಿಷ್ಟರು, ಊರವ್ರೊಂದಿಗೆ ಬಂದು ಊಟಾ ಮುಗ್ಸಕ್ಕಂಡು ಅಳಿಯನ್ನು ಮಗಳನ್ನು ಕರ್ಕಂಡು ವೊಂಟು ಬಿಟ್ಳು. ರಾತ್ರಿಕೇ ಪ್ರಸ್ಥನೂ ಮಡ್ಗದ್ಳು. ಇರೂ ಸಣ್ಣ ಮನೇಲೆ ಎಲ್ಲಾ ತಯಾರಿ ಮಾಡಿ ಮಗಳ್ನೂ, ಅಳಿಮಯ್ಯನ್ನೂ ಒಳಿಕೆ ಬಿಟ್ಟು ತಾನು ಪಕ್ಕದ್ಮನಿಗೆ ಮಲಗಾಕೆ ವೋಗಿಬಿಟ್ಟಳು.ರಾತ್ರಿ ಗಂಡ ಪಕ್ಕಕ್ಕೆ ಬಂದ ಕೂಡ್ಲೆ ತನ್ನ ತಲೆಲಿ ಹುಳದಂತೆ ಕೊರೆಯುತ್ತಿದ್ದ ವಿಸ್ಯವನ್ನ ಕೇಳ್ಬೇಕು ಅಂತ ಅಂದ್ಕತಾ ಇರ್ವಾಗ್ಲೆ ಬಸ್ವರಾಜ ಅತುರದಿಂದ ಅವಳನ್ನ ತಬ್ಬಿ ಹಾಸ್ಗೆ ಮ್ಯಾಲೆ ಉರಳಿಸಿಕೊಂಡಾಗ ಅವಳಿಗೆ ಹೇಳೋಕೆ ಆಗ್ಲಿಲ್ಲ.
ಬೆಳಗ್ಗೆ ಮನ್ಯಲ್ಲೆ ಕಕ್ಸದ್ಮನೆ ಇದ್ರೂ ಬಸ್ವರಾಜ ಬಯ್ಲಿಗೊಗಿ ಬಂದಿದ್ದನ್ನ ಕಂಡು ವಿಮಲಿ” ಮನ್ಯಾಗೆ ಕಕ್ಸದ್ಮನೆ ಇದ್ರೂ ಅದ್ಯಾಕೆ ಹೊರಕ್ಕೊಗಿದ್ರಿ’ ಆಕ್ಷೇಪಿಸಿದ್ಲು. “ಅಯ್ಯೊ ನಂಗೆ ಅದೆಲ್ಲಾ ಸರ್ಯೊಗಕಿಲ್ಲ, ನಂಗೆ ಬಯಲಿಗೊಗೆದೆ ಪಾಟಾಗೈತೆ” ಅಂದು ಬಿಟ್ಟಾಗ ವಿಮಲಿಗೆ ಆಘಾತವಾಯ್ತು. ತನಗೇ ಅಭ್ಯಾಸ ಇಲ್ಲ ಅಂದ ಮೇಲೆ ಗಂಡ ತನಗಾಗಿ ಕಕ್ಸದ್ಮನೆ ಕಟ್ಟಿಸಿ ಕೊಡ್ತಾನಾ ಅನ್ನೊ ಆತಂಕ ಕಾಡಿದ್ರೂ, ಪ್ರಯತ್ನ ಬಿಡಬಾರದು ಅಂತ” ನೋಡಿ ನಾನು ಇದನ್ನ ಕಟ್ಸಿಕೊಳ್ಳಾಕೆ ಅದೆಷ್ಟು ಹಟ ಮಾಡ್ದೆ ಗೊತ್ತಾ, ಅತ್ತು ಕರ್ದು ಅವ್ವನ್ನ ಒಪ್ಸಿ ಇದನ್ನ ಕಟ್ಸೊ ಅಂಗೆ ಮಾಡ್ದೆ. ಆಗ್ಲಿಂದ ನಂಗೆ ಹೊರ್ಕೊಗೊ ಅಭ್ಯಾಸನೆ ತಪ್ಪಿ ಹೋಗೈತೆ. ನಿಮ್ಮನೇಲೂ ಕಟ್ಟಸ್ರಿ” ಅಂತ ಕೇಳಿದ್ಳು” ಹೊಸ ಹೆಂಡ್ತಿಗೆ ಇಲ್ಲವೆನ್ನಲಾರದೆ ಹ್ಹೂಗುಟ್ಟಿದ್ದ.
ವಿಮಲಿ ಗಂಡನ್ಮನೆಗೆ ಬಂದು ಶಾನೆ ದಿನವಾದ್ರೂ ಬಯಲಿಗೊಗಾದು ತಪ್ಪಲಿಲ್ಲ. ಕಿರ್ಕಿರಿಯಿಂದಲೆ ದಿನ ತಳ್ತಿದ್ಳು. ತುಂಬಿದ ಮನೆಲಿ ಗಂಡಾ ಸಿಕ್ತ ಇದ್ದದ್ದೆ ರಾತ್ರಿಲಿ. ಹೊರ್ಗೆ ದುಡ್ದು ಹಣ್ಣಾಗಿ ಬರ್ತಿದ್ದ ಬಸ್ವರಾಜ ಕೈಗೆ ಹೆಂಡ್ತಿ ಸಿಕ್ಕಿದ ಕೂಡಲೆ ಅವಳ ಸಾನಿದ್ಯ ಬಿಟ್ರೆ ಬೇರೇನು ಬೇಕಾಕ್ತ ಇರ್ಲಿಲ್ಲ. ಸುಖದ ಕ್ಷಣಗಳು ಮುಗಿದ ಕೂಡಲೆ ಮಗ್ಗುಲಾಗಿ ಗೊರಕೆ ಹೊಡೆಯೋಕೆ ಶುರುಹಚ್ಕತಿದ್ದ. ಆಗೆಲ್ಲ ವಿಮಲಿ ಅಸಹಾಯಕತೆಯಿಂದ ಕನಲಿಹೋಗುತ್ತಿದ್ದಳು.ಆದರೂ ಪ್ರಯತ್ನ ಕೈಬಿಟ್ಟಿರ್ಲಿಲ್ಲ.ಸರಿಯಾದ ಸಮಯ ನೋಡಿ ತನ್ನ ಬೇಡಿಕೆ ಇಡತೊಡಗಿದ್ಳು. ಅವ್ಳ ಕಾಟ ತಡಿಲಾರದೆ ಒಂದಿನ ಅಪ್ಪನ್ಮುಂದೆ ವಿಷಯ ಇಟ್ಟಾಗ ಮನೆಯಲ್ಲಿ ದೊಡ್ಡ ಹಗರಣವೆ ನಡೆದು ಹೋಯ್ತು.”ನೆನ್ನೆ ಮೊನ್ನೆ ಬಂದವಳಿಗಾಗಿ ಸಂಡಾಸು ಕಟ್ಟಿಸು ಅಂತಿದಿಯಲ್ಲೊ, ಅದಿಲ್ಲದೆ ನಾವೆಲ್ಲ ಇಲ್ವಾ, ಮನೇಲಿ ಇಷ್ಟೊಂದು ಜನ್ರಿಗೆ ಬೇಡದೆ ಇರೋದು ಅವಳಿಗೆ ಬೇಕಾ. ಅವ್ಳೇನು ಮಾರಾಜನ ಮಗ್ಳ, ವೋಗೋಗು, ಮತ್ತೆ ಈ ಇಚಾರ ಈ ಮನ್ಯಾಗೆ ಎತ್ಬಾರ್ದು. ಮನ್ಯಾಗೆ ದೇವ್ರು ದಿಂಡ್ರು ಇಟ್ಕಂಡು, ಮನೆ ವಳ್ಗೆ ಸಂಡಾಸ್ಕಟ್ಬೇಕಂತೆ, ಮಡಿ ಮೈಲ್ಗೆ ಒಂದೂ ಇಲ್ಲಾ, ಕೇಮೆ ನೋಡ್ಕೊ ವೋಗು” ಅಂತ ಅಪ್ಪಯ್ಯಾ ಹೇಳಿಬಿಟ್ಟಾಗ ಬಸ್ವರಾಜ ತೊದಲ್ತಾ” ಅದು ಅದು….ಅಲ್ಲಪ್ಪ, ಅವಳ ಮನೆಲೂ ಸಂಡಾಸು ಐತೆಲ್ಲ, ಅದಕ್ಕೆ ಇಲ್ಲೂ ಕಟ್ಸನ ಅಂತಿದ್ದಾಳೆ, ಈಗಾ ಎಲ್ರೂ ಮನೆಯಾಗೂ ಇರಬೇಕಂತಲ್ಲಪ್ಪ, ನಮ್ಮನೆಯ್ಯಾಗೂ ಎಣ್ಣು ಐಕ್ಳಿದಾವೆ, ವೊತ್ತಿಲ್ದೊತ್ನಾಗೆ ವೊರಿಕ್ಯಾಕೆ ವೋಗೋದು, ಅದರಿಂದ ನಮ್ಗೆ ತೊಂದ್ರೆ ಅಂತವ್ಳೆ ವಿಮಲಿ” ಮೆಲ್ಲಗೆ ಅಪ್ಪಂಗೆ ಹೆಳ್ದ.
ಅದಕ್ಕೆ ಅವನವ್ವ” ಅಲ್ಲ ಕಣ್ಲ ಬಸ್ರಜ, ಈಗಂಟಾ ನಾವೆಲ್ಲ ಬಯ್ಲಿಗೆ ವೋಯ್ತ ಇಲ್ವಾ, ನಮ್ಗೆಲ್ಲಾ ಏನಾಗ್ಬುಟೈತೆ, ಅದಲ್ದೆ ನಿಂದು ಸೇರ್ಸಿ ಈ ವರ್ಸ ಮೂರ್ಮದ್ವೆ ಮಾಡೀವಿ, ಅದೆಲ್ಲ ಕಟ್ಟಾಕೆ ದುಡೈತೆನ್ಲಾ,ಅದೆಲ್ಲಾ ನಮಗ್ಯಾಕೆ ಯೋಳು, ನಮ್ದೇವ್ರೆಗೆಲ್ಲಾ ಅದು ಸರಿ ಬರಾಕಿಲ್ಲ, ಸುಮ್ಕಿದ್ದ ಬುಡು ಮಗಾ” ಅಂತ ಅಂದು ಬಿಟ್ಟಾಗ ಬಸ್ರಾಜ ನಿರುತ್ತರನಾದ.ಅವ್ನಿಗೂ ಅದು ಬೇಕೆ ಬೇಕು ಅಂತೇನು ಅನ್ನಿಸಿರ್ಲಿಲ್ಲ. ಹೊಸ ಹೆಂಡ್ತಿ ಹೇಳಿದ್ಲಲ್ಲ ಅಂತ ಅಪ್ಪ ಅವ್ವನ್ನ ಕೇಳಿದ್ನೆ ವಿನಃ ಅದೇನು ಅಂತ ಮಹತ್ವದ ವಿಚಾರ ಅಂತ ಅವನಿಗೂ ಅನ್ನಿಸದೆ ” ಹೋಗ್ಲಿ ಬಿಡವ್ವ ನಿಮ್ಗೆಲ್ಲ ಬ್ಯಾಡ ಅನ್ಸುದ್ರೆ ಬ್ಯಾಡ ಬುಡು” ಅಂತೇಳಿ ಹೊಂಟೆ ಬಿಟ್ಟಾಗ ಒಳಗಿಂದ್ಲೆ ಎಲ್ಲ ಕೇಳ್ಸಿಕೊಳ್ಳುತ್ತಿದ್ದ ವಿಮಲಿ ನಿರಾಸೆಯಿಂದ ಪೆಚ್ಚಾದ್ಲು. ಒಳಗಿದ್ದವ್ರೆಲ್ಲಾ ಒಬ್ಬರಮುಖ ಒಬ್ಬರು ನೋಡ್ಕಂಡು ಕಿಸಿಕಿಸಿ ನಕ್ಕಾಗ ವಿಮಿಲಿಗೆ ಅವಮಾನವಾದಂತಾಗಿತ್ತು.ಇವರನ್ನೇಲ್ಲ ಬದ್ಲಾಯ್ಸೊಕೆ ತನ್ನಿಂದ ಸಾಧ್ಯಾನಾ ಅಂತ ನಿಟ್ಟುಸಿರು ಬಿಟ್ಟಿದ್ದಳು.
ಸಮಯ ಸಿಕ್ದಾಗಲೆಲ್ಲಾ ಮನೆ ಹೆಂಗ್ಸರಿಗೆಲ್ಲಾ ತಿಳುವಳಿಕೆ ಕೊಡೋಕೆ ಶುರು ಮಾಡಿದ್ದಳು.ಶೌಚಲಯದ ಅವಶ್ಯಕತೆ, ಅದರ ಅನಿವಾರ್ಯತೆ ಬಗ್ಗೆ ಹೇಳುವಾಗ ಅವರಿಗೂ ಅದು ಸರಿ ಅನ್ನಿಸುತ್ತಿತ್ತು.ಅದ್ರೆ ಅವರಿಂದೇನು ಮಾಡಲಾದೀತು, ಮನೆ ಹಿರೀರನ್ನ ಒಪ್ಸದಾದ್ರೂ ಎಂಗೆ, ಅವರ್ಗೆ ಒಂದ್ಸಲ ಬ್ಯಾಡ ಅನ್ಸಿದನ್ನ ಮತ್ತೇ ಬೇಕು ಅನ್ನಿಸೊದು ಕಷ್ಟ ಅನ್ನೊ ಸತ್ಯ ವಿಮಲಿಗೂ ಅರ್ಥವಾಗಿತ್ತು. ಮದ್ವೆ ಮುಂಜಿ,ತಿಥಿ, ದೇವರು ದಿಂಡರು ಅಂತ ಎಷ್ಟು ಬೇಕಾದ್ರೂ ಖರ್ಚುಮಾಡೋ ಈ ಮನೆ ಮಂದಿಗೆ ಶೌಚಾಲಯಕ್ಕಾಗಿ ಖರ್ಚುಮಾಡಲು ಸಿದ್ದರಿಲ್ಲದಿರುವುದು, ಅದು ವ್ಯರ್ಥ ಖರ್ಚೆಂದು ಭಾವಿಸಿರುವ, ಮನೆಯಲ್ಲಿ ಶೌಚಾಲಯವೆಂದರೆ ಅಸಹ್ಯ ಅಂದುಕೊಂಡಿರುವ ಅವರನ್ನು ಬದಲಾಯಿಸುವುದು ಸಾಧ್ಯವೇ ಇಲ್ಲವೆಂದು ಮನೆಯ ಹೆಂಗಸರೆಲ್ಲ ವಿಮಲಿಗೆ ಮನದಟ್ಟು ಮಾಡಿದರು. ಬಸ್ರಾಜನೂ ಮತ್ತೆ ಆ ಸುದ್ದಿ ಎತ್ತಬೇಡಾ, ಮನೆಯ ಎಲ್ಲಾ ಹೆಂಗಸರೂ ಇರೋ ಹಾಗೆ ಇದ್ದು ಬಿಡು, ನಿಂಗೇನು ಕಡ್ಮೆ ಆಗಿದೆ ಈ ಮನೆಲೆ ಅಂತ ಅಂದು ಬಿಟ್ಟಿದ್ದ. ಆದರೆ ಅವಳು ಭರವಸೆ ಕಳೆದುಕೊಳ್ಳಲಿಲ್ಲ.
ಮನೆಯವ್ರೆಲ್ಲಾ ದೇವರ ಹರಕೆ ತೀರಿಸಲು ತಿರುಪತಿಗೆ ಹೊರಟರು. ಅದೇ ಸಮಯದಲ್ಲಿ ಮುಟ್ಟಾಗಿದ್ದ ವಿಮಲಿ, ವಯಸ್ಸಾದ ಕಾರಣಕ್ಕೆ ಹೋಗಲಾರದ ಅಜ್ಜಿ ಹಾಗೂ ಶಾಲೆಗೊಗೋ ಮಕ್ಕಳ ಜೊತೆಗೆ ಮನೆಯಲ್ಲಿಯೇ ಉಳಿಬೇಕಾಯ್ತು. ಗಂಡನ ಜೊತೆ ಹೋಗಕಾಗ್ಲಿಲ್ಲ ಅನ್ನೊ ಬೇಸರದ ಜೊತೆ ಮನೆ ಜವಾಬ್ದಾರಿನೂ ಅವಳ ಮೇಲೆ ಬಿತ್ತು.ಅವರೆಲ್ಲರೂ ಊರಿಗೆ ಹೊರಟ ರಾತ್ರಿನೆ ಆ ಮನೆಯಲ್ಲಿ ಇಂದು ದುರ್ಘಟನೆ ನಡೆದು ಹೋಯ್ತು. ಆವತ್ತ ರಾತ್ರಿ ಹೈಸ್ಕೂಲು ಓದ್ತ ಇದ್ದ ಭಾವನ ಮಗಳು ವಿಮಲಿನ ಏಳಿಸಿ ಹೊರಗೋಗಬೇಕು ಅಂತ ಎಬ್ಬಿಸಿದಾಗ ಇಷ್ಟೊತ್ನಲ್ಲ ಅಂತ ಅನುಮಾನಿಸಿದಳು. ಆದ್ರೆ ತೋರಿಸಿಕೊಳ್ಳದೆ ತಾನು ಜೊತೆಯಲ್ಲಿ ಹೊರಟಳು. ಬಯಲಲ್ಲಿ ಎಲ್ಲ ಮುಗಿಸಿಕೊಂಡು ವಾಪಸ್ಸು ಬರೋವಾಗ ಕಾರೊಂದರಲ್ಲಿ ಕುಡಿದು ತೂರಾಡ್ತಿದ್ದ ಗುಂಪೊಂದು ಇವರನ್ನ ನೋಡಿ ಅಶ್ಲೀಲವಾಗಿ ಮಾತಾಡ್ತ ಇವರನ್ನ ಹಿಡಿದುಕೊಂಡು ಎಳೆದಾಡಿದ್ದರು, ಇವರು ಹೆದರಿ ಕಿರುಚಾಡಿದ್ದರಿಂದ ಹಳ್ಳಿಯವರು ಎದ್ದು ಓಡಿ ಬರುವುದನ್ನ ನೋಡಿ ಓಡಿಹೋಗಿ ಕಾರೋಳಗೆ ಕುಳಿತು ಜೋರಾಗಿ ಕಾರನ್ನ ಓಡಿಸಿಕೊಂಡು ಓಗಿ ಬಿಟ್ಟರು. ಅದ್ಯಾವ ನಾಯಿಗಳು ಇಲ್ಲಿಗೆ ಬಂದಿದ್ದು ಇನ್ನೊಂದು ಸಲ ಈ ಕಡೇ ಕಂಡ್ರೆ ಹೂತಕಿ ಬಿಡ್ತಿವಿ ಅಂತ ಊರವ್ರು ಕೂಗಾಡಿದು.್ರ ಹೆದರಿ ನಡುಗುತ್ತಾ ಇದ್ದ ಅವರಿಬ್ಬರನ್ನು ಮನೆಗಂಟಾ ಬಿಟ್ಟು ” ಜೋಪಾನ ಕಣ್ರವ್ವ, ಅಂಗೆಲ್ಲಾ ಎಟೋಟೋತ್‍ನಲ್ಲೊ ವೊರಕ್ಕೆ ಬರಬ್ಯಾಡ್ರವ್ವ, ಕಾಲಾ ವಂದೇ ಸಮ ಇರಾಕಿಲ್ಲ’ ಅಂತೇಳಿ ವೋಂಟೋದ್ರು. ಆ ಘಟನೆಯಿಂದ ತತ್ತರಿಸಿಹೋಗಿದ್ದ ವಿಮಲಿ ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ. ಗ್ರಹಚಾರ ಕೆಟ್ಟಿದ್ದರೆ ಇವತ್ತು ನಾವು ಆ ರಾಕ್ಷಸರ ಕೈಕೆ ಸಿಕ್ಕು ಏನಾಗಿ ಬಿಡುತ್ತಿದ್ದೆವೊ. ನೆನಸಿಕೊಂಡೇ ಗಡಗಡನೇ ನಡುಗಿಹೋದಳು.ಧೈರ್ಯ ತಂದುಕೊಳ್ಳುತ್ತಲೆ ಮಲಗಲು ಪ್ರಯತ್ನಿಸಿದಳು. ನಿದ್ರೆ ಮಾತ್ರ ಬರಲಿಲ್ಲ. ಬೆಳಗ್ಗೆ ಹೊತ್ತಿಗೆ ವಿಮಲಿ ಒಂದು ನಿರ್ಧಾರಕ್ಕೆ ಬಂದಿದ್ದಳು.
ಬೆಳಗಾದ ಕೂಡಲೆ ಎಲ್ಲಾಕೆಲ್ಸ ಸರಸರನೆ ಮುಗಿಸಿ ಫಷ್ಟ್ ಬಸ್ಗೇ ಪಟ್ಟಣಕ್ಕೆ ಹೋದ್ಳು. ಮೊದ್ಲು ಬಳೆ ಅಂಗಡಿಗೆ ಹೋಗಿ ಒಂದು ಕರಿಮಣಿ ಸರತಗೊಂಡು ತನ್ನ ಚಿನ್ನದ ತಾಳಿಸರವನ್ನು ಬಿಚ್ಚಿ ಮಾಂಗಲ್ಯ ತೆಗೆದು ಅದಕ್ಕೆ ಹಾಕೊಂಡು ಹೊರ್ಗೆ ಬಂದು ಚಿನ್ನಬೆಳ್ಳಿ ಅಂಗಡಿಗೊಗಿ ತನ್ನ ಸರನ ತೂಕ ಹಾಕಿಸಿ ಹಣ ಕೊಡಿ ಅಂತ ಕೇಳಿದ್ಳು. ಅವರು ಅನುಮಾನಿಸಿದಾಗ ಹೇಗಾಗಬಹುದು ಅಂತ ಅಂದುಕೊಂಡು ತನ್ನ ಮದುವೆ ಫೋಟೊದಲ್ಲಿ ಅ ಸರ ಹಾಕಿರುವುದನ್ನ ತೋರಿಸಿ, ಈಗ ಕಷ್ಟ ಅಂತ ಮಾರ್ತಾ ಇದ್ದಿನಿ ಅಂತ ಅವರನ್ನ ಒಪ್ಪಿಸಿ ಹಣ ತಗೋಂಡು ಸೀದಾ ಊರಿಗೆ ಬಂದ್ಳು. ಬಂದವ್ಳೆ ಗಾರೆ ಕೆಲ್ಸದವ್ರನ್ನ ಕರೆಸಿ ತಕ್ಷಣವೇ ಶೌಚಾಲಯ ಕಟ್ಟಕೊಡೋಕೆ ಗುತ್ತಿಗೆ ಕೊಟ್ಟು ಬಿಟ್ಟಳು, ಎರಡೇ ದಿನಕ್ಕೆ ಮನೆಯ ಹಿಂಭಾಗದಲ್ಲಿ ಶೌಚಾಲಯ ಸಿದ್ದವಾಗಿ ಬಿಟ್ಟಿತು.ಅವಳ ಧೈರ್ಯ ಕಂಡು ಊರವ್ರೆ ದಂಗಾಗಿ ಬಿಟ್ಟಿದ್ದರು. ಕೆಲ್ಸ ಮುಗ್ಯೊಗಂಟಾ ಕಾಡದೆ ಇರೊ ಭಯ ಅದು ಮುಗಿದ ಮೇಲೆ ಕಾಡೊಕೆ ಶುರುವಾಯ್ತು. ಭಂಡ ಧೈರ್ಯದಲ್ಲಿ ಈ ಕೆಲ್ಸ ಮಾಡಿಬಿಟ್ಟಿದ್ದಳು. ಅತ್ತೆ ಮಾವ, ಭಾವಂದರು ಗಂಡ ಏನನ್ತಾರೋ, ಅವರಿಗಿಷ್ಟ ಇಲ್ಲದೆ ಇರೊ ಕೆಲ್ಸ ಮಾಡಿ ಬಿಟ್ಟಿದ್ದೆನೆ, ಅವರು ಹಾಕಿದ್ದ ಮಾಂಗಲ್ಯ ಸರ ಬೇರೆ ಮಾರಿ ಬಿಟ್ಟಿದ್ದೆನೆ ನನ್ನ ಉಳ್ಸಾರಾ ಅನ್ನೊ ಭೀತಿಯಲ್ಲಿ ಕಂಗಾಲಾಗಿ ಹೋಗಿದ್ದಳು. ಅವಳು ಅಂದು ಕೊಂಡಂತೆ ಆಗಿ ಹೋಯ್ತು.
ಮನೆಯವ್ರು ಬಸ್ಸಳಿದ ಕೂಡಲೇ ಅವರಿಗೆ ಊರವ್ರೆ ಎಲ್ಲ ವಿಷಯವನ್ನ ತಿಳಿಸಿಬಿಟ್ಟಿದ್ದರು,ಎಲ್ಲಾ ವಿಷಯ ಗೊತ್ತಾದ ಮೇಲೆ ಮನೆಯವ್ರೆಲ್ಲಾ ಕುದ್ದು ಹೋದರು. ತಾವು ಕೊಟ್ಟ ಚಿನ್ನದ ಸರ ಮಾರಿ ಸಂಡಾಸ ಕಟ್ಟೊಕೆ ಅಧಿಕಾರ ಕೊಟ್ಟರೊ ಯಾರು,ತಮ್ಮ ಮಾತು ಮೀರಿ ನಡೆದುಕೊಂಡ ವಿಮಲಿ ಮನೆಯಲ್ಲಿ ಇರಬಾರದು ಅಂತ ಅವಳ ಅತ್ತೆ ಮಾವ ಅವಳನ್ನ ಮನೆಯಿಂದ ಆಚೆಗೆ ಅಟ್ಟಿ ಬಿಟ್ಟರು. ಬಸ್ರಾಜಂಗೂ ಹೆಂಡತಿಯ ಅಧಿಕಪ್ರಸಂಗದ ಬಗ್ಗೆ ವಿಪರೀತ ಕೋಪ ಬಂದು ಬಿಟ್ಟಿತ್ತು. ಅಪ್ಪ ಅವ್ವನ ಮಾತಿಗೆ ಎದರೇನು ಹೇಳದೆ ಹಲ್ಲು ಕಡೆಯುತ್ತಾ ಸುಮ್ಮನಾಗಿ ಬಿಟ್ಟನು. ಊರವ್ರು, ಮನೆಯ ಹೆಂಗಸರು, ಊರಿನ ಮುಖ್ಯಸ್ಥರು ಯಾರೆಷ್ಟೆ ಹೇಳಿದ್ರು ವಿಮಲಿಯನ್ನ ಮನೆಲಿ ಇಟ್ಟುಕೊಳ್ಳೊಕೆ ಒಪ್ಪಿಕೊಳ್ಳಲೆ ಇಲ್ಲಾ.ವಿಮಲಿಯೂ ಎದೆಗುಂದದೆ ಮನೆ ಹೊರಗೆ ಹಾಕಿದರೂ ಜಗಲಿ ಮೇಲೆ ಕುಳಿತು ಬಿಟ್ಟಳು. ಈಮನೆಯಿಂದ ನಾನು ಯಾವ ಕಾರಣಕ್ಕೂ ಹೋಗಲ್ಲ, ನಾನು ಯಾವ ತಪ್ಪು ಮಾಡಿಲ್ಲ ಅಂತ ಹಠ ಹಿಡಿದು ಕುಳಿತು ಬಿಟ್ಟಳು. ಅದ್ಯಾರು ಟಿವಿಯವರಿಗೆ ಹೇಳಿದ್ರೊ ಸಂಜೆ ಹೊತ್ತಿಗೆ ಎಲ್ಲಾ ಟಿವಿಯವ್ರೂ ಆ ಊರಿಗೆ ಬಂದು ಸುದ್ದಿ ಮಾಡಿ ಬಿಟ್ಟರು.ಮನೆಯವ್ರಲ್ಲಾ ಹೊರಗೆ ಬರದೆ ಒಳಗೆ ಉಳಿದು ಬಿಟ್ಟರು,ಸುದ್ದಿ ತಿಳಿದ ಸರ್ಕಾರ ಅವಳನ್ನ ರಾಜಧಾನಿಗೆ ಕರೆಸಿ ಅವಳ ಕೆಲಸವನ್ನು ಕೊಂಡಾಡಿ ಸನ್ಮಾನ ಮಾಡಿ. ಅವಳ ಮಾರಿದ್ದ ಕರಿಮಣಿ ಸರನ ತಂದು ಅವಳಿಗೆ ಬಹುಮಾನವಾಗಿ ನೀಡಿ ಎಲ್ಲಾ ಹೆಣ್ಣು ಮಕ್ಕಳು ಇಂತಹ ಧೈರ್ಯ ಮಾಡಬೇಕು ಅಂತ ಕರೆ ನೀಡಿತು. ಅವಳ ಜೊತೆ ಅಧಿಕಾರಿಗಳನ್ನು ಕಳಿಸಿ ಅವಳನ್ನ ಮನೆಗೆ ಸೇರಿಸಿಕೊಳ್ಳದಿದ್ದರೆ ಜೈಲಿಗೆ ಹಾಕಿಸುವುದಾಗಿ ಹೆದರಿಸಿ ಮತ್ತೆ ಅವಳು ಮನೆಗೆ ಸೇರುವಂತೆ ಮಾಡಿತು.
-ಎನ್, ಶೈಲಜಾ ಹಾಸನ